ನನ್ನ ಮನಸ್ಸು

20 October, 2012

ಹೇಗೆ ಸಮಾಧಾನ ಪಡಿಸಲಿ ಎಂದಷ್ಟೇ ಹೇಳು ನಿನ್ನ ದಮ್ಮಯ್ಯ!

ಇನ್ನೆಷ್ಟು ಕಾಲ  ಈ ಮೌನ ಒಲವೇ
ಹುಂ, ನಿನ್ನನೇನು ಕೇಳುವುದು...
ನಿನಗೂ ಉತ್ತರ ತಿಳಿದಿರಲಿಕ್ಕಿಲ್ಲ!
ಆದರೆ, ನಾನಿವರನ್ನು ಹೇಗೆ ಸಮಾಧಾನ ಪಡಿಸಲಿ
ಎಂದಷ್ಟೇ ಹೇಳು ನಿನ್ನ ದಮ್ಮಯ್ಯ!

ಆ ಉದಯರಾಗದ ಸ್ವರವ ಕೇಳದ ಹೊರತು
ತಮ್ಮ ನಿತ್ಯಕಾಯಕ ಮಾಡಲಾರೆವು ಅನ್ನುವ
ನನ್ನ ಕಿವಿಗಳನ್ನು ಹೇಗೆ ಸಂತೈಸಲಿ!

ನಿನ್ನ ಸ್ವರಲಯಕ್ಕೆ ತನ್ನ ತಾಳ
ಕೂಡಿಸುತ್ತಿದ್ದ ನನ್ನ ಹೃದಯದ
ಗತಿ ಮರಳಿ ಹೇಗೆ  ಪಡೆಯಲಿ!

ನಿನ್ನೊಡನೆ ಸಂಭಾಷಿಸದ ಹೊರತು
ರುಚಿಯನ್ನು ಮರಳಿಸಲಾರೆ ಅನ್ನುವ 
ಈ ನಾಲಿಗೆಗೆ ಹೇಗೆ ತಿಳಿ ಹೇಳಲಿ!

ಸ್ವರ ಮಾಧುರ್ಯವ ಭುಂಜಿಸದ ಹೊರತು
ಜೀರ್ಣಶಕ್ತಿಯ ಮರಳಿಸಲಾರೆನೆಂದು ಪಣತೊಟ್ಟಿರುವ
ಜಠರಾಗ್ನಿಗೆ ಏನೆಂದು ಜವಾಬು ಕೊಡಲಿ!

ತಮ್ಮ ನಿತ್ಯ ಕಾಯಕವ ಮರೆತು,
ಸತ್ಯಾಗ್ರಹ ಮಾಡುತ್ತಿರುವ ಅಂಗಗಳಿಗೆ
ಉತ್ತರವನ್ನಿತ್ತು ಬಿಕ್ಕಟ್ಟಿನಿಂದ ಪಾರುಗಾಣಿಸು 
ದಯವಿಟ್ಟು ನಿನ್ನ ದಮ್ಮಯ್ಯ!


2 comments: