ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

28 February, 2012

ಮಾವಿನ ಹೂವು ಮತ್ತು ಕೋಗಿಲೆಯ ಕುಹೂ ಕುಹೂ!



 ಯಾಕೋ ಬೆಳಿಗ್ಗೆಯಿಂದ ಕೋಗಿಲೆಯೊಂದು ಒಂಟಿಯಾಗಿ ಕುಹೂ ಕುಹೂ ಎನ್ನುತ್ತಾ ಹಾಡುತಿತ್ತು...ಅದ್ಯಾಕೆ ಇವತ್ತು ಒಂದೇ ಹಾಡುತ್ತಿದೆ..ಉಳಿದವುಗಳ ಸ್ವರ ಕೇಳುತ್ತಿಲ್ಲ ....ನೋಡಲೆಂದೇ ಕೆಮರಾ ಹಿಡಕೊಂಡು ಹೊರ ಬಂದರೆ ಕೋಗಿಲೆ ಕಾಣುತ್ತಿಲ್ಲ..ಅದರ ಸ್ವರ ಮಾತ್ರ ಕೇಳುತ್ತಿದೆ ಮಾವಿನ ಮರದ ತುದಿಯಿಂದ.  ಪ್ರಿಯತಮೆ/ತಮನ ಜೊತೆ ಕಲಹ ಮಾಡಿಕೊಂಡು ಬೇರ್ಪಟ್ಟಿದೆಯೆಂದು ಕಾಣುತ್ತದೆ. ಸರಿ, ಇವುಗಳ ಮುನಿಸು ಸ್ವಲ್ಪ ಸಮಯದಲ್ಲೇ ಸರಿ ಹೋದಿತು ಅಂದುಕೊಂಡು ನಾನು ಎಷ್ಟೋ ದಿನಗಳಿಂದ ತೆಗೆಯಬೇಕೆಂದುಕೊಂಡಿದ್ದ  ಮಾವಿನ ಹೂಗಳ ಛಾಯಾಚಿತ್ರ ತೆಗೆಯುವ ಕೆಲಸ ಮಾಡಿದೆ.







                   ಹೂವಿನ ತೇರುಗಳಿಂದ ತುಂಬಿ ಮಾವಿನ ಮರವು ಅವುಗಳ ಭಾರದಿಂದ ಜಗ್ಗಿದೆಯೋ ಎಂಬಂತೆ ಕಾಣುತ್ತಿದೆ.. ಇನ್ನೊಂದು ಮರದಲ್ಲಿ ಆಗಲೇ ಮಿಡಿ ಕಾಯಿಗಳು ಇಣುಕುತ್ತಿವೆ. ಮುಸ್ತಾಫ ಬ್ಯಾರಿ ಈಗಾಗಲೇ ಮೂರು ನಾಲ್ಕು ಸಾರಿ ಸರ್ವೆ ಮಾಡಿಕೊಂಡು ಹೋಗಿದ್ದಾನೆ. ಹೂಗಳನ್ನು ನೋಡಿದರೆ ಹಿಂದಿನ ವರ್ಷಕ್ಕಿಂತ ಈ ಸಾರಿ ಫಸಲು ಜಾಸ್ತಿ ಬರುವುದೆಂದು ಕಾಣುತ್ತದೆ.









                    ಈ ಲೇಖನ ಬರೆಯುತ್ತಿದ್ದಂತೆ ಬೆಳಗ್ಗೆ ಒಂಟಿಯಾಗಿ ತನ್ನಿಯನ ಕರೆಯುತ್ತಿದ್ದ ಕೋಗಿಲೆಯ ಜೊತೆಗಾರ ಬಂದನೆಂದು ಕಾಣುತ್ತದೆ..ಹರ್ಷದಿಂದ ತುಂಬಿದ ಸ್ವರದಿಂದ ಕೋಗಿಲೆವೆರಡು ಉಲಿಯುವುದು ಕೇಳಿಸುತ್ತಿದೆ.  ನನ್ನ ಮನಸ್ಸಿಗೂ ಉಲ್ಲಾಸ ತುಂಬಿತು.  ನಮ್ಮ ಮನೆಯ ಬಳಿ ಪಾರಿವಾಳಗಳು ತುಂಬ ಕಮ್ಮಿ...ಆದರೆ ಕೋಗಿಲೆ ಸಾಧಾರಣವಾಗಿ ಯಾವಾಗಲೂ ಕಾಣಿಸಿಕೊಳ್ಳುತ್ತದೆ. ಆದರೆ ಅವುಗಳ ಕುಹೂ ಕುಹೂ ನಾದ ಮಾತ್ರ ಕೇಳುವುದು ವಸಂತ ಮಾಸದಲ್ಲಿ ಮಾತ್ರ..ಕೆಲವೊಮ್ಮೆ ಮಳೆಗಾಲದಲ್ಲೂ ಅಪರೂಪವಾಗಿ ಕೇಳಿದ್ದೇನೆ. ನಾನಂದು ಕೊಳ್ಳುವುದಿತ್ತು..ಫ್ಲಾಟಿನವರು ತುಂಬಾನೆ ಲಕ್ಕಿ..ಅವರ ಮನೆಗೆ ಮಾತ್ರ ಪಾರಿವಾಳಗಳ ಭೇಟಿ...ನನಗೆ ಅವುಗಳ   ಛಾಯಾ ಚಿತ್ರ ತೆಗೆಯಬೇಕೆನ್ನುವ ಆಸೆ..ಆದರೆ ನಮ್ಮ ಅಂಗಳದಲ್ಲಿಯೇ ಯಾವಾಗಲೂ ಹುಳಹುಪ್ಪಟೆಯ ಬೇಟೆ  ಯಲ್ಲಿರುವ ಕೋಗಿಲೆಯ ಒಂದಾದರೂ ಫೋಟೋ ತೆಗೆಯಲಿಲ್ಲ ನಾನು. ಅಂತೇಯೇ ರಾಬಿನ್ ಕೂಡ ನಮ್ಮಲ್ಲಿಯೇ ಡೇರೆ ಹೂಡುತ್ತವೆ. ಛೆ! ನಮ್ಮಲ್ಲಿದ್ದುದು ನಮಗೆ ಕಾಣಿಸುವುದಿಲ್ಲ!  ಆದರೆ ಇವತ್ತು ಕೋಗಿಲೆ ಎಷ್ಟು ಕಾದು ನಿಂತರೂ ಕಾಣಿಸಿಕೊಳ್ಳಲಿಲ್ಲ...ಕಾಗೆಯ ಚಿತ್ರ ತೆಗೆದು ಸಮಾಧಾನ ಪಡಬೇಕಾಯಿತು..ಎಲ್ಲಿ ಹೋಗ್ತಿ ನೀ ? ಒಂದಲ್ಲ ಒಂದು ದಿನ ನಿನ್ನನ್ನು ನನ್ನ ಕೆಮರಾದಲ್ಲಿ ಬಂಧಿಸಿಯೇ ಬಂಧಿಸ್ತಿನಿ ಎಂದು ಪ್ರತಿಜ್ಞೆ ಮಾಡಿಕೊಂಡೇ ಮನೆಯೊಳಗೆ ಬಂದೆ.



21 February, 2012

ನನ್ನ ಬಗ್ಗೆ ವಿಶೇಷ ಬರಹ- ಡೆಕ್ಕನ್ ಹೆರಾಲ್ಡನಲ್ಲಿ! - ಇದು ಕನಸೋ ನನಸೋ?





