ನನ್ನ ಮನಸ್ಸು

04 September, 2013

ಪ್ರವಾಸ ಕಥನ!



       “ಕದಿ ಇಲ್ಲಾ ಎಳೆ.. ಬೇಡು.. ಏನ್ ಆಗುತ್ತೋ ಅದನ್ನು ಮಾಡು. ಆದ್ರೆ ಕೆಮರಾ ಇಲ್ಲದೆ ಪ್ರವಾಸಕ್ಕೆ ಹೋಗ್ಬೇಡ!”
ಕೆಮರಾ ಸರಿಯಿಲ್ಲವೆಂದು ಕಣ್ಣೀರು ಸುರಿಸಿ.. ದುಃಖದಲ್ಲಿದ್ದ ನನ್ನ ಮುಖದಲ್ಲೂ ನಗೆ ಹರಡಿಸಿತು ನನ್ನ ಪುಟ್ಟ ಗೆಳೆಯನ ಮಾತು!

ಹೂಂ, ಬದುಕು ಮತ್ತೊಂದು ತಿರುವಿಗೆ ತಿರುಗಿತ್ತು.. 

’ಮುಂಜಾನೆ’ಗೆ ಬರೆಯುತ್ತ ಬರೆಯುತ್ತಾ.. ಹೊಸ ಬಾಂಧವ್ಯ ಹುಟ್ಟಿತ್ತು! ಮುಖಪುಟದಲ್ಲಿ ಬರೇ ಮುಖಗಳ ಪರಿಚಯದಲ್ಲೇ ಹೊಸ ನೆಂಟುಗಳ ಉದಯವಾಗಿತ್ತು.

ಮೆರವಣಿಗೆಯ ಆಹ್ವಾನದ ಸಮಯದಲ್ಲೇ ನನ್ನ ಕೆಮರಾ ತೊಂದರೆಗೆ ಸಿಲುಕಿತ್ತು.. ಕುಂಟಿ, ಕುರುಡಿಯಾದೆನೆಂಬ ಭಾವ ಕಾಡಿತ್ತು.. ಮನದ ಮಾತು ಕೇಳಿದ ಮಿತ್ರ ತನ್ನ ಕೆಮರಾ ನೀಡುವ ಆಶ್ವಾಸನೆಯಿತ್ತ.. ಏನಿದ್ದರೂ ನನ್ನ ಕೆಮರಾವಿಲ್ಲದ ಭಾವ ಮೆರವಣಿಗೆಯುದ್ದಕ್ಕೂ ನನ್ನನ್ನು ಆಗಾಗ ಕಾಡಿತ್ತು!

ಮುಂಜಾನೆಯ ಮೆರವಣಿಗೆಯ ಪ್ಲಾನು ನನ್ನನ್ನೂ ಸೆಳೆದು ಸೀತಾನದಿಯಲ್ಲಿ ಕಾಲಾಡಿಸುವ ಕನಸನ್ನು ನನಸು ಮಾಡಿತು.

ಉಡುಪಿಯಲ್ಲಿ ಕಿಣಿ ಕುಟುಂಬದವರ ಆತಿಥ್ಯ ಕೊಂಕಣಿಯವರೆಂದರೆ ಬರೇ ವ್ಯಾಪಾರಿ ಮನೋಭಾವದವರು ಮಾತ್ರವಲ್ಲ ಹೃದಯ ವೈಶಾಲ್ಯದವರೂ ಇದ್ದಾರೆಂದು ತೋರಿಸಿತು!  

ಆರಾಮವಾಗಿ ಪ್ರಯಾಣಿಸುತ್ತಾ ಹಳೆಯ ಕನ್ನಡ ಹಾಡು, ಭಾವಗೀತೆ ಕೇಳುವುದು ನನ್ನ ಹವ್ಯಾಸ ಅಂತ ಅಂದ್ಕೊಂಡಿದ್ದೆನಾದದರೂ ಪ್ರವಾಸ ಹೋಗುವುದೇ ಸಾಧ್ಯವಿಲ್ಲವೆಂದು ತಿಳಿದಾಗ.. ಹವ್ಯಾಸ ತೊಟ್ಟಿಗೆ ಸೇರಿತ್ತು!  ಮೆರವಣಿಗೆದುದ್ದಕ್ಕೂ.. ನಾನು ಮತ್ತು ನಳಿನಿ ಗುಣುಗುಣಿಸುತ್ತಾ ಹಾಡು ಕೇಳಿದ್ದು ಕನಸಲ್ಲ ಅಂತ ತಿಳಿಯಲು ನಾನು ನನ್ನನ್ನೇ ಚಿವುಟಿ ನೋಡಿಲ್ಲ ಅಷ್ಟೇ!

