ಮಕ್ಕಳಿಗೆ ಚಿತ್ರ ಕಲಿಸುವುದು ಕೂಡ ಒಂದು ಕಲೆಯೆಂದು ಈ ನಾಲ್ಕು ವರ್ಷಗಳ ಹಿಂದೆ ನನ್ನ ಅನುಭವಕ್ಕೆ ಬಂದಿತು. ಚಿತ್ರಕಲೆ ಅಪಾರ ತಾಳ್ಮೆ ಬೇಡುತ್ತದೆ... ಅದರಲ್ಲಿಯೂ ಮಕ್ಕಳಲ್ಲಿ ಆ ತಾಳ್ಮೆಯನ್ನು ನಿರೀಕ್ಷಿಸುವುದು ಬಹಳ ಕಷ್ಟ. ಅಷ್ಟಲ್ಲದೆ ಹೆಚ್ಚಿನ ಮಕ್ಕಳು ಮತ್ತವರ ಹೆತ್ತವರು ಬರುವಾಗಲೇ ಅಪಾರ ನಿರೀಕ್ಷೆಯನ್ನಿಟ್ಟುಕೊಂಡು ಬರುತ್ತಾರೆ. ಇನ್ನು ಕೆಲವರು ತಮ್ಮನ್ನು ಆರ್ಟಿಸ್ಟ್ ಎಂದೇ ಕರೆದುಕೊಳ್ಳುತ್ತಾರೆ. ಕೆಲವರಿಗೆ ಬಣ್ಣಹಚ್ಚಲು ಕೂಡ ಬರುತ್ತಿರಲಿಲ್ಲ, ಇನ್ನು ಕೆಲವರು ನಮಗೆ ವಾಟರ್ ಕಲರ್ ಮಾಡಲು ಕೊಡಿ ಎಂದೇ ಬೇಡಿಕೆ ಇಡುತ್ತಾರೆ, ಅಬ್ಬಬ್ಬ ಈ ಚಿಣ್ಣರ ಬೇಡಿಕೆಗಳ ಪಟ್ಟಿ ನೋಡಬೇಕು.... ಒಂದು ಪುಟಾಣಿ, ಕೇವಲ ೬ ವರ್ಷದವಳು....ಅವಳಂತೂ ಒಂದು ಹೆಜ್ಜೆ ಮುಂದೆ ಹೋಗಿ ನನ್ನ ಅಮ್ಮ ನನಗೆ ಕಪ್ಪೆ, ರಾಬಿಟ್(ಮೊಲ), ಹಾಗೂ ೪,೫ ಚಿತ್ರ ಮಾಡಲು ಹೇಳಿದ್ದಾರೆಂದಿತು... ವಿಚಾರಿಸಲಾಗಿ ಹೆತ್ತಮ್ಮ ತಾನೇನು ಹಾಗೆ ಹೇಳಿಲ್ಲ. ಅದೆಲ್ಲಾ ಅವಳದೇ ಯೋಜನೆ ಎಂದರು. ತಾಯಿ ಹೇಳಿದ್ದಾರೆಂದರೆ ನಾನು ಚಿತ್ರಮಾಡಿಕೊಡುತ್ತೇನಲ್ಲವೇ! ಕೆಲ ಹೆತ್ತವರು ಮಕ್ಕಳಿಗೆ ಮೊದಲೇ ತಾಕೀತು ಮಾಡಿರುತ್ತಾರೆ.. ಕಡಿಮೆ ಪಕ್ಷ ೨ ಚಿತ್ರವಾದರೂ ಮಾಡಬೇಕೆಂದು. ಏನು ಮೈಂಡ್ ಸೆಟ್? ಅಲ್ಲಾ ಪುಸ್ತಕ ತುಂಬಲು ಮಾಡುವುದಾ ಇಲ್ಲಾ, ತಮ್ಮ ಕಲೆಯ ಗುಣ ಮಟ್ಟ ಹೆಚ್ಚಿಸುವುದಲಿಕ್ಕೆ ಕಲಿಯುವುದಾ! ಅಂತು ಇವರಿಗೆ ಕಲಿಸುತ್ತ ನಾನು ಕಲಿಯುತ್ತಿದ್ದೇನೆ..
ಬಿ. ಜಿ ಮೊಹಮ್ಮದರ ನೆನಪಾಗುತ್ತಿದೆ... ನನ್ನ ಗುರುಗಳು. ಕಲಿತದ್ದು ಕೇವಲ ೮,೯ ತಿಂಗಳು. ಆದರೆ ಅವರು ತೋರಿಸುತ್ತಿದ್ದ ತಾಳ್ಮೆ, ಅವರ ಹಸನ್ಮುಖ ಈಗಲೂ ಕಣ್ಣೆದುರಿಗೆ ಕಾಣುತ್ತಿದೆ. ೨೦ ವರ್ಷಗಳಿಂದ ಮುಟ್ಟದೇ ಇದ್ದ ಬಣ್ಣ, ಕುಂಚ ಮತ್ತೆ ಕೈಗೆತ್ತಿಕೊಳ್ಳುತ್ತೇನೆಂದು ಅಂದುಕೊಂಡಿರಲಿಲ್ಲ... ಇದೊಂದು ನನ್ನ ಪಾಲಿಗೆ ಪವಾಡವೇಸರಿ. ಮತ್ತೆ ಬಣ್ಣದ ಬದುಕು ಪ್ರಾರಂಭ ಮಾಡಿದುದಲ್ಲದೆ, ಅದನ್ನು ಕಲಿಸುವ ಸೌಭಾಗ್ಯವೂ ನನ್ನ ಪಾಲಿಗೆ ಬಂದಿದೆ. ನನ್ನ ಮಗನು ಅವನ ೮ನೇ ವಯಸ್ಸಿನಿಂದ ಅನೇಕ ಚಿತ್ರ ಕಲಾ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದನು.. ಅವನ ಚಿತ್ರಗಳನ್ನು ನೋಡಿದ ಅನೇಕ ಹೆತ್ತವರು ಅವನ ಗುರುಗಳ ಬಗ್ಗೆ ವಿಚಾರಿಸಿ, ನಾನೆ ಕಲಿಸುವುದೆಂದು ತಿಳಿದು ನಾನು ತರಗತಿ ನಡೆಸುವೆನೋ ಎಂದು ವಿಚಾರಿಸುತ್ತಿದ್ದರಾದರೂ ನಾನು ಒಪ್ಪಿರಲಿಲ್ಲ... ನನಗೆ ನನ್ನ ಕಲೆಯ ಬಗ್ಗೆ ಭರವಸೆ ಇರಲಿಲ್ಲ. ಈ ಮಾತು ಸಾಧಾರಣ ೧೦, ೧೨ ವರ್ಷಗಳ ಹಿಂದಿನ ಮಾತು. ಆದರೆ ಈಗ ನನ್ನ ಮನೆ ಪಾಠತರಗತಿಯ ಮಕ್ಕಳು, ಹೆತ್ತವರು ಮನೆಯಲ್ಲಿದ್ದ ನನ್ನ, ನನ್ನ ಮಕ್ಕಳ ಪೈಂಟಿಂಗ್ ಗಳನ್ನು ನೋಡಿ ತರಗತಿ ನಡೆಸುವಂತೆ ಒತ್ತಡ ತಂದರು. ಕೊನೆಗೂ ಧೈರ್ಯ ಮಾಡಿಬಿಟ್ಟೆ.. ಕೇವಲ ೨ ಮಕ್ಕಳಿಂದ ಪ್ರಾರಂಭಗೊಂಡ ತರಗತಿ ಇಂದು ೨೦ ಮಕ್ಕಳಿಂದ ತುಂಬಿದೆ... ಇದರಿಂದ ಸ್ಫೂರ್ತಿ ಗೊಂಡು ಈಗ್ಗೆ ನಾಲ್ಕು ವರ್ಷಗಳಿಂದ ವರ್ಷಕ್ಕೆ ಎರಡು ಶಿಬಿರಗಳನ್ನು ನಡೆಸುತ್ತಿದ್ದೇನೆ..( ದಸರ ಮತ್ತು ಬೇಸಿಗೆ) ಬರಿ ಚಿತ್ರ ಮಾತ್ರವಲ್ಲದೆ ಕರಕುಶಲ ಕಲೆಗಳ ಕೂಡ ಉತ್ತಮವಾಗಿ ಹೆತ್ತವರ, ಮಕ್ಕಳ ಉತ್ತೇಜನದಿಂದ ನಡೆಯುತ್ತಿದೆ. ಅಲ್ಲದೆ ಹೊರಗಿನ ಕ್ಯಾಂಪ್ ನಲ್ಲೂ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲು ಕರೆಗಳು ಬರುತ್ತಿದೆ. ಕೆಲವೊಂದು ಮಕ್ಕಳ ಚಿತ್ರಗಳನ್ನು ನನ್ನ ಬ್ಲಾಗ್ ನಲ್ಲಿ ಹಾಕಿ ಇದರ ಮೂಲಕ ನನಗೆ ಮಾರ್ಗದರ್ಶನ ಮಾಡಿದ ನನ್ನ ಗುರುಗಳಿಗೆ ಈ ಮೂಲಕ ಕೃತಜ್ಞತೆ ಸಲ್ಲಿಸುತ್ತೇನೆ!
No comments:
Post a Comment