ಇಂದು ಅದ್ಯಾಕೋ ಮನಸು ತುಂಬಿ ಬಂದಿದೆ...ಅದರ ಕಾರಣಕರ್ತರಿಗೆ ಒಂದಿಷ್ಟು ಕೃತಜ್ಞತೆ ಸಲ್ಲಿಸಿ ನಿರಾಳಲಾಗಲು ಬಯಸುತ್ತೇನೆ.
ಮೊದಲನೆಯ ಕೃತಜ್ಞತೆ ನನ್ನೊಡೆಯ ಶ್ರೀರಾಮ ಮತ್ತವನ ಬಂಟ ಹನುಮನಿಗೆ!
ಬದುಕಿನ ಪಥಗಳು ಮರುಭೂಮಿಯಾಗಿದ್ದರೂ ಅಲ್ಲಲ್ಲಿ ಓಯಸಿಸ್‍ಗಳನ್ನು ಸೃಷ್ಟಿಸಿ, ದಾರಿ ತಪ್ಪದಂತೆ ಹಲವು ಬಾರಿ ಕೈಹಿಡಿದು ನಡೆಸಿ, ಮರಳು ದಿಬ್ಬಗಳಲ್ಲಿ ಕಾಲುಗಳು ಹೂತುಹೋದಾಗ ಎತ್ತಿಕೊಂಡೇ ನಡೆದವನಿಗೆ ಮತ್ತೊಮ್ಮೆ ಶತಶತ ಪ್ರಣಾಮಗಳು!
ಇಂದು ಅಪರಾಹ್ನ ಕ್ಯಾಂಪ್ ಮುಗಿದು ಮನೆಯ ಕಡೆ ಧಾವಿಸುತ್ತಿದ್ದವಳಿಗೆ ಅನಿರೀಕ್ಷಿತವಾಗಿ ಗಿರಿಯವರಿಂದ ಲಿಫ್ಟ್ ಸಿಕ್ಕಿತು. ಹೊಟ್ಟೆಯಲ್ಲಿ ಇಲಿಗಳ ಹಾರಾಟ, ತಲೆಯ ಮೇಲೆ ಸುಡುವ ಬಿಸಿಲು... ಇವೆಲ್ಲದರಿಂದಲೂ ಪಾರಾಗಿ ಬೇಗ ಮನೆ ಮುಟ್ಟಿದೆ. ಆತ್ಮೀಯ ಗಿರಿ ಕಾಮತ್ ಅವರಿಗೂ ಹಾಗೂ ಅವರಿಗೆ ಪ್ರೇರಣೆ ನೀಡಿದ ನನ್ನೊಡೆಯನಿಗೂ ವಂದನೆಗಳು!
ಅಮ್ಮನ ಮನೆಯಲ್ಲಿದ್ದ ಬೀಗದ ಕೈ ತೆಗೆದುಕೊಳ್ಳಲು ಹೊರಟವಳಿಗೆ ಮೃಷ್ಟಾನ್ನ ಭೋಜನ ಕಾದಿತ್ತು! ಅಮ್ಮ ತಟ್ಟೆ ಹಾಕಿ, ನನಗೋಸ್ಕರ ತಯಾರಿಸಿದ ಬಾಳೆಕಾಯಿ ಉಪ್ಕರಿ, ಸೋರೆಕಾಯಿ ಹುಳಿ, ಮೆಣಸಿನ ಬೋಂಡ, ಕ್ಯಾಬೆಜ್ ಅಂಬಡೆ....ವ್ಹಾ...ತುಂಬಾ ದಿನಗಳ ನಂತರ ಸುಗ್ರಾಸ ಭೋಜನ ಬಡಿಸಿದರು! ಕೆಲಸ ಮಾಡಿ ಇಳಿದು ಹೋಗಿರುವೆನೆಂದು ಅಮ್ಮನಿಗೆ ಆತಂಕ... ಗಂಜಿನೀರಿನಲ್ಲಿ ಉಪ್ಪು, ತುಪ್ಪ ಹಾಕಿ ಕುಡಿಯಲು ಆಗ್ರಹ. ಧನ್ಯೋಸ್ಮಿ!!!
ಅಮ್ಮನಿಗೆ ನನ್ನ ತಮ್ಮಂದಿರ ಮೇಲೆ ಹೆಚ್ಚು ಪ್ರೀತಿ ಎಂದು ನನಗಿತ್ತು ಒಂದಿಷ್ಟು ಮುನಿಸು. ತುಂಟ ತಮ್ಮ ಮತ್ತು ಕಲಿಯಲು ಒಂದಿಷ್ಟು ಹಿಂದೆಯಿದ್ದ ತಮ್ಮಂದಿರ ನಿಭಾಯಿಸುತ್ತ ಅಂತಹುದೇನಿಲ್ಲದ ನನ್ನ ಬಗ್ಗೆ ನಿರಾತಂಕವಾಗಿದ್ದಳು ನನ್ನಮ್ಮ. ನನಗಾದರೋ ಅಮ್ಮನ ಪ್ರೀತಿಯಲ್ಲಿ ಸಿಂಹಪಾಲು ಬೇಕಿತ್ತು..ಆ ಸಣ್ಣ ಪ್ರಾಯದಲ್ಲಿ ಅಮ್ಮನ ಕಷ್ಟಗಳು ನಮಗೆ ಅರ್ಥವಾಗುತ್ತಿರಲಿಲ್ಲ. ಆದರೆ ಈಗ ನನ್ನ ಪಾಲಿಗೆ ಅಮ್ಮನ ಪ್ರೀತಿಯ ಸಿಂಹಪಾಲೇ ದೊರಕುತ್ತಿದೆ! ೪೩ ವರ್ಷದ ಮಗಳಿಗೆ ಕೈತುತ್ತು ನೀಡಲೂ ತಯಾರಿದ್ದಾಳೆ ಅಮ್ಮ. ಇಂತಹ ಅಮ್ಮನನ್ನು ಪಡೆದ ನಾನು ಧನ್ಯಳು. ಅಮ್ಮ, ನೀನಿಲ್ಲದ ಬದುಕು ಊಹಿಸುವುದೂ ಕಷ್ಟ. ಅಮ್ಮನ ಬಳಿ ನಾನು ಅವಳ ಋಣ ತೀರಿಸುವ ಬಗ್ಗೆ ಮಾತಾಡಿದರೆ ಆಕೆಗೆ ಸಿಟ್ಟೇ ಬರುತ್ತದೆ. ಅವಳದು ಒಂದೇ ಮಾತು- “ತಾಯಿ, ಮಕ್ಕಳ ಮಧ್ಯೆ ಋಣದ ಮಾತು ಎಂದೂ ಬರುವುದಿಲ್ಲ”. ಸರಿಯಮ್ಮ, ಆದರೆ ನನ್ನ ಆಶಯ ಏನೆಂದು ಕೇಳಿ. ಮುಂದಿನ ಜನ್ಮದಲ್ಲಿ ನೀವು ನನ್ನ ಮಗಳಾಗಿ ಹುಟ್ಟಬೇಕು!
ಚಿಕ್ಕಂದಿನಿಂದಲೂ ಚಿತ್ರಕಲೆ ಮತ್ತು ಸಾಹಿತ್ಯದ ಸೆಳೆತವಿತ್ತು. ಬರೆಯುತ್ತಿದ್ದ ಬರಹಗಳು ಕಸದ ಬುಟ್ಟಿ ಸೇರುತ್ತಿದ್ದವು, ಇಲ್ಲವೇ ನನ್ನೊಡಲಲ್ಲಿಯೇ ಸಾವನ್ನಪ್ಪುತ್ತಿದ್ದವು. ೨೦೧೧ರ ಕೃಷ್ಣಾಷ್ಟಮಿಯಂದು ಹುಟ್ಟಿದ ಕವನವನ್ನು ಧೈರ್ಯದಿಂದ ಸಂಪದದಲ್ಲಿ ಹಾಕಿದೆ. ಕಾಗುಣಿತದ ತಪ್ಪುಗಳನ್ನು ಹಿತವಚನದಿಂದಲೇ ತಿದ್ದಿದ ಗುರು ಹಿರಿಯರೆಲ್ಲರಿಗೂ ಕೃತಜ್ಞತೆಗಳು!
ನನ್ನೆಲ್ಲಾ ಚಟುವಟಿಕೆಗಳನ್ನು, ಬರಹಗಳನ್ನು ಇಷ್ಟಪಡುವ ನನ್ನ ಬ್ಲಾಗ್ ಬಂಧುಗಳಿಗೂ, ಫೇಸ್ ಬುಕ್ ಮಿತ್ರರಿಗೂ ಕೋಟಿ ಕೋಟಿ ನಮನ!
ನನ್ನಲ್ಲಿ ವಿಶ್ವಾಸವಿಟ್ಟು, ನನ್ನನ್ನು ತಮ್ಮ ಕ್ಯಾಂಪಿನಲ್ಲಿ, ತಮ್ಮ ಚಟುವಟಿಕೆಗಳಲ್ಲಿ ಪಾಲುದಾರಳನ್ನಾಗಿ ಮಾಡಿದ ಆರ್. ಎಕ್ಸ್ ಯಜಮಾನಿಯರಾದ ವಂದನಾ ನಾಯಕ್, ಗಾಯತ್ರಿ ಭಟ್ ಮತ್ತು ಲಿಟ್ಲ್ ಅಬಿಯ ಒಡತಿ ರೇಶ್ಮಾ ಬಾಳಿಗಾ ಅವರೆಲ್ಲರಿಗೂ ನನ್ನ ಹೃದಯಪೂರ್ವಕ ಕೃತಜ್ಞತೆಗಳು!
2 comments:
ಪುಟ್ಟ ಅಳಿಲಿನ ಸೇವೆ ಮರೆಯಲಾಗದಾದರೂ ಸೇತುವೆಯ ಕರ್ತೃ ಆ ಶ್ರೀರಾಮನೇ ತಾನೇ?
ನಾನು ಸಲಹೆ ನೀಡಿ ತಿದ್ದಿ ತೀಡಿದರೇನು, ಸಾಹಿತ್ಯ ಕರ್ತೃ ನಿಜವಾಗಿಯೂ ತಾವೇ ತಾನೇ?
ಆ ಸರಸ್ವತೀ ದೇವಿ ತಮ್ಮೊಳಗಿನ ಸಾಹಿತಿಯನ್ನು ಸದಾ ಜಾಗ್ರತಾವಸ್ಥೆಯಲ್ಲಿರಿಸಿ, ತಮ್ಮ ಸೃಜನಶೀಲತೆಯನ್ನು ಉತ್ತುಂಗಕ್ಕೆ ಕೊಂಡೊಯ್ಯುವತ್ತ ತಮಗೆ ಸದಾ ಹರಸುತ್ತಿರಲಿ.
ಸರ್, ನಿಮ್ಮ ಸಹಕಾರ, ತಮ್ಮ ಆಶೀರ್ವಾದಗಳಿಗೆ ಧನ್ಯವಾದ ಅರ್ಪಣೆ ಶಿಷ್ಯೆಯಿಂದ!
Post a Comment