ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

28 December, 2011

ಕಲಾ ಜೀವನದಲ್ಲೊಂದು ತಿರುವು! ಹೊಸ ಬೆಳಕು, ಹೊಸ ಹುರುಪು!

 
               ೧೯೮೯ರಲ್ಲಿ ಬಿ. ಜಿ. ಎಮ್‌ನಲ್ಲಿ ಜೂನ್ ತಿಂಗಳಲ್ಲಿ ನನ್ನ ಚಿಕ್ಕಮ್ಮನ ಮೂಲಕ ಸೇರ್ಪಡೆಗೊಂಡಾಗ ನನ್ನ ಬದುಕು ಈಗ ನಿಜವಾಗಿ ಪ್ರಾರಂಭಗೊಂಡಿತೆಂದೆನಿಸಿತ್ತು. ಬೆಳಿಗ್ಗೆ ಸಾಧಾರಣ ೯.೩೦ಕ್ಕೆ ಚಿತ್ರ ಮಾಡಲು ಕುಳಿತರೆ ನನಗೆ ಮನೆಗೆ ತಿರುಗಿ ಹೋಗಲು ಮನಸ್ಸು ಬರುತ್ತಿರಲಿಲ್ಲ...ಆಗ ನನಗೆ ನನ್ನೊಳಗೆ ಕಲಾದಾಹ ಎಷ್ಟಿದೆಯೆಂಬುದು ಅರಿವಿಗೆ ಬಂತು. ಅದಕ್ಕಿಂತ ಮುಂಚೆ ನನ್ನಷ್ಟಕ್ಕೆ ಚಿತ್ರಗಳನ್ನು ಬಿಡಿಸುತ್ತಿದ್ದೆನಾದರೂ ನಿಯಮಗಳ ಅರಿವಿರಲಿಲ್ಲ..ಚಿತ್ರ ಪರಿಕರಣೆಗಳ ಬಗ್ಗೆ ಏನೂ ಪ್ರಾಥಮಿಕ ಜ್ಞಾನವಿರಲಿಲ್ಲ..ಆದರೂ ಬಚ್ಚಲು ಗೋಡೆಗಳ ಮೇಲೆ ಆಗಿನ ಡಿಸ್ನಿ ವರ್ಲ್ಡ್‌ನ ಎಲ್ಲಾ ಕಾರ್ಟೂನ್‌ಗಳು ಸುಣ್ಣದಲ್ಲಿ ರರಾಜಿಸುತ್ತಿದ್ದವು. ಅವುಗಳು ಚೆನ್ನಾಗಿರುತ್ತಿದ್ದವೂ ಕೂಡಾ. ಆದರೂ ಮನೆಯಲ್ಲಿ ನನಗೆ ಎಂದೂ ಪ್ರೋತ್ಸಾಹದ ಮಾತುಗಳು ಬಂದಿರಲಿಲ್ಲ. ಇದರಿಂದಲೋ ಏನೋ ನಾನು ಇಂದಿಗೂ ಸಹ ಪ್ರೋತ್ಸಾಹದ ಮಾತುಗಳ ನಿರೀಕ್ಷೆ ಮಾಡುವುದಿಲ್ಲ.  ಸರಿ, ಬಿ. ಜಿ.ಮೊಹಮ್ಮದರ ಕೈಕೆಳಗೆ ನನ್ನ ತರಬೇತಿ ಪ್ರಾರಂಭವಾಯಿತು...ಬೇಸಿಕ್‍  ತಂತ್ರಗಳನ್ನು ಬಲು ಬೇಗ ದಾಟಿ, ಇದ್ದಿಲಿನ (ಚಾರ‍್ಕೋಲ್) ಮೂಲಕ ಬಿಡಿಸಲು ಕಲಿಕೆ ಪ್ರ‍ರಂಭವಾದ ದಿನದಿಂದ ನನ್ನ ಕನಸುಗಳಿಗೆ ರೆಕ್ಕೆಗಳು ಮೂಡಲು ಪ್ರಾರಂಭವಾಯಿತು.  ಜೆ ಜೆ ಆರ್ಟ್ ಸ್ಕೂಲ್‍ನಲ್ಲಿ ಕಲಿಯುವ ನನ್ನ ಮಹತ್ವಾಕಾಂಕ್ಷೆಗೆ ಇಂಬು ನೀಡುವಂತೆ ಗುರುಗಳ ಮೆಚ್ಚುಗೆ, ನನ್ನ ಸಹಪಾಠಿಗಳ ಪ್ರೋತ್ಸಾಹದ ಮಾತುಗಳು ಕೇಳಿಬಂದವು.  ನಾನು ಮೂರು ತಿಂಗಳಲ್ಲೇ ನನ್ನೆಣಿಕೆಗೆ ಮೀರಿ ಬೆಳೆದೆ...ಚಿತ್ರ ಕಲೆಯಲ್ಲಿ ಮೇಲಿಂದ ಮೇಲೆ ಪದೋನ್ನತಿ ಸಿಕ್ಕಿತು...ಅಲ್ಲಿಗೆ ಬರುತ್ತಿದ್ದ ಅನೇಕರಿಗೆ ಆಶ್ಚರ್ಯ! ಆದರೆ ಇದು ಸಾಧ್ಯವಾದದ್ದು ನನ್ನೊಳಗಿನ ಕಲಾವಿದೆಯ ಹಠ ಮತ್ತು ನಿರಂತರ ಪ್ರಯತ್ನದಿಂದ. ಮನೆಯಲ್ಲಿ ಮದುವೆಯ ಮಾತು ಕತೆ ನಡೆಯುತಿತ್ತು...ನನ್ನ ಕಲಿಕೆಯು ಪೂರ್ಣವಾಗುವುದೇ, ನನ್ನ ಪತಿ ಮತ್ತು ಅವನ ಮನೆಯವರು ನನಗೆ ಮುಂದೆ ಕಲಿಯಲು ಅನುಕೂಲ ಮಾಡಿಕೊಡುವರೇ, ಇದೆಲ್ಲಾ ಪ್ರಶ್ನೆಗಳು  ನನ್ನ ಮನಸ್ಸಿನಲ್ಲಿ ಎಂದೂ ಹುಟ್ಟಿರಲಿಲ್ಲ...