ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

29 June, 2014

ಅಕಲ್ಮಶ ಒಲವು ಕರಗಿಸಿತು ಕಲ್ಲು ಮನವನೂ

ಅಪರಾಧಿ ನಾನು, ಸಂದೇಹವಿಲ್ಲವದರಲ್ಲಿ;

ವರುಷಗಳಿಂದ ಹಾದಿಯ ಜತೆಯಾದವರು,

ತಾವರೆಯ ಮೇಲಿರುವ ಹನಿಗಳಂತೆ ಬದುಕಲ್ಲಿ ಉಳಿದರು.

ಕಲ್ಲು ಮನದವಳೆಂದು ಅಪವಾದವನ್ನೇನೋ ಹೊರಿಸಿದ್ದರು;

ನಂಬು ನನ್ನನು ಲೋಕವೇ, ಅದರಲೇನು ಅಚ್ಚರಿಯಿಲ್ಲ,

ಅಕಲ್ಮಶ ಒಲವು ಕರಗಿಸಿತು ಕಲ್ಲು ಮನವನೂ

-ಶಾಯರಿ ಪ್ರೇರಣೆ

28 June, 2014

ದೇವು ಮಿಗೆಲೆ ಫ್ರೆಂಡ್.. ಕಾಲಚಕ್ರದಲ್ಲಿ ನನ್ನದೇ ಮಾತು ಮಗನ ಬಾಯಿಯಲ್ಲಿ!

’ಮಮಮ, don’t worry! God is my friend. ದೇವು ಮಿಗೆಲೊ ಫ್ರೆಂಡ್ ಮಮಮ!”

ವರ್ಷದ ಕೆಳಗೆ ಕೆಲಸದ ಸಲುವಾಗಿ ಬೆಂಗಳೂರಿಗೆ ಸೇರಿಕೊಂಡ ಮೊಮ್ಮಗ ಕಾಲಿಗೆ ಚಕ್ರ ಕಟ್ಟಿಕೊಂಡವನಂತೆ ಟ್ರೆಕ್ಕಿಂಗ್, ಕಾಡು, ಮೇಡು ಎಂದು ಹೀಗೆ ಪ್ರತಿ ಶನಿವಾರ ಆದಿತ್ಯವಾರ ಸಮಾನ ಮನಸ್ಕ ಗೆಳೆಯರನ್ನು ಕಟ್ಟಿಕೊಂಡು ತಿರುಗುತ್ತಿರುವುದನ್ನು ನೋಡಿ ನನ್ನಮ್ಮ ನಿನ್ನೆ ಉಡುಪಿ, ಜೋಗ, ಮುರ್ಡೇಶ್ವರ್, ಸಾಗರ..  ಭೇಟಿಯಾಗುವ ನೆವದಲ್ಲಿ ಊರಿಗೆ ಬಂದವನಿಗೆ ಜಾಗ್ರತೆ ಹೇಳುತ್ತಾ ದಿವಸಕ್ಕೆ ಒಮ್ಮೆಯಾದರೂ ಪ್ರಾರ್ಥನೆ ಮಾಡುವಂತೆ ಹೇಳಿದಾಗ ಪ್ರಥು ತುಂಟ ನಗೆ ಸೂಸುತ್ತಾ ಹೇಳಿದ.

ಅವತ್ತು ಇಪ್ಪತ್ತೆರಡರ ತರುಣಿ ನಾನು, ನನ್ನಮ್ಮ ಅದೇನೋ ನನಗೆ ಹೇಳಿದಾಗ ಹೀಗೆ ನನ್ನ ಮತ್ತು ಶ್ರೀರಾಮನ ಮಧ್ಯದ  ಬಂಧವನ್ನು ಸ್ನೇಹ ಬಂಧವಾಗಿ ಬದಲಾಯಿಸಿದ್ದ ನಾನೂ ಇಂತಹುದೇ ಆತ್ಮವಿಶ್ವಾಸದಿಂದ ಇದೇ ಮಾತನ್ನು ಹೇಳಿದ್ದೆ. ನಿನ್ನೆ ಇಪ್ಪತ್ತೆರಡರ ಮಗನ ಬಾಯಿಯಿಂದಲೂ ಅದೇ ಮಾತು ಕೇಳಿದಾಗ ಮನಸ್ಸಿಗೆ ನೆಮ್ಮದಿ ಸಮಾಧಾನ!

ಆ ಸ್ನೇಹ ಬಂಧದ ಮಹತ್ವ ನನಗೆ ಚೆನ್ನಾಗಿ ತಿಳಿದಿದೆ.


ವರುಷಗಳು ಉರುಳಿ ಇವತ್ತು ಮಧ್ಯವಯಸ್ಕಳು ನಾನು.. ಅದೇ ಸ್ನೇಹ ಬಂಧ ಮತ್ತಷ್ಟು ಬಿಗಿಯಾಗಿ ಬದುಕಿನ ತಿರುವುಗಳಿಗೆ ಸಾಕ್ಷಿಯಾಗಿ ಉಳಿದಿದೆ. 








ಒಗ್ಗರಣೆಗೊಂದು ಮುನ್ನುಡಿ..

ಒಗ್ಗರಣೆಗೊಂದು ಮುನ್ನುಡಿ..
---------------------

“ಒಗ್ಗರಣೆ ನೋಡು.. ಒಳ್ಳೆದಿದೆ!”

“ಹ್ಮ್, ಕತೆ ಗೊತ್ತು. ಅದ್ಯಾಕೋ ನೋಡ್ಬೇಕಂತ ಅನಿಸಿಲ್ಲ.”

“ನಾನು ಎರಡು ಸಲ ನೋಡಿದೆ!”

“ಅರೇ! ಎರಡು ಸಲ ನೋಡುವಷ್ಟು ಒಳ್ಳೆದಿತ್ತಾ?”

“ಎರಡನೆಯ ಸಲ ಸ್ನೇಹಳನ್ನು ನೋಡಲು..  “

ತುಂಟನಗೆ ಕಾಣ್ತಿತ್ತು..

ಅಷ್ಟು ಸಾಕಾಯ್ತು.

ನಾಳೆ ಒಗ್ಗರಣೆ ನೋಡ್ಲಿಕ್ಕೆ ಹೋಗ್ತಿದ್ದಾಳೆ!

26 June, 2014

ಬನ್ನಿ ಅತಿಥಿಗಳೇ, ಒಲವಿನ ತಂಗುತಾಣಕೆ!

ಬನ್ನಿ ಅತಿಥಿಗಳೇ..
------------------

ನನ್ನೆದೆಯು ತಂಗುದಾಣವು, ಬನ್ನಿ ಅತಿಥಿಗಳೇ

ಕರೆದು ಬಂದವರು ಗುದ್ದಿದರೆ
ಕರೆಯದೇ ಬರುವರು ಮದ್ದನೀವರು;
ಮಾತಲೇ ನಾಕ ತೋರುತಾ ನೂಕುವವರು ಹಲವರು
ಮೆತ್ತಗೆ ಕೆಳಗಿಳಿಸಲು ಧಾವಿಸಿ ಬರುವರು ಕೆಲವರು;
ಇವರು ಹಲವು ಕನಸುಗಳುನು ಬಿತ್ತಿ ಮಾಯವಾದರೂ
ನನಸು ಮಾಡುವ ಛಲವನು ಹೊತ್ತು ಹಾದಿ ತೋರುವರು ನನ್ನವರು;

ನನ್ನೆದೆಯು ತಂಗುದಾಣವು, ಬನ್ನಿ ಅತಿಥಿಗಳೇ

ಸಿರಿಯಲಿ ಮಿಂದವರೂ ಬಾಗಿಲು ತಟ್ಟುವರು
ದಟ್ಟ ದಾರಿದ್ರ್ಯ ಕಾಡಿದರೂ ಹೊಸಿಲು ದಾಟಿ ಒಳ ಬರಲು ಅಂಜದಿರುವರು:
ಮಹಾಪಂಡಿತರೂ ಒಂದು ಘಳಿಗೆ ಇಣುಕಿ ಹೋಗುವರು
ಪಾಮರರೂ ಸಾವಧಾನವಾಗಿ ಕುಣಿತು ಉಣ್ಣುವರು;

ನನ್ನೆದೆಯು ತಂಗುದಾಣವು ಬನ್ನಿ ಅತಿಥಿಗಳೇ,

ಎಲ್ಲರಿಗೂ ಆದರದ ಸ್ವಾಗತವು..
ಕೊಂಚ ಕೂರಿ ಒಲವಿನ ತಣ್ಣಗಿನ ನೆರಳಿನಲಿ
ನನ್ನೆದೆಯ ಮುರಳಿಯ ನಾದಕೆ ಕಿವಿಯಾಗಿ
ನನ್ನೆಲ್ಲ ಗೆರೆಗಳ ಜತೆಗಿಷ್ಠು ಸಂಭಾಷಿಸಿ
ಮತ್ತೆ ಹೋಗಬೇಕೆನ್ನುವ ತಮ್ಮ ಅವಸರಕೆ ನಾ ಅಡ್ಡಿಯಾಗಲಾರೆ
ಹೆದರಬೇಡಿ ನಾನೆಂದೂ ಒಂಟಿಯಲ್ಲ..
ಆತ್ಮಗಳೊಡೆಯ ಪರಮಾತ್ಮನು ಗುಡಿಯಲಿ ತಂಗಿಹನು.

25 June, 2014

ನೀನಿರದ ಪೂಜೆ ಪುರಸ್ಕಾರಗಳು.. ಒಲವೇ!

ಒಲವೇ, ನೀನಿರದ ಪೂಜೆ ಪುರಸ್ಕಾರಗಳು
ಫಲ ಪುಷ್ಪಗಳು, ವಜ್ರ ವೈಡೂರ್ಯಗಳು
ಹೊರಲಾಗದ ಹೊರೆಯಂತೆ ನನ್ನೊಡೆಯನಿಗೆ!

24 June, 2014

ಒಲವೇ, ನೀನಿರದಿರಲು..

ಒಲವೇ,
ಧರೆಗಿಳಿದ ಮುಗಿಲಲಿ ನೀನಿರದಿರಲು
ಶರಧಿಯು ಹೆರಬಹುದೇ ಹವಳವನು

-ಪ್ರೇರಣೆ ರೂಮಿ

23 June, 2014

ಶಾಯರಿ ಭಾವಾನುವಾದ



ದಃಖದಲ್ಲೂ ಸುಖದ ನೆರಳಿನ ಹೊದಿಕೆಯಡಿ ಪವಡಿಸುತ್ತಿದ್ದೆ
ಇಂದು ಕಣ್ಣುಗಳು ಗಲ್ಲವನ್ನು ಒದ್ದೆಮಾಡುತಿವೆ ಏಕೆ!
ಶೂನ್ಯವಾದ ಮಡಿಲಿನ ಜತೆ ಸುಖವಾಗಿದ್ದೆ
ಇಂದು ಕಳೆದುಕೊಂಡ ಭಾವ ಕಾಡುತಿದೆಯಲ್ಲ ಏಕೆ!


Yun toh sadmo mein bhi hans leta tha main,
Aaj kyun bewajah rene laga hun main,
Barson se hatheliyan khaali hi rahi meri,
Phir aaj kyun laga ki sab khone laga hun main ?

- Unknown.

21 June, 2014

ಬಾಳ ಪುಟಗಳು ಅದರಷ್ಟೇ ಮಗಚಲಿ..



ಒಲವೇ,
ಯಾಕಪ್ಪಾ ನಿನಗೆ ನಾಳೆ ನಾಡಿದಿನ ಚಿಂತೆ
ತಿಳಿಯದೆ ಬದುಕಿದು ಬಲು ನಿಗೂಢ ಸಂತೆ
ಸದ್ದಿಲ್ಲದೆ ಬಾಳ ಪುಟಗಳು ಮಗಚಲಿ ಅದರಷ್ಟಕಂತೆ
ನಾವೆಲ್ಲ ಬರೇ ವಿಧಿಯಾಡಿಸುವ ಸೂತ್ರದ ಬೊಂಬೆಯಂತೆ!

-ಪ್ರೇರಣೆ ರೂಮಿ

Divine destiny knows our fate
to the last detail.
Let our story be told in a silent way. 

~Rumi

20 June, 2014

ಕೀಟ ಮಿತ್ರ


ಆತ್ಮ ಸಂಗಾತಿಯಾಗು ನನ್ನೊಲವೇ..

ಒಲವೇ,
ಕ್ಷಣಿಕ ಕಾಲದಲೇ ತಣ್ಣಗಾಗುವ ಸಂಗಾತಿಯ ಭೌತಿಕ ಸ್ಪರ್ಶ ಸುಖಕಾಗಿ ನಾನೆಂದೂ ಹಾತೊರೆಯಲಿಲ್ಲ.
ದಿಟ್ಟಿಗೆ ದಿಟ್ಟಿ ಬೆರೆಸಿ, ಬೆಳೆಸಿ ಸಂಬಂಧ ಕಾಲಚಕ್ರದಡಿಯಲಿ ಹಣ್ಣು ಹಣ್ಣು ಮುದುಕಿಯಾಗಿ ಅಳಿಯುವುದೂ ಇಷ್ಟವಿಲ್ಲ.
ಆತ್ಮ ಸಂಗಾತಿಯಾಗಿ ಇಹ ಪರ ಬಂಧಗಳ ಮೀರಿ ಅನಂತದಲ್ಲಿ ನಾವಿಬ್ಬರೂ ಲೀನವಾಗುವುದನೇ ಬಯಸುವೆನಲ್ಲ.


-    -  ರೂಮಿ ಪ್ರೇರಣೆ


"I    If I hold you with my emotions
you'll become a wished-for companion.

If I hold you with my eyes,
you'll grow old and die.

So I hold you where we both
mix with the infinite

19 June, 2014

ನಡಿ ಗೆಳೆಯ, ಒಲವಿನ ಹಸಿರು ತೋಟಕೆ..

ಬಾ ಒಲವೇ, 

ಕಾಲ ಬಂಧನದಿಂದಾಚೆ 
ಭೌತಿಕ ಆಕರ್ಷಣೆಗಳಿಂದಾಚೆ
ನೋವು-ನಲಿವಿನ ವೃತ್ತಗಳಿಂದಾಚೆ
ಹಾರೋಣ ದಿಗಂತದಿಂದಾಚೆ

ಕೈಗೆ ಕೈ, ಮನಕೆ ಮನ ಬೆಸೆದು
ಬಾಹು ಬೀಸಿ ಕರೆಯುತಿಹ 
ಒಲವಿನ ಹಸಿರು ಉಸಿರು 
ತುಂಬಿದ ಕೈತೋಟಕೆ!

ಫೇಸ್‌ಬುಕ್ಕೂ ಮತ್ತು ಕವನ ಕವಿತೆಗಳೂ..


ಫೇಸ್‌ಬುಕ್ಕೂ ಮತ್ತು ಕವನ ಕವಿತೆಗಳೂ..
-----------------------------------

“All Facebook poets are cordially invited to attend a meeting which will be held at 8 am today.”

ಎಷ್ಟು ಗಂಟೆಗೆ ಮೆಸೇಜು ಬಂದದೆಂದು ನೋಡಿದರೆ ಏಳು ಗಂಟೆ!

ಈಗ ಏಳುವರೆ.. ಅಯ್ಯೋ ಎಲ್ಲಾ ಹಾಳು ಮಳೆಗಾಲದಿಂದ!

ಮಳೆಗಾಲ ಅಂತ ಮೂರು ದಿನಕ್ಕಾಗುವಷ್ಟು ಹಿಟ್ಟು ಮಾಡಿದ್ದೆ. ನೋಡಿದರೆ ಸೂರ್ಯನ ಪ್ರತಾಪ ವೈಶಾಖಕ್ಕಿಂತ ಹೆಚ್ಚು.. ಆಗೀಗ ಬೀಸಿ ಬರುವ ಗಾಳಿಗೆ ಒಂದಿಷ್ಟು ಹನಿ ಸುರಿದು ಸೆಕೆ ಇನ್ನೂ ಹೆಚ್ಚಾಗಿದೆ. ಹಿಟ್ಟು ಹುಳಿಯಾಗಿ ದೋಸೆ ಕಾವಲಿಯಿಂದ ಮೇಲಕ್ಕೇಳ್ಲಿಕ್ಕೆ ಸ್ಟ್ರೈಕ್ ಮಾಡ್ತಿದೆ.

ಯಾವಾಗ್ಲೂ ಎಡಗೈಯಲ್ಲಿ ವಾಟ್ಸ್ ಆಪ್ ಮೆಸೇಜು ನೋಡುತ್ತಾ ಬ್ರೇಕ್‌ಫಾಸ್ಟ್ ರೆಡಿ ಮಾಡ್ತಿದ್ದೆ. ಇವತ್ತು ಹೇಗೂ ಆ ಸಪ್ಪೆ ಗುಡ್ ಮಾರ್ನಿಂಗ್ ಮೆಸೇಜುಗಳಲ್ವಾ ಅಂತ ಉದಾಸೀನ ಮಾಡಿದ್ದೇ ತಪ್ಪಾಯ್ತು.

’ಛೇ! ಎಂತಹ ಒಳ್ಳೆಯ ಅವಕಾಶ. ಅಲ್ದೇ, ನಾನೂ ಕವಯಿತ್ರಿ ಅಂತ ಮಾನ್ಯತೆ ಬೇರೆ.’

