ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

24 November, 2011

ಕಾರ್ತಿಕ ಮಾಸದ ದೀಪೋತ್ಸವ!



 ನಮ್ಮ ದಕ್ಷಿಣ ಕನ್ನಡದಲ್ಲಿ ಕಾರ್ತಿಕ ಮಾಸವನ್ನು ದೀಪೋತ್ಸವವನ್ನಾಗಿ ಆಚರಿಸಲಾಗುತ್ತದೆ.  ಎಲ್ಲಾ ದೇವಸ್ಠಾನಗಳಲ್ಲಿ ಮೊದಲೇ ಅನೇಕ ವರುಷಗಳ ಹಿಂದೆ ನಿರ್ಧರಿಸಿದ ತಿಥಿಯ ಸಮಯದಲ್ಲಿ ಗುರ್ಜಿ ಹಬ್ಬ ಜರುಗುತ್ತದೆ. ದರ್ಮಸ್ಥಳದ ಮಂಜುನಾಥ ದೇವಸ್ಥಾನದ, ಕಾರ್ಕಳದ ಲಕ್ಷದೀಪೋತ್ಸವವು ಬಹಳ ಪ್ರಸಿದ್ಧವಾಗಿದೆ.


     ದೇವಸ್ಥಾನವನ್ನು ದೀಪಗಳಿಂದ ಶೃಂಗರಿಸಲಾಗುತ್ತದೆ. ಅದರಲ್ಲೂ ಕಾರ್ಕಳದಲ್ಲಿ ಬ್ರಾಹ್ಮೀ     ಮುಹೂರ್ತದಲ್ಲಿ ದೀಪಗಳಿಂದಲೇ ವಿಷ್ಣುವಿನ ಅವತಾರಗಳನ್ನು ಮೂಡಿಸಲಾಗುವುದು. ಈ ದೃಶ್ಯ ನಯನ ಮನೋಹರವಾಗಿರುವುದು. ಇದರಲ್ಲಿ ಭಾಗವಹಿಸಲು ಪರಊರಿನಲ್ಲಿ ನೆಲೆನಿಂತ ಕಾರ್ಕಳಿಗರು ಧಾವಿಸಿ ಬರುವರು.
























     ನನ್ನ ಊರಾದ ಮಂಗಳೂರಿನಲ್ಲೂ ಗುರ್ಜಿಯನ್ನು ಬಹಳ ವೈಭವದಿಂದ ಆಚರಿಸುತ್ತಾರೆ. ಮಂಗಳೂರಿನ ಅನೇಕ ಆಯಕಟ್ಟಿನ ಸ್ಥಳಗಳಲ್ಲಿ ರಥವನ್ನು ತಯಾರು ಮಾಡುತ್ತಾರೆ. ಇದು ರಥೋತ್ಸವದಲ್ಲಿ ಉಪಯೋಗಿಸುವ ರಥದಂತಿದ್ದರೂ ಇಲ್ಲೊಂದು ವಿಶೇಷವಿದೆ. ಈ ರಥವನ್ನು ಬರೇಹೂಗಳಿಂದ ಮಾತ್ರ ಸಿಂಗರಿಸದೇ ಹಣ್ಣು ತರಕಾರಿಗಳಿಂದ ಸಿಂಗರಿಸಲಾಗುತ್ತದೆ. ಅದನ್ನು ನೋಡಿ ಆನಂದಿಸಲು ಎರಡು ಕಣ್ಣುಗಳೂ ಸಾಲದು.  ನಮ್ಮ ಹಿತ್ತಲಲ್ಲಿ ಹಲಸಿನ ಹಣ್ಣಿನ ಕಾಯಿ ಇನ್ನೂ ಸಹ ಮೂಡಿಲ್ಲ...ಆದರೆ ನೀವು ಈ ರಥದಲ್ಲಿ...ಇದನ್ನು ರಥ ಎಂದು ಕರೆಯುವುದಕ್ಕಿಂತ ದಿಂಡು ಅಥವಾ ಗುರ್ಜಿ ಎನ್ನುವುದೇ ಸೂಕ್ತ,.... ಆಗಲೇ  ಭಾರಿ ಗಾತ್ರದ ಹಲಸಿನ ಹಣ್ಣು ಕಾಣಬಹುದು. ದ್ರಾಕ್ಷೆ ಹಣ್ಣಿನ, ಹಸಿರು ಮೆಣಸಿನ ಮಾಲೆ ನೋಡಿದರೆ ಬಹುಶಃ ಇದೇ ನಮ್ಮ ಅಕ್ಕಸಾಲಿಗರಿಗೆ ಹೊಸ ಹೊಸ ನಮೂನೆಯ ಹಾರ ತಯಾರಿಕೆಯ ಸ್ಫೂರ್ತಿ ಏನೋ ಅಂದು ಅನಿಸೀತು. ನಲ್ವತ್ತು ವಸಂತ ಮಾಸಗಳಿಂದಲೂ ದಿಂಡಿನ ದರ್ಶನ ಪಡೆಯುತ್ತಿದ್ದರೂ ಪ್ರತಿ ಸಲ ನನಗೆ ರೋಚಕವಾಗಿಯೇ ತೋರುತ್ತದೆ...ಎಂದೂ ತನ್ನ ಹೊಸತನ ಕಳೆದುಕೊಂಡಿಲ್ಲ...ಇದು ಕೇವಲ ನನ್ನ ಅನುಭವ ಮಾತ್ರವಲ್ಲ...ಆನಂದವನ್ನು ಆಸ್ವಾದಿಸುವವ ಮನಸಿರುವ ದಕ್ಷಿಣ ಕನ್ನಡಿಗರೆಲ್ಲ  ಇದಕ್ಕೆ ಖಂಡಿತ ಇಂಬು ಕೊಡುತ್ತಾರೆ.
ಹಾ! ಎಲ್ಲಿದ್ದೆ!!! ದಿಂಡಿನ ಶೃಂಗಾರದ ಬಗ್ಗೆ ಹೇಳುತ್ತಿದೆ ಅಲ್ಲವಾ!!  ಈ ಚಿತ್ರಗಳನ್ನು ನೋಡಿ ನೀವು ದಿಂಡಿನ ವೈಭವನ್ನು ಅಂದಾಜಿಸಬಹುದು...ಮತ್ತೆ ನಿಮ್ಮ ಭೇಟಿ ನಮ್ಮೂರಿನ ದಿಂಡಿನಲ್ಲಿ...


































ಶ್ರೀಕೃಷ್ಣ ಮಠದ ಕಡಲೆ ಕುರಿಂದು!






ಪೂಜೆ ಸ್ವೀಕರಿಸಿ ಹಿಂದಿರುಗುವಾಗ ಅಲ್ಲಲ್ಲಿ ಕಟ್ಟೆ ಪೂಜೆ ಸ್ವೀಕರಿಸುತ್ತಾನೆ ಮಹಾಗಣಪತಿ!






     ದೇವಸ್ಥಾನವನ್ನು ದೀಪಗಳಿಂದ ಝಗಝಗಿಸುತ್ತಾರೆ....ಈ ದಿಂಡು ಇಡುವ ಸ್ಥಳ ದೇವಸ್ಥಾನದ ಸಮೀಪ ಇರಬೇಕಿಂದಿಲ್ಲ...ನಮ್ಮ ಮಣ್ಣಗುಡ್ಡೆಯ ಮತ್ತು ಬಳ್ಳಾಲಭಾಗ ದಿಂಡಿನಲ್ಲಿ ಶರವು ಮಹಾಗಣಪತಿಯ ಮೂರ್ತಿಯನ್ನು ಪೂಜಿಸಲಾಗುತ್ತದೆ.


    ಗುರ್ಜಿ ನಡೆಯುವ ಪ್ರದೇಶವನ್ನು ಬಣ್ಣ ಬಣ್ಣದ ವಿದ್ಯುದೀಪಗಳಿಂದ ಬೆಳಗಿಸುತ್ತಾರೆ. ಇಲ್ಲಿನ ಉತ್ಸಾಹಿ ಯುವಕ ವೃಂದದವರು, ದೀಪೋತ್ಸವದ ಯಜಮಾನಿಕೆ ನಡೆಸುವವರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ಕೊಡುತ್ತಾರೆ..ದರ್ಶಕರಿಗೆ ನೃತ್ಯ, ಸಂಗೀತದ ಹೊಳೆ ಹರಿಸಿ...ಮತ್ತೆ ಮತ್ತೆ ದಿಂಡಿನ ವೈಭೋಗವನ್ನು ನೆನೆಯುವಂತೆ ಮಾಡುತ್ತಾರೆ. ಹಾ..ಮಕ್ಕಳಿಗಂತೂ ಅಜ್ಜಿ ಅಜ್ಜಂದಿರಿಂದ ದಿಂಡಿನ ಖರ್ಚಿಗೆ ಹಸಿರು ನೋಟುಗಳು ಸಿಗುತ್ತವೆ...ನನ್ನ ಬಾಲ್ಯದ ದಿನಗಳಲ್ಲಿ ನಮ್ಮ ಅಜ್ಜಿ ಆದಿನ ಬೆಳಿಗ್ಗೆನೇ ಅಜ್ಜನ ಹತ್ತಿರ ಮೊಮ್ಮಕ್ಕಳಿಗೆ ಕೊಡುವ ಹಣವನ್ನು ವಸೂಲಿ ಮಾಡುತಿದ್ದ ನೆನೆಪು ಕಾಡುತ್ತಿದೆ....ನಮಗೆ ಸಿಗುತ್ತಿದ್ದದು ಪೈಸೆಯ ಲೆಕ್ಕವಾದರೂ ಅದನ್ನು ಬಹಳ ಜೋಪಾನವಾಗಿ, ನಾವೆಲ್ಲಾ ಅಣ್ಣತಮ್ಮ ಅಕ್ಕ ತಂಗಿಯರು ಏನೆಲ್ಲಾ ತೆಗೆದು ಕೊಳ್ಳ ಬಹುದೆಂದು ನಮ್ಮ ಬಜೆಟ್ ತಯಾರು ಮಾಡುವ ದೃಶ್ಯ ಕಾಡುತ್ತದೆ...ಎಂತಹ ಸುಂದರ ಬಾಲ್ಯವದು!
ಈಗಿನ ಸಂತೆಯಲ್ಲಿ ಸಿಗುವ ಹೆಚ್ಚಿನ ವಸ್ತುಗಳು ಚೈನಾ ಮೇಡ್! ತಿಂಡಿ ತಿನಿಸುಗಳಿಲ್ಲದೆ ಸಂತೆಯಿರುವುದೇ?? ನಮ್ಮೂರಿನ ಪ್ರಸಿದ್ಧ ಚರಂಬುರಿ ಉಪ್ಕರಿ ತಿಂದರಿಗೆ ಗೊತ್ತು ಅದರ ರುಚಿ! ಇದೆಲ್ಲಾವಿದ್ದರೆ ಮರುದಿನ ಬೆಳಿಗ್ಗೆ ರಸ್ತೆಯ ತುಂಬಾ ಪ್ಲಾಸ್ಟಿಕ್, ಕಾಗದ ಹರಡಿರುವುದು ಸಹಜ ತಾನೆ...ಇದು ಸಾರ್ವಜನಿಕ ರಸ್ತೆಯಲ್ಲವಾ? ನಮ್ಮ ಮನೆಯ! ಕಸವನೆಲ್ಲಾ ಬುಟ್ಟಿಯೊಳಗೆ ಹಾಕಲು..ರಸ್ತೆಯಲ್ಲಿ ಬಿಸಾಡುವುದು ನಮ್ಮ ಭೌತಿಕ ಹಕ್ಕು!
   ಹೋಗಲಿ...ಇದೆಲ್ಲ ಹೇಳಿ ಪ್ರಯೋಜನವಿಲ್ಲ...ನಾವು ಸರಕಾರವನ್ನು ದೂರುವುದರಲ್ಲಿ ಪ್ರವೀಣರು...ನಾವು ಹೇಗೆ ಬೇಕಾದರೂ ಇರಬಹುದು...- ಸಾರ್ವಜನಿಕರ  ರೀತಿ ನೀತಿ!


೨೦೧೦ರ ದಿಂಡಿನ ವಿಡಿಯೋ


      ರಾತ್ರಿ ೧೦.೩೦ ಗಂಟೆಯ ಹೊತ್ತಿಗೆ ಶ್ರೀದೇವರ ಮೂರ್ತಿ ಸಕಲ ವೈಭವ ಮಂಗಳ ವಾದ್ಯದೊಂದಿಗೆ ದಿಂಡು ನಡೆಯುವ ಸ್ಥಳಕ್ಕೆ ಚಿತ್ತೈಸುವುದು. ಗುರ್ಜಿಯಲ್ಲಿ ರೂಢನಾಗಿ ಪೂಜೆಗಳನ್ನು ಸ್ವೀಕರಿಸುವ ದೇವರ ಸುತ್ತಲೂ ಮರದಿಂದ ಮಾಡಿದ ಕಂಬಗಳಲ್ಲಿ ಎಲ್ಲರೂ ಕೂಡಿ ದೀಪಗಳನ್ನು ಹಚ್ಚುವರು. ದೀಪಗಳಿಂದ ಬೆಳಗುವ ದಿಂಡಿನ ವೈಭವ ನಯನ ಮನೋಹರ! ವರ್ಣಿಸಲಸಾಧ್ಯ!. ಭಕ್ತರ ನಮನಗಳನ್ನು ಸ್ವೀಕರಿಸಿದ   ದೇವರ ಸವಾರಿ ದೇವಸ್ಥಾನಕ್ಕೆ ತಿರುಗಿ ಹೊರಡುತ್ತದೆ...ಇಷ್ಟೆಲ್ಲ ನಡೆಯುವಾಗ ರಾತ್ರಿ ಹೊತ್ತು ಬಹುಶಃ ೧ ಅಥವಾ ೨ ಗಂಟೆ ಕಳೆಯುತ್ತದೆ.


     ಇದು ಸಂಜೆಯ ನಂತರ ನಡೆಯುವ ಉತ್ಸವವಾದುದರಿಂದ ಜನರು ತಮ್ಮತಮ್ಮ ಕೆಲಸಗಳಿಂದ ಹಿಂದಿರುರಿದ ನಂತರ ಆರಾಮವಾಗಿ ಬಂದು ಇದರಲ್ಲಿ ಪಾಲುಗೊಳ್ಳುತ್ತಾರೆ. ಯುವಕ ಯುವತಿಯರಿಗಂತೂ ಇದರಲ್ಲಿ ಎಷ್ಟು ಹೊತ್ತು ಕಳೆದರು ತೃಪ್ತಿ ಇರುವುದಿಲ್ಲ. ನವ ವಧುವರರಂತೂ ಕೈ ಕೈ ಹಿಡಿದು ಕೊಂಡು ತಿರುಗುವುದನ್ನು ನೋಡಿ ನಾವೆಲ್ಲ ತಮಾಷೆ ಮಾಡುತ್ತಿದ್ದೆವು.


  ನಮ್ಮ ಮಣ್ಣಗುಡ್ಡ ಗುರ್ಜಿಯಲ್ಲಿ ಇನ್ನೊಂದು ವಿಶೇಷವಿದೆ- ಅದೇ ಇನ್ನೊಂದು ಸಣ್ಣ ಕುರಿಂದು( ಗುರ್ಜಿ, ದಿಂಡು, ಎಂದೆಲ್ಲಾ ಕರೆಯುತ್ತಾರೆ) ಶ್ರೀಕೃಷ್ಣ ಮಠದಲ್ಲಿ ಕಡೆಲೆಯಿಂದಲೇ ಸಣ್ಣ ಕುರಿಂದನ್ನು ತಯಾರಿಸುತ್ತಾರೆ.  ಕಡಲೆಯನ್ನು ನೆನೆ ಹಾಕಿ ಸೂಜಿಯಿಂದ ಹೆಣೆದು ದಿಂಡನ್ನು ತಯಾರಿಸುತ್ತಾರೆ.  ಮಣ್ಣಗುಡ್ಡೆಯ ದಿಂಡಿಗೆ ಬಂದವರು ಇದನ್ನು ನೋಡದೆ ಹೋಗಲಾರರು. ಬಹುಶಃ ನಮ್ಮ ದಿಂಡು ೧೪೦ ವರ್ಷಕ್ಕಿಂತಲೂ ಹಳೆಯದು...ಆದರೂ ಪ್ರತಿ ವರ್ಷ ಹೊಸದಂತೆ ತೋರುತ್ತದೆ. ಹೊಸ ಅನುಭವ ಕೊಡುತ್ತದೆ.
  ಈ ವರುಷದ ದಿಂಡು ಬಂದು ಹೋಯಿತು..ಮುಂದಿನ ವರುಷ ಬರುವಿರಿ ತಾನೆ!

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...