ಬಹುಶಃ  ಕಲಾ ಜೀವನದ ಹಾದಿ ಹಿಡಿದ ನಾನು ಇನ್ನೆಂದೂ ಹಿಂದೆ ತಿರುಗಿ ಬರುವುದಿಲ್ಲ..ಅದೇ ದಾರಿಯಲ್ಲಿ ನಡೆದು ಮುಂದೊಂದು ದಿನ ದೇಶದ ಅತ್ಯುನ್ನತ ಕಲಾವಿದರಲ್ಲಿ ಒಬ್ಬಳಾಗುವೆ ಎಂಬ ವಿಶ್ವಾಸವಿತ್ತು ನನ್ನಲ್ಲಿ.  ಬೇಗನೇ ಕಪ್ಪು ಬಿಳಿ ಜಲ ಚಿತ್ರ..ಅಲ್ಲಿಂದ ಜಲ ವರ್ಣ....ಅದರಲ್ಲಿಯೂ ನಾನೊಂದು ಬಿಡಿಸಿದ ಸ್ಟಿಲ್‍ ಲೈಫ಼್‍ ಚಿತ್ರ- ಹಸಿರು ಬಣ್ಣದ ಗಾಜಿನ ಬಾಟ್ಲಿ ಮತ್ತು ಅದರ ಜೊತೆ ಹಣ್ಣುಗಳು ಬಹಳ ಸುಂದರವಾಗಿ ಮೂಡಿ ಬಂದಿತ್ತು.( ಈ ಚಿತ್ರ ಮದುವೆಯಾದ ಹೊಸತರಲ್ಲಿ ನನ್ನ ಓರಗಿತ್ತಿ ತನಗೆ ಬೇಕೆಂದು ತೆಗೆದುಕೊಂಡು ಹೋಗಿದ್ದಳು...ಅದು ಈವಾಗ ಅವಳ ಬಳಿ ಸಹ ಇಲ್ಲ.)  ಒಂದು ದಿನ ಮಾಸ್ಟ್ರು ತೈಲ ವರ್ಣಗಳಿಗೆ ಬೇಕಾದ  ಸಲಕರಣೆಗಳನ್ನು ತರಲು ಹೇಳಿದಾಗ ಆನಂದ ಆಶ್ಚರ್ಯ ಉಂಟಾಯಿತು. ಇವುಗಳ ಮಧ್ಯೆ ಗುರುಗಳ ಪತ್ನಿಯವರಿಂದ ಎರಡು ತಗಡಿನ ಮೇಲೆ ಉಬ್ಬು ಚಿತ್ರ ಬಿಡಿಸುವುದನ್ನು ಸಹ ಕಲಿತೆ. ಮಾರ್ಚ್ ತಿಂಗಳ ಮೊದಲವಾರ ಅದು.... ನನ್ನ ತಾಯಿಯವರು ಹುಡುಗ ಮತ್ತು ಮನೆಯವರು ನೋಡಲು ಬರುವ ವಿಷಯ ತಿಳಿಸಿದರು. ಮುಂದೆ ಎಲ್ಲವೂ ಬೇಗ ಬೇಗನೇ ನಡೆಯಿತು...೧೫ನೇ ತಾರೀಕು ನಿಶ್ಚಯ ತಾಂಬೂಲ...೨೪ ಜೂನ್‍ರಂದು ಮದುವೆಯೂ ಆಯಿತು. ಅದರ ಜೊತೆ ನನ್ನ ಕನಸಿನ ಸೌಧವೂ ಕುಸಿಯುತು. ಮೊದಮೊದಲು ಸಿಡುಕುತಿದ್ದ ನಾನು ಜೀವನದೊಂದಿಗೆ ಬಲು ಬೇಗ ರಾಜಿ ಮಾಡಿಕೊಂಡು ಬಿಟ್ಟೆ...ಮಕ್ಕಳಿಗಾಗಿ ಹೊಸ ಕನಸ ನೇಯುವುದು ಪ್ರಾರಂಭವಾಯಿತು!  ನನ್ನ ಕನಸಿನಂತೆ ನನ್ನ ಮಗ ಮಗಳು ಇಬ್ಬರೂ ಚಿತ್ರ ಬಿಡಿಸುವುದರಲ್ಲಿ ನುರಿತರಾದರು. ಇಷ್ಟೆಲ್ಲ  ನನ್ನೊಳಗಿನ ಕಲಾವಿದೆಯ ಧ್ವನಿ ಇನ್ನೂ ಕ್ಷೀಣವಾಗಿ ಮೊರೆಯಿಡುತಿತ್ತು....ಹೃದಯವು ಕೂಗುತಿತ್ತು. ಮುಂದೆಂದೂ ಕುಂಚವನ್ನು ಕೈಗೆತ್ತುವ ಆಸೆಯನ್ನೇ ಬಿಟ್ಟಿದ್ದೆ. ಆದರೆ ೨೦೦೭ರಲ್ಲಿ  ನನ್ನ ಜೀವನದಲ್ಲಿ ಮತ್ತಿನ್ನೊಮ್ಮೆ ಬೆಳಕಿನ ಕಿರಣಗಳು ಕಾಣಹತ್ತಿದವು. ಬರಡಾದ ಬೆಂಗಾಡಿನಲ್ಲಿ ವೃಕ್ಷಗಳ ಮೇಲೆ ಮತ್ತೆ ಹಸಿರೆಲೆ ಕಾಣಿಸಿಕೊಂಡವು. ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಮನೆ ಪಾಠ ಪ್ರ‍ಾರಂಭಿಸಿದೆ...ನಿಧಾನವಾಗಿ ಮಕ್ಕಳ  ಸಂಖ್ಯೆ ಹೆಚ್ಚಾಯಿತು..ಕೈಯಲ್ಲಿ ಬಂದ ಕಾಸು ಆತ್ಮವಿಶ್ವಾಸವನ್ನೂ ತಂದಿತು. ಬಂದ ಮಕ್ಕಳಲ್ಲಿ ಕೆಲವರಿಂದ ಚಿತ್ರ ಕಲಿಸಿ ಎಂಬ ಬೇಡಿಕೆಯೂ ಬಂತು...ಇಲ್ಲಿಯೂ ಒಳ್ಳೆಯ ಬೆಳವಣಿಗೆ ಕಾಣ ಬಂತು..

                    ಅಂತೂ ೨೦೧೦ರಲ್ಲಿ ಮತ್ತಿನ್ನಷ್ಟು ಬೆಳವಣಿಗೆ ಜೀವನದ ನಡೆಯನ್ನೂ, ಅರ್ಥವನ್ನೂ ಬದಲಾಯಿಸಿತು.  ಸಂಬಂಧಗಳ ವ್ಯಾಖ್ಯಾನವನ್ನೆ ಬುಡಮೇಲು ಮಾಡಿತು! ನಾ ಆರಾಧಿಸುತ್ತಿದ್ದ ಆ ಅದೃಶ್ಯ ಶಕ್ತಿ, ಮಾಟಗಾರ ತನ್ನ ಕಣ್ಕಟ್ಟನ್ನು ತೋರಿಸಿದ.  ನನ್ನ ನಂಬಿಕೆ ನಿಜವೆಂದು ನಿರೂಪಿಸಿ ತೋರಿದ ಕಪಟನಾಟಕ ಸೂತ್ರಧಾರಿ! ತಾಳ್ಮೆಯಿಂದ ಅವನ ಪರೀಕ್ಷೆಗಳನ್ನು ಎದುರಿಸಿದ ನಾನು ಅದರ ಫಲವನ್ನು ಪಡೆದೆ. ಅದೊಂದು ದಿನ ನನ್ನ ಜೀವನವೆಂಬ ನೌಕೆಯು ಬೀಸಿದ ಬಿರುಗಾಳಿಗೆ ಸಿಕ್ಕಿ ಹೊಯ್ದಾಡುತ್ತಿದ್ದಾಗ ಜೀವ ಕಳೆಯಲು ಹೊರಟಿದ್ದ ನನ್ನನ್ನು ನನ್ನೊಳಗಿನ ಹೋರಾಟಗಾರ್ತಿಯೇ ತಡೆದು ನಿಲ್ಲಿಸಿದ್ದಳು! ಬಾಲ್ಯದಿಂದ ಯೌವನಕ್ಕೆ ಕಾಲಿಟ್ಟಾಗಲೂ  ಕಹಿಯನ್ನೇ ಉಣಬಡಿಸಿದ ವಿಧಿಯು, ಕಣ್ಣಿನ ನೋಡುವ ಶಕ್ತಿಗೆ ಹಾನಿಯುಂಟು ಮಾಡಿತ್ತು. ಇವೆಲ್ಲಾ ನನ್ನ ಪಾಪ ಕರ್ಮಗಳ ಫಲವೆಂದು ದಿನ ಕಳೆದಂತೆ ಅರ್ಥಮಾಡಿಕೊಂಡ ನಾನು ಮತ್ತ್ಯಾವುದೇ ಒಳ್ಳೆಯದರ ನಿರೀಕ್ಷೆಯಲ್ಲಿರಲಿಲ್ಲ! ಆದರೂ ಬಹುಶಃ ನನ್ನ ತಪಸ್ಸು ಅವನ ಮನಸನ್ನು ತಟ್ಟಿರಬೇಕು!  ಅನಿತಾಳನ್ನು ನನ್ನ ಬಳಿ ಕಳುಹಿಸಿದ.   ಬಹುಶಃ ಅನಿತಾಳು ಇಂದಿಗೂ ವಿಸ್ಮಿತಳಾಗುತ್ತಿದ್ದಿರಬಹುದು. ಅದ್ಯಾಕೆ ನಾನು ಇವಳನ್ನು (ನನ್ನನ್ನು) ಆಯ್ಕೆ ಮಾಡಿದೆಯೆಂದು!     ಜಗನ್ನಾಥನ ಲೀಲೆಯನ್ನು ಅರಿತವರಾರು?  ಅನಿತಾಳ ಬೇಡಿಕೆಯಂತೆ ಮಾಡಿದ ೬ ಹೂಗೊಂಚಲುಗಳ ಜಲವರ್ಣ ಇನ್ನೂ ಕೈಗಳಲ್ಲಿ ಶಕ್ತಿಯಿದೆ ಎಂಬುದನ್ನು ನಿರೂಪಿಸಿತು. ನಿಧಾನವಾಗಿ ಬಂದ , ಬೇಡಿಕೆಯಂತೆ ಮಾಡಿಕೊಟ್ಟ ಮತ್ತೆರಡು ಚಿತ್ರಗಳ ಕೆಲಸವು ಮತ್ತಿಷ್ಟು ಹರುಪು ತುಂಬಿತು ವಿನಾ ಇನ್ಯಾವುದೇ ನಿರೀಕ್ಷೆಯನ್ನು ತರಲಿಲ್ಲ. ಆದರೆ ವೀಣಾ ಶ್ರೀನಿವಾಸ್ ಅವರ ಕಲಾಪ್ರದರ್ಶನ ನನ್ನ ಜೀವನದಲ್ಲಿ ಹೊಸ ತಿರುವುವನ್ನು ಪಡೆಯುವುದು ಎಂದೂ ಅನಿಸಿರಲಿಲ್ಲ. ನನ್ನನ್ನು ಕಲಾವಿದರ ಚಾವಡಿಯ ಸದಸ್ಯಳಾಗಿ ಮಾಡಿಕೊಂಡಾಗಲೂ ನಾನು ಅವರಂತಹ ನುರಿತ  ಕಲಾವಿದರ ಮಧ್ಯೆ ಗುರುತಿಸಿಕೊಳ್ಳುವಷ್ಟು ಯೋಗ್ಯತೆ ಪಡೆದಿಲ್ಲವೆಂದೂ ಸ್ಪಷ್ಟವಾಗಿ ತಿಳಿಸಿದ್ದೆ. ಆದರೆ ಆ ಗತಿಯಲ್ಲಿ ಸಾಗಬೇಕೆಂಬ ಬಲು ಆಸೆಯಿದೆ...ಅದಕ್ಕಾಗಿ ಮಾರ್ಗದರ್ಶನ ನೀಡಬೇಕೆಂದು ಕೋರಿದ್ದೆ. ಆದರೆ ಅದು ಇಷ್ಟು ಬೇಗನೆ ಸಿಗುವುದೆಂದು ಕನಸು ಮನಸಿನಲ್ಲಿ ಎಣಿಸರಿರಲಿಲ್ಲ. ೧೮ನೇ ಡಿಸೆಂಬರ್‍‍ನಲ್ಲಿ ನಡೆದ ಕಲಾಮೇಳದಲ್ಲಿ ಪ್ರಸಿದ್ಧ ಕಲಾವಿದರ ಕೃತಿಗಳ ಜೊತೆ ನನ್ನ ಚಿತ್ರ ಪ್ರದರ್ಶನ ನಡೆಯಿತು. ನನ್ನ ಸೌಭಾಗ್ಯವೇ ಸರಿ. ಜೊತೆಗೆ ಅನೇಕ ಕಲಾವಿದರ ಒಡನಾಟದ ಭಾಗ್ಯವೂ ಪಡೆದೆ. ನನ್ನ ಜೀವನದ ಸುದಿನವದು.

































