ನನ್ನ ಮನಸ್ಸು

14 December, 2013

ಅಂದಿನ ಮುಸ್ಸಂಜೆಯ ನೆನಪು..

-
ನೇಸರ ಕುಲುಮೆಯಲಿ ಕೆಂಪಗೆ ಬೆಂದು ಹೊನ್ನಾದನು..

ಶಶಿ ಬೆಳದಿಂಗಳಲಿ ಶುಭ್ರವಾಗಿ ಮಿಂದು ಬೆಳ್ಳಿಯಾದನು..

ಅಜ್ಜಿ ನೆರಿಗೆ ಮೂಡಿದ ಕೈಯಲಿ ಹೊಸೆದ ಮೆದು ಹತ್ತಿ ಬತ್ತಿಯಾಯಿತು..

ಅಜ್ಜನ ಹೊಲದ ಬೀಜ ಚಕ್ರಗಳೆಡೆಯಲಿ ಅಪ್ಪಚ್ಚಿಯಾಗಿ ದಪ್ಪ ಎಣ್ಣೆಯಾಯಿತು..

ಅತ್ತೆ ಘಸ ಘಸ ತಿಕ್ಕಿದ ಹಿತ್ತಾಳೆ ದೀಪ ಝಗಮಗ ಹೊಳೆಯಿತು..

ಮೈತುಂಬ ಮಣ್ಣು ಮೆತ್ತಿ ಚಿಣ್ಣರು ಧೂಳೆಬ್ಬಿಸುತ ಗದ್ದಲ ಮಾಡುತ ಅರಳುತ ಮರಳಿದರು..

ತುಳಸಿ ಕಟ್ಟೆಯ ದೀಪದ ಬೆಳಕು ಅಮ್ಮನ ಸಂತೃಪ್ತ ಮುಖದಲಿ ಪ್ರತಿಫಲಿಸಿತು..

ಅಜ್ಜಿ, ಅಜ್ಜ, ಅತ್ತೆ ಸೊಸೆ.. ಚಿಣ್ಣರೆಲ್ಲರ ರಾಗ ದೇವರ ಮನೆಯಲಿ ವ್ಯಾಪಿಸಿತು..

ಹಾರ್ಮೋನಿಯಮ್, ತಾಳ, ತಬಲ ನಾದ ತರಂಗ ಭಕ್ತಿ ಸಾಗರದ ಅಲೆಯಾಯಿತು..

ಧೂಪ, ದೀಪ, ಕರ್ಪೂರ, ಅಗರಬತ್ತಿಯ ಹೊಗೆಯೆಡೆಯಲಿ ಬೆಳಗುವ ಮಂಗಳಾರತಿ ಎತ್ತಿದರು..

ಒಕ್ಕೊರಳಿನಿಂದ ರಾಗ ತಾಳ ಪಲ್ಲವಿ ಸೇರಿಸಿ ಮುಸ್ಸಂಜೆಯ ಜೋಳಿಗೆಯಲಿ ಭಾವ ತುಂಬಿದರು!

(ಅಂದಿನ ದಿನದ ನೆನಪು ತಂದ ಮುಸ್ಸಂಜೆಗೆ ಅರ್ಪಿತ)

No comments:

Post a Comment