ನನ್ನ ಮನಸ್ಸು

28 September, 2013

ಹೆಣ್ಣು ಜನ್ಮ ಸಾಕಪ್ಪಾ ಸಾಕು..


ಹೆಣ್ಣು ಜನ್ಮ.. ಸಾಕಪ್ಪಾ ಸಾಕು!

ಅವಳು: ಕರ್ಮ ಕಣೆ! ಈ ಹೆಣ್ಣು ಜನ್ಮ ಸಾಕಪ್ಪಾ ಸಾಕು!

ಇವಳು: ಅದು ಗೊತ್ತಿದ್ದದ್ದೇ  ಅಲ್ವೆ! ಮತ್ತೇನಾಯ್ತು ಇವತ್ತು?

ಬೆಳಿಗ್ಗೆ ಹಾಲು ತರಲು ಹೋದವಳ ಕಿವಿಗೆ ಈ ಸಂಭಾಷಣೆ ಕೇಳಿಸಿತು.. ಹೆಚ್ಚು ಕಮ್ಮಿ ಪ್ರತೀದಿನ ಇವರಿಬ್ಬರನ್ನು ನೋಡುತ್ತಿರುತ್ತೇನೆ.. ಸಮವಸ್ತ್ರ ಧರಿಸಿ ಹೋಗುವವರನ್ನು ಕಂಡು ಇವರು ಆ ಕೋರಿಯರ್ ಕಂಪನಿಯಲ್ಲಿ ಕೆಲಸ ಮಾಡುವವರೆಂದು ಉಹೆಮಾಡಿದ್ದೆ. ಗುಸುಗುಸು ಮಾತಾಡಿಕೊಂಡು ತಮ್ಮದೇ ಲೋಕದಲ್ಲಿ ಕಳಕೊಂಡು ಹೋಗುತ್ತಿದ್ದವರ ಮುಖದಲ್ಲಿ ಚಿಂತೆ ತುಂಬಿರುತ್ತಿತ್ತು. 
 ಇವತ್ತಂತೂ ಸ್ಪಷ್ಟವಾಗಿ ಕೇಳಿಸುತ್ತಿದೆ.. ನಡಿಗೆಯ ಗತಿಯನ್ನು ಒಂಚೂರು ಕಡಿಮೆಮಾಡಿದೆ.. ಕೆಟ್ಟ ಕುತೂಹಲ, ಏನ್ ವಿಷಯವಿರಬಹುದು!

ಅವಳು: ಅದೇ, ಒಂದರಲ್ಲಿ ಚಾಗೆ ಇಟ್ಟು ಇನ್ನೊಂದರಲ್ಲಿ ಹಾಲಿಟ್ಟು ಅಡುಗೆ ಕೋಣೆ ಗುಡಿಸ್ತಿದ್ದೆ.. ಹೇಗೂ ಅಲ್ಲೇ ಇದ್ದೀನಲ್ಲಾ ಎಂದು ಗ್ಯಾಸ್ ಹೈ ಮಾಡಿದ್ದೆ.. ಕಸ ಬಿಸಾಡಲು ಹೊರಹೋದವಳು ಬೆಕ್ಕಿನ ಮರಿ ಕಂಡು ಮಾತಾಡಿಸ್ಲಿಕ್ಕೆ ನಿಂತೆ.. ಅಷ್ಟರಲ್ಲೇ ಅಡುಗೆ ಕೋಣೆಯಿಂದ ಗುಡುಗಿನ ಶಬ್ದ!

ಒಳ ಬಂದು ನೋಡಿದರೆ ಹಾಲು ಚೆಲ್ಲಿದೆ.. ನಿಂಗೆ ಬುದ್ಧಿ ಕಲಿಸ್ಬೇಕು ಅಂತಲೇ ಆಫ್ ಮಾಡ್ಲಿಲ್ಲ.. ನೀನು ಯಾವಾಗಲೂ ಹೀಗೆ.. ಬೈಗುಳದ ಮಳೆ ಇವರಿಂದ. ಮೊದಲೇ ಏಳುವರೆಯೊಳಗೆ ಮನೆಯಿಂದ ಹೊರಡ್ಬೇಕು.. ಇನ್ನು ಇದೆಲ್ಲಾ ಕ್ಲೀನ್ ಮಾಡಿ.. ಬರೀ ಅಸಹಾಯಕತೆ ಕಾಡಿತು ಕಣೇ.. ಕಣ್ಣೀರು ಮಾತ್ರ ನಮ್ಮ ಪಾಲಿಗೆ!

ಇವಳು: ಹೌದೇ, ಅದೇ ವಿಷಯಕ್ಕೆ ಇವತ್ತು ನಮ್ಮಿಬ್ಬರಲ್ಲಿ ಜಟಾಪಟಿಯಾಯ್ತು.. ಅವರೆಂದರು ಅಡುಗೆ, ಮನೆವಾರ್ತೆ ಎಲ್ಲ ನಿನ್ನ ಡ್ಯೂಟಿ.. ಕೆಲಸಕ್ಕೆ ಹೋಗುವವಳಾದರೂ ಅದನ್ನು ಪೂರ್ತಿಗೊಳಿಸಿಯೇ ಹೋಗಬೇಕು ನೀನು..

ನಾನೆಂದೆ, ಹಾಗಾದರೆ ನಮ್ಮ ಅಗತ್ಯಗಳನ್ನು ಪೂರೈಸುವುದೂ ನಿಮ್ಮ ಕರ್ತವ್ಯವಲ್ವಾ! ನಾನ್ಯಾಕೆ ಕೆಲಸಕ್ಕೆ ಹೋಗಬೇಕು? ಮನೆಯಲ್ಲೇ ಇದ್ದು ಇಲ್ಲಿನ ಕೆಲಸ ಚೆನ್ನಾಗಿ ಮಾಡ್ತೇನೆ.

ಅಷ್ಟಕ್ಕೆ ಕೆಂಡದಂತ ಕೋಪ.. ಅಲ್ವೇ ಪೈಪೋಟಿ ಮಾಡ್ತಿಯಾ? ನನಗೇ ಜವಾಬು ಕೊಡ್ತಿಯಾ?? ಕೈ ಎತ್ತಿದವರನ್ನು ಕಂಡು ಹೆದರಿಕೆಯಾಗಿ, ನನ್ನನ್ನು ಕ್ಷಮಿಸಿ, ತಪ್ಪಾಯ್ತು, ಇನ್ನು ಮುಂದೆ ಹಾಗೆಲ್ಲ ಜವಾಬು ಕೊಡೊಲ್ಲ ಅಂದೆ!


ಮುಂದೆ ನನ್ನ ನಡಿಗೆ ಬಿರುಸಾಯಿತು.. ಇನ್ನು ನನ್ನ ದಿನವೆಲ್ಲ ಕೆಟ್ಟಿತು, ಅದ್ಯಾಕೆ ನಾನಿವರ ಮಾತು ಕದ್ದಾಲಿಸಲು ಹೋದೆನಪ್ಪಾ.. ಪಶ್ಚಾತಾಪ ಪಟ್ಟೆ!!!

No comments:

Post a Comment