ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

27 November, 2011

ಕಲಾಸಂತೆ- ಪ್ರಜ್ವಲ್, ಮನಿಷಾ ಮತ್ತು ನಾನು!































ಇವು ಒಂದಿಷ್ಟು ನನ್ನ ಮಕ್ಕಳು ಮತ್ತು ನಾನು ಎರಚಿದ ಬಣ್ಣಗಳು...ಕೆಲವೊಂದು ಅಪೂರ್ಣವಾಗಿವೆ..ಆದರೂ ಒಂದಿಷ್ಟಾದರು ಕಲಾಸೇವೆ ಮಾಡಲು ಸಾಧ್ಯವಾಯಿತಲ್ಲ ಎಂಬುದೇ ಸಮಾಧಾನ. ಇಪ್ಪತ್ತೆರಡು ವರ್ಷಗಳು ಕಳೆದು ಹೋಯಿತು...ಯೌವನದ ಪ್ರಮುಖ ಭಾಗದಲ್ಲಿ, ತುಂಬಾ ಸಾಧಿಸಲು ಹುಮ್ಮಸಿರುವ, ಶಕ್ತಿಯಿರುವ ಕಾಲದಲ್ಲಿ ನನ್ನ ಕುಂಚಗಳು ನನ್ನೊಂದಿಗೆ ಸಹಕರಿಸಿಲ್ಲ ಮಾತ್ರವಲ್ಲದೆ ಕಾಲನೂ ನನ್ನೊಂದಿಗೆ ಮುನಿಸಿಕೊಂಡಿದ್ದನು...ಆದರೂ ಈ ನಾಲ್ಕು ವರ್ಷದಲ್ಲಿ ಮತ್ತಿನ್ನೊಮ್ಮೆ ಕುಂಚಗಳು ನನ್ನ ಬೆರಳುಗಳೊಂದಿಗೆ ಮೈತ್ರಿಯ ಒಪ್ಪಂದ ಮಾಡಿಕೊಂಡಿವೆ.  ಹಾಗಾಗಿ ಬರೇ ಕುಂಚಮಾತ್ರವಲ್ಲದೆ ಕಲೆ ಹೊಸ ಆಯಾಮಗಳಲ್ಲಿ ನನ್ನನ್ನು ತೊಡಗಿಸಲು ಯತ್ನಿಸುತ್ತಿದ್ದೇನೆ. ಅದರ ಫಲವಾಗಿ ಈ ತಗಡಿನ ಮೇಲಿನ ಉಬ್ಬು ಚಿತ್ರ ಮೂಡಿಬಂತು.  ಸಹ ಬ್ಲಾಗಿಗರಿಗೆ ಇದು ಮೆಚ್ಚುಗೆ ಯಾಯಿತೇ ಒಂದು ತಿಳಿಯುವ ಕುತೂಹಲವಿದೆ ನನಗೆ!





26 November, 2011

ಅಣ್ಣಾ ಹಜಾರೆ- ಏನಾಗಿದೆ ನಿಮಗೆ?


         ಶರದ್ ಪವಾರ್‌ರ ಕಪಾಳ ಮೋಕ್ಷದ ಪ್ರಸಂಗದ ಬಗ್ಗೆ ನನಗೆ ತಿಳಿದದ್ದು ಬಹಳ ತಡವಾಗಿ...ಇದು ಒಂದು ಶಾಕಿಂಗ್ ನ್ಯೂಸ್ ಆಗಿರಲಿಲ್ಲ..ಯಾಕೆಂದರೆ ಪಾದುಕ ಪೂಜೆಯ ಪ್ರಸಂಗಳು ನಮ್ಮಲ್ಲಿ ಈಗ ಸಾಮನ್ಯವಾಗಿದೆ. ಆದರೂ ಇದೊಂದು ಗಂಭೀರವಾದ ಘಟನೆ...ಪವರ್‌ಫುಲ್ ಪವಾರ್‌ರಿಗೆ ತಪರಾಕಿ ಕೊಡುವುದೆಂದರೆ...ಅದರಲ್ಲೂ  ಜಡ್    ಸೆಕ್ಯುರಿಟಿಯಿರುವ ರಾಜಕಾರಣಿಗೆ!  ಹೀಗೆಲ್ಲಾ ಮಾಡುವುದರಿಂದ ಹರವಿಂದ್ ಸಿಂಗ್‌ನಂತವರು ತಾವು ಬಹಳ ಘನ ಕಾರ್ಯ ಮಾಡಿದೇವೆಂದು ಹಿಗ್ಗಿದರೆ ಅದು ಅವರ ಮೂರ್ಖತನ....ದೇವರು ಕೊಟ್ಟ ಶಿಕ್ಷೆಯಿಂದ ಬುದ್ಧಿ ಕಲಿತಿಲ್ಲ ಪವಾರ್! ಆಧುನಿಕ ವೈದ್ಯಕೀಯ ಸವಲತ್ತುಗಳಿದ್ದರೂ ಸೊಟ್ಟಗಾದ ಮುಖ ಸರಿಪಡಿಸಲಾಗಲಿಲ್ಲ....ಆದರೂ ಸುಟ್ಟ ಮುಖವೆತ್ತಿ ತಿರುಗುತ್ತಿದ್ದಾರೆ....ಆದರೆ ಅಣ್ಣಾಹಜಾರೆಯ ಹೇಳಿಕೆ ಖಂಡಿತ ಒಂದು ಶಾಕಿಂಗ್ ನ್ಯೂಸ್! ಕೆಲವೊಂದು ಸಮಯದಿಂದ ಅಣ್ಣಾ ಹಜಾರೆ ಮತ್ತವರ ಸಂಗಡಿಗರು ಒಂದಲ್ಲ ಒಂದು ಹೇಳಿಕೆ ಕೊಟ್ಟು ತಮ್ಮ ಘನತೆಯನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಅಲ್ಲ...ಗಾಂಧೀಜಿಯ ಸತ್ಯಾಗ್ರಹದ ಮಾದರಿಯಲ್ಲಿ ನಡೆದವರು ಇದೇ ಹಜಾರೆಯೇ? ಅಹಿಂಸಾ ಮಾರ್ಗದ ನೇಕಾರನೆಂದು ಸಾರಿಕೊಂಡವರು ಇವರೇ ತಾನೇ? ಈಗಾಗಲೇ ನಮ್ಮ ಇತಿಹಾಸದಿಂದ ನಾವೆಲ್ಲ ಪಾಠಕಲಿತಿಲ್ವಾ? ಕತ್ತಿ, ಈಟಿ, ಬಂದೂಕು, ಬಾಂಬ್‌ಗಳಿಂದ ಏನು ಸಾಧನೆಯಾಗಿದೆ..ಬರೇ ರಕ್ತಪಾತ, ಜೀವಹಾನಿ ಹೊರತು ಮತ್ತೇನು ಪಡೆದಿಲ್ಲ ಮನುಜ ಕುಲ. ಇದೆಲ್ಲಾ ಗೊತ್ತಿದ್ದರೂ ಮತ್ತೂ ಹಿಂಸೆಗೆ ಕೈಯೆತ್ತಿ ಬಲ ಕೊಡುತ್ತಿದ್ದಾರೆ..ಯಾಕೆ??ಅಣ್ಣಾಹಜಾರೆ..ಯಾಕೆ ಹೀಗೆ ಬದಲಾಗುತ್ತಾ ಬಂದಿದಿರಿ? ನೀವು ಯಾವ ಆಮಿಷಕ್ಕೆ ನಿಮ್ಮನ್ನು ಒಡ್ಡಿದಿರಾ? ದೇಶದ ಜನತೆ ನಿಮ್ಮನ್ನು ದೇವರೆಂದು ಆರಾಧಿಸಿದಕ್ಕೆ ಅವರನ್ನು ತಪ್ಪು ದಾರಿಗೆ ಎಳೆಯುತ್ತಿದಿರಾ?



  
    ಈಗೀಗ ನನಗೆ ಮಹಾತ್ಮಾ ಗಾಂಧೀಜಿಯವರ ನಿಲುವು ಅರ್ಥವಾಗುತ್ತಿದೆ... ಗಾಂಧಿಜೀಯವರನ್ನು, ಅವರ ತತ್ವಗಳನ್ನು ಮೆಚ್ಚಿದ್ದರೂ ಮನಸ್ಸಿಗೆ ಅವರು ತಮ್ಮ ಮಕ್ಕಳಿಗೆ ಬಹಳ ಅನ್ಯಾಯ ಮಾಡಿದ್ದರೆಂದೆನಿಸಿತ್ತು. ಹರಿಲಾಲ್‌ರ ಜೀವನ ಹಾಳು ಬೀಳುವುದಕ್ಕೆ ಗಾಂಧಿಯವರ ನಿಲುವೇ ಕಾರಣವೆಂದು ವಾದಿಸುತ್ತಿದ್ದೆ. ತಾವು ವಿದೇಶಕ್ಕೆ ಹೋಗಿ ಕಲಿತಿದ್ದರೂ ತಮ್ಮ ಮಕ್ಕಳಿಗೆ ಸಾಂಪ್ರದಾಯಿಕ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿದರೆಂದು ದೂರುತ್ತಿದ್ದೆ.. ಬಹುಶಃ ಅವರಿಗೆ ಖಂಡಿತವಾಗಿ ಗೊತ್ತಿತ್ತು.. ಅವರು ತಾವು ನಂಬಿದ ತತ್ವವನ್ನು ಮೊದಲು ಮನೆಯವರ ಮೇಲೆ ಪ್ರಯೋಗ ಮಾಡಿದರು... ಮಾದರಿಯಾದರು.. ಸ್ವಾರ್ಥವನ್ನು ಎಂದೂ ತೋರಲಿಲ್ಲ.. ಬೇಧಭಾವ ಮಾಡಲಿಲ್ಲ... ಈ ಗುಣಗಳಿಂದಲೇ ಅವರು ಪ್ರಥ್ವಿಯ ಜನರ ಮನದಲ್ಲಿ ಸ್ಥಾನ ಪಡೆದರು... ಆದರೆ ಅಕಟಕಾ.. ತಮ್ಮದೇ ನೆಲದ ಜನರ ಮನದಿಂದ ದೂರವಾಗಿದ್ದಾರೆ... ಗಾಂಧೀಜಿ ಎಂದೂ ಖ್ಯಾತಿಗೆ, ಕಾಸಿಗೆ ಮರುಳಾಗಲಿಲ್ಲ... ಆದರೂ ಅವರು ಪಾಕಿಸ್ಥಾನದ ವಿಷಯದಲ್ಲಿ ಸೋತರು... ಕೆಲವೊಂದು ಹಿತಾಸಕ್ತಿಗೆ ಬಲಿಯಾದರು.. ಅವರಿಗೆ ತಿಳಿದಿತ್ತು... ಎಲ್ಲಿಯಾದರು ತಾವು ಸಂಸಾರದ ಬಗ್ಗೆ ಅತೀ ಗಮನ ಹರಿಸಿದರೆ ಅಥವಾ ಖ್ಯಾತಿಯ ಕಡೆ ಗಮನ ಕೊಟ್ಟರೆ ತಮ್ಮ ಗುರಿ, ತತ್ವ ಎರಡೂ ತಪ್ಪುವುದು. ಮೋಹವು ನಮ್ಮ ಮೂಲ ಸ್ವಭಾವವನ್ನು ಬದಲಿಸುತ್ತದೆ. ಗಾಂಧಿಯವರು ವ್ಯಾಮೋಹವನ್ನು ಜಯಿಸಿದ್ದರು... ಅದರಿಂದಲೇ ಅವರ ವ್ಯಕ್ತಿತ್ವವು ಮೇರು ಪರ್ವತದೆತ್ತರಕ್ಕೆ ಬೆಳೆಯಿತು.. ಜಗತ್ತಿನ ಉದ್ದಗಲಕ್ಕೂ ಹರಡಿತು.

     ಆದರೆ ಹಜಾರೆಯವರೆ, ನೀವೀಗ ಖ್ಯಾತಿಯ ಮೋಹ ಪಾಶಕ್ಕೆ ಸಿಲುಕಿದ್ದಿರಿ... ನಿಮ್ಮ ನಡೆಗಳೆಲ್ಲಾ ಸರಿಯೆಂಬ ಭ್ರಮೆಗೆ ಸಿಲುಕಿ ನಿಮ್ಮನ್ನು ಪೂಜಿಸುತ್ತಿರುವ ಯುವವರ್ಗವನ್ನು ಹಿಂಸೆಯ ದಾರಿಗೆಳೆಯುತ್ತಿದ್ದಿರಾ! ದಯವಿಟ್ಟು ಗಮನಿಸಿ .ಗಾಂಧಿಯವರಂತೆ ನಿಮ್ಮ ಹೋರಾಟ ಹೊರಗಿನ ಶತ್ರುಗಳೊಂದಿಗಲ್ಲ.. ನಮ್ಮವರೇ ಆದ ಹಿತ ಶತ್ರುಗಳೊಂದಿಗೆ!  ಮುಳ್ಳಿನ ಮೇಲೆ ಹರಡಿರುವ ವಸ್ತ್ರವನ್ನು ಜಾಗರೂಕತೆಯಿಂದ ಬಿಡಿಸುವಂತೆ ನಿಮ್ಮ ನಡೆಯಾಗಬೇಕು ಹೊರತು, ಇಂತಹ ಒರಟು ಹೇಳಿಕೆ ನಿಮಗೆ ಶೋಭೆಯಲ್ಲ. 

