ನನ್ನ ಮನಸ್ಸು

31 December, 2013

ನಂಗೆ ಹೆಚ್ಚು ಗೊತ್ತಿಲ್ಲ.. ಗೊತ್ತಿದ್ದವರ ಬಳಿ ಕೇಳು!



 ನಂಗೆ ಹೆಚ್ಚು ಗೊತ್ತಿಲ್ಲ.. ಗೊತ್ತಿದ್ದವರ ಬಳಿ ಕೇಳು!
-----------------------------------------

ಅಕ್ಕ,  ಮೌನವನ್ನು ಡಿಫೈನ್ ಮಾಡ್ತಿರಾ?”

ಇತ್ತೀಚೆಗೆ ಮಿತ್ರರ ಪಟ್ಟಿಯಲ್ಲಿ ಸೇರಿದ ಈ ಹುಡುಗಿಯ ಪ್ರಶ್ನೆ ನನ್ನ ಇನ್‍ಬಾಕ್ಸ್ ಗೆ ಬಂದಾಗ ಎಲ್ಲಿಲ್ಲದ ಅಚ್ಚರಿ!

“ಅರೇ ಹುಡುಗಿ, ಬಹುಶಃ ನೀನು ಮತ್ಯಾರಿಗೋ ಕಳುಹಿಸಬೇಕಾದ ಮೆಸೇಜು ತಪ್ಪಿ ನಂಗೆ ಕಳಿಸಿದಿ ಅಂತ ತೋರುತ್ತೆ!”

“ಇಲ್ಲ ಅಕ್ಕ, ನಿಮ್ಮ ಬ್ಲಾಗ್ ನಲ್ಲಿ ನೀವು ಬರೆದದನ್ನು ಓದಿಯೇ ನಿಮ್ಮ ಹತ್ತಿರ ಕೇಳ್ಬೇಕೆನಿಸಿತು!”

ನಗು ಬಂತು! ಎಲ್ಲೋ ಹುಡುಗಿ ಇನ್ನೂ ಎಳಸು! ಅದಕ್ಕೆ ನನಗೆ ಮೆಸೇಜು...

“ಮೊದ್ಲು ನಂಗೆ ಒಂಟಿತನ ಮತ್ತು ಏಕಾಂಗಿತನದ ವ್ಯತ್ಯಾಸ ಹೇಳು!”

ಸ್ವಲ್ಪ ಹೊತ್ತು ಬಿಟ್ಟು ಮೆಸೇಜು ಬಂತು,

“ಯಾರೂ ಜತೆ ಕೊಡದೇ ಹೋದರೆ ಒಂಟಿ; ಜತೆಯಿದ್ದೂ ನಾವೇ ದೂರ ಸರಿದು ನಿಂತರೆ ಏಕಾಂಗಿತನ!”

ಓಹೋ, ನಾನು ಎಣಿಸಿದಷ್ಟು ಎಳಸಲ್ಲ!

“ಮೌನವೂ ಒಂದು ರೀತಿ ಹಾಗೇ ಹುಡುಗಿ! ನಮಗೆ ಬೇಡವೆನಿಸದವರ ಹತ್ತಿರ ನಾವು ಮಾತು ಬಿಟ್ಟು.. ಉಳಿದ ಲೋಕದ ಹತ್ತಿರ ನಿತ್ಯದಂತೆ ಮಾತಾಡುತ್ತಿದ್ದರೆ ಅದು ತಿರಸ್ಕಾರ! ಮೌನ ಬೇಕೆನಿಸಿದವರು ಎಲ್ಲರೊಂದಿಗೂ ಮೌನಿಯಾಗಿದ್ದರೆ ಅವರು ಏಕಾಂತವನ್ನು ಬಯಸುತ್ತಿದ್ದಾರೆ.. ಒಂದಷ್ಟು ಕಾಲ ಅವರನ್ನು ಅವರ ಕೋಶದಲ್ಲಿ ಸುಪ್ತಸ್ಥಿತಿಯಲ್ಲಿರಲು ಬಿಡಬೇಕು.. ಅದರ ಬಗ್ಗೆಯೂ ಒಂದು ಬ್ಲಾಗ್ ಬರಹ ಹಾಕಿದ್ದೆ! ಅದನ್ನೂ ಓದು!”

ಹುಡುಗಿಯ ಮಾತಿಲ್ಲ.. ಕಂಡುಕೊಂಡಳು ತನ್ನ ಜತೆಗೆ ಮೌನವಾಗಿದ್ದವರ ಬಗ್ಗೆ!

“ಲೇ ಹುಡುಗಿ, ನನ್ನ ಮಾತೇ ಸರಿ ಅಂದ್ಕೊಳ್ಬೇಡ.. ತಿಳಿದವರ ಜತೆಗೂ ಕೇಳು! ನನಗೆ ಹೆಚ್ಚು ಗೊತ್ತಿಲ್ಲ!”




No comments:

Post a Comment