ನನ್ನ ಮನಸ್ಸು

21 January, 2014

ವಸಂತನ ಹಿಂದೆ ಸುಡುವ ವೈಶಾಖ.. !



ಒಲವೇ,

ಅರಿವಿರಲಿಲ್ಲವೋ ಅಥವಾ ಅರಿತೂ ಅರಿಯದಂತಿದ್ದೆನೋ
ನಿಯಮಗಳ ಕಠಿಣತೆಯ ಅಳತೆ ನನ್ನರಿವಿಗೆ ನಿಲುಕದಿರಲಿಲ್ಲವೋ
ಒಂದೂ ಅರಿಯೆನಾದರೂ ನೀ ನನ್ನ ತೊರೆಯಲಿಲ್ಲ ನಾ ಸೋತಾಗ
ಅಥವಾ ನನ್ನ ಶರಣಾಗತಿಯ ಭಾವಕೆ ನೀನೊಲಿದೆಯೋ
ಅಂತೂ ಅರಿವಿನ ಹಾದಿಗೆ ಅಡ್ಡಿ ಬರಲಿಲ್ಲ

ಒಮ್ಮೊಮ್ಮೆ ಬರೇ ಕತ್ತಲು..
ಮಗದೊಮ್ಮೆ ಕಣ್ಣು ಬಿಡಿಸಲೂ ಅಡ್ಡಿಯಾಗುವ ಬೆಳಕು
ಕುರುಡಿಯಂತೆ ತಡವಡಿಸಲೇಬೇಕಾಯಿತು ನೋಡು
ಅದೋ ವೀಣೆಯ ಝೇಂಕಾರ..
ಮುದಗೊಳ್ಳುವ ಮುನ್ನವೇ ಅಪ್ಪಳಿಸಿತು
ಗುಡುಗು ಸಿಡಿಲಿನ ಅಹಂಕಾರ..

ಅಯ್ಯೋ ವಿಧಿಯೇ, ಯಾಕೆನ್ನ ಕಿವುಡಿ ಮಾಡಲಿಲ್ಲ
ಕಲ್ಲು ಮುಳ್ಳುಗಳೆಡೆಯಲಿ ಎಡವಿ ಬಿದ್ದಾಗ ಎಬ್ಬಿಸಲಿಲ್ಲ
ಕುಹಕ ನಗೆಯನು ಕಂಡರೂ ನಾ ಬೆದರಲಿಲ್ಲ
ಕಪ್ಪು ನೆತ್ತರು ಹರಿದರೂ ಗಲ್ಲ ಇನ್ನೂ ಗುಲಾಬಿಯೇ
ಮನದಲಿನ್ನೂ ಅದೇ ಮೂರುತಿಯೇ,
ಒಲವಿನ ಭಾವವಿನ್ನೂ ಆವಿಯಾಗಲಿಲ್ಲ..

ನೀ ಕನಸುಗಳ ಬಿತ್ತಿ ಮತ್ತೆ ನೀನೇ ಬೆಂಕಿ ಹಚ್ಚಿದರೂ
ನಾ ನೋಡಿ ಬರೇ ನಸುನಗುವೆ ಕನಸುಗಳಿಗೆ ಬೆಲೆಯಿಲ್ಲವಲ್ಲ
ಹಗಲು-ರಾತ್ರಿಯಂತೆ ನೋವು-ನಲಿವು..
ಮತ್ತೆ ವಸಂತ ಬಂದರೂ ಅವನ್ಹಿಂದೆ ಸುಡುವ ವೈಶಾಖವೂ
ಬಂದು ಕಾಡುವುದು ಅರಿವಿದೆ ಈಗ ನನಗೆ!

1 comment:

  1. ಮತ್ತೆ ವಸಂತ ಬಂದರೂ ಅವನ್ಹಿಂದೆ ಸುಡುವ ವೈಶಾಖವೂ
    ಬಂದು ಕಾಡುವುದು ಅರಿವಿದೆ ಈಗ ನನಗೆ!
    ಈ ಅರಿವೇ ಅಲ್ಲವಾ ಪೊರೆಯುವುದು ನಮ್ಮಗಳ - ಹುಸಿ ಭ್ರಮೆಯಲಿ ಅತಿಯಾಗಿ ತೇಲದಂತೆ ಮತ್ತು ನೋವ ಹೊಳೆಯಲಿ ಏಳಲರಿಯದಷ್ಟು ಮುಳುಗದಂತೆ...
    ಇಷ್ಟವಾಯಿತು ಭಾವ ಬರಹ...

    ReplyDelete