ಬದುಕಿನಲ್ಲಿ ನಡೆದ, ನಡೆಯುವ, ತಿಳಿದ, ತಿಳಿಯದ ವಿಷಯಗಳನ್ನು ಮನದಲ್ಲಿ ಇಡಲಾಗದೆ, ತೋಡಿಕೊಳ್ಳಲು ಕಂಡುಕೊಂಡ ಮಾರ್ಗ!
ನನ್ನ ಮನಸ್ಸು
▼
14 November, 2012
ಅವಳ ಗೊಂದಲ- ಸಣ್ಣ ಕತೆ!
ಬಹಳ ಸಮಯದ ನಂತರ ಅತ್ತೆ ಮನೆಗೆ ಅವಳ ಭೇಟಿ. ಮನೆಯಲ್ಲಿ ಮೈದುನನ ಮದುವೆಯ ಸಂಭ್ರಮದ ಕಳೆ ಇನ್ನೂ ಮಾಸಿಲ್ಲ. ಎಲ್ಲರ ಮುಖದಲ್ಲಿ ಎಂದೂ ಕಾಣದ ನಿರಾಳತೆ.. ಅತ್ತೆಯ ಗೈರುಹಾಜರಿಯ ಪರಿವೆ ಯಾರಿಗೂ ಇದ್ದಂತೆ ಕಾಣಲಿಲ್ಲ. ಸಂಜೆ ಎಲ್ಲರೂ ಹಾಲಿನಲ್ಲಿ ಸೇರಿ ಟಿ ವಿಯಲ್ಲಿ ಏನೋ ನೋಡುತ್ತಿದ್ದಾರೆ.. ಮೈದುನ ತಯಾರಾಗಿ ಬಂದುದನ್ನು ನೋಡಿದಳು. ಅವಳ ಬಳಿಯಲ್ಲಿ ಕುಳಿತ್ತಿದ್ದ ತನ್ನ ಹೆಂಡತಿಯನ್ನು ಸನ್ನೆಯಲ್ಲೇ ಕರೆಯುತ್ತಿದ್ದಾನೆ. ಅವಳ ಓರಗಿತ್ತಿಯಾದರೋ ನಾಚಿಕೆ ಗೀಚಿಕೆ ತೋರ್ಪಡಿಸದೇ ಕೂಡಲೇ ಎದ್ದು ತಯಾರಾಗಲಿಕ್ಕೆ ಹೋದಳು. ಅವಳು ಬಿಟ್ಟಬಾಯಿ ಮುಚ್ಚದೇ ಅದನ್ನು ನೋಡುತ್ತ ೩ವರ್ಷದ ಹಿಂದಿನ ತನ್ನ ಮದುವೆಯ ದಿನಗಳ ಕಾಲಕ್ಕೆ ಹೋದಳು....
ಮದುವೆ ಆಗಿ ೩ ದಿನ ಕಳೆದಿದ್ದರೂ ಅವಳ ಕೈಯ ಮದರಂಗಿಯ ಬಣ್ಣ ಮಾಸಿರಲಿಲ್ಲ..ಬದಲು ಮತ್ತಷ್ಟು ಗಾಢವಾಗಿ ಎದ್ದು ಕಾಣುತಿತ್ತು..ಎಲ್ಲರೂ ರಂಗು ಗಾಢವಾದುದನ್ನು ನೋಡಿ ಇವಳನ್ನು ಛೇಡಿಸುತ್ತಿದ್ದರು. ಇವಳೊ ನಾಚಿಕೆಯ ನಟನೆಯನ್ನು ತೋರಿಸುತ್ತಿದ್ದಳು. ಸಂಜೆ ಸರಿಸುಮಾರು ೭ಗಂಟೆ.. ಅತ್ತೆ ಕೆಸುವಿನ ಎಲೆಗಳನ್ನು ತೊಳೆಯಲು ನವವಧುವಿಗೆ ಅಪ್ಪಣೆ ಕೊಟ್ಟಿದ್ದರು. ಬಚ್ಚಲು ಕೋಣೆಯ ಹಿಂದೆ ಬೆಂಕಿ ಮಾಡುವಲ್ಲಿ, ಮಿಣಿ ಮಿಣಿ ಮಿಂಚುವ ಜಿರೋ ವೊಲ್ಟ್ ಬಲ್ಬಿನ ಬೆಳಕಿನಲ್ಲಿ ಭಾವರಹಿತಳಾಗಿ ತೊಳೆಯುತ್ತಿದ್ದ ಅವಳಿಗೆ,"ನಾನು ಹೊರಗೆ ಹೋಗಿ ಬರುತ್ತೇನೆ." ಹೇಳಿದ್ದು ಕೇಳಿಸಿತು.. ತಲೆ ಎತ್ತಿ ನೋಡಿದಾಗ ಪತಿ ಹೊಸ ಧಿರಿಸುಗಳನ್ನು ಹಾಕಿ ಹೊರಹೋಗಲು ತಯಾರಾಗಿದ್ದಾನೆ. ಮನಸ್ಸಿಗೆ ಪಿಚ್ಚೆನಿಸಿತು. ಸುಮ್ಮನೆ ತಲೆ ಆಡಿಸಿದಳು.. ಮತ್ತೇನಾದರು ಹೇಳಲು ಸಾಧ್ಯವಿತ್ತಾ ಅವಳಿಗೆ!
ಹತ್ತಿರ ಕುಳಿತ ಓರಗಿತ್ತಿಯ ಮಗ ಏನೋ ಕೇಳಿದಾಗ ಮತ್ತೆ ಈ ಲೋಕಕ್ಕೆ ಬಂದಳು. ಹುಂ, ಒಂದು ನಿಟ್ಟುಸಿರು ತಂತಾನೆ ಹೊರಬಂತು. ರಾತ್ರಿ ಅಡಿಗೆ ಕೋಣೆಯಲ್ಲಿ ಓರಗಿತ್ತಿಯನ್ನು ಯಾರೋ ಛೇಡಿಸುತ್ತಿದ್ದರು..ಅಣ್ಣನಿಗೆ ಬಾಟ್ಲಿ ತರಲು ಹೋಗುವಾಗ ಸಹ ಅತ್ತಿಗೆ ಜೊತೆಗೇ ಬೇಕು.. ಆಗ ಅವಳಿಗರ್ಥವಾಯಿತು. ಸಂಜೆ ಮೈದುನನ ಸವಾರಿ ಹೋದದ್ದು ಎಲ್ಲಿಗೆ ಅಂತ. ಮತ್ತೆ ತಲೆಯಲ್ಲಿ ತಳಮಳ,"ಅಲ್ಲ ನಿನಗೂ ಸಹ ನಿನ್ನ ಪತಿ ಇದೇ ರೀತಿ ಬಾಟ್ಲಿ ತರಲು ಹೋಗುವಾಗ ಕರೆದಿದ್ದರೆ ಖುಷಿಯಾಗುತ್ತಿತ್ತಾ. ಅರೇ, ತನ್ನ ಪತಿಗೆ ಈ ಅಭ್ಯಾಸ ಇಲ್ಲದಿದುದರಿಂದ ತಾನೆ ಇಷ್ಟಾದರು ಆರಾಮವಾಗಿರುವುದು... ಇಲ್ಲ ಅಂದರೆ ತಾನು ಅವನ ಜೊತೆ ಇರುತ್ತಿದ್ದೆನಾ? ಬೇಡಪ್ಪಾ ಬೇಡ... ಅವನು ಹೇಗಿದ್ದಾನೋ ಹಾಗೆ ಇರಲಿ." ನೆನಪಿಗೆ ಬಂದ ದೇವರಿಗೆಲ್ಲಾ ಕೈ ಮುಗಿದು ಕಟೀಲು ಶ್ರೀ ದುರ್ಗಾಪರಮೇಶ್ವರಿಗೆ ಹೂಪೂಜೆಯ ಹರಕೆ ಹೊತ್ತಳು ಅವಳು!
No comments:
Post a Comment