ನನ್ನ ಮನಸ್ಸು

20 April, 2013

ನೀಲವ್ವ ಮತ್ತು ಫ್ಯಾನಿನ ಅಂಗಡಿಯವ!


“ನೀಲವ್ವ, ಸಿಕ್ಕಿತಾ?”
“ಹೌದಮ್ಮಾ!” ಅಂದವಳು, “ಅರೇ, ನಿಮಗೆ ಹೇಗೆ ಗೊತ್ತಾಯ್ತು ನಾನು ಹಣ ಕಳಕೊಂಡಿದ್ದೆನೆಂದು!”
ದೂರದ ಬಳ್ಳಾರಿಯಿಂದ ವಲಸೆ ಬಂದ ನೀಲವ್ವ ನಮ್ಮ ಮನೆಯ ಬಳಿಯಲ್ಲಿರುವ ಒಂದು ಕೋಣೆಯೆಂಬ ಮನೆಯಲ್ಲಿ ಮಗ ಗಂಡನೊಂದಿಗೆ ಮನೆಕೆಲಸ ಮಾಡಿ ಬರುವ ಪುಡಿಕಾಸಿನಿಂದ ಬದುಕನ್ನು ನಡೆಸುತ್ತಿದ್ದಾಳೆ.  ತನ್ನ ಧಡೂತಿ ದೇಹದ ಕಾರಣ ಕೆಲವೇ ಮನೆಗಳ ಕೆಲಸ ಒಪ್ಪಿಕೊಂಡಿದ್ದಾಳೆ. ಒಂದು ಕಡೆಯಿಂದ ಇನ್ನೊಂದೆಡೆ ಹೋಗುವಾಗ ಏದುಸಿರು ಬಿಡುತ್ತಾ ದೇಹವನ್ನು ಎಳೆದುಕೊಂಡು ಹೋಗುವುದು ನೋಡುವಾಗ ಕರುಳು ಹಿಂಡಿದಂತೆ ಆಗುತ್ತದೆ.  ಹಸಿವು ತಡೆದುಕೊಳ್ಳಲಾಗದೆ ಮೂರು ಹೊತ್ತು ಸರಿಯಾಗಿ ತಿನ್ನುತ್ತಾಳೆ. ಹಾಗೇ ಮೈಬೆಳೆಯುತ್ತಾ ಹೋಗುತ್ತಿದೆ.
ಆ ದಿನ ನಾನು ಕಾಲೇಜಿನಿಂದ ಊಟಕ್ಕೆ ಮನೆಗೆ ಬರುತ್ತಿರುವಾಗ ತಲೆ ತಗ್ಗಿಸಿ ಏನೋ ಕಳಕೊಂಡದನ್ನು ಹುಡುಕುವವರ ಹಾಗೆ ಬರುವ ನೀಲವ್ವನನ್ನು ನೋಡಿದೆ. ಅವಳನ್ನು ಮಾತನಾಡಿಸಲು ಹೋಗದೇ  ಬಹುಶಃ ಹಣ ಕಳಕೊಂಡಿದ್ದಾಳೇನೋ ಎಂದು ನಾನೂ ನೆಲವನ್ನು ಪರಿಶೀಲಿಸುತ್ತಾ ಮನೆಯತ್ತ ನಡೆದೆ. ಬಾಯಿ ಒಣಗಿತ್ತು, ಬೆಳಿಗ್ಗೆ ಅವಸರದಲ್ಲಿ ತಿಂದದ್ದು 10 ಗಂಟೆಗೇ ಕರಗಿಹೋಗಿತ್ತು. ಆ ದಿನ ರೇಖಾಚಿತ್ರದ ಪರೀಕ್ಷೆ, ಬರೇ ಚಿತ್ರ ಬಿಡಿಸಿ ಸ್ವಲ್ಪ ಬಣ್ಣ ಮಾತ್ರ ಹಾಕಿಯಾಗಿತ್ತು. ಮತ್ತೆ ಮಧ್ಯಾಹ್ನ ಅರ್ಧ ಗಂಟೆಯೊಳಗೆ ಮರಳಿ ಕಾಲೇಜಿಗೆ ಹೋಗಬೇಕಿತ್ತು. ಹಾಗಾಗಿ ಏನಿದ್ದರೂ ಮತ್ತೆ ಮರಳಿ ಬಂದ ಮೇಲೆ ವಿಚಾರಿಸುವ ಎಂದುಕೊಂಡು ನೆಲ ಪರಿಶೀಲಿಸುತ್ತ ನಮ್ಮ ಓಣಿಯ ತಿರುವಿನತ್ತ ಬರುವುದೂ ಫ್ಯಾನಿನ ಅಂಗಡಿಯವ ನೆಲದಿಂದ ಏನೋ ಎತ್ತುವುದು ಒಟ್ಟಿಗೆ ನಡೆಯಿತು. ಮನಸ್ಸು ಇದು ನೀಲವ್ವನ ಹಣವಿರಬಹುದಾ ಅಂತ ಸಂಶಯಗೊಂಡಿತು. ಕೇಳಲು ಸಂಕೋಚವಾಗಿ, ಮೊದಲು ನೀಲವ್ವನನ್ನು ವಿಚಾರಿಸಿ ಮತ್ತೆ ಏನಂತ ನೋಡಿದರಾಯಿತು ಅಂದುಕೊಂಡೆ. ಹಾಗೆ ಊಟ ಮಾಡಿ ಕಾಲೇಜಿನ ಕಡೆ ಹೊರಟವಳು ನೀಲವ್ವನ ಕೋಣೆಯ ಬೀಗ ನೋಡಿ ಇನ್ನೇನಿದ್ದರೂ ಸಂಜೆ ವಿಚಾರಿಸಿದರಾಯಿತು ಎಂದು ಸೀದ ಕಾಲೇಜಿನ ಕಡೆ ಧಾವಿಸಿದೆ. ಸಂಜೆ ಬಂದವಳೇ ಅವಳ ಕೋಣೆಯತ್ತ ನಡೆದು ವಿಷಯವನ್ನೆಲ್ಲಾ ತಿಳಿದೆ.

    “ನಾನು ಕಾಲೇಜಿನಿಂದ ಬರುತ್ತಿರುವಾಗ ನೀನು ಕೃಷ್ಣ ಮಠದೆದುರು ಏನೋ ಕಳಕೊಂಡವಳ ಹಾಗೆ  ನೆಲ ನೋಡುತ್ತಾ ಹೋಗುತ್ತಿದ್ದಿಯಲ್ಲ, ಬಹುಶಃ ಹಣ ಕಳಕೊಂಡಿರಬಹುದೆಂದು ಯೋಚಿಸಿ ನಾನು ಮನೆಗೆ ಬರುತ್ತಾ ನೆಲವನ್ನೇ ನೋಡುತ್ತಾ ಬಂದಿದ್ದೆ. ಎಲ್ಲಿ ಸಿಕ್ಕಿತು ಹಣ?”
“ಓಣಿಯ ತಿರುವಿನಲ್ಲಿದ್ದ ಫ್ಯಾನಿನ ಅಂಗಡಿಯ ಯಜಮಾನರು ಕೊಟ್ಟರು.”
“ಹಾಗಾದರೆ ನನ್ನ ಊಹೆ ಸರಿ. ಅ ಫ್ಯಾನಿನ ಅಂಗಡಿಯವರು ನಾನು ಓಣಿಯ ಬಳಿ ಬರುವಾಗ ನೆಲದಿಂದ ಏನೋ ಎತ್ತಿದನ್ನು ನೋಡಿದ್ದೆ. ನಿನ್ನ ಹಣವಿರಬಹುದೇನೋ ಅಂದುಕೊಂಡು ಅವರನ್ನು ಕೇಳುವ ಅಂದುಕೊಂಡೆ. ಆದರೆ ನಿನ್ನ ಬಳಿ ಏನು ಕಳಕೊಂಡೆ ಅಂತ ಕೇಳದೆ ಅವರ ಬಳಿ ನೇರವಾಗಿ ಏನೂ ಕೇಳುವುದು ಸರಿಯಲ್ಲ ಅಂತ ಸುಮ್ಮನಾದೆ. ಅದಕ್ಕೆ ಈಗ ನಿನ್ನ ಬಳಿ ಕೇಳಿ ಅವರನ್ನು ವಿಚಾರಿಸುವ ಅಂತ ಯೋಚಿಸಿದ್ದೆ. ಬಚಾವ್, ನಿನ್ನ ಹಣ ಸಿಕ್ಕಿತಲ್ಲ. ಎಷ್ಟಿತ್ತು?”
“ಹೌದಮ್ಮಾ! ನಾನು ಹಾಗೆ ಹುಡುಕುತ್ತಾ ಹಿಂದೆ ಬರುವಾಗ ಅವರು ನನ್ನನ್ನು ವಿಚಾರಿಸಿ ಹಣ ಕೊಟ್ಟರು. 600ರೂಪಾಯಿ! ಇವತ್ತು ಮನೆಕೆಲಸದ ಯಜಮಾನಿ ಕೊಟ್ಟಿದ್ದಳಮ್ಮ!”
ಅಲ್ಲಿಗೆ ಮುಗಿಯಲಿಲ್ಲ ನೀಲವ್ವನ ಕತೆ, ನಮ್ಮ ಮಾತು ಕೇಳಿ ಹೊರಬಂದ ಅಮ್ಮನಿಗೆ ಎಲ್ಲಾ ರಾಮಾಯಣವನ್ನು ಮತ್ತೆ ವಿವರಿಸಿದೆ. ನನ್ನ ಮನೆಯ ಕೆಲಸ ಕರಿಯುತ್ತಿತ್ತು, ಹಾಗಾಗಿ ನಾನು ಅಲ್ಲಿಂದ ಹೊರಟಾಗ ಅಮ್ಮ ನೀಲವ್ವನಿಗೆ, “ ಎಷ್ಟನೆಯ ಸಲ ಹೀಗೆ ಹಣ ಕಳಕೊಳ್ತಿದ್ದಿಯಾ ನೀಲವ್ವ! ಜಾಗ್ರತೆ ಮಾಡು ಅಂದರೂ ಅದನ್ನು ಸೀರೆಗೆ ಸಿಕ್ಕಿಸಿ ಬರ್ತಿಯಲ್ಲ! ನಿನ್ನ ಬುದ್ಧಿಗೆ ಏನು ಹೇಳಬೇಕು!” ಜೋರು ಮಾಡುವುದು ಕೇಳುತಿತ್ತು. ಮನಕ್ಕೆ ಸಮಾಧಾನ, ನೀಲವ್ವನ ಪುಣ್ಯ! ಆ ಅಂಗಡಿಯವ ಧರ್ಮಕ್ಕೆ ಸಿಕ್ಕಿದೆ ಎಂದು ಒಳ ಹಾಕದೆ ಇವಳಿಗೆ ಕೊಟ್ಟನಲ್ಲ. ಇನ್ನೂ ಸ್ವಲ್ಪವಾದರೂ ಮಾನವೀಯತೆಯೆಂಬುದು ಉಳಿದಿದೆ! ಭಗವಂತನಿಗೆ ಕೃತಜ್ಞತೆ ಹೇಳಿ ಹೂವಿನಂತೆ ಹಗುರವಾದ ಮನಸ್ಸನ್ನು ಹೊತ್ತು ಮನಗೆ ಮರಳಿದೆ.

No comments:

Post a Comment