ನನ್ನ ಮನಸ್ಸು

16 October, 2014

ಜನಾರ್ದನಿಗೊಂದು ಪತ್ರ!






ಕೇಶವ,

ನಿಂಗೊತ್ತಾ, ಇವತ್ತು ಬೆಳ್‌ಬೆಳಿಗ್ಗೆ ಒಂದು ಚಂದದ ಪಕ್ಷಿ ನನ್ನೊಡನೆ ಮಾತಾಡಲು ಬಂದಿತ್ತು.  ಆಂಟಿಯ ಬಿಂಬುಲ ಗಿಡದಲ್ಲಿ ಒಂದು ಅರ್ಧ ಕ್ಷಣ ಸುಮ್ಮನೆ ಕೂತು ನನ್ನನ್ನೇ ನೋಡ್ತಿತ್ತು..ನಮ್ಮಿಬ್ಬರ ಕಣ್ಣು ಕಣ್ಣು ಒಂದಾಗಿತ್ತು.. ಅದ್ಯಾವ ಒಲವಿನ ಸಂದೇಶವೋ, ನೀನು ಕಳಿಸಿದ್ದು. ನಾನಂತೂ ಬೆಪ್ಪುತಕ್ಕಡಿಯಂತೆ ಅಲ್ಲೇ ಸ್ತಬ್ಧಳಾಗಿದ್ದೆ. ಮತ್ತೆ ತಟ್ಟನೆ ಎಚ್ಚರವಾಯಿತು. ಅರೇ, ಅಷ್ಟು ನಿಖರವಾಗಿ ಪಕ್ಷಿಗಳನ್ನು ಗುರುತಿಸಲಾರೆನಾದರೂ ಇಲ್ಲಿಯ ತನಕ ನಾನು ನೋಡಿದ್ದ ಯಾವ ಪಕ್ಷಿಗೂ ಇದರ ಹೋಲಿಕೆಯಿರಲಿಲ್ಲ.

ಮತ್ತೆ ನಿಂಗೆ ಗೊತ್ತಲ್ಲ.. ಕೆಮರಾ ಕ್ಲಿಕ್ಕಿಂಗ್!

ಓಡಿದೆ.. ಮೊದಲು ಕನ್ನಡಕ, ಮತ್ತೆ ಕೆಮರಾ.. ನೋಡು, ಅದರ ಸೆಟ್ಟಿಂಗ್ ಮಾಡುವಷ್ಟರಲ್ಲಿ ಅದು ಹಾರಿಹೋಗಿದ್ದರೆ,

ಇಲ್ಲ, ಅದರ ವಿಚಿತ್ರ ಕೂಗು ನನಗೆ ಕೇಳಿಸ್ತಿತ್ತು. ಈ ಆಂಟಿಯ ಹಿತ್ತಲಿನಿಂದ ಆ ಆಂಟಿಯ ತೆಂಗಿನ ಮರಕ್ಕೆ ಶಿಫ್ಟ್! ನಾನು ಸೆಟ್ಟಿಂಗ್ ಮಾಡಿ, ಫೋಕಸ್ ರಿಂಗ್ ತಿರುಗಿಸಿದ್ರೆ ಅಲ್ಲಿ ಯಾರಿಲ್ಲ. ಕರ್ಮ! ಮತ್ತೆ ಈ ಹಿತ್ತಲಿಗೆ ಶಿಫ್ಟ್! ಮತ್ತೆ ಫೋಕಸ್.. ಬೇಗ ಬೇಗ ಕ್ಲಿಕ್ಕಿಸುತ್ತಾ ಹೋದೆ... “ರಾಮ ರಾಮ!!! ಒಂದು ಫೋಕಸ್ ಆದ್ರೂ ಸರಿಯಾಗಿರ್ಲಿಯಪ್ಪಾ... ಇವತ್ತು ಒಂದಿಷ್ಟು ಹೆಚ್ಚು ರಾಮನಾಮ ಬರಿತೇನೆ ನನ್ನಪ್ಪಾ!”


ನಂಗೆ ಇನ್ನೂ ಇದರ ಫೋಕಸ್ ಮಾಡ್ಲಿಕ್ಕೆ ಬರ್ತಿರಲಿಲ್ಲ.. ಆದ್ರೂ ನನ್ನ ರೆಕಾರ್ಡಿಗೆ ಇರ್ಲಿ ಅಂತ ಕ್ಲಿಕ್ಕಿಸುತ್ತಾ ಇದ್ದ ಹಾಗೆ ಅದು ಅಲ್ಲೇ  ಕೆಳಗೆ ಬಾಳೆಗಿಡದ ಬುಡದಲ್ಲಿ ಹುಳಹುಪ್ಪಟೆ ಹುಡುಕ್ಲಿಕ್ಕೆ ಹೋಯಿತು.. ನಂಗೂ ಸಂಸ್ಕೃತ ಕ್ಲಾಸಿಗೆ ಮಕ್ಕಳು ಬರುವ ಹೊತ್ತೂ ಆಯ್ತು. ಬೆಳಗ್ಗಿನ ಬ್ರೇಕ್‌ಫಾಸ್ಟ್ ಮಾಡ್ಬೇಕು.. ಹಕ್ಕಿಗೊಂದು ಫ್ಲ್ಯಾಯಿಂಗ್ ಕಿಸ್ ಕೊಟ್ಟು ನಾನು ಒಳಗೆ ಜಾರಿದೆ. ಒಂದೈದು ನಿಮಿಷ ತನಕ ಕೂಗು ಕೇಳ್ತಿತ್ತು.

