ನನ್ನ ಮನಸ್ಸು

02 October, 2013

ಸ್ವಾತಂತ್ರ್ಯಕ್ಕೆ ನಾವೆಲ್ಲರೂ ಅರ್ಹರೇ..

ಸ್ವಾತಂತ್ರ್ಯಕ್ಕೆ ನಾವೆಲ್ಲರೂ ಅರ್ಹರೇ..

ಮೊದಲು ಎಷ್ಟು ಮಂದಿಗೆ ನಮ್ಮಲ್ಲಿ ಸ್ವಾತಂತ್ರ್ಯಪೂರ್ವದ ಕತೆ ಗೊತ್ತಿದೆ ಅಂತ ಕೇಳಿ.. ಬ್ರಿಟಿಷರು ಬಳುವಳಿ ಕೊಟ್ಟ ಅದೇ ಇತಿಹಾಸದ ಪಠಣ ಮತ್ತೆ ಮತ್ತೆ.. ಅವರು ಹಾಕಿದ ಮಾರ್ಗದಲ್ಲೇ ಹೋದ ಪರಿಣಾಮ ನಮಗ್ಯಾರಿಗೂ ನಿಜ ಇತಿಹಾಸವೇ ಗೊತ್ತಿಲ್ಲ. ಮುಖ್ಯವಾಗಿ ಭಾರತೀಯರು ಹಿತ್ತಾಳೆ ಕಿವಿಯವರು, ಒಗ್ಗಟ್ಟೇನೆಂದರೆ ಗೊತ್ತಿಲ್ಲದವರು, ಪರಮ ಸ್ವಾರ್ಥಿಗಳು. ಇಂದು ದೇಶವು ಭ್ರಷ್ಟ ರಾಜಕಾರಣಿಗಳ ಕೈಯಲ್ಲಿ ಸಿಲುಕಿ ಒದ್ದಾಡುತಿದೆ.. ಜಾಗತೀಕರಣದ ಪರಿಣಾಮವಾಗಿ ನಮ್ಮ ಯುವ ಜನಾಂಗ ಬರೇ ಪಾಶ್ಚಿಮಾತ್ಯರನ್ನು ಅನುಸರಿಸುತ್ತಿದೆ. ಆದರೂ ನಾವು ಸ್ವತಂತ್ರವಾಗಿ ಜೀವಿಸಲು ಅರ್ಹರು, ಮನುಷ್ಯನಾಗಲಿ, ಪ್ರಾಣಿಗಳಾಗಲಿ ಸ್ವಾತಂತ್ರ್ಯಕ್ಕೆ ಎಲ್ಲರೂ ಹಂಬಲಿಸುವವರೇ. ನಮ್ಮದೇ ದೇಶದಲ್ಲಿ ಬಿಳಿತೊಗಲುಗಳ ಗುಲಾಮರಾಗಿ ಸುಖ ಸಂಪತ್ತಿನಲ್ಲಿ ಬದುಕುವುದಕ್ಕಿಂತ ಈ ಭ್ರಷ್ಟರ ಕೆಳಗೆ ಬದುಕುವುದು ಕಷ್ಟವಾದರೂ ಪರವಾಗಿಲ್ಲ ಅನಿಸುತ್ತದೆ. ಅಲ್ಲದೆ ಈಗಲೂ ನಾವು ದೇಶದ ಭವಿಷ್ಯವನ್ನು ಬದಲಿಸಬಹುದು.. ಒಮ್ಮೆ ಒಮ್ಮೆ ನಮ್ಮೊಳಗೆ ನಾವು ಇಣುಕಿ ನೋಡಿದರೆ ಸಾಕು.. ಬಹಳಷ್ಟು ಬದಲಾವಣೆಗಳು ಸಾಧ್ಯವೆಂಬುದನ್ನು ನಾನು ನಂಬುತ್ತೇನೆ.  ಆತ್ಮಶುದ್ಧಿ ಸಧ್ಯಕ್ಕೆ ಮೊದಲು ನಡೆಯಬೇಕಾಗಿದೆ!

ನಮ್ಮ ಕಾಲದಲ್ಲಿ ಹೀಗಿರಲಿಲ್ಲ.. ಈ ಮಾತನ್ನು ನಾವು ನಮ್ಮ ಮಕ್ಕಳೆದರು, ಮತ್ತು ನಮ್ಮ ಹಿರಿಯರು ನಮ್ಮೆದುರು ಸಾವಿರ ಸಲ ಆಡಿರಬಹುದು. ಹೌದು, ಕಾಲ ಬದಲಾಗುತ್ತಲೇ ಸಾಗುತ್ತಿದೆ.. ಜತೆಗೆ ನಮ್ಮ ಚಿಂತನೆಗಳೂ ! ನಮ್ಮಲ್ಲೇ ಎಷ್ಟು ಮಂದಿಗೆ ಸ್ವಾತಂತ್ರ್ಯ ವೀರರ ಹೆಸರುಗಳು ಗೊತ್ತು.. ಪಠ್ಯ ಪುಸ್ತಕಗಳಲ್ಲಿ ಅಲ್ಲಲ್ಲಿ ಹೆಚ್ಚು ಉಲ್ಲೇಖನಗೊಳ್ಳುವ ಹೆಸರುಗಳು ಮಾತ್ರ ಗೊತ್ತು. ವೀರ ಸಾವರ್ಕಾರರ ಕಾಲಾಪಾನಿ ಜೈಲಿನ ಕತೆ ಕೇಳಿದರೆ ಕಣ್ಣಲ್ಲಿ ನೀರಲ್ಲ ರಕ್ತ ಬರಬೇಕು.. ಇತ್ತೀಚೆಗೆ ತರಂಗದಲ್ಲಿ ಧಾರವಾಹಿಯಾಗಿ ಬಂದಾಗ ಓದಿದುದರಿಂದಲೇ ಈ ಬಗ್ಗೆ ನನಗೂ ಬಹಳಷ್ಟು ಮಾಹಿತಿ ಸಿಕ್ಕಿತು.  

ಇನ್ನು ಬ್ರಿಟಿಷರು ತಂದ ಬದಲಾವಣೆಗಳು.. ಭಾರತೀಯರ ಬುದ್ಧಿಮತ್ತೆಗೆ ಯಾರೂ ಯಾವ ದೇಶವೂ ಸಾಟಿಯಲ್ಲ.. ಈ ಮಾತು ಈಗಾಗಲೇ 2k ಸಾಬೀತುಪಡಿಸಿದೆ. ಕಂಗಾಲಾಗಿದ್ದ ಅಮೇರಿಕಾ ಭಾರತೀಯರ techmindನಿಂದಲೇ ಮತ್ತೆ ಜೀವಸಂಚಾರ  ಪಡೆದಿತ್ತು ಎಂಬುದನ್ನು ನಾವೆಲ್ಲರೂ ಬಲ್ಲೆವು. ಶಿಕ್ಷಣ.. ನಮ್ಮಲ್ಲಿ ನಡೆಯುತ್ತಿದ್ದ ಗುರುಕುಲ ಪದ್ಧತಿ ಜಗತ್ತಿನಲ್ಲೇ ಅತ್ಯುತ್ತಮವೆಂದು ಬಲ್ಲವರು ಹೇಳುವರು. ಅನೇಕ ಕಡೆ ಈಗಾಗಲೇ ಮತ್ತೆ ಅದೇ ಪದ್ಧತಿ ಅಳವಡಿಸಿಕೊಳ್ಳುತ್ತಿದ್ದಾರೆ. ಶಾಂತಿನಿಕೇತನದಲ್ಲೂ ಇದೇ ಪದ್ಧತಿಯನ್ನು ಗುರು ರಬೀಂದ್ರನಾಥ ಟಾಗೋರರು ಅಳವಡಿಸಿ ಯಶಸ್ವಿಯಾಗಿದ್ದದನ್ನು ನಾವು ಓದಿ ಬಲ್ಲೆವು. ಅಲ್ಲದೆ ಮತ್ತೆ ವೇದಕಾಲದ ಗಣಿತ ಪದ್ಧತಿಯನ್ನು ಈಗಾಗಲೇ ಹೊಸ ಪಠ್ಯ ಕ್ರಮದಲ್ಲಿ ಸರಕಾರವು ಅಳವಡಿಸಿದೆ. ಅದು ಎಷ್ಟು ವೈಜ್ಞಾನಿಕವಾಗಿದೆಯೆಂದು ನಾನು ಬಲ್ಲೆನು.. ಆದರೆ ಬ್ರಿಟಿಷರ ಕಾಲದ ಪಠ್ಯ ಕ್ರಮದಲ್ಲಿ ಓದಿದ ಅಧ್ಯಾಪಕರಿಗೆ ಅದು ಕಬ್ಬಿಣದ ಕಡಲೆಯಾಗಿದೆ.
 ವಿಮಾನದ ಅವಿಷ್ಕಾರವೂ ಭಾರತೀಯರದೇ ಆಗಿದೆ. ಭೂಮಿಯ ಆಯುಷ್ಯವನ್ನು ಕಂಡು ಹಿಡಿಯಲು ಅವರೆಲ್ಲ ಬೆವರಿಳಿಸುತ್ತಿದ್ದರೆ, ನಮ್ಮ ವೇದವ್ಯಾಸರು ನಿಖರವಾಗಿ ಹೇಳಿಮುಗಿಸಿದ್ದಾರೆ. ಹೀಗೆ ಬ್ರಿಟಿಷರು ಬಂದು ಬದಲಾವಣೆ ತಂದುದೆಂದರೆ ನಮ್ಮ ರಕ್ತಗುಣವನ್ನು ಕಂಡುಹಿಡಿದು ಮತ್ತಿಷ್ಟು ಭೇದಭಾವ ಮೂಡಿಸಿದ್ದು. ನಮ್ಮ ನಾಯಕರಲ್ಲೇ ಒಡಕು ಮೂಡಿ ನಮ್ಮ ದೇಶದ ವಿಭಜನೆಗೆ ಕಾರಣವಾಯಿತು. ಅಹಿಂಸಾವಾದ ಮತ್ತು ಸರಳ ಜೀವನ ನಡೆಸುವಲ್ಲಿ ಮಾರ್ಗದರ್ಶಕರಾದ ಗಾಂಧಿ, ಕೆಲವರ ಹಿತಾಸಕ್ತಿಗಳ ಮೋಡಿಗೆ ಒಳಗಾಗಿ ದೇಶವನ್ನು ನೆಹರೂ ಮನೆತನದ ಸೊತ್ತಿಗೆ ಮಾಡಿದರು.  