 ನೀಲಾಗಸದಲ್ಲಿ ಹರಡಿದ್ದ ಹತ್ತಿ ಉಂಡೆಯಂತ ಮುಗಿಲುಗಳನ್ನು ಕಂಡಾಗಲೆಲ್ಲಾ ಅವುಗಳ ಮೇಲೆ ಮಲಗುವ, ತೇಲುವ ಕನಸುಗಳು..

ಅರೇ, ಕುಂದಾದ್ರಿಯ ಬೆಟ್ಟದ ಮೋಡದ ಮನೆಯೊಳಗೆ ನಾನು!!!
ಅಲೌಕಿಕ ಆನಂದ.. ಮಾತಲ್ಲಿ ವ್ಯಕ್ತವಾಗಲೊಪ್ಪದ ಭಾವ!!!
ಕ್ಷಣ ಮನ ಎಲ್ಲವನ್ನೂ ಮರೆತು ಬೆಟ್ಟದ ಮುಗಿಲಲ್ಲಿ ಲೀನವಾಗಲು ಒತ್ತಾಯಿಸಿತು..
ಮತ್ತೆ ಈ ಲೌಕಿಕ ಬಂಧನಕ್ಕೆ ಹೋಗಲೊಪ್ಪಲಿಲ್ಲ..
ಹ್ಮೂಂ, ಕ್ಷೀಣವಾಗಿ “ಅಮ್ಮಾ ಅಮ್ಮಾ.. “ ಕರೆ!

ಯಾವತ್ತೂ ಹಳೆ ಮನೆಗಳ ಮೇಲೆ ವಿಪರೀತ ಮೋಹ! ಮುಂಡ್ಕೂರಿನ ಅಜ್ಜನ ಮನೆಯ ಕಂಬಗಳ ಕೆತ್ತನೆಗಳನ್ನು ಅದೆಷ್ಟೋ ಸಲ ಅಪ್ಪಿ ಮುತ್ತಿಕ್ಕಿದ್ದೂ ಇತ್ತು. ಆಗುಂಬೆಯಲ್ಲಿ  ಹಳೆ ಸಾವುಕಾರರ ಮನೆಯ ವೈಭವದ ದರ್ಶನ... ಮನ ಅಜ್ಜನ ಮನೆಯ ನೆನಪಿನಿಂದ ಆರ್ದ್ರವಾಯಿತು!

ಉಡುಪಿಯಲ್ಲಿ ಬದ್ರಿ ಮತ್ತು ಅಮಿತ ಮತ್ತವರ ಮಗಳ ವಾತ್ಸಲ್ಯ ಆದರಾತಿಥ್ಯ.. ಶಿವಳ್ಳಿನೋ.. ಹವ್ಯಕ ಬ್ರಾಹ್ಮಣರದೋ.. ತಿಳಿದಿಲ್ಲವಾದರೂ ಮುಗಿಯದ ಮೆನು ತುಂಬಿದ ಭೋಜನ... ಮತ್ತೊಂದು extra ಹೊಟ್ಟೆ ಇದ್ರೆ ಒಳ್ಳೆದಿತ್ತು ಅನ್ನಿಸಿತ್ತು! ಸ್ವಭಾವತಃ ಅಷ್ಟೊಂದು ಭೋಜನ ಪ್ರಿಯಳಲ್ಲದ ನಾನೂ ಆ ದಿನ ಬಹಳ ಇಷ್ಟಪಟ್ಟು ತಿಂದಿದ್ದೆ!

