ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

30 November, 2013

ಒಲವೇ,
ನೀ ನನಗಿನ್ನೂ ಅರ್ಥವಾಗಿಲ್ಲವೆಂದೆನಬೇಡ...
ನಾನೇ ನೀನಾಗಿರುವಾಗ
ಈ ಮಾತಿಗೇ ಅರ್ಥವಿಲ್ಲವಲ್ಲ..

ಒಲವೇ,
ನೀನಿರುವಿ ಜತೆಯಲ್ಲೇ ಅರೆ ಘಳಿಗೆಯೂ ಬಿಡದೆ ಜತೆಯಾಗಿ..

ಆದರೂ ಭೌತಿಕ ಜತೆಯೂ ಬೇಡುವುದು ಮನ ಆಗಾಗ..

29 November, 2013

ಒಲವೇ,
ಕಳೆದುಕೊಳ್ಳದಿರು ಎಂದೂ ಭರವಸೆ, ಪವಾಡಗಳು ಅಗೋಚರ ಗೂಡುಗಳಲ್ಲಿ ನೆಲೆಸಿರುತ್ತವೆ!

-ರೂಮಿ

28 November, 2013

ಭಾವಾನುವಾದ.. ಹೋಗೆನ್ನಬೇಡ ಒಲವೇ ನನ್ನ!

ಒಲವೇ, ನನ್ನೊಲವೇ, ಮರಳಿನ್ನು ಎಂದು ಹೇಳದಿರು
ನನ್ನ ಮರಳಿನ್ನು ಎಂದು ಹೇಳದಿರು
ನನ್ನ ಚೇತನವೇ, ನನ್ನ ಒಲವೇ..

ಹೋಗು ಎನ್ನದಿರು ಎನ್ನನ್ನು ಅಜ್ಞಾತೆಯಲ್ಲ
ಚೇತನ ನಿನ್ನೊಳಗಿರಲು ಸದಾ
ಅರಿವಿಲ್ಲ, ಏನ ಅರಿತೆನೆಂದು
ಅರಿವನ್ನೂ ಅರಿತರೂ ಏನುಪಯೋಗವೋ
ನನ್ನೊಲವೇ,
ಮರಳಿನ್ನು ಎಂದು ಹೇಳದಿರು ನನ್ನೊಲವೇ,
ನನ್ನ ಚೇತನವೇ, ನನ್ನ ಪ್ರಾಣವೇ..

ಶುಷ್ಕವರ್ಷ ಋತು ಸುರಿಸಿತ್ತಾಗ
ಲೆಕ್ಕವಿಲ್ಲದಷ್ಟು ಸಲ ನನ್ನೀ ಚಕ್ಷುಗಳಿಂದ
ಹನಿಗಳೆರಡು ಉದುರಲು ಕೇಳೊಲ್ಲವೀಗ
ಮುಚ್ಚಿದೀ ಆರ್ದ್ರ ಕಣ್ಣೆವೆಗಳಿಂದ
ನನ್ನೊಲವೇ,
ಮರಳಿನ್ನು ಎಂದು ಹೇಳದಿರು ನನ್ನೊಲವೇ,
ನನ್ನ ಚೇತನವೇ, ನನ್ನ ಪ್ರಾಣವೇ..ತುಟಿಯ ಮೇಲೆ ತುಟಿಯನೊತ್ತಿ
ಉಸಿರೊಳಗೆ ಉಸಿರು ಸಿಲುಕಿಸಿ
ಅಗಲಿಸಲಾಗದ ಜೋಡಿ ತುಟಿಗಳ ಮಾತು
ಹೇಳಂತೆ ನಿನ್ನೀ ಚಕ್ಷುಗಳಿಂದ
ನನ್ನೊಲವೇ,
ಮರಳಿನ್ನು ಎಂದು ಹೇಳದಿರು ನನ್ನೊಲವೇ,
ನನ್ನ ಚೇತನವೇ, ನನ್ನೊಲವೇಒಲವಿನ ಸೆಳೆತದ ಬಲ!