    ಗಾಂಧಿ ಪಾರ್ಕಿನಲ್ಲಿ ಆ ಪತ್ರಕರ್ತೆ ನನ್ನ ಮನೆಗೆ ಬರುತ್ತಾಳೆಂದು ಹೇಳಿದಳೇನೋ ಹೌದು...ಆದರೆ ನಾನು ಖಂಡಿತ ಬರುವಳೆಂದು ಅಂದುಕೊಂಡಿರಲಿಲ್ಲ..ಆದರೆ ಈ ವರ್ಣ ವನಿತಾ ನಡೆದ ಎರಡೇ ದಿನದ ನಂತರ ನನಗೊಂದು ಕಾಲ್ ಬಂತು...ಅಪರಿಚತ ಅಂಕೆ! ಸರಿ ಎತ್ತಿದ ಕೋಡಲೇ " ನಾನು ಡೆಕ್ಕನ್ ಹೆರಾಲ್ಡ್‌ನಿಂದ ಅಕ್ಷತಾ, ಮಧ್ಯಾಹ್ನ ೨.೩೦ ಹತ್ತಿರ ಮನೆಗೆ ಬರಬಹುದೇ"  ಎಂದಾಗ ನನ್ನ ಕಿವಿಯನ್ನೇ ನಂಬಿರಲಿಲ್ಲ...ಸುಧಾರಿಸಿಕೊಂಡು ನನಗೆ ಅಷ್ಟು ಹೊತ್ತಿಗೆ ನನ್ನ ತರಗತಿ ಪ್ರಾರಂಭವಾಗುವುದರಿಂದ ಸಾಧ್ಯವಾಗುವುದಿಲ್ಲವೆಂದಾಗ. ೧೧.೩೦ಹೊತ್ತಿಗೆ ಬರಬಹುದೇ ಎಂದಳು. ( ನನಗೆಕೋ ಆಕೆಯನ್ನು ಏಕವಚನದಲ್ಲೇ ಸಂಬೋಧಿಸುವಷ್ಟು ಮನಸ್ಸಿಗೆ ಹಿಡಿಸಿದಳು.  ಈಕೆ ಮಾತ್ರವಲ್ಲದೆ ಆ ಪಾರ್ಕಿನಲ್ಲಿ ನಮ್ಮ ಛಾಯಾ ಚಿತ್ರಗಳನ್ನು ತೆಗೆದುಕೊಳ್ಳುತ್ತಿದ್ದ ಇನ್ನೊಂದು ಹುಡುಗಿ ಕೂಡ ತುಂಬಾನೆ ಇಷ್ಟವಾದಳು. ) 
   

   ಅಕ್ಷತಾ ಹೇಳಿದ ಸಮಯಕ್ಕೆ ಸರಿಯಾಗಿ ಬಂದಳು..ಈ ಗುಣ ಹಾಗೆ ಕಾಪಿಕೊಂಡು ಬಂದರೆ ಒಂದು ದಿನ ಆಕೆ ಖಂಡಿತ ಉನ್ನತ ಸ್ಥಾನಕ್ಕೆ ಏರಬಲ್ಲಳು.  ಆಗಲೂ ನನಗೆ ಈ ಸಂದರ್ಶನ ಅಥವಾ ಲೇಖನ ಪೇಪರಿನಲ್ಲಿ ಪ್ರಕಟವಾಗುತ್ತದೆ ಎಂದು ನಂಬಿಕೆ ಇರಲಿಲ್ಲ..ಹಾಗಾಗಿ ನಾನು ನನ್ನ ದಿನ ನಿತ್ಯದ ವಸ್ತ್ರದಲ್ಲೇ ಇದ್ದೆ..ನನಗೋ ನನ್ನ ಕತೆ ಕೇಳುವರು ಬೇಕಿತ್ತೋ ಏನೋ ..ಆಕೆಯಲ್ಲಿ ನನ್ನ ಬದುಕಿನ ಕೆಲ ಹಾದಿಯನ್ನು ಬಿಚ್ಚಿಟ್ಟೆ. ಈ ಹಾದಿಯೇನು ಸುಗಮವಾಗಿರಲಿಲ್ಲ...ಆದರೂ ಹಟಬಿಡದ ತ್ರಿವಿಕ್ರಮನಂತೆ ಮತ್ತೆ ಮತ್ತೆ ಪ್ರಯತ್ನ ಮಾಡಿ ಇವತ್ತು ಒಂದಿಷ್ಟು ಗೆಲುವುಗಳನ್ನು ನನ್ನ ಸೆರಗಿನೊಳಗೆ ಬಚ್ಚಿಟ್ಟುಕೊಂಡಿದ್ದೇನೆ. ಅದೆಷ್ಟೋ ಸಲ ಏಣಿಯ ತುದಿ ಮುಟ್ಟಿ ಹಾವಿನ ಮೂಲಕ ಪಾತಾಳಕ್ಕೆ ಜಾರಿದ್ದೇನೆ..ಮತ್ತೆ ಮೈ ಒದರಿ, ನನ್ನ ಅದೃಷ್ಟಕ್ಕೆ ಛಲವೊಡ್ಡಿ ನಡೆದಿದ್ದೇನೆ. ಒಂದಂತೂ ನಿಜ..ನನ್ನ ನಂಬಿಕೆಗಳನ್ನು, ನನ್ನ ತತ್ವಗಳನ್ನು ಪಾಲಿಸುವಲ್ಲಿ ರಾಜಿಮಾಡಿಕೊಳ್ಳದೆ ಕಲ್ಲು ಮುಳ್ಳಿನ ಹಾದಿಯಲ್ಲಿ ನಡೆದು ನನ್ನ ಕಸುವು ಒಂದಿಷ್ಟು ಸವೆದರೂ ಕನಸನ್ನು ನನಸು ಮಾಡಿಕೊಳ್ಳುವ ಛಲ ಬಿಡುವುದಿಲ್ಲ. ಎಂಟನೆಯ ವಯಸ್ಸಿನಲ್ಲಿ ಶ್ರ‍ೀ ರಾಮಕೃಷ್ಣ ಪರಮಹಂಸರ ಕತೆಗಳತ್ತ ಆಕರ್ಷಿತಳಾದ ನನಗೆ ಇಂದೂ ಅವು ನನ್ನ ಜೀವನವನ್ನು ರೂಪಿಸುವಲ್ಲಿ ಪಾತ್ರವಹಿಸಿವೆ ಎಂದು ಹೇಳಿಕೊಳ್ಳುವುದರಲ್ಲಿ ಹೆಮ್ಮೆಯೆನಿಸುತ್ತದೆ. ಅದರಲ್ಲೂ ಗೋಪಾಳನ ಕತೆ- ( ಬೆಂಗಾಳಿ ಭಾಷೆಯ ಬಳಕೆಯಂತೆ ಳ ಬಳಸಿದ್ದೇನೆ.) ಇನ್ನೊಂದು ಭಕ್ತನ ಕನಸಿನಲ್ಲಿ ಬಂದು ಅವನ ಕಷ್ಟದಲ್ಲಿ ಸಹಾಯ ಮಾಡುವ ದೇವರು. ಇನ್ನೊಂದು ಪೋಸ್ಟಿನಲ್ಲಿ ಈ ಕತೆಗಳನ್ನು ಹಾಕುತ್ತೇನೆ. 

        ಶನಿವಾರ ಬೆಳಿಗ್ಗೆ ಬಹುಶಃ ಹನ್ನೊಂದು ಗಂಟೆ ಕಾಣುತ್ತದೆ...ನನ್ನ ಮಾಮನ ಫೋನು...ನಿನ್ನ ಬಗ್ಗೆ ಪೇಪರಿನಲ್ಲಿ ಆರ್ಟಿಕಲ್ ಬಂದಿದೆ...ಸಂತೋಷವಾಯಿತು...ಹತ್ತೇ ನಿಮಿಷದಲ್ಲಿ ಓರಗಿತ್ತಿಯ ಮೆಸೇಜ್- ತ್ರಿಲ್ಡ್! ನಿನ್ನ ಬಗ್ಗೆ ಓದಿ...ನಮ್ಮ ಮನೆಯಲ್ಲಿ ಮೊದಲ ಬಾರಿಗೆ ನಡೆಯುತ್ತಿರುವುದು...ನನಗೋ ನಂಬಲಾಗುತ್ತಿಲ್ಲ...ಪೇಪರ್ ಇನ್ನೂ ನೋಡೇ ಇಲ್ಲ...ಸರಿ ಇನ್ನು ಉಳಿದವರಿಗೆ ಓರಗಿತ್ತಿ ತಿಳಿಸುವಳು ಎಂದು ಸುಮ್ಮನಾಗಿಬಿಟ್ಟೆ....ನನ್ನ ಫೇಸ್ ಬುಕ್ ಮಿತ್ರರಿಗೆ ಮೆಸೇಜ್ ಕೊಟ್ಟೆ...ಹೆಚ್ಚಿನವರು ತಟಸ್ತರಾಗಿದ್ದರು...ಆಸು ಸರ್ ಕೂಡಲೇ ಅಂತರ್ಜಾಲ ಪತ್ರಿಕೆ ಓದಿ ಶೇರ್ ಮಾಡಿಬಿಟ್ಟರು...ನನ್ನ ಮಕ್ಕಳಿಗೂ ಹೊಸ ಬಗೆಯ ಆನಂದ...ಬಹುಶಃ ಪ್ರತಿಕ್ರಿಯಿಸಲೂ ತಿಳಿಯುತ್ತಿಲ್ಲ...ನನ್ನ ಅಮ್ಮನಂತೂ ಆಕಾಶದಲ್ಲಿ ತೇಲಾಡುತ್ತಿದ್ದಾರೆ...ಕಷ್ಟಪಟ್ಟು ಆ ಲೇಖನ ಓದಿ ನನಗೆ ಹೇಳಿದಾಗ ನನ್ನ ದಿನ ಸಾರ್ಥಕವಾಯಿತೆಂದು ಅನಿಸದೇ ಹೋದರೆ ಹೇಗೆ?  

   ಸರಿ ಎಲ್ಲರೊಂದಿಗೆ ಹಂಚಿಕೊಂಡು ಆನಂದವನ್ನು ದುಪ್ಪಟ್ಟು ಮಾಡಿಕೊಂಡಿದ್ದೇನೆ..ಇನ್ನು ಬ್ಲಾಗ್ ಮಿತ್ರರೊಂದಿಗೆ ಹಂಚಿಕೊಳ್ಳಲಾಗಿರುತ್ತಲಾಗುತ್ತದೆಯೇ! ಹಾಗಾಗಿ ಈ ಬರಹದ ಮೂಲಕ ಅದನ್ನು ಹೇಳಿದ್ದೇನೆ...ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿದ್ದೇನೆ!!!!!

20 February, 2012

ವಿನೂತನ ಅನುಭವ- ಗಾಂಧಿ ಪಾರ್ಕಿನಲ್ಲಿ!-2


                 ಮೈಯೆಲ್ಲಾ ಪುಳಕ! ಮೊದಲ ಬಾರಿಗೆ ಸಾರ್ವಜನಿಕರ ಎದುರು ನನ್ನ  ಕಲೆ ಅನಾವರಣಗೊಳ್ಳಲಿದೆ....ಹೇಗಾಗುವುದೋ ಏನೋ, ಮನಸಿನಲ್ಲಿ ಹತ್ತಾರು ಪ್ರಶ್ನೆಗಳು! ಅಂತೂ ಐದು ನಿಮಿಷದಲ್ಲಿ ಆಟೋನವನು ನನ್ನನ್ನು ನನ್ನ ಗಮ್ಯ ಸ್ಥಾನಕ್ಕೆ ತಲುಪಿಸಿದ. ಆದರೆ ವೇದಿಕೆಯ ತಯಾರಿ  ನಿಧಾನವಾಗಿ ನಡೆದಿತ್ತು. ಕೊನೆಗೂ ಕಾರ್ಯಕ್ರಮ ಪ್ರಾರಂಭವಾಗುವಾಗ ೧೦ ಗಂಟೆ ದಾಟಿತ್ತು. ನನ್ನ ಕೈಗೆ ಆಹ್ವಾನ ಪತ್ರಿಕೆ ಸಿಕ್ಕಿದ್ದು ತಡವಾಗಿ! ಅದರಲ್ಲಿದ್ದ ಉದ್ಘಾಟಕರ, ಅತಿಥಿಗಳ ಹೆಸರುಗಳನ್ನು ನೋಡಿಯೇ ದಂಗಾಗಿಹೋಗಿದ್ದೆ.. ಈಗ ಅಲ್ಲಿದ್ದ ಪತ್ರಕರ್ತರು ಮತ್ತು ಕೆಮರಾಗಳನ್ನು ನೋಡಿ ಮೂಕಳಾಗಿ ಬಿಟ್ಟೆ..ವರ್ಣ ವನಿತೆಗೆ ಎಂತಹ ಪ್ರಚಾರ..ದುರಾದೃಷ್ಟದಿಂದ ಜನರ ಉಪಸ್ಥಿತಿ ಬಹಳ ಕಮ್ಮಿಯಿತ್ತು. ನನ್ನ ಅನುಭವಕ್ಕೆ ಬಂದ ಹಾಗೆ ನಮ್ಮೂರಿನಲ್ಲಿ ಕಲೆಯ ಬಗ್ಗೆ ಅನಾದರ ಹೆಚ್ಚು..ಮಂಗಳೂರಿನ ಜನರು ವ್ಯಾಪಾರಕ್ಕೆ, ಅಂತಸ್ತಿಗೆ, ಧನ ಬಲಕ್ಕೆ ಹೆಚ್ಚು ಬೆಲೆ ಕೊಡುವವರು. ಈಗೀಗ ತಮ್ಮ ಮಕ್ಕಳನ್ನು ಕಲೆಗೆ ಸಂಬಂಧಪಟ್ಟ ತರಗತಿಗೆ ಕಳುಹಿಸುವವರಾದರೂ ಅದೂ ಕೂಡಾ ವ್ಯಾಪಾರ ದೃಷ್ಟಿಯಿಂದಲೇ!! 





   ಉದ್ಘಾಟಕರಾದ ವನಿತಾಜಿ ಪೈಯವರು ರೇಷ್ಮಾ ಅವರು ರಚಿಸಿದ ಕೊಲಾಜ್ ಮಹಿಳೆಯ ಹಣೆಗೆ ತಿಲಕವಿಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು!  ರಾಜಲಕ್ಷ್ಮಿ ಅವರು ಕನ್ನಡದಲ್ಲಿ ಮಹಿಳೆಯ ಪಾತ್ರದ ಬಗ್ಗೆ ತಮ್ಮ ಕಳಕಳಿ ವ್ಯಕ್ತಪಡಿಸಿದರು....ಮರಗಿಡಗಳು ಬೆಳೆದಂತೆಯೇ ತಮ್ಮ ಮೂಲಸ್ವರೂಪವನ್ನೆ ತೋರುತ್ತವೆ...ಪ್ರಕೃತಿಯ ಏಳಿಗೆಗೆ ತಮ್ಮ ದೇಣಿಗೆಯನ್ನು ಕೊಡುತ್ತವೆ ಆದರೆ ಮಾನವ ಬೆಳೆದಂತೆಯೇ ಮಾನವನಾಗುತ್ತಾನೆಯೇ!  ಲೋಕನಾಶಕ್ಕೆ ಕಾರಣ ವಾಗುತ್ತಾನೆ, ಸ್ವಾರ್ಥದಿಂದ ಪ್ರಕೃತಿಗೆ ಕಂಟಕಗಳ ಸರಮಾಲೆಯನ್ನೇ ಕೊಡುತ್ತಾನೆ. ವಿದ್ಯಾ ದಿನಕರ್ ಅವರೂ ಮಂಗಳೂರಿನ ರಸ್ತೆಯ ಅವ್ಯವಸ್ತೆ, ಇತ್ಯಾದಿಗಳ ಬಗ್ಗೆ ಮಾತನಾಡುತ್ತ ಪಾರ್ಕಿನ ಉದ್ಧಾರಕ್ಕೆ ಕಾರಣಕರ್ತರಾದವರನ್ನು ನೆನಪಿಸಿಕೊಂಡರು.  ವನಿತಾ ಪೈಯವರು ತಮ್ಮ ಚಿಕ್ಕ ಚೊಕ್ಕ ಮಾತಿನಲ್ಲಿ ಕಾರ್ಯಕ್ರಮ ನಿರ್ವಾಹರನ್ನು ಅಭಿನಂದಿಸಿದರು. 




     ಅಂತೂ ೧೧ಕ್ಕೆ ನಮ್ಮ ಕೆಲಸ ಪ್ರಾರಂಭವಾಯಿತು. ಮಾಡುತ್ತಿದ್ದಂತೆಯೇ ಅಲ್ಲಲ್ಲಿ ಪತ್ರಕರ್ತರು ಮಹಿಳೆಯರ ಗಳಿ ನಿಂತು ಅವರ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದರು. ಅವರ ಕೆಲಸ, ಅವರ ಕಲಿಕೆ ಆಸಕ್ತಿ....ಇತ್ಯಾದಿ ಇತ್ಯಾದಿ... ಕೆಲ ಪತ್ರಕರ್ತರಿಗೆ ಕಲೆಯ ಬಗ್ಗೆ ತಿಳಿದಿರಲಿಲ್ಲ...ಸಾಂಪ್ರದಾಯಿಕ, ಅಮೂರ್ತ, ಕೊಲಾಜ್, ಹೀಗೆ ಅನೇಕ ಕಲೆಯ ಭಿನ್ನ ಆಯಾಮಗಳ ತಿಳುವಳಿಕೆಗಳನ್ನು ಪಡೆಯುತ್ತಿದ್ದರು. ಸುವರ್ಣ, ನಮ್ಮ, ದೈಜಿ, ಮಾಂಗಲೂರಿಯನ್.ಕಾಮ್, ಮೊದಲಾದ ಅನೇಕ ವಾಹಿನಿಯವರು, ಹೆಸರಾಂತ ಪತ್ರಿಕೆಯವರು ಬಂದಿದ್ದರು.  ಹಾಗೆಯೆ ಮಧ್ಯಾಹ್ನದ ಹೊತ್ತಿಗೆ ನನ್ನ ಬಳಿ ವೀಣಾ ಅವರು ಅಕ್ಷತಾ ನಮ್ಮೆಲ್ಲ ಬಳಿ ಮಾತನಾಡಲು ಬಂದಿದ್ದಾಳ...ದಯವಿಟ್ಟು ಅವಳಿಗೆ ಬೇಕಾದ ಮಾಹಿತಿ ಕೊಟ್ಟು ಸಹಕರಿಸಿ ಎಂದರು..ಅಂತೆಯೇ ನನ್ನ ಜಾಗಕ್ಕೆ ಬರುವಾಗ ಅಕ್ಷತಾ ಅಲ್ಲಿಯೇ ಕುಳಿತಿದ್ದಳು..ಕಾಕತಾಳೀಯವಾಗಿ ನನ್ನದು ಮೊದಲನೆಯ ಸಂದರ್ಶನವಾಯಿತು..ಯಾವುದೇ ಹೆಚ್ಚಿನ ತರಬೇತಿ ಪಡೆಯದ, ಸುಮಾರು ಇಪ್ಪತ್ತು ವರ್ಷಗಳ ಅನಂತರ    ತನ್ನ ಹೃದಯದ ಕರೆಗೆ ಓಗೊಟ್ಟು ಕಲಾಜೀವನಕ್ಕೆ ಹಿಂದಿರುಗಿದ ನನ್ನ ಕತೆ ಅವಳಿಗೆ ವಿಚಿತ್ರವಾಗಿ ಕಂಡಿತ್ತು. ನನ್ನ ಓಗೆರೆಯವರು ಇನ್ನೂ ಈ ಅಂತರ್ಜಾಲ ಕ್ಷೇತ್ರದಲ್ಲಿ ಅ ಆ ...ಕಲಿಯುತ್ತಿರುವಾಗ ನಾನು ಸ್ವಪ್ರಯತ್ನದಿಂದ ೨೦೦೪ರಿಂದ ಇಂಟರ‍್ನೆಟ್ ಲೋಕದಲ್ಲಿ ಜಾಲಾಡಿ ಮಾಹಿತಿಗಳನ್ನು ಶೇಖರಿಸಿ ಅದರಿಂದ ಕಲೆಯನ್ನು ಉತ್ತಮಪಡಿಸಿದೆನೆಂದಾಗ ಅವಳಿಗೆ ಆಶ್ಚರ್ಯ! ನಿಮ್ಮಲ್ಲಿ  ತನಗೆ ತುಂಬಾ ಮಾತನಾಡಲಿದೆಯೆಂದು ನನ್ನ ದೂರವಾಣಿಯ ಅಂಕೆಯನ್ನು ತೆಗೆದುಕೊಂಡಳು. ಸರಿ , ನಾನು ಕೊಟ್ಟೆ. ಆದರೆ ದೇವರಾಣೆಗೂ ಆಕೆ ನನ್ನ ಸಂದರ್ಶ ತೆಗೆದು ಕೊಳ್ಳಲು ಬರುವಳೆಂದು ಅಂದುಕೊಂಡಿರಲಿಲ್ಲ.....
    ಸಂಜೆ ಜನ ಸಂದಣಿ ಹೆಚ್ಚಿತ್ತು..ಪಾರ್ಕಿಗೆ ಆಡಲು ಬರುವ ಮಕ್ಕಳು, ನಿತ್ಯವೂ  ವಾಕ್‌ಗೆ ಬರುವ ದಂಪತಿಗಳು, ಸ್ನೇಹಿತೆಯರು ಕುತೂಹಲದಿಂದ ಹತ್ತಿರ ಬಂದು ಇಣಿಕಿ ಹೋದರು. ಹೆಚ್ಚಿನವರಿಗೆ ಈ ಕಾರ್ಯಕ್ರಮದ ಬಗ್ಗೆ ಮಾಹಿತಿ ಇರಲಿಲ್ಲ....ಆದರೂ ಕೆಲ ಸಹೃದಯದ ಕೆಲವರು ಪ್ರೋತ್ಸಾಹದ ಮಾತುಗಳಿಂದ ವನಿತೆಯರನ್ನು ಕುಶಿ ಪಡಿಸಿದರು. ಅಲ್ಲಿ ಆಡುತ್ತಿದ್ದ ಮಕ್ಕಳು ಬಂದು ಕಲೆಯನ್ನು ಆಹ್ವಾದಿಸಿ ಆನಂದ ಪಟ್ಟರು..ಕಮೆಂಟು ಉದುರಿಸಿದರು! ಅವರ ಕಮೆಂಟು ನೇರವಾಗಿತ್ತು..ಕಪಟವಿರಲಿಲ್ಲ, ತೋರಿಕೆಯದಾಗಿರಲಿಲ್ಲ...ಏನೋ ಬಹುಶಃ ನನಗೆ ಮಕ್ಕಳ ಮೇಲಿರುವ ಅತಿಯಾದ ವಾತ್ಸಲ್ಯದಿಂದಲೋ ಏನೋ, ಈ ಬಾಲರ ಮಾತುಗಳು ಹಿತವಾಗಿ ತೋರಿತ್ತು.  ಹಾಂ, ಮರೆತಿದ್ದೆ..ನಮ್ಮ ಚಾವಡಿಯ ಸದಸ್ಯರೂ ಆಗಮಿಸಿ ಎಲ್ಲರ ಬಳಿ ನಿಂತು ಸಲಹೆ, ಪ್ರೋತ್ಸಾಹ ಕೊಡುವ ದ್ರಶ್ಯ ಮನ ಪಟಲದಲ್ಲಿ  ಭದ್ರವಾಗಿ ಕುಳಿತಿದೆ..ಜುಟ್ಟು ಹಾಕಿದ, ಪತ್ರಿಕೆಗಳಲ್ಲಿ ಮಾತ್ರನೋಡಿದ ಪರಿಚಿತರೊಬ್ಬರನ್ನು ನೋಡಿ ನನ್ನ ಆನಂದಕ್ಕೆ ಪಾರವೇ ಇರಲಿಲ್ಲ....ನನ್ನ ಬಾಯಿಯಿಂದ ಅಪ್ರಯತ್ನವಾಗಿ ಹೊರಬಿತ್ತು " ಪುರುಷೋತ್ತಮ ಅಡ್ವೆ!" ಎಲ್ಲರೂ ನಕ್ಕರು..ಅವರ ಜುಟ್ಟು ಅವರ ಗುರುತೆಂದು ಭಾವಿಸಿ..ಆದರೆ ನನ್ನ ಚಿತ್ತದಲ್ಲಿ ಅವರ ಕೃಷ್ಣನ ಚಿತ್ರಣ ಹಾಗೂ  ಅವರ ಬಗ್ಗೆ ಓದಿದ ಲೇಖನ ಅವರ ಗುರುತನ್ನು ಸುಲಭವಾಗಿ ಕಂಡು ಹಿಡಿದಿತ್ತು.  ಈ ಕ್ಯಾಂಪು ನನಗೆ ನಮ್ಮಲ್ಲಿನ ಅತ್ಯುತ್ತಮ ಕಲಾಕಾರರನ್ನು ಹತ್ತಿರದಿಂದ ನೋಡುವ ಸುವರ್ಣಾವಕಾಶ ಒದಗಿಸಿತ್ತು. 
  ಅಂತೂ ಮೊದಲನೆಯ ದಿನ ಕಳೆಯಿತು....ಮರುದಿನ ಆದಿತ್ಯವಾರ, ಬೇಗನೇ ಎದ್ದು ದೋಸೆಗಳನ್ನು ತೆಗೆದು ಚಟ್ನಿ ತಯಾರಿಸಿ ಲೆಕ್ಕ ಹಾಕಿದಂತೆ ಮಾಡುವ ಕೆಲಸ ಮಾಡಿ, ೯.೦೦ಕ್ಕೆ ಗಾಂಧಿ ಪಾರ್ಕ್ ತಲುಪಿದೆ. ಆದಿತ್ಯವಾರವಾದುದರಿಂದ ಅಲ್ಲೇ ಸುತ್ತಮುತ್ತ ಇದ್ದವರು, ಹಿಂದಿನ ದಿನ ಮಾಹಿತಿ ಸಿಕ್ಕಿದವರು ಬಂದು ಕುತೂಹಲದಿಂದ ವನಿತೆಯರ ಚಿತ್ರಗಳನ್ನು ನೋಡುತ್ತಿದ್ದರು.  ಬಂಟ್ವಾಳದಿಂದ ನನ್ನ ಕಾಲೇಜಿನ ಭಾರತಿ  ಮೇಡ್ಂ ತಮ್ಮ ಕೆಮರಾ ಹಿಡಕೊಂಡು ನನ್ನ ಚಿತ್ರ ತೆಗೆಯುತ್ತಿದ್ದಾರೆ..ಹೃದಯ ತುಂಬಿ ಬಂತು ಕದ್ರಿಯ ಕಲಾಮೇಳದಲ್ಲಿ ಅದು ಸಹ ೨೧ ವರುಷಗಳ ನಂತರ ಅವ್ರ ದರ್ಶನ...ಅಲ್ಲಿ ನಮ್ಮ ದೂರವಾಣಿಯ ಸಂಖ್ಯೆಗಳನ್ನು ಬದಲಾಯಿಸಿಕೊಂಡಿದ್ದೆವು.. ಆದುದರಿಂದ ನಮ್ಮ ಈ ಕಾರ್ಯಕ್ರಮದ ಬಗ್ಗೆ ಮಾಹಿತಿ ಕೊಟ್ಟಿದ್ದೆ.  ಬರಲು ಸಾಧ್ಯವಾಗಲಿಕ್ಕಿಲ್ಲ ಆದರೆ ತಮ್ಮ ಮತ್ತು ಕೆನರಾ ಕಾಲೇಜಿನ ಪ್ರಿನ್‍ಸಿಪಾಲರಾಗಲಿರುವ ತಮ್ಮ ಪತಿ ಇಬ್ಬರ ಆಶೀರ್ವಾದವು ನಿನ್ನ ಮೇಲಿದೆಯೆಂದು ನನಗೆ ದೂರವಾಣಿ ಮಾಡಿ ಹೇಳಿದ್ದರು. ಆದಾಗ್ಗಿಯೂ ಅವರು ಖುದ್ದ ಬಂದುದು ನನಗೆ ಬಹಳ ಸಂತಸ ತಂದಿತು. ನಮ್ಮ ವನಿತೆಯರ ಮಧ್ಯೆ ಅಷ್ಟೊಂದು ವಿಚಾರ ವಿನಿಮಯವಾಗದಿದ್ದರೂ  ನನ್ನ ಕೆಲ ಸ್ನೇಹಿತರ ಆಗಮನವು ನನಗೆ ಸಹಸ್ರ ಭುಜಬಲವನ್ನು ಕೊಟ್ಟಿತೆಂದರೆ ಅದು ಖಂಡಿತ ಉತ್ಪ್ರೇಕ್ಷೆಯಲ್ಲ!  ..೧೨.೩೦ ಹೊತ್ತಿಗೆ ನನ್ನ ಉಮೇದು ಕಮ್ಮಿಯಾಗಿತ್ತು... ಎಲ್ಲರೂ ತಮ್ಮ ಪೈಂಟಿಂಗ್ ಮುಗಿಸಿದ್ದರು...ನನ್ನದೂ ಇನ್ನೂ ಕೆಲಸ ಉಳಿದಿತ್ತು..ಅಷ್ಟು ಹೊತ್ತಿಗೆ ಯಾಕೋ ತಲೆಯೆತ್ತಿ ನೋಡುವಾಗ...ಶೀಲಾ... ನನ್ನ ಬಾಯಿಯಿಂದ ಉದುರಿತು ಅಪ್ರಯತ್ನವಾಗಿ!  ೨೧ ವರುಷಗಳ ನಂತರ ನಮ್ಮ ಭೇಟಿ!!! ಈ ದಿನ ನನ್ನ ಪಾಲಿಗೆ ಸುದಿನ...ಆಕೆ ಮತ್ತು ನಾನು ೮೯ರಲ್ಲಿ ಜೊತೆಯಾಗಿ ಬಿ ಜಿ ಎಮ್ ಗೆ ಹೋಗುತ್ತಿದ್ದೆವು. ಶೀಲಾ ಜೆ ಜೆ ಆರ್ಟ್ಸ್‌ನಲ್ಲಿ ಕಮರ್ಷಿಯಲ್ ಆರ್ಟ್‌ನಲ್ಲಿ ತರಬೇತಿಪಡೆದವಳಿದ್ದಳು...ಜೆ ಜೆ ನನ್ನ ಕನಸಾಗಿತ್ತು...ಹಾಗಾಗಿ ನನಗೆ ಅವಳು ಆದರ್ಶವಾಗಿದ್ದಳು...ಪೇಪರಿನಲ್ಲಿ ಅವಳ ( ನನ್ನ ) ಹೆಸರನ್ನು ನೋಡಿದ ನೆಂಟರಿಂದ ಫೋನ್ ಬಂದ ಕಾರಣ ಯಾರಪ್ಪಾ ತನ್ನ ಹೆಸರಿನವಳು ಚಿತ್ರಗಾರ್ತಿ! ಎಂದು ಕುತೂಹಲದಿಂದ ನೋಡಲು ಬಂದಿದ್ದೇನೆ ಎಂದಳು..ನನ್ನನ್ನು ನೋಡಿ ಆಶ್ಚರ್ಯಪಟ್ಟಳು...ಕುಂಚಗಳ ಜತೆಗಿನ ಸಂಬಂಧ ಕಡಿದಿರುವ ವಿಷಯ ತಿಳಿಸಿ ಚಕಿತಗೊಳಿಸಿದಳು...ಸರಿ ಇನ್ನು ಪೈಂಟಿಂಗ್ ಮುಂದುವರಿಸಲು ಇಚ್ಛೆಯಿರಲಿಲ್ಲ...ಮನೆಗೆ ಬರುವ ಆಶಯ ವ್ಯಕ್ತಪಡಿಸಿದಾಗ ಬಹಳ ಸಂತೋಷದಿಂದ ಕರೆದುಕೊಂಡು ಹೋಗಿ ನನ್ನ ಮಕ್ಕಳ ಪರಿಚಯ  ಮಾಡಿಕೊಟ್ಟೆ. ಸರಿ ಇನ್ನು ಮುಂದೆ ಸಂಜೆಯ ಕಾರ್ಯಕ್ರಮ... ೩.೩೦ ಹೊತ್ತಿಗೆ ಹಾಜರಿ ಕೊಟ್ಟೆ. ೩.೪೫ಕ್ಕೆ ಪ್ರಾರಂಭವಾಗಬೇಕಿದ್ದ ಹರಿಕತೆ ಕಾರ್ಯಕ್ರಮ ಕೆಲ ಕಾರಣಗಳಿಂದ ತಡವಾಗಿ ಪ್ರಾರಂಭವಾಯಿತು...ಇನ್ನೂ ಎಳಸಾಗಿದ್ದರೂ ತನ್ನ ಸುಮಧುರ ಕಂಠದಿಂದ ನಯನ ಗೌರಿ ಅಲ್ಲಿ ನೆರೆದಿದ್ದ ವೀಕ್ಷಕರ ಮನಸೆಳೆದಳು. ಆದರೆ ತನ್ನ ಹಾಸ್ಯ ಮಾತುಗಳಿಂದ ಸಂಧ್ಯಾ ಶೆಣೈ ನೆರೆದಿದ್ದವರ ಹೊಟ್ಟೆಹುಣ್ಣಾಗುವಂತೆ ನಗಿಸಿದರು. ಅಂತೂ ವರ್ಣ ವನಿತಾ ಸ್ವಲ ದಿನಗಳ ಕಾಲ ಬಂದವರ ಮನದಲ್ಲಿ ಉಳಿಯುವ ವಿಚಾರದಲ್ಲಿ ಸಂಶಯವಿಲ್ಲ!



















13 February, 2012

ವಿನೂತನ ಅನುಭವ- ಗಾಂಧಿ ಪಾರ್ಕಿನಲ್ಲಿ!-1



                  ಜೀವನವು ಯಾವಾಗ, ಹೇಗೆ, ಎಲ್ಲಿ, ತನ್ನ ತಿರುವು ತೆಗೆದುಕೊಳ್ಳುತ್ತದೆಯೋ ಎಂದು ಯಾರು ತಿಳಿಯರು! ಹೆದರಿದ ಆಮೆಯಂತೆ ಚಿಪ್ಪಿನಲ್ಲಿ ಅಡಗಿದ್ದ ನಾನು ಈಗ ಜಗತ್ತಿಗೆ ತೆರೆದು ನಿಂತಿದ್ದೇನೆ. ಅಥವಾ ಜಗತ್ತೇ ನನಗಾಗಿ ಬಾಗಿಲನು ತೆರೆದಿದೆಯೇ? ಏನೋ ತಿಳಿದಿಲ್ಲ. ಒಂದಂತೂ ನಿಜ..ಬಹಳಷ್ಟು ಬದಲಾವಣೆಗಳನ್ನು ನೋಡಿದ್ದೇನೆ..ನೋಡಲಿರುತ್ತೇನೆ..ಇದಂತೂ ಸ್ಪಷ್ಟವಾಗಿದೆ.


               ಕೊನೆಗೂ ಎಲ್ಲವೂ ಕನಸಿನಂತೇ ನಡೆದಿದೆ...ಹಿಂದಿನ ಆದಿತ್ಯವಾರ ಇದೇ ಸಮಯದಲ್ಲಿ ನಾನು ನಮ್ಮ ಗಾಂಧಿ ಪಾರ್ಕಿನಲ್ಲಿ ನಮ್ಮ ವರ್ಣ ವನಿತಾ ಕಾರ್ಯಕ್ರಮದಲ್ಲಿ ವ್ಯಸ್ತಳಾಗಿದ್ದೆ. ಆದರೆ ಇವತ್ತು ನನ್ನ ಬಗ್ಗೆ ಡೆಕ್ಕನ್ ಹೆರಾಲ್ಡನಲ್ಲಿ ಬಂದ ಲೇಖನಕ್ಕೆ ಪ್ರತಿಕ್ರಿಯೆ ಕೊಡುವುದರಲ್ಲಿ ಬಿಸ್ಸಿಯಾಗಿದ್ದೇನೆ. ಹಾಂ! ಈ ಪ್ರತಿಕ್ರಿಯೆ ಬಂದಿದರಲ್ಲೂ ಬಹಳ ಸ್ವಾರಸ್ಯರಕರ ಸಂಗತಿಗಳಿವೆ.  ಪ್ರತಿಯೊಬ್ಬರ ಒಳಗಿನ ಮುಖವಾಡಗಳನ್ನು ಕಳಚಿದೆ. ಆದರೆ ಈ ಲೇಖನ ಪ್ರಕಟವಾದ ನಂತರ ಅಂತಲ್ಲ...ಈ ಮೊದಲೇ ಗಣ್ಯ, ಪ್ರೌಢ, ಗಂಭೀರ ವ್ಯಕ್ತಿಗಳೆಂದು ನಾನು ಅಭಿಮಾನದಿಂದ ಸ್ನೇಹ ಬಯಸಿದ ವ್ಯಕ್ತಿಗಳು ತಮ್ಮ ಕೆಲವೊಂದು ನಡವಳಿಕೆಯಿಂದ  ನನ್ನನ್ನು ನಿರಾಸೆಗೊಳಿಸಿದ್ದಾರೆ. ಇದೆಲ್ಲಾ ಬರೆಯುವ ಮೊದಲು ನನ್ನ ಮೊದಲ ಕಲಾ ಶಿಬಿರದ ಅನುಭವವನ್ನು ನಾನು ಇಲ್ಲಿ ದಾಖಲಿಸಬೇಕು. ಸಿಹಿ ಕಹಿ ಎರಡರ ಅನುಭವನ್ನು ತಂದಿತು ಈ ಶಿಬಿರ. ಮೊದಲಾಗಿ ಪ್ರಕೃತಿಯ ಮಧ್ಯದಲ್ಲಿ, ಪಕ್ಷಿಗಳ ಕಲರವಗಳ ಮಧ್ಯದಲ್ಲಿ...ತಂಪು ಹುಲ್ಲಿನ ಮೇಲೆ ಕುಳಿತು ಬಿಡಿಸುವ ಅನುಭವವನ್ನು ಜೀವಮಾನದಲ್ಲಿ ಮರೆಯಲಾರೆ...ಅಲ್ಲದೆ ಕಲೆಯ ಬಗ್ಗೆ ಕುತೂಹಲದಿಂದ, ಅಭಿಮಾನದಿಂದ ಇಣುಕಿ ನಾಡಲು ಬಂದ ಕೆಲವೇ ಕಲಾಪ್ರಿಯರೂ ನನ್ನಲ್ಲಿ ಉತ್ಸಾಹ ತುಂಬಿದರು. ಅದರಲ್ಲೂ ಒಬ್ಬ ಪೋರ " ನನಗೆ ಎಲ್ಲಾ ಚಿತ್ರಕಿಂತಲೂ ಈ ಬುದ್ಧ ಬಹಳ ಹಿಡಿಸಿದನು" ಎಂದಾಗ ನನ್ನ ಪ್ರಯತ್ನ ಸಾರ್ಥಕವಾಯಿತೆಂದು ಅನಿಸದೇ ಹೋಯಿತೇ!  ಮತ್ತೊಬ್ಬ ಮಹಿಳೆ ನನ್ನ ಬಳಿಯೇ ಕುಳಿತುಕೊಂಡಿದ್ದಳು....ಬಹುಶಃ ಊಟಕ್ಕೂ ಹೋಗದೇ....ಅವಳು ನನ್ನ ಗುರುಗಳಾದ ಬಿ ಜಿ ಮೊಹಮ್ಮದರ ಬಳಿ ಬಹಳ ಕಾಲ ಕಲಿತಿದ್ದಳೆಂದು ಹೇಳಿಕೊಂಡಳು. ಮತ್ತೊಂದು ಚಿಕ್ಕ ಮಗು " ಅಪ್ಪಾ, ನೋಡು...ಅಲ್ಲಿರುವ ಪ್ರತಿಮೆಯನ್ನೇ ಆಕೆ ಬಿಡಿಸುತ್ತಿದ್ದಾರೆ...ನೋಡಪ್ಪಾ." ಎಂದಾಗ ನನ್ನ ಹೃದಯ ತುಂಬಿ ಬಂದಿತು..ಅಲ್ಲಿದ್ದ ಬುದ್ಧನ ಪ್ರತಿಮೆಯನ್ನು ನನ್ನ ಚಿತ್ರಕ್ಕೆ ಹೋಲಿಸುವಷ್ಟೂ ಪ್ರಾಯವಲ್ಲ ಮಗುವಿದು. ಆದರೆ ನಮ್ಮ ಶಿಬಿರದ ೧೨ಮಂದಿ ಕಲಾಕಾರರಲ್ಲಿ ಏಕತೆಯಿರಲಿಲ್ಲ...ನಾನಂತೂ ಇದ್ದುದರಲ್ಲಿ ಹೆಚ್ಚಿನ ಪ್ರಾಯದವಳು ಅಲ್ಲದೆ ಕನಿಷ್ಟ ಅರ್ಹತೆಯುಳ್ಳವಳು. ನನಗಿಂತ ಒಂದೆರಡು ವರುಷ ಚಿಕ್ಕವಳಗಿರುವ ವೀಣಾ ಮತ್ತು ಲಕ್ಷ್ಮಿ ಎಲ್ಲರೊಡನೆ ಒಂದಾಗಿ ಬೆರೆಯುತ್ತಿದ್ದರು... ಅತೀ ಹೆಚ್ಚಿನ ಅರ್ಹತೆಯುಳ್ಳ ವೀಣಾ  ತಮ್ಮ ಭೂಮಿ ತೂಕದ ನಡವಳಿಕೆಯಿಂದ ನನ್ನ ಮನವನ್ನು ಗೆದ್ದರು. ಅಲ್ಲಿರುವ ನಮ್ಮ ಚಾವಡಿಯ ಕೆಲ ಪುರುಷರು ಎಲ್ಲಾ ಮಹಿಳೆಯರ ಬಳಿ ಹೋಗಿ ಪ್ರೋತ್ಸಾಹದ ಮಾತುಗಳಿಂದ ಹುರಿದುಂಬಿಸುತ್ತಿದ್ದರು! ಅದ್ಯಾಕೆ ಹೆಣ್ಣು ಮಕ್ಕಳು ತಮಗಿರುವ ಮಾತ್ಸರ್ಯದ ಅಪವಾದ ಹಾಳಬಾರದಂತೆ ನಡಕೊಳ್ಳುತ್ತಾರ್ಯಾಕೋ? ಅಲ್ಲಲ್ಲ ಮಾತ್ಸರ್ಯವಲ್ಲ...ಮತ್ತೇನೋ...ಮಾತನಾಡಲು ಅಷ್ಟೊಂದು ಉತ್ಸಾಹವಿಲ್ಲ...ತಮ್ಮ ಕೆಲಸ ಪೈಂಟಿಂಗ್ ಮಾಡುವುದು..ಹೊರತು ಉಳಿದವರ ಬಳಿ ಮಾತ್ಯಾಕೆ? ಕತೆಯಾಕೆ?  ಇನ್ನು ಕೆಲವರು ಎರಡು ದಿನದ ಕೆಲಸವನ್ನು ಒಂದರ್ಧ ಗಂಟೆಯಲ್ಲಿ ಮುಗಿಸಿದರು! ಅಯ್ಯೋ ರಾಮ! ನನಗಂತೂ ಢವಢವ..ನನ್ನ ಕೆಲಸ ಮುಗಿಯದೇ ಮರ್ಯಾದೆ ಹೋದಿತೇ? ಅಥವಾ ಎಲ್ಲಿ ಬಣ್ಣ ಹಾಕುವಾಗ ಹಾಳಾದಿತೋ ಎಂದು. ಕೊನೆಗೂ ನನ್ನ ಚಿತ್ರ ತುಂಬಾ ಅಂತಲ್ಲ..ಆದರೂ ಸರಿಸುಮಾರಾಗಿ ಬಂತು..ಅಂತೂ ಮೊದಲ ಸಲ ಒಂದು ಶಿಬಿರದ ಅನುಭವ ಪಡೆದೆ...


      ೩ನೇ ಫೆಬ್ರವರಿ , ಶುಕ್ರವಾರ ಸಂಜೆ ವೀಣಾ ಅವರ ದೂರವಾಣಿ...ಎಲ್ಲರೂ ತಮ್ಮ ತಮ್ಮ ಕಲಾಕೃತಿಯನ್ನು ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ತಂದೊಪ್ಪಿಸಿದ್ದಾರೆ..ನೀನು ಮಾತ್ರ ತಂದಿಲ್ಲವೆಂದು..ಅರೇ....ನನಗೆ ಈ ವಿಷಯವೇ ತಿಳಿದಿರಲಿಲ್ಲವೆಂದಾಗ, ಸರಿ ಮರುದಿನ ಬೆಳಿಗ್ಗೆ ೮ಗಂಟೆಯೊಳಗೆ ತಂದೊಪ್ಪಿಸಬೇಕೆಂದರು. ಅಯ್ಯೋ, ಮೊದಲೇ ಸಿದ್ಧ ಪಡಿಸಿದ್ದ ನನ್ನ ಮರುದಿನ ಬೆಳಿಗ್ಗಿನ ನಕಾಶೆಯಲ್ಲಿ ಈ ಹೊತ್ತಿನಲ್ಲಿ ಬದಲಾವಣೆ!!! ೧ ಗಂಟೆಯ ಹೊಂದಾಣಿಕೆ!!!! ಹಾಗಾದರೆ ಎಷ್ಟು ಹೊತ್ತಿಗೆ ಏನಾಗಬೇಕೆಂಬ ಪ್ಲಾನು ಮತ್ತೊಮ್ಮೆ ತಲೆಯಲ್ಲಿ ಮಥಿಸಲು ಶುರುವಾಯಿತು. ಯಾಕೆಂದರೆ ಆದಿತ್ಯವಾರ ಬೆಳಗಿನ ಉಪಹಾರಕ್ಕೆಂದು ದೋಸೆ ಹಿಟ್ಟುಸಹ ನಾನು ಹೊರಡುವ ಮೊದಲು ಮಧ್ಯಾಹ್ನದ ಊಟದ , ಬೆಳಿಗ್ಗಿನ ಉಪಹಾರದ ತಯಾರಿಯೊಂದಿಗೆ ನಡೆಯ್ಬೇಕು...ಮನೆ ಗುಡಿಸಬೇಕು. ಬಟ್ಟೆ ಸಂಜೆ ಬಂದಮೇಲೆ.....ಯಾಕಪ್ಪಾ ನನಗಿದೆಲ್ಲಾ..ಸುಮ್ಮನೆ ಕಲೆಗಿಲೆ..ನನ್ನಿಂದಾದಿತೇ ಎಂದೂ ಮನಸ್ಸಿಗೆ ಬಂತು...ಆದರೂ ಆದಷ್ಟು ಬೇಗನೆ ಎದ್ದು ಗಡಿಯಾರದೊಂದಿಗೆ ನನ್ನ ಓಟ ಪ್ರಾರಂಭವಾಯಿತು....ನೆನೆದಂತೆ ೮ಕ್ಕೆ ಮನೆಯಿಂದ ಹೊರಬಿದ್ದೆ.... ಮರೆತೇ ಬಿಟ್ಟಿದ್ದೆ...ಬಂದ ಅತಿಥಿಗಳಿಗೆ ಕೊಡಬೇಕೆಂದು ನೆನಪಿನ ಕಾಣಿಕೆ ಕೂಡ ತರಬೇಕೆಂದು ವೀಣಾ ತಿಳಿಸಿದಾಗ ನನ್ನೆದೆ ಜೋರಾಗಿ ಹೊಡೆದು ಕೊಡಲು ಶುರುಮಾಡಿತು. ಹೇ ರಾಮ್ ನನಗ್ಯಾಕೆ ಈ ರೀತಿ ಶಿಕ್ಷೆಯನ್ನು ಕೊಡುವಿಯಾ! ಇನ್ನೂ ಎಷ್ಟು ಪರೀಕ್ಷೆಗಳಿವೆಯೋ..ಅಪ್ಪಾ ಎಲ್ಲವೂ ನಿನ್ನ ಇಚ್ಛೆಯಂತಾಗಲಿ ಎಂದು ವೀಣಾನ ಬಳಿ ನಡುಗುವ ಸ್ವರದಿಂದ ನನಗೆ ಈ ವಿಷಯಗಳೇನು ಹೇಳಿಲ್ಲವೆಂದಾಗ..ಪರವಾಗಿಲ್ಲ..ಹೇಗು ನಾವೆಲ್ಲಾ ಕೊಡುತ್ತೇವಲ್ಲವಾ ಅಂದರು. ಬಚಾವ್ ಆದೆ.


  ಸರಿ ಶುಕ್ರವಾರ ರಾತ್ರಿ ಮಲಗಿದವಳಿಗೆ ನಾಳಿನ ಚಿತ್ರ ಬಿಡಿಸುವಿಕೆಗಿಂತಲೂ ಬೆಳಗ್ಗಿನ ಸಮಯದ ಹೊಂದಾಣಿಕೆಯ ಬಗ್ಗೆ ಯೋಚನೆ...ಅಂತೂ ಮಲಗಿದಲ್ಲೇ ಒಂದು ಟೈಮ್ ಟೇಬಲ್ ತಯಾರಾಯಿತು. ಯಾವಾಗಲೂ ರಾತ್ರಿ ಸತ್ತು ಮತ್ತೊಮ್ಮೆ ಬೆಳಗೆ ಜೀವ ಪಡೆಯುವವಳಾದ ನಾನು ಆ ರಾತ್ರಿ ಸಾಯಲೇ ಇಲ್ಲ...ಮಂಪರು ನಿದ್ರೆಯಲ್ಲೇ ಕಳೆದೆ..ಬೆಳಗಿನ ಜಾವ ನಾಲ್ಕಕ್ಕೆ ಅಲರಾಮ್ ನಿಷ್ಠೆಯಿಂದ ಗಲಾಟೆ ಮಾಡುವಾಗ...ಏಳಲೇಬೇಕಲ್ಲವ...ರೆಪ್ಪೆಗಳು ಗಟ್ಟಿಯಾಗಿ ಕಣ್ಣನ್ನು ತಬ್ಬಿ ಕೊಂಡಿದ್ದವು..ಮುಷ್ಕರ ಮಾಡಿಕೊಂಡಿದ್ದವು...ಇನ್ನೊಂದು ಭಾನುವಾರ ೭.೩೦ ತನಕ ನಿಮ್ಮನ್ನು ಅಗಲಿಸುವುದಿಲ್ಲ ಎಂದು ಪ್ರಾಮಿಸ್ ಸಿಕ್ಕಿದ ಮೇಲೆಯೇ ನಾನು ಸೀದಾ ಅಡುಗೆ ಕೋಣೆಗೆ ಹೋಗಲಿಕ್ಕೆ  ಬಿಟ್ಟದ್ದು. ಒಂದು ಕಣ್ಣು ಗಡಿಯಾರ ಮೇಲಿಟ್ಟು ಉಡುಪಿ ಎಕ್ಸಪ್ರೆಸ್ಸ್ ಬಸ್ಸಿನಂತೆ ಓಟ ಪ್ರಾರಂಭವಾಯಿತು! ಮಧ್ಯ ಮಧ್ಯ ದಲ್ಲಿ ಸುಸ್ತು...ನನಗೆ ಬೇಡವಿತ್ತಪ್ಪಾ ಈ ಆರ್ಟ್ ಶಿಬಿರ!!! ಅಂತೂ ನನ್ನೆಣಿಕೆಯಂತೆ ಸ್ನಾನಕ್ಕೆ ಹೊರತಾಗ ೭.೪೫..ಈ ದಿನ ಮಕ್ಕಳ ಕೈಯಿಂದ ಬಚಾವ್...ಯಕೆಂದರೆ ಇಬ್ಬರಿಗೂ ಕಾಲೆಜಿ ಹೋಗಬೇಕಿದ್ದ ಕಾರಣ ಹೆಚ್ಚಿನ ತೊಂದರೆ ಇರಲಿಲ್ಲ..ಆದರೂ ನಾಳೆಗೆ ಉಂಟು ಇವರಿಂದ ನನಗೆ ಎಂದು ಕೊಳ್ಳುತ್ತಾ ಮೊದಲೇ ತಯಾಮಾಡಿಕೊಂಡಿದ್ದ ಪೈಂಟಿಂಗ್‌ಗಳನ್ನು ಪಕ್ಕದ ಮನೆಯವರ ಸಹಾಯದಿಂದ ರಿಕ್ಷಾಗೆ ಹಾಕಿಸಿ ಗಾಂಧಿ ಪಾರ್ಕ್ ತಲುಪಿದೆ.
   

   

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...