ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

30 March, 2013

ಯಾರ ಲೆಕ್ಕ ಯಾವಾಗ ಕೊನೆಗೊಳ್ಳುವುದೋ!


ಅರಿತವರಿದ್ದಾರೆಯೆ ಆತನ
ಈ ಚದುರಂಗದಾಟದಲಿ
ಮುಂದಿನ ನಡೆಯ
ಸಾಕಯ್ಯ ಸಾಕು
ಈ ಬದುಕು
ಕರೆದುಕೋ ಎಂದರೂ
ಕೇಳದ ಆತ
ಏನೆಲ್ಲಾ ಯೋಜನೆ
ಮಾಡಿ ಕುಳಿತವನ
ಸದ್ದಿಲ್ಲದೆ ಒಯ್ಯುವನು
ಯಾರ ಲೆಕ್ಕ
ಕೊನೆಗೊಳ್ಳುವುದು ಯಾವಾಗ 
ಅರಿತಿಲ್ಲ ಆದರೂ
ಕಾಣದ ನಾಳೆಗಾಗಿ
ತಯಾರಿ ನಡೆಸುವುದೇ
ನಮ್ಮ ಗುರಿ!




28 March, 2013

ಹೀಗೊಂದು ಸಂಭಾಷಣೆ!



ಹೀಗೊಂದು ಸಂಭಾಷಣೆ!

ಒಲವೇ,

ಹೀಗೇಕೆ ನೀ ಎನ್ನ ಆವರಿಸಿರುವೆ
ನಾ ನನ್ನಿರುವಿಕೆಯನ್ನೇ ಮರೆಯುವಷ್ಟು||

ಹೀಗೇಕೆ ನೀ ಎನ್ನ ಸತಾಯಿಸುತಿರುವೆ
ನನ್ನ ಕರೆಗೆ ಓಗೊಡದೆ ಮೌನವಾಗಿದ್ದು||

ಹೀಗೇಕೆ ನೀ ಎನ್ನ ಮೋಡಿಮಾಡಿರುವೆ
ನಾ ನಿನ್ನ ನೆನಪಲ್ಲೇ ಮುಳುಗುವಷ್ಟು||

ಒಲವಂದಿತು,

“ಹೀಗೇಕೆ ಎಂದು ಕೇಳಲೇಕೆ
ಉತ್ತರವಿಲ್ಲದ ವ್ಯರ್ಥ ಪ್ರಶ್ನೆಗಳೆಷ್ಟು!
ಯಾರಿಗೂ ಎಟುಕದ ಉತ್ತರಕ್ಕಿಷ್ಟು
ಮಾಡದಿರು ವ್ಯರ್ಥ  ಶ್ರಮವಿಷ್ಟು!”

24 March, 2013

ಅಂದು ಕರೆದಂತೆ ಮತ್ತೊಮ್ಮೆ ಕರೆಯುವೆಯಾ ಇಂದು!


ಅಂದು ಕರೆದಂತೆ ಮತ್ತೊಮ್ಮೆ ಕರೆಯುವೆಯಾ ಇಂದು!

ನನ್ನೊಲವಿನ ಕೋಗಿಲೆಯೇ,

ಮರೆಯಲಾರೆ ಎಂದಿಗೂ ನಾ
ಆ ಹಳೆಯ ಹಾಡನು
ಮತ್ತೊಮ್ಮೆ ಹಾಡುವೆಯಾ ನನಗಾಗಿ ಇಂದು||

ವರುಷದ ಹಿಂದೆ ನೀ
ಉಲಿದ ಆ ಗಾನ
ಮತ್ತೊಮ್ಮೆ ನುಡಿಸುವೆಯಾ ನನಗಾಗಿ ಇಂದು||

ಹಾಡು ಕೇಳಿಸಿಹ ಮುಂಜಾನೆಗಳು
ಹೊಸ ಕನಸುಗಳ ಮೂಡಿಸಿವೆ

ಮತ್ತೊಮ್ಮೆ ಕೇಳಿಸುವೆಯಾ ನನಗಾಗಿ ಇಂದು||

ಬಣ್ಣ ಮಾಸಿದ ಬದುಕಿಗೆ
ಅಂದು ಹಚ್ಚಿದ ರಂಗನು
ಮತ್ತೊಮ್ಮೆ ಹಚ್ಚುವೆಯಾ ನನಗಾಗಿ ಇಂದು||

ಹೊಳೆಯುತಿಹ ಆ ಕೆಂಗಣ್ಣಿನ
ಸೆಳೆತಕೆ ಸೋತೆ ನಾನಂದು
ಮತ್ತೊಮ್ಮೆ ನೋಡುವೆಯಾ ನನಗಾಗಿ ಇಂದು||

ಮಾಧುರ್ಯವಿಲ್ಲದ  ಗಾನವನಂದು ಆಲೈಸಿದೆ
ಕೇವಲ ನಿನಗಾಗಿ ಹಾಡುವೆ
ಮತ್ತೊಮ್ಮೆ ಆಲೈಸುವೆಯಾ ನನಗಾಗಿ ಇಂದು||

ಇನ್ನು ಬದುಕೆಲ್ಲ ಕಾಯುವಿಕೆ

ಕೇವಲ ನಿನ್ನ ಕರೆಗಾಗಿ
ಮತ್ತೊಮ್ಮೆ ಕರೆಯುವೆಯಾ ನನಗಾಗಿ ಇಂದು||




16 March, 2013

ಅಂತರಂಗದಲ್ಲೀಗ ಗೆಜ್ಜೆನಾದ ನಿರಂತರ!


ಅವನೇನೋ ಪಿಸುಗುಟ್ಟಿದ್ದ
ಅರಿವಾಗಲೇ ಇಲ್ಲವಲ್ಲ
ಅಂದು ಆ ಭಾವ!
ತಡೆದರೂ ಕೇಳದಂತೆ
ಎತ್ತಲೋ ನಡೆದನವನು
ಅದು ಕನಸೇ ನನಸೇ
ಬಿಡಿಸಲಾಗಲಿಲ್ಲವೇಕೆ ಒಗಟು
ಚಕ್ರ ಉರುಳಿತು
ನೆನಪಾಗಿ ಉಳಿಯಿತು
ಅದೊಂದು ದಿನ
ತೆರೆ ಸರಿಯಿತು
ಒಲವೇ,
ನೀ ಕಾಣಿಸಿದೇ ತಡ
ಆ ದನಿ ಗುಣುಗುಟ್ಟಿತು
ಕೇಳುತ್ತಲೇ ಎದೆಗಿಳಿಯಿತು
ಅಂದು ಆ ಭಾವ!
ಅಂತರಂಗದಲ್ಲೀಗ
ಗೆಜ್ಜೆನಾದ ನಿರಂತರ!


07 March, 2013

ಹೀಗೊಂದು ಚಿಂತನೆ!

-
ನನ್ನದೊಂದು ಹಳೆಯ ಬರಹ

-
 ಹೀಗೊಂದು ಚಿಂತನೆ!

ಬದುಕೇ,
ನೀ ಬಲು ನಿಗೂಢ,  ದೊಡ್ಡ ಮಾಯಾವಿಯೇ ಸರಿ
ಕ್ಷಣಕ್ಕೊಂದು ನಿಲುವು, ಹಲವೊಮ್ಮೆ ನಿಲುಕದು ಯೋಚನೆಗೂ

ಅಲ್ಲಲ್ಲಿ ಮುಳ್ಳುಗಳು, ಅಲ್ಲಲ್ಲಿ ಹಸಿರು
ಅತ್ತಲಿಂದ ಬೈಗುಳ, ಇತ್ತಲಿಂದ ಮೆಚ್ಚುಗೆ

ಬಂದು ಹಿಂದಿರುವುದರೆಡೆ ಮಧ್ಯೆ ನಿತ್ಯವೂ ಮರಣ ಜನನ
ಮೂಳೆ ಮಾಂಸಗಳ ಬೆಳೆಸಲು ತತ್ವಗಳ ಅಡವು

ಹತ್ತಿಕ್ಕಿದಷ್ಟೂ ಮತ್ತಷ್ಟು ಬೆಳೆಯುವ ಕಾಮನೆಗಳು
ಕರ್ಮ-ಕರ್ತವ್ಯಗಳೆಡೆಯಲ್ಲಿ ಹೊರಗಿಣುಕುವ ಕನಸುಗಳು

ತಗ್ಗಿ ಬಗ್ಗಿ ನಡೆದರೆ ಗುದ್ದು, ತಲೆಯೆತ್ತಿ ನಡೆದರೆ ಸದ್ದು
ಸೊಲ್ಲೆತ್ತದೇ ಬದುಕು ಅಂದರೂ ಕೇಳದು ಮನದಳಲು

ಒಳಗೊಂದು ಬದುಕು, ಹೊರಗೊಂದು ಬದುಕು
ಯಾವುದು ಮಿತ್ಯ, ಯಾವುದು ಸತ್ಯ ತಿಳಿಯದಲ್ಲ

ಜಾತಿ ಮತ ಧರ್ಮಗಳ ಕಟ್ಟು ಪಾಡು
ಒಂದೇ ವದನ, ಮುಖವಾಡ ಹಲವು

ಹೊರಗೆ ಮಾನವ, ಆಗಾಗ ಇಣುಕುವ ದಾನವ
ಅವಕಾಶವಿದೆಯೇ ಮಾನವೀಯತೆಗೆ

ಒಳಗೆ ತಳಮಳ, ಹೊರಗೆ ಮಂದಹಾಸ
ತೋರುವರೇ ನಾಟಕೀಯತೆ

ಹೊರಗೆ ತಣ್ಣಗೆ, ಒಳಗೆ ಕೋಲಾಹಲ
ಉಕ್ಕುವುದೇ ಹಾಲಾಹಲ

ಹೊರಗೆ ಮಿನುಗುವ ಬಣ್ಣ, ಒಳಗೆ ಕರಿಕತ್ತಲು
ತೋರುವರೇ ದೀವಣಿಗೆಯ

ಚೂರಿ ಕತ್ತಿ ಬೇಕಿಲ್ಲವಲ್ಲ, ಮಾತೇ ಸಾಕಲ್ಲ
ಕೊಡುವರು ಮರಣವನಲ್ಲ

ಹಾವು ಏಣಿಯಾಟದ ನಿತ್ಯ ನಡೆ
ಕಾಲೆಳೆದು ಬೀಳಿಸುವಾಟದ ಕುಸ್ತಿ

ಎತ್ತರಕೇರಿದರೆ ಅಮಲು, 
ಕೆಳಗಿಳಿದರೆ ಸುಸ್ತು

ಆಗೊಮ್ಮೆ ಈಗೊಮ್ಮೆ ಆತ್ಮದೆಚ್ಚರ
ನಡೆ ನಡೆ ಆ ಧಾಮ, ಈ ಧಾಮ

ಮುಳುಗೇಳು ಗಂಗೆಯಲ್ಲಿ
ಕರಗುವುದೇ ಜನುಮ ಜನುಮಗಳ ಪಾಪದ ಅಂಟು

ತಪ್ಪುವುದೇ ವೈತರಿಣೀಯ ನಂಟು
ಮತ್ತೆ ಜನನ ಮರಣದ ಚಕ್ರದಾಟ

ಸದ್ಗತಿಗಾಗಿಲ್ಲವೇಕೆ ನಮ್ಮ ಹೋರಾಟ
ಎಲ್ಲವೂ ಸೂತ್ರದಾರನ ಇಚ್ಛೆಯಾಟ!

"ಇದೆಲ್ಲಾ ಕೇವಲ ನನ್ನಿಚ್ಛೆ- 
ಧರ್ಮ-ಅಧರ್ಮ, ಸತ್ಯ-ಮಿತ್ಯ, 
ಪ್ರೀತಿ-ದ್ವೇಷ, ಜನನ-ಮರಣ... ಎಲ್ಲವೂ ಬೇಕು
ಸುಸೂತ್ರವಾಗಿ ಸಾಗಬೇಕು ಗೊಂಬೆಯಾಟ
ಮಿಥ್ಯಾ ಸಂಸಾರದ ಕೊನೆಯೂ ನಾನಿಚ್ಛಿಸಿದಾಗಲೇ
ನಾನಿತ್ತದನ್ನೂ ಈಯದನ್ನೂ ಒಪ್ಪಿ
ನಡೆ ಮುಂದೆ ನಾ ತೋರುವ ಹಾದಿಯಲಿ 
ಪೊಂದುವೆ ನೀ ಸದ್ಗತಿ"
ಎಂದನಾ ಈ ಆತ್ಮದೊಳಗಿನ ಪರಮಾತ್ಮ!

01 March, 2013

ಹಲವು ಹಂಬಲಗಳ ತರುವ ಶಶಿಯ ತೋರುವ ಮುಸ್ಸಂಜೆ!



ಹಲವು ಹಂಬಲಗಳ ತರುವ ಶಶಿಯ ತೋರುವ ಮುಸ್ಸಂಜೆ!
___________________________________

ತಲೆಯೆತ್ತದೆ ನಡೆದವಳ ಕೆಣಕಿ ಪ್ರಶ್ನಿಸಿದ...
"ಅದೇನೆ ಇಂದು ಬರೆಯಲು ಸ್ಫೂರ್ತಿ ಬೇಡವೆ! ಇಂದೇಕೆ ನೋಟವಿಲ್ಲವಿತ್ತ?"
"ನನ್ನಲ್ಲಿ ಹುಟ್ಟಿಸುವೆ ನೀ ಹಲವು ಹಂಬಲಗಳನು..
ನಿನ್ನ ತೋರುತಾ ರಾಮನಿಗೆ ಉಣಿಸುವ ಕೌಸಲ್ಯೆಯಾಗುವಾಸೆ,
ಬೆಳದಿಂಗಳಲ್ಲಿ ರಾಧೆಯಾಗಿ ಕೃಷ್ಣನೊಡನೆ ಯಮುನಾತೀರದಲಿ ಕೋಲಾಟವಾಡುವಾಸೆ,
ಕೈಲಾಸಗಿರಿಯಲಿ ಶೈಲಜೆಯಾಗಿ ಪರಮೇಶನ ಸೇವೆಮಾಡುವಾಸೆ,
ಹಕ್ಕಿಯಾಗಿ ಹಾರಿ ನಿನ್ನೂರಿಗೆ ಬರುವಾಸೆ,
ನಿನ್ನ ಮೋಹಕ ಬೆಳಕನ್ನು ಪುಟ್ಟ ಕ್ಯಾನ್ವಾಸಿನಲ್ಲಿ ಬಂಧಿಸುವಾಸೆ,
ಮಿಂಚುವ ಚುಕ್ಕಿಯಾಗಿ ಆಗಸದಲಿ ಮೆರೆಯಬೇಕೆಂಬಾಸೆ... "
ಹಂಬಲಗಳ ಪಟ್ಟಿಯನ್ನು ಕೇಳುತ ಸೋತ ಚಂದಿರ!
ಅವನಿಗೆ ಪಟ್ಟಿಯ ಕೊಡುತ ನಾನೂ ಸೋತ ಮುಸ್ಸಂಜೆ!

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...