       ಇಷ್ಟೇ ಅಲ್ಲ..ಈಗ ಇನ್ನೊಂದು ಸುವರ್ಣಾವಕಾಶ  ಬಾಗಿಲನ್ನು ತಟ್ಟಿದೆ. ಫೆಬ್ರವರಿ ೫ರಂದು ಮಹಿಳೆಯರು ಪ್ರದರ್ಶಿಸುವ  "ವರ್ಣ ವನಿತೆ" ಎಂಬ ಮಹಿಳೆಯರು ಮಾತ್ರ ನಡೆಸುವ ಶಿಬಿರದಲ್ಲಿ ಚಿತ್ರ ಬಿಡಿಸುದಕ್ಕೆ ೧೭ ಮಹಿಳೆಯರಲ್ಲಿ ಒಬ್ಬಳಾಗಿ ಆಯ್ಕೆಯಾಗಿದ್ದೇನೆ. ಅನನುಭವಿಯಾದ ನನಗೆ ನನ್ನ ಗೆಳೆಯ, ಒಡೆಯನಾದ ಶ್ರೀರಾಮನು ಹನುಮನೊಂದಿಗೆ ಸಹಾಯ ಮಾಡುವನು ಎಂದು ನಂಬುತ್ತೇನೆ. ನನ್ನ ಓದುಗರ ಪ್ರೋತ್ಸಾಹದ ಮಾತುಗಳು ಶ್ರೀರಕ್ಷೆಯನ್ನು ನೀಡುವುದು!

