ನನ್ನ ಮನಸ್ಸು

02 September, 2011

ಮನದ ಮಾತು!





ವರುಷಗಳ ರಹಸ್ಯವನು ಬಚ್ಚಿಟ್ಟುಕೊಂಡು
ಭಾರವಾಗಿತ್ತೆನ್ನ ಹೃದಯ;
ಬೂದಿ ಮುಚ್ಚಿದ ಕೆಂಡದಂತೆ
ಆಗಲೋ ಈಗಲೋ
ಸ್ಫೋಟಿಸಲು ಸಿದ್ಧವಾಗಿರುವ
ಜ್ವಾಲಾಮುಖಿಯಂತೆ;


ಕಾಣಲು, ಅರಳಲು ಕಾತರಿಸುತ್ತಿದ್ದವು
ನಯನಗಳು
ರವಿಯ ಆಗಮನಕ್ಕಾಗಿ ಕಾದಿಹ
ನೀರಜೆಯಂತೆ;
ನಿಟ್ಟುಸಿರುಗಳ ಎಣಿಕೆಯ ಗತಿಯ
ಕಳೆದುಕೊಂಡ ವಿಧಿಯು,
ಕೊನೆಗೂ ಕರೆ ಕಳಿಸಿತು ನಿನಗೆ!


ತಂಪಾದ ಸ್ಪರ್ಶದಿಂದ
ಅಗ್ನಿ ಪರ್ವತವ ತಣಿಸಿದೆ!
ಮೃದು ನುಡಿಗಳಿಂದ
ಹೃದಯದ ತಾಳ ತಪ್ಪಿಸಿದೆ!
ಕಣ್ಣೋಟದಿಂದ ಹೂಬಾಣ ತೂರಿ
ತನುಮನಗಳ ಅರಳಿಸಿದೆ!


ಮನದ ಮಾತು ನಿವೇದಿಸಿ,
ಬರಿದಾದ ಎದೆಯ ತೂಕ
ತುಂಬಿ ಸಂತಸ, ಮತ್ತೆ ಹೆಚ್ಚಿಸಿದೆ!
ಇನ್ನು ಹುಡುಬೇಕಿಂದಿಲ್ಲ ನಿನ್ನ,
ಕಾಯಬೇಕೆಂದಿಲ್ಲ, ಯಾಕೆಂದರೆ,
ನೀನು  ನನ್ನೊಳು ಅಂತರ್ಗತನಾಗಿಬಿಟ್ಟೆ!

No comments:

Post a Comment