ನನ್ನ ಮನಸ್ಸು

16 June, 2013

ವಾತ್ಸಲ್ಯದ ಸರಪಳಿ!


ನಿದ್ದೆಯಲಿ ಮೈಮರೆತಿದ್ದೆನೋ ಅಥವಾ ನೆನಪುಗಳ ಮಧ್ಯೆ ನಿದ್ದೆಯೋ.
ಕಪ್ಪೆಗಳ ವಟಗುಟ್ಟುವಿಕೆ, ಜೀರುಂಡೆಗಳ ಗೆಜ್ಜೆ ನಾದ..
ಮುಂಜಾನೆಯ ಆಲಾಪದಂತೆ ಕೇಳಿಸಿದ ಮರುತನ ರಾಗ..
ಒಂದೇ ಸಮನೆ ನಿಲ್ಲದ ಹನಿಗಳ ನರ್ತನ..

ಅದ್ಯಾವ ಕರೆ ಕಿವಿಯಲ್ಲಿ ಬುಸುಗುಟ್ಟುತ್ತಿದೆ..
ಯಾರದು ಕೋಗಿಲೆಯೇ...
ಇಲ್ಲವಲ್ಲ ಮುಂಜಾನೆಯ ಹಾಡಿಲ್ಲವಲ್ಲವೀಗ..
ಸುಯ್ಯೆಂದು ನುಗ್ಗಿದ ಗಾಳಿಯ ಜತೆ ಒಂದಿಷ್ಟು ಹನಿಗಳು ಮುಖದ ಮೇಲೆಲ್ಲಾ..

ತುಟಿಗೆ ಉಪ್ಪು ಮುತ್ತು..
ಪ್ರತೀ ಋತುವಿನಲ್ಲೂ ಇದೇ ಕರೆ ಮತ್ತು ನಿರಾಕರಣೆ..
ರೌದ್ರ ಅಲೆಗಳ ಆರ್ಭಟದಲಿ ಅದೇನು ಲಾವಣ್ಯದ ಮೋಡಿ;
ಆದ್ರತೆ, ಕರುಣಾಪೂರಿತ ಆಹ್ವಾನ

ಕಣಕಣದಲೂ ಸೇರಿ ಹೋಗಲಿರುವ ಆತ್ಮ ದೇಹದ ಮಿಲನಕೆ ಕರೆ
ನೋವು ಕಹಿ ಎಲ್ಲವೂ ಮರೆಸುವ ಅಪ್ಪುಗೆಯ ಕೊಡುಗೆ..
ಹೇಗೆ ನಿರಾಕರಿಸಲಿ..  ಕಾದಿದ್ದೇ ಈ ದಿನಕಾಗಿ.. ಈ ಆಹ್ವಾನಕ್ಕಾಗಿ..
ಹೊಸ್ತಿಲ ದಾಟಿದವಳ ಕಾಲಿಗೆ ಚಿಗುರೆಲೆಯ ಬೆರಳುಗಳ ಅಪ್ಪುಗೆ..

ಕಳಚಲಾಗಲಿಲ್ಲ..
ಇಲ್ಲೂ ಸೋಲು..
ಎಲ್ಲೆಡೆಯೂ ಸೋಲು..
ವಾತ್ಸಲ್ಯದ ಬಂಧವಿದು!




No comments:

Post a Comment