ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

31 December, 2013

ನಂಗೆ ಹೆಚ್ಚು ಗೊತ್ತಿಲ್ಲ.. ಗೊತ್ತಿದ್ದವರ ಬಳಿ ಕೇಳು!



 ನಂಗೆ ಹೆಚ್ಚು ಗೊತ್ತಿಲ್ಲ.. ಗೊತ್ತಿದ್ದವರ ಬಳಿ ಕೇಳು!
-----------------------------------------

ಅಕ್ಕ,  ಮೌನವನ್ನು ಡಿಫೈನ್ ಮಾಡ್ತಿರಾ?”

ಇತ್ತೀಚೆಗೆ ಮಿತ್ರರ ಪಟ್ಟಿಯಲ್ಲಿ ಸೇರಿದ ಈ ಹುಡುಗಿಯ ಪ್ರಶ್ನೆ ನನ್ನ ಇನ್‍ಬಾಕ್ಸ್ ಗೆ ಬಂದಾಗ ಎಲ್ಲಿಲ್ಲದ ಅಚ್ಚರಿ!

“ಅರೇ ಹುಡುಗಿ, ಬಹುಶಃ ನೀನು ಮತ್ಯಾರಿಗೋ ಕಳುಹಿಸಬೇಕಾದ ಮೆಸೇಜು ತಪ್ಪಿ ನಂಗೆ ಕಳಿಸಿದಿ ಅಂತ ತೋರುತ್ತೆ!”

“ಇಲ್ಲ ಅಕ್ಕ, ನಿಮ್ಮ ಬ್ಲಾಗ್ ನಲ್ಲಿ ನೀವು ಬರೆದದನ್ನು ಓದಿಯೇ ನಿಮ್ಮ ಹತ್ತಿರ ಕೇಳ್ಬೇಕೆನಿಸಿತು!”

ನಗು ಬಂತು! ಎಲ್ಲೋ ಹುಡುಗಿ ಇನ್ನೂ ಎಳಸು! ಅದಕ್ಕೆ ನನಗೆ ಮೆಸೇಜು...

“ಮೊದ್ಲು ನಂಗೆ ಒಂಟಿತನ ಮತ್ತು ಏಕಾಂಗಿತನದ ವ್ಯತ್ಯಾಸ ಹೇಳು!”

ಸ್ವಲ್ಪ ಹೊತ್ತು ಬಿಟ್ಟು ಮೆಸೇಜು ಬಂತು,

“ಯಾರೂ ಜತೆ ಕೊಡದೇ ಹೋದರೆ ಒಂಟಿ; ಜತೆಯಿದ್ದೂ ನಾವೇ ದೂರ ಸರಿದು ನಿಂತರೆ ಏಕಾಂಗಿತನ!”

ಓಹೋ, ನಾನು ಎಣಿಸಿದಷ್ಟು ಎಳಸಲ್ಲ!

“ಮೌನವೂ ಒಂದು ರೀತಿ ಹಾಗೇ ಹುಡುಗಿ! ನಮಗೆ ಬೇಡವೆನಿಸದವರ ಹತ್ತಿರ ನಾವು ಮಾತು ಬಿಟ್ಟು.. ಉಳಿದ ಲೋಕದ ಹತ್ತಿರ ನಿತ್ಯದಂತೆ ಮಾತಾಡುತ್ತಿದ್ದರೆ ಅದು ತಿರಸ್ಕಾರ! ಮೌನ ಬೇಕೆನಿಸಿದವರು ಎಲ್ಲರೊಂದಿಗೂ ಮೌನಿಯಾಗಿದ್ದರೆ ಅವರು ಏಕಾಂತವನ್ನು ಬಯಸುತ್ತಿದ್ದಾರೆ.. ಒಂದಷ್ಟು ಕಾಲ ಅವರನ್ನು ಅವರ ಕೋಶದಲ್ಲಿ ಸುಪ್ತಸ್ಥಿತಿಯಲ್ಲಿರಲು ಬಿಡಬೇಕು.. ಅದರ ಬಗ್ಗೆಯೂ ಒಂದು ಬ್ಲಾಗ್ ಬರಹ ಹಾಕಿದ್ದೆ! ಅದನ್ನೂ ಓದು!”

ಹುಡುಗಿಯ ಮಾತಿಲ್ಲ.. ಕಂಡುಕೊಂಡಳು ತನ್ನ ಜತೆಗೆ ಮೌನವಾಗಿದ್ದವರ ಬಗ್ಗೆ!

“ಲೇ ಹುಡುಗಿ, ನನ್ನ ಮಾತೇ ಸರಿ ಅಂದ್ಕೊಳ್ಬೇಡ.. ತಿಳಿದವರ ಜತೆಗೂ ಕೇಳು! ನನಗೆ ಹೆಚ್ಚು ಗೊತ್ತಿಲ್ಲ!”




“ನೀನು, ನಿನ್ನ ಬರಹ, ಚಿತ್ರ, ಛಾಯಾಚಿತ್ರಗಳೆಲ್ಲ ಪೊಟ್ಟು ಬ್ಲಾಗ್ ಲೋಕ ಮತ್ತು ಫೇಸ್ ಬುಕ್ಕಿಗೇ ಸರಿ!”

“ನೀನು, ನಿನ್ನ ಬರಹ, ಚಿತ್ರ, ಛಾಯಾಚಿತ್ರಗಳೆಲ್ಲ ಪೊಟ್ಟು ಬ್ಲಾಗ್ ಲೋಕ ಮತ್ತು ಫೇಸ್ ಬುಕ್ಕಿಗೇ ಸರಿ!”

----------------------------------------------------------------------------


“ಓಯ್ ಏನೇ, ಹೇಗಿದ್ದಿ?”

ಬಹಳ ದಿನದ ನಂತರ ಇವಳಿಗೆ ನನ್ನ ನೆನಪು.. ಏನೋ ಖುಷಿಯ ವಿಷಯ ಇರಬೇಕು!

“ನಂಗೇನೇ ಚೆನ್ನಾಗೇ ಇದ್ದೇನೆ. ಇತ್ತೀಚಿಗಂತೂ ಒಂದು ಮೂರು ಕಿಲೋ ಆದ್ರೂ ಹೆಚ್ಚಿದ್ದೇನೆ! ಮತ್ತೆ ಏನು ವಿಶೇಷ ಸಮಾಚಾರ?”

“ನನ್ನ ಲೇಖನ. ಕತೆ ಪೇಪರ್ ವಾರ ಪತ್ರಿಕೆಗಳಲ್ಲಿ ಪ್ರಕಟವಾಗ್ತಿವೆ! ನಿಂದು ಏನಾದ್ರೂ?”

ನಗು ಬಂತು! ಅಲ್ಲ, ಪತ್ರಕರ್ತರು, ಸಂಪಾದಕರ ಜತೆ ಚೆನ್ನಾಗಿ ವ್ಯವಹರಿಸುವವಳ ಮಾತು ಕೇಳದೇ ಹೋದ್ರೆ ಆಗುತ್ತಾ!!!

“ಇಲ್ವೆ! ನಂದು ಪತ್ರಿಕೆಗಳಲ್ಲಿ ಬರುವಷ್ಟು ಮಟ್ಟದ ಬರಹಗಳು ಅಲ್ಲ ಅಂತ ಅನಿಸುತ್ತೆ. ಹಾಗಾಗಿ ನಾನೇ ಕಳಿಸಿಲ್ಲ!”