ಕೆಲವೇ ಕ್ಷಣಗಳಲ್ಲಿ ಇಡೀ ಮನೆಯ ನೋಟವೇ ಬದಲಾಯ್ತು. ಗೊರೆಕೆ ಹೊಡೆಯುತ್ತಿದ್ದ ಪತಿ ಮಗಳ ಹೊದೆಕೆ ಎಳೆದ ರಭಸಕ್ಕೆ ಇಬ್ಬರೂ ಭೂತ ನೋಡಿ ಬೆಚ್ಚಿದವರ ಹಾಗೆ ಎದ್ದರು. ಎಲ್ಲವನ್ನೂ ಸಂಕ್ಷಿಪ್ತವಾಗಿ, ಆದರೆ ಹೆಮ್ಮೆಯಿಂದ ಹೇಳಿ,

“ಮ್ಯಾಗ್ಗಿ ಮಾಡ್ಕೊಳ್ಲಿ”

ಎಂದ್ಹೇಳಿ. ಇಬ್ಬರೂ ಹಾಗೆ ಬಿದ್ದದನ್ನು ನೋಡಿಯೂ ನೋಡದವರ ಹಾಗೆ ಮಾಡಿ ನಾನು ತಯಾರಾಗ್ಲಿಕ್ಕೆ ನಡೆದೆ

ಛೇ, ಹಾಗೆಲ್ಲ ಐದು ಹತ್ತು ನಿಮಿಷದಲ್ಲಿ ತಯಾರಾಗ್ಲಿಕ್ಕೆ ನನ್ ಕೈಯಿಂದ ಸಾಧ್ಯನಾ? ಸುಧಾದಲ್ಲಿ ನಿಮಿಷಗಳಲ್ಲೇ ಸಾರಿ ಉಡಲು ಬರುವ ಲೇಖನ ಓದ್ಬೇಕಿತ್ತು. ಉಮಾ ಅವರನ್ನು ಭೇಟಿಯಾಗ್ಬೇಕಿತ್ತು. ನಂಗೆ ಫುಗ್ಗೆ ಕೈ ಬ್ಲೌಸ್ ಚೆನ್ನಾಗಿ ಕಾಣುತ್ತೆ ಅಂತ ಎಲ್ರೂ ಹೇಳ್ತಾರೆ. ಕೊನೆಗೂ ಚೂಡಿದಾರವೇ ಗತಿ.

ಕಾರಿನ ಬಾಗಿಲು ತೆಗೆದಿತ್ತು.

“ಪ್ಲೀಸ್ ಮೇಡಂ, ಕಣ್ಣು ಮುಚ್ಕೊಳ್ಳಿ”

ಕಣ್ಣು ತೆರೆದಾಗ ಝಗಝಗಿಸುವ ಅರಮನೆ ಎದುರು ನಿಂತಿದ್ದೆ.

ಅರೇ, ಇವ್ರು ಆರತಿ ಘಾಟಿಕರ್.. ಆಹಾ, ಅನುರಾಧಾ ಬ್ಲೂ ಚುಡಿದಾರ್ ಹಾಕಿದ್ದಾರೆ, ಚೆನ್ನಾಗಿ ಒಪ್ಪುತ್ತೆ. ದಿವ್ಯಾ, ರಜನಿ, ಪ್ರೇಮಕ್ಕ, ಉಷಾ, ಗೀತಾ ಕೋಟೆ, ಸುಗುಣ, ಸೌಮ್ಯ, ಭಾರತಿ, ಅಂಜಲಿ, ಸಂಧ್ಯ..

ಅರೇ ನಮ್ಮ ಹುಡುಗ್ರ ಗುಂಪು.. ರಾಜಶೇಖರ್, ಗೋರೂರು, ಚಕ್ರವರ್ತಿ, ರಾಜೇಂದ್ರ ಪ್ರಸಾದ್, ವತ್ಸ, ಶಂಕರ, ಆಶೀಷ್..  ಅಯ್ಯೋ ಎಲ್ರೂ ಬಂದಿದ್ದಾರೆ.

ಚಂದದ ರೆಡ್ ಕಾರ್ಪೆಟ್, ಗುಲಾಬಿ ಪಕಳಗಳ ಹಾಸಿಗೆ..

ಅರೇ, ನನ್ ಕೆಮರಾ ತರ್ಲಿಲ್ವೇ!

ಸರ ಸರ ಮುಂದೆ ಹೋಗ್ತಿದ್ದವಳನ್ನು ನೀಲಿರಂಗಿನ ಸೀರೆ ಉಟ್ಟಿದ ಸುಂದರಿ ತಡೆದಳು..

“ಇದು ಫೇಸ್ಬುಕ್ ವಿಐಪಿ ಮೀಸಲು!”

ಕಾಲು ಹಿಮ್ಮೆಟ್ಟಿತು. ಕುತೂಹಲವಾಯ್ತು. ಮೊನ್ನೆ ಉಪೇಂದ್ರಣ್ಣ ಫೇಸ್ ಬುಕ್ ವಿಐಪಿಗಳ ಬಗ್ಗೆ ಹೇಳ್ತಿದ್ರು. ಯಾರು ಅಂತ ಮಾತ್ರ ಹೇಳಿರ್ಲಿಲ್ಲ.

ರಜ್ನಿ, ಉಪೇಂದ್ರಣ್ಣ ಇಬ್ರೂ ಮಾತಾಡ್ತಾ ಒಳಗೆ ಹೋಗ್ತಿದ್ರು. ಅರೇ, ತಾನೂ ವಿಐಪಿ ಅಂತ ಹೇಳೇ ಇಲ್ಲ. ನಂಗೆ ಗೊತ್ತಾದ್ರೆ ಇವ್ರ ಗಂಟೇನು ಹೋಗ್ತಿತ್ತು. ನನ್ನ ಅಣ್ಣ ಅಂತ ಒಂಚೂರು ಹೆಚ್ಚು ಹೆಮ್ಮೆ ತೋರಿಸ್ತಿದ್ದೆನಲ್ವಾ. ಇರ್ಲಿ, ಮತ್ತೆ ತರಾಟೆ ತಕೊಂಡ್ರಾಯ್ತು.

ಗುರುಗುಟ್ಟುತ್ತಿದ್ದ ಸ್ವಯಂಸೇವಕಿ ಇನ್ನು ಹೆಚ್ಚು ಹೊತ್ತು ನಿಂತಿದ್ರೆ ಕತ್ತು ಹಿಡಿದು ಸಭೆಯ ಆಚೆ ತಳ್ತಿದ್ಲೇನೋ..

“ಮೇಡಂ, ಇದು ಮುನ್ನೂರಕ್ಕಿಂತ ಹೆಚ್ಚು ಲೈಕ್ ಪಡೆದವರಿಗೆ ಮೀಸಲು!”

ಪೆಚ್ಚಾಯ್ತು ನನ್ನ ಮುಖ.

“ಒಂದು ಪ್ರೊಫೈಲ್ ಫೋಟೊಗೆ ಮುನ್ನೂರಕ್ಕೆ ಸ್ವಲ್ಪ ಕಡಿಮೆ ಸಿಕ್ಕಿದೆ.. ಆಗ್ಬಹುದಾ” ಅಂದ್ರೆ,

“ಇಲ್ಲ ಮೇಡಂ, ಫೋಟೊಗೆ ಸಿಗುವ ಲೈಕುಗಳನ್ನು ನಾವು ಲೆಕ್ಕಕ್ಕಿರಿಸಿಲ್ಲ. ಅದು ಬೇರೆ ಮೀಟಿಂಗ್.. ಸಧ್ಯದಲ್ಲೇ ನಡಿಲಿಕ್ಕಿದ್ದೆ. ಇದು ಬರೇ ಕವನಗಳ ಬಗ್ಗೆಯ ಮೀಟಿಂಗ್!”

ಎಲ್ಲಾ ಕಡೆಯಿಂದ ಉಗಿಸಿಕೊಂಡು  ಮುವತ್ತು ಮತ್ತು ಅದಕ್ಕಿಂತ ಕಡಿಮೆ ಲೈಕಿಗೆ ಮೀಸಲಾಗಿದ್ದ  ಸ್ಥಳದ ಹತ್ರ ಬರೋವಾಗ ಶ್ರೀನಿಧಿ ಸರ್ ನೂರು ಮತ್ತೆ ಹೆಚ್ಚು ಲೈಕ್ ಸ್ಥಳದ ಹತ್ರ ನಿಂತಿದ್ರು. ನನ್ನ ಅಲ್ಲೇ ಕರೆದ್ರು.

“ನಂಗೆ ಸ್ಪೆಶಲ್ ಕನ್ಸೆಷನ್.. ನೀನೂ ಬಾ. ಪರವಾಗಿಲ್ಲ,”

ಸಭೆಯ ಗುಜು ಗುಜು ನಿಂತು ಮೌನವಾಯ್ತು. ನೋಡಿದ್ರೆ,  ಕಟಕಟೆಯಲ್ಲಿ ನಡು ಪ್ರಾಯದ ಬಂಗಾರ ಹೇರಿದ್ದ ಹೆಂಗಸು! ವೀಣೆಯನ್ನು ಕಟಕಟೆಯ ಹೊರಗೆ ಒರಗಿಸಿಡಲಾಗಿತ್ತು.