    ಹಜಾರೆ ಎಡವಿದ್ದಾರೆನಿಸುವುದು, ಸಂಸಾರವಿಲ್ಲವಿದ್ದರೇನಾಯಿತು! ಖ್ಯಾತಿಗೆ ಮರುಳಾಗಿದ್ದಾರೆ! ಸರಿಯಾಗಿ ಆಲೋಚಿಸದೆ ಹೇಳಿಕೆ ನೀಡುತ್ತಿದ್ದಾರೆ. ಸ್ವಲ್ಪ ದಿನಗಳ ಹಿಂದೆ ಕಾಂಗ್ರೆಸ್ ಪಕ್ಷಕ್ಕೆ ಓಟುಹಾಕಬಾರದೆಂದು ಕರೆಕೊಟ್ಟಾಗಲೇ.. ಎಲ್ಲಿಯೋ ಶೃತಿ ತಪ್ಪುತಿದೆ ಅನ್ನಿಸಿತ್ತು.. ಭ್ರಷ್ಟಾಚಾರಕ್ಕಿಂತ ಲೋಕಪಾಲಕ ಮಸೂದೆಯ ಪ್ರತಿಷ್ಟೆ ಹೆಚ್ಚಾಗುತ್ತಿದೆಯೇ ಎಂದೆನಿಸಿತ್ತು ಕೂಡ. ಸಂತೋಷ್ ಹೆಗ್ಡೆ, ಅಗ್ನಿವೇಶ್‌ನವರ ಹೇಳಿಕೆಗಳು ನನ್ನ ಮನಸ್ಸಿನ ಅನಿಸಿಕೆಯನ್ನು ಧೃಡಪಡಿಸಿತ್ತು... ಅಲ್ಲದೆ ಕಾಶ್ಮೀರದ ಬಗ್ಗೆ ಹೇಳಿಕೆ, ಬೇಡಿಯವರ ಹಗರಣವೆಲ್ಲವೂ ಕೂಡಿ ಜನರಿಗೆ ಒಂದಷ್ಟು ನಿರಾಸೆಯಾದದ್ದು ಖಂಡಿತ ಸತ್ಯ. ಅಂತೂ ಹಜಾರೆಯವರು ಇಂತಹ ಹೇಳಿಕೆಗಳಿಂದ ರಾಮ್‌ದೇವ ಬಾಬಾನವರಂತೆ ತಮ್ಮ ಕೈಯಿಂದಲೇ ತಮ್ಮ ಘನತೆಗೆ ಕಳಂಕ ಹಚ್ಚುವ ಕೆಲಸ ಮಾಡುತ್ತಿದ್ದಾರೆ... ನನ್ನ ಮಾತಿಗೆ ನೀವೆಲ್ಲಾ ಸಹಮತಿ ಕೊಡದಿರಬಹುದು... ಹೆಚ್ಚಿನವರು ಹಜಾರೆಯನ್ನು ಕುರುಡರಂತೆ ಹಿಂಬಾಲಿಸುತ್ತಿದ್ದಾರೆ.. ನಮ್ಮದುರಾದೃಷ್ಟ... ಭಾರತೀಯರು ಬಲು ಬೇಗ ಅನುಯಾ ಯಿಗಳಾಗುತ್ತಾರೆ, ಮತ್ತು ಕಣ್ಣು ಮುಚ್ಚಿ, ವಿವೇಚನೆಯಿಲ್ಲದೆ ದೇವರ ಪೀಠದಲ್ಲಿಟ್ಟು ಪೂಜೆ ಮಾಡುತ್ತಾರೆ. ಇದಕ್ಕೆ ಉದಾಹರಣೆಯೆಂದರೆ ನೆಹರೂ ಮನೆತನದ ನಿಷ್ಠ ಹಿಂಬಾಲಕರು. ಆದ್ದರಿಂದ ಸೋನಿಯಾ ಅವರಿಗೆ ಯೋಗ್ಯತೆ ಇಲ್ಲದಿದ್ದರೂ ಅಧಿಕಾರ ದೊರೆತಿರುವುದು.


      ಇನ್ನು  ಮೀಡಿಯಾಗಳು ಇಂತಹ ಪ್ರಸಂಗಳನ್ನು ತಮ್ಮ ಹಿತಕ್ಕೆ ಬಳಸಿಕೊಳ್ಳುತ್ತವೆ.. ತಮ್ಮ ಟಿ ಆರ್ ಪಿಯನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಬಳಸಿಕೊಳ್ಳುತ್ತವೆ. ಮತ್ತೆ ಹೊಸ ಪ್ರಸಂಗ ಹೊಸ ವಿಷಯ ಸಿಕ್ಕಿದ ಕೂಡಲೆ ಇದನ್ನು ಮರೆತು ಬಿಡುತ್ತವೆ. ಆದರೆ ನಮ್ಮ ಜನರು ಸಾಮೂಹಿಕ ಸನ್ನಿಗೆ ಒಳಗಾದವರಂತೆ ವಿವೇಚನೆ ಕಳೆದು ಕೊಂಡವರಂತೆ ವರ್ತಿಸುವುದನ್ನು ನೋಡಿ ಬೇಸರವಾಗುತ್ತದೆ... ದಿನಕ್ಕೊಂದು ಹಗರಣ, ಬೆಲೆಯೇರಿಕೆ, ಭ್ರಷ್ಟಾಚಾರ... ಮೊದಲಾದವುಗಳಿಂದ ಜನಸಾಮಾನ್ಯರು ರೊಚ್ಚಿಹೋಗಿದ್ದಾರೆ ನಿಜ... ಅದಕ್ಕಾಗಿ ಹಿಂಸೆಗಿಳಿಯುವುದು ಸರಿಯಲ್ಲ.. ಮಾತ್ರವಲ್ಲದೆ ಇದನ್ನು ಸಮರ್ಥಿಸಿ ಬುದ್ಧಿಜೀವಿಗಳು ಹೇಳಿಕೆ ನೀಡುವುದು ಸಮಂಜಸವಲ್ಲ. ಇಂತಹ ವಿಷಯಗಳ ಮೇಲೆ ಲೇಖನ ಬರೆಯುವುದೆಂದರೆ  ಅದಕ್ಕೆ     ಮಿತಿಯೇ ಇರುವುದಿಲ್ಲ.. ಏನೋ ರಾಜಕಾರಣದ ಒಳಗಿನ ಹೂರಣ ಬೇರೆಯೇ ಇರುತ್ತದೆ.. ಅದರ ಬಗ್ಗೆ ಹೇಳಿದಷ್ಟು ಕಮ್ಮಿಯೇ!

24 November, 2011

ಕಾರ್ತಿಕ ಮಾಸದ ದೀಪೋತ್ಸವ!



 ನಮ್ಮ ದಕ್ಷಿಣ ಕನ್ನಡದಲ್ಲಿ ಕಾರ್ತಿಕ ಮಾಸವನ್ನು ದೀಪೋತ್ಸವವನ್ನಾಗಿ ಆಚರಿಸಲಾಗುತ್ತದೆ.  ಎಲ್ಲಾ ದೇವಸ್ಠಾನಗಳಲ್ಲಿ ಮೊದಲೇ ಅನೇಕ ವರುಷಗಳ ಹಿಂದೆ ನಿರ್ಧರಿಸಿದ ತಿಥಿಯ ಸಮಯದಲ್ಲಿ ಗುರ್ಜಿ ಹಬ್ಬ ಜರುಗುತ್ತದೆ. ದರ್ಮಸ್ಥಳದ ಮಂಜುನಾಥ ದೇವಸ್ಥಾನದ, ಕಾರ್ಕಳದ ಲಕ್ಷದೀಪೋತ್ಸವವು ಬಹಳ ಪ್ರಸಿದ್ಧವಾಗಿದೆ.


     ದೇವಸ್ಥಾನವನ್ನು ದೀಪಗಳಿಂದ ಶೃಂಗರಿಸಲಾಗುತ್ತದೆ. ಅದರಲ್ಲೂ ಕಾರ್ಕಳದಲ್ಲಿ ಬ್ರಾಹ್ಮೀ     ಮುಹೂರ್ತದಲ್ಲಿ ದೀಪಗಳಿಂದಲೇ ವಿಷ್ಣುವಿನ ಅವತಾರಗಳನ್ನು ಮೂಡಿಸಲಾಗುವುದು. ಈ ದೃಶ್ಯ ನಯನ ಮನೋಹರವಾಗಿರುವುದು. ಇದರಲ್ಲಿ ಭಾಗವಹಿಸಲು ಪರಊರಿನಲ್ಲಿ ನೆಲೆನಿಂತ ಕಾರ್ಕಳಿಗರು ಧಾವಿಸಿ ಬರುವರು.
























     ನನ್ನ ಊರಾದ ಮಂಗಳೂರಿನಲ್ಲೂ ಗುರ್ಜಿಯನ್ನು ಬಹಳ ವೈಭವದಿಂದ ಆಚರಿಸುತ್ತಾರೆ. ಮಂಗಳೂರಿನ ಅನೇಕ ಆಯಕಟ್ಟಿನ ಸ್ಥಳಗಳಲ್ಲಿ ರಥವನ್ನು ತಯಾರು ಮಾಡುತ್ತಾರೆ. ಇದು ರಥೋತ್ಸವದಲ್ಲಿ ಉಪಯೋಗಿಸುವ ರಥದಂತಿದ್ದರೂ ಇಲ್ಲೊಂದು ವಿಶೇಷವಿದೆ. ಈ ರಥವನ್ನು ಬರೇಹೂಗಳಿಂದ ಮಾತ್ರ ಸಿಂಗರಿಸದೇ ಹಣ್ಣು ತರಕಾರಿಗಳಿಂದ ಸಿಂಗರಿಸಲಾಗುತ್ತದೆ. ಅದನ್ನು ನೋಡಿ ಆನಂದಿಸಲು ಎರಡು ಕಣ್ಣುಗಳೂ ಸಾಲದು.  ನಮ್ಮ ಹಿತ್ತಲಲ್ಲಿ ಹಲಸಿನ ಹಣ್ಣಿನ ಕಾಯಿ ಇನ್ನೂ ಸಹ ಮೂಡಿಲ್ಲ...ಆದರೆ ನೀವು ಈ ರಥದಲ್ಲಿ...ಇದನ್ನು ರಥ ಎಂದು ಕರೆಯುವುದಕ್ಕಿಂತ ದಿಂಡು ಅಥವಾ ಗುರ್ಜಿ ಎನ್ನುವುದೇ ಸೂಕ್ತ,.... ಆಗಲೇ  ಭಾರಿ ಗಾತ್ರದ ಹಲಸಿನ ಹಣ್ಣು ಕಾಣಬಹುದು. ದ್ರಾಕ್ಷೆ ಹಣ್ಣಿನ, ಹಸಿರು ಮೆಣಸಿನ ಮಾಲೆ ನೋಡಿದರೆ ಬಹುಶಃ ಇದೇ ನಮ್ಮ ಅಕ್ಕಸಾಲಿಗರಿಗೆ ಹೊಸ ಹೊಸ ನಮೂನೆಯ ಹಾರ ತಯಾರಿಕೆಯ ಸ್ಫೂರ್ತಿ ಏನೋ ಅಂದು ಅನಿಸೀತು. ನಲ್ವತ್ತು ವಸಂತ ಮಾಸಗಳಿಂದಲೂ ದಿಂಡಿನ ದರ್ಶನ ಪಡೆಯುತ್ತಿದ್ದರೂ ಪ್ರತಿ ಸಲ ನನಗೆ ರೋಚಕವಾಗಿಯೇ ತೋರುತ್ತದೆ...ಎಂದೂ ತನ್ನ ಹೊಸತನ ಕಳೆದುಕೊಂಡಿಲ್ಲ...ಇದು ಕೇವಲ ನನ್ನ ಅನುಭವ ಮಾತ್ರವಲ್ಲ...ಆನಂದವನ್ನು ಆಸ್ವಾದಿಸುವವ ಮನಸಿರುವ ದಕ್ಷಿಣ ಕನ್ನಡಿಗರೆಲ್ಲ  ಇದಕ್ಕೆ ಖಂಡಿತ ಇಂಬು ಕೊಡುತ್ತಾರೆ.
ಹಾ! ಎಲ್ಲಿದ್ದೆ!!! ದಿಂಡಿನ ಶೃಂಗಾರದ ಬಗ್ಗೆ ಹೇಳುತ್ತಿದೆ ಅಲ್ಲವಾ!!  ಈ ಚಿತ್ರಗಳನ್ನು ನೋಡಿ ನೀವು ದಿಂಡಿನ ವೈಭವನ್ನು ಅಂದಾಜಿಸಬಹುದು...ಮತ್ತೆ ನಿಮ್ಮ ಭೇಟಿ ನಮ್ಮೂರಿನ ದಿಂಡಿನಲ್ಲಿ...


































ಶ್ರೀಕೃಷ್ಣ ಮಠದ ಕಡಲೆ ಕುರಿಂದು!






ಪೂಜೆ ಸ್ವೀಕರಿಸಿ ಹಿಂದಿರುಗುವಾಗ ಅಲ್ಲಲ್ಲಿ ಕಟ್ಟೆ ಪೂಜೆ ಸ್ವೀಕರಿಸುತ್ತಾನೆ ಮಹಾಗಣಪತಿ!






     ದೇವಸ್ಥಾನವನ್ನು ದೀಪಗಳಿಂದ ಝಗಝಗಿಸುತ್ತಾರೆ....ಈ ದಿಂಡು ಇಡುವ ಸ್ಥಳ ದೇವಸ್ಥಾನದ ಸಮೀಪ ಇರಬೇಕಿಂದಿಲ್ಲ...ನಮ್ಮ ಮಣ್ಣಗುಡ್ಡೆಯ ಮತ್ತು ಬಳ್ಳಾಲಭಾಗ ದಿಂಡಿನಲ್ಲಿ ಶರವು ಮಹಾಗಣಪತಿಯ ಮೂರ್ತಿಯನ್ನು ಪೂಜಿಸಲಾಗುತ್ತದೆ.


    ಗುರ್ಜಿ ನಡೆಯುವ ಪ್ರದೇಶವನ್ನು ಬಣ್ಣ ಬಣ್ಣದ ವಿದ್ಯುದೀಪಗಳಿಂದ ಬೆಳಗಿಸುತ್ತಾರೆ. ಇಲ್ಲಿನ ಉತ್ಸಾಹಿ ಯುವಕ ವೃಂದದವರು, ದೀಪೋತ್ಸವದ ಯಜಮಾನಿಕೆ ನಡೆಸುವವರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ಕೊಡುತ್ತಾರೆ..ದರ್ಶಕರಿಗೆ ನೃತ್ಯ, ಸಂಗೀತದ ಹೊಳೆ ಹರಿಸಿ...ಮತ್ತೆ ಮತ್ತೆ ದಿಂಡಿನ ವೈಭೋಗವನ್ನು ನೆನೆಯುವಂತೆ ಮಾಡುತ್ತಾರೆ. ಹಾ..ಮಕ್ಕಳಿಗಂತೂ ಅಜ್ಜಿ ಅಜ್ಜಂದಿರಿಂದ ದಿಂಡಿನ ಖರ್ಚಿಗೆ ಹಸಿರು ನೋಟುಗಳು ಸಿಗುತ್ತವೆ...ನನ್ನ ಬಾಲ್ಯದ ದಿನಗಳಲ್ಲಿ ನಮ್ಮ ಅಜ್ಜಿ ಆದಿನ ಬೆಳಿಗ್ಗೆನೇ ಅಜ್ಜನ ಹತ್ತಿರ ಮೊಮ್ಮಕ್ಕಳಿಗೆ ಕೊಡುವ ಹಣವನ್ನು ವಸೂಲಿ ಮಾಡುತಿದ್ದ ನೆನೆಪು ಕಾಡುತ್ತಿದೆ....ನಮಗೆ ಸಿಗುತ್ತಿದ್ದದು ಪೈಸೆಯ ಲೆಕ್ಕವಾದರೂ ಅದನ್ನು ಬಹಳ ಜೋಪಾನವಾಗಿ, ನಾವೆಲ್ಲಾ ಅಣ್ಣತಮ್ಮ ಅಕ್ಕ ತಂಗಿಯರು ಏನೆಲ್ಲಾ ತೆಗೆದು ಕೊಳ್ಳ ಬಹುದೆಂದು ನಮ್ಮ ಬಜೆಟ್ ತಯಾರು ಮಾಡುವ ದೃಶ್ಯ ಕಾಡುತ್ತದೆ...ಎಂತಹ ಸುಂದರ ಬಾಲ್ಯವದು!
ಈಗಿನ ಸಂತೆಯಲ್ಲಿ ಸಿಗುವ ಹೆಚ್ಚಿನ ವಸ್ತುಗಳು ಚೈನಾ ಮೇಡ್! ತಿಂಡಿ ತಿನಿಸುಗಳಿಲ್ಲದೆ ಸಂತೆಯಿರುವುದೇ?? ನಮ್ಮೂರಿನ ಪ್ರಸಿದ್ಧ ಚರಂಬುರಿ ಉಪ್ಕರಿ ತಿಂದರಿಗೆ ಗೊತ್ತು ಅದರ ರುಚಿ! ಇದೆಲ್ಲಾವಿದ್ದರೆ ಮರುದಿನ ಬೆಳಿಗ್ಗೆ ರಸ್ತೆಯ ತುಂಬಾ ಪ್ಲಾಸ್ಟಿಕ್, ಕಾಗದ ಹರಡಿರುವುದು ಸಹಜ ತಾನೆ...ಇದು ಸಾರ್ವಜನಿಕ ರಸ್ತೆಯಲ್ಲವಾ? ನಮ್ಮ ಮನೆಯ! ಕಸವನೆಲ್ಲಾ ಬುಟ್ಟಿಯೊಳಗೆ ಹಾಕಲು..ರಸ್ತೆಯಲ್ಲಿ ಬಿಸಾಡುವುದು ನಮ್ಮ ಭೌತಿಕ ಹಕ್ಕು!
   ಹೋಗಲಿ...ಇದೆಲ್ಲ ಹೇಳಿ ಪ್ರಯೋಜನವಿಲ್ಲ...ನಾವು ಸರಕಾರವನ್ನು ದೂರುವುದರಲ್ಲಿ ಪ್ರವೀಣರು...ನಾವು ಹೇಗೆ ಬೇಕಾದರೂ ಇರಬಹುದು...- ಸಾರ್ವಜನಿಕರ  ರೀತಿ ನೀತಿ!


