ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

22 December, 2011

ಮೊದಲ ಗ್ಯಾಲರಿ ಭೇಟಿ ಮತ್ತು ವೀಣಾ ಶ್ರೀನಿವಾಸ್!



                     ೨೦೧೦ರ ಮಾರ್ಚ್ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಪ್ರಕಟವಾದ ಎರಡು ಲೇಖನಗಳು ನನ್ನ ಗಮನ ಸೆಳೆದವು. ಈ ಎರಡೂ ಲೇಖನಗಳು ಚಿತ್ರ ಕಲೆಯ ಬಗ್ಗೆ ಇದ್ದವು. ವಿಕಲ ಚೇತನಳಾದ ಮಂಗಳ ಜ್ಯೋತಿ ಶಾಲೆಯಲ್ಲಿ ಕಲಿತ ಸುಧಾರತ್ನ ಮತ್ತು ವೀಣಾ ಶ್ರೀನಿವಾಸ್. 


        ಬಹುಶಃ ೨೦೦೧ರಲ್ಲೆಂದು ತೋರುತ್ತದೆ. ನನ್ನ ತಮ್ಮನ ಮದುವೆಯಾಗಿ ಎರಡು ವರ್ಷವಾಗಿತ್ತು. ಅವನು ಅಮೇರಿಕದಿಂದ ಊರಿಗೆ ಬಂದಿದ್ದನು. ಮಂಗಳೂರಿನ ಸ್ಕೂಲ್ ಬುಕ್ ಕಂಪನಿಯ ಮೊಮ್ಮಗಳಾದ ಅವನ ಹೆಂಡತಿಯೊಂದಿಗೆ  ಸ್ಕೂಲ್ ಬುಕ್ ಕಂಪನಿಯ ಶ್ರೀನಿವಾಸ್ ಭಂಡಾರಿ ಅವರ ಮನೆಗೂ ಭೇಟಿ ಕೊಟ್ಟಿದ್ದನು. ಅವರೊಂದಿಗೆ ನನ್ನ ತಾಯಿಯೂ ಹೋಗಿದ್ದರು. ಅಲ್ಲಿಂದ ಬಂದ ಅವರು ಮತ್ತು ವಾಣಿ ಹೇಳಿದ ಮಾತು ಈಗಲೂ ನೆನಪಿದೆ...ಒಂದು ಕೋಣೆಯ ತುಂಬಾ ಸುಂದರ ಚಿತ್ರಗಳನ್ನು ವೀಣಾ ಮಾಡಿ ಇಟ್ಟಿದ್ದರು...ಮತ್ತು ಅಮ್ಮನಿಗೆ ಅದನ್ನು ನೋಡಿ ತುಂಬಾನೆ ಸಂತೋಷವಾಯಿತು...ಹಾಗು ನನ್ನ ನೆನಪಾಯಿತು ಎಂದು  ನನಗೆ ರಿಪೋರ್ಟ್ ಕೊಟ್ಟಿದ್ದರು ಸಹ! ಈ ೨೦೧೦ರಲ್ಲಿ ವೀಣಾ ಅವರ ಚಿತ್ರ ಕಲೆಯ ಬಗ್ಗೆ ಪ್ರಕಟವಾದದನ್ನು ನೋಡಿ ಹಿಂದೆ ಅಮ್ಮ ಹೇಳಿದ ಮಾತು ನೆನಪಾಯಿತು. ಅವರ ದೂರವಾಣಿ ಅಂಕೆ ಗೊತ್ತಿಲ್ಲದಿದುದರಿಂದ ಅಂಗಡಿಗೆ ಫೋನು ಮಾಡಿ ತಿಳಕೊಂಡೆ...ಕೂಡಲೇ ವೀಣಾಗೆ ಫೋನು ಹಚ್ಚಿ ಮಾತನಾಡಿ ಅವರಿಗೆ ಅಭಿನಂದನೆಗಳನ್ನು ಕೊಟ್ಟೆ. ಅದರಲ್ಲಿ ಅವರು ಕಾವಿಕಲೆಯ ಬಗ್ಗೆ ಮಾಡುತ್ತಿರುವ ಅಧ್ಯಯನದ ಬಗ್ಗೆಯೂ ಬರೆದಿತ್ತು. ವೀಣಾ ತಮ್ಮ ಮನೆಗೆ ಬಂದು ಭೇಟಿಯಾಗು ಎಂದು ಆಹ್ವಾನವನ್ನೂ ಕೊಟ್ಟಿದ್ದರು...ನಾನು ನನ್ನ ಚಿತ್ರಗಳನ್ನು ನೋಡಿ ಅಭಿಪ್ರಾಯ ಕೊಡಿ ಎಂದು ಕೇಳ್ಕೊಂಡಿದ್ದೆ...ಅಷ್ಟೇ ಮುಂದೆ ನಮ್ಮ ನಡುವೆ ಏನೂ ಬೆಳವಣಿಗೆ ನಡೆದಿರಲಿಲ್ಲ. ಆದರೆ ಇತ್ತೀಚೆಗೆ ನನ್ನ ಉಬ್ಬು ಚಿತ್ರಕ್ಕೆ ಚೌಕಟ್ಟು ಹಾಕಿಸಲು ತೊಂದರೆ ಬಂದಾಗ ಪುನಃ ಅವರಿಗೆ ಫೋನು ಹಚ್ಚಿ ವಿಚಾರಿಸಿದಾಗ, ಅವರು ತಮ್ಮ ಚಿತ್ರಗಳಿಗೆ ಚೌಕಟ್ಟು ಹಚ್ಚಿಸುವನ ಬಳಿ ಕೊಡುವಂತೆ ಹೇಳಿ ತಮ್ಮ ಡಿಸೆಂಬರ್ ೫ರಂದು ನಡೆಯುವ ಚಿತ್ರ ಪ್ರದರ್ಶನಕ್ಕೆ ಆಹ್ವಾನವನ್ನಿತ್ತರು. ಸರಿ, ಇದು ನನಗೆ ಬಂದ ಮೊದಲ ಆಹ್ವಾನ...ನೋಡೋಣ ಎಂದು ಕೊಂಡೆ...ಯಾಕೆಂದರೆ ಇಷ್ಟರವರೆಗೆ ಯಾವ ಗ್ಯಾಲರಿಗೂ ಕಾಲಿಡರಿರಲಿಲ್ಲವಾದುದರಿಂದ ಒಬ್ಬಳೇ ಹೋಗಲು ಮುಜುಗರವಾಗುತಿತ್ತು....ನಮ್ಮಲ್ಲಿ ಬೇರೆ ಯಾರಿಗೂ ಈ ಆರ್ಟ್ ಜಗತ್ತೆಂದರೆ ಅಷ್ಟೊಂದು ಇಷ್ಟವಿಲ್ಲವಾದುದರಿಂದ ನನಗೆ ಏನು ಮಾಡುವುದೆಂದು ತೋಚಿರಲಿಲ್ಲ.  ಸಂಜೆ ಉದ್ಘಾಟನೆ ಹೊತ್ತಿಗೆ ಹೋಗುವುದು ಖಂಡಿತ ಸಾಧ್ಯವಿರಲಿಲ್ಲ...ಅದೇ ಸಮಯದಲ್ಲಿ ನನ್ನ ತರಗತಿ ನಡೆಯು ನಡೆಯುದರಿಂದ.
     