“ಅದು ಹೌದನ್ನು, ಅದೇ ಹಳಸಲು ಒಲವು, ಪ್ರೇಮ, ಪ್ರೀತಿ ಬಿಟ್ಟು ನಿಂಗೆ ಪ್ರಚಲಿತ ವಿದ್ಯಮಾನಗಳ ಬಗ್ಗೆ ಬರೀಲಿಕ್ಕೆ ಗೊತ್ತಾಗೊಲ್ಲ.. ನೀನೊಂದು ಇಮೋಷನಲ್ ಫೂಲ್!  ಹಸಿವು, ಜಾತಿ, ಬುದ್ಧ.. ರಾಜಕೀಯ ಮೋದಿ ರಾಹುಲ್.. ಎಷ್ಟೆಲ್ಲಾ ವಿಸ್ತಾರದ ವಿಷಯಗಳನ್ನು ಆರಿಸಿಕೊಳ್ಳೆ ಅಂದ್ರೆ ನಂಗೆ ಗೊತ್ತಾಗೊಲ್ಲ ಅಂತಿಯಾ.. ನೀನು ಈ ಪೊಟ್ಟು ಬ್ಲಾಗ್ ಲೋಕ, ಫೇಸ್ ಬುಕ್ಕಿಗೆ ಸರಿ!”

’ಅದು ಹೌದು.. ಸಾಹಿತಿ ಅಂದ್ರೆ ಯಾವ ವಿಷಯ ಕೊಟ್ರೂ ಕೂಡಲೇ ಆ ಭಾವಕ್ಕೆ ಪರಕಾಯ ಮಾಡಿ ಓದುಗನನ್ನು ಸೆಳೆವಂತೆ ಬರೆಯುವ ಸೃಜನಶೀಲತೆ ನನ್ನಲ್ಲಿ ಇಲ್ಲ! ಅಲ್ಲ, ನಾ ಯಾವಾಗ ನನ್ನನ್ನು ಸಾಹಿತಿ ಅಂತ ಹೇಳ್ಕೊಂಡಿದ್ದೇನೆ!

"ನಿಮ್ಮ ಬರಹಗಳನ್ನು ಈ ವಿಳಾಸಕ್ಕೆ ಕಳುಹಿಸಿ" ಅಂತ ಬಂದ ಮೂರು ನಾಲ್ಕು ಆಮಂತ್ರಣಕ್ಕೂ ನಾನು ವಿನಯಪೂರ್ವಕವಾಗಿ ನಿರಾಕರಣೆಯ ಉತ್ತರ ಕೊಟ್ಟಿದ್ದೇನೆ! ಇದೆಲ್ಲಾ ಇವಳಿಗೆ ಹೇಳಿ ಪ್ರಯೋಜನವಿಲ್ಲ! ನಾ ಕೇಳದೇ, ಹೇಳದೇ ಎರಡು ಬಾರಿ ವಿಜಯ ಕರ್ನಾಟಕದಲ್ಲಿ ನನ್ನ ಬ್ಲಾಗ್ ಬರಹ ಬಂದಿದೆ. ಡೆಕ್ಕನ್ ಹೆರಾಲ್ಡ್ ನನ್ನ ಕಲೆಯ ಬಗ್ಗೆ ಅರ್ಧ ಪುಟ ನನ್ನ ಬಗ್ಗೆ ಪುಟ್ಟ ಲೇಖನ ಪ್ರಕಟಿಸಿದೆ. ನಾ ಹಾಕುವ ಛಾಯಚಿತ್ರಗಳನ್ನು, ಬರಹಗಳನ್ನು ಮೆಚ್ಚಿ ಬೆನ್ನು ತಟ್ಟಿ ಪ್ರೋತ್ಸಾಹಿಸುವ ಅಣ್ಣಂದಿರು, ತಮ್ಮ ತಂಗಿಯಂದಿರು, ಮಿತ್ರರು, ಮುಂಜಾವಿಗರು.. ಇದ್ದಾರೆ! ಇದಕ್ಕಿಂತ ದೊಡ್ಡ ಓದುಗರ ಗಣ ಬೇಕೆ.. ನನ್ನ ಬರಹದ ಮೌಲ್ಯ ಮಾಪನೆ ನಾನೇ ಮಾಡುತ್ತೇನಲ್ಲ.. ಅವುಗಳ ಬೆಲೆ ನನಗೆ, ನನ್ನವರಿಗೆ ಗೊತ್ತು, ಅವು ಒರಿಜಿನಲ್.. ಯಾರ್ಯಾರ ಭಾವ, ಮಾತು ಹೆಕ್ಕಿ ಬರೆದದಲ್ಲ! ಅಷ್ಟು ಸಾಕು ನನಗೆ!’


ಕಾಕತಾಳೀಯವಾಗಿ ಇವತ್ತು ವಿಜಯ ಕರ್ನಾಟಕದ ಬ್ಲಾಗಿಲುನಲ್ಲಿ ಕೆಲವೇ ತಿಂಗಳುಗಳ ಅಂತರದಲ್ಲಿ ಎರಡನೆಯ ಬಾರಿ ನನ್ನ ಬ್ಲಾಗ್ ಬರಹ ಪ್ರಕಟವಾದದ್ದು ಮಿತ್ರರಿಂದ ತಿಳಿದು ಬಂತು!

29 December, 2013

ತಾಳುವಿಕೆಗಿಂತನ್ಯ ತಪವು ಇಲ್ಲಾ..


ಅಮ್ಮ ಸುಶ್ರಾವ್ಯವಾಗಿ ತಾಳ ಹಾಕುತ್ತಾ ಭಜನೆ ಹಾಡುತ್ತಿದ್ದರು..


ತಾಳುವಿಕೆಗಿಂತನ್ಯ ತಪವು ಇಲ್ಲ |
ಕೇಳಬಲ್ಲವರಿಗೆ ಪೇಳುವೆನು ಸೊಲ್ಲ ||ಅನು||
ದುಷ್ಟ ಮನುಜರು ನುಡಿವ ನಿಷ್ಟುರದ ನುಡಿ ತಾಳು|
ಕಟ್ಟುಬುತ್ತಿಯ ಮುಂದೆ ಉಣಲುಂಟು ತಾಳು ||೧||

ಹಳಿದು ಹಂಗಿಸುವಂಥ ಹಗೆಯ ಮಾತನು ತಾಳು |
ಸುಳಿ ನುಡಿ ಕುಹಕತನ ಮಂತ್ರವನು ತಾಳು|
ಅಳುಕದಲೆ ಬಿಂಕದ ಬಿರುಸು ಮಾತನು ತಾಳು|
ಹಲಧರಾನುಜನನ್ನು ಹೃದಯದೊಳು ತಾಳು ||೨||

ನಕ್ಕು ನುಡಿವರ ಮುಂದೆ ಮುಕ್ಕರಿಸದೆ ತಾಳು|
ಅಕ್ಕಸವ ಮಾಡುವವರ ಅಕ್ಕರದಿ ತಾಳು|
ಉಕ್ಕು ಹಾಲಿಗೆ ನೀರ ಇಕ್ಕುವಂದದಿ ತಾಳು|

ಲಕ್ಷ್ಮೀಶನ ವದನ ಶರಣೆಂದು ಬಾಳು ||೩||

ಗೊಂಬೆಯಾಟವಯ್ಯಾ..

