ನನ್ನ ಮನಸ್ಸು

27 August, 2011

ಬದಲಾವಣೆಯ ಗಾಳಿ ಬೀಸುತ್ತಿದೆಯೇ?











                           ಇಷ್ಟು ದಿನಗಳವರೆಗೆ  ದೇಶಾದ್ಯಂತದಲ್ಲಿ  ನಡೆಯುತ್ತಿರುವುದು ಒಂದು ಹೈಟೆಕ್ ಡ್ರಾಮಾವೆಂದು ಅನ್ನಿಸುತಿತ್ತು. ಒಂದು ರೀತಿಯ ಸಾಮೂಹಿಕ ಸನ್ನಿಯಂತೆ ಕಾಣುತಿತ್ತು... ಎಲ್ಲರೂ ಅಣ್ಣ...ಮತ್ತವರ ಸತ್ಯಾಗ್ರಹದ ಬಗ್ಗೆಯೇ ಮಾತನಾಡುತ್ತಿದ್ದಾರೆ...ಎಷ್ಟು ಜನರಿಗೆ ನಿಜವಾಗಿ ಲೋಕಪಾಲ ಮಸೂದೆಯ ಬಗ್ಗೆ ಗೊತ್ತು, ನಿಜವಾಗಿಯೂ ಜನರು ದೇಶದ ಬಗ್ಗೆ ಕಾಳಜಿ ತೆಗೆದುಕೊಳ್ಳುತ್ತಿದ್ದಾರೆಯೇ ಎಂದೆನಿಸುತಿತ್ತು... ಮೊಬೈಲಿನಲ್ಲಿ, ಟ್ವಿಟರಿನಲ್ಲಿ, ಫೇಸ್ ಬುಕ್ಕಿನಲ್ಲಿ...ಎಲ್ಲೆಲ್ಲೂ ಅಣ್ಣನವರ ವಿಶ್ವರೂಪ! ಆದರೆ ನಿನ್ನೆ ನನ್ನ ಮಕ್ಕಳೊಂದಿಗೆ ನಡೆದ ಮಾತುಕತೆಯ ನಂತರ....ನಿಜವಾಗಿ ಏನೋ ಬದಲಾವಣೆಯ ಗಾಳಿ ಬೀಸಲು ಪ್ರಾರಂಭವಾಗುತ್ತಿದೆ ಅನಿಸಿ ತುಂಬಾನೆ ಆನಂದವಾಯಿತು. ನಡೆದುದೇನಂದರೆ ನನ್ನ ಮಗನು ಬಸ್ಸು ಪಾಸ್ ಮಾಡುವ ವಿಷಯ ಹೇಳುತ್ತಿದ್ದ...ಇಷ್ಟು ದಿನದವರೆಗೆ ಇಲ್ಲದ ವಿಚಾರ ಯಾಕಪ್ಪಾ ಎಂತ ಕೇಳಿದರೆ ಅಣ್ಣಾನವರ ಆಂದೋಲನದ ನಂತರ ನಮ್ಮ ಬಸ್ಸಿನವರು ಪಾಸ್ ತೋರಿಸುವುದು ಕಡ್ಡಾಯ ಮಾಡಿದ್ದಾರೆ...ಹಾಗಾಗಿ ನಾವು ಇನ್ನು ಮುಂದೆ ವಿದ್ಯಾರ್ಥಿಗಳು ಎಂದು ಸಾಬಿತು ಮಾಡಲು ಎಂದು ಅರ್ಜಿಯನ್ನು ತುಂಬಬೇಕು...ಅಂತ ಪಿರಿಪಿರಿಮಾಡಿದ.
  

