"ರಾಮ್ ರಾಮ್ ಟೀಚರ್", "ರಾಮ್ ರಾಮ್ ಮ್ಹಾಯೆ"
- ಮಕ್ಕಳು ಹೇಳುತ್ತಾ ಓಡುತ್ತಿದ್ದವು. ಅರ್ಶಿಯಾ ಮತ್ತು ಜಹೀದ್ ಆಶ್ಚರ್ಯದಿಂದ ನೋಡುತ್ತಿದ್ದಾರೆ. ಕಳೆದ ಎರಡು ದಿನಗಳಿಂದಲೂ ಅವರಿಗೆ ಮಕ್ಕಳು ಬಾಯ್ ಬಾಯ್...ಟಾಟಾ... ಜೊತೆ ಮತ್ತೇನೋ ಹೇಳುತ್ತಿದ್ದಾರಂತ ಗೊತ್ತಾಗಿತ್ತು...ಸಂಕೋಚಪಡುತ್ತಲೇ ಮತ್ತೊಂದು ಹುಡುಗಿಯ ಹತ್ತಿರ ಅರ್ಶಿಯಾ ರಾಮ್ ರಾಮ್ ಅಂದರೇನು ಅಂತ ಕೇಳಿದಳು. ಆ ಹುಡುಗಿ ಮಿಸ್, ಅರ್ಶಿಯಾ ಏನೋ ಕೇಳುತ್ತಿದ್ದಾಳೆ ಅಂತ ಜೋರಾಗಿ ಹೇಳಿದಳು. ಜಹೀದ್ , ಅರ್ಶಿಯಾ ಇಬ್ಬರ ಮುಖದಲ್ಲಿ ಕುತೂಹಲ,ಸಂಕೋಚ ಎದ್ದು ತೋರುತಿತ್ತು.
ಹುಂ, ನನ್ನ ಮನೆ ಈಗ ಸಣ್ಣ ಭಾರತವೇ ಆಗಿಬಿಟ್ಟಿದೆ. ಕನ್ನಡ, ತುಳು, ಕೊಂಕಣಿ, ಗುಜರಾತಿ, ಮಾರ್ವಾಡಿ, ಕ್ರೈಸ್ತ, ಮುಸಲ್ಮಾನ್...ಹೀಗೆ ಎಲ್ಲಾ ಜಾತಿ, ಧರ್ಮದ...ಪಂಗಡ ನಮ್ಮ ಮನೆಯಲ್ಲಿ....ಮೊದ ಮೊದಲು ಬರೇ ತುಳು, ಕನ್ನಡ, ಕೊಂಕಣಿಯವರು ಬರುತ್ತಿದ್ದರು....ಆಗ ನನ್ನ ಟಾಟಾ ಬಾಯ್ ಬಾಯ್ ಬದಲಾಗಿ ರಾಮ್ ರಾಮ್ ಹೇಳುವ ಅಭ್ಯಾಸ ಒಂದಿಷ್ಟು ವಿಚಿತ್ರವೆನಿಸಿದರೂ ಹೆಚ್ಚಿನ ಮಕ್ಕಳು ತಾವೂ ರಾಮ್ ರಾಮ್ ಅನ್ನಲು ಪ್ರಾರಂಭಿಸಿದರು.
ಆದರೆ ಇವತ್ತು ಈ ಮಕ್ಕಳು ಆ ಬಗ್ಗೆ ಕೇಳುವಾಗ ನನಗೆ ಏನು ಹೇಳುವುದು ಅಂತ ಗೊತ್ತಾಗಲಿಲ್ಲ. ಟಾಟಾ, ಬಾಯ್‍ಗಳ ಬದಲಾಗಿ ಉಪಯೋಗಿಸುವ ನಮ್ಮ ದೇವರ ಹೆಸರು ಅಂತ ಆ ಹುಡುಗನಿಗೆ ಸಂಕ್ಷಿಪ್ತವಾಗಿ ಅಂದೆ. ಹೋಗುವಾಗ ರಾಮ್ ರಾಮ್ ಅಂತ ಹೇಳಿ ನನಗೆ ಅಚ್ಚರಿಕೊಟ್ಟ. ಅದೂ ಅವನ ತಂದೆಯ ಎದುರು. ಅವರು ನನ್ನ ಕಾಲೇಜಿನ ಸರ್! ಅವರ ಮುಖ ನೋಡಿದೆ. ಮುಖದ ತುಂಬಾ ನಗೆ ಹರಡಿತ್ತು.....
ಆರ್ಶಿಯಾ..ಅಪ್ಪನನ್ನು ನೋಡಿದ ಕೂಡಲೇ ಸಲೈಮಲೈಕುಂ ಅಂದಳು.......ಕೇಳಿ ಖುಶಿಯಾಯ್ತು........ಸರ್ ಅಂದರು ಅವಳು ಹಾಗೆ..... ನೋಡಿದ ಕೂಡಲೇ ಸಲಾಂ ಅನ್ನುತ್ತಾಳೆ. ....ಮತ್ತೂ ಅಂದರು ಮಕ್ಕಳು ನಿಮ್ಮನ್ನು ತುಂಬಾ ಮೆಚ್ಚಿದ್ದಾರೆ....ನಿಮ್ಮದೇ ಮಾತು ಮನೆಯಲ್ಲಿ....ಹುಂ, ಈ ಮಾತನ್ನು ನನಗೆ ಹೆಚ್ಚಿನ ಮಕ್ಕಳ ಪೋಷಕರು ಹೇಳಿದ್ದರೂ......ಇವತ್ತು ನನ್ನ ಗುರುಗಳ ಬಾಯಿಯಿಂದ ಕೇಳಿ ಮನಸ್ಸು ಆದ್ರವಾಯಿತು.....ಮೊನ್ನೆ ನನ್ನ ಪುಟ್ಟ ತಮ್ಮ ಕಿರಣ್ ಹೀಗೆ ಮನಸ್ಸನ್ನು, ಕಣ್ಣನ್ನು ಒದ್ದೆ ಮಾಡಿಬಿಟ್ಟ....ಎಷ್ಟೋ ಸಲ ಅಂದ್ಕೊಳ್ತೇನೆ ತುಂಬಾ ಭಾವುಕಳಾಗಬಾರದು ಅಂತ..ಆದರೆ....
"ನನ್ನ ಅಪ್ಪ ನನಗೆ ನಾನು ನಿಮ್ಮ ಹಾಗೆ ಆಗಬೇಕಂತ ಹೇಳಿದ್ದಾರೆ"- ಅರ್ಶಿಯಾ ನನಗೆ ಹೇಳಿದಾಗ ಭಾವುಕಳಾಗದೇ ಇರಲು ಸಾಧ್ಯವೇ ಹೇಳಿ!!!