
ಸಮಾಜಕ್ಕೆ ಮಾದರಿಯಾಗಬೇಕಾಗಿರುವ ಮಠಾಧಿಪತಿಗಳು ಈ ಪರ್ಯಾಯದ ಸುಸಮಯದಲ್ಲಿ ಸಾರ್ವಜನಿಕವಾಗಿ ಕಚ್ಚಾಡುವುದು ಸರಿಯೇ? ಉಡುಪಿಯ ಅಷ್ಟ ಮಠ, ಅದರ ಯತಿಗಳ ಮೇಲೆ ಅಪಾರ ವಿಶ್ವಾಸವಿರುವ ನನ್ನಂತವರಿಗೆ ಇದು ದೊಡ್ಡ ಅಘಾತ. ಕೇವಲ ವಿದೇಶ ಯಾತ್ರೆಯಂತಹ ಕ್ಷುಲ್ಲಕ ವಿಷಯದಲ್ಲಿ ತಲೆಕೆಡಿಸಿ ಮದ್ವಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಶ್ರೀಕೃಷ್ಣನ ಪೂಜೆಯ ವಿಷಯವು ನ್ಯಾಯಾಲಯದ ಮೆಟ್ಟಲೇರಿ ಹೋಗಿ ಹೀಗೆ ಸಾರ್ವಜನಿಕವಾಗಿ ನಗೆಗೀಡಾಗಿದೆ. ಎಂತಹ ವಿಪರ್ಯಾಸ! ಸರಿ ಯಾವುದಾದರು ಮಠಾದೀಶರು ತಮ್ಮ ಹಠ ಬಿಟ್ಟು ಕೊಡಬಹುದಲ್ಲವೇ. ಇಲ್ಲ, ಇಲ್ಲಿ ಎಲ್ಲರೂ ತಮ್ಮ ತಮ್ಮ ಹಕ್ಕನ್ನು ಬಿಟ್ಟು ಕೊಡಲು ಸಿದ್ಧರಿಲ್ಲ. ಕೆಲವೇ ದಿನಗಳ ಹಿಂದೆ ಪೇಜಾವರ ಶ್ರೀಗಳು ಇದು ವಾದವಲ್ಲ ಬದಲಾಗಿ ಬೇರೆ ಬೇರೆ ದೃಷ್ಟಿ ಕೋನ ಅಷ್ಟೇ ಎಂದು ಹೇಳಿಕೆ ಕೊಟ್ಟಿದ್ದರು. ನಾವೆಲ್ಲ ಒಟ್ಟಿಗೆ ಕುಳಿತು ಇದನ್ನು ಬಗೆಹರಿಸುವೆವು ಎಂದಿದ್ದರು. ಆದರೆ ಮಕರ ಸಂಕ್ರಾತಿಯ ಹಿಂದಿನ ದಿನ ಈವಿಷಯ ನ್ಯಾಯಾಲಯದ ಮೆಟ್ಟಲೇರಿತ್ತು. ನ್ಯಾಯಾಲಯವು ದಾವೆಗಳನ್ನು ವಜಾಮಾಡಿದಾಗ, ಪುತ್ತಿಗೆ ಮಠದ ಕಡೆಯವರು ಪಟಾಕಿ ಸಿಡಿಸಿ ಸಂತೋಷ ಆಚರಿಸಿದರೆಂದು ಪತ್ರಿಕೆಯು ವರದಿ ಮಾಡಿದೆ. ಇದು ಸರಿಯೇ? ಇದನ್ನು ಓದಿದಾಗಲೇ ಇದು ಕೇವಲ ಒಣ ಪ್ರತಿಷ್ಠೆಯಗಾಗಿ ವಿವಾದ ಮಾಡಿರುವುದು ಎಂದು ಸ್ಪಷ್ಟವಾಗುತ್ತದೆ.

ಶೀಕೃಷ್ಣನು ಜನಸಾಮಾನ್ಯರ ದೇವನು, ಗೋಪ ಬಾಲಕನು, ಕೇವಲ ಒಂದು ತುಲಸೀದಳದ ಸಮರ್ಪಣೆಯಿಂದಲೇ ತೃಪ್ತನು. ಅಂತವನನ್ನು ಯಾರು ಪೂಜೆ ಮಾಡಿದರೇನು? ಇಡೀ ವಿಶ್ವವನ್ನೇ ವ್ಯಾಪಿಸಿರುವವನನ್ನು ವಿದೇಶಯಾತ್ರೆ ಮಾಡಿದವರು ಪೂಜಿಸಬಾರದೇಕೆ? ಪುತ್ತಿಗೆ ಶೀಗಳು ಪರ್ಯಾಯ ಪೀಠದಲ್ಲಿ ಕುಳಿತುಕೊಳ್ಳಬಹುದು ಆದರೆ ಕಡೆಗೋಲು ಹಿಡಿದ ಬಾಲಗೋಪಾಲನನ್ನು ಪೂಜಿಸಬಾರದು..... ಈ ನಿಯಮವೇಕೆ? ಈ ಯತಿಗಳೆಲ್ಲ ಸಾಮಾನ್ಯರಲ್ಲ. ವೇದಾಭ್ಯಾಸ ಮಾಡಿದ ವಿದ್ವಾಂಸರು. ನಿತ್ಯ ಭಗವದ್ಗೀತೆಯ ಪಾರಾಯಣ ಮಾಡುವವರು, ಅಂತವರಿಗೆ ಹರಿಯ ಅಂತರ್ಯ ತಿಳಿಯದೇನು???? ಶುದ್ಧ ಭಕ್ತಿಯ ಬಯಸುವವನಿಗೆ ಬಂಗಾರ, ವಜ್ರ, ಮಾಣಿಕ್ಯಗಳ ಕವಚವೇನೋ ಮಾಡಿದರು. ಹೋಗಲಿ ಇದು ಭಕ್ತರು ಪ್ರೀತಿಯಿಂದ ಕೊಟ್ಟ ಕಾಣಿಕೆ ಪರವಾಗಿಲ್ಲ. ಆದರೆ ಅವನು ಎಂದಾದರೂ ಕೇವಲ ಭಾರತೀಯರು ಮಾತ್ರ ತನ್ನ ಭಕ್ತರು ಎಂದಿದ್ದಾನೆಯೇ? ಕುರುಬರ ಕನಕನು ಕರೆದನೆಂದು ಕಿಟಿಕಿಯಲ್ಲೇ ಅವನಿಗೆ ದರುಶನ ತೋರಿದವನನ್ನು ಪೂಜಿಸಲು ಯಾವ ನಿಯಮಗಳು ಬೇಕಾಗಿಲ್ಲ. ಅದೂ ಈ ಕಲಿಯುಗದಲ್ಲಿ ಅವನ ಅಸ್ಥಿತ್ವಕ್ಕೇ ಸಂಚಕಾರ ಬಂದಿರುವಾಗ. ಪುರಂದರ ದಾಸ ಮತ್ತೆ ಮತ್ತೆ ತಮ್ಮ ಪದ್ಯದಲ್ಲಿ ಹಾಡಿರುವಂತೆ ಹರಿಗೆ ತಾಳ ತಂಬೂರ ಜಾಗಟೆ ಶಂಖಗಳಿಗಿಂತ ಭಕ್ತಿಯು ಮುಖ್ಯ ಎಂದಿದ್ದಾರೆ. ನನಗೆ ನೆನಪಿದಂತೆ ಸರಸ್ವತಿಯೇ ನಾಲಗೆಯಲಿ ನಲಿದಾಡುತ್ತಿರುವ ಬನ್ನಂಜೆ ಗೋವಿಂದಾಚಾರ್ಯರು ಒಮ್ಮೆ ಹೇಳಿರುವಂತೆ ದೇವನನ್ನು ಪೂಜಿಸಲು ಯಾವ ನಿಯಮಗಳೂ ಬೇಕಾಗಿಲ್ಲ, ಮೆಟ್ಟು ಹಾಕಿ ಸ್ಮರಿಸಿದರೂ ಭಕ್ತವತ್ಸಲನು ಓಗೊಡುತ್ತಾನೆ. ಮುಖ್ಯವಾಗಿ ಬೇಕಾಗಿರುವುದು ಶೃದ್ಧೆ, ವಿಶ್ವಾಸ ಮತ್ತು ಭಕ್ತಿ.
" ತೊಂಡರಿಗೆ ತೊಂಡನಾಗಿ ಸಂಚರಿಸುತಿಹನು" ಎಂದು ಪುರಂದರದಾಸರು ಹೇಳಿರುವಂತೆ ಭಕ್ತರ ಭಕ್ತನು ಆದ ಆ ವನಮಾಲಿಯು ಎಲ್ಲರಿಗೂ ಸದ್ಭುದ್ಧಿಯನ್ನು ಕೊಟ್ಟು ಈ ಪರ್ಯಾಯವನ್ನು ಸುಲಲಿತವಾಗಿ ನೆರವೇರಿಸಲಿ ಎಂದು ಆ ಜಗನ್ನಾಥನನ್ನು ಬೇಡಿಕೊಳ್ಳುವೆ.