ಗೊಂಬೆಯಾಟವಯ್ಯಾ |
ಬ್ರಹ್ಮಾಂಡವೇ|
ಆ ದೇವನಾಡುವ ಬೊಂಬೆಯಾಟವಯ್ಯಾ ||ಪಲ್ಲ||
ಅಂಬುಜನಾಭನ ಅಂತ್ಯವಿಲ್ಲಧಾತನ |
ತುಂಬು ಮಾಯವಯ್ಯಾ ಈ ಲೀಲೆಯು ||ಅನುಪಲ್ಲ||


ಜಗವ ಸೃಜಿಸಿ ಗತಿ ಸೂತ್ರವನಾಡಿಸಿ
ನಗುನಗುತಾ ಕುಣಿಸಿ ಮಾಯೆ ಬೀಸಿ |
ರಾಗದ ಭೋಗದ ಉರಿಯೊಳು ನಿಲ್ಲಿಸಿ
ಆಗೊಮ್ಮೆ ಈಗೊಮ್ಮೆ ತಾನಾಡಿ ತಾನಲಿವ ||೧||

ನೀ ಕಾಡಿಸಲಗೆ ಸ್ವಾರ್ಥವೇನು
ನೀ ಕಾಣಿಸನಗೆ ಆಂತರ್ಯವೇನು|
ತಿಳಿ ಹೇಳಯ್ಯಾ ಒಳಮರ್ಮ ತೋರಯ್ಯಾ
ನಳಿನಾಕ್ಷ ನಿನ್ನಯ ಸಂಕಲ್ಪವೇನಯ್ಯ ||೨||

ಚಿತ್ರ- ಶ್ರೀಕೃಷ್ಣ ಗಾರುಡಿ
ಗಾಯಕ- ಪಿ ಬಿ ಶ್ರೀನಿವಾಸ್



27 December, 2013

ನಾಗ..

ಅಂದು ಮಿಡಿಯಾಗಿದ್ದಾಗಲೇ ನಿನ್ನ ಹೆಡೆಮುಡಿ ಕಟ್ಟಿ

ಮೂಲೆಗೆ ನೂಕಿ ಮರೆತ್ತಿದ್ದೆ ನಿನ್ನುರುವಿಕೆಯನು ನನ್ನಲಲ್ಲ

ಇಂದು  ಹೀಗೆ ಹೆಡೆಬಿಚ್ಚಿ ಬುಸುಗುಟ್ಟಿ ಫೂಂಕರಿಸಿ

ನಿನ್ನ ಇರುವಿಕೆಯನ್ನು ತೋರಿ, ಕೆಣಕಿ ಸವಾಲು ಹಾಕುವಿಯಲ್ಲ

ಕಷ್ಟವಾದೀತು, ಅಸಾಧ್ಯವೇನಲ್ಲ ಒಡೆಯನ ಶ್ರೀರಕ್ಷೆ ಜತೆಯಿದೆ


ಅಂತಸ್ಥೈರ್ಯದ  ಶಕ್ತಿಯೆದುರು ನಿಂತು ಗೆದ್ದವರಿದ್ದಾರೆಯೇ!

ಕಲಿಸು ಒಲವೇ.. ಮೌನವಾಗಿರಲು!

ಒಲವೇ,
ತೊಡಿಸಿರುವೆ ನೀ
ನಿನ್ನೊಲುಮೆಯ ಕವಚ
ಬಿಟ್ಟ ಬಾಣಗಳು
ಮೊನೆ ಮುರಿದು
ಬಿದ್ದಿವೆ ಸುತ್ತಲೂ
ಭಕ್ತಿಯೋ ವೈರಾಗ್ಯವೋ
ನೀನಾಡಿಸಿದಂತೆ
ಆಡುವ ಮಾತುಗಳಿಗೂ
ಹಚ್ಚುವರು ಬಣ್ಣ..
ಅದ್ಯಾವಾಗ ಕಲಿಸುವಿ

ಮೌನವಾಗಿರಲು ನನ್ನ!

26 December, 2013

ಗುರುದೇವ ಶ್ರೀರಾಮಕೃಷ್ಣ ಪರಮಹಂಸರ ವಾಣಿ..

ವಿದ್ಯಾಸಾಗರ- “ಏಕೆ ಭಗವಂತನನ್ನು ಕರೆಯಬೇಕು? ಚಂಗೆಸ್ ಖಾನ್ ಲೂಟಿ ಮಾಡಿ ಲಕ್ಷದಷ್ಟು ಸೈನಿಕರನ್ನು ಸೆರೆಹಿಡಿದ.. ’ಇವರಿಗೆಲ್ಲ ಅನ್ನ ಹಾಕುವುದು ಹೇಗೆ.. ಸ್ವತಂತ್ರವಾಗಿಯೂ ಬಿಡುವ ಹಾಗಿಲ್ಲ. ಏನು ಮಾಡೋಣ ?’ ಎಂದು ಸೇನಾಪತಿ ಕೇಳಿದಾಗ, “ಎಲ್ಲರನ್ನೂ ಕೊಂದುಹಾಕು!” ಹುಕುಂ ಮಾಡಿಬಿಟ್ಟ. “ಕಚ್ ಕಚ್” ಅಂತ ಎಲ್ಲರ ಹತ್ಯೆ ಆಯಿತು.

 ಭಗವಂತ ಈ ಹತ್ಯೆಯನ್ನು ನೋಡಿದ ತಾನೆ! ಅದನ್ನು ತಡೆಯುವ ಯಾವ ಪ್ರಯತ್ನವನ್ನೂ ಆತ ಮಾಡಲಿಲ್ಲ.. ಆತ ಇದ್ದರೂ ಒಂದೇ, ಸತ್ತರೂ ಒಂದೇ. ನನಗೆ ಅಂತವನ ಅವಶ್ಯಕತೆ ಇಲ್ಲ. ಅಂತವನಿಂದ ನನಗೆ ಯಾವ ಉಪಕಾರವೂ ಆಗುವ ಹಾಗಿಲ್ಲ!”

ಶ್ರೀರಾಮಕೃಷ್ಣರು- “ಭಗವಂತನ ಕಾರ್ಯವನ್ನು, ಅಂದರೆ ಆತ ಯಾವ ಉದ್ದೇಶದಿಂದ ಏನು ಏನು ಮಾಡುತ್ತಾನೆ ಎಂಬುದನ್ನು ತಿಳಿಯಲು ಸಾಧ್ಯವೇ? ಆತ ಸೃಷ್ಟಿಯ ಪಾಲನೆ ಸಂಹಾರ ಎಲ್ಲವನ್ನೂ ಮಾಡುತ್ತ ಇದ್ದಾನೆ. ಆತ ಏತಕ್ಕೆ ಸಂಹಾರ ಮಾಡುತ್ತಾನೆ ಎಂಬುದನ್ನು ನಮಗೆ ಅರಿತುಕೊಳ್ಳಲು ಸಾಧ್ಯವೆ?

 ನಾನು ಭಗವತಿಗೆ ಹೇಳುತ್ತೇನೆ, ’ ಹೇ ತಾಯೇ, ನನಗೆ ಅದನ್ನು ಅರಿತುಕೊಳ್ಳುವ ಅವಶ್ಯಕತೆಯೇನೂ ಇಲ್ಲ. ದಯವಿಟ್ಟು ನಿನ್ನ ಪಾದಪದ್ಮಗಳಲ್ಲಿ ನನಗೆ ಭಕ್ತಿ ನೀಡು.’  ಮಾನವ ಜನ್ಮದ ಉದ್ದೇಶ ಭಕ್ತಿಯನ್ನು ದೊರಕಿಸಿಕೊಳ್ಳುವುದೇ.  ಉಳಿದವುಗಳ ಸಂಬಂಧವಾಗಿ ನಮಗೆ ಯಾವುದು ಶ್ರೇಯಸ್ಕರವಾದದ್ದು ಎಂಬುದು ತಾಯಿಗೆ ಗೊತ್ತು.

 ನಾನು ತೋಟಕ್ಕೆ ಬಂದಿರುವುದು ಮಾವಿನಹಣ್ಣು ತಿನ್ನುವುದಕ್ಕೆ. ಮರಗಳೆಷ್ಟಿವೆ, ಕೊಂಬೆಗಳೆಷ್ಟಿವೆ, ಎಷ್ಟೊಂದು ಕೋಟಿ ಎಲೆಗಳಿವೆ, ಇವುಗಳ ಲೆಕ್ಕಾಚಾರ ನನಗೇಕೆ? ನಾನು ಕೇವಲ ಮಾವಿನಹಣ್ಣು ಮಾತ್ರ ತಿನ್ನುತ್ತೇನೆ: ಮರ, ಕೊಂಬೆ, ಎಲೆಗಳ ಲೆಕ್ಕಾಚಾರ ನನಗೆ ಬೇಕಾಗಿಲ್ಲ.”


-      ಶ್ರೀರಾಮಕೃಷ್ಣ ವಚನವೇದ

25 December, 2013

ಮಿತ್ರರಿಬ್ಬರ ಆಲೋಚನಾ ದಾಟಿ..

ಮಿತ್ರರಿಬ್ಬರ ಆಲೋಚನಾ ದಾಟಿ..
-------------------------

“ತುಂಬಾ ನೋವಾಗ್ತಿದೆಯಲ್ವಾ!”
“ನೋವೇನೋ ಹೌದು, ಜತೆ ನಿತ್ಯವೂ ಸಂವಹನ ನಡೆಯುತ್ತಿದ್ದದ್ದೂ ನಿಂತಿದೆಯಲ್ವಾ! ಬಹುಶಃ ಅದನ್ನು ಒಪ್ಪಿಕೊಳ್ಳಲು ಮನಸ್ಸಿನ್ನೂ ತಯಾರಿಲ್ಲ. ಜತೆಗೆ ಅಹಮಿಕೆಗೆ ಪೆಟ್ಟು ಬಿದ್ದಿದೆ ಎಂದು ಕಾಣುತ್ತದೆ!”
ನಸುನಕ್ಕೆ..
“ಅಹಮಿಕೆಗೆ ಪೆಟ್ಟು ಬೀಳುವ ಮಾತೇ ಇಲ್ಲವಲ್ಲ ಇಲ್ಲಿ. ಅಹಮಿಕೆಯೇ ಇಲ್ಲ ನಿಮಗೆ!
ಅಹಮಿಕೆಗೆ ಪೆಟ್ಟುಬಿದ್ದ ಕ್ಷಣದಲ್ಲೇ ಕೋಪ, ಮೋಹ ಭಾವ ಜಾಗ್ರತವಾಗುತ್ತದೆ.. ನಮ್ಮೆಲ್ಲಾ ಏಕಾಗ್ರತೆಯೂ ನಮ್ಮ ಅಹಮಿಕೆಯನ್ನು ಕೆಣಕಿದವರ ಮೇಲೇ ಕೇಂದ್ರೀಕೃತವಾಗುತ್ತದೆ.  ಬಾಣಗಳು ಬತ್ತಳಿಕೆಯಿಂದ ಹೊರಟು ಆ ವ್ಯಕ್ತಿಯನ್ನು ಎಷ್ಟು ಗಾಯಗೊಳಿಸಲು ಸಾಧ್ಯವೋ ಅಷ್ಟು ಪ್ರಯತ್ನವಾಗುತ್ತದೆ. ಮನಗೊಂದಲದ ಗೂಡು.. ಮಾತು ಚೂರಿ!
ನೀವು ಹಾಗೆ ಮಾಡಿಲ್ಲವಲ್ಲ!
ಅನೇಕ ವರ್ಷದ ಸಂಗ.. ಕಳಚಿ ದೂರ ನಡೆದಾಗ ನೋವು ಆಗುವುದು ಸಹಜ.. ಮೌನದ ತೆರೆಗಳು ಮತ್ತೆ ಮತ್ತೆ ಬಂದು ಮನದ ಅಂಗಣವನ್ನು ಬಡಿದಾಗ ಆ ನೋವು ಅಕ್ಷರಗಳ ಮಾಲೆಯಾಗಿ ಹೊರಬರುತ್ತವೆ. ಅದನ್ನು ಅಹಮಿಕೆಯನ್ನೊಲ್ಲ.. ಅದು ಸ್ವಕೇಂದ್ರೀಕೃತವಾಗಿರುತ್ತವೆ. ಅಲ್ಲಿ ಕಾಲನ ಆಟಕ್ಕೆ ಮಣಿಯುವ ಮಾತು.. ಅಥವಾ ಮನದ ಖಾಲಿತನವನು ವ್ಯಕ್ತಪಡಿಸುವಿಕೆ.. ಹೀಗೆ ಈ ಭಾವವನು ಎತ್ತಿತೋರುತದೆ ಹೊರತು ನೋವಿತ್ತವರಿಗೆ ಕೆಡುಕನು ಬಯಸುವುದಿಲ್ಲ.. ಅವರ ಬಗ್ಗೆ ಚೂಚಾ ಅನ್ನೊಲ್ಲ!”
ಮನದಲ್ಲಿ ಮತ್ತಿಷ್ಟು ಮಾತುಗಳ ಮಂಥನ-

’ಕೆಲಕಾಲದ ಹಿಂದೆ ಇದೇ ಭಾವ ಸಾಗರದಲ್ಲಿ ಬಿರುಗಾಳಿಯೆದ್ದು  ನನ್ನ ನಾವೆ ಅಲೆಗಳ ಮಧ್ಯೆ ಹೋರಾಡುತಿತ್ತು.. ಹುಟ್ಟು ಕೈಯಿಂದ ಜಾರಿತ್ತು.. ದಿಕ್ಕುತೋಚದೆ ಕಂಗೆಟ್ಟಿದ್ದೆ! ನನ್ನ ಭರವಸೆಯನ್ನು ಹುಸಿಗೊಳಿಸಲಿಲ್ಲ ಅವನು.. ಎಲ್ಲಿಂದಲೋ ಅದ್ಯಾವುದೋ ರೂಪದಲಿ ಬಂದು ಸ್ವತಃ ಹುಟ್ಟುಹಾಕಿ ಮತ್ತೆ ನಾವೆಯನ್ನು ಹಿಡಿತಕ್ಕೆ ತಂದ.. ಈಗಿನ್ನು ಯಾವುದೇ ಬಿರುಗಾಳಿಗೆ ಹೆದರಬೇಕಾಗಿಲ್ಲ.  ಅವನೆಲ್ಲಿದ್ದರೂ ಓಗೊಟ್ಟು ಬಂದೇ ಬರುತ್ತಾನೆ.. ಅವನೊಬ್ಬನೇ ರೂಪ ಮಾತ್ರ ಬೇರೆ ಬೇರೆ!’

24 December, 2013

ರಾಧೆ... ಮತ್ತವಳ ಮಾಧವ!



“ರಾಧೆ!”
ಮನೆಯ ತುಂಬಾ ದೀಪಗಳು ಪ್ರಜ್ವಲಿಸುತ್ತಿದ್ದವು! ಮಾವಿನ ತೋರಣ, ಹೂವಿನ ಅಲಂಕಾರ.. ವರುಷಗಳಿಂದ ಧೂಳು, ಬಲೆಯಲ್ಲಿ ಮುಳುಗಿ ಹೋದ ಮನೆಯೇ ಇದು!!! ಗೋಪಿಗೆ ಅಚ್ಚರಿ.
“ರಾಧೆ.. “
ಕೋಣೆಯಿಂದ ದನಿ ಕೇಳಿಸಿತು..
“ಈ ಕುಬ್ಬಸದ ದಾರವನ್ನು ಕಟ್ಟಿಬಿಡೆ.. ಹೊತ್ತಾಗುತ್ತದೆ!”
ಒಳಹೋದ ಗೋಪಿಯ ಬಾಯಿ ಇಷ್ಟಗಲ ತೆರೆಯಿತು..
’ಅರೇ, ಅದೆಷ್ಟು ಕಾಲವಾಗಿತ್ತು ಇವಳು ತುರುಬನ್ನು ಕಟ್ಟಿ! ಮುಖ ನೋಡು ಹೇಗೆ ನಳನಳಿಸುತ್ತಿದೆ, ನೆತ್ತಿಯ ಮೇಲೆ ಕೆಂಪು ಕಲ್ಲಿನ ಜಾಲರಿ ನೇತಾಡುತ್ತಿದೆ, ಕಿವಿಯ ಝಮುಕಿ ಗಲ್ಲಕೆ ಬಡಿಯುತ್ತ ಜೂಲಾಡುತ್ತಿದೆ.. ನಾಸಿಕದ ಬೊಟ್ಟಿನ ಬೆಳಕು ಕಣ್ಣಲ್ಲಿ ಪ್ರತಿಫಲಿಸುತಿದೆ, ಮುತ್ತಿನ ಸರ ಕುತ್ತಿಗೆಯನಪ್ಪಿ ಕುಳಿತಿದೆ, ಹೊನ್ನ ಬಣ್ಣದ ಸೆರಗು ಲಾವಣ್ಯವನು ಮರೆಮಾರಚಲು ಯತ್ನಿಸಿ ಸೋತಿದೆ.
ಗಾಜಿನ ಬಳೆಯ ಗಲ್ ಗಲ್ ನಾದ ಕೋಣೆಯಲಿ ಹರಡಿದೆ. ಭಾರದ ಬೆಳ್ಳಿ ಗೆಜ್ಜೆ ಅಲಂಕರಿಸಿದ ಪಾದಕೆ ಹಚ್ಚಿದ ಕೆಂಪು ಮದರಂಗಿ ಏನೋ ಗುಟ್ಟನು ಹೇಳುವಂತಿದೆ..
“ರಾಧೆ, ಏನಿದು? ಬೆಳಗಿನ ನಿನ್ನ ಗೋಳು ಕೇಳಿ ಅತ್ತೆ ನಿನ್ನನ್ನು ಸಮಾಧಾನ ಪಡಿಸೆಂದು ಕಳುಹಿಸಿದರೆ, ಇಲ್ಲಿ ನೀನು.. “
ರಾಧೆಯ ರಂಗು ಹಚ್ಚಿದ ತುಟಿ ಲಜ್ಜೆ ತುಂಬಿದ ನಸುನಗೆ ಚೆಲ್ಲಿತು..
“ಮಾಧವನು ಬರುವನಂತೆ, ಕರೆ ಕಳುಹಿಸಿದವನು.. ನೋಡು ಆ ಹಂಸ ತಂದಿತು ಸಂದೇಶ!
ಯಮುನಾ ನದಿ ತೀರದಲಿ ಕಾದಿರುವನಂತೆ, ನನಗಾಗಿ, ಕೇವಲ ನನಗಾಗಿ! “
’ಹುಚ್ಚಿಯಾಗಿಹಳು ಇವಳು, ಕೃಷ್ಣನೀಗಾಗಲೇ ನಮ್ಮನ್ನೆಲ್ಲ ಮರೆತಿರುವನು, ದೇವಲೋಕದ ಸುಂದರಿಯರನ್ನು ಮೀರಿದ ಅಷ್ಟ ಮಹಿಷಿಯರ ಮೋಹಕ ಪತಿಯವನು!’
ಅವಳತ್ತ ನೋಡದೇ ರಾಧೆ ಸೆರಗು ಬೀಸಿಕೊಂಡು ಹೊರಧಾವಿಸಿದಳು!
ಚಿಂತಾಕ್ರಾಂತಳಾದ ಗೋಪಿ ಮತ್ತಿಷ್ಟು ಗೋಪಿಯರ ಜತೆ ಯಮುನಾ ನದಿಯತ್ತ ನಡೆದಳು..
ಹುಣ್ಣಿಮೆ ಚಂದಿರ ಬೆಳಗಿನಲ್ಲಿ ಯಮುನೆ ಝಳ ಝಳ ನಿನಾದ..
ರಾಧೆ ಕೋಲಾಟದ ಅಭಿನಯ ಮಾಡುತ್ತಿದಾಳೆ.. ಒಂದೇ ಕೋಲನು  ಗಾಳಿಯಲ್ಲಿ ಬೀಸುತ್ತಿದ್ದರೂ ರಾತ್ರಿಯ ನೀರವತೆಯಲ್ಲಿ ಎರಡು ಕೋಲುಗಳ ಬಡಿತದ ನಾದ ರಾಧೆಯ ಗೆಜ್ಜೆಯ ಶಬ್ದದೊಂದಿಗೆ ಮಿಳಿತವಾಗಿ ಕಿವಿಗಳಿಗೆ ಹಿತಾನುಭವ ಕೊಡುತಿದ್ದವು.
ಗೋಪಿಯರೆಲ್ಲರೂ ಗರಬಡಿದವರಂತೆ ರಾಧೆಯ ಹುಚ್ಚು ಉನ್ಮಾದದ ನೃತ್ಯವನ್ನು ನೋಡುತ್ತಲೇ ಇದ್ದರು..
ಚಂದ್ರನ ಬಿಂಬ ಮಸುಕಾಗುವಂತೆ ಬಾನಿನಲ್ಲಿ ಬಣ್ಣಗಳ ಮೇಳದ ಸಂತೆ.. ಕೆಂಪು ಗೋಳವನು ಮೂಡಣ ದಿಕ್ಕಿನಲಿ ಕಂಡ ರಾಧೆ ನೃತ್ಯವನು ನಿಲ್ಲಿಸಿ ಕೋಲನ್ನು ತನ್ನ ಉಡಿಗೆ ಸಿಲುಕಿಸಿ ಇತ್ತ ತಿರುಗಿದಳು.
ಹತ್ತಿರ ಬಂದಾಗ ಅವಳ ಸೆರಗಿಗೆ ನವಿಲಿನ ಪುಕ್ಕಗಳು ಅಂಟಿಕೊಂಡಿದ್ದವು. ಉಡಿಗೆ ಕೋಲಿನ ಜತೆ ಕೊಳಲೂ ಸಿಲುಕಿಸಿತ್ತು!
ಗೋಪಿಯರು ಸ್ತಬ್ಧರಾದರು. ರಾಧೆಯ ಒಲವಿನ ಪರಿಯ ಕಂಡು ದಿಗ್ಮೂಢರಾದರು!


23 December, 2013

ಜಿ. ಎಸ್. ಶಿವರುದ್ರಪ್ಪ..

ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಸ್ನೇಹಗಳ
ಗುರುತಿಸದಾದೆನು ನಿಮ್ಮೊಳಗೆ||

ಎಲ್ಲಿದೆ ನಂದನ, ಎಲ್ಲಿದೆ ಬಂಧನ
ಎಲ್ಲಾ ಇದೆ ಈ ನಮ್ಮೊಳಗೆ
ಒಳಗಿನ ತಿಳಿಯನು ಕಲಕದೆ ಇದ್ದರೆ
ಅಮೃತ ಸವಿಯಿದೆ ನಾಲಿಗೆಗೆ||

ಹತ್ತಿರವಿದ್ದೂ ದೂರ ನಿಲ್ಲುವೆವು
ನಮ್ಮ ಅಹಮ್ಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆಯೆಂಬುದು
ನಾಲ್ಕು ದಿನದ ಈ ಬದುಕಿನಲಿ||

-      ಡಾ|| ಜಿ. ಎಸ್. ಶಿವರುದ್ರಪ್ಪ

ಜಿ. ಎಸ್. ಶಿವರುದ್ರಪ್ಪನವರ ನೆನಪಲ್ಲಿ..

ನಾವಿಬ್ಬರೂ ಅಂದು
ಹೊಳೆಯ ದಡದಲಿ ನಿಂದು
ಮರಳುಮನೆಗಳ ಕಟ್ಟಿ
ಆಟವಾಡಿದ ದಿವಸ
ನೆನಪಿದೆಯೆ ನನಗೆ?

ಮುಂಗಾರುಮಳೆ ಹೊಯ್ದು
ನಾವಿಬ್ಬರೂ ತೊಯ್ದು
ನಿಂತಾಗ ಮರಳಮನೆ
ಕೊಚ್ಚಿಹೋದ ದಿವಸ
ನೆನಪಿದೆಯೆ ನಿನಗೆ?

ಈ ಮರುಳು ನನಗೆಂದು
ಆ ಮರುಳು ತನಗೆಂದು
ಹೊಡೆದಾಡಿ ಜತೆ ಬಿಟ್ಟು
ಆಟವಾಡಿದ ದಿವಸ
ನೆನಪಿದೆಯೆ ನಿನಗೆ?

ಮರುದಿವಸ ಒಂದಾಗಿ
ಮರುಳು ಮನೆಗಳ ಕಟ್ಟಿ
ಹಾಡಿಕುಣಿದಾ ದಿವಸ
ನೆನಪಿದೆಯೆ ನಿನಗೆ?

ಅಂದು ಹರಿದಾ ಹೊಳೆಯೆ
ಇಂದಿಗೂ ಹರಿಯುತಿದೆ:
ಬಾ ಗೆಳತಿ ಮತ್ತೊಮ್ಮೆ ಆಟವಾಡೋಣ,
ಬಾಲ್ಯದುದ್ಯಾನವನು ಮರಳಿ ಕಟ್ಟೋಣ!
-      ಡಾ|| ಜಿ. ಎಸ್. ಶಿವರುದ್ರಪ್ಪ
-      ಅಶ್ರು ತರ್ಪಣದೊಂದಿಗೆ ನನ್ನ ನೆಚ್ಚಿನ ಕವಿಗೆ ನಮನ!


|| ನಾ ಗಾಯಕಿಯಲ್ಲ, ತಂಬೂರಿ||

ಅಕ್ಷರಗಳ ಹಂಗಿಲ್ಲವಂತೆ ನಲ್ಲಗೆ..

ನಲ್ಲನಿಗೆ ನಲ್ಲೆಯ ಮನವನ್ನರಿಯಲು ಅಕ್ಷರಗಳ, ಕಂಠದಿಂದ ಹೊರಡುವ ಶಬ್ದಗಳ ಹಂಗಿಲ್ಲವಂತೆ...

ಕಣ್ಣೆವೆಗಳ ಹಿಂದೆ ಅಡಗಿದ ನಯನಗಳ ಮಾತು ಅವನ ಮನವ ತಲುಪುವುದಂತೆ...

ನಲ್ಲೆಯ ಗೆಜ್ಜೆಯ ನಾದವೂ ಅವಳ ಮನದ ಸ್ವರವಾಗಿ ಅವನ ಕಿವಿಯಲಿ ಉಸುರುವವಂತೆ..

ಅವಳ ಕೈಬಳೆಗಳ ಕಿಂಕಿಣಿಯೂ ಅವಳು ಆಡದ ಮಾತುಗಳ ಮಾರ್ದನಿಸುವುದಂತೆ..

ತಲೆತಗ್ಗಿಸಿ ಕಾಲ್ಬೆರಳಲಿ ಬಿಡಿಸುವ ಚಿತ್ತಾರವೂ ಅವಳ ಮನದ ಚಿತ್ರಣವ ತೋರುವುದಂತೆ..

ನಸುಬಿರಿದ ತುಟಿಯೂ ಮಾಧುರ್ಯದ ಸ್ವರವ ಕೇಳಿಸುವುದಂತೆ...

ಮತ್ತ್ಯಾಕೆ ಹೇಳಿ ಗದ್ದಲವೆಬ್ಬಿಸುವ ಮಾತುಗಳ, ಅಕ್ಷರಗಳ ಹಂಗು!

21 December, 2013

ಗಾಯಗಳು ಸೋರುತಿವೆ..

ಒಲವೇ,

ಕತ್ತಿಯಿಲ್ಲ ಬಾಣವಿಲ್ಲ

ಗಾಯಗಳು ಸೋರುತಿವೆ..

ಎಲ್ಲ ಒದ್ದೆ ಒದ್ದೆ..

ಒಲವೇ,

ಬಿಸಿಲಿಲ್ಲ ಮಳೆಯಿಲ್ಲ 

ಮನವೆಲ್ಲ ಒದ್ದೆಯಾಗಿದೆ..

ನಾದ ಸಂಗಮ..

ಒಲವೇ,

ಗುಡಿಯಿಲ್ಲ, ಮೂರ್ತಿಯಿಲ್ಲ

ಮನದಲಿ ತಾಳ, ಜಾಗಟೆ, ಗಂಟೆಗಳ ನಾದ..

ಬೆಳಕು

ಒಲವೇ,

ಬತ್ತಿಯಿಲ್ಲ ಎಣ್ಣೆಯಿಲ್ಲ

ಮನದೊಳಗಿನ ಬೆಳಕು ಆರಿಲ್ಲ..

19 December, 2013

ನೀ ಮತ್ತೆ ಕಳುಹಿಸುವ ತನಕ..

ಒಲವೇ,

ನಿನ್ನಿಷ್ಟದಂತೆ ನಾನೀಗ ಮೌನಿ..
ಕೇಳುತಿದೆ ಎಲ್ಲವೂ ಸುಸ್ಪಷ್ಟ

ಒಲವಿನ ಸಾಗರದ ಭೋರ್ಗೆರೆತ
ಎತ್ತರೆತ್ತರಕೆ ಪುಟಿದೇಳುವ ಅಲೆಗಳಲಿ

ಪ್ರೇಮ ಪತ್ರಗಳ ನೊರೆಗಳ
ಚಿಪ್ಪುಗಳಲಿ ಸಿಹಿ ಮುತ್ತುಗಳು

ಮನದ ದಡದ ಮರಳಿನಲಿ
ಇರಲಿ ಒಂದು ಮೂಲೆಯಲಿ

ಮತ್ತೆ ನೀ ಕಳುಹಿಸುವ ತನಕ!

17 December, 2013

ಕಾಯವಳಿದರೂ ಒಲವು ಅಳಿಯದು!

ಒಲವೇ,
ನೀ ಕಿತ್ತುಕೊಳ್ಳಬಲ್ಲೆ,
ಭೌತಿಕವಾದದನೆಲ್ಲವನ್ನೂ
ನೀ ನಾಶಮಾಡಬಲ್ಲೆ,
ಮಣ್ಣಲ್ಲಿ ಬೆಳೆದೆಲ್ಲವನ್ನೂ.
ಕೈಯಾರೆ ಬಿತ್ತಿ
ಗೊಬ್ಬರ ನೀರೆರೆದಿ
ಒಲವೀಗ ಮೊಳಕೆಯೊಡೆದು
ಹಸುರಾಗಿ  ಚಿಗುರಿದೆ
ಹುಲುಸು ನೆರಳು
ಗಂಧ ಹೂ
ಸಂತೃಪ್ತ ಬದುಕು..
ನನ್ನೊಳಗೆ ಬೆಳೆದು
ಹಬ್ಬಿ ನಿಂತ
ಅನಿಮಿಷ ವೃಕ್ಷ
ನಿತ್ಯ ಅಮರ
ಈ ಕಾಯವಳಿದರೂ
ಒಲುಮೆ ಉಳಿಯುವುದು!