              ಕೊನೆಗೂ ಮಂಗಳವಾರ ಬೆಳಿಗ್ಗೆ ಹೊರಟು ನಿಂತೆ...ಎಷ್ಟು ವೇಗವಾಗಿ ಕೆಲಸ ಮಾಡಿದರೂ ೧೧.೩೦ ಗಿಂತ ಮೊದಲು ಹೊರಡಲಾಗಲಿಲ್ಲ. ಪ್ರದರ್ಶನ ನಡೆಯಿತ್ತಿದ್ದದು ವೀಣಾ ಅವರದ್ದು..ಆದರೆ ನೋಡಲು ಹೋಗುತ್ತಿರುವ ನನ್ನೆದೆ ಢವ ಢವ ಎಂದು ಹೊಡೆದು ಕೊಳ್ಳುತಿತ್ತು. ಬಸ್ಸಿನಿಂದ ಇಳಿದು ಪ್ರಸಾದ್ ಆರ್ಟ್ ಗ್ಯಾಲರಿ ಹತ್ತಿರಬಂದಾಗ ಮೊದಲು ಕಂಡದ್ದು ಕೋಟಿ ಪ್ರಸಾದ್ ಆಳ್ವರನ್ನು..ನೋಡುತ್ತಲೇ ಮುಗುಳ್ನಗೆ ಚಿಮ್ಮಿಸಿದರು ಆಳ್ವರು. (ವರ್ಷದ ಹಿಂದೊಮ್ಮೆ ಅವರನ್ನು ಡ್ರೈವಿಂಗ್ ಕಲಿಯಬೇಕೆಂದು ವಿಚಾರಿಸಲು ಬಂದಿದ್ದಾಗ ಭೇಟಿಯಾಗಿದ್ದೆ..ಮಾತು ಮಾತಲ್ಲಿ ನಾನು ಸಹ ಕಲಿತದ್ದು ಅವರದೇ ಗುರುಗಳಾದ ಬಿ ಜಿ ಮೊಹಮ್ಮದ್‌ರಲ್ಲಿ ಎಂದು ಹೇಳ್ಕೊಂಡಿದ್ದೆ....ಮುಂದೆ ವಾಹನ ಕಲಿಯುವ ಹುರುಪು ಕಮರಿತು..ಹಾಗಾಗಿ ಮತ್ತೆ ಅವರನ್ನು ಭೇಟಿ ಸಹ ಆಗಿರಲಿಲ್ಲ...ಆದರೂ ಅವರು ಮುಖ ಪರಿಚಯವಿದ್ದ ಕಾರಣ ಮುಗುಳ್ನಕ್ಕರು)  ಸರಿ, ಒಳ್ಳೆ ಶಕುನ ಎಂದು ಕೊಂಡು ನಿಧಾನವಾಗಿ ಗ್ಯಾಲರಿಯಲ್ಲಿ ಕಾಲಿಟ್ಟೆ...ವೀಣಾ ಅವರ ಮುಖ ಅರಳಿತು...ಎದ್ದು ಕೈ ನೀಡಿ ಸ್ವಾಗತಿಸಿದರು....ಚಿತ್ರಗಳನ್ನು ನೋಡಲು ಹೋಗು...ಸ್ವಲ್ಪ ಹೊತ್ತಲ್ಲೇ ಬಂದು ಸೇರುವೆ ಎಂದು ಸೂಚಿಸಿದರು.  ಢವಢವಿಸುವ ಎದೆ ಶಾಂತವಾಗಿತ್ತು..ನಿಧಾನವಾಗಿ ಚಿತ್ರಗಳ ಸೌಂದರ್ಯವನ್ನು ಆಸ್ವಾದಿಸುತ್ತಾ ಆನಂದ ಪಡುತ್ತಿದ್ದೆ. ಅವರ ಒಂದು ಚಿತ್ರ ಹೃದಯವನ್ನು ತಟ್ಟಿತು....ಕಾಲ ಚಕ್ರ ಮಧ್ಯದಲ್ಲಿ ಸುತ್ತುತ್ತಿದೆ ಒಂದು ತುದಿಯಲ್ಲಿ ಕಣ್ಣಲ್ಲಿ ನೀರು ತೊಟ್ಟಕ್ಕುತ್ತಿರುವ ಬಾಲೆ ಇನ್ನೊಂದು ತುದಿಯಲ್ಲಿ ಯಮದೂತರ ಆಗಮನಕ್ಕಾಗಿ ಕಾದಿರುವ ಹಣ್ಣು ಹಣ್ಣು ಮುದುಕಿ!  ಈ ಚಿತ್ರವು ಹೆಣ್ಣು ಮಕ್ಕಳ ಕಷ್ಟ ಕಾರ್ಪಣ್ಯವನ್ನು ಹೇಗೆ ಹಿಡಿದಿಟ್ಟು ಕೊಂಡಿದೆಯಲ್ಲಾ ಅಂದು ಕೊಂಡೆ! ಸ್ವಲ್ಪ ಹೊತ್ತಲ್ಲೇ ವೀಣಾ ಅವರು ಬಂದು ಕೂಡಿಕೊಂಡರು....ನನ್ನ ಮನದಲ್ಲಿದ್ದುದನ್ನು ಅವರಿಗೆ ಹೇಳಿದೆ. ಅವರು ಆ ಚಿತ್ರ ಅವರಿಗೂ ಕೊಟ್ಟ ಸಂತೃಪ್ತಿ  ಹೇಳಿ...ಇನ್ನೂ ಅದರಲ್ಲಿ ಕೆಲಸ ಬಾಕಿಯಿದೆ ಅಂದರು. ಅಲ್ಲಿಂದ ನಮ್ಮ ಮಾತು ಕತೆ ಕಾವಿ ಕಲೆಯ ಬಗ್ಗೆ ತಿರುಗಿತು....ಆ ಬಗ್ಗೆಯೂ ಹೇಳಿಕೊಂಡರು. ಹೊನ್ನಾವರದಲ್ಲಿರುವ ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನದ ಗೋಡೆಗಳಲ್ಲಿರುವ ಈ ಉಬ್ಬು ಚಿತ್ರಗಳ ಬಗ್ಗೆ ಹೇಳಿದರು. ದೇವಸ್ಥಾನದ ನವೀಕರಣ ಮಾಡುವ ಯೋಜನೆಯಲ್ಲಿ ನಾವು ಹಲವಾರು ಶತಮಾನಗಳ ಹಿಂದಿನ ಕಲೆಯಿಂದ ಕೊಂಡಿಗಳನ್ನು ಕಳಚಿಕೊಳ್ಳುತ್ತಿರುವ ಬಗ್ಗೆ ವಿಷಾದ ವ್ಯಕ್ತ ಪಡಿಸಿದರು. ಅದರ ಪುನರುತ್ತಾನಕ್ಕಾಗಿ ತಾವು ದೇವಸ್ಥಾನದ ಆವರಣದಲ್ಲಿರುವ ಈ ಉಬ್ಬು ಚಿತ್ರಗಳ ಫೋಟೋ ತೆಗೆದು ಅದನ್ನು ಕ್ಯಾನ್ವಾಸಿನಲ್ಲಿ ಪುನಃ ರೂಪಿಸಿ ಜನರ ಗಮನ ಸೆಳೆಯುವ ಪ್ರಯತ್ನಕ್ಕೆ ತೊಡಗಿರುವುದನ್ನು ತಿಳಿಸಿದರು.  ನಾನು ಬರುವಾಗಲೇ ಈ ನನ್ನ ಮೊದಲ ಗ್ಯಾಲರಿಯ ಭೇಟಿಯ ಬಗ್ಗೆ ಬ್ಲಾಗಿನಲ್ಲಿ ಬರೆಯಬೇಕೆಂದುಕೊಂಡಿದ್ದೆ..ಅದಕ್ಕಾಗಿ ಫೋಟೋ ತೆಗೆಯಲು ಹಿಂಜರಿಕೆಯಿಂದಲೇ ವೀಣಾ ಅನುಮತಿ ಕೇಳಿದೆ....ಬಹಳ ಸಂತೋಷದಿಂದಲೇ ಒಪ್ಪಿದರು. ಕಲಾವಿದರೆಂದರೆ ಅವರು ನಮ್ಮಂತಹ ಸಾಮಾನ್ಯರ ಜೊತೆಯಲ್ಲಿ ಬೆರೆಯುವುದಿಲ್ಲವೆಂದು ಅಂದುಕೊಂಡ ನನಗೆ ಇವರ ನಡವಳಿಕೆ ಬಹಳನೇ ಆಶ್ಚರ್ಯ ಆನಂದ ತಂದಿತು. ಅವರ ಬಯೋ ಡಾಟವೂ ಬೇಕೆಂದು ಹೇಳಿ ದೊಡ್ಡ ಸಂದರ್ಶನ ನಡೆಸುವವಳಂತೆ ಎಲ್ಲವನ್ನೂ ಕೇಳಿಕೊಂಡು ಬರೆದುಕೊಂಡೆ. ಇಷ್ಟೆಲ್ಲಾ ಆದ ನಂತರ ನನ್ನ ಗಮನ ಅಲ್ಲಿದ್ದ ಇಬ್ಬರು ಮಹನೀಯರ ಕಡೆ ತಿರುಗಿತು. ನೋಡಿದರೆ ಪರಿಚಿತರಂತೆ ತೋರುತ್ತಿದ್ದರು..ಇವರು ಕುದ್ರೋಳಿ ಗಣೇಶರಂತಿದ್ದಾರಲ್ಲವೇ ಎಂದು ...ಎರಡು ಮೂರು ಸಲ ಆಲೋಚಿಸುತ್ತಲೇ ನೀವು....ಗ...ಣೇಶ...ಕುದ್ರೋಳಿ....ಎಂದು ತಡವಡಿಸುತ್ತಲೇ ಅವರತ್ತ ನೋಡಿದಾಗ...ಅವರು ನಸುನಗುತ್ತಲೇ ಹೌದು ಅಂದರು. ಅಯ್ಯೋ ಇವರು ನನ್ನೊಂದಿಗೆ ಮಾತನಾಡುವುದು ಕನಸಾ ನನಸಾ? ಎಂದು ನನ್ನಲ್ಲೇ ಬಡಬಡಿಸಿದೆ.  ಸರಾಗವಾಗಿ ನನ್ನನ್ನು ತಮ್ಮ ಮಾತುಕತೆಯಲ್ಲಿ ಸೇರಿಸಿಕೊಂಡರು ಅಲ್ಲದೆ ತಮ್ಮ ಜೊತೆಯಲ್ಲಿ ಫೊಟೋ ತೆಗೆಯಲು ಅನುಮತಿ ಕೊಟ್ಟರು ಮಾತ್ರವಲ್ಲದೆ, ತಾವೇ ವೀಣಾ ಮತ್ತು ನಾನು ಜೊತೆಯಲ್ಲಿ ನಿಂತ ಚಿತ್ರವನ್ನೂ ತೆಗೆದರು....ಮೊದಲೇ ಹೇಳಿದಂತೆ ಮತ್ತೊಬ್ಬರೂ ಅಲ್ಲಿದರು...ಈಗ ನನಗೆ ಬಹಳ ಧೈರ್ಯ ಬಂದಿತ್ತು. ಅವರನ್ನು ತಾವು ಸಹ ಕಲಾವಿದರೇ ಎಂದು ಪ್ರಶ್ನಿಸಿದೆ...ನಗುತ್ತಲೇ ಪ್ರಶಾಂತ್ ನಾನು...ನಿಮ್ಮ ಪರಿಚಯ ನನಗೆ ಚೆನ್ನಾಗಿ ಇದೆ....ನೀವು ಚಿಕ್ಕಂದಿನಿಂದ ನನ್ನನ್ನು ನೋಡಿದ್ದಿರಿ ಎಂದು ನನ್ನ ಹಳೆಯ ದಿನಗಳ ನೆನಪು ಕೊಟ್ಟ ಪ್ರಶಾಂತ್!  ಒಟ್ಟಾರೆ ಡಿಸೆಂಬರ್ ೫ ನನ್ನ ಬಾಳಿನಲ್ಲಿ ಮತ್ತೊಂದು ತಿರುವಿಗೆ ನಾಂದಿ ಹಾಡಿತು. ವೀಣಾ ನನ್ನನ್ನು ಕಲಾವಿದರ ಕೂಟದಲ್ಲಿ ಸೇರಿಸಿ ಕೊಂಡರು ಮಾತ್ರವಲ್ಲದೆ ಡಿಸೆಂಬರ್ ೧೮ರಂದು ನಡೆಯುವ ಕಲಾಮೇಳದಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಿದರು.












     ವೀಣಾ ಅವರು ಒಂದು ನಮ್ಮ ನಾಡಿನ ಅಪ್ರತಿಮ ಚಿತ್ರಕಲಾವಿದೆ ಖಂಡಿತ ಹೌದು...ಅದಕ್ಕಿಂತಲೂ ಅವರೊಳಗೆ ಇರುವ ಒಂದು ಅತ್ಯುತ್ತಮ ಚೇತನ, ಆತ್ಮವನ್ನು ಅನುಭವಿಸಿದೆ.  ಅವರು ಮಹಿಳೆಯರು ಜೀವನದಲ್ಲಿ ಪ್ರತಿಯೊಂದು ಘಟ್ಟದಲ್ಲಿ ಪುರುಷನನ್ನೇ ಅವಲಂಬಿಸಿ ನಡೆಸುವ ಜೀವನದ ಬಗ್ಗೆ ಸ್ಪಂದಿಸುವ ರೀತಿ ನಿಜಕ್ಕೂ ಆಶ್ಚರ್ಯಕರವಾಗಿತ್ತು.  ಮಹಿಳೆಯರ ಈ ರೀತಿಯ ಅವಲಂಬಿತ ಜೀವನ, ಪುರುಷರ ದಬ್ಬಾಳಿಕೆ ಇದರ ಬಗ್ಗೆ ಅವರ ಕಳಕಳಿ ಚಿತ್ರದಲ್ಲಿಯೂ, ಅವರ ಮಾತಿನಲ್ಲಿಯೂ ವ್ಯಕ್ತವಾಗುತಿತ್ತು.  ಆದರೆ ಪುರುಷ ಪ್ರಧಾನ ಸಮಾಜದಲ್ಲಿ ಈ ಧ್ವನಿಗಳು ಅಡಗಿ ಹೋಗುತ್ತವೆ...




      ವೀಣಾ ಶ್ರೀನಿವಾಸ್ ಅವರ ಕಿರು ಪರಿಚಯ!
 ತಂದೆ ಯು. ಜೆ. ಕಾಮತ್ ಅವರು ನಿವೃತ್ತ ಬ್ಯಾಂಕ್ ಅಧಿಕಾರಿ. ತಾಯಿ ಸಖು ಕಾಮತ್...ಸರಳ, ಸದ್ಗುಣಗಳ ದಂಪತಿಗಳ ಸಂತಾನವಾದ ಇವರು ಸ್ವಾಭಾವಿಕವಾಗಿಯೇ ಈ ಉದಾತ್ತ ಗುಣಗಳನ್ನು ತಮ್ಮ ತಂದೆ ತಾಯಿಯರಿಂದ ಎರವು ಪಡಕೊಂಡಿದ್ದಾರೆಂದೆನಿಸುತ್ತದೆ. ತಂದೆಗೆ ಬ್ಯಾಂಕ್‍ನಲ್ಲಿ ಕೆಲಸವಿದ್ದುದರಿಂದ ಸಹಜವಾಗಿಯೇ  ವೀಣಾ ಅವರು ತಮ್ಮ ವಿದ್ಯಾಭ್ಯಾಸವನ್ನು ಬೇರೆ ಬೇರೆ ಊರುಗಳಲ್ಲಿ ಪಡಕೊಂಡರು. ಪ್ರಾಥಮಿಕ ಕಲಿಕೆ ದೆಹಲಿಯ ಕನ್ನಡ ಶಾಲೆಯಲ್ಲಿ ನಡೆಯಿತೆಂದು ಅಭಿಮಾನದಿಂದ ಹೇಳ್ಕೊಂಡರು. ಹತ್ತನೇ ತರಗತಿ ಉಡುಪಿಯಲ್ಲಿ, ೧೧,೧೨ ನ್ನು ಪುನಃ ದೆಹಲಿಯಲ್ಲಿ ಮಾಡಿದರು. ಬೆಂಗಳೂರಿನಲ್ಲಿ ವಿಜ್ಞಾನ ವಿಷಯದಲ್ಲಿ ಪದವಿ ಪಡೆಯುತ್ತಿರುವಾಗಲೇ ವಿವಾಹ ನಡೆಯಿತೆಂದರು. ಈ ಮಧ್ಯೆ ನನಗೆ ಅವರು ತಮ್ಮ ಬಾಲ್ಯದಿಂದಲೇ ಚಿತ್ರ ಕಲೆ ಕಲಿಯುತ್ತಿದ್ದರೇನೋ ಎಂದು ಕುತೂಹಲ..೯ನೇತರಗತಿಯಲ್ಲಿದ್ದಾಗ ಸ್ವಲ್ಪ ಸಮಯ ಕಲಿತ ಮಾಹಿತಿ ಕೊಟ್ಟರು. ಸರಿ, ಹಾಗಾದರೆ ಇವರು ಯಾವಾಗ ನುರಿತ ಕಲಾವಿದೆಯಾಗಿ ರೂಪುಗೊಂಡರು ಎಂದು ನನ್ನ ಪ್ರಶ್ನೆ!  ಅವರ ಉತ್ತರ ನನ್ನನ್ನು ಅಚ್ಚರಿಗೆ ನೂಕಿತು. ಮದುವೆಯಾದ ಮೇಲೆ ತಮ್ಮ ಮಾವನರು ಎಂ ಆರ್ ಪಾವಂಜೆ ಬಳಿ ಕಳುಹಿಸಿದರು!!!! ಮದುವೆಯಾದ ಮೇಲೆ ನನ್ನ ಕಲಾಜೀವನಕ್ಕೆ ವಿರಾಮ ಚಿನ್ಹೆ! ಇವರ ಕಲಾಜೀವನಕ್ಕೆ ನಾಂದಿ. ವಿಶೇಷವೆಂದರೆ ಇವೆರಡೂ ೧೯೯೦-೯೧ರಲ್ಲಿ ನಡೆದದ್ದು...ನನ್ನ ವಿವಾಹ ’೯೦ರಲ್ಲಿ ನಡೆಯಿತು..ಅವರದು ’೯೧ರಲ್ಲಿ...ಹೋಗಲಿ, ಅವರವರು ಪಡಕೊಂಡು ಬಂದದ್ದು! 
    ವೀಣಾ ಅವರು ತಮ್ಮ ಅತ್ತೆ, ಮಾವ, ಪತಿ ಶ್ರೀನಿವಾಸ್ ಅವರ ಪ್ರೋತ್ಸಾಹದಿಂದ ಉತ್ತೇಜಿತರಾಗಿ ಕಲೆಯನ್ನು ಮತ್ತಷ್ಟು ಶ್ರೀಮಂತ ಮಾಡತೊಡಗುವುದರಲ್ಲಿ ಮಗ್ನರಾಗಿದ್ದಾರೆ. ಇವರ ಮಗಳು ತಪಸ್ಯಾತನ್ನ ತಾಯಿಯ ಹೆಜ್ಜೆಯಲ್ಲೇ ನಡೆಯುತ್ತಿದ್ದಾಳೆ ಅನ್ನುವುದು ಬಹಳ ಸಂತೋಷದ ಸಂಗತಿ!

2 comments:

Aram said...

ವೀಣಾ ಶ್ರೀನಿವಾಸ್ ಅವರು ಕೊಂಕಣಿ ಎಂದು ತಿಳಿದು ಹೆಮ್ಮೆಯೆನಿಸಿತು.

ಅತ್ತೆ ಮಾವಂದಿರು supportive ಆಗಿರುವುದು ಕೊಂಕಣಿ ಜನರಲ್ಲಿ ಸಾಮಾನ್ಯ.

Sheela Nayak said...

ರಾಮ್, ಧನ್ಯವಾದ! ಭಾಷೆ ಯಾವುದೇ ಇರಲಿ...ನಯ ವಿನಯವೇ ಮಾನವನ ವ್ಯಕ್ತಿತ್ವಕ್ಕೆ ಮೆರುಗು. ಆ ಗುಣದಿಂದಲೇ ವೀಣಾ ಅವರ ಕಲೆಗೆ ಮತ್ತಷ್ಟು ಮೆರುಗು ಬಂದದ್ದು. ಮನಸಿನಲ್ಲಿ ಕಲ್ಮಷವಿಲ್ಲದ, ಸ್ವಾರ್ಥವಿಲ್ಲದ ಇವರು ನನಗೆ ಒಯಸಿಸ್ಸ್ ಅಂತೆ ಕಂಡು ಬಂದರು.

ಅತ್ತೆ, ಮಾವಂದಿರು supportive ಆಗಿರುವುದು ಕೊಂಕಣಿಯವರಲ್ಲಿ ಸಾಮಾನ್ಯ!!! ಬಹುಶಃ ಇದು ನಿಮ್ಮ ಅನುಭವ ಕಾಣುತ್ತದೆ.

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...