ನನ್ನ ಮನಸ್ಸು

05 September, 2012

ಶ್ರೀ ಗುರವೇ ನಮಃ



               ಒಂದು ವಾರದಿಂದ ನನ್ನಲ್ಲಿ ಮನೆಪಾಠಕ್ಕೆ ಬರುವ ಮಕ್ಕಳಿಗೆ ತಮ್ಮ ತಮ್ಮ ಗುರುಗಳಿಗೆ ಟೀಚರ್ಸ್ ಡೇಗಾಗಿ ಗಿಫ್ಟ್ ತಯಾರಿಸುವ ಸಂಭ್ರಮ. ಅಂತೂ ಅಪ್ಪನ ಜೇಬಿಗೆ ತೂತು ಮಾಡಿಸ್ತಾರಪ್ಪಾ ಈ ಮಕ್ಕಳು...ಅವರಲ್ಲೇ ಪೈಪೋಟಿ..ಯಾರು ಬೆಸ್ಟ್ ಗಿಫ್ಟ್ ಕೊಡ್ತಾರಂತ...ನನ್ನದು ಒಂದೇ ಮಾತು..ನನಗೆ ಗಿಫ್ಟ್ ಬೇಡ..ನೀವೇ ಕಾರ್ಡ್ ತಯಾರಿಸಿದರೆ ಮಾತ್ರ ತಕ್ಕೊಳ್ತೇನೆ..ಇಲ್ಲ ಏನೂ ಬೇಡ...ಹಾಗಾಗಿ ನಿನ್ನೆಯೆಲ್ಲ ಗುಸುಗುಸು ಮಾತಾಗ್ತಿತ್ತು..ಇವತ್ತು ಬೆಳ್‍ಬೆಳಿಗ್ಗೆನೇ ಮೈಸೂರಿನಿಂದ ಹಳೆ ಶಿಷ್ಯೆಯ ದೂರವಾಣಿ! ಅರೇ ಈ ಹುಡುಗಿ ಇನ್ನೂ ನನ್ನನ್ನ ಮರಿಯಲಿಲ್ಲವಲ್ಲ...ಕೇಳಿದೆ ಏನಮ್ಮಾ ಹಳೆ ಗೆಳತಿಯರ ಒಡನಾಟ ಇನ್ನೂ ಇದೆಯೇನು...ಪಟ್ ಅಂತ ಉತ್ತರ ಬಂತು...ಐ ಹಾವ್ ಲಿಟರಲೀ ಲಾಸ್ಟ್ ಆಲ್ ಮೈ ಓಲ್ಡ್ ಕಾಂಟಾಕ್ಟಸ್!!! ಮತ್ತೆ ನನ್ನದು??? ಈ ಹುಡುಗಿ ನನ್ನ ಕೆಳಗೆ ಪಳಗಿದ ನನ್ನ ಪಟ್ಟ ಶಿಷ್ಯೆ!....ಅವಳ ತಂದೆ ತಾಯಿ..ಮಾತ್ರವಲ್ಲ..ದೂರದೂರಿನಲ್ಲಿರುವ ಅಜ್ಜಿಗೂ ನಾನಂದ್ರೆ ತುಂಬಾನೆ ಇಷ್ಟ! 
 ಇವತ್ತು ೬.೪೫ಕ್ಕೆ ಪಾಠಕ್ಕೆ ಬಂದ ಹುಡುಗರು..ಎಂದಿನಂತೆ ತಮ್ಮತಮ್ಮ ಓದಿನಲ್ಲಿ ಮಗ್ನರಾದರು..ಆದರೆ ಹುಡುಗಿಯರು..ಬರುವಾಗಲೇ ಗಲಗಲ..ರೋಸ್..ಚಾಕ್ಲೇಟ್...ಮತ್ತು ಮೇಡಂಗೋಸ್ಕರ ಪೆನ್ನುಗಳ ಉಡುಗೊರೆ! ಇದಕ್ಕೆಲ್ಲಾ ಬೆಲೆಕಟ್ಟಲಾಗುವುದೇ! ನನಗೆ ನನ್ನ ಹಳೆದಿನಗಳು ಕಾಡತೊಡಗಿದವು..ನನ್ನ ಬದುಕಿನಲ್ಲಿ ನನಗೆ ಬರೇ ಪಾಠ ಕಲಿಸಿದ ಮಾತ್ರವಲ್ಲ...ಜೀವನದ ಪ್ರತಿ ಹಾದಿಯನ್ನು ನಿಭಾಯಿಸಲು, ಮನಸು ಸದೃಢವಾಗಿಸಲು ದಾರಿದೀಪವಾದ ಅನೇಕ ಮಹಾನ್ ಆತ್ಮಗಳ ಪುನಃ ಸ್ಮರಣೆ ಮಾಡಿದೆ. ಹಾಂ, ಪ್ರತೀದಿನ ಬೆಳಿಗ್ಗೆ ಏಳುವಾಗ ಮತ್ತು ಮಲಗುವ ಮೊದಲು ನನ್ನೊಡೆಯ ನಾಮದ ಜೊತೆಗೆ ಇವರನ್ನೂ ಸ್ಮರಿಸುವುದನ್ನು ತಪ್ಪಿಸುವುದಿಲ್ಲವಾದರೂ ಇವತ್ತಿನ ದಿನ ಇನ್ನೊಮ್ಮೆ ಹಳೆದಿನಗಳನ್ನು ಮೆಲುಕಿಸುವಂತೆ ಪ್ರೇರೇಪಿಸಿತು.  ಬದುಕಿನ ಮೊದಲ ೧೧ ವರ್ಷ...ಇಂದಿನ ನನ್ನ ನಿಲುವಿಕೆಗೆ, ನನ್ನ ತತ್ವಗಳಿಗೆ ಆಧಾರ. ಮತ್ತೆ ೩೩ ವರ್ಷ ಬರೇ ಉಸಿರಾಟವಾಡಿದ್ದು...ಕೆಲವೊಂದು ಸಿಹಿನೆನಪುಗಳ ಹೊರತು,,,,, ಬಾಳಿನ ಪುಟಗಳು ಬರೇ ಖಾಲಿ..ಮತ್ತೆ ಆ ಸುವರ್ಣ ದಿನಗಳು ಮರಳಿ ಬಂದದ್ದು ಈ  ೨,೩ ವರ್ಷದಲ್ಲೇ!!!  