ಮರೆತೆ ನಾ ಹೇಳಿರ್ಲಿಲ್ಲ ಅಲ್ಲ.. ಅಲ್ಲಲ್ಲಿ ದೊಡ್ಡ ಪರದೆಯ ಮೇಲೆ ಪ್ರಸಾರ ಮಾಡ್ತಿದ್ರು. ಹಾಗಾಗಿ ಕ್ಲೋಸ್ ಅಪ್ ತೋರಿಸಿದಾಗ ಗುರುತು ಹಿಡಿದೆ.

’ಅರೇ, ಇವಳು ಸರಸ್ವತಿ. ಹ್ಮ್, ರವಿವರ್ಮ ಚಿತ್ರದಲ್ಲಿ ತೋರಿಸಿದಕ್ಕಿಂತ ಸ್ವಲ್ಪ ಪ್ರಾಯ ಹೆಚ್ಚು. ಮೋಹನ ಕಂಠಿ ಚಂದ ಇದೆ.. ಸೊಂಟದ ಡಾಬುವಿನ ಮೇಲೆ ಕೆತ್ತನೆ.. ’

ನಾನು ಅವಳ ಬಂಗಾರ ಸೀರೆಯ ಅಂದ ಚಂದ ಸವಿತಾ ಇದ್ರೆ, ನನ್ನ ಪಕ್ಕದಲ್ಲಿ ಕೂತ ಹಿರಿಯರು ಮೊಣಕೈಯಿಂದ ಚುಚ್ಚಿ ಎದ್ದು ನಿಲ್ಲಲು ಹೇಳಿದ್ರು.

ಗಂಭೀರವದನರಾಗಿ ಕಾಳಿದಾಸ, ಬಾಣ, ಪಂಪ, ರನ್ನ, ಕುವೆಂಪು, ಕೆ ಎಸ್ ಎನ್, ಕಾರಂತ, ಪು ತಿ ನ, ರೂಮಿ, ಗಾಲಿಬ್, ಶೇಕ್ಸ್‌ಪಿಯರ್... ನಿಧಾನವಾಗಿ ಸಭೆ ಪ್ರವೇಶಿಸುತ್ತಿದ್ದರು.

ರೂಮಿಯನ್ನು ನೋಡಿ ಕೈಕಾಲು ತಣ್ಣಗಾಯಿತು... ’ಅಯ್ಯೋ ನಂಗೆ ಬೇಕಿತ್ತಾ ಅನುವಾದ ಗಿನುವಾದ. ಸುಮ್ನೆ ಮೊದಲಿನ ಹಾಗೆ ಓದಿ ಸಿಕ್ಕಾಪಟ್ಟೆ ವಿಮರ್ಶೆ ಮಾಡೋ ಬದುಕೇ ಸಾಕಿತ್ತು.’

’ಸಭೆಯಲ್ಲಿ ರೂಮಿ, ಓಶೋ, ಗಾಲಿಬ್ ನನ್ನ ಹೆಸರು ಹೇಳಿ ಅವಮಾನ ಮಾಡುವ ಮೊದಲೇ ಜಾಗ ಖಾಲಿ ಮಾಡೋದು ಒಳ್ಳೆದು ಅಂತ ಅಂದ್ಕೊಂಡ್ರೂ ನಾ ಬಂದ ದಾರಿಯೇ ಗೊತ್ತಿರಲಿಲ್ಲ. ಕೈ ಕಾಲು ತಣ್ಣಗೆ ಆಯ್ತು. ಬಾಯಿ ಒಣಗಿತ್ತು.

ಶೀನಿಧಿ ಸರ್ ನನ್ನ ಅವಸ್ಥೆ ನೋಡಿ ನಗು ಬಂದ್ರೂ ತಡ್ಕೊಂಡಿದ್ರು.

“ಸರ್, ಏನು ವಿಷಯ?”

ಶ್ರೀನಿಧಿ ಸರ್ ತಲೆ ಬಗ್ಗಿಸಿ, ಸ್ವರ ತಗ್ಗಿಸಿ,

“ಫೇಸ್ ಬುಕ್ಕಿನಲ್ಲಿ ಕವನಗಳ ಹಾವಳಿ ಹೆಚ್ಚಾಗಿದೆಯಂತೆ, ಸರಸ್ವತಿಯ ಮೇಲೆ ದೂರು. ಸಿಕ್ಕಿದವರ ಮೇಲೆಲ್ಲಾ ಅವಳ ಕೃಪೆ ಹೆಚ್ಚಾಗಿ ಎಲ್ಲರೂ ಬರೆಯಲು ಶುರು ಮಾಡಿ ಕವನಗಳ ಮಟ್ಟ ತಳ ಸೇರಿದೆಯಂತೆ. ಭೂಲೋಕದ ಹಿರಿಯ ಕವಿಗಳು ಪರಲೋಕ ಸೇರಿದ ಕವಿಗಳ ಮೂಲಕ ಬ್ರಹ್ಮನಿಗೆ ಕಂಪ್ಲೈಂಟ್ ಕೊಟ್ಟಿದ್ದಾರೆ. ಹಾಗಾಗಿ ಎಲ್ಲಾ ಫೇಸ್ ಬುಕ್ ಕವಿಗಳಿಗೆ ವಾರ್ನಿಂಗ್ ಕೊಡಲು ಈ ಮೀಟಿಂಗ್!”

“ಅಂದ್ರೆ ಫೇಸ್ ಬುಕ್ಕಿನಲ್ಲಿ ಬರೆಯುವುದೆಲ್ಲ ಕಳಪೆ ಬರಹಗಳೆಂದು ಹೇಗೆ ತಿರ್ಮಾನಿಸಿದರು?”

“ನನ್ನ ಪೂರ್ವಜರು ಪಂಪನ ಫ್ರೆಂಡ್ ಆಗಿದ್ರು. ಹಾಗಾಗಿ ನನಗೆ ಒಳಗುಟ್ಟು ಗೊತ್ತಾಗಿದೆ. ಎಲ್ರೂ ಕಳಪೆ ಅಲ್ಲ. ಸಾವಿರ ಫ್ರೆಂಡ್ಸ್ ಇದ್ದು ನೂರಕ್ಕಿಂತ ಕಡಿಮೆ ಲೈಕ್ ಸಿಕ್ಕಿದವರು ಇನ್ನು ಮುಂದೆ ಬರೆಯುವ ಹಾಗಿಲ್ಲ ಅಂತ ಮೊದಲೇ ತೀರ್ಮಾನ ಆಗಿದೆ. ಈಗ ಬರೇ ನಾಟಕ ಅಷ್ಟೇ. “

ನನ್ನ ಕಣ್ಣಲ್ಲಿ ನೀರು ಇಣುಕಿತು.

“ಅಯ್ಯೋ, ಫೇಸ್ ಬುಕ್‍ ನಲ್ಲಿ ಬರೆಯುವುದು ನನ್ನ ಬದುಕಿನಲ್ಲಿ ಸೇರಿಕೊಂಡು ಹೋಗಿದೆ.. ಅಯ್ಯೋ ನಾಳೆ ಅಲ್ಲಲ್ಲ, ಇವತ್ತಿನಿಂದ್ಲೇ  ಹೇಗೆ ಬದುಕಲಿ. ಸಾಯುದೇ ಮೇಲು!”

“ಅಷ್ಟು ಡೆಸ್ಪರೇಟ್ ಆಗುದು ಬೇಡ. ಹೆಣ್ಣು ಮಕ್ಕಳಿಗೆ ಕನ್ಸೆಷನ್ ಇದೆ. ಅವ್ರು ಯಾವಾಗಲೂ ಬರಿಬಹುದು. ಇವತ್ತಲ್ಲ ನಾಳೆ ಅವ್ರಿಗೆ ಸಿಗುವ ಲೈಕುಗಳು ನೂರನ್ನು ದಾಟುತ್ತವೆ. ಅಲ್ದೆ, ಸ್ವಲ್ಪ ಒಳ ವ್ಯಾಪಾರ ನಡೆದ್ರೆ ಹುಡುಗ್ರೂ ಬರಿಬಹುದು.. ನಿನಗೆ ನಾನು ನನಗೆ ನೀನು ಅಂತ ಎಲ್ರೂ ಮಾತಾಡಿಕೊಂಡು ಲೈಕು ಕಮೆಂಟು ಹಾಕ್ತಿದ್ರೆ ಆಚೆ ಮೂವತ್ತು ಮತ್ತೆ ಕಡಿಮೆಯಲ್ಲಿ  ಕುಳಿತವರೆಲ್ಲ ವಿಐಪಿಗಳೂ ಆಗ್ಬಹುದು.”

“ಅಬ್ಬಬ್ಬ.. ಸೋ ಹಾಗಾದ್ರೆ ಮಸ್ಕಿ ಹೊಡ್ದು ಮತ್ತೆ ಕವಯಿತ್ರಿ ಪಟ್ಟಗಿಟ್ಟಿಸ್ಬಹುದು ಅನ್ನಿ.”

