ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

01 February, 2014

ನಲ್ಬೆಳಗು!


ಕೇಜ್ರಿ, ಮೋದಿ, ಆರ್ ಜಿ, ಅ ಜಿ... ಡಬ್ಬಿಂಗ್, ಪ್ರೇಮ್, ಕಂಬಾರ... “
ಅರೇ ನಮ್ಮ ಮಾನ ಹರಾಜಾಗುತಿದೆ ಇಲ್ಲಿ, ಮುಗಿಲಲಿ..
ಜಳಕ ಗಿಳಕ ಮಾಡ್ಕೊಂಡು  ಅಲ್ಲಿ ಪಕ್ಕಿಗಳು ಕಾದಿದ್ರೆ..
ಕಮಲಾಕ್ಷಿಯು ಕಣ್ಮುಚ್ಚಿ ಇವಳನೇ ನೆನೆತಿದ್ರೆ..
ಇವಳು ಹೊರತು ಬೆಳಗು ಕಣ್ತೆರೆಯೊಲ್ಲ ಅಂತ ಕರೆತಿದ್ರೆ..
ಮೇಘನಾವೆಯಲಿ ಹುಟ್ಟುಹಾಕುತಾ ಕೈಲೊಂದು ಮಿಣುಕಾಡುತಿರುವ ಚುಕ್ಕಿಯ ಹಿಡಿದು ನಾನು ಹುಡುಕುತಿದ್ರೆ..
ಮುಗಿಲಸಾಗರದ ದ್ವೀಪದಲಿ ಬಾವಿಯ ಕಟ್ಟೆಯ ಮೇಲೆ ಕೆಂಗಣ್ಣು ಮೇಲೆ ಕೆಳಗೆ ತೇಲಿಸ್ತಾ..
ಎಲೆಯಡಿಕೆ ಮೆಲ್ಲುತ್ತಾ, ಕೆಂಪು ರಸ ಉಗುಳುತ್ತಾ..
ಬಾಯ್ಬಿಟ್ಟು ಇವಳನೇ ನೋಡಿ ಕುಂತ ಚುಕ್ಕಿಗಳ ಮೇಲೆ ಚಿಮ್ಮಿಸ್ತಾ..
ಸೀರೆ ಮೇಲಕ್ಕೆತ್ತಿ ಸೊಂಟಕೆ ಬಿಗಿದು ನುಣುಪಾದ ಕಪ್ಪು ಮೀನಖಂಡಗಳ ಮೇಲೆ ಭಾರ ಹಾಕ್ತಾ..
ನಸುಗುಲಾಲಿ ಕಾಲ್‍ಬೆರಳಿಗೆ ಕಡುಗೆಂಪು ಬಣ್ಣ ಹಾಕಿಕೊಳ್ತಾ..
ಸಮಯದ ಪರಿವಿಯಿಲ್ಲದೆ ನಶೆಯ ಮತ್ತು ಏರಿಸುತಿದ್ರೆ
ಧರ ಧರ ಎಳೆತಂದು ಕೊಡದಿಂದ ಉಗುರುಬೆಚ್ಚ ನೀರು ಸುರಿದ್ರೆ..
ನಮ್ಮ ಅಂಗಣದ ಕಾಲುವೆಯಲಿ ಕಪ್ಪು ಹೊಳೆ
ಜೇನು ಬಣ್ಣದ ಚೆಲುವೆಗೆ ಅಚ್ಚಹಾಲು ಬಣ್ಣದ ಮೈಸೂರು ಸಿಲ್ಕ್ ಸೀರೆ
ನಾಟ್ಯವಾಡುತಿರುವ ನವಿಲ ಹೊದ್ದ ಹೊನ್ನ ನೂಲಿನ ಕಸೂತಿಯ ಸೆರಗು ಬೀಸುತಿರೆ
ಕೆಂಪು ಕೊಕ್ಕು ಹಸುರು ಮೈಯ ಪಕ್ಕಿ ಅಂಚಿನಲಿ ಮಿಂಚಿರೆ
ತೆಳುನಡುವಿಗೆ  ಮುತ್ತಿನ ಝಾಲರಿಯ ವಯ್ಯಾರ
ನೀಳ ತೋಳಿಗೆ ನೀಲಿ ಕಲ್ಲಿನ ಹೊನ್ನ ನಾಗಬಂಧಿ
ಮಲ್ಲಿಗೆ ಮೊಗ್ಗಿನ ಹೊನ್ನ ಹಾರದ ಭಾರಕೆ ನವಿರು ಬಡಿತದೆಗೆ
ಘಳಿಗೆಗೊಮ್ಮೆ ಜೂಲಾಡುವ ಮುತ್ತಿನ ಝುಮುಕಿ ನಾಚಿಕೆಯಿಂದ ನಸುಗೆಂಪಾದ ಕಿವಿಗೆ
ದಾಳಿಂಬೆ ಎಸಳುಗಳ ತೋರಣ ತೋರಿಸಲೊಪ್ಪದೆ ನಸುಬಿರಿದ ಗುಲಾಲಿ ತುಟಿ
ಬಗ್ಗಿದ ಬಿಲ್ಲದಂತಿಹ ಹುಬ್ಬಿನ ಮಧ್ಯ ಬಿದಿಗೆ ಚಂದ್ರಾಕಾರದ  ಕೆಂಪು ಬೊಟ್ಟು
ಭಾರವಾದ ಕಡುಗಪ್ಪು ರೆಪ್ಪೆ ಹೊದಿಸಿದ ಕಾಡಿಗೆ ಬಳಿದ ಮೋಹಕ ಕಣ್ಣು
ಸುಗಂಧರಾಜ ಮಾಲೆಯ ಸುತ್ತಿದ ಬಳುಕುವ ವೇಣಿ
ಗಂಡುಬೀರಿಯಂತೆ ಕೆಂಪುಸರ  ಚಿಮ್ಮಿಸುತ್ತಾ  ಬಾವಿಕಟ್ಟೆಯಲಿ ಕೂತವಳು ಇವಳೇನು..
ರಾಟೆಗೆ ಬಿಗಿದ ಹಗ್ಗದಷ್ಟು ದಪ್ಪದ ಬೆಳ್ಳಿ ಗೆಜ್ಜೆಯ ಪಾದ ಮೆಲ್ಲನೂರುತ್ತ
ಲೋಕದೊಡೆಯನ ರಥವೇರಿದಳು;
ಕಣ್ಣು ಕಣ್ಣುಗಳ ಮಿಲನ..
ಬೆಳ್ಳನೆ ಬೆಳಗಾಯ್ತು..
ಬಿಟ್ಟಕಣ್ಣಿಂದ ನೋಡುತ್ತಿದ್ದ ಚುಕ್ಕಿ ಚಂದ್ರಮರೆಲ್ಲಾ ಮಂಕಾಗಿ ಮುಖಮರೆಸಿಕೊಂಡರು

ನಲ್ಬೆಳಗಿನ ಬೆಳಕಲಿ ಲೋಕವೆಲ್ಲಾ ಮಿಂದು ಪಾವನವಾಯಿತು!

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...