 ಬದುಕಿನ ಪ್ರತಿಯೊಂದು ಹಾದಿಯಲ್ಲಿ  ದಾರಿದೀಪವಾದ ಹಲವು ಜ್ಯೋತಿಗಳಿಗೆ ನನ್ನ ಹೃದಯಪೂರ್ವಕ ಕೃತಜ್ಞತೆಗಳು!

ಈ ಬರಹಗಳು ನಾನು ೨೦೦೭ ಮತ್ತು ೨೦೧೧ರಲ್ಲಿ ಸಂಪದದಲ್ಲಿ ಪ್ರಕಟಿಸಿದವುಗಳು...ಇಂದಿಗೂ ಪ್ರಸ್ತುತವೆನಿಸಿ ಹಾಕುತ್ತಿದ್ದೇನೆ!


    
 2007
             ­-ಮತ್ತೆ ಸೆಪ್ಟೆಂಬರ್ ೫ ಬಂತು.ಮಕ್ಕಳೆಲ್ಲಾ ನಿನ್ನೆನೇ ತಮ್ಮ ತಮ್ಮ ಟೀಚರ್ ಗೋಸ್ಕರ ತಂದ ಹೂ, ಕಾರ್ಡ್, ಉಡುಗೊರೆಗಳನ್ನು ಹಿಡಿದುಕೊಂಡು ಸ್ಕೂಲಿಗೆ ಹೊರಟಿದ್ದಾರೆ. ಈ ಮಕ್ಕಳ್ಳನ್ನು ನೋಡಿ ನನಗೆ ನನ್ನ ಶಾಲೆಯ ದಿನಗಳು ನೆನಪಿಗೆ ಬಂತು. ನಾವೆಲ್ಲಾ ಈಗಿನ ಮಕ್ಕಳ ಹಾಗೆ ನಮ್ಮ ಟೀಚರ್ ಗೆ ಏನೂ ತೆಗೆದುಕೊಂಡು ಹೋದ ನೆನಪಿಲ್ಲ ನನಗೆ! ಈಗಿನ ಮಕ್ಕಳ ಉತ್ಸಾಹ ನೋಡಿ ಸಂತೋಷವಾಗುತ್ತದೆ ಜೊತೆಗೆ ಆಶ್ಚ್ರರ್ಯವೂ ಆಗುತ್ತದೆ, ಈಗಿನ ಮಕ್ಕಳಿಗೆ ನಿಜವಾಗಿಯೂ ತಮ್ಮ ಟೀಚರ್ ಮೇಲೆ ಪ್ರೀತಿಯಿದೆಯೇ ಎಂದು.ನಮ್ಮ ಗುರುಗಳು ಹಾಗು ನಮ್ಮ ಮಧ್ಯೆಯಿದ್ದ ಆ ಸುಮಧುರ ಸಂಬಂಧ ಈಗಿನ ಮಕ್ಕಳು ಗುರುಗಳಲ್ಲಿಯಿದೆಯೇ? ಇದ್ದರೂ ಇರಬಹುದು......ಏನಿದ್ದರೂ ಈ ಮಕ್ಕಳು ನನ್ನಲ್ಲಿ ಸುಪ್ತವಾಗಿದ್ದ ನನ್ನ ಗುರುಗಳ ಮೇಲಿನ ಭಕ್ತಿ, ಗೌರವ ಹಾಗೂ ಕೃತಜ್ಞತೆಯನ್ನು ಈ ಮೂಲಕ ಅರ್ಪಿಸಲು ಪ್ರೇರಣೆಯಾಗಿದ್ದರೆ! ಪ್ರಪಂಚದ ಎಲ್ಲಾ ಗುರುಗಳಿಗೆ ನನ್ನ ವಂದನೆಗಳು. ವಿಶೇಷವಾಗಿ ನನಗೆ ಕಲಿಸಿದ ಗುರುಗಳನ್ನು ನಾನು ಈದಿನ ಸ್ಮರಿಸಿ ನನ್ನ ಕೃತಜ್ಞತೆಯನ್ನು ಈ ಮೂಲಕ ತೋರಿಸಲು ಆಶಿಸುತ್ತೇನೆ. ಬಾಲವಾಡಿಯಿಂದ ೫ನೇ ತರಗತಿಯವರೆಗೆ ಕಲಿಸಿದ ಸುಶೀಲಾ, ರತ್ನ ಟೀಚರ್ ಇವರಿಂದ ಕಲಿತ ಪಾಠ ಪ್ರೈಮರಿ ತರಗತಿಯಲ್ಲಿ ಕಳೆದ ಕಾಲವನ್ನು ಇನ್ನೂ ಹಸಿಯಾಗಿಡಲು ಕಾರಣವಾಯಿತು. ಇವರಿಬ್ಬರ ಜೊತೆಗೆ ನನಗೆ ಹೈಸ್ಕೂಲಿನಲ್ಲಿ ಕಲಿಸಿದ ಮುಕ್ತಾ, ರಾಧ, ದಮಯಂತಿ, ಶಾರ್ಲೆಟ್, ರಾಮಪ್ಪ, ನಾರಾಯಣ ತಂತ್ರಿ,ಮೊದಲಾದವರೂ ನನ್ನ ಮುಂದಿನ ಶಿಕ್ಷಣಕ್ಕೆ ಹಾಕಿಕೊಟ್ಟ ಅಡಿಪಾಯವನ್ನು ನಾನೆಂದಿಗೂ ಮರೆಯಲಾರೆ. ಪಿಯುಸಿ ಹಾಗು ಕಾಲೇಜಿನಲ್ಲಿ ಕಲಿಸಿದ ಬಾಲಚಂದ್ರ ರಾವ್, ಚಂದ್ರಶೇಖರ್, ಶೆಣೈ ಸರ್, ಸ್ವರ್ಣಾ ಮೇಡಮ್, ಮುಡಿತಾಯಾ ಸರ್, ಆಚಾರ್ಯ ಸರ್, ....... ಇನ್ನೂ ಪ್ರತ್ಯೇಕ್ಷವಲ್ಲದೇ ಅನೇಕ ಪರೋಕ್ಷ ಗುರುಗಳನ್ನು ಸ್ಮರಿಸಿ, ಈ ದಿನವನ್ನು ಶಿಕ್ಷರಿಗೆ ಅರ್ಪಿಸಿದ ರಾಧಾಕೃಷ್ಣರಿಗೆ ನನ್ನ ಹಾರ್ಧಿಕ ಅಭಿನಂದನೆಗಳನ್ನು ಮತ್ತು ಕೃತಜ್ಞತೆಯನ್ನು ಆರ್ಪಿಸುತ್ತೇನೆ! ಗುರು--- ಈ ಶಬ್ದಕ್ಕೆ ಎಷ್ಟು ಮಹತ್ವವಿದೆಯಲ್ಲವೇ? ಗು ಅಂದರೆ ಕತ್ತಲೆ, ರು ಅಂದರೆ ಕತ್ತಲೆಯನ್ನು ದೂರಮಾಡುವವ. ಅಂದರೆ ಬೆಳಕನ್ನು ತೋರಿಸುವವ. ತಾಯಿಯ ನಂತರ ಪ್ರತಿಯೊಬ್ಬರ ಬಾಳಿನಲ್ಲಿ ಪ್ರಮುಖವಾದ ಪಾತ್ರವನ್ನು ಗುರು ವಹಿಸುತಾನೆ! ನಮ್ಮ ಮುಂದಿನ ಜೀವನಕ್ಕೆ ನಾಂದಿಯನ್ನು ಹಾಕುತ್ತಾನೆ. ಭದ್ರವಾದ ಅಡಿಪಾಯವಾದರೆ ಮುಂದಿನ ಜೀವನದಲ್ಲಿ ಬರುವ ಎಲ್ಲಾ ಅಡೆಚಡೆಗಳನ್ನು ಸಮರ್ಥವಾಗಿ ಎದುರಿಸಲು ಸಹಾಯ ಮಾಡುತ್ತದೆ. 

            तस्मै श्री गुरुभ्यॊ नमः||

20011
- ಮತ್ತೆ ಬಂದಿದೆ ಗುರುಗಳ ದಿನ! ನನ್ನಲ್ಲಿ ನನ್ನ ಗುರುಗಳ ಬಗ್ಗೆಯ ಕೃತಜ್ಞತಾ ಭಾವ ಇನ್ನು ಇನ್ನು ಹೆಚ್ಚಾಗುತಿದೆಯೇ ಹೊರತು ಒಂಚೂರು ಕಮ್ಮಿಯಾಗಿಲ್ಲ. ಕಾರಣ ನನ್ನ ಇಂದಿನ ಏಳಿಗೆಗೆಯ ಸಂಪೂರ್ಣ ಶ್ರೇಯ ನನ್ನ ಗುರುಗಳಿಗೇ ಸಲ್ಲುತ್ತದೆ. ಮತ್ತೆ ಗುರು ಚರಣಗಳಿಗೆ ನನ್ನ ದೀರ್ಘ ಪ್ರಣಾಮಗಳು! ಅದರಲ್ಲೂ ಬಿ. ಜಿ. ಮೊಹಮ್ಮದ್ ಮಾಸ್ಟ್ರು ಅತ್ಯಂತ ಅಲ್ಪ ಸಮಯದಲ್ಲಿ ಚಿತ್ರಕಲೆಯ ರಹಸ್ಯವನ್ನು ತಿಳಿಸಿ ಅವರಿಗೆ ಚಿರಋಣಿಯಾಗಿರುವಂತೆ ಮಾಡಿದ್ದಾರೆ. ಇಂದು ನಾನು ಅವರದೇ ದಾರಿಯಲ್ಲಿ ನಡೆಯುವ ಪ್ರಯತ್ನ ಮಾಡುತ್ತಿದ್ದೇನೆ. ಚಿತ್ರ ಕಲೆಯನ್ನು ಕಲಿಸುವ ರೀತಿ ಅವರಿಗೆ ಚೆನ್ನಾಗಿ ಕರಗತವಾಗಿತ್ತು.....ಎಷ್ಟೋ ಮಂದಿ ಸೂಪರ್ ಪೈಂಟಿಗ್ ಮಾಡುತ್ತಾರೆ...ಆದರೆ ಕಲಿಸಲು ಬರುವುದಿಲ್ಲ...ನನಗೆ ತಿಳಿದ ಹಾಗೆ ಅವರು ಅಜಾತ ಶತ್ರುಗಳಾಗಿದ್ದರು...ಬಹಳ ಜನಪ್ರಿಯರಾಗಿದ್ದರು...ಎಂದಿಗೂ ಪ್ರಶಸ್ತಿಗಳಿಗಾಗಿ   ಲಾಬಿ ಮಾಡಿರಲಿಲ್ಲ...ಅದರಿಂದ ಅವರಿಗೆ ನ್ಯಾಯವಾಗಿ ಸಲ್ಲಬೇಕಾದ ಮಾನ ಸಮ್ಮಾನಗಳು ದೊರಕಿಲ್ಲ....ಆದರೂ ಅವರ ಶಿಷ್ಯರು ಅವರಿಗೆ ತಮ್ಮ ಚಿತ್ರಗಳ ರೂಪದಲ್ಲಿ ನ್ಯಾಯ ಸಲ್ಲಿಸಿದ್ದಾರೆ...ಸಲ್ಲಿಸುತ್ತಿದ್ದಾರೆ... ಮತ್ತು ಸಲ್ಲಿಸುತ್ತಾರೆ ಎಂಬ ನಂಬಿಕೆ ನನಗಿದೆ...ಅವರ ಜೀವಿತದ ಕೊನೆಯ ಕಾಲದಲ್ಲಿ ರಾಜ್ಯೋತ್ಸವ ಪ್ರಶಸ್ತಿ ದೊರೆಯಿತು.  
               ಮಷ್ಟ್ರಾ ನಮಸ್ಕಾರು!!!!       ಕೃತಜ್ಞತೆಯನ್ನು ನನ್ನ ಈ ಚಿತ್ರದ ಮೂಲಕ ಸಲ್ಲಿಸುತ್ತೇನೆ.


No comments:

Post a Comment