ನನ್ನ ಮನಸ್ಸು

28 April, 2012

ಕಾಲನ ಆಟದ ಪಗಡೆಗಳು ನಾವು, ನಮಗಿಹುದೆಲ್ಲಿ ಸ್ವಾತಂತ್ರ್ಯ?


ಮುನಿಸೇ ನಲ್ಲ!
ನೀ ಇಲ್ಲ ಹೇಳಿದರೂ
ನಂಬಲಾರೆನಲ್ಲ!
ಕಾಣುತ್ತಿರುವೆ ದಟ್ಟವಾದ ಕರಿ
ಛಾಯೆಯ ಸುತ್ತಮುತ್ತಲ್ಲೆಲ್ಲ!

ಬಲ್ಲೆ ನಾ, ನನ್ನ ಮಾತು ಹೆಚ್ಚಾಯಿತೆಂದು;
ತಂದಿತದು ನಿನಗೆ, ಕಹಿ ನೆನಪುಗಳೆಂದು;
ಅದರರಿವಾದಾಗ,
ಮಾತು ಜಾರಿತ್ತು; ಮುತ್ತು ಒಡೆದಿತ್ತು!
ಏನ ಮಾಡಲಿ,
ವಿಧಿಯು  ಆಟ  ಆಡಿಸಿತ್ತು!

ಹಮ್ಮಿಲ್ಲ ಎನಗೆ, ಇರಲಿ ಕ್ಷಮೆಯು.
ಏನ ಮಾಡಲಿ ಹೇಳು?
ಹೇಗೆ ಮೆಚ್ಚಿಸಲಿ ಹೇಳು?
ಮಂಕಾಗಿಹುದು ಬುದ್ಧಿ,
ಬತ್ತಿಹುದು ಶಕ್ತಿ ತನುವಿನಲಿ,
ತಿಳಿದಿದೆ ತಾನೆ ನಿನಗೆ
ನೀನೇ ನನ್ನ ಸರ್ವಸ್ವವೆಂದು
ಉಳಿಯುವೆನೆ ನಿನ್ನಗಲಿ ಇಂದು!

ಧರ್ಮ ಕರ್ಮವೆಂದೆಲ್ಲಾ ಹೇಳುತ್ತಾ
ಭೌತಿಕವ ಬಿಟ್ಟು, 
ಆಧ್ಯಾತ್ಮದತ್ತ ಹೆಜ್ಜೆ ಹಾಕಲು
ಅಣಿಯಾಗುತ್ತಿದ್ದ ನಾನು,
ನಿನ್ನ ಹೃದಯದ ಕರೆಗೆ ಓಗೊಟ್ಟು
ಹಿಂದಿರುಗಿ ಬಂದೆ ನೋಡು!


ಆಸೆಗಳ ಗೆದ್ದಿಹೆ
ಎಂದು ಮೆರೆಯುತ್ತಿದ್ದೆ!
ಬರಿದಾದ ಅಂತರಂಗದಲ್ಲಿ
ನಿನ್ನ ಪ್ರೀತಿಯು ಚಿಮ್ಮಿಸಿತು
ಆನಂದದ ಕಾರಂಜಿಯನ್ನು!
ನನ್ನೊಳಗೆ ಸುಪ್ತವಾಗಿದ್ದ
ಭಾವನೆಗಳ ಬಡಿದೆಬ್ಬಿಸಿದೆ!
ಬರಡಾದ ಬದುಕಿಗೊಂದು
ಆಸರೆ ಕೊಟ್ಟೆ!


ಇನ್ನೇನು, ಮುಂದೇನು
ಏನೂ ತಿಳಿಯೆನು!
ಅರಿಯುವನೇ ನನ್ನಿನಿಯ
ನನ್ನೀ ಮನವ!
ಕಾಲನ ಆಟದ
ಪಗಡೆಗಳು ನಾವು!
ನಮಗಿಹುದೆಲ್ಲಿ ಸ್ವಾತಂತ್ರ್ಯ?
ಬಾಗಲೇ ಬೇಕಲ್ಲವೆ
ಅವನ ತಂತ್ರಕೆ!

*************


No comments:

Post a Comment