ನನ್ನ ಮನಸ್ಸು

07 April, 2013

ಪರೀಕ್ಷೆಯೆಂಬ ಗುಮ್ಮನನ್ನು ಬೆದರಿಸಿದೆ ಆತ್ಮ ವಿಶ್ವಾಸದಿ!

   
                "ನಿನಗೆ ಇದೆಲ್ಲ ಬೇಕಿತ್ತೇ!"
        ನನ್ನ ಆತ್ಮೀಯ ಮಿತ್ರರೊಬ್ಬರು ನನಗೆ ಪರೀಕ್ಷೆಯೆಂದು ತಿಳಿದಾಗ ಉದ್ಘರಿಸಿದರು! ಅವರ್ಯಾಕೆ ಹಾಗೆ ಹೇಳುತ್ತಿದ್ದಾರಂತ ನನಗೊತ್ತಿತ್ತು. ಅವರಿಗೆ ನನ್ನ ಪರಿಸ್ಥಿತಿಯ ಅರಿವಿತ್ತು. 45ರ ಪ್ರಾಯದಲ್ಲಿ ನನ್ನ ಕರ್ತವ್ಯಗಳನ್ನು ಮುಗಿಸಿ, ಜತೆಗೆ ನಿತ್ಯ ನಡೆಯುತ್ತಿರುವ ಮೂರು ಹೊತ್ತಿನ ಮನೆ ಪಾಠದ ಮಕ್ಕಳ ಜತಗೆ ಏಗಿ, ಸಮಯಕ್ಕೆ ಸರಿಯಾಗಿ ಕಾಲೇಜಿಗೆ ಹೋಗುವುದು ಸುಲಭವಲ್ಲ ಎಂಬ ಅರಿವಿತ್ತವರಿಗೆ.  ಜತೆಗೆ ಎರಡು ಥಿಯರಿ ಪರೀಕ್ಷೆನೂ ಇದ್ದ ಕಾರಣ ಈ ಕೆಲಸಗಳ ಮಧ್ಯೆ ಅವನ್ನು ಓದಿ ತಲೆಯಲ್ಲಿ ನೆನಪಿಟ್ಟುಕೊಳ್ಳುವುದು ಕಷ್ಟ ಸಾಧ್ಯವೇ ಸರಿ! ಇಷ್ಟೆಲ್ಲ ಆದರೂ ನಾನು ನಂಬಿದವನು ನನ್ನ ಕೈಯ ಬಿಡನು ಎಂದು ನಂಬಿ ಮುಂದುವರಿಯುತ್ತಿದ್ದೆ.

    ಅಗಸ್ಟ್ ತಿಂಗಳ ಮಧ್ಯದಲ್ಲಿ ತನ್ನ ಮಗಳನ್ನು ನನ್ನ ತರಗತಿಗೆ ಸೇರಿಸಲು ಬಂದ ಮಹನೀಯರು ನನ್ನನ್ನು ತಮ್ಮ ಕಾಲೇಜಿಗೆ ಸೇರಲು ಆಹ್ವಾನಿಸಿದಾಗ ನನಗೆ ಸ್ವರ್ಗವು ಕೈಗೆಟುಕಿದ ಹಾಗೆ ಅನಿಸಿದ್ದು ಸುಳ್ಳಲ್ಲ. ಹಾಗೆ ಕಾಲೇಜಿಗೆ ಹೋದವಳಿಗೆ ಪ್ರಾಂಶುಪಾಲರು ಬಹಳ ತಡವಾಯಿತು, ಈಗ ಸೇರುವುದು ಸಾಧ್ಯವಾಗುದಿಲ್ಲವೆಂದಾಗ ಉಳಿದ ಉಪಾಧ್ಯಾಯರು ಒತ್ತಾಯ ಮಾಡಿ.. ಹೀಗೂ ಹಾಗೂ ಕಲಾ ಕಾಲೇಜಿಗೆ ನನ್ನ ಸೇರ್ಪಡೆ ಆಯಿತು. 10.30 ಅಥವಾ11ಕ್ಕೆ ಕಾಲೇಜಿಗೆ ಹೋಗಿ ಬರೇ ಬೆಳಗಿನ ತರಗತಿಗಳಿಗೆ ಮಾತ್ರ ನನ್ನ ಹಾಜರಿ. ನಡುನಡುವೆ ಏನಾದರೂ ಮನೆಯ ಕೆಲಸ ಅಥವಾ ಮಕ್ಕಳ ಕೆಲಸವಿದ್ದರೆ ಅದು ಸಹ ತಪ್ಪುತ್ತಿತ್ತು. ಅಂತೂ ವಾರ್ಷಿಕ ಪರೀಕ್ಷೆಯೂ ಬಂತು. ಸಂಧಿಘ್ನ ಪರಿಸ್ಥಿತಿ ನನ್ನದು. ಇತ್ತ ನನ್ನ ಮನೆ ಪಾಠದ ಮಕ್ಕಳಿಗೂ ಪರೀಕ್ಷೆ, ನನಗೂ!

   ಪ್ರಾಕ್ಟಿಕಲ್ ಪರೀಕ್ಷೆಗಳು 10 ಗಂಟೆಗಳವು! ಅಂದರೆ ಒಂದು ಪರೀಕ್ಷೆ ಎರಡು ದಿನ! ಅಂದರೆ 4 ಪರೀಕ್ಷೆಗಳಿಗೆ 8 ದಿನ ಬೇಕಾಗುತ್ತದೆ. ಮಧ್ಯೆ ಭಾನುವಾರ ಬಂದರೆ ಆ ದಿನವೂ ಪರೀಕ್ಷೆ! ನಾನು ಚಕ್ರವ್ಯೂಹದಲ್ಲಿ ಸಿಲುಕಿದ್ದೆ!

ಇದೆಲ್ಲಾ ತಿಳಿದೇ ನನ್ನ ಮಿತ್ರರು ನನಗಾ ಮಾತು ಹೇಳಿದ್ದು. ಅವನ ಚಿತ್ತದಲ್ಲಿ ಏನೋ ಇರಬೇಕು; ಆದ ಕಾರಣ ಅವನು ನಾನು ಕಾಲೇಜು ಸೇರುವಂತೆ ಮಾಡಿದ್ದು ತಾನೇ! ಹಾಗಾಗಿ ಈ ಚಕ್ರವ್ಯೂಹದಿಂದ ನನ್ನನ್ನು ಹೊರತರುವುದೂ ಅವನದೇ ಜವಾಬ್ದಾರಿ ಅಂತ ಅಂದುಕೊಂಡು ನಾನೂ ನಿಶ್ಚಿತಳಾಗಿ ಬಿಟ್ಟೆ.

      ಹೇಳದೇ ಕೇಳದೇ ಬಂದ ಸಂಕಷ್ಟಗಳ ಎದುರಿಸಿ ಮೆಟ್ಟಿದವಳಿಗೆ ಈ ಪರೀಕ್ಷೆಗಳು ಲೆಕ್ಕಕ್ಕಿಲ್ಲದಂತಾಗಿದ್ದವು. ಅಲ್ಲದೆ ಸಮಯಕ್ಕೆ ಸರಿಯಾಗಿ ಕಾಲೇಜಿಗೆ ತಲುಪುತ್ತಿದ್ದೆ. ವಿಶ್ವಾಸದಿಂದ ಎಲ್ಲವನ್ನೂ ಎದುರಿಸಿ ಬರೆದೆ; ಚಿತ್ರಗಳನ್ನು ಬಿಡಿಸಿದೆ. ಹಲವು ಸಲ ಒಂಟಿತನ ಕಾಡುತಿತ್ತು.

    ಆದರೂ ದೇಹಕ್ಕೆ ಒಂದಿಷ್ಟು ಪೆಟ್ಟು ದಕ್ಕಿತ್ತು... ಬೆನ್ನು ನೋವು, ಸೊಂಟ  ನೋವು ಸ್ವಲ್ಪ ದಿನ ಕಾಡಿತ್ತು. ನನ್ನ ಆತ್ಮಸ್ಥೈರ್ಯವನ್ನು ನೋಡಿ ಹೆದರಿ ನೋವೂ ನನ್ನನ್ನು ಬಿಟ್ಟು ಹೋಯಿತು! ಕೊನೆಗೂ ಪರೀಕ್ಷೆಯೆಂಬ ಗುಮ್ಮನನ್ನು ಬೆದರಿಸಿ ಮೆಟ್ಟಿನಿಂತ ಹೆಮ್ಮೆ ನನ್ನದಾಯಿತು. ಮತ್ತೆ ೨೩ ವರುಷಗಳ ನಂತರ ಮತ್ತೆ ಕಾಲೇಜಿಗೆ ಹೋಗಿ ಕಲೆ ಕಲಿಯುವ ನನ್ನ ಕನಸು ನನಸು ಮಾಡುವ ಆರಂಭದ ಹೆಜ್ಜೆ ಒಂದಿಷ್ಟು ನಡುಗುತಿತ್ತಾದರೂ, ಮನದೊಳಗಿನ ಮಂಟಪದಲ್ಲಿರುವ ಒಲವಿನ ಬೆಂಬಲ ಸದಾ ನನ್ನೊಡನೆ ಇರುವುದೆಂಬ ಆತ್ಮವಿಶ್ವಾಸವಿತ್ತು.

