ನನ್ನ ಮನಸ್ಸು

01 August, 2013

ಮುಗಿಲು ಮುಸುಕಿದ ಮುಂಜಾವು!

-
’ವರ್ಷದ ಧಾರೆಯಲಿ ಹೊನ್ನ ರಂಗು ಮುಸುಕು ಮುಸುಕು..
ಕಾಂತಿಯುಕ್ತ ಮಂದಹಾಸದ ಮೊಗವೆಲ್ಲಿ..
ಚಿತ್ತಾರವಿಲ್ಲದ ಬೂದು ಬಣ್ಣದ ಬಾನು.. ’ ಗೋಗೆರೆಯುವ
ಹರ್ಷನ ಮೊರೆಯ ರವಿಗೆ ತಲುಪಿಸೇ ಮುಂಜಾವೇ!
ಅರೇ, ಅದೇಕೆ ದೀರ್ಘ ಮೌನ...
ದಿಟ್ಟಿಸಿ ನೋಡಿದರೆ ಕಾವಿ ಬಣ್ಣದ ಸೀರೆ, ಬರಿದು ಕತ್ತು, ಮ್ಲಾನ ವದನ..
 “ಹೆಣ್ಣೇ, ನಿಮಗಿಂತ ಭುವಿಯ ಕ್ಲೇಶ ಭಾವ ನೋಡು.
ಅಂದೆಂದೋ ಅವಳಂತೆ,
ನಾ ನಿನ್ನ ಶಾಖದಲಿ ಬೆಂದು ಹೋದೆನೆಂದು..
ಬೆಂಕಿಯ ಚೆಂಡವನು, ಮತ್ತೆ ಹೇಳಬೇಕೆ..
ತನ್ನಿಳಿಯಳ ಅಪವಾದ ಕೇಳಿ ಮುಗಿಲ ಮರೆಯಲೇ ಅವಿತಿದ್ದಾನೆ...
ಒದ್ದೆ ಒದ್ದೆಯಾಗಿ, ಒಂದಿಷ್ಟೂ ಒಣಗದೇ, ಮೈಯೆಲ್ಲ ಹಸಿರು ಪಾಚಿ ಹೊತ್ತು
ಅವನ ಕೋಪ ತಣ್ಣಗಾಗಲೆಂದು ಮೌನದಲ್ಲೇ ತಪವ ಮಾಡುವ
ವಸುಂಧರೆಯ ಪರಿತಾಪದ ತಾಪ ನಾನೂ ಸಹಿಸಲಾರೆ..
ಮನದ ಬಾಗಿಲು ಮುಚ್ಚಿದ ಭಾಸ್ಕರನನೂ ಓಲೈಸಲಾರೆ!”
ಎನ್ನುವ ಮುಂಜಾನೆಯ ನುಡಿಗೆ ಕಣ್ಣು ಹನಿಗೂಡಿತು!
-
ಮುಂಗಾರಿನ ನಿಲ್ಲದ ಅಬ್ಬರದ ಗದ್ದಲಲಿ
ಅಮ್ಮ ನಿಶಾ !
ನಿನ್ನ ನಶೆ ಸ್ವಲ್ಪ ಜಾಸ್ತಿ ಆಯಿತಮ್ಮಾ
ರವಿ ನಿನ್ನ ಮಡಿಲು ಬಿಟ್ಟು ಬಂದರೂ,
ಮೇಘಗಳ ಕರಿ ಸೆರಗಲಿ
ಮುಖ ಮುಚ್ಚ್ಚಿಕೊಂಡಿರುವನಮ್ಮಾ
ಅವನ ಮುಖದರ್ಶನವಾಗಿ ಕಳೆಯಿತು
ಅನೇಕ ದಿನ ವಾರ ಪಕ್ಷ ಮಾಸ
ನಿನ್ನ ನೀಳ ಕೂದಲ ಕುಂಚವನು
ನಿನ್ನ ಕೆಂಪು ಅಧರಕೆ ಸ್ಪರ್ಶಿಸಿ
ನಭವನ್ನೆಲ್ಲಾ ರಂಗಾಯಿಸಿದ
ರವಿಯ ಕಲಾತ್ಮಕ ಮುಂಜಾವನು
ಕಾತರದಿಂದ ಕಾಯುತ್ತಿದ್ದೆವೆಯಮ್ಮಾ
ರವಿಗೆ ಸ್ವಲ್ಪ ಬುದ್ಧ್ಹಿ ಹೇಳಮ್ಮಾ


No comments:

Post a Comment