ನನ್ನ ಮನಸ್ಸು

28 April, 2012

ಕಾಲನ ಆಟದ ಪಗಡೆಗಳು ನಾವು, ನಮಗಿಹುದೆಲ್ಲಿ ಸ್ವಾತಂತ್ರ್ಯ?


ಮುನಿಸೇ ನಲ್ಲ!
ನೀ ಇಲ್ಲ ಹೇಳಿದರೂ
ನಂಬಲಾರೆನಲ್ಲ!
ಕಾಣುತ್ತಿರುವೆ ದಟ್ಟವಾದ ಕರಿ
ಛಾಯೆಯ ಸುತ್ತಮುತ್ತಲ್ಲೆಲ್ಲ!

ಬಲ್ಲೆ ನಾ, ನನ್ನ ಮಾತು ಹೆಚ್ಚಾಯಿತೆಂದು;
ತಂದಿತದು ನಿನಗೆ, ಕಹಿ ನೆನಪುಗಳೆಂದು;
ಅದರರಿವಾದಾಗ,
ಮಾತು ಜಾರಿತ್ತು; ಮುತ್ತು ಒಡೆದಿತ್ತು!
ಏನ ಮಾಡಲಿ,
ವಿಧಿಯು  ಆಟ  ಆಡಿಸಿತ್ತು!

ಹಮ್ಮಿಲ್ಲ ಎನಗೆ, ಇರಲಿ ಕ್ಷಮೆಯು.
ಏನ ಮಾಡಲಿ ಹೇಳು?
ಹೇಗೆ ಮೆಚ್ಚಿಸಲಿ ಹೇಳು?
ಮಂಕಾಗಿಹುದು ಬುದ್ಧಿ,
ಬತ್ತಿಹುದು ಶಕ್ತಿ ತನುವಿನಲಿ,
ತಿಳಿದಿದೆ ತಾನೆ ನಿನಗೆ
ನೀನೇ ನನ್ನ ಸರ್ವಸ್ವವೆಂದು
ಉಳಿಯುವೆನೆ ನಿನ್ನಗಲಿ ಇಂದು!

ಧರ್ಮ ಕರ್ಮವೆಂದೆಲ್ಲಾ ಹೇಳುತ್ತಾ
ಭೌತಿಕವ ಬಿಟ್ಟು, 
ಆಧ್ಯಾತ್ಮದತ್ತ ಹೆಜ್ಜೆ ಹಾಕಲು
ಅಣಿಯಾಗುತ್ತಿದ್ದ ನಾನು,
ನಿನ್ನ ಹೃದಯದ ಕರೆಗೆ ಓಗೊಟ್ಟು
ಹಿಂದಿರುಗಿ ಬಂದೆ ನೋಡು!


ಆಸೆಗಳ ಗೆದ್ದಿಹೆ
ಎಂದು ಮೆರೆಯುತ್ತಿದ್ದೆ!
ಬರಿದಾದ ಅಂತರಂಗದಲ್ಲಿ
ನಿನ್ನ ಪ್ರೀತಿಯು ಚಿಮ್ಮಿಸಿತು
ಆನಂದದ ಕಾರಂಜಿಯನ್ನು!
ನನ್ನೊಳಗೆ ಸುಪ್ತವಾಗಿದ್ದ
ಭಾವನೆಗಳ ಬಡಿದೆಬ್ಬಿಸಿದೆ!
ಬರಡಾದ ಬದುಕಿಗೊಂದು
ಆಸರೆ ಕೊಟ್ಟೆ!


ಇನ್ನೇನು, ಮುಂದೇನು
ಏನೂ ತಿಳಿಯೆನು!
ಅರಿಯುವನೇ ನನ್ನಿನಿಯ
ನನ್ನೀ ಮನವ!
ಕಾಲನ ಆಟದ
ಪಗಡೆಗಳು ನಾವು!
ನಮಗಿಹುದೆಲ್ಲಿ ಸ್ವಾತಂತ್ರ್ಯ?
ಬಾಗಲೇ ಬೇಕಲ್ಲವೆ
ಅವನ ತಂತ್ರಕೆ!

*************


12 April, 2012

ಅಗ್ನಿಪರೀಕ್ಷೆ!


ಗೆಲ್ಲಬಲ್ಲೆನೇ ನಾ
ಈ ಅಗ್ನಿಪರೀಕ್ಷೆಯನ್ನು?
ಬೂದಿಯಾಗದೆ ಹೊರಬರುವೆನೆ
ನನ್ನ ರಾಮನ ಸೀತೆಯಾಗಿ?

11 April, 2012

ನೀಲುಗಳು -3


ಮೌನವೂ, ಏಕಾಂತವೂ
ಬಹಳ ಆಪ್ತವಾಗಿದ್ದವು ಇಲ್ಲಿಯ ತನಕ!
ಇಂದೇನಾಗಿದೆ ಎನಗೆ?
ಸಹಿಸಲಾಗುತ್ತಿಲ್ಲವೆ! 
ಮೌನವನ್ನೂ, ಏಕಾಂತವನ್ನೂ!

*******************


ಮೊಬೈಲ್ ರಿಂಗಿಣಿಸಿದೊಡೆ 
ಪಿತ್ತ ನೆತ್ತಿಗೇರುತಿತ್ತು,
ಕಿರಿಕಿರಿ ಅನಿಸುತಿತ್ತು!
ಉದ್ದುದ್ದ ಮಾತಾಡಿದೊಡನೆ
ಯಾಕಪ್ಪಾ ಎತ್ತಿದೆನೋ ಅನಿಸುತಿತ್ತು!
ಮೆಸೇಜುಗಳ ಬರುವಿಕೆಯೇ ಬೇಡವೆನಿಸುತಿತ್ತು!
ಆದರೆ ಇಂದು ಕಾದು ಸಾಕಾಗಿದೆ,
ಕಾಲೂ ಇಲ್ಲ, ಮೆಸೇಜೂ ಇಲ್ಲ!

*******************

10 April, 2012

ದಾರಿ ತೋರೆ ಸಖಿ!



ಹೇಗೆ ಕರೆಯಲೆ
ಅವನ, ಹೇಳೇ ಹೇಗೆಂದು?
ನಾ ತಪ್ಪಿರುವೆನೆ,
ಏಕವಚನದಲಿ ಕರೆದು,
ನನ್ನ ಮಿತಿಯ ಮರೆತು.

ಅವನ ಅಭಿಮಾನಿಗಳ 
ಪ್ರೇಮದ ಹೊಳೆ 
ನೋಡಿ ದಂಗಾಗಿರುವೆ!
ನನ್ನ ಅದೃಷ್ಟವ ನೋಡಿ 
ಹೆಮ್ಮೆ ಪಡೆದಿರುವೆ!

ಎಲ್ಲರ ಮನವ 
ಗೆದ್ದಿರುವವನ ಹೃದಯದಲಿ 
ನನ್ನ  ನಿವಾಸ!
ತಿಳಿದಿದೆಯೆ ಇದರ ಮರ್ಮ?
 ಹಿಂದಿನ ಜನುಮಗಳ ಸುಕರ್ಮ!

ಕವಿಯ ಸಹವಾಸದಿಂದ
ನಾನಾಗಿರುವೆ ಕವಯತ್ರಿ!
ಯಾವ ಯತ್ನವಿಲ್ಲದೆ 
ಮೂಡುತ್ತಿವೆ ಪದಪುಂಜಗಳು 
ಬಿಳಿ ಹಾಳೆಯಲಿ!

ಏನಿರಬಹುದು ಇದರ ಗುಟ್ಟು?
ಮಾಡಲು ಸಾಧ್ಯವೇ ರಟ್ಟು?

ನನ್ನ ಬುದ್ಧಿಗಿಷ್ಟು ಮಣ್ಣು!
ಇತ್ತೆನಲ್ಲವೆ ಅವರ 
ಹೃದಯಕ್ಕಿಂದು ನೋವು!
ಪಶ್ಚಾತಾಪದ ಕಾವಿನಲಿ
ಬೆಂದು ನರಳಿಹೆ ನಾನು!


ಮಾತನಾಡಿದರೆ ನೋವು 
ಮರುಕಳಿಸದೆ ಆದರೂ 
ನಾನೇನು ಮಾಡಲೆ
ಹೇಳದಿರೆ ಕೊರಗುತಾ
ಈ ಇಹವ ನಾನಳಿವೆ!

ಭಾವುಕಳೆಂದು ಹೇಳುತ್ತಾ
ನಾನು ಹೇಗೆ ತಾನೆ
ನೋವನಿತ್ತೆ  ಆ ಮೃದು 
ಹೃದಯಕೆ ಅದ 
ತಣಿಸಲು ಶಕ್ಯಳೇ ನಾ!

ಹೇಳೆ ಸಖಿ, ಅವನ 
ಹೇಗೆ ಸಂಭೋದಿಸಲೆ?
ಹೇಗೆ ಕರಿಯಲೆ?
ಮಂಕಾಗಿಹುವುದು 
ಮತಿಯೆನ್ನ ದಾರಿ 
ತೋರೆ ಸಖಿ!

ಶ್ರಾವಣ ವರ್ಷವಷ್ಟೇ, ತೃಷೆಯ ಇಂಗಿಸಬಹುದಷ್ಟೇ!


ಅತ್ತ ಕರಿಮೋಡವು ಕರಗಿ 
ಬುವಿಯ ಒಂದಿಷ್ಟು ಒದ್ದೆ ಮಾಡಿತ್ತು!
ಇತ್ತ ನಲ್ಲನ ಮುನಿಸೂ ಕರಗಿ
ನಲ್ಲೆಗೆ ಪ್ರೀತಿಯ ಸಿಂಚನ ಸಿಕ್ಕಿತ್ತು!

ಒದ್ದೆಯಾದ ಮಣ್ಣ ಕಂಪು 
ಆಘ್ರಾಣಿಸಲು ಬಂದವಳೆಡೆ,
ವಸುಂಧರೆ ಪ್ರಶ್ನೆಯೊಂದನ್ನು
ಬಾಣದಂತೆ ತೂರಿದಳು, 
ತೃಪ್ತಳೇ ನೀನು?

ಉತ್ತರಿಸಲು ಚಡಪಡಿಸಿದವಳಿಗಂದಳು,
ಗೊತ್ತು ಹೆಣ್ಣೇ! ನನಗದರರಿವುಂಟು,
ಧೋ ಎಂದು ಸುರಿಯುವ 
ಶ್ರಾವಣ ವರ್ಷವಷ್ಟೇ, 
ತೃಷೆಯ ಇಂಗಿಸಬಹುದಷ್ಟೇ!
ನಿನಗೂ ಅಷ್ಟೇ! 

09 April, 2012

ಮತ್ತೆ ತರುವನು ಹರುಷವ!!!


ಮಾತನಾಡುವ ಹುಮ್ಮಸ್ಸಿನಲ್ಲಿ
ಏನೇನೋ ಆಡಿಬಿಟ್ಟೆ, ನೋಯಿಸಿಬಿಟ್ಟೆ!
ಮಾತುಗಳೇ ಚೂರಿಯಾಗಿ ಹೃದಯಗಳೆರಡು 
ನರಳಿದವು ಗಾಯದಿಂದ!

ಇಷ್ಟೆಲ್ಲಾ ಆಡಿಸಿದ ಮೇಲೂ,
ಆ ಸೂತ್ರಧಾರಿ ಮೇಲೆ ವಿಶ್ವಾಸ ಬಿಡುವೆನೇ ನಾ!
ಮತ್ತೆ ಜೋಡಿಸುವ ಹೃದಯಗಳೆರಡನು,
ಬಾಳಿಗೆ ತರುವನು ಹರುಷವ!

08 April, 2012

ಹುಣ್ಣಿಮೆ ಚಂದಿರನು ನನ್ನ ಕಾವಲು ಕಾಯುವನು!


ವರುಷಗಳಿಂದ ನಡೆದಿದೆ
ಮುಸುಕಿನ ಗುದ್ದಾಟ,
ಉರಿ ಮುಖದ ಭಾಸ್ಕರನ ಮತ್ತು ನನ್ನ ನಡುವೆ!
ಆದರೆ, ಇತ್ತೀಚೆಗೆ ಅದ್ಯಾಕೋ
ಉರಿಕಿರಣಗಳ ಬಾಣಗಳಿಂದ
ಘಾಸಿಮಾಡಲು ಯತ್ನನಡೆಸಿದ್ದಾನೆ.
ಅವನಿಗೆ ಅರಿವೇ ಇಲ್ಲವೇ
ಹುಣ್ಣಿಮೆ ಚಂದಿರನು  ಕಾವಲು ಕಾಯುವನೆಂದು!

ಇನ್ನಾದರೂ ತಿಳಿವಳಿಕೆ ಬಂದಿತೇ ಜನರಿಗೆ!



ಸುಡುವ ಉರಿಬಿಸಿಲು ತಲೆಯ ಮೇಲೆ,
ನೀರಿನ ಬರದಿಂದ 
ಜನರು ತತ್ತರಿಸುತ್ತಿರುವರು ಕೆಳಗೆ!

ಟ್ಯಾಂಕರಗಳಲ್ಲಿ ನೀರಿನ ವ್ಯಾಪಾರ 
ಸಾಗುತ್ತಿರುವುದು ಭರದಿಂದ!
ಬಾವಿಯ ನೀರಿಗಾಗಿ 
ನಡೆಯುತ್ತಿರುವುದು ದಾಯಾದಿಗಳ ಹೋರಾಟ!
ಎತ್ತರೆತ್ತರ ಮಹಡಿಗಳ ಒಡೆಯರು 
ಭುವಿಯ ಒಡಲ ಬಸೆದು ಖಾಲಿ
ಮಾಡುತ್ತಿರುವರು ಅಂತರ್ಜಲದ  ಒಸರನ್ನು!

ಮಳೆರಾಯನು ದೂರದಲ್ಲೆಲ್ಲೋ 
ಒಂದಿಷ್ಟು ಸುರಿದು ಮಾಯವಾಗುವನು!
ಇನ್ನಾದರೂ ತಿಳಿವಳಿಕೆ ಬಂದಿತೇ ನಮಗೆ!
ಮಾಡದೇ ಇರಲು ಜಲದ ಪೋಲು!

04 April, 2012

ಒಂದಷ್ಟು ಪ್ರಶ್ನೆ...ನಲ್ಲನಲಿ!


ಯಾಕೆ ನಲ್ಲ,
ಯಾಕೆಂದು ಉತ್ತರಿಸು!
ಅದ್ಯಾಕೆ ಈ ಪರಿಯ ಪರೀಕ್ಷೆ,
ಮುಗಿಯುವುದೇ ಇಲ್ಲವೆ,
ಪ್ರೀತಿಗೆ ಅದೆಷ್ಟು
ಅಡ್ಡಿ ಆತಂಕಗಳು!
ಅಲೆಅಲೆಯಾಗಿ ಎದ್ದು,
ಮತ್ತೆ ಸುನಾಮಿಯ ರೂಪ ತಾಳುವ
ನನ್ನ ಭಾವಗಳ
ನಿಯಂತ್ರಿಸಲಿ ಹೇಗೆ!
ಹೇಗೆ ನಲ್ಲ,
ಹೇಗೆಂದು ಉತ್ತರಿಸು!
ಪ್ರತಿಯೊಂದು ಬಡಿತ
ಮಿಡಿತವೂ ಒಯ್ಯುತಿದೆ
ನನ್ನ ಎದೆಯ ಸಂದೇಶವ,
ಕೇಳಿಸದು ಸುತ್ತ ಮುತ್ತ
ಇರುವವರಿಗೆ,
ಕೇಳು ನಲ್ಲ,
ಕೇಳಿತೆಂದು ಉತ್ತರಿಸು!

ಸಂಬಂಧಗಳ ಎಲ್ಲೆ ದಾಟಿ ಬಂಧಿಸಲ್ಪಡುವ ಬಾಂಧವ್ಯ!


ವಿಚಿತ್ರವೆನಿಸುವುದು,
ದಾರವಿಲ್ಲದೆ ಬಂಧಿಸಲ್ಪಟ್ಟಿದ್ದೇವೆ,
ವಿವಿಧ ಬಾಂಧವ್ಯಗಳಲಿ!
ಅಪ್ಪ-ಅಮ್ಮ, ಅಕ್ಕ-ತಮ್ಮ,
ಅಣ್ಣ-ತಂಗಿ, ಗಂಡ-ಹೆಂಡತಿ,
ಇನ್ನೂ ಏನೆಲ್ಲಾ....
ಜೋಡಿಸುತ್ತಲೇ ಸಾಗುವುದು ನಮ್ಮ ಬದುಕು!
ಎಲ್ಲರೂ ನಮ್ಮವರು, ನಮ್ಮವರು
ಸಾರುವೆವು ಹೆಮ್ಮೆಯಲಿ!
ಆದರೆ ಬಾಂಧವ್ಯದ ಬಂಧನವಿಲ್ಲದ
ಹೃದಯವೊಂದು ನಮ್ಮೆದೆಯ
ತಂತಿಯ ಮೀಟಿದಾಗ,
ನೋವಾಗುವುದೇಕೆ?
ಹರುಷವಾಗುವುದೇಕೆ?

ಪ್ರಶ್ನೆ?


ಹರೆಯದ ಗಾಳಿ ಬೀಸಿದಾಗ,
ಆಗುವಳು ಪ್ರತಿಯೊಂದು ಹೆಣ್ಣು ಲೈಲಾ!
ಮಿಲಿಯನ್ ಡಾಲರ್ ಪ್ರಶ್ನೆಯೆಂದರೆ,
ಆಗಿರುವನೇ ಸೃಷ್ಟಿ, ಅವಳ ಮಜನೂ?

ಹಕ್ಕಿಯ ಹಾಡು!


ಹಕ್ಕಿಯೊಂದು ಆಗಸದತ್ತಲೇ 
ದಿಟ್ಟ ದೃಷ್ಟಿಯನ್ನಿಟ್ಟಿತ್ತು.
ಪಂಜರದ ಬಾಗಿಲು ತೆರೆದೇ ಇತ್ತು...
ಆದರೂ ಹಾರಲು ಯಾಕೊ ಒಲ್ಲೆಯೆನ್ನುತ್ತಿತ್ತು,
ನೋಡಿದರದರ ರೆಕ್ಕೆಯೇ ಕಟ್ಟಲ್ಪಟ್ಟಿತ್ತು!
***********************

ಸುಂದರ ಪಂಜರ,
ಮೃಷ್ಟಾನ ಭೋಜನ,
ಒಂದಷ್ಟು ಹೊತ್ತು ವಾಯು ವಿಹಾರ,
ಸುಖಕೆ ಎಲ್ಲೆಯುಂಟೇ,
ಆದರೆ, ತನ್ನಿಯನಿಂದ ಬೇರ್ಪಟ್ಟ
ಗಿಣಿಗೆ ಏನೂ ಬೇಡವಾಗಿದೆ!
***********************