ನನ್ನ ಮನಸ್ಸು

09 January, 2013

ಸೀತೆ ಮತ್ತು ಕಾಡಿಗೆ!


               ಅವಳ ನಿಜ ಹೆಸರು ಸವಿತಳಾದರೂ ಸೀತೆಯಾಗಿ ಬದಲಾಗಿದ್ದಳು. ನಮ್ಮ ಮನೆಗೆ ಬರುವಾಗ ಅವಳಿಗೆ ೧೧,೧೨ ವರ್ಷವಾಗಿರಬಹುದು. ಚಿಕ್ಕಮ್ಮ ಮದುವೆಯಾಗಿ ನಮ್ಮ ಮನೆ ಪ್ರವೇಶಿಸಿದಾಗ ತಮ್ಮ ಸಹಾಯಕ್ಕಂತ ಅವಳನ್ನು ಕರೆತಂದಿದ್ದರು. ಅವರ ಎಲ್ಲಾ ಕೆಲಸದಲ್ಲಿ ಸೀತಾ ಬಲಗೈಯಂತಾಗಿದ್ದಳು. ಕೆಲಸ ಮುಗಿಸಿ ಟಿವಿ ನೋಡುವುದು ಬಿಟ್ಟು ಬೇರೆ ಗೊತ್ತಿಲ್ಲದ ಅವಳು ನಿಧಾನವಾಗಿ ತನ್ನ ಸೌಂದರ್ಯದ ಕಡೆಗೆ ಗಮನ ಹರಿಸುವುದನ್ನು ಮೊದಲು ಕಂಡದ್ದೇ ನಾನು. ಈಗೀಗ ಅವಳಿಗೆ ಹೊರಗೆ ಹೋಗಿ ಸಾಮಾನು ತರುವ ಕೆಲಸವನ್ನೂ ಚಿಕ್ಕಮ್ಮ ಅಂಟಿಸಿದ್ದರು. ಮತ್ತವಳು ಬಹಳ ಖುಷಿಯಲ್ಲಿ ಹೋಗುತ್ತಿದ್ದಳು.  ನೋಡಲು ಕಪ್ಪಾಗಿದ್ದರೂ ಬಹಳ ಲಕ್ಷಣವಾಗಿದ್ದ ಅವಳ ಕಣ್ಣು ನನ್ನನ್ನು ಯಾವಾಗಲೂ ಸೆಳೆಯುತ್ತಿತ್ತು. ಒಮ್ಮೆ ಅವಳ ಕಣ್ಣು ನಿತ್ಯಕ್ಕಿಂತಲೂ ಸುಂದರವಾಗಿ ಕಾಣಿಸಿತು. ಅರೇ, ಹೌದು ಕಣ್ಣಿಗೆ ಕಾಡಿಗೆ ಹಾಕಿದರೆ ಇನ್ನೂ ಚಂದ ಕಾಣುತ್ತಾಳೆಯಲ್ಲ ಈ ಹುಡುಗಿ. ನಾನಾವಾಗ ೧೯ವಷದವಳು. ನನ್ನ ಬಳಿ ಕಾಡಿಗೆ ಇದ್ದರೂ ಹೀಗೆ ನಿತ್ಯವೂ ಹಚ್ಚಿಕೊಳ್ಳುವ ಅಭ್ಯಾಸವೂ ಇರಲಿಲ್ಲ. ಇವಳ ಕಣ್ಣು ನೋಡಿ ಇನ್ನು ನಾನೂ ನಿತ್ಯವೂ ಕಾಡಿಗೆ ಹಚ್ಚಿಕೊಳ್ಳಬೇಕೆಂಬ ನಿರ್ಧಾರನೂ ಮಾಡಿಬಿಟ್ಟೆ ಆಗಲೇ. ಆದರೆ ಇವಳ ಬಳಿ ಕಾಡಿಗೆ ಎಲ್ಲಿಂದ ಬಂದಪ್ಪಾ..ನನಗಾಶ್ಚರ್ಯ. ಅವಳ ಬಳಿ ಪೌಡರ್ ಮತ್ತು ಲಾಲ್‍ಗಂಧ  (ಆವಾಗಿನ್ನು ಈ ಟಿಕ್ಲಿಯ ಹಾವಳಿ ಇಷ್ಟಿರಲಿಲ್ಲ. ಬಾಟ್ಲಿಯಲ್ಲಿ ಸಿಗುವ ದಪ್ಪ ಕೆಂಪು ಬಣ್ಣ ಹಾಕಿಕೊಳ್ಳುತ್ತಿದ್ದೆವು ನಾವು ಹುಡುಗಿಯರು) ಮಾತ್ರವಿತ್ತು. 
     
      ಮರುದಿನ ಕಾಕತಾಳಿಯವಾಗಿ ಅವಳು ಹೊರಗೆ ಹೊರಟಾಗ ನಾನು ಮನೆಯಲ್ಲೇ ಇದ್ದೆ. ನನಗೋ ಕುತೂಹಲ ..ಇವಳು ಎಲ್ಲಿಂದ ಕಾಡಿಗೆಯನ್ನು ಸಂಪಾದಿಸಿಕೊಂಡಿದ್ದಾಳೆ ಅಂತ. ಅವಳು ಅತ್ತ ಇತ್ತ ನೋಡಿದಳು..ನಿಧಾನವಾಗಿ ಬಚ್ಚಲು ಕೋಣೆಯ ಹಿಂದೆ ಬೆಂಕಿ ಮಾಡುವಲ್ಲಿ ನಿಂತಳು. ಅಲ್ಲಿ ಗೋಡೆಗೆ ದಪ್ಪ ಕರಿ ಮೆತ್ತಿಕೊಂಡಿತ್ತು. ಜಾಗರೂಕತೆಯಿಂದ ತೆಗೆದು ತನ್ನ ಕಣ್ಣಿಗೆ ಹಚ್ಚಿಕೊಂಡದನ್ನು ನೋಡಿದಾಗ ನಾನು ಮೂರ್ಛೆಹೋಗದೇ ಇದ್ದುದು ನನ್ನ ಪುಣ್ಯ. ಅವಳು ಸೀದ ಹೋಗದೆ ಮತ್ತೊಮ್ಮೆ ಮನೆಯೊಳಗೆ ಬಂದಳು. ತನ್ನ ಕನ್ನಡಿಯೆದುರು ನಿಂತಳು...ನಾಲಗೆ ಸವರಿ ತುಟಿ ಒದ್ದೆಮಾಡಿಕೊಂಡಳು...ಅತ್ತಿತ್ತ ನೋಡದೇ ಸೀದಾ ಹೊರಗೆ ಹೊರಟಳು!

   ಇನ್ನೇನೂ ಹೇಳಬೇಕಂತಿಲ್ಲವಲ್ಲ...ಮತ್ತೆ ಈ ಸುದ್ದಿ ಎಲ್ಲರಿಗೂ ಗೊತ್ತಾಗಿ ವಿಚಾರಿಸಲು ಈ ೧೨ ವರ್ಷದ ಹುಡುಗಿಗೂ ಒಬ್ಬ ಬಾಯ್ ಫ್ರೆಂಡ್ ಇದ್ದಾನೆಂದು ಗೊತ್ತಾಗಿ..ಬಹಳ ಗದ್ದಲವಾಯಿತು. ಮತ್ತೆ ಹೇಗೂ ಇದೆಯಲ್ಲವ, ಗೃಹ ಬಂಧನ!!!

{ ಈ ಚಿಕ್ಕ ಹುಡುಗಿಯ ಬಗ್ಗೆ ನನಗೆ ನನ್ನ ಅಮ್ಮನಿಗೆ ಬಹಳ ಅನುಕಂಪವಿತ್ತು. ಅವಳಿಗಿಂತ ದೊಡ್ಡವಳಾದ ನಾನೂ ಆರಾಮವಾಗಿ ಶಾಲೆ ಕಾಲೇಜು ಅಂತ ತಿಂದು ತಿರುಗಿಕೊಂಡಿದ್ದರೆ ಈ ಹುಡುಗಿ ತನ್ನ ಕಲಿಯುವ ವಯಸ್ಸಿನಲ್ಲಿ ಹೀಗೆ ಪರರ ಸೇವೆ ಮಾಡುವುದರಲ್ಲಿ ತನ್ನ ಅಮೂಲ್ಯವಾದ ಕಾಲವನ್ನು ವೇಸ್ಟ್ ಮಾಡುತ್ತಾಳಂತ ಅನಿಸುತ್ತಿತ್ತು.  ನಾನು ತಪ್ಪಿಯೂ ಅವಳ ಕೈಯಲ್ಲಿ ಯಾವ ಕೆಲಸವನ್ನೂ ಮಾಡಿಸುತ್ತಿರಲಿಲ್ಲ. ತುಂಬಾ ಹಿಂಸೆಯಾಗುತ್ತಿತ್ತು. ಅದೇ ಅವಳು ಹೊರಗೆ ಯಾವನೋ ಲೋಫರ್ ಹುಡುಗನ ಜತೆ ಸ್ನೇಹ ಮಾಡಿಕೊಂಡಾಗ ಅಷ್ಟೇ ಕೋಪ ಬಂದಿತ್ತು.. ಆದರೆ ಈಗ ಅರ್ಥವಾಗುತ್ತಿದೆ. ಆ ಹುಡುಗಿಗೆ ಪ್ರಪಂಚ ಗೊತ್ತಿರಲಿಲ್ಲ..ಆ ಹುಡುಗನೂ ಮೋಸ ಮಾಡಿಯಾನು ಎಂಬ ಕಲ್ಪನೆನೂ ಇರಲಿಕ್ಕಿಲ್ಲ...ಟಿ ವಿ ವೀಕ್ಷಣೆ ಅವಳಿಗೆ ಕನಸನ್ನು ಕೊಟ್ಟಿತ್ತು..ನಿಜ ಲೋಕದ ಪರಿಚಯವಲ್ಲವಲ್ಲ}

No comments:

Post a Comment