                                 ಇದು ಸ್ವಾಗತಾರ್ಹ ಬೆಳವಣಿಗೆ ಅಲ್ಲವೆ? ಪ್ರಜಾಪ್ರಭುತ್ವದಲ್ಲಿ ಇಲ್ಲಿ ನಾವೇ ನಮ್ಮನ್ನು ಆಳುತ್ತಿದ್ದೇವೆ...ಈ ಸರಕಾರ ನಾವೇ ಚುನಾಯಿಸಿದಲ್ಲವೇ? ಹಾಗಾಗಿ ಎಷ್ಟು ಸರಕಾರದ ಮತ್ತವರ ಕುಟುಂಬಗಳ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತೇವೆಯೋ  ಅದರಲ್ಲಿ ನಮ್ಮ ಪಾಲೂ ಇದೆ. ನಾವು  ಕಾನೂನಿನ ಪಾಲನೆ ನಿಯತ್ತಿನಿಂದ ಮಾಡುತ್ತೇವೆಯೇ? ಮೊನ್ನೆ ಆದಿತ್ಯವಾರದ ಉದಯವಾಣಿಯ ಸಾಪ್ತಾಹಿಕದಲ್ಲಿ ಈ ಬಗ್ಗೆ ಒಂದು ಲೇಖನ ಬಂದಿತ್ತು. ಎಷ್ಟು ಮಂದಿ ಲಂಚ ಕೊಡದೆ, ಶಿಫಾರಸು ಮಾಡದೆ ತಮ್ಮ ಕೆಲಸ ಮಾಡಿಸಿಕೊಳ್ಳುತ್ತಾರೆ?  ಸಾರ್ವಜನಿಕ ವಸ್ತುಗಳನ್ನು  ಬಂದಿನ ನೆಪದಲ್ಲಿ ಹಾಳುಮಾಡುತ್ತಾರೆ, ಸರತಿಯಲ್ಲಿ ನಿಲ್ಲುವುದಿಲ್ಲ, ಯೋಗ್ಯತೆಯಿರುವವರಿಗೆ ಸೇರಬೇಕಾದ ಸೌಲಭ್ಯವನ್ನು ನಾಚಿಕೆಯಿಲ್ಲದೆ ತಮ್ಮದಾಗಿಸಿಕೊಳ್ಳುತ್ತಾರೆ...
.

                                  ಅಣ್ಣಾ ಮತ್ತು ಸಂಗಡಿಗರು ಪ್ರಾರಂಭಿಸಿದ ಈ ಸತ್ಯಾಗ್ರಹವು ಮೊದಲಿಗೆ ನಮ್ಮಲ್ಲಿ ಬದಲಾವಣೆಗಳನ್ನು ತರಲಿ...ಮೊದಲು ಬುಡ ಶುಭ್ರ ಮಾಡಲು ಪ್ರಾರಂಭಿಸಿದರೆ ತನ್ನಿಂದ ತಾನೇ ಉಳಿದ ರೆಂಬೆ ಕೊಂಬೆಗಳು ಪವಿತ್ರಗೊಳ್ಳುತ್ತದೆ. ವಿದೇಶದ ಸಿಸ್ಟಮ್ಗಳು ತುಂಬಾ ಚೆನ್ನಾಗಿದೆ ಎಂದು ಬಾಯಿತುಂಬಾ ಹೊಗಳುತ್ತೇವೆ...ಹಾಗೆ ಮಾತನಾಡುತ್ತಾ ಕಾರಿನಿಂದಲೇ ಒಳ್ಳೆ ಒಲಿಂಪಿಕಿಗೆ ಹೋಗಲು ಅಭ್ಯಾಸ ಮಾಡುವವರಂತೆ  ತೊಟ್ಟಿಗೆ ಗುರಿಯಿಡುತ್ತೇವೆಯಲ್ಲಾ- ಅದನೆಲ್ಲಾ ನಿಲ್ಲಿಸುತ್ತೇವೆಯೇ? ಮೊನ್ನೆ ಜಪಾನಿನಲ್ಲಿ ನಡೆದ ಭೂಕಂಪದ ನಂತರ ಅಲ್ಲಿನ ಜನರು ಹೊಟ್ಟೆ ಹಸಿದಿದ್ದರೂ ಅಂಗಡಿಗಳನ್ನು ಲೂಟಿ ಮಾಡಿರಲಿಲ್ಲ...ಹಾಗಿದ್ದೇವೆಯೆ ನಾವು?

         ಆದರೂ ಈ ಆಂದೋಳನವು ಜನರಲ್ಲಿ ಸ್ವಲ್ಪವಾದರೂ ಬದಲಾವಣೆಗಳನ್ನು ತರಲು ಪ್ರಾರಂಭಿಸಿದೆ....ಅಣ್ಣ ಹೊತ್ತಿಸಿದ ಈ ಕಿಡಿ ನಿಲ್ಲದೇ ಹಬ್ಬಿ ಜನರಲ್ಲಿ ಸಾತ್ವಿಕ ಜೀವನವನ್ನು ನಡೆಸುವ ಪ್ರೇರಣೆ ಕೊಡಲಿ ಎಂದು ಹಾರೈಸುವೆ.  ಆಂದೋಳನಕ್ಕೆ ನುಗ್ಗಿರುವ ಜನರು ಉತ್ಸಾಹ ಕಳೆದುಕೊಳ್ಳದೇ ಸರಕಾರದ ಮೇಲೆ ಇನ್ನೂ ಹೆಚ್ಚಿನ ಒತ್ತಡ ಹಾಕುವಂತಾಗಲಿ...ಪ್ರಾರಂಭ ಶೂರರಂತಾಗದಿರಲಿ ಎಂದು ತುಂಬು ಮನದಿಂದ ಪ್ರಾರ್ಥಿಸುತ್ತೇನೆ. ಸರಕಾರಿ ಯಂತ್ರಗಳಿಗೆ ತುಕ್ಕು ಹಿಡಿಯದಿರಲಿ...ಸರಕಾರವು ಯಾರದೇ ಕೈ ಗೊಂಬೆಯಾಗದೇ ಜನಹಿತಕ್ಕಾಗಿ ಕಾರ್ಯ ನಿರ್ವಹಿಸಲಿ...ಅದಕ್ಕಾಗಿ ನಾವೆಲ್ಲಾ ಭಾರತೀಯರು ಒಂದಾಗಿ ಅನ್ಯಾಯದ ವಿರುದ್ಧ ಹೋರಾಡಬೇಕು, ಹೋರಾಡುವ ಕೈಗಳಿಗೆ ಬಲ ಕೊಡಬೇಕು.

    ನೈತಿಕತೆಯ ಸುದ್ದಿಗೆ ಹೋಗದ ರಾಜಕಾರಣಿಗಳಿಗೆ, ಅವರಿಗೆ ಕುಮಕ್ಕು ಕೊಡುತ್ತಿರುವ ಉದ್ಯಮಿಗಳಿಗೆ ಬುದ್ಧಿ ಕಲಿಸೋಣ ಬನ್ನಿ ಭಾರತೀಯರೇ!

21 August, 2011

ಕೃತಜ್ಞತೆ!


ಮುರಳಿಲೋಲಾ, ರಾಧಾರಮಣ 

ಕೆಲವೊಮ್ಮೆ ಸಖನಾಗಿ
ಮತ್ತೊಮ್ಮೆಪಿತನಾಗಿ ಹಲವೊಮ್ಮೆ ಮಾತೆಯಾಗಿ
ಬಂದು ಕೈ ಪಿಡಿದು ಪಾಡಿದೆ, ಸಲಹಿದೆ
ಇದೋ ನಿನಗೀಗ ನನ್ನ ಹೃದ್ಪೂರ್ವಕ ವಂದನೆಗಳು




ಗೋಪಾಲನಲ್ಲೊಂದು ಮನವಿ!







     

ಇಳಿದು ಬಾ  ಬುವಿಗೆ,
ಬಾಡಿ  ಬಳಲಿದ್ದಾಳಾಕೆ!
ಕಾದಿದ್ದಾಳೆ ಶಬರಿಯಂತೆ, 
ನಿನ್ನ ಮತ್ತೊಂದು ಅವತಾರಕ್ಕೆ!
ನನಗೆ ಗೊತ್ತು,
ನೀನೂ ಕಾದಿರುವಿ;
ಸರಿಯಾದ ಕಾಲಕ್ಕಾಗಿ!
ಆದರೆ, ಈ ಸಾರಿ ಪೂರ್ಣಾವತಾರ ತಾಳು!
ಈ ಭುವಿಯಲ್ಲೀಗ ಮುಖವಾಡ 
ಹೊತ್ತ ಹಲವು ಮುಖಗಳಿವೆ;
ನಿನಗೂ ಕಷ್ಟವಾದೀತು ಯಾರು ಮಾನವರು, 
ಯಾರು ದೈತ್ಯರೆಂದು ಅರಿಯಲು.
ಕೊನೆಗೂ ಜಯವು ನಿನ್ನದೇ....ಆದರೆ
 ಸುಖವ ಅನುಭವಿಸಲು ಯಾರೂ ಉಳಿಯರು...
ಇದು ಸತ್ಯ ಅಲ್ಲವೇ...ಗೋಪಾಲ?