೨೦೧೦ರ ದಿಂಡಿನ ವಿಡಿಯೋ


      ರಾತ್ರಿ ೧೦.೩೦ ಗಂಟೆಯ ಹೊತ್ತಿಗೆ ಶ್ರೀದೇವರ ಮೂರ್ತಿ ಸಕಲ ವೈಭವ ಮಂಗಳ ವಾದ್ಯದೊಂದಿಗೆ ದಿಂಡು ನಡೆಯುವ ಸ್ಥಳಕ್ಕೆ ಚಿತ್ತೈಸುವುದು. ಗುರ್ಜಿಯಲ್ಲಿ ರೂಢನಾಗಿ ಪೂಜೆಗಳನ್ನು ಸ್ವೀಕರಿಸುವ ದೇವರ ಸುತ್ತಲೂ ಮರದಿಂದ ಮಾಡಿದ ಕಂಬಗಳಲ್ಲಿ ಎಲ್ಲರೂ ಕೂಡಿ ದೀಪಗಳನ್ನು ಹಚ್ಚುವರು. ದೀಪಗಳಿಂದ ಬೆಳಗುವ ದಿಂಡಿನ ವೈಭವ ನಯನ ಮನೋಹರ! ವರ್ಣಿಸಲಸಾಧ್ಯ!. ಭಕ್ತರ ನಮನಗಳನ್ನು ಸ್ವೀಕರಿಸಿದ   ದೇವರ ಸವಾರಿ ದೇವಸ್ಥಾನಕ್ಕೆ ತಿರುಗಿ ಹೊರಡುತ್ತದೆ...ಇಷ್ಟೆಲ್ಲ ನಡೆಯುವಾಗ ರಾತ್ರಿ ಹೊತ್ತು ಬಹುಶಃ ೧ ಅಥವಾ ೨ ಗಂಟೆ ಕಳೆಯುತ್ತದೆ.


     ಇದು ಸಂಜೆಯ ನಂತರ ನಡೆಯುವ ಉತ್ಸವವಾದುದರಿಂದ ಜನರು ತಮ್ಮತಮ್ಮ ಕೆಲಸಗಳಿಂದ ಹಿಂದಿರುರಿದ ನಂತರ ಆರಾಮವಾಗಿ ಬಂದು ಇದರಲ್ಲಿ ಪಾಲುಗೊಳ್ಳುತ್ತಾರೆ. ಯುವಕ ಯುವತಿಯರಿಗಂತೂ ಇದರಲ್ಲಿ ಎಷ್ಟು ಹೊತ್ತು ಕಳೆದರು ತೃಪ್ತಿ ಇರುವುದಿಲ್ಲ. ನವ ವಧುವರರಂತೂ ಕೈ ಕೈ ಹಿಡಿದು ಕೊಂಡು ತಿರುಗುವುದನ್ನು ನೋಡಿ ನಾವೆಲ್ಲ ತಮಾಷೆ ಮಾಡುತ್ತಿದ್ದೆವು.


  ನಮ್ಮ ಮಣ್ಣಗುಡ್ಡ ಗುರ್ಜಿಯಲ್ಲಿ ಇನ್ನೊಂದು ವಿಶೇಷವಿದೆ- ಅದೇ ಇನ್ನೊಂದು ಸಣ್ಣ ಕುರಿಂದು( ಗುರ್ಜಿ, ದಿಂಡು, ಎಂದೆಲ್ಲಾ ಕರೆಯುತ್ತಾರೆ) ಶ್ರೀಕೃಷ್ಣ ಮಠದಲ್ಲಿ ಕಡೆಲೆಯಿಂದಲೇ ಸಣ್ಣ ಕುರಿಂದನ್ನು ತಯಾರಿಸುತ್ತಾರೆ.  ಕಡಲೆಯನ್ನು ನೆನೆ ಹಾಕಿ ಸೂಜಿಯಿಂದ ಹೆಣೆದು ದಿಂಡನ್ನು ತಯಾರಿಸುತ್ತಾರೆ.  ಮಣ್ಣಗುಡ್ಡೆಯ ದಿಂಡಿಗೆ ಬಂದವರು ಇದನ್ನು ನೋಡದೆ ಹೋಗಲಾರರು. ಬಹುಶಃ ನಮ್ಮ ದಿಂಡು ೧೪೦ ವರ್ಷಕ್ಕಿಂತಲೂ ಹಳೆಯದು...ಆದರೂ ಪ್ರತಿ ವರ್ಷ ಹೊಸದಂತೆ ತೋರುತ್ತದೆ. ಹೊಸ ಅನುಭವ ಕೊಡುತ್ತದೆ.
  ಈ ವರುಷದ ದಿಂಡು ಬಂದು ಹೋಯಿತು..ಮುಂದಿನ ವರುಷ ಬರುವಿರಿ ತಾನೆ!

27 October, 2011

ಉಜ್ವಾಡು- ಒಂದು ವಿಮರ್ಶೆಯ ಯತ್ನ!



      ಯಾಕೋ ಏನೋ ಅನೇಕ ದಿನದಿಂದ ಈ "ಉಜ್ವಾಡು"- ಕೊಂಕಣಿ ಚಲನ ಚಿತ್ರದ ಬಗ್ಗೆ ಬರೆಯಬೇಕೆನಿಸುತಿತ್ತು...ಸುಮಾರು ೨೫ ವರ್ಷಗಳ ನಂತರ ಚಿತ್ರಮಂದಿರಕ್ಕೆ ನನ್ನ ಭೇಟಿ! ೩ ಗಂಟೆಯನ್ನು  ಕತ್ತಲ ಕೋಣೆಯಲ್ಲಿ ಕಳೆಯುವುದು ನನ್ನ ಪಾಲಿಗೆ ಶಿಕ್ಷೆಯಂತೆ ಕಾಣುತಿತ್ತು....ಸಮಯವೂ ವ್ಯರ್ಥವಾದಂತೆ ಅನಿಸುತಿತ್ತು. ಆದರೆ ನಮ್ಮ ಮಾತೃ ಭಾಷೆಯಲ್ಲಿ ತಯಾರಾದ ಚಿತ್ರ ನೋಡಿ ಪ್ರೋತ್ಸಾಹಿಸುವುದು ನನ್ನ ಕರ್ತವ್ಯವೆಂದೆನಿಸಿ....ನನ್ನ ಸ್ನೇಹಿತೆಯ ಬಳಿ ಮಾತಾಡಿ ಜೊತೆಯಲ್ಲೇ ನೋಡುವ ಆಲೋಚನೆ ಮಾಡಿದೆವು. ರಮೇಶ್ ಭಟ್‍ನವರು ಬಹುಶಃ ೩೦ ವರ್ಷಗಳ ಹಿಂದೆ ತಯಾರಿಸಿದ "ಜನಮನ" ನೋಡಿದ್ದು ನೆನಪಿನಲ್ಲಿದೆಯಾದರೂ ಕತೆಯ ಸ್ಮೃತಿ ಮಸುಕಾಗಿ ಉಳಿದಿದೆ...ಚಿತ್ರದ ನಾಯಕಿ ನೇಣು ಹಾಕಿಕೊಳ್ಳುವ ದೃಶ್ಯ ಮಾತ್ರ  ಕಣ್ಣಿಗೆ ಕಟ್ಟಿದಂತೆ ಕಾಣುತ್ತಿದೆ...