      ಪರೀಕ್ಷೆ ಮುಗಿದದ್ದೇ ತಡ ಇದ್ದಕ್ಕಿದ್ದಂತೆ ಆತ್ಮವಿಶ್ವಾಸ ಕುಸಿಯಿತು. ಮನಸ್ಸು ದೇಹವೆರಡು ಮುಂದೆ ತಮ್ಮಿಂದ ಏನೂ ಸಾಧಿಸಲಿಕ್ಕಾಗುವುದಿಲ್ಲವೆಂದು ಮೊಂಡುತನ ತೋರಿಸಿದವು. ಇಲ್ಲಿಯ ತನಕ ಪ್ರತಿಯೊಂದಕ್ಕೂ ಅಮ್ಮ ಎಂದು ಕಾಲ್ಕೊಡಲುತ್ತಿದ್ದ ಮಕ್ಕಳು ಇದೀಗ ಸ್ವತಂತ್ರವಾಗಿ ತಮ್ಮ ನಿರ್ಧಾರ ಮಾಡುತ್ತ ತಮ್ಮದೇ ಹರೆಯದ ಮಕ್ಕಳೊಂದಿಗೆ ಹೆಚ್ಚಿನ ವೇಳೆ ಕಳೆಯುತ್ತಿದ್ದರು.  ಧ್ಯನಕ್ಕೆ ಕುಳಿತರ ಏಕಾಗ್ರತೆ ಸಿಗುತ್ತಿರಲಿಲ್ಲ... ಯಾರೂ ಏನು ಹೇಳಿದರೂ ಮನದಲ್ಲಿನ ನಿರಾಶೆ ದೂರವಾಗಲಿಲ್ಲ. ಮಗಳ ಅಮ್ಮನ ತಮ್ಮನ ಶತಾಗತ ಯತ್ನ ಕೊನೆಗೂ ಫಲ ಕೊಟ್ಟಿತು... ಜತೆಗೆ ಆತ್ಮೀಯ ಗೆಳತಿ ಮತ್ತವಳ ಪತಿಯ ಬೆಂಬಲದ ಯತ್ನವಾಗಿ ಮನಸ್ಸು ಒಂದಿಷ್ಟು ಹತೋಟಿಗೆ ಬಂದಿತು.  ಎಲ್ಲಕ್ಕಿಂತಲೂ ಮಿಗಿಲಾಗಿ "ನಾನು ಮುಗಿಲು ನೀನು ನೆಲ" ಹಾಡು ಮತ್ತೆ ನನ್ನನ್ನು ಹಳೆಯ ದಿನಗಳಿಗೆ ಮರಳಿಸಿತು. ಜತೆಗೆ ಇನ್ನು ಬರೆಯಲಾರೆನೋ ಎಂದು ಬೆದರಿದ್ದ ನನ್ನಳೊಗಿನಿಂದ ಮತ್ತೆ ಹಾಡು ಹೊಮ್ಮತೊಡಗಿತು.  ಸಾಹಿತ್ಯ ಪ್ರಪಂಚದಲ್ಲಿ ಅದಕ್ಕೆಷ್ಟು ತೂಕವಿದೆಯೋ ಗೊತ್ತಿಲ್ಲ, ಆದರೂ ನನಗೆ ನನ್ನ ಆತ್ಮವಿಶ್ವಾಸವನ್ನು ಮರಳಿಸಿತು, ಅಷ್ಟು ಸಾಕು.   ನಡುಗುತ್ತಿದ್ದ ಕೈಗಳಲ್ಲಿ ಮತ್ತೆ ಕುಂಚ ಮರಳಿತು, ನನ್ನ ಛಾಯಾಗ್ರಹಣ ಹವ್ಯಾಸವೂ ನನ್ನನ್ನು ಮರಳಿ ಸೇರಿತು. ಮತ್ತೆ ಉಸಿರಾಟ ಸರಾಗವಾಗಿ ನಡೆಯುತ್ತಿದೆ.

      ಇತ್ತ ನನ್ನ ಪರೀಕ್ಷೆಯ ಫಲಿತಾಂಶ ಬಂದಿದೆ, ಫಸ್ಟ್ ಕ್ಲಾಸ್ ವಿದ್ ಡಿಸ್ಟಿಂಕ್ಷನ್!

   







No comments:

Post a Comment