ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

22 May, 2012

ಹೊಸ ಹಾದಿಯ ಅನಿಸಿಕೆಗಳು-ಒಂದಿಷ್ಟು ಹುಡುಕಿ ಅಂತರಾತ್ಮದೊಳಗೀಗ!!!


ಬಂದ ಹಾದಿಯ ಹೊರಳಿ ಇಣಿಕಿದಾಗ ಅನಿಸಿತವಳಿಗೆ
ಕಳೆಯಿತಲ್ಲವೆ ವರುಷಗಳು ನಿಮಿಷಗಳಂತೀಗ!

ಕಳೆದು ಹೋದ ತನ್ನತನವನ್ನು ಅವಳಿಗೆ
ಮತ್ತೆ ಪಡಕೊಂಡ ಹುಮ್ಮಸೀಗ!

ಹೊಸಮಾಲೆಯನ್ನು ಹೆಣೆದವಳು ತನ್ನ
ಎದೆಯ ಬುಟ್ಟಿಯಿಂದ ಹೆಕ್ಕಿ ಕನಸುಗಳನ್ನೀಗ!

ಶೂನ್ಯವೆಂದೆನಿಸಿದ್ದ ಬದುಕಿಗೆ ಹೊಸ 
ಆಯಾಮ ಒದಗಿಸಿತವಳಿಗೆ ಈ ಉದ್ಯೋಗ!

ಬಾಳಿನ ಆ ತಿರುವಿನಲ್ಲಿ ಅವಕಾಶಗಳು
ಹುಡುಕಿ ಬಂದು ಹೊಸ ಅರ್ಥ ನೀಡಿತಾಗ!

ಅಂತರ್ಜಾಲವೆಂಬ ಕಿಟಿಕಿಯಿಂದ ವಿಸ್ತರಿಸಿತವಳ
ಜ್ಞಾನದ ಹರಿವು, ಬೆಳೆಯಿತೂ ಮಿತ್ರರ ಬಳಗ,

ತನ್ನೀಶನ ಮೂರುತಿಯನು ಗರ್ಭಗುಡಿಯೊಳಗಿರಿಸಿಕೊಂಡು 
ಸಂತೃಪ್ತವಾಗಿದೆ ಶೈಲಜೆಯ ಪುಟ್ಟ ಹೃದಯವೀಗ,

ಅರ್ಥ ಸಂಪಾದನೆಯ ನೆಪವಿದ್ದರೂ, ತನ್ನಾತ್ಮವ
ಪುನರುಜ್ಜೀವಗೊಳಿಸಿದ ಹರುಷವವಳಿಗೀಗ,

ಅವರಿವರ ನಿಂದನೆಯ ನುಡಿಗಳಿಗೆ ನೊಂದ ಮನಕೆ
ಸಾಂತ್ವನಗೈದು ಸ್ಥೈರ್ಯವನ್ನೀವ ಮನಗಳಿರುವಾಗ

ಶೈಲಜೆಯು ಮಿತ್ರರಿಗನ್ನುವಳು, ಕೇಳುವಿರಾ;
ಹುಡುಕಬೇಕಾಗಿಲ್ಲ ಬೇರೆಲ್ಲೂ ಆತ್ಮಬಲ,
ದೈವಬಲದಿಂದ ನಡೆಯುವ ಈ ಪವಾಡಗಳನ್ನು 
ನಮ್ಮೊಳಗೇ ಇಹುದು ಇದೆಲ್ಲರ ಮೂಲ
ಒಂದಿಷ್ಟು ಹುಡುಕಿ ಅಂತರಾತ್ಮದೊಳಗೀಗ!!!

5 comments:

ಮನದಾಳದಿಂದ............ said...

ನಮ್ಮ ಜೀವನ ದಿನ ಕಳೆದಂತೆ ಜ್ಞಾನವನ್ನು ಪಡೆದುಕೊಂಡು ಅಂಧಕಾರ ಕಳೆಯಬೇಕು, ಆಗಲೇ ಸಾರ್ಥಕತೆ ಸಾಧ್ಯ.

ನಿಮ್ಮ ಕವನ ಆ ನಿಟ್ಟಿನಲ್ಲಿ ಯೋಚಿಸುವಂತೆ ಮಾಡಿದೆ. ಧನ್ಯವಾದಗಳು.

Sheela Nayak said...

ಜೀವನದಲ್ಲಿ ಎಲ್ಲರಿಗೂ ಯಾವಾಗಲೂ ಏನನ್ನಾದರೂ ಸಾಧಿಸಲು ಅವಕಾಶ ದೊರೆಯುವುದು ಎಂದು ಹೇಳಲಾಗದು...ಅದನ್ನು ಕಾಯುತ್ತಾ ಕುಳಿತುಕೊಳ್ಳಲೂ ಆಗದು..ಹಾಗಾಗಿ ಬಂದ ಸಂದರ್ಭಗಳನ್ನೇ ಉಪಯೋಗಿಸಬೇಕು...ಈ ೫ ವರುಷಗಳು ನನಗದನ್ನು ಕಲಿಸಿತು!

Badarinath Palavalli said...

ಹೊಸ ಹಾದಿಗಳಂತೆಲ್ಲ ಚಿಂತನೆಯ ಹೊಸ ದಿಶೆಯೂ ಆರಂಭ. ನಾನೂ ಈಗಷ್ಟೇ ನನ್ನ ಐದು ವರ್ಷಗಳ ಒಲುಮೆಯನ್ನು ಕಳೆದುಕೊಂಡವನು.

ಸರಳತೆ ಮೈಗೂಡಿಸಿಕೊಂಡಿರುವ ನಿಮ್ಮ ಶೈಲಿ ಬಿಡಬೇಡಿ. ಅದೇ ನಿಮ್ಮ ಶಕ್ತಿ.

ಆಸು ಹೆಗ್ಡೆ said...

ಆತ್ಮಾವಲೋಕನ ಸದಾ ನಡೆಯುತ್ತಿರಬೇಕು
ದೇವರ ನೆನಪು ಸದಾ ಜಾಗ್ರತವಾಗಿರಬೇಕು

ಸಿಕ್ಕ ಅವಕಾಶಗಳ ಬಳಸಿಕೊಳ್ವ ಜಾಣ್ಮೆ ಬೇಕು
ನೆರವಾದವರಿಗೆ ಕೃತಜ್ಞೆ ಸಲ್ಲಿಸುವ ವಿನಯ ಬೇಕು!

Sheela Nayak said...

ಆಸು ಸರ್, ತಾವು ಹೇಳಿದನ್ನು ನೆನಪಿಟ್ಟುಕೊಂಡು ಪಾಲಿಸುವ ಪ್ರಯತ್ನ ಮಾಡುವೆನು. ಪರಮಾತ್ಮನ ಅನುಗ್ರಹದೊಂದಿಗೆ ತಮ್ಮ ಮಾರ್ಗದರ್ಶವಿರಲಿ ನನಗೆ ಸದಾ!

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...