4 comments:

Vikas Hegde said...

congrats :)

ನರೇಂದ್ರ ಪೈ said...

ಒಂದೇ ಮನಸ್ಸಿನಿಂದ ಪರಿಪೂರ್ಣವಾಗಿ ನೀವು ಯಾವುದರಲ್ಲಿ ತೊಡಗಿದರೂ ಅದ್ಭುತವಾದ ಯಶಸ್ಸು ಕಟ್ಟಿಟ್ಟ ಬುತ್ತಿ. ನಿಮಗೆ ಒಳ್ಳೆಯದಾಗುತ್ತದೆ, ದೃಢವಾದ ಮನಸ್ಸಿನಿಂದ ಮುಂದುವರಿಯಿರಿ, ದೇವರು ನಿಮ್ಮೊಂದಿಗಿರುತ್ತಾನೆ.

Sheela Nayak said...

Thank u Vikas....:-)))

Sheela Nayak said...

ಧನ್ಯವಾದ ಪೈ ಅವರೇ, ನನ್ನಿಂದಾದಷ್ಟು ಪ್ರಯತ್ನ ಮಾಡುತ್ತೇನೆ ಯಶಸ್ಸು ಸಿಗಲಿ ಅಥವಾ ಸಿಗದಿರಲಿ..ಆತ್ಮ ತೃಪ್ತಿ ಖಂಡಿತ ಸಿಗುವುದು! ನಿಮ್ಮೆಲ್ಲರ ಶುಭ ಹಾರೈಕೆಯಂತೂ ಇನ್ನಷ್ಟು ಬಲ ಕೊಡುವುದು.

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...