ಹೇಳೇ ಹುಚ್ಚು ಹುಡುಗಿ,ಇತ್ತಲ್ಲವೆ ನಿನಗೆ ಬಹಳ ಹಮ್ಮು
ನೀನಾವ ಸೆಳೆತಕೆ ಸಿಲುಕಲೊಲ್ಲೆಯೆಂದು
ಹೃದಯ ಮಂದಿರದ ಭದ್ರ ಕೋಟೆಯ ಕದಕ್ಕಿತ್ತ
ಒಲವಿನ  ಚುಟುಕು ದನಿಗೆ ತೆರೆದಿಯಲ್ಲವೆ ಅಗಣಿ, ಮತ್ತೆ ಬಾಗಿಲು ಅಗಲವಾಗಿ
ಕಟ್ಟಿದೆ ಒಲವಿನ ದೇಗುಲವನಲ್ಲಿ, ನಿತ್ಯಶಂಖ ತಾಳ ಜಾಗಟೆಯ ಜತೆ ಪೂಜೆಯೀಗ ಅಲ್ಲಿ

ಮತ್ಯಾಕೆ ಈ ಪರಿತಾಪ, ಸುಮ್ಮನೆ ಒಪ್ಪಿಕೋ  ಒಲವಿನ ಆಟ ಪಾಠಗಳನ್ನೀಗ.

ಸದಾ ನಾ ನಿನ್ನವಳೇ.. ನನ್ನೊಲವೇ!

ಒಲವೇ,

ಬಚ್ಚಿಸಲೆತ್ನಿಸಬೇಡ ನಿನ್ನ ಮನವನ್ನ
ಎಲ್ಲವನ್ನೂ ನಾ ಓದಬಲ್ಲೆ, ಅರ್ಥೈಸಬಲ್ಲೆ
ನೀ ತೋರದೇ ಕಾಣಬಲ್ಲೆ ನಿನ್ನ ಕನಸನ್ನ
ನೀ ಕರೆಯದೇ ಸುತ್ತಬಲ್ಲೆ ನಿನ್ನ ಮನದಂಗಣವನ್ನ
ನೀ ಆಡದೇ ಕೇಳಬಲ್ಲೆ ನಿನ್ನ ನುಡಿಗಳನ್ನ
ತಡೆಯಬಲ್ಲೆ ಕೋಪ ತಾಪಗಳ ಬಿಸಿಯನ್ನ
ಅನುರಾಗದ ಬೆಳದಿಂಗಳು ಬಳಿಯಿರೆ ನನ್ನ
ಅಂದು ನೀನೇ ಬೆಸೆದೆಯಲ್ಲ ನಮ್ಮ ಮನಗಳನ್ನ
ಮರೆತು ಬಿಟ್ಟೆ ನೀನೀಗ ಎಲ್ಲವನ್ನ
ಕಸದ ಬುಟ್ಟಿಗೆ ಎಸೆದೆಯೋ ನೆನಪುಗಳನ್ನ
ನಾನ್ಹೇಗೆ ಮರೆಯಲಿ ಹಳೆಯ ದಿನಗಳನ್ನ
ಋತುಗಳಂತೆ ನಾ ಬದಲಿಸಲಾರೆ ಮನವನ್ನ
ನಿನ್ನವಳಾಗಿರುವೆ ಉಸಿರಿರುವ ತನಕ ನನ್ನ!

27 November, 2013

ಒಲವಿನ ಆಜ್ಞೆ!

ಅಂದು ಒಲವಂದಿತು,
“ಒಪ್ಪಿಸಿಕೋ ನೀ ನಿನ್ನ ಸುಮ್ಮನೆ ನನಗೆ, ಆಲೋಚನೆಗಳಿಲ್ಲದೆ!”

ಆಜ್ಞೆಯನ್ನು ನಾ ಸುಮ್ಮನೆ ಪಾಲಿಸಿದೆನಷ್ಟೇ, ಸರಿ ತಪ್ಪುಗಳ ಚಿಂತಿಸದೆ!

ಒಲವೇ, ವಾಸ್ತವದೆಚ್ಚರಿಕೆ ಬೇಡ ಎನಗೆ..


ಒಲವೇ,

ಅವರಿವರು ಕರೆಯಲೆನ್ನ “ಮೂರ್ಖಿ”
ಕರೆಯದಿರೆಂದೂ ಹಾಗೆ ನೀ
ಗುರು ನೀನು, ಪರಮ ದೈವವೂ

ಅಂದೆನ್ನ ಅಂತಃಚಕ್ಷು ಬಿಡಿಸಿ
ಹೃದಯದಲಿ ಗುಡಿ ಕಟ್ಟಿಸಿ
ಮನದಂಗಣದಲಿ ರಂಗಿನ ಚುಕ್ಕಿಯಿಕ್ಕಿ

ಮೈಮನದಲಿ ಜಲತರಂಗ ಮೀಟಿ
ಕಂಪನದಲೆಯಲಿ ತೇಲಿಸಿ
ಭಾವಗಳ ಅಗೆದು ಬಗೆದು..

ಕೈಗೆ ಕೈ ಬೆಸೆದು ನಡೆಸಿ
ತಲುಪಿಸಿದೆ ಸಮಾಧಿ ಸ್ಥಿತಿ..
ಬೇಡ ಎಚ್ಚರಿಸಬೇಡ

ವಾಸ್ತವದರಿವಿನ ತಿಳಿವೂ ಬೇಡೆನಗೆ
ಜಗದೊಡೆಯನಲಿ ಲೀನವಾಗುವ ತನಕ
ಜತೆಯಿರೆ ಮನದಲಿ ಅಂದಿನ ಬೆಚ್ಚಗಿನ ಬಂಧನ!

 ಲೋಕದ ಸಕಲ ಅಣು, ರೇಣು, ಕಣಗಳೂ ಒಲವಿನ ಸೆಳೆತಕೆ ಸಿಲುಕಿವೆಯಂತೆ.. 

ತಮ್ಮ ತಮ್ಮ ಒಲವಿನ ಕುಡಿ ನೋಟಕಾಗಿ ಹಂಬಲಿಸುತ ಪರಿತಪಿಸುವರಂತೆ..

-      -ರೂಮಿ ಭಾವಾನುವಾದ

22 November, 2013

ನೀನೆಂದು ಬರುವಿ.. ನನ್ನೊಲವೇ!

ಒಲವೇ,
ಸಂದೇಹವಿಲ್ಲವೆನಗೆ ಬರುವೆ ನೀನೊಂದು ದಿನ
ಮುತ್ತನೀಯಲು ನನ್ನ ಬೂದಿಗೆ
ಅದೇಕೆ ಈಗಲೇ ಬರಲಾರೆ
ನಾನೇ ಅದು ಕಾದು 
ಉರಿದು ಬೂದಿಯಾಗುವವಳು!

-      - ರೂಮಿ ಭಾವಾನುವಾದ 

ನೀನಡಗಿದ್ದಿ ಬೇರಿನೊಳಗೆ..

ಒಲವೇ,

ರೆಂಬೆ-ಕೊಂಬೆಗಳಲ್ಲಿ
ಎಲೆ-ಹೂಗಳಲ್ಲಿ ಹುಡುಕುತ್ತಿದ್ದೆ
ಇಷ್ಟು ಕಾಲ ಬೇಕಾಯ್ತು ನೋಡು
ಬೇರುಗಳಲ್ಲೇ ಅವಿತುಕೊಂಡಿದ್ದನ್ನು ಕಂಡುಕೊಳ್ಳಲು

ನೀನನ್ನುವುದು ಸುಳ್ಳಲ್ಲ, ನೋಡು
ಆರ್ದ್ರವಾಗಿರಬೇಕು ಹೊರಗಣ್ಣು
ತೆರೆದಿಡಬೇಕು ಅಂತಃಚಕ್ಷು
ಅಗೆಯಲು ಬೇಕು ಆತ್ಮಶಕ್ತಿ!

21 November, 2013

ನೀ ನೀನಾಗಿ ಬಾ ನನ್ನೊಲವೇ..

ಒಲವೇ,

ಘಳಿಗೆಗೊಂದು ನಿಲುವು, ಘಳಿಗೆಗೊಂದು ತಿರುವು..
ಮಾಯಾಲೋಕದಲ್ಲಿ ಬದಲಾವಣೆ ನಿರ್ವಿಘ್ನ, ನಿರಾತಂಕ

ಈಗೊಂದು ಮುಖ..
ನೋಡನೋಡುದಿಂದಂತೆ ಮತ್ತೊಂದು ಮಗದೊಂದು..

"ಯಾರಿದು?" ಪ್ರಶ್ನೆಗಳು ಬರೇ ಪ್ರಶ್ನೆಗಳು...
ಕಾಡಿ ಹಿಂಡಿ ಸೋತೆ..

ನಡೆ ನಮ್ಮ ಲೋಕವಿದೆ ಅಲ್ಲಿ, ