"ಅಮ್ಮ ನಂಗೆ ಇನ್ನು ಊಟ ಮಾಡ್ಲಿಕ್ಕೆ ಆಗೊಲ್ಲ." ಅಂದ ನನ್ನ ಪಿಕಾಸು. ಅವನ ತಂಗಿ ನಿತ್ಯವೂ ಮಾಡುವ ಅಭ್ಯಾಸ ಇವನಿಗ್ಯಾವಾಗ ಅಂಟಿತು ಅಂತ ಪ್ರಶ್ನಾರ್ಥಕವಾಗಿ ಅವನ ಕಡೆ ನೋಡಿದೆ.."ಇವತ್ತು ಕಾಲೇಜಿನಲ್ಲಿ ಸ್ನೇಹಿತನ ಲೆಕ್ಕದಲ್ಲಿ ಟ್ರೀಟ್ ಇತ್ತು..ಹೊಟ್ಟೆ ತುಂಬಿದೆ"....ರಾಗ ಎಳೆದ. ನಾನಂದೆ "ಸರಿ.. ಬಿಡು.. ಆದ್ರೆ ರೆಡಿಯಾಗು ಮುಂದಿನ ಜನ್ಮದಲ್ಲಿ ಮನ್ನುವಿನ ತಮ್ಮನಾಗಿ ಆಫ್ರಿಕಾದ ಅತೀ ಬಡ ದೇಶದಲ್ಲಿ ಜನಿಸಲು... " ಮಾತೇ ಇಲ್ಲ. ಸುಮ್ಮನೆ ಎಲ್ಲಾ ಊಟ ಮಾಡಿ ಹೊರಟ. ಮರುದಿನ ಒಂದಿಷ್ಟು ಅನ್ನದ ಅಗುಳು ತಟ್ಟೆಯಲ್ಲಿ ಬಿಟ್ಟು, ನನಗಿದು ಬೇಡ.. ಅಂದ. ಕಣ್ಣಲ್ಲಿ ತುಂಟತನ ಎದ್ದು ತೋರುತಿತ್ತು. "ಆಫ್ರಿಕಾದಲ್ಲೇ ಅವಳ ತಮ್ಮನಾಗಿ ಹುಟ್ಲಿಕ್ಕೆ ಅಡ್ಡಿಯಿಲ್ಲ.. ಆದರೆ ಮತ್ತೆ ನಾನು ಅಲ್ಲಿಂದ ಸೌತ್ ಆಫ್ರಿಕಾಗೆ ಓಡಿ ಹೋಗ್ತೇನೆ ಅಂತ ಡಿಸಿಜನ್ ಮಾಡಿದ್ದೀನಿ.. "ಏನ್ ಹೇಳ್ಲಿ ಇದಕ್ಕೆ.. ಅವಳ ಮುಖ ನೋಡ್ಬೇಕಿತ್ತು.. ಇಂಗು ತಿಂದ ಮಂಗನ ಹಾಗೆ ಮಾಡ್ಕೊಂಡಿದ್ಳು!!!
*************************************
ನನ್ನ ಪಿಕಾಸು ದಪ್ಪ ದಪ್ಪ ಪುಸ್ತಕ ಹರಡಿಕೊಂಡು ಕೂತಿದ್ದ...ಒಮ್ಮೆ ಆ ಪುಸ್ತಕ, ಮತ್ತೊಮ್ಮೆ ಈ ಪುಸ್ತಕ ರೆಫೆರ್ ಮಾಡಿ ಮಧ್ಯ ಮಧ್ಯದಲ್ಲಿ ಏನೋ ನೋಟ್ಸು ಬರ್ಕೊಳ್ತಿದ್ದ.. ಹೆಮ್ಮೆಯಿಂದ ಅವನ ಬೆನ್ನು ತಟ್ಟಿ ಹಿಂದಕ್ಕೆ ಹೋಗುವವಳನ್ನು ನಮ್ಮ ಮಿಸ್ ಇಂಡಿಯಾಳ ವ್ಯಂಗನಗೆ ತಡೆಯಿತು.. "ಏನಾಯ್ತೇ.. ನೀನೂ ಚೆನ್ನಾಗಿ ಅಣ್ಣನ ಹಾಗೆ ಓದು.. ನಿನ್ನ ಬೆನ್ನನ್ನೂ ತಟ್ತೀನಿ.. " ಅಂದೆ. ಅವಳೋ ಬಿದ್ದು ಬಿದ್ದು ನಕ್ಕಳು.. ಪಿಕಾಸೂ ಅವಳಿಗೆ ಜೊತೆ ಕೊಟ್ಟ... ಏನಾಯ್ತೇ ಅಂದ್ರೆ.. ನೀನೊಂದು ಪೆದ್ದಿ. ಅವನು ಅವನ ಬುಕ್ ಓದೋದಲ್ಲ.. ಬೇರೆ ಸಿ ಎಸ್ ದು ಅಂದ್ಲು. ನಿಜವೇನೋ ಅಂದದಕ್ಕೆ ಹೌದು ನಾನು ನೆಟ್‍ವರ್ಕ್, ಮೊಡೆಮ್ ಹ್ಯಾಕಿಂಗ್.. ಅದೂ ಇದೂ ಅಂತ ನನ್ನ ತಲೆಯೊಳಗೆ ಹೋಗದ ಹತ್ತಾರು ಶಬ್ದಗಳನ್ನು ಹೇಳಿದ.. ಅಲ್ವೋ ನಾಡದ್ದು ಎಕ್ಸಾಮ್ ಅಲ್ವೇನೋ.. ನಿನ್ನ ಸಬ್ಜೆಕ್ಟ್ ಯಾವಾಗ ಓದೋದು ಅಂದ್ರೆ ನಾಳೆ ಇದೆಯಲ್ವಾ ಓದ್ಲಿಕೆ ಅದನ್ನು ಅಂದ. ನನ್ನ ಬಾಯಿ ಮುಚ್ಚಿಸಿಬಿಟ್ಟ!
***********************************************.
ಪಠ್ಯ ಪುಸ್ತಕಗಳನ್ನು ತರುವಾಗಲೇ ಅವನು ಅವನ ಸಬ್ಜೆಕ್ಟ್ ಜೊತೆಗೆ ಸಿ ಎಸ್ ನವರದೂ ಹಾಗೂ ಇ ಅಂಡ್ ಸಿಯವರದೂ ತರುತ್ತಾನೆ. ಒಟ್ಟಿಗೊಟ್ಟಿಗೆ ಎಲ್ಲವನ್ನೂ ಹೇಗೆ ಅರಗಿಸಿಕೊಳ್ಳುತ್ತಾನೆ ಅಂತ ನಾನು ಹೆಮ್ಮೆಯಿಂದ ಗಾಬರಿಯಿಂದ ನೋಡ್ತೀನಿ ನನ್ನ ಪಿಕಾಸುನ! ಎಷ್ಟೊ ಸಲ ಐಐಟಿಗೆ ಹೋಗುದು ಬೇಡ ಅಂತ ಹೇಳಿ ತಪ್ಪು ಮಾಡಿದೆನಾ ಅಂತ ಅನಿಸುತ್ತೆ.. ಏನ್ ಮಾಡ್ಲಿ.. ಅವನನ್ನು ಬಿಟ್ಟು ನಂಗೆ ಬದುಕ್ಲಿಕ್ಕೆ ಆಗತಿರ್ಲಿಲ್ಲ.. ಆವಾಗ.. ಇನ್ನು ೧ ವರ್ಷ..ಮತ್ತೆ ಅವನನ್ನು ಕಳುಹಿಸಲೇಬೇಕು.. ಅದಕ್ಕಾಗಿ ಐದು ವರ್ಷಗಳಿಂದ ನನ್ನ ಮನಸ್ಸನ್ನು ತಯಾರಿಸುತ್ತಾ ಇದ್ದೇನೆ.....:-(((