“ಸಧ್ಯ ಹಾಗೆ ಕಾಣ್ತಿದೆ. ಕೆಲವ್ರು ಸಾಹಿತ್ಯ ಹಾಳಾಗ್ತಿದೆ ಅಂತ ಬಂಡಾಯ ಮಾಡ್ಬಹುದು. ಆದ್ರೆ ಅವ್ರ ಬಾಯಿ ಮುಚ್ಚಿಸುವ ವಿಧಾನ ನಮ್ಮ ನವ್ಯ ಕವಿಗಳಿಗೆ ಗೊತ್ತು. ಅಲ್ದೆ ಅವ್ರು ವಿರುದ್ಧ ಬರೆದದಷ್ಟು ವಿರೋಧಿಗಳಿಗೆ ಹೆಚ್ಚು ಪ್ರಚಾರ. ಅಲ್ದೆ ಫೇಸ್ ಬುಕ್ ಪ್ರಶಸ್ತಿಗಳು ಘೋಷಿಸುವ ಲಕ್ಷಣಗಳೂ ಕಾಣ್ತಿವೆ. ಹಾಗಾಗಿ ಸಧ್ಯಕ್ಕೆ ಮೀಟಿಂಗ್ ನಲ್ಲಿ ಒಂದಿಷ್ಟು ಗಲಾಟೆ ಆದ್ರೂ ಇಲ್ಲಿಯ ಕವಿಗಳ ಭವಿಷ್ಯಕ್ಕೆ ತೊಂದರೆ ಇಲ್ಲ.”

“ಮೇಡಮ್ ಮೇಡಮ್.. “

ಡಬ ಡಬ ಸದ್ದು. ಬೆಚ್ಚಿ ಎದ್ದು ಕುಳಿತೆ. ಅಪರಾಹ್ನ ಮೂರು ಗಂಟೆ! ಮಕ್ಕಳು ಮನೆಪಾಠಕ್ಕೆ ಬಂದು ಕಾದುನಿಂತಿದ್ದಾರೆ,

“ಅಯ್ಯೋ, ನನ್ನ ಕರ್ಮ! ಮನೆಕೆಲಸ, ಜತೆಗೆ ಟ್ಯೂಷನ್, ಇದ್ರ ಜತೆಗೆ ಈ ಕವನ ಕತೆ ಬರೆಯುವ ಹುಚ್ಚು, ಎಲ್ಲಿ ತನಕ ಅಂದ್ರೆ ಅದೇ ಕನಸೂ ಬೀಳುತ್ತೆ. ಬೇಕಿತ್ತ ಇದೆಲ್ಲ ನಂಗೆ. ಬ್ಲಾಗ್ ಫ್ರೆಂಡ್ಸ್‌ಗಳಿಂದ ಪ್ರೇರಿತಳಾಗಿ ಬರೆಯುವ ಹುಚ್ಚು ತಾಗಿಸ್ಕೊಂಡು ಮುಂದೆ ಸ್ವರ್ಗಕ್ಕೆ ಹೋದಾಗ ರೂಮಿ, ಗಾಲಿಬ್ ಓಶೋರಿಂದ ಉಗಿಸಿಕೊಳ್ಳೋ ಸ್ಥಿತಿ ತಂದ್ಕೊಂಡೆ!’

ಎದ್ದು ಮಕ್ಕಳ ಜತೆ ಕುಳಿತವಳು ಫೇಸ್ ಬುಕ್ ಹಾಗು ಕವಿ ಕವನ ಎಲ್ಲ ಮರೆತೆ. ಮಕ್ಕಳ ಜತೆ ಮಗುವಾಗಿ ಬೆರೆತೆ! ಮತ್ತೆ ಎಂಟು ಗಂಟೆಗೆ ಅದೇ ಕವನ ಕವಿತೆ.. ಮತ್ತು ರೂಮಿ ವಾಪಸ್ಸು ಬರ್ತಾರೆ!

18 June, 2014

ಉಸಿರೊಳಗಿನ ಪ್ರಾಣ.. ವೈಕುಂಠಾಧಿಪತಿಯ ಒಡನಾಟ..

ಸೃಷ್ಟಿಯ ಜೀವಿಗಳ ಉಸಿರೊಳಗಿನ ಪ್ರಾಣವಾಗಬೇಕಾದರೆ ಅಕ್ಕರೆಯ ಬೀಜವನು ಉತ್ತಬೇಕು

ವೈಕುಂಠಾಧಿಪತಿಯ ಒಡನಾಟ ಬೇಕಾದರೆ ಪರರ ಏಳಿಗೆಯ ಹಾದಿಗೆ ಮುಳ್ಳಾಗಬಾರದು!


-ಪ್ರೇರಣೆ ರೂಮಿ


if you want to win hearts,
sow the seeds of Love.
If you want heaven,
stop scattering thorns on the road.

Extracts from the book written by the Spirits!

|| We all wonder: Why doesn’t a soul’s conscience stop him? We see many people doing tremendously evil things convincing the world that they are absolutely innocent, and that nothing affects their conscience. You must wonder how this happens. We would like to explain.

Your conscience, or subconscious mind, is free to guide you when you are innocent children. As you begin engaging in bad behavior due to negative influences, or are trained by some evil, your subconscious mind hardens- it quietens down, sleeps and becomes dormant.

The next time someone does something wrong, there is no need to wonder, “Doesn’t he or she have a conscious?” ||

-       The Laws of the spirit world by Khorshed Bhavnagri





17 June, 2014

ತಿಳಿವು-ಅರಿವು... ನಡುವೆ ಒಲವು!

ಗ್ರಂಥಗಳನು ಓದುವುದರಿಂದ ತಿಳಿವು ಸಿಗಬಹುದು;
ಗ್ರಂಥಗಳ ವಿಚಾರಗಳಲಿ ಒಲವು ತೋರಿದರೆ ಅರಿವೂ ಸಿಗಬಲ್ಲದು.
-ರೂಮಿ

You will Learn
by Reading 

But you will understand
with
Love 

ಗೊತ್ತಾಯ್ತಾ!

|| ಹೇಳಿದರೆ ಗೊತ್ತಾಗದವರಿಗೆ, ತಾಗಿದರೆ ಗೊತ್ತಾಗುತ್ತದೆ ||

16 June, 2014

ಮುಂಗಾರು ಮಳೆಯ ಹನಿಯಲಿ ನಲ್ನುಡಿಯ ಕಿಲಿ ಕಿಲಿ..

ಒಲವಿನ ನಲ್ನುಡಿ ಬೆರೆತು ಮುಂಗಾರು ಮಳೆಯ ಹನಿಯಲಿ
ಕಪ್ಪು ಕತ್ತಲೆಯಲಿ ಬೆಳಕು ಚಿಮ್ಮಿಸುತ ಕೊಳಲಿನ ದನಿಯ ಹಿನ್ನಲೆಯಲಿ
ಹೊದಿಕೆಯೊಳಗೆ ನುಸುಳಿ ಕೇಳಿಸಿತಲ್ಲವೆ ನನಗದು ಮಾರ್ದನಿಯಾಗಿ,
“ಮುನ್ನಡೆ, ಕಣ್ಣು ಮುಚ್ಚಿ ಹಾದಿಯಲಿ ಅಳುಕದೆ ಹೆಜ್ಜೆಯಿಡು..
ನಡುಗಿ ಬೆಚ್ಚಿ ಬೀಳುವ ಕಾಯಕೆ ನಾನಾಗುವೆ ಆಸರೆ
ನಿಷ್ಕಲ್ಮಶ ಮನದಲಿ ನೀ ನೀಡಲು ನನಗಾಸರೆ!


13 June, 2014

ಹ್ಮ್.. ಅವ್ರು, ಇವ್ರು!!!!

“ಅವರು”, “ಇವರ ಬಗ್ಗೆ ಎಚ್ಚರವಿರು” ಅಂತ ಎಲ್ಲರಿಗೂ ಹೇಳುತ್ತಿರುವರಂತೆ,
ಆ ಎಲ್ಲರೂ “ಇವರಿಗೆ” ಅದನು ಹೇಳಿದರಂತೆ,
“ಇವರು” ಅದನ್ನೆಲ್ಲ ಕೇಳಿಯೂ ಮನಸ ಕೆಡಿಸದೆ “ಅವರ” ಮಾತುಗಳಿಗೆ ಮೆಚ್ಚುಗೆ ಪ್ರತಿಕ್ರಿಯೆಗಳನು ಎಂದಿನಂತೆ ನೀಡುತ್ತಿರುವರಂತೆ.
ಅದ್ಯಾಕೆ “ಇವರು” ನೇರವಾಗಿ “ಅವರ” ಬಳಿ ಹೀಗೆಲ್ಲಾ ಮಾಡುವಿಯೇಕೆ ಎಂದು ಕೇಳುವುದಿಲ್ಲವೇಕಂತೆ,

ನಡೆಯುವುದನ್ನೆಲ್ಲಾ ನೋಡಿ ಅರಿತೆ ಇದೆಲ್ಲಾ ಮೇಲಿನವನ ಆಟವಂತೆ!

ನೋವು ನಲಿವಿನ ಕ್ಷಣಗಳ ಕಾಟ ನೀನಿರಿರದಾಗ ನನ್ನೊಲವೇ..


ಆಗಸದಲಿ ರೆಕ್ಕೆ ಹರಡಿ ಬಿಳಿಮುಗಿಲ ಅಪ್ಪಿ ಮೆರೆದಾಡುತ ಮೈಮರೆತ ಒಂದು ಕ್ಷಣ
ಜಾರಿ ಪಾತಾಳಕ್ಕಾಳಕ್ಕಿಳಿದು ಕಲ್ಲು ಮುಳ್ಳುಗಳೆಡೆಯಲ್ಲಿ ನರಳುವ ಮತ್ತೊಂದು ಕ್ಷಣ
ಸದಾ ನನ್ನ ಬೆಂಗಾವಲಿಗಿರು ನನ್ನೊಲವೇ,
ನಿನ್ನ ಅನುಪಸ್ಥಿತಿಯಲ್ಲಿ ಅವರಿವರ ಕ್ಷಣಕ್ಕೊಮ್ಮೆ ಬದಲಾಗುವ ಮಾತುಗಳು
ನಾಕ ನರಕಗಳೆರಡನೂ ಸುತ್ತಿಸುವುವು.
ನೀನಿರೆ ಜತೆಯಲಿ ಯಾವ ಮಾತೂ, ಮತ್ಯಾವ ಭಾವವೂ ಪ್ರಭಾವ ಬೀರದು ನನ್ನೊಲವೇ!


-       ಪ್ರೇರಣೆ ರೂಮಿ


"One day I feel confused and down,
the next I can reach the sky
without you I am never calm.
In your absence people ridicule me,
but when you come
I don't mind what they think or say."

¨°~Rumi~°¨

12 June, 2014

ಆಹ್ವಾನ ತಗೊಳ್ಳಿ, ನೋಡಿ ಗಂಡು ಹೆಣ್ಣು ಒಬ್ಬರೊಳಗೆ ಒಬ್ಬರಿದ್ದು ಹೇಗೆ ಭಾವಗಳ ತಿಕ್ಕಾಟ ನಡೆವುದು..

ಜಗವೊಂದು ನಾಟಕ ಮಂದಿರ, ಮತ್ತು "ಗಂಡು" "ಹೆಣ್ಣು" ಇಲ್ಲಿ ಸಮಾನ ಪಾತ್ರಧಾರಿಗಳು. ತಮ್ಮ ತಮ್ಮ ಪಾತ್ರಗಳನ್ನು ನಿರ್ವಹಿಸಲು ಬರುತಾರೆ ಮತ್ತು ನಿರ್ಗಮಿಸುತ್ತಾರೆ. ಗಂಡು ತನಗಿತ್ತ ಸಮಯದಲ್ಲಿ ಅನೇಕ ಪಾತ್ರಗಳನ್ನು ಅಭಿನಯಿಸುತ್ತಾನೆ, ಪ್ರೇಕ್ಷಕ ಬಂಧುಗಳೇ, ಸಾವಧಾನವಾಗಿ ಕೇಳಿ ತನ್ನೊಳಗಿರುವ ನಯ ನಾಜೂಕು ಭಾವಗಳ ಮೂರ್ತಿಯಾದ ಹೆಣ್ಣಿನ ಪಾತ್ರವನ್ನೂ ಸಹ ಆತ ಚೆನ್ನಾಗಿ ನಿರ್ವಹಿಸುತ್ತಾನೆ.

ಎಲ್ಲಾ ಹೆಣ್ಣಿನೊಳಗೂ ಗಂಡಿನ ಧೈರ್ಯ, ಶೌರ್ಯ,ಬಲವೂ ಅಡಗಿದೆ ಎಂಬುದು ಹೆಚ್ಚಿನವರು ಅರಿಯರು.. ಹೆಣ್ಣಿನೊಳಗೊಂದು ಗಂಡು, ಬಾಲಕಿಯೊಳಗೊಂದು ಬಾಲಕ... ಹ್ಮ್,ಇದೇ ಕಾರಣವಿರಬಹುದೇ, ಆಕೆ ತನ್ನೊಳಗೆ ಬೆಳೆಯುವ ಗಂಡು ಗರ್ಭಗಳಿಗೂ ತನ್ನ ನಾಜೂಕು ಭಾವಗಳ ಸಿಂಚನ ಮಾಡಿರುವುದು!

ಹಾಗಾದರೆ ಗಂಡು ಗಂಡೇ, ಹೆಣ್ಣು ಹೆಣ್ಣೇ.. ಎನ್ನಲಾಗುವುದಿಲ್ಲವಲ್ಲ!

ಅರೇ ಇದನ್ನು ಹೇಗೆ ನಿರೂಪಿಸುವಿರಿ ಎಂದು ಕೇಳುವಿರಾ...

ತಡಿರಿ, ತಡಿರಿ,

ಮಂಗಳ ಗ್ರಹದಿಂದಿಳಿದ ಗಂಡು ಮತ್ತು ಶುಕ್ರ ಗ್ರಹದಿಂದಿಳಿದ ಹೆಣ್ಣೇ ಹೇಳ್ತಾರೆ,

ಒಟ್ಟಾರೆ ನಿಮ್ಗೆ ತಾಳ್ಮೆ ಮತ್ತು ಸಮಯ ಬೇಕು.

ಇದೆ ಅನ್ತಿರಾ..

ಹಂಗಾರೆ,

"ಹೆಜ್ಜೆ", ಬೆಂಗಳೂರು ಪ್ರಸ್ತುತ ಪಡಿಸುವ
ಮುಂಬೈನ "ಶಬ್ದ ಗುಚ್ಛ" ತಂಡದ ನಾಟಕ

"ಮಾಯಾವಿ ಸರೋವರ"

ನೋಡಲು ಬನ್ನಿ!

ಮೂಲರಚನೆ; ಡಾ. ಶಂಕರ್ ಶೇಷ್
ಕನ್ನಡಕ್ಕೆ; ನಟರಾಜ
ನಿರ್ದೇಶನ; ಅಹಲ್ಯಾ ಬಲ್ಲಾಳ್

ತಾರೀಕು 21-06-2014
ಸ್ಥಳ; ಕೆ.ಎಚ್. ಕಲಾಸೌಧ, ಬೆಂಗಳೂರು
ಸಮಯ; ಸಂಜೆ ಗಂಟೆ 7.00

{ಮಿತ್ರ ಮನೋಹರ್ ನಾಯಕ್ ಅವರ ಮೂಲ ಆಂಗ್ಲ ಮಾತನ್ನು ಕನ್ನಡದಲ್ಲಿ ಭಾವಾನುವಾದ ಮಾಡಿದ ಈ ಪಾಮರಳ ತಪ್ಪೇನಾದರೂ ಇದ್ದರೆ ಕ್ಷಮಿಸಿ, ಮತ್ತು ನಾಟಕ ನೋಡಿ ಪ್ಲೀಸ್, ತಂಡದಲ್ಲಿ ದೃಶ್ಯ ರೂಪದಲಿ ಇಲ್ಲದಿದ್ದರೂ ಅದೃಶ್ಯವಾಗಿಯೆ ಇದ್ದು ಭಾಗಿಯಾಗಿರುತ್ತೇನೆ. ನನ್ನೊಡೆಯನು ಯಶಸ್ಸನ್ನು ನೀಡಲಿ ಎಂದೇ ಸವಿನಯದ ಪ್ರಾರ್ಥನೆ}



ಝಗಮಗಿಸುವ ಪ್ರಭೆ ಬೆಳಗುತಿದೆ ಎದೆಯೊಳಗೆ..


ಆತ್ಮವೆಂಬ ಬಟ್ಟಲಲ್ಲಿ ಸೇವಿಸಿದೆ ಒಲವಿನ ಸೋಮರಸ
ನಶೆಯೇರಿ ಪ್ರಜ್ಞೆ, ನೋವು, ಅಹಮಿಕೆ ಅಳಿಸಿಹೋಗಿದೆ
ಪ್ರಭೆಯೊಂದು ಆತ್ಮದ ಗುಡಿಯೊಳಗೆ ಬೆಳಗಿದ ಅನುಭಾವ
ಹ್ಮ್.. ಬೆಳಕಿಗೆ ಶರಣಾಗುವ ಪತಂಗದಂತೆ

ಸವಿತೃನೂ ಆತ್ಮವನು ಸುತ್ತುತಿಹನೆಂಬ ಅನುಭೂತಿ!


"I drank that wine of which the soul is a vessel
its ecstasy has stolen my intellect away
A light came and kindled a flame in the depth of my soul
A light so radiant that the sun orbits around it
like a butterfly."

¨°~Rumi~°

11 June, 2014

ನಲುಮೆಯ ಸಿಂಗಾರದೊಡವೆಯ ಪದಗಳೇ ಒಲವಿಗಾಸರೆ..

ಬರೇ ನೋಟ ಸಮಾಗಮದ ಫಲವಾಗಿದಿದ್ದಿರೆ ಒಲವು
ಪದಗಳು ನಲುಮೆಯ ಸಿಂಗಾರದರಿವೆ ಉಡುತ್ತಿರಲಿಲ್ಲ
ಬಿಳಿಕಲ್ಲಿನ ಗೋರಿಯಾಗಿ ಉಳಿದಿದ್ದಿತು ತಾಜಮಹಲ್

ಶಹಜಾನ ಮಮತಾಜರ ಒಲವಿನನಾಸರೆಯಿರದಿದ್ದಿರೆ!

Sirf isharoon mein hoti mohabbath agar,
In alfazoon ko khoobsurtih kaun detha,

bas paththar bann ke reh jaatha Tajmahal
agar ishq ise apni pehchaan na detha!

ಬೊಗಸೆಯಲಿ ಚಂದ್ರಮ..

ಒಲವೇ,

ಬಾಯಾರಿಕೆಯೆಂದು ಕೊಳದತ್ತ ನಡೆದೆ
ಬೊಗಸೆಯಲ್ಲಿ ಸೆರೆಯಾದನು ಚಂದ್ರಮ
ಬದುಕಿನ್ನು ನೀರಡಿಕೆಯಿಂದ ಮುಕ್ತ!

- ರೂಮಿ 
ಭಾವಾನುವಾದ


Thirst drove me down to the water where I drank the moon’s reflection .

10 June, 2014

ಮುಂಡಕೋಪನಿಷತ್

ಯಥಾ ನದ್ಯಃ ಸ್ಯಂದಮಾನಾಃ ಸಮುದ್ರೆ‍sಸ್ತಮ್ ಗಚ್ಛಂತಿ ನಾಮರೂಪೇಣ ವಿಹಾಯ|
ತಥಾ ವಿದ್ವಾನ್  ನಾಮರೂಪದ್ವಿಮುಕ್ತಃ  ಪರಾತ್ಪರಂ  ಪುರುಷಮುಪೈತಿ ದ್ವಿವ್ಯಮ್||

- ಮುಂಡಕೋಪನಿಷತ್

ನೇತ್ರಾವತಿ ಕಾವೇರಿ ಗಂಗಾ ಜಮುನಾ
ಉದ್ದ ಅಗಲ ರುಚಿ ರೂಪ ವಿವಿಧ
ಕಟ್ಟೆಕಟ್ಟಿ ನಿಲ್ಲೆಂದರೂ ನಿಲ್ಲದೆ
ಹಾದಿ ಬೀದಿ ಕ್ರಮಿಸುತ
ತನ್ನತನ ತೊರೆಯುವ ಹಂಬಲದಿ
ಉಪ್ಪುಪ್ಪು ಸಾಗರನಲಿ ಲೀನ!

ಹೆಸರು-ಬಣ್ಣವಿಲ್ಲ ಹುಟ್ಟು-ಸಾವಿಲ್ಲ
ನೋವು- ನಲಿವಿಲ್ಲ ಆಯ-ಆಕಾರವಿಲ್ಲ
ದೇಹದ ಕರ್ಮಕೆ ಸಾಕ್ಷಿ ಮಾತ್ರ
ಕರ್ಮಗಳ ಲೆಕ್ಕ ಸವೆಸುತ ಕಾದು
ಕಾಡಿ ಬೇಡಿ ಕೊನೆಗೂ ಕರೆ ಬಂದಾಗ
ಸೃಷ್ಟಿಕರ್ತ ಒಡೆಯನಲಿ ಲೀನ

ಹತ್ತು ಹಲವು ಕನಸುಗಳನ್ನು ನನಸು ಮಾಡುವ ಯತ್ನ, ಇನ್ನೂ ಹಾಲುಗಲ್ಲದ ಕುಡಿ, ತನ್ನದೇ ಪುಟ್ಟ ಅರಮನೆಯಲಿ ನೆಲೆಸುವ ಛಲ ಎಲ್ಲವೂ ಬಿಟ್ಟು ಯಮನ ಒಂದೇ ಕರೆಗೆ ಓಗೊಟ್ಟು ಹೊರೆಟೆ ಬಿಟ್ಟೆಯಲ್ಲವೇ ಗೆಳತಿ, ಹೇಗೆ ಮನಸ್ಸು ಬಂತು!

ಅಕಾಲಕ್ಕೆ ಉಸಿರಾಟ ನಿಲ್ಲಿಸಿ ಹೊರಟ ಗೆಳತಿಯ ಆತ್ಮದ ಶಾಂತಿಗಾಗಿ..

ಒಲವು ಅಂದ್ರೆ ನೋವು, ಹೌದಾ!

|| ಒಲವು  ಮೈ ಮನದೊಳಗೆ ವ್ಯಾಪಿಸಿದ ಹಾಗೆ ನೋವುಣ್ಣುವ ಸಾಮರ್ಥ್ಯವೂ ಹೆಚ್ಚುತ್ತದೆ ||
-ಜೆನ್ನಿಫರ್ ಆನಿಸ್ಟನ್

 || The greater your capacity to love, the greater your capacity to feel the pain ||


-Jennifer Aniston

ರೂಪವೂ ಅಲ್ಲ, ವಾಚ್ಯವೂ ಅಲ್ಲ.. ಮತ್ಯಾವುದು ಸೆಳೆದದ್ದು!

ಸೆಳೆಯುತ್ತಾರೆ ಕೆಲವರು, ಮನದೊಳಗೆ ಇಳಿದು ಎದೆ ಗುಡಿಯೊಳಗೆ ನುಸುಳಿ ಬಿಂಬವಾಗಿ ಪ್ರತಿಷ್ಠಾಪಿತರಾಗುವರಲ್ಲ,

ಬಾಹ್ಯ ರೂಪದಿಂದಲ್ಲ, ವಾಚ್ಯದಿಂದಲೂ ಅಲ್ಲ, ಅವರು ಅವರಾಗಿ ಇರುವುದರಿಂದಲೇ ಎಂದೆನಿಸುವುದಲ್ಲ!

Sometimes people are beautiful,
Not in looks, not in what they say
Just in what they are.

-Markus  Zusak

09 June, 2014

ಡಬ್ಲ್ಯು. ಬಿ. ಯೀಸ್ಟ್ ಅವರ ಕವನದ ಭಾವಾನುವಾದ!

ಚುಕ್ಕಿಗಳು ಎತ್ತೆತ್ತಲೋ ಓಡಿ ಮಂಗಮಾಯವಾಗಿ
ಕತ್ತಲೆಯ ಕರಾಳ ಬಾಹು ಚಂದ್ರಮನ ನುಂಗಿ
ನಭವು ಸೂತಕದಾಚರಣೆಯಲಿರುವ ತನಕ
ಅವನೊಲವಿನ ಭಾವದಲೇ ಪರವಶವಾಗಿರುವನು

-      ಪ್ರೇರಣೆ  ಡಬ್ಲ್ಯು ಬಿ ಯೀಟ್ಸ್ ಅವರ ಕವನ!

For he would be
Thinking of love
Till the stars run away
And the shadows
Eaten the moon!


ಮನಶಾಸ್ತ್ರದ ಪಾಠ


ಡಿಸೆಂಬರ್ 2013ರರ ತರಂಗದಲ್ಲಿ ಪ್ರಕಟವಾದ ಎಸ್. ಸೀತಾರಾಮು ಬರೆದ ಕತೆ ಅಂತರಾಳದಲ್ಲಿ ಬರುವ ಈ ಸಾಲುಗಳು ಬಹಳ ಇಷ್ಟವಾಯಿತು.  ನಮ್ಮ ಬಗ್ಗೆ ನಾವು ಎಲ್ಲರೂ ತಿಳಿಯಬೇಕಾದ ಎಂದು ಅನಿಸಿ ಇಲ್ಲಿ ಹಂಚಿಕೊಂಡೆ.

ಜೋ ಮತ್ತು ಹ್ಯಾರಿ ಅನ್ನುವ ಇಬ್ಬರು ವರ್ತನಾಶಾಸ್ತ್ರಿಗಳು ಮಾನವನ ವ್ಯಕ್ತಿತ್ವವನ್ನ ಒಂದು ಚೌಕಾಕೃತಿ ಎಂದು ಪರಿಗಣಿಸಿ, ಅದನ್ನ ನಾಲ್ಕು ಭಾಗಗಳಾಗಿ ವಿಂಗಡಿಸಿದ್ದಾರೆ.

ಒಂದು ಭಾಗ ತನಗೂ ಮತ್ತು ಇತರರಿಗೂ ತಿಳಿದಿರುವಂಥದು. ಉದಾಹರಣೆಗೆ ನಮ್ಮ ರೂಪ, ಇದನ್ನ ತೆರೆದ ಭಾಗ ಎಂದು ಕರೆಯಲಾಗಿದೆ.

ಇನ್ನು ಎರಡನೆಯ ಭಾಗ ತನಗೆ ತಿಳಿದಿರುವುದು. ಆದರೆ ಇತರರಿಗೆ ತಿಳಿಯದೇ ಇರುವುದು. ಉದಾಹರಣೆಗೆ ನಮ್ಮ ಇಷ್ಟಾನಿಷ್ಟಗಳು, ನಮ್ಮ ರಹಸ್ಯಗಳು, ಇದನ್ನ ನಾವು ಇತರರಿಗೆ ತಿಳಿಸಿದರಷ್ಟೇ ಅವರಿಗೆ ತಿಳಿಯುತ್ತದೆ. ನಾವು ನಮ್ಮ ರಹಸ್ಯಗಳನ್ನು ಭಾವನೆಗಳನ್ನ ನಮ್ಮಲ್ಲೇ ಇಟ್ಟುಕೊಂಡಿರುತ್ತೇವೆ. ಅಂದರೆ ಒಂದು ಮುಖವಾಡವನ್ನ ಧರಿಸಿರುತ್ತೇವೆ. ಈ ಭಾಗಕ್ಕೆ ಮುಖವಾಡವೆಂದೇ ಹೆಸರು.

ಇನ್ನು ಮೂರನೆಯ ಭಾಗ ತನ್ನ ಬಗ್ಗೆ ತನಗೇ ಗೊತ್ತಿಲ್ಲದಿರುವುದು, ಆದರೆ ಇತರರಿಗೆ ಗೊತ್ತಿರುವುದು. ಉದಾಹರಣೆಗೆ ನಮ್ಮ ಅಂಗಚೇಷ್ಟೆಗಳು, ಮಾತನಾಡುವ ಶೈಲಿ. ಇದನ್ನ ಅಡಗಿರುವ ಭಾಗ ಎನ್ನಬಹುದು.

ಇನ್ನು ನಾಲ್ಕನೆಯ ಭಾಗ ತನಗೂ ತಿಳಿಯದೆ, ಇತರರಿಗೂ ತಿಳಿಯದೇ ಇರುವುದು. ಇದನ್ನು ಕತ್ತಲ ಕೋಣೆ ಎನ್ನಬಹುದು. ಇದರಲ್ಲಿ ನಮಗೆ ತಿಳಿಯದ ನಮ್ಮ ಎಷ್ಟೋ ಭಾವನೆಗಳು, ಅನುಭವ ಜನ್ಮ ನೋವು, ದುಃಖ ಹುದುಗಿದ್ದು, ಅವು ನಮ್ಮ ವರ್ತನೆಯ ಮೇಲೆ ನಮ್ಮ ಮನಸ್ಸಿನ ಶಂತಿಯ ಮೇಲೆ ಪರಿಣಾಮ ಬೀರುತ್ತಿರುತ್ತದೆ.

ಒಂದು ಆನಂದಕರವಾದ, ಶಂತಿಯುತವಾದ, ಸ್ನೇಹಪೂರ್ಣ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕಾದರೆ ನಮ್ಮ ತೆರೆದ ಭಾಗ ಹೆಚ್ಚು ದೊಡ್ಡದಾಗಿರಬೇಕು. ಆಗ ಇತರರೊಡನೆ ನಮ್ಮ ವ್ಯವಹಾರ, ಸಂಬಂಧ ಸುಗಮವಾಗಿ, ಸಂತೋಷವಾಗುತ್ತದೆ. ಇದು ಕೇವಲ ನಮ್ಮ ಸಂಸಾರದಲ್ಲಷ್ಟೇ ಅಲ್ಲದೆ ಕಾರ್ಯಕ್ಷೇತ್ರದಲ್ಲೂ ಅನ್ವಯಿಸುವ ಮಾತು.


 ತೆರೆದ ಭಾಗವನ್ನ ದೊಡ್ಡದು ಮಾಡಿಕೊಳ್ಳುವ ಉಪಾಯವೆಂದರೆ, ಇತರ ಮೂರು ಭಾಗಗಳನ್ನು ಕಮ್ಮಿ ಮಾಡಿಕೊಳ್ಳುವುದು. ನಮ್ಮ ವಿಷಯವನ್ನು ಹೆಚ್ಚು ಹೆಚ್ಚು ಇತರರೊಡನೆ ಹಂಚಿಕೊಂಡಾಗ, ನಮ್ಮ ಮುಖವಾಡ ಕಳಚಿಕೊಳ್ಳುತ್ತಾ ಹೋಗುತ್ತದೆ. ಹಾಗೇ ಇತರರು ನಮ್ಮ ಬಗ್ಗೆ ಹೇಳುವ ಅಭಿಪ್ರಾಯಗಳನ್ನು ಸ್ವೀಕರಿಸಿದರೆ ನಮ್ಮ ಅಡಗಿರುವ ಭಾಗವನ್ನ ಕಮ್ಮಿ ಮಾಡುತ್ತದೆ. ಇವೆರಡರಿಂದ ನಮ್ಮ ಕತ್ತಲಕೋಣೆ ತನಗೆ ತಾನೇ ಸ್ವಲ್ಪ ಸ್ವಲ್ಪ ತೆರೆದುಕೊಳ್ಳುತ್ತದೆ. “

08 June, 2014

ರೂಮಿ ಹೇಳುತ್ತಾನೆ..

ಜಲ ಹರಿವಲ್ಲಿ

ಚಿಗುರುವುದು ಬದುಕು;


ಕಂಬನಿ ಹರಿವಲ್ಲಿ


ದಿವ್ಯದಯೆ ತೋರಿಸು !


ಭಾವಾನುವಾದ


"Wherever water flows,life flourishes:
wherever tears fall, Divine mercy is shown."
-Rumi

ಅಮ್ಮನ ಮಾತು!

“ಹೆತ್ತವರು ಮಾಡಿದ ಸುಕಾರ್ಯ ಮತ್ತು ಕುಕಾರ್ಯಗಳ ಫಲ ಮಕ್ಕಳು
ಹಾಗೆಯೇ
ಮಕ್ಕಳು ಮಾಡಿದ ಸುಕಾರ್ಯ ಮತ್ತು“ಹೆತ್ತವರು ಮಾಡಿದ ಸುಕಾರ್ಯ ಮತ್ತು ಕುಕಾರ್ಯಗಳ ಫಲ ಮಕ್ಕಳು
ಹಾಗೆಯೇ
ಮಕ್ಕಳು ಮಾಡಿದ ಸುಕಾರ್ಯ ಮತ್ತು ಕುಕಾರ್ಯಗಳ ಫಲ ಹೆತ್ತವರೂ ಅನುಭವಿಸುತ್ತಾರೆ!”

ಅಮ್ಮ ಹೇಳ್ತಾ ಇರ್ತಾರೆ.

ಇದಕ್ಕೂ ನ್ಯೂಟನ್ ಅವರ,
“For every action there is an equal and opposite reaction”  ತತ್ವಕ್ಕೂ ತಾಳೆಯಾಗುತ್ತೋ ಗೊತ್ತಿಲ್ಲ. ಆದರೆ ಅವರು ಹೇಳಿದಾಗೆಲ್ಲ ಪದೇ ಪದೇ ನೆನಪಾಗುತ್ತದೆ! 

ಹರಿನಾಮದರಗಿಣಿ ಹಾರುತಿದೆ...

ಹರಿನಾಮದರಗಿಣಿಯು ಹಾರುತಿದೆ ಜಗದಿ
ಪರಮ ಭಾಗವತರು ಬಲೆಯ ಬೀಸುವರು ||ಪ||

ಕೋಪವೆಂಬ ಮಾರ್ಜಾಲ ಕಂಡರೆ ನುಂಗುವುದು
ತಾಪವೆಂಬುವ ಹುಲಿಯ ಕೊಂಡೊಯ್ವದು
ಕಾಪಾಡಲದನೊಯ್ದು ಹೃದಯದೊಳಗಿಂಬಿಟ್ಟು
ಆಪತ್ತಿಗೊದಗುವುದು ಆ ಮುದ್ದು ಅರಗಿಣಿಯು ||ಪ||

ದಾರಿಯಲಿ ನಡೆವಾಗ ಚೋರರುಪಟಳವಿಲ್ಲ
ಮಾರಿ ಬಂದರೆ ಅದನು ಹೊಡೆದು ನೂಕುವುದು
ಕ್ರೂರ ಯಮಭಟರನು ಮೂಗು ರೆಕ್ಕಿಲಿ ಬಡಿದು
ದಾರಿ ತೋರುವುದು ಮುರಾರಿ ಪಟ್ಟಣಕೆ ||ಪ||

ಎಷ್ಟು ದಣಿಸಲಿ ನಾ ಈ ಮುದ್ದು ಅರಗಿಣಿಯ
ಹೊಟ್ಟೆಯೊಳಗೀರೇಳು ಜಗವನಿಂಬಿಟ್ಟು
ಸೃಷ್ಟೀಶ ಪುರಂದರ ವಿಠಲನ ನೆನೆನೆನೆದು

ಮುಟ್ಟಿ ಭಜಿಸುವುದು ಈ ಮುದ್ದು ಅರಗಿಣಿಯು ||ಪ||

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...