ನನ್ನ ಮನಸ್ಸು

02 August, 2013

ಸುಸ್ವಾಗತ ಲೋಕಪಾಲಕನಿಗೆ!



ಅನುನಯದಿಂದ ನಿ ತಾ ಎಂದು ಕರೆದ ಮೇಲೆ
ಕಂಪು ಬೀರುವ ಕನ್ನಡ ಅಕ್ಷರಗಳ ಮುಂಜಾವಿಗರ ಮಾಲೆ
ನಿನ್ನಾಶ್ರುಗಳ ಪೋಣಿಸಿ ಮಾಡಿದ ಸ್ಫಟಿಕದ ಮಾಲೆ
ನಲ್ಲೆಯ ಬಿರುನಡಿಗಳ ಮುನಿಸೆಲ್ಲ ಕರಗಿ ಹೋದ ಮೇಲೆ
ಅಗೋ ನೋಡು, ಸಪ್ತವರ್ಣದ ಅಶ್ವಗಳ ರಥಾರೂಡನಾಗಿ
ಕ್ಷಣಕೊಮ್ಮೆ ಬದಲಾಗುವ ರಂಗನ್ನು ಚೆಲ್ಲುತ್ತಾ
ಪ್ರಸನ್ನವದನಾಗಿ ತನ್ನ ಭುವಿಯ ರಮಿಸಲು ಬರುತ್ತಿರುವ ಭಾಸ್ಕರ
ಎಲ್ಲಿ ಮಂಗಳವಾದ್ಯ, ತಾಳ, ಜಾಗಟೆ...
ಎಲ್ಲಿ ಕುಂಕುಮಾರತಿಯ ತಟ್ಟೆ..
ದೃಷ್ಟಿತಾಗದಿರಲಿ ನಮ್ಮ ಲೋಕಪಾಲಕನಿಗೆ..
ಅವಸವರಿಸಿ ಕರೆಯುವಳು ಮುಂಜಾವು!


ಅನಿತಾ ಪಿ ಪೂಜಾರಿ ತಕ್ಕೊಡು, ಅವರ ಕಾವ್ಯಕ್ಕೆ ಜುಗಲಬಂದಿಯಾಗಿ ಮೂಡಿದ ನನ್ನ ಬರಹ!
***********************************

ಅನಿತಾ ಪಿ ಪೂಜಾರಿ ಅವರ ಕಾವ್ಯ

ಬಂದನಮ್ಮ ರವಿರಾಜ ಹೊಂಗನಸ ತೇರನ್ನೇರಿ.... ಹೂಮನಸ ತುಂಬ ಸೂರ ಕಟ್ಟಿ ಸಾರ ಹೊರಟಿಹನು ಜಯಭೇರಿ..... ಅಣಿಯಾಗಿಹನು ಮುಂಜಾವಿನ ಮೆರವಣಿಗೆಗೆ ಈ ಅಲೆಮಾರಿ.... ಅರೆ ಅಲ್ಲೇ ಮನಸೆಳೆದಳವನ ಮದರಂಗಿ ಮನೆತನದ ಒಂದು ಸುಂದರ ಪೋರಿ...... ರವಿಯ ಮನ ಕೆದರಿ ಹರಿಯಿತು ಕಾವ್ಯ ರಸದ ಕೋಡಿ..... ಎಲೈ ಕೇಳೆ ನಗೆಮೊಗದ ಮುಂಗುರುಳ ಚೆಲುವೆ..... ನಿನ್ನ ಕಣ್ಣ ನೋಟದಿಂದ ಆಗಸದಲ್ಲಿ ಮಿಂಚು ಹುಟ್ಟಿತೇ.... ನಿನ್ನ ಹುಬ್ಬು ಕಂಡು ಬಾಂದಳದಲ್ಲಿ ಮಳೆಬಿಲ್ಲು ಮೂಡಿತೇ.... ನಿನ್ನ ಅದರದ ಮುತ್ತು ಜಾರಿ ಕಡಲ ಪಾತಾಳ ಸೇರಿತೇ.... ಚೆಂಗುಲಾಬಿಯೇ ನಿನ್ನ ದಂತ ನೋಡಿ ದಾಳಿಂಬೆ ಹಣ್ಣು ನಾಚಿತೇ.... ತಾವರೆ ಮೊಗದೋಳೆ ನಿನ್ನ ನಾಸಿಕವ ನೋಡಿ ಗಿಣಿಗೆ ಕೊಕ್ಕು ಮೂಡಿತೇ.... ನಾಗವೇಣಿಯೇ ನಿನ್ನ ಬಳುಕುವ ಸೊಂಟ ನೋಡಿ ಬಳ್ಳಿಯು ಬೆಳೆದು ನಿಂತಿತೇ,... ನಾಟ್ಯ ಮಯೂರಿಯೇ ನಿನ್ನ ನಡಿಗೆ ಕಂಡು ನವಿಲು ನಾಟ್ಯ ಕಲಿಯಿತೇ.... ಚಂದ್ರ ಚಕೋರಿಯೇ ನಿನ್ನ ಮೈಬಣ್ಣ ನೋಡಿ ನನ್ನ ಬೆಳಕಿಷ್ಟು ಬೆಳ್ಳಗಾಯಿತೇ.... ಒಮ್ಮೆ ಇನಿತು ಕೇಳೆಯಾ ಓ ನನ್ನ ಮನದನ್ನೆ... ಭಾವನೆಗಳ ಒಡೆಯ ನಾನು ಈ ಮೌನದ ಊರಿಗೆ... ರವಿ ನಾನು ಕವಿಯಾದೆ ನೋಡು ನನ್ನ ಮುದ್ದಿನ ರನ್ನೆ.... ನಿನಗೇಕೆ ತರ ತರದ ಸಿಂಗಾರ... ಒಡಲು ಹಸಿದು ಉರಿವಾಗ ನನಗೇಕೆ ಬಣ್ಣ ಬಟ್ಟೆ ಬಂಗಾರ.... ನನ್ನೊಲವ ಹೊನ್ನ ಮಂಚಕ್ಕೆ ಬಾ ನನ್ನ ಚಿನ್ನ.... ಮುಂಜಾವು ಕಳೆದು ನಾ ಸುಡುವ ಮುನ್ನ.... ನನ್ನ ಮನದಾಸೆಯಂತೆ ರವಿ ಇಂದು ಕವಿಯಾಗಿ ನನ್ನ ರಮಿಸಿದ ಕಾವ್ಯಮಯ ಮುಂಜಾವು

1 comment:

  1. ಕವನ ತು೦ಬಾ ಚೆನ್ನಾಗಿದೆ ಶೈಲಾರವರೆ.

    ReplyDelete