ನನ್ನ ಮನಸ್ಸು

06 June, 2013

ಭಲೇ ಮನಸೇ.. ಎಲ್ಲವೂ ನಿನ್ನ ಕೈಯಲೇ!!!

ಅಂದು ಕೋಗಿಲೆಯ ಹಾಡಿಗೆ
ಮರುಳಾಗಿ ನಾ ನಾನಾಗಿ ಉಳಿಯಲಿಲ್ಲ...
ಚಂದಿರನಿಗಾಗಿ ಅರಳುವ ನೈದಿಲೆಯಾದೆ
ಸುರಿಸಿದ ಒಲವಿನಲಿ
ಜಾತಕದಂತೆ ಒದ್ದೆಯಾದೆ.

ಮುಂಜಾನೆಯ ಕುಹೂ ಕುಹೂ ಹಾಡಿಗೆ
ಅರಳುವ ಕಮಲವಾದೆ.
ಪ್ರತಿ ಹಗಲು ವಸಂತೋತ್ಸವ
ಪ್ರತಿ ಇರುಳು ಹುಣ್ಣಿಮೆಯ ಜಾತ್ರೆ
ಸುಡುವ ಬಿಸಿಲಲೂ ಒಲುಮೆಯ
ಛಾಯೆಯ ಜತೆಯೆನಗೆ ಸದಾ

ಮನದಲಿ ಮೂಡಿದ ಮಳೆ ಬಿಲ್ಲಿನ 
ಬಣ್ಣದ ಓಕುಳಿಯ ಛಾಯೆ ಎಲ್ಲೆಡೆ..
ಚಿತ್ತಾರದ ಪತಂಗಗಳು ಹುಳುಹುಪ್ಪಟೆ
ಸಕಲ ಜೀವಿಗಳ ಸ್ನೇಹಸಿಂಚನದ
ಆರ್ದ್ರತೆಯಲಿ ಮಿಂದು ನಿತ್ಯ ಪುನೀತೆ..

ಮನದ ಆಟ, ಮಾಟ, ಪಾಠ
ಎಲ್ಲವೂ ಸ್ತಬ್ದವೀಗ...
ಶೂನ್ಯದಲ್ಲೇನು ಹುಡುಕಾಟ...
ನಕ್ಷತ್ರದ ಕಪ್ಪುಕುಳಿಯಲಿ ಕಳೆದು

ಹೋದವರು ಮತ್ತೆ ಹಿಂದಿರುಗುವರೇ?

No comments:

Post a Comment