ವಿಠ್ಠಲ, ನಾನು ತುಂಬಾ ಎಕ್ಸೈಟ್ ಆಗಿದ್ದೇನೋ. ಅದು ಏನೋ ನಿನ್ನ ಸಂದೇಶವನ್ನೇ ಹೊತ್ತು ತಂದಿರ್ಬೇಕು, ಅಲ್ವಾ! ನಿನ್ನ ಒಲವಿನ ಭಾವ ತಲುಪಿತು ಕಣೋ. ತುಂಬಾ ಥಾಂಕ್ಸ್ ಕಣೋ ನನ್ನ ಗೆಳೆಯನೇ! ಹೀಗೆ ನಿತ್ಯವೂ ಬದುಕನ್ನು ಹೊಸ ಹೊಸದಾಗಿ ಮಾಡ್ತಿಯಲ್ವಾ!



ಇತ್ತೀಚೆಗೆ ಅಜ್ಜನ ಹತ್ತಿರ ಇದ್ದ “ಭಕ್ತ ವಿಜಯ” ಪುಸ್ತಕದ ನೆನಪು ತುಂಬಾ ಆಗ್ತಿದೆ. ಮಹಾರಾಷ್ಟ್ರದ ಅಭಂಗ ಕರ್ತರ ಪರಿಚಯ ಮೊತ್ತ ಮೊದಲು ಪರಿಚಯಿಸಿದ್ದೇ ಆ ಪುಸ್ತಕ. ಸಖೂ ಬಾಯಿಗೆ ಅವಳ ಅತ್ತೆ, ಮಾವ ಗಂಡ ಕೊಡುವ ಯಾತನೆಗಳು, ಅವಳು ತಮ್ಮೂರಿಗೆ ಬಂದ ವಾರಿಯ ಜತೆ ಸೀದ ಪಂಡರಾಪುರದ ಹಾದಿಹಿಡಿದದ್ದು, ಅವಳ ಜಾಗವನ್ನು ಸ್ವತಃ ವಿಠ್ಠಲನೇ ಬಂದು ತುಂಬಿದ್ದು... ಆಹಾ! ಭಕುತರಿಗಾಗಿ ಏನು ಬೇಕಾದರೂ ಮಾಡುವೆ ನೀ.. ಮಹಾಮಹಿಮ, ಕಂಸಾದಿ ದೈತ್ಯರನ್ನು ಸಂಹರಿಸಿದವನು ಏನೂ ತಿಳಿಯದ ಕಂದನಾಗಿ ಯಶೋಧೆಯ ಕೈಯಲ್ಲಿ ಹಗ್ಗದಿಂದ ಬಿಗಿಸಿಕೊಂಡು ದಾಮೋದರನಾಗಲಿಲ್ಲವೇ, ಧರ್ಮರಾಯನ ರಾಜಸೂಯ ಯಾಗದ ಸಮಯದಲ್ಲಿ ಬ್ರಾಹ್ಮಣರ ಉಚ್ಛಿಷ್ಟವನ್ನು ಬಳಿಯಲಿಲ್ಲವೇ!!! ಇರಲಿ, ಬಿಡು ನಿನ್ನನ್ನು ಪೊಗಳಲು, ನಿನ್ನ ರೂಪ ವರ್ಣಿಸಲು ಶಬ್ದಗಳೇ ಕಮ್ಮಿಯಾಗುತ್ತವೆ, ಬಾಯಿ ಕಟ್ಟಿದಂತಾಗುತ್ತೆ.

ತುಕಾರಾಮನ ಅಭಂಗ ಕೇಳು, ಜತೆಗೆ ಇವತ್ತು ನಮ್ಮ ಕನ್ನಡದಲ್ಲಿ ತಯಾರಾದ ಭಕ್ತ ಕುಂಬಾರದ ಇಂಪಾದ ಹಾಡನ್ನು ಕೇಳಿಸಿಕೋ!


ಯಾರೋ ಕೇಳ್ತಿದ್ರು.. ನೀ ಅದೇನೋ ಆರ್ ಜೆ, ಡಿ ಜೆ ನಾ ಅಂತ. ಏನೋ ಒಂದು! ಒಟ್ಟಾರೆ ನನ್ನೊಡೆಯ ಪ್ರೀತ್ಯರ್ಥವಾಗಿ ಮಾಡ್ತೇನೆ!

ttps://www.youtube.com/watch?v=xEeqxdmIbg0

No comments:

Post a Comment