ನನ್ನ ಮನಸ್ಸು

26 May, 2013

ಬಣ್ಣವಿಲ್ಲದ ಹನಿಗಳು



ನೆರೆಮನೆ ಅಂಗಳದಲ್ಲಿ ಕೇಳಿಬಂದ ಕಿಲಿಕಿಲಿ ನಗುವಿನ ಸೆಳೆತಕೆ
ಮನೆಯ (ಮನದ) ಕಿಟಿಕಿ ಅಗಲವಾಗಿ ತೆರೆಯಿತು..
ಆ ಪುಟ್ಟ ಪುಟ್ಟ ಬೆರಳುಗಳು ಕರೆದವು..
ತೊದಲು ನುಡಿ... ಏನೋ ಹೇಳುತಿದೆ...
ಒಲವ ಸೂಸುವ ಕಡುಕಪ್ಪು ಬಟ್ಟಲು ಕಣ್ಗಳು..
ನವಿಲುಗರಿಯ ತಲೆಯ ಮೇಲೆ ಪೊತ್ತರಂತೂ
ತೇಟ ಬಾಲ ಗೋಪಾಲನೇ..
ಮುರಳಿಯನಿತ್ತು ನಾದ ಕೇಳಿ
ಗೆಜ್ಜೆ ಕಟ್ಟಿ ಮುಕ್ತವಾಗಿ ಕುಣಿಯಬೇಕೆಂಬಾಸೆ... ಮೂಡಿತೇಕೆ?
ಯಾವ ಮೋಹಕೂ ಬಗ್ಗದ ಮನದಲ್ಲೂ ಅದೇಕೀ ನವಿರು ಕಂಪನ..
ಮತ್ತೆ ಮತ್ತೆ ಅಲ್ಲೇ ನೆಡುವ ಮನ..
ಕಿಟಿಕಿ ಮುಚ್ಚಲೇ ಮನಸಿಲ್ಲ..
ಮರಳಿ ಮರಳಿ ಅಲ್ಲೇ ನೋಟವಲ್ಲೇ..
ಕಿವಿಯಲಿ ಅದೇ ನಗುವಿನ ಗುಂಗು..
ಒಲವಿಗೆ ಶರಣು ಶರಣು...
ನಿತ್ಯ ಉತ್ಸವ.. ಕಿಲಿ ಕಿಲಿ ನಗೆಗೆ
ಘಲ್ ಘಲ್ ಗೆಜ್ಜೆಯ ನಾದ ಎದೆಯೊಳಗೆ..
ಈ ಮನ ಕಿಟಿಕಿಯ ಒಳಗೆ... 
ನಾದ ಆ ಮನೆಯಂಗಳದಲ್ಲಿ..
ಅದರ ಪ್ರತಿದ್ವನಿ ಮಾತ್ರ ಈ ಮನದಲಿ..
ಬತ್ತಿದ ಎದೆಯಲ್ಲಿ ಮತ್ತೆ ಚಿಮ್ಮಿದ ನೊರೆ ನೊರೆ ಹಾಲು..
ಅಮೃತವನಿತ್ತು ಪುಟ್ಟ ಬಾಯಿಗೆ ಧನ್ಯಳಾಗಬೇಕೆಂಬ ತವಕ..
ಎದೆಗವುಚಿ,  ಮೈಕಂಪ ಆಘ್ರಾಣಿಸಿ ಕರಡಿಗೆಯಲಿ ತುಂಬಿಡಲೇ..
ಇಲ್ಲ ಇಲ್ಲ... ದೂರದಲೇ ನೋಡಿ ನಲಿವೆ..
ಲಕ್ಷಣ ರೇಖೆಯ ದಾಟಲಾರದೆ ಸೋಲು..
ದಿನಗಳುರಿದವು.. ಹಕ್ಕಿಯಂತೆ ಹಗುರ ಮನ..
ಚುಚ್ಚುವ ಬಾಣಗಳು ಗುರಿ ತಲುಪಲೇ ಇಲ್ಲ..
ಮತ್ತೆ ಹೊಸ ಋತು.. ಅದೇನಾಯಿತು?
ಹೊಸ ದಿನಗಳು ಹಳೆಯ ಭಾವದ ಕುರುಹು ತರಲೊಪ್ಪಲಿಲ್ಲವೇ?
ಎಲ್ಲಿ ಏನು ಬದಲಾಯಿತು?
ಅರೇ ಆ ನಗುವೇಕೆ ಕೃತಕ?
ತೊದಲು ಮಾತೇ ಇಲ್ಲ... ಬೇಡವಾದೆನೆ..
ಅಲ್ಲಿ ಗಂಭೀರ ಮೌನ!
ಈ  ಮನದ ಕನ್ನಡಿಯಲ್ಲಿ ಗೀರುಗಳು..
ಒಸರಿದವು ಹನಿಗಳು..
ಅಮೂರ್ತ ಭಾವದ ಮೂರ್ತ ರೂಪವೇ ಆ ಹನಿಗಳು..
ಕೆಂಪಲ್ಲ.. ಬಿಳಿಯೂ ಅಲ್ಲ..
ತೊದಲು ನುಡಿಗಳು ಮೂಡಿಸಿದ ಮಳೆಬಿಲ್ಲು ಮುರಿದು
ಬಣ್ಣಗಳು ದಿಕ್ಕು ದಿಕ್ಕಿಗೂ ಚದುರಿ..
ಈ ಹನಿಗಳಿಗೆ ಮತ್ತಾವ ಬಣ್ಣವಿರಬಹುದು?





23 May, 2013

ಗೊಂದಲದಲ್ಲಿ ನಾನೀಗ!


ಬರುವೆಯೆನೇ ಗೆಳತಿ.
ಒಯ್ಯುವೆನು ಅಂತರಂಗದ ಅರಮನೆಗೊಮ್ಮೆ...
ಹೌದೇ, ಅಲ್ಲೊಂದು ಗುಡಿಯನೂ ಬಚ್ಚಿಟ್ಟಿರುವೆ
ಒಲವ ಪೂಜಿಸಲೆಂದೇ..
ಯಾರಿಗೂ ಹೇಳಬೇಡವೆ..
ಝಗಮಗ ಬೆಳಕಿನಲ್ಲಿ ಅಡಗಿಸಿಟ್ಟಿದೆ ನೋವನೆಲ್ಲಾಮನೆ,
ಮಿಂಚುವ ಪರದೆಗಳಿಂದ ಮುಚ್ಚಿದ ಕಿಟಿಕಿ
ಚಿತ್ತಾರಗಳಿಂದ ಶೃಂಗರಿಸಿದ ಗೋಡೆ
ಮಿರುಗುವ ಬಣ್ಣಗಳಿಂದ ಮುಚ್ಚಿದ ಭಾವ
ನೋಡುವ ಕಣ್ಣುಗಳಿಗೆ ಹಬ್ಬ..
ನೋಡು ಕಂಡೆನಲ್ಲಾ ನಿನ್ನಲ್ಲೂ ಆ ಭಾವ!
ಹೊರಗಿನ ಕಣ್ಣುಗಳಿಗೆ ಕಾಣದೇ ಹೋಗುವುದು ಒಳಗಿನ ದುಮ್ಮಾನ..
ಇದೆಲ್ಲಾ ಬಯಸಿಯೇ ಇರಲಿಲ್ಲವಲ್ಲ ನಾನು
ಮತ್ತೇನು ಎಂದು ಕೇಳುವೆಯೆನೇ ನೀನು..
ಬಯಸಿತ್ತು ಮನವು ಒಲವ..
ಸಹೃದಯ ಗೆಳೆಯ ಬರಲಿ ಕೇಳಲಿ ಮನದ ಮಾತೊಮ್ಮೆ...
ಶೂನ್ಯ ಭಾವದ ಕಾಟ ಮಿತಿಮೀರಿತ್ತು..
ಆದರೂ ಉಸಿರಾಟ ನಿಲ್ಲಿಸುವ ತವಕವಿರಲಿಲ್ಲವಾಗ,
ಮನದಂಗಳದಲಿ ಅರಳಿದ ಕುಸುಮಗಳ ವಾತ್ಸಲ್ಯದ  ಬಲವೇ ಉಸಿರಾಗಿತ್ತು.
ದಿನಗಳ ಲೆಕ್ಕ ನಡೆದಿತ್ತು..
ದೂರದಲ್ಲಿದ್ದ ಆ ಕೈಲಾಸ ಗಿರಿಯ ಲೋಕದ ಕರೆ.. 
ಮತ್ತೆ ಮತ್ತೆ ಮೊಳಗುತಿತ್ತು ಕಿವಿಗಳಲ್ಲಿ..
ನಿತ್ಯ ಮೀಯುತ್ತಿದ್ದೆ.. ಗಡ ಗಡ ನಡುಗಿ ಸರೋವರದಲ್ಲಿ..
ಇತ್ತ ವಿಧಿಯ ನಡೆ ಬದಲಾಗಿ ಹೋಗಿತ್ತು..
ಎಳೆದು ತಂದ ಬಣ್ಣದ ಬದುಕಿಗೆ.
ಯಾವ ನಿರೀಕ್ಷೆಯಿಲ್ಲದೆ ಹೊಸ ಹಾದಿಯ ತುಳಿಯುತ್ತಾ ನಡೆದ ಹಾಗೆ,,,
ಹಳೆ ಕನಸುಗಳು ಅದೇಕೋ ಚಿಗುರಿ ಮೊಳಕೆಯೊಡೆದವು..
ರಂಗನಿತ್ತವು ಬದುಕಿಗೆ...
ನೋವ ಮರೆತು ಹಳೆಯ ನೆನಪನೆಲ್ಲಾ ಕೊಡವಿ 
ಉತ್ಸಾಹದ ತೇರನೇರಿ ಬೀದಿಗೊಮ್ಮೆ ಸುತ್ತು..
ಅಲ್ಲಲ್ಲಿ ಚಪ್ಪಾಳೆ.. ಸಾಕಲ್ಲವೆ..  ಮೈಮರೆತೆನೋ..
ವಿಧಿಯ ಎಚ್ಚರಿಕೆಯ ಕಡೆಗಣಿಸಿದೆನೇನೋ..
ನೋಡಿಗ ಮತ್ತೆ ಗೊಂದಲದಲ್ಲಿ ನಾನೀಗ
ಪಾರುಮಾಡುವೆಯೆನೇ ನನ್ನನ್ನು ನೀನೀಗ!



ಮೃಗಮಾನವ!


ಅದೇನೋ ಮಣ ಮಣವೆಂದು ಆ ಕಲ್ಲು ವಿಗ್ರಹಗಳೆದುರು
ಕುಳಿತವನ ನೋಡಿ ಬಂತೇ ಕೋಪ, ರೋಷ, ದ್ವೇಷ
ಅದೇ ನಸುನಗೆ.. ನಿರ್ಲಿಪ್ತತೆ.. ಕಲ್ಲಾಗಿರುವೆನೇ ನಾನೀಗ
ಊದು ಬತ್ತಿಯ ಹೊಗೆಯಲಿ ಮಸುಕಾದ ಮೂರುತಿಯ ನೋಡಿ
ನೆನಪಾಯ್ತು  ಹೀಗೆ ಅವನಿಗೂ ಆಗಿರಬಹುದೇ ನನ್ನ ಮೇಲಿ
ಕಲ್ಲು ಮೂರುತಿಯಲ್ಲಿರುವವನ ಹೃದಯವೂ ಕಲ್ಲೇ!

ಅಲ್ಲಿಂದ ತಂದೆ ನಿನ್ನನ್ನು, ನೀನಾಗಿರಬೇಕು ಕೃತಜ್ಞಳು
ಪೂರ್ತಿ ಜೀವಮಾನವೀಗ.. ಬಿಸಿಲು ಹೊರಗನ್ನುವಿಯಾ..
ಅವನಿಗೋ ಕೆಲಸವಿಲ್ಲ ಅದಕ್ಕೇ ನೆತ್ತಿಗೇರಿದ್ದಾನೆ... 
ನನಗೋ ನಿಶೆಯ ಗೆಳೆತನ ಮೇಲಿಗ..
ಹೆಣ್ಣೇ, ಅಬಲೆ ನೀ.. ಒಂಟಿಯಾದರೆ ಮುಕ್ಕುವರು ಜನರೀಗ
ಮರುಳೇ, ಏನು ತಿಳಿವಿದೆ ಎಂದು ಹೊರಬರುವೆ..
ನಡೆ ಒಳಗೆ ತಿಕ್ಕಿ ಬೆಳಗಿಸು ಗೋಡೆಯೊಳಗೆ ಉಳಿ..

ಮರೆಯಬೇಡ ಅವೆಲ್ಲವೂ ನಿನ್ನ ಕರ್ತವ್ಯ..
ಕರೆದಾಗ ಓಗೊಡಬೇಕು..  ನಿತ್ಯವೂ ಸಹಕರಿಸಬೇಕು..
ಗಂಡು ನಾನು ನೆನಪಿರಲಿ ದಾಸಿ ನೀನು..
ನನ್ನ ನೆರಳಲಿ ನೀ ನಡೆಯಬೇಕು..
ಬೆರಳು ತೋರಿ ಚುಚ್ಚುವುದು ಸಮಾಜ ನಿನಗೆ ನನಗಲ್ಲ..
ಕುಲಕೆ ಹೊರಗಾದೆ ನೀನೀಗ ನಿನಗಾರಿಲ್ಲ ಅಲ್ಲಿ ಇನ್ನೀಗ..
ಅತ್ತಿತ್ತ ನೋಡಬೇಡ ಅವರೂ ಇವರೂ ನನ್ನ ಪರವೇ!


ದೇಹ ಬೆಚ್ಚಗಿರಿಸದ ನೀನು ಇದ್ದರೂ ಇಲ್ಲದಿದ್ದರೂ ನಡೆಯುವುದು..
ನೀನಿಲ್ಲದಿರೆ ಹಸಿವು ನೀಗಿಸಲು ನನಗೆ ತಿಳಿದಿಲ್ಲವೇನು?
ಕೆಕ್ಕರಿಸಿ ನೋಡುವೆಯಾ.. ಎದುರು ಮಾತನಾಡುವೆಯಾ
ಒಂದು ಘಳಿಗೆಯೂ ಇರಬೇಡವಿಲ್ಲಿ.. ನಾನಾರು ಗೊತ್ತೆ
ಅವನ ಅಪವತಾರ ನಾನು... ಮೃಗಮಾನವ..
ನೆನಪಿಡು ಮೃಗಮಾನವ!!!








ಒಡೆಯನ (ಕಾಲ) ಬಳಿಯಲೊಂದು ನಿವೇದನೆ




ಉರುಳುತ್ತಲೇ ಇದೆ.. 
ಮತ್ತಿಷ್ಟು ನಿಧಾನವಾಗಿ.. 
ಒತ್ತಿ ಹಿಡಿದು ನನ್ನೆದೆ.. 
ಇಷ್ಟಿಷ್ಟೆ ಉಸಿರು ಬಿಟ್ಟು..
ಅದಕ್ಕೇನು! ಕನಿಕರವೇ ಇಲ್ಲವದಕೆ..
ಯಾರ ಅಧೀನಕೂ
 ಸಿಲುಕದ, ಗೋಚರವಾಗದೆ
 ಭಾವಕೆ ನಿಲುಕುವ ಕಾಲನೇ
 ನೀ ಬಲು ಕ್ರೂರಿ!
ಕರ್ಮದ ಫಲ ಕಳೆಯಲು  
ನೂಕಿದೆ ನೀ ನನ್ನ ಬುವಿಗೆ..
ಅಳು, ನಗು.. 
ಓಟ ಪಾಠ... 
ಮತ್ತೆ ಹೋರಾಟ.. ಆದರೇನು 
ಉಶ್ವಾಸ ನಿಶ್ವಾಸ ಬಿಡಲಿಲ್ಲ..
ವಿಶ್ವಾಸದ ಬೆಂಬಲ.. 
ಸಾಧಿಸುವ ಕನಸು..
ಬರುವ ನಾಳೆಗಾಗಿ ಹಂಬಲ..
ಹೌದು, ಒಂದಾನೊಂದು ಕಾಲದಲ್ಲಿ,
ಆ ಯೌವನದ ದಿನಗಳಲಿ
ಎಲ್ಲರಂತೆ ನೀ ಬಿತ್ತಿದ್ದಿ 
ಬಣ್ಣದ ಬೀಜಗಳನು..
ಹಸಿಯಾಗಿತ್ತೋ ..
ಚಿಗುರೊಡೆಯಲೇ ಇಲ್ಲ..
ಹಾಗೆಂದೇ  ನೀರುಣಿಸಲಿಲ್ಲವೆ?
ನೋವಿಲ್ಲವೆ ನಿನಗೆ ಅಂದರೆ...
ಅರೇ, ಕಾಣವುದಿಲ್ಲವೆ 
ಈ ನೀಲಿಗಟ್ಟಿದ ಮನಸ 
ನೀ ನೋಡಿಲ್ಲವೆನು?
ಹೌದಲ್ಲ, ಪರದೆಯಿಂದಾವೃತ್ತವಾಗಿದೆ.. 
ಮುಖದಲಿ ನಸುನಗೆ ಕಾಣಿಸಲೇಬೇಕು..
ಓಡಬೇಕು..  
ಆದರೆ ಎಲ್ಲಿ???
ಹಾದಿಯೇ ಮುಚ್ಚಿದೆ!!!
ಕಟ್ಟು ಬಿಚ್ಚಲಾಗುವುದಿಲ್ಲ, ಯಾಕೆ???
ಯಾಕೀ ಭಾವುಕತೆ.. 
ನಿನ್ನಂತೆ ನಾನೇಕಿಲ್ಲ..
ಮನಸು ಕಲ್ಲಾಗೇಕಿಲ್ಲ!
ವಾತ್ಸಲ್ಯ ಭಾವದ ಬಲೆ.. 
ಮನಸೆಲ್ಲಾ ಸೆರೆಯಾಯ್ತು..
ಮೋಹದ ಸಮಾಧಿಯದು..
ಅಲ್ಲೂ ಎಚ್ಚರ.. 
ನಿನ್ನೊಲುಮೆ ಬೇಕೆನಗೆ..
ಧ್ಯಾನ.. ತಪ.. 
ಎಲ್ಲವೂ ಮೇಲೆ ಮೇಲೆ...
ಒಪ್ಪಿದೆ ನೀ.. 
ಕೈಹಿಡಿದೆ.. ನಡಿ..
ನಾನಿರುವೆ ಬೆನ್ನಹಿಂದೆ..
ಕಣ್ಮುಚ್ಚಿ ನಿನ್ನ ನಂಬಿ 
ನಡೆಯುತ್ತಲೇ ಹೋದೆ.
ಬೆಳಕಿನ ಲೋಕವದು.. 
ಶೃಂಗಾರ ಕಾವ್ಯವಲ್ಲಿ..
ಮೂಕಿಯಲ್ಲ ಈಗ ನಾನು..
ಹಾಡಿದೆ.. ಎದೆ ಬಿಚ್ಚಿ 
ಮನ ತುಂಬಿ 
ಸ್ವರವೆತ್ತಿ ಹಾಡಿ ನಲಿದೆ..
ಎಲ್ಲವೂ ಪ್ರಸಾದ 
ಕಣ್ಣಿಗೊತ್ತಿ  ಮನದಲಿರಿಸಿದೆ..
ತಪದ ಫಲವಿದು
ಉಬ್ಬಿ ತೇಲಿದೆ..
ಅಯ್ಯೋ... ಅದೇಕಿ ಅಂಧಕಾರ.. 
ಮತ್ತೆ ಕಣ್ಕಟ್ಟು ತೋರುವೆಯಾ!
ದಾರಿ ಎಲ್ಲಿ?
ಕತ್ತಲೇ...
ನೀ  ಬದುಕನ್ನು ಕವಿಯಲು..
ಸೃಜನಶೀಲತೆ ಆವಿಯಾಯಿತು..
ಕೇಳದೆ ಇತ್ತೆ.. 
ನನಗಿದೆ ಆ ಹಕ್ಕು..
ನಾ ಕೊಟ್ಟರೆ ತಗೋ..
ಕೊಡಲಿಲ್ಲವೆಂದು ಕೂಗಾಡಬೇಡ..
ಸರಿ.. ಎಲ್ಲವೂ ನಿನ್ನಿಚ್ಛೆ!
ಒಪ್ಪಿದೆ..
ಕೇಳು ಕೊನೆ ಇಚ್ಛೆ..
ಇಲ್ಲ ಮತ್ತೆ 
ಉಸಿರಾಡುವ ಇಚ್ಛೆ..
ಪಡೆ ಅದ ನೀ ಹಿಂದೆ..
ನಿನ್ನಲ್ಲಿ ಒಂದಾಗುವ 
ನನ್ನಿಚ್ಛೆಯನು ಪೂರೈಸು!










20 May, 2013

ಕರ್ಮದ ಫಲ!


ಮಾಡಿದುಣ್ಣೋ ಮಹಾರಾಯ
ಅನ್ನುವರು ತಿಳಿದವರು
ಮಾಡಿದವನೊಂದಿಗೆ ಉಣ್ಣಬೇಕು
ಅವನ ಮನೆಯವರು
ಎಂಬುದೂ ತಿಳಿಯಿತಿಂದು
ಏಸು ಜನುಮವೆತ್ತಬೇಕು
ಕರ್ಮದ ಫಲವೆಲ್ಲವು
ತೀರಿ ಹೋಗಲು
ಮರಳಿ ಬರದಿರಲು!

ಭಾವ ನಿವೇದನೆ!




ನಿನ್ನ ಧೂಷಿಸಿಲ್ಲ
ನೀ ಹೊಣೆಯಲ್ಲ
ಒಂಟಿ ಭಾವದ
ಕಾಟ ತಡೆಯಲಾರೆನಲ್ಲ
ವಿಧಿಯ ಬಲವತ್ತಾದ
ಪಗಡೆಯಾಟದಲಿ
ಬಲಿಯಾದೆನಲ್ಲ
ನೋವು ಮನದಲಿ
ಆಡದೆ ಉಳಿದರೆ
ಕೆಸರು ಮನದಲಿ
ಕೇಳುವವರ್ಯಾರಿಲ್ಲ ಇಲ್ಲಿ
ಮರಳುವೆನೆಂದು ಹೋದೆನಲ್ಲಿ
ಎಷ್ಟೊ ದಿನಗಳ ಹಿಂದೆ
ಅದೇ ಹಳೆ ಲೋಕಕೆ
ತಟ್ಟಿದರೂ ತೆಗೆಯದೇ
ಹೀಯಾಳಿಸತದು ಮರಳಿ
ಏಕೆ ಬಂದಿಲ್ಲಿ!

ವಿಧಿಯಾಟ!!!


ಬೆನ್ನ ತಟ್ಟಿ ಹುರಿದುಂಬಿಸಿ ನಡೆ ಮುಂದೆ ನಾನಿರುವೆ ಹಿಂದೆ
ಅಂದ ಕೈಗಳ ಕಿತ್ತೆಸೆದೆಯಲ್ಲ  ಅಯ್ಯಾ ವಿಧಿಯೆ
ಮಿಣಿ ಮಿಣಿ ಬೆಳಗುತ್ತಿತ್ತಾ ಹಣತೆ ಬಾಳ ಪಥದೊಳಗೆ
ಒಂದಿಷ್ಟು ಕತ್ತಲ ನುಂಗಿ ಗುರಿಯತ್ತ ಹಾದಿ ತೋರುತಿತ್ತೆ
ಅದ ಕಸಿದು ಏನು ಸಾಧಿಸಿದ ತವಕವೇ ನಿನಗೆ ವಿಧಿಯೇ
ಮತ್ತೇನು ಉಳಿದಿದೆ ಹುಗಿದೆಯಲ್ಲ ಜೀವಂತ ಗೋರಿಯೊಳಗೆ!

18 May, 2013

ನೀ ಯಾರಿಗಾದೆಯೋ ಮಾನವ!

ಗುರುತ್ವ ಬಂಧವೊಂದು ಇಲ್ಲದಿರೆ



ಮುಗಿಲ ಮೀರಿ ಬೆಳೆದು ತನಗಿಂತ 



ಮಿಗಿಲು ಯಾರಿಹರೆಂದು 



ಮೆರೆಯುತಿರಲಿಲ್ಲವೆ ಮಾನವ!

17 May, 2013

ರೂಮಿ ಪಿಸುಗುಟ್ಟಿದ್ದು!


ಒಲವೇ,

ಕಳೆದೆವು ನಾವು ತಿನ್ನುಣ್ಣುವುದರಲ್ಲೇ ಹಗಲನ್ನೆಲ್ಲಾ

ಈ ಇರುಳಾದರೂ ನಮ್ಮಿಬ್ಬರದಾಗಿರಲಿ

ಸವಿಮಾತುಗಳನ್ನು ಕಿವಿಯೊಳಗೆ ಪಿಸುಗುಟ್ಟುತ್ತ

ಕಳೆಯೋಣ ಚಂದ್ರನಿಗೂ ಕಿಚ್ಚಾಗುವಂತೆ!

-ರೂಮಿ ಪಿಸುಗುಟ್ಟಿದ್ದು

ಅಸಹಾಯಕತೆ-ದ್ವೇಷ!


“ಹುಂ, ನಿನಗೇನು ಬೇಕು ತೆಗೆದುಕೊ!”
ತನ್ನ ಐದು ವರ್ಷದ ಮಗಳನ್ನು 13 ವರ್ಷದ ತಮ್ಮನ ಡೆಸ್ಕಿನ ಮೇಲೆ ನಿಲ್ಲಿಸಿ ಅಪ್ಪ ಹೇಳುತ್ತಾನೆ.  ಆ ಮುಗ್ಧ ಮಗು ಕಣ್ಣರಳಿಸಿ ಖುಷಿಯಿಂದ ತನ್ನ ಪೆನ್ ನ್ನು, ನೋಟು ಬುಕ್ ನ್ನು ಎತ್ತಿಕೊಳ್ಳುತ್ತಿರುವುದನ್ನು ನೋಡಿ ಪ್ರತಿಭಟಿಸುವ ಧೈರ್ಯವಿಲ್ಲದೆ ಆ ಹುಡುಗ ಅಸಹಾಯಕತೆಯಿಂದ ಕಣ್ಣೀರು ತುಂಬಿದ ಕಣ್ಣುಗಳಿಂದ ಸುಮ್ಮನೆ ನಿಲ್ಲಬೇಕಷ್ಟೇ!  ಅಣ್ಣನ ಮಗಳು ತನ್ನ ನೋಟು ಬುಕ್ಕಿನಲ್ಲಿ ಗೀಚುವುದನ್ನು ನೋಡಿ ಮರುದಿನ ಬೆತ್ತ ತನ್ನ ಬೆನ್ನ ಮೇಲೆ ನಾಟ್ಯವಾಡುವುದನ್ನು ನೆನೆದುಕೊಂಡು ಅವನ ಗಲ್ಲ ಒದ್ದೆಯಾಗುತ್ತದೆ!. ಮನೆಯ ಪರಿಸ್ಥಿತಿಯನ್ನು ಸುಧಾರಿಸುವಲ್ಲಿ ಮಹತ್ತರ ಪಾತ್ರ ವಹಿಸಿದ  ಮಗನ ಮೇಲಿನ ಅತೀ ಅಭಿಮಾನದಿಂದ ತನ್ನ ಅಪ್ಪನಾಗಲಿ ಅಮ್ಮನಾಗಲಿ ಅಥವಾ ಅಕ್ಕಂದಿರಾಗಲಿ ಈ ದೊಡ್ಡಣ್ಣನ ಯಾವುದೇ ಕುಕಾರ್ಯಕ್ಕೂ ಅಡ್ಡಬರುವುದಿಲ್ಲವೆಂಬ ಸತ್ಯ ಆ ಹುಡುಗನಿಗೆ ಅದಾಗಲೇ ತಿಳಿದ ಕಾರಣ ಅವನು ಮೌನಿಯೇನೋ ಆಗಿದ್ದನು, ಆದರೆ  ದೊಡ್ಡಣ್ಣ ಮತ್ತವನ ಪರಿವಾರವನ್ನೇ ದ್ವೇಷಿಸಲು ಪ್ರಾರಂಭಿಸಿದ! ಮುಗ್ಧಳಾಗಿದ್ದ ಆ ಹುಡುಗಿಗೆ ಚಿಕ್ಕಪ್ಪನ ಕೋಪ ದ್ವೇಷದ ಕಾರಣ ತಿಳಿಯುವಾಗ ಪರಿಸ್ಥಿತಿ ವಿಷಮಿಸಿತ್ತು... ತನಗೆ ತಿಳಿಯದೇ ಚಿಕ್ಕಪ್ಪನ ಅಸಹಾಯತೆಯನ್ನು ದುರುಪಯೋಗ ಮಾಡಿದ ಬಗ್ಗೆ ಪಶ್ಚಾತಾಪಪಟ್ಟರೂ ಪ್ರಯೋಜನವಿರಲಿಲ್ಲ.  ಅಹಂಕಾರದಿಂದ ಅಪ್ಪ ಮಾಡಿದ ಫಲವನ್ನು ಅವನ ಮಕ್ಕಳು ಜೀವಮಾನ ಪೂರ್ತಿ ಅನುಭವಿಸುತ್ತಿದ್ದಾರೆ. ತಮ್ಮ ಬಂಧುಗಳೆಲ್ಲರ ದ್ವೇಷದ ಬೆಂಕಿಯ ಶಾಖದಲ್ಲಿ ಬಾಡುತ್ತಿದ್ದಾರೆ!


ಮಾಡಿದುಣ್ಣೋ ಮಹಾರಾಯ
ಅನ್ನುವರು ತಿಳಿದವರು
ಮಾಡಿದವನೊಂದಿಗೆ ಉಣ್ಣಬೇಕು
ಅವನ ಮನೆಯವರು
ಎಂಬುದೂ ತಿಳಿಯಿತಿಂದು
ಏಸು ಜನುಮವೆತ್ತಬೇಕು
ಕರ್ಮದ ಫಲವೆಲ್ಲವು
ತೀರಿ ಹೋಗಲು
ಮರಳಿ ಬರದಿರಲು!

15 May, 2013

ನೀನಿರೆ ಬಳಿಯಲಿ... !!!


ಒಲವೇ,

ನೀನಿರೆ ಬಳಿಯಲಿ ಬದುಕಿನ ಭಾರವು ಹಗುರ!

ನೀನಿರೆ ಬಳಿಯಲಿ ಸುಡುವ ಬಿಸಿಲೂ ಬೆಳದಿಂಗಳು!

ನೀನಿರೆ ಬಳಿಯಲಿ ಚಂದ್ರನಿಲ್ಲದ ಇರುಳೂ ಹುಣ್ಣಿಮೆ!

ನೀನಿರೆ ಬಳಿಯಲಿ ನಡುಗುವ ದೇಹವೂ ಬೆಚ್ಚಗೆ!

ನೀನಿರೆ ಬಳಿಯಲಿ ಕಾಡದು ಹಸಿವು ತೃಷೆ!

ನೀನಿರೆ ಬಳಿಯಲಿ ಬಾರಳು ನಿಶೆ!

ನೀನಿರೆ ಬಳಿಯಲಿ ನನಗದೇ ನಶೆ!