16 December, 2013

ನಲ್ಲಿರುಳು..

ಮುಡಿಯಲಿದ್ದವನು ಮಾಯದಲಿ ಬಾನಿಗೆ ನೆಗೆದವನು
ಚಂದ್ರಿಕೆಯ ಮೋಹ ಜಾಲದಲಿ ಸೆರೆಯಾದನು
ಮುಗಿಲಮರೆಯಲಿ ಮರೆಯಾದ ಇಂದುವಿಗೀಗ ಲಜ್ಜೆ
ಹಂಬಲಿಸಿದವಳಿಗೆ ಹಾಸಿತು ನಲ್ಲಿರುಳು ಸಜ್ಜೆ!

ಸ್ವೀಕರಿಸುವ ಭಾವ..

ಒಲವೇ,
ಅದ್ಯಾವುದೋ ನೆನಪುಗಳು, ಯೋಚನೆಗಳು..
ಏನೇನೋ ಅಭಿಪ್ರಾಯಗಳು, ಚಿಂತನೆಗಳು..
ಅವರಿವರ ಎಚ್ಚರಿಕೆಗಳು, ಕಲ್ಪನೆಗಳು..

ಎಷ್ಟೊಂದು ಗೊಂದಲ, ಜಿಜ್ಞಾಸೆಗಳು..
ಮುಗಿಯದ, ಬಿಡಿಸಲಾಗದ ಸಿಕ್ಕುಗಳು..
ಬಂಧಗಳಲಿ ಬಿರುಕುಗಳು..


ಮದ್ದು ಒಂದೇ ನನ್ನೊಲವೇ,
ನಿನ್ನೊಲುಮೆಯ ಕಲ್ಪನೆಯ ನಶೆಯಲಿ
ನಾನೀಗ ನೋವು ಮುಕ್ತ ಜೀವ

ಬದಲಿಸಲಾಗದಕ್ಕೆ ಇನ್ನು ಮರುಗುವುದಿಲ್ಲ
ಸ್ವೀಕಾರ ಭಾವವಷ್ಟೇ ಮುಂದೆಲ್ಲ..

-ಪ್ರೇರಣೆ ರೂಮಿ

15 December, 2013

ಶುಭ ಭಾನುವಾರ.. ಒಂದು ರೂಪಾಂತರದ ಯತ್ನ!


||when you argue with a fool, you prove that there are two||

||love is a great beautifier||

||man is known not by the company he keeps but by the company he avoids||

||the mind is the man||

||laughter is a good disease, spread it||

||when it is not necessary to change, it is necessary not to change||

||the problem with troubleshooting is that trouble shoots back||



ಮನೋಹರ್ ನಾಯಕ್ ಅವರ ಗುಡ್ ಮೋರ್ನಿಂಗ್ ಸಂಡೆ ಕನ್ನಡದಲ್ಲಿ ರೂಪಾಂತರ..
-
|| ಗಂಧದವನೊಂದಿಗೆ ಗುದ್ದಾಟ ಲೇಸು ||

|| ಒಲವೇ ಜೀವನ ಸಾಕ್ಷಾತ್ಕಾರ ||

|| ಸಜ್ಜನರ ಸಂಗ ಹೆಜ್ಜೇನು ಸವಿದಂತೆ;  ದುರ್ಜನರ ಸಹವಾಸ ಸದಾಚಾರದ ಭಂಗ ||

|| ಮನವೇ ಮಂದಿರ ||

|| ನಗುವು ಸಹಜ ಧರ್ಮ; ನಗಿಸುವುದು ಪರಧರ್ಮ; ನಗುವ ಕೇಳುತ ನಗುವುದತಿಶಯದ ಧರ್ಮ;
ನಗುವ ನಗಿಸುವ ನಗಿಸಿ ನಗುತ ಬಾಳುವ ವರವ ಮಿಗೆ ನೀನು ಬೇಡಿಕೊಳೊ- ಮಂಕುತಿಮ್ಮ ||

|| ವರ್ತನೆಯಲಿ ಪರಿವರ್ತನೆ ಜಗದ ನಿಯಮ.. ಅದನರಿತು ನಿಯಮಕಡಿಯಾಳಾಗಿ ನಡೆದರೆ ಬದುಕುವ ಕಲೆ ಅರಿಯುವಿ;
ಕಾಲನ ಚಕ್ರದೆಡೆಯಲಿ ಎಲ್ಲರೂ ಅಪ್ಪಚಿಯೇ.. ಕಬ್ಬಿನ ಹಾಲಾಗುವಿಯೋ; ಇಲ್ಲಾ ಬೇವಿನ ರಸವಾಗುವಿಯೋ ಆಯ್ಕೆ ನಿನ್ನದೇ ತಿಮ್ಮಿ ||

|| ತೊಂದರೆ ವಿನಾಶಕರಿಗೆ ಅನಾವಶ್ಯಕವಾಗಿ ತೊಂದರೆ ಕೊಡಬಾರದು ||

|| ವ್ಯಕ್ತಿಗಳ ವ್ಯಕ್ತಿತ್ವಗಳ ಅಳೆದು ಸುರಿದು ಲೆಕ್ಕಹಾಕುವ ಭರದಲಿ ನಮ್ಮ ವ್ಯಕ್ತಿತ್ವವೇ ಜಗಜ್ಜಾಹೀರಾಗುವುದೆಂಬ ಅರಿವಿರಲಿ ||



14 December, 2013

ರಾಗರಂಜಿತ ಮುಸ್ಸಂಜೆ..

ಭಟ್ಟಂಗಿಗಳ ಮೆಚ್ಚುಗೆಗೆ ರಾಗ ರಂಜಿತಳಾಗಿ 

ನನ್ನ ಸೆರಗಿನೆಡೆಯಲಿ ಮುಖ ಮರೆಸಿಕೊಂಡ ಮುಸ್ಸಂಜೆ!


ಕಡಲಿನಾಳಕೆ ಜಾರಿ ಚಿಪ್ಪು, ಮುತ್ತು, ಹವಳ ಹೆಕ್ಕಿ ತಂದು ಬಾನ ತುಂಬ ನೇತಾಡಿಸಿದ ಮುಸ್ಸಂಜೆ!

ಅಂದಿನ ಮುಸ್ಸಂಜೆಯ ನೆನಪು..

-
ನೇಸರ ಕುಲುಮೆಯಲಿ ಕೆಂಪಗೆ ಬೆಂದು ಹೊನ್ನಾದನು..

ಶಶಿ ಬೆಳದಿಂಗಳಲಿ ಶುಭ್ರವಾಗಿ ಮಿಂದು ಬೆಳ್ಳಿಯಾದನು..

ಅಜ್ಜಿ ನೆರಿಗೆ ಮೂಡಿದ ಕೈಯಲಿ ಹೊಸೆದ ಮೆದು ಹತ್ತಿ ಬತ್ತಿಯಾಯಿತು..

ಅಜ್ಜನ ಹೊಲದ ಬೀಜ ಚಕ್ರಗಳೆಡೆಯಲಿ ಅಪ್ಪಚ್ಚಿಯಾಗಿ ದಪ್ಪ ಎಣ್ಣೆಯಾಯಿತು..

ಅತ್ತೆ ಘಸ ಘಸ ತಿಕ್ಕಿದ ಹಿತ್ತಾಳೆ ದೀಪ ಝಗಮಗ ಹೊಳೆಯಿತು..

ಮೈತುಂಬ ಮಣ್ಣು ಮೆತ್ತಿ ಚಿಣ್ಣರು ಧೂಳೆಬ್ಬಿಸುತ ಗದ್ದಲ ಮಾಡುತ ಅರಳುತ ಮರಳಿದರು..

ತುಳಸಿ ಕಟ್ಟೆಯ ದೀಪದ ಬೆಳಕು ಅಮ್ಮನ ಸಂತೃಪ್ತ ಮುಖದಲಿ ಪ್ರತಿಫಲಿಸಿತು..

ಅಜ್ಜಿ, ಅಜ್ಜ, ಅತ್ತೆ ಸೊಸೆ.. ಚಿಣ್ಣರೆಲ್ಲರ ರಾಗ ದೇವರ ಮನೆಯಲಿ ವ್ಯಾಪಿಸಿತು..

ಹಾರ್ಮೋನಿಯಮ್, ತಾಳ, ತಬಲ ನಾದ ತರಂಗ ಭಕ್ತಿ ಸಾಗರದ ಅಲೆಯಾಯಿತು..

ಧೂಪ, ದೀಪ, ಕರ್ಪೂರ, ಅಗರಬತ್ತಿಯ ಹೊಗೆಯೆಡೆಯಲಿ ಬೆಳಗುವ ಮಂಗಳಾರತಿ ಎತ್ತಿದರು..

ಒಕ್ಕೊರಳಿನಿಂದ ರಾಗ ತಾಳ ಪಲ್ಲವಿ ಸೇರಿಸಿ ಮುಸ್ಸಂಜೆಯ ಜೋಳಿಗೆಯಲಿ ಭಾವ ತುಂಬಿದರು!

(ಅಂದಿನ ದಿನದ ನೆನಪು ತಂದ ಮುಸ್ಸಂಜೆಗೆ ಅರ್ಪಿತ)

ಮುಸ್ಸಂಜೆ.. ರಾಗ!

-
ಅದಾವ ಮಾಯದಲಿ ಬಾನಿಗೆ ನೆಗೆದವನು
ಚಂದ್ರಿಕೆಯ ಮೋಹ ಜಾಲದಲಿ ಸೆರೆಯಾದನು
ಮುಗಿಲಮರೆಯಲಿ ಮರೆಯಾದ ಇಂದುವಿಗೀಗ ಲಜ್ಜೆ
ಹೊರಗೆಳೆದು ವದನ ಅನಾವರಣಗೊಳಿಸಿದಳು ಮುಸ್ಸಂಜೆ!

13 December, 2013

ಕೊಟ್ಟದೆಲ್ಲ ಮರಳಿ ಬರುವುದಂತೆ..

ಒಲವೇ,

ಅನ್ನುವರು ಕೊಟ್ಟದೆಲ್ಲ ಮರಳಿ ಬರುವುದಂತೆ
ಒಂದಕ್ಕೆರಡಾಗಿ ಸಿಗುವುದಂತೆ

ನಾ  ಅರ್ಪಿಸಿದ ಬದುಕು ನಿನಗಾಗಿ
ಸಿಗುವುದೇ ಮತ್ತೆ ನನಗೆ ಹೊಸದಾಗಿ

ನಿನಗಾಗೇ ಅರ್ಪಿಸಿದ ಆ ಘಳಿಗೆಗಳು
ಎಲ್ಲಾ ಮತ್ತೆ ಆಗುವುದೇ ಹೊಸ ಕ್ಷಣಗಳು

ನೀ ಹೌದೆಂದರೂ ಬೇಡ ನನಗವು
ನೀ ಮರಳಿಸುವುದೇ ಆದರೆ ಬದುಕು

ನಮ್ಮಾತ್ಮಗಳನೇ ಒಂದಾಗಿ ಜೋಡಿಸು
ಇಲ್ಲಾ ನಿನ್ನಲ್ಲೇ ಐಕ್ಯಗೊಳಿಸು!

ಲೋಕದ ಬಾಯಿಯಲಿ..

ಒಲವೇ,

ನೀ ಕರೆದೆ
ನಾ ಓಗೊಟ್ಟೆ
ನೀ ಹೇಳಿದೆ
ನಾ ಕೇಳಿದೆ

ಕಲ್ಲು ಹೊತ್ತೆ
ನೀರು ಸುರಿದೆ
ಜತನವಾಗಿ ಕಟ್ಟಿದೆ
ಮೇಲೆದ್ದಿತು ಗುಡಿ

ಪತಾಕೆ ಹಾರಾಟ
ಎತ್ತರ ಗೋಪುರದಲ್ಲಿ
ಹೂ ದೀಪ
ಶೃಂಗಾರ ಸುತ್ತಮುತ್ತ

ಗಂಟೆ ಜಾಗಟೆ
ಗದ್ದಲದ ಮಾರ್ದನಿ
ಕರ್ಪೂರ ಗಂಧ
ಮರುತ ಪಸರಿಸಿದ


ಲೋಕದ ಬಾಯಿಯಲ್ಲಿ
ನೈವೇದ್ಯದ ರುಚಿ
ಮತ್ತೆ ಉಳಿದಿತೇ
ಗುಟ್ಟಾಗಿ
ನನ್ನ ನಿನ್ನ
ಒಲವಿನ ಕತೆ!

-ರೂಮಿ ಪ್ರೇರಣೆ
 || ನನ್ನ ಬೆನ್ನ ವಕ್ರತೆ ಬಣ್ಣಿಸಿದೆ ನೀ;

ನಾ ಕನ್ನಡಿಯಲ್ಲಿ ಕಾಣದನೂ ನೀ ಕಂಡೆ ಎಂದರೆ,

ಯಾವ ಸಮಜಾಯಿಸಿ ಕೊಡುವ ಅಗತ್ಯ ನನಗಿನ್ನು ಇಲ್ಲ ||

ಉತ್ತರ ಸರಿಯೋ ತಪ್ಪೋ.. ಹೇಳು ನೀ ಮುಸ್ಸಂಜೆ!


ಕೂಡಿಸಿ, ಗುಣಿಸಿ, ಭಾಗಸಿ, ಕಳೆದು.. ಕೊನೆಗೂ ಈ ಪುಸ್ತಕದ ಲೆಕ್ಕಕ್ಕೇನೋ ಉತ್ತರ ಸಿಕ್ಕಿತು
ಮನದ ಮೂಲೆ ಮೂಲೆಯಲ್ಲೂ ಹೀಗೇ ಕೂಡಿಸಿ, ಕಳೆದು, ಭಾಗಿಸಿ, ಗುಣಿಸಿದ ಲೆಕ್ಕಗಳು ಚೆಲ್ಲಾಪಿಲ್ಲಿ..
ಎಲ್ಲವನ್ನೂ ಪೇರಿಸಿ ಹೆಣಗಾಡಿ..
ಉತ್ತರವೇನೋ ಸಿಕ್ಕಿತು
ಸರಿ ತಪ್ಪು ಹೇಳಬೇಕಾದವಳು ನೀ ಮಾತ್ರ ಮೌನಿ
ನಾಳೆ ಮತ್ತೆ ಬರುವಿಯಲ್ಲ..

ಉತ್ತರ ಹೇಳದೇ ಮರಳಲು ಬಿಡುವುದಿಲ್ಲ ಮುಸ್ಸಂಜೆ ನಿನ್ನ!

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...