ಇಂದಿನ ಜನಾಂಗಕ್ಕೆ ಸ್ವಾತಂತ್ರ್ಯವೆಂಬುದರ ಅರ್ಥ ಸಹ ತಿಳಿದಿಲ್ಲ.. ಕೇಳುವ ಮೊದಲೇ ಅವರ ತೆಕ್ಕೆಗೆ ಬಂದು ಬಿದ್ದಿರುತ್ತದೆ. ಸಿನೆಮಾಗೆ, ಪಬ್ ಗೆ ಹೋಗಲು ಅಡ್ಡಪಡಿಸಿದರೆ ಸ್ವಾತಂತ್ರ್ಯ ಕಿತ್ತಂತಾಗುವುದೆಂದು ತಿಳಿದು ರಂಪಾಟ ಮಾಡುತ್ತಾರೆ. ಆದರೆ ಅವರಲ್ಲ ದೋಷಿಗಳು.. ನಾವೇ ನಮಗೆ ಸಿಗದ ಸುಖ ಸಂಪತ್ತು ನಮ್ಮ ಮಕ್ಕಳಿಗೆ ಸಿಗಲಿ ಎಂದು ವಿಪರೀತ ಮುದ್ದು ಮಾಡಿ ಹಾಳುಮಾಡುತ್ತಿದ್ದೇವೆ.. ಮನೆಯಲ್ಲಿ ಲಕ್ಷ್ಮಿ ಕಾಲು ಮುರಿದು ಬಿದ್ದಿರಲಿ ಎಂದು ಅಡ್ಡ ದಾರಿ ಹಿಡಿದು ನಡೆಯುತ್ತಿದ್ದೇವೆ.  ಎಲ್ಲೋ ಏನೋ ತಪ್ಪಿದೆ.. ವಿವೇಕಾನಂದರಂತಹ ಲೀಡರ್ ಇಲ್ಲ. ಶ್ರೀ ರಾಮಕೃಷ್ಣ ಪರಮಹಂಸರಂತಹ ದಾರ್ಶನೀಕರು ಮತ್ತೆ ಹುಟ್ಟಿಲ್ಲ. ದಾಸವರೇಣ್ಯರು.. ಪುರಂದರದಾಸ, ಕನಕದಾಸ, ವಿಜಯದಾಸ, ತುಕಾರಾಮ, ಜ್ಞಾನದೇವ, ಅಲ್ಲಮಪ್ರಭು, ಬಸವಣ್ಣ, ಅಕ್ಕಮಹಾದೇವಿ,,, ಇಂತವರು ಮತ್ತೆ ಜನುಮ ತಾಳಲೇ ಇಲ್ಲ. ಜನರ ಅಂಧವಿಶ್ವಾಸವನ್ನೆ ಅಸ್ತ್ರಮಾಡಿಕೊಂಡು ಸಂಪತ್ತರ ಮೇಲೆ ಸಂಪತ್ತು ಗುಡ್ಡೆ ಹಾಕುವ ಮಠಾಧೀಶರ ಕಾರುಬಾರು ಎಲ್ಲೆಲ್ಲು.. ಇಂತಹ ರಾಜಕಾರಣಿಗಳ ಕೈಯಲ್ಲಿ ದೇಶವು ಸುಭಿಕ್ಷವಾಗುವುದಿಲ್ಲವೆಂದು ಗೊತ್ತಿದ್ದೂ ಮತ್ತೆ ಮತ್ತೆ ಅವರಿಗೇ ತಮ್ಮ ಅಮೂಲ್ಯ ಮತಕೊಟ್ಟು ಮತ್ತೆ ಅವರ ಕೈಗೆ ಅಧಿಕಾರ ಕೊಟ್ಟು ಪೆಟ್ಟು ತಿನ್ನವ ನಮ್ಮನ್ನೇ ನಾವು  ಪಾದುಕೆಯಿಂದ ಹೊಡಕೊಳ್ಳಬೇಕು! ಮತ್ತೇನು ಹೇಳಲು ಸಾಧ್ಯ!

No comments:

Post a Comment