ಒಂದಕ್ಕಿಂತಲೂ ಮತ್ತೊಂದು ಚಂದ ಹಳೆಯ ಮನೆಗಳ ದರ್ಶನ.. ವಿಜಯನಾಥ ಶೆಣೈ ಅವರ ನಮ್ಮ ಪ್ರಾಚೀನ ವಾಸ್ತುಶಿಲ್ಪಗಳ ಪುನರುತ್ತಾನದ ಕೆಲಸ.. ಅವುಗಳನ್ನು ಮಣಿಪಾಲದ ಹೆರಿಟೇಜ್ ಗ್ರಾಮದಲ್ಲಿ ಜೋಡಿಸಿದ ಬಗ್ಗೆ.. ಅಲ್ಲದೆ ಅವರ ಸಂಗೀತ ಪ್ರೇಮದ ಬಗ್ಗೆನೂ ಓದಿ ತಿಳಿದಿದ್ದವಳಿಗೆ ಅವರನ್ನೊಮ್ಮೆ ನೋಡುವ ಆಸೆಯಿರದೇ! ಅದೂ ಸಾಧ್ಯವಾದಾಗ ನನ್ನ ಅದೃಷ್ಟ ಇನ್ನೂ ಪೂರ್ಣವಾಗಿ ಕೆಟ್ಟಿಲ್ಲವೆಂದು ನಂಬಿದೆ! ಅದೂ ನಾನು ಬಹು ಮೆಚ್ಚುವ ಗೌರೀಶ್ ಕಾಯ್ಕಿಣಿಯವರ ಪುತ್ರ ಜಯಂತ್ ಸರ್ ಮತ್ತೆ ಸ್ಮೀತಾ ಅವರೊಂದಿಗೆ!!!

ತಣ್ಣಗಿನ ಮಜ್ಜಿಗೆ ಕುಡಿಸಿ ಮನ ತಣ್ಣಗೆ ಮಾಡಿದರೇನೋ ಹೌದು.. ಅದಕ್ಕಿಂತ ವಾತ್ಸಲ್ಯದಿಂದ ನಮ್ಮಂತಹ ಅಲ್ಪರನ್ನೂ ಅಪ್ಪಿ,
 “ಬರೀರಮ್ಮಾ.. ಬರೆದು ಬರೆದು ಮೇಲೇರುವಿರಿ.. ಸಾಹಿತ್ಯದರಮನೆಯ ಮೆಟ್ಟಲನ್ನು ನಿಧಾನವಾಗಿ ಹತ್ತಿ!”  
ವೈದೇಹಿ ಅಂದಾಗ ಕಣ್ಣು ಕಟ್ಟೊಡೆಯದಂತೆ ಇರಲು ಚಡಪಡಿಸಿದೆ!

ಕೊನೆಯದಾಗಿ.. ಇದಾಗಲೇ ಸಂಗೀತ ಕ್ಷೇತ್ರದಲ್ಲಿ ತನ್ನದೇ ಸ್ಥಾನ ಭದ್ರಪಡಿಸಿಕೊಂಡ ಮಹಾಲಕ್ಷ್ಮಿ ಶೆಣೈ.. ತನ್ನ ಮಾಧುರ್ಯ ಭರಿತ ಸ್ವರದಿಂದ ಮಾತ್ರವಲ್ಲದೇ ನಯ ವಿನಯ ನಡವಳಿಕೆಯಿಂದಲೂ ಮನದಲ್ಲಿ ನೆಲೆ ನಿಂತಳು!

ಯಾರಿಗುಂಟು ಯಾರಿಗಿಲ್ಲ.. ಇಂತಹ ಅದೃಷ್ಟ!!!

ಮಾನವೀಯತೆ ಕೊನೆಯುಸಿರು ಎಳೆಯುತ್ತಾ ಇದೆ ಎಂದು ನಂಬಿದವಳಿಗೆ ಅದಿನ್ನೂ ನಳನಳಿಸುತ್ತಿದೆ.. ಅಂತ ತೋರಿಸಿದ ಮುಂಜಾವಿಗರೇ ನಿಮಗೆ ಇಗೋ.

||ನನ್ನ ನಮೋ ನಮಃ||







No comments:

Post a Comment