    ಒಂದು ಚಲನಚಿತ್ರವನ್ನು ವಿಶ್ಲೇಷಿಸುವಷ್ಟು ಯೋಗ್ಯತೆ ನನ್ನಲ್ಲಿ ಇದೆಯೋ ತಿಳಿದಿಲ್ಲ..ಆದರೆ  ನನ್ನ ಮನದ ಪುಟದಲ್ಲಿ ಮೂಡಿದ ಭಾವನೆಗಳನ್ನು ಇದರಲ್ಲಿ ಬಟ್ಟಿಗಿಳಿಸಲು ಯಾರಪ್ಪಣೆಗಾಗಿ ನಾನು ಕಾಯಬೇಕಿಲ್ಲವಾದ್ದರಿಂದ ನನ್ನ ಅನಿಸಿಕೆಗಳಿಗೆ ಅಕ್ಷರರೂಪವನ್ನು ಕೊಡುವ ಯತ್ನ ಮಾಡಿದ್ದೇನೆ.


ಚಿತ್ರಗಳು ಅಂತರ್ಜಾಲದಿಂದ ಎತ್ತಿದ್ದು!








      "ಉಜ್ವಾಡು"- ಇದರ ಬಗ್ಗೆ ಗೊತ್ತಿಲ್ಲದವರಿಗೆ ಒಂದು ಪುಟ್ಟ ಮಾಹಿತಿ. ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿ ನಿಯುಕ್ತರಾದ ಕಾಸರಗೋಡು ಚಿನ್ನಾನವರ ( ಶ್ರೀನಿವಾಸ ರಾವ್) ಕತೆ, ನಿರ್ದೇಶನ;  ಪ್ರಶಸ್ತಿ ವಿಜೇತ- ಪೆರ್ಲ ಗೋಪಾಲಕೃಷ್ಣ ಪೈನವರ ಸಂಭಾಷಣೆ;  ಚಿತ್ರ ಕತೆ; ಜಯಂತ ಕಾಯ್ಕಿಣಿಯವರ ಸುಮಧುರವಾದ ಗೀತೆ; ಹರಿಕಥಾ ಶಿರೋಮಣಿ ಅಚ್ಚುತದಾಸರ ಗೀತೆ; ಪುತ್ತೂರು ನರಸಿಂಹ ನಾಯಕ್‍ನವರ ಗಾನ...ಅಲ್ಲದೆ ಕನ್ನಡ ನಟಿ ಉಮಾಶ್ರಿ, ಶಿವಧ್ವಜ್, ತರಂಗ ವಾರ ಪತ್ರಿಕೆಯ ಸಂಪಾದಕಿ ಸಂಧ್ಯ ಪೈ, ಓಂ ಗಣೇಶ್, ನೀತು, ಪ್ರಮಿಳಾ ನೇಸರ್ಗಿ, ಸದಾಶಿವ ಬ್ರಹ್ಮಾವರ್ ಮೊದಲಾದ ಪ್ರಸಿದ್ಧ ಕಲಾವಿದರು ನಟಿಸಿದ್ದಾರೆ.


ಸೈಕಲ್ ಗಣ್ಣು- ಅತ್ಯುತ್ತಮ ಅಭಿನಯ! ಶಿವದ್ವಜ್, ನೀತು, ಓಂ ಗಣೇಶ...


             












     ಮೊದಲಾಗಿ ಕತೆಯ ಬಗ್ಗೆ....ಬೇಸರದ ವಿಷಯವೇನೆಂದರೆ ಇದರಲ್ಲಿ ಕತೆಗಿಂತ ಕೊಂಕಣಿ ಜನರ ಸಂಪ್ರದಾಯದ ಬಗ್ಗೆ ಒತ್ತುಕೊಡಲಾಗಿದೆ. ಎಲ್ಲವನ್ನೂ ಈ ೨ ೧/೨ ಗಂಟೆಯಲ್ಲಿ ತುರುಕುವ ಯತ್ನ ಮಾಡಲಾಗಿದೆ. ಅದಕ್ಕಿಂತ ಈ ಬಾಲ ಕಲಾವಿದ ಗಣ್ಣು...-ಇವನ ಕತೆಯನ್ನೇ ಹೇಳಬಹುದಿತ್ತು. ಸಾಮಾನ್ಯವಾಗಿ ಎಲ್ಲಾ ಚಿತ್ರಗಳಲ್ಲಿರುವ ಮಸಾಲೆಯನ್ನು ಇದರಲ್ಲಿ ತುರುಕಲಾಗಿದೆ..ಯಾಕೆ ಈ ಪ್ರೀತಿ, ಪ್ರೇಮ ಹೊಡೆದಾಟ, ರೌಡಿಗಿರಿ....ಇದಿಲ್ಲದೆ ಚಲನ ಚಿತ್ರವನ್ನು ಮಾಡಲಾಗುವುದಿಲ್ಲವೇ?  ಸಂಕ್ಷಿಪ್ತವಾಗಿ ಕತೆ ಹೇಳುವುದಾದರೆ- ಒಂದು ಅನಾಥ ಹುಡುಗನಿಂದ ಚಿತ್ರ ಪ್ರಾರಂಭವಾಗುತ್ತದೆ...ಸೈಕಲಿನಲ್ಲೇ ತಿರುಗುವ ಗಣ್ಣು ಊರಿನ ಎಲ್ಲರ ಬಿಟ್ಟಿ ಕೆಲಸಗಾರ.....ಮತ್ತು ಊರಿನವರು ಗೌರವಿಸುವ ಮಾಸ್ತರ ಮನೆಯಲ್ಲಿ ಇವನ ವಾಸ. ಕಥಾನಾಯಕ ಶಿವದ್ವಜ ಊರಿನ ಕಾಲೇಜಿನಲ್ಲಿ ಇಂಗ್ಲಿಷ್ ಲೆಕ್ಚರಾಗಿ ಎಂಟ್ರಿ ಕೊಡುತ್ತಾರೆ...ಇಲ್ಲಿ ಸರ ಕಳುವಾಗುವ ದೃಶ್ಯ ತೋರಿಸಲಾಗುತ್ತದೆ...ಅಷ್ಟೆ, ನಂತರ ಈ ಬಗ್ಗೆ ಏನೂ ತೋರಿಸಲಾಗುವುದಿಲ್ಲ...ಇದು ಸಂಕಲನದ ಪ್ರಭಾವವೋ ಏನೋ?   ಮಾಸ್ತರ ಹೆಂಡತಿಯ ದೇಹಾಂತ್ಯವಾಗಿದ್ದರೂ ಅವರು ಪ್ರತಿಯೊಂದಕ್ಕೂ ತಮ್ಮ ಪತ್ನಿಯ ಚಿತ್ರಪಟದ ಒಪ್ಪಿಗೆ ಕೇಳುವ ಕೊನ್‍ಸೆಪ್ಟ್ ಬಹಳ ಮುದ ನೀಡುತ್ತದೆ.  ನಾಯಕನಿಗೆ ಮಾಸ್ತರ ಅನಾಥಾಶ್ರಮದಲ್ಲಿ ವೃದ್ಧರ ಸೇವೆ ಮಾಡುವ ನಾಯಕಿಯಲ್ಲಿ ಪ್ರೇಮ ಮೂಡುತ್ತದೆ. ಪುಣ್ಯಕ್ಕೆ ಇಲ್ಲೊಂದು ಡ್ಯುಯೆಟ್ ತುರುಕಲಿಲ್ಲ. ಇದೆಲ್ಲವೂ ಸರಿಯೇ ಇದೆ..ಆದರೆ ಇಲ್ಲೊಂದು ಪ್ಯಾರಲಲ್ ಪ್ರೀತಿಯ ಕತೆಯಿದೆ...ನಾಯಕಿಯ ಸ್ನೇಹಿತೆಗೆ ಅದೇ ಊರಿನಲ್ಲಿ ದೊಡ್ಡ ಕುಟುಂಬದಲ್ಲಿ ವಾಸ ಮಾಡುತ್ತಿರುವ ವ್ಯಾಪಾರಿಯ ಮಗನಿಗೂ ಪ್ರೀತಿ ಹುಟ್ಟುತ್ತದೆ. ಗುಟ್ಟಾಗಿ ಭೇಟಿಗಳೂ ನಡೆಯುತ್ತಿರುತ್ತದೆ...ಊರಿನ ಕಟ್ಟೆಯಲ್ಲಿ ಕುಳಿತುಕೊಳ್ಳುವ ಹುಡುಗರಿಗೆ ಇದು ತಮಾಶೆಯ ವಿಷಯವಾಗುರುತ್ತದೆ. ಇದಕ್ಕೊಂದು ಟ್ವಿಸ್ಟ್...ಈ ಹುಡುಗಿಯನ್ನು ನೋಡಲು ವಿದೇಶದ ವರ ಬರುತ್ತಾನೆ...ಇಲ್ಲೊಂದು ಮಾತು ಹೇಳಬೇಕು. ಈ ಹುಡುಗಿಯ ತಾಯಿಯಾಗಿ ಉಮಾಶ್ರಿಯ ಅಭಿನಯ ಮೆಚ್ಚುವಂತದ್ದು... ಅಪ್ಪಟ ಕೊಂಕಣಿ ಹೆಂಗಸಿನ ಅಭಿನಯ! ಹಾಗೆಯೇ ಚಿಕ್ಕದಾಗಿದ್ದರೂ ಸಂಧ್ಯಾ ಪೈ ಅವರೂ ವರನ ತಾಯಿಯಾಗಿ ನುರಿತ ಅಭಿನೇತ್ರಿಯಂತೆ ನಟಿಸಿದ್ದಾರೆ. ಆಕ್ಷೇಪಣೆಯಿರುವುದು ವರನ ವಿಷಯದಲ್ಲಿ ಮತ್ತು ಈ ವಿಷಯದ ನಿರೂಪಣೆಯಲ್ಲಿ- ವರನ ಪಾತ್ರ ನಟಿಸಿದ ವರನ ಮುಖ ಭಾವ ರಹಿತವಾಗಿತ್ತು...ಮತ್ತು ಅದಾಗಲೇ ಬೇರೊಬ್ಬನನ್ನು ಪ್ರೀತಿಸುತ್ತಿದ್ದ ಹುಡುಗಿ ಅಂತಹ ಯಾವುದೇ ಭಾವನೇ ಇಲ್ಲವೆಂಬಂತೆ ವರನ ಹಾಗೂ ಅವನತಂದೆ ತಾಯಿಯರ ಜೊತೆ ನಗುತ್ತಾ ಇರುತ್ತಾಳೆ. ಇದಕ್ಕೆ ನನ್ನ ಸ್ನೇಹಿತೆಯ ಸಮರ್ಥನೆ- ನಮ್ಮ ಹುಡುಗಿಯರು ತಮ್ಮ ಮನೆತನಕ್ಕಾಗಿ ಎಲ್ಲವನ್ನು ತ್ಯಾಗ ಮಾಡುತ್ತಾರೆ! ಹಾಗಾದರೆ ಪ್ರೀತಿಯಲ್ಲಿ ಯಾಕೆ ಬೀಳಬೇಕಾಗಿತ್ತು? ನನ್ನ ಪ್ರಶ್ನೆ! ಇಲ್ಲೊಂದು ದೃಶ್ಯ- ಹುಡುಗ  ಹುಡುಗಿಗೆ ಮಾತಾಡಲು ಕಳುಹಿಸಲಾಗುತ್ತದೆ...ಆದರೆ ಆ ದೃಶ್ಯವನ್ನು ತೋರಿಸುವುದಿಲ್ಲ. ಹುಡುಗಿ ಮದುವೆಗೆ ಒಪ್ಪಿಗೆ ಕೊಡುತ್ತಾಳೆ...ಅದ್ಯಾಕೆ ಅವಳು ತನ್ನ ಭಾವನೆ ಹೇಳಿಕೊಳ್ಳುವುದಿಲ್ಲ...ಬಹುಶಃ ಸುಮಾರು ಹತ್ತು ವರ್ಷಗಳ ಹಿಂದೆಯೇ ಮಗಳ ಒಪ್ಪಿಗೆಯೂ ನಮ್ಮಲ್ಲಿ ಕೇಳುವುದು ಶುರುವಾಗಿದೆ ಅನಿಸುತ್ತದೆ. ಹಾಗಾಗಿ ಚಿತ್ರದಲ್ಲಿಯೂ ಇದನ್ನು ತೋರಿಸಲಾಗಿದೆ. ಆಧುನಿಕ ಹುಡುಗಿಯಾಗಿದ್ದರೂ ಯಾಕೆ ಅವಳು ತನ್ನ ಪ್ರೀತಿ ಬಗ್ಗೆ ಹೇಳಿಕೊಳ್ಳದೆ ಬೇರೊಂದು ಮಾತಿಗಾಗಿ ತಾಯಿ ಮೇಲೆ ಕೋಪಗೊಳ್ಳುತ್ತಾಳೆ?






















     ಹುಡುಗಿ ಬಗ್ಗೆ ಏನಾದರೂ ಕೊಕ್ಕೆ ಹೇಳುವುದು ಬಹುಶಃ ಎಲ್ಲಾ ವರ್ಗ ಜಾತಿಯಲ್ಲೂ  ಇರುವುದು...ಹಾಗೆ ಚಿತ್ರದಲ್ಲಿಯೂ ಮರ್ತುವಿನ ರೂಪದಲ್ಲಿ ಅದನ್ನು ಹೇಳಿದ್ದಾರೆ ನಿರ್ದೇಶಕರು. ಆದರೆ ವರನ ತಾಯಿ ತಂದೆ ಅದಕ್ಕೆ ಹೆಚ್ಚು ಗಮನ ಕೊಡದಿದ್ದರೂ ವರ ಅದನ್ನೇ ದೊಡ್ಡದಾಗಿ ಮಾಡಿ ಮದುವೆ ನಿರಾಕರಿಸುತ್ತಾನೆ. ಆಧುನಿಕ ಹುಡುಗರು ಅದರಲ್ಲೂ ಅಮೇರಿಕಾದಲ್ಲಿರುವನ ಮನಸ್ಥಿತಿ ಹೀಗಿರುತ್ತದೆಯೇ? ನಿರಾಕರಿಸಬೇಕಾಗಿದ್ದ ಹುಡುಗನ ಪೋಷಕರಿಗೆ  ಒಪ್ಪಿಗೆ ಇರುತ್ತದೆ. ಮಹಾ ಆಶ್ಚರ್ಯ!
   ಇದರಲ್ಲಿ ನಮ್ಮ ಸಮಾಜದ ಹುಡುಗಿಯರ ತಾಯಿಯಂದಿರ ಅಭಿಪ್ರಾಯವನ್ನು ಒತ್ತು ಕೊಟ್ಟು ಹೇಳಲಾಗಿದೆ...ಇದು ೧೦೦% ನಿಜವೂ ಹೌದು. ಮದುವೆಗೆ ವರ ಹುಡುಕುವಾಗ ತಮ್ಮ ಮಗಳಿಗೆ ಅತ್ತೆ ಮಾವಂದಿರು ಇಲ್ಲದ ಮನೆಯನ್ನೇ ಹುಡುಕುವ ಪರಿಪಾಟವು ಆರಂಭವಾಗಿದೆ. ಇಲ್ಲಾ ಹುಡುಗ ಪರ ಊರಿನಲ್ಲಿರಬೇಕು ಅಥವಾ ಬೇರೆ ಮನೆ ಮಾಡಬೇಕು...ಅಲ್ಲಾ ಇವರ ಮಗನಿಗೆ ಹೆಣ್ಣು ಕೊಡುವವರೂ ಹೀಗೆ ಆಲೋಚಿಸುವುದಿಲ್ಲವೇ? ಬಿಡಿ, ನಾನು ಇಲ್ಲಿ ವಿಷಯಾಂತರ ಮಾಡಲು ಹೋಗುವುದಿಲ್ಲ.


    ಚಿತ್ರದಲ್ಲಿ ಕೊಂಕಣಿ ಸಮಾಜದ ಶ್ರಾವಣ ಮಾಸ ಮತ್ತು ರಥೋತ್ಸವವನ್ನು ವೈಭವಿಕರಿಸಲಾಗಿದೆ. ಬಹುಶಃ ರಥೋತ್ಸವದ ಊಟ ನಮ್ಮವರ ವೀಕ್‍ನೆಸ್...ಇದನ್ನು ಇದರಲ್ಲಿ ಮಾಲತಿ ಮಾಯಿಯ ಮೂಲಕ ತೋರಿಸಲಾಗಿದೆ!  ದಾಳಿತೋವೆ  ಕೊಂಕಣಿ ಸಮಾಜದ ದೌರ್ಬಲ್ಯ!


   ಒಕ್ಕುಳಿ ನಡೆಯುತ್ತಿರುವ ದೃಶ್ಯ..ಮಗು ನೀರಿಗೆ ಬೀಳುವುದು...ಮಗುವನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ಗಣ್ಣುವಿನ ಅಂತ್ಯ...ಯಾಕೋ ಕತೆಯಲ್ಲಿ ಗಣ್ಣುವಿನ ಅಂತ್ಯ ಅಗತ್ಯವಿಲ್ಲವಿತ್ತು ಅನಿಸುತ್ತದೆ...ಒಂದು ಬೆಳಕು ನಂದಿಹೋಗುತ್ತದೆ ಮತ್ತೊಂದು ಬೆಳಕು ಹುಟ್ಟುತ್ತದೆ!


     ಛಾಯಾಚಿತ್ರಗಾಹಿ-ಉತ್ಪಲ್ ನಯನಾರ್ ಕೆಲವೊಮ್ಮೆ ಅವಸರ ಮಾಡಿದ್ದಾರೆನೆಸುತ್ತದೆ...ಪ್ರಸಿದ್ಧ ಸುರೆಶ್ ಅರಸ್ -ಸಂಕಲಕಾರರು....ಯಾಕೋ ಅಲ್ಲಲ್ಲಿ ಎಳೆ ತಪ್ಪಿದಂತೆ ಕಾಣುತ್ತದೆ. ಕತೆ ನಿರೂಪಣೆ ಸಾಧಾರಣ. ನಿರ್ದೇಶನ ಸಾಧಾರಣ. ನಟನೆ ಅತ್ಯುತ್ತಮ..ಬಾಲ ನಟ ಗಣ್ಣು ಸಹಜವಾದ ಅಭಿನಯ! ತುಂಬಾ ಕಾಲ ನೆನಪಿನಲ್ಲಿ ಉಳಿಯುವ ಪಾತ್ರ. ಶಿವಧ್ವಜ- ಉತ್ತಮವಾಗಿ, ಕೊಂಕಣಿಯವರ ಸಹಜ ನಟನೆ, ನೀತು- ತಮ್ಮ ಪಾತ್ರವನ್ನು ಅಚ್ಚುಕಾಟ್ಟಗಿ ಮಾಡಿದ್ದಾರೆನ್ನಲಡ್ಡಿಯಿಲ್ಲ.  ಸತೀಶ್ ನಾಯಕ್, ಓಂ ಗಣೇಶ್, ಮತ್ತು ಕಟ್ಟೆ ಹುಡುಗರು, ಮರ್ತುವಿನ ಪಾತ್ರಧಾರಿ ಬಹಳ ಸಹಜ ನಟನೆ..ಅತ್ಯುತ್ತಮ ಅಭಿನಯ.
ಬಿಡುಗಡೆಯ ದಿನದ ನೆನಪು!


ಬಿಡುಗಡೆಯ ದಿನದ ನೆನಪು!


















   ಒಟ್ಟಾರೆ ಈ ಚಿತ್ರ ಮನೆ ಮಂದಿಲ್ಯೆಲ್ಲ ಕುಳಿತು ನೋಡಲು ಅಡ್ಡಿಯಿಲ್ಲ...ಬಹುಶಃ ವಿಷ್ಣುವರ್ಧನವರ ಯಜಮಾನ ಚಿತ್ರದಂತೆ ಮತ್ತೆ ಮತ್ತೆ ನೋಡಬಹುದಾದ ಚಿತ್ರ. ಕೊಂಕಣಿ ಭಾಷಿಗರು ಒಮ್ಮೆಯಾದರೂ ನೋಡಲೇಬೇಕು...ಕಡಿಮೆಪಕ್ಷ ಚಿನ್ನನವರನ್ನು ಪ್ರೋತ್ಸಾಹಿಸಲಿಕ್ಕಾದರೂ!


   ಭವಿಷ್ಯದಲ್ಲಿ ಚಿನ್ನನವರಿಂದ ಮತ್ತು ನಟನಾವರ್ಗಗಳಿಂದ ಇನ್ನೊಂದು ಕೊಂಕಣಿ ಚಿತ್ರದ ನಿರೀಕ್ಷೆ ಹುಟ್ಟಿಸಿದೆ ಈ ಉಜ್ವಾಡು ಚಿತ್ರ!


ಏನೇ ಆದರೂ ನಮ್ಮ ಭಾಷೆಯ ಚಿತ್ರ....ಆದುದರಿಂದ ಇದನ್ನು ನೋಡಲು ಚಿತ್ರ ಮಂದಿರಕ್ಕೆ ಹೋಗಿ ಎಂದು ಸಮಸ್ತ ಕೊಂಕಣಿ ಮತ್ತು ತುಳು ಬಾಂಧವರಲ್ಲಿ ವಿನಂತಿಸಿಕೊಳ್ಳುತ್ತೇನೆ. ರಾ- ೧ಗಿಂತ ಉತ್ತಮವಾಗಿದೆ ಎಂದು ಸರ್ಟಿಫಿಕೇಟ್ ಸಹ ಕೊಡುತ್ತಿದ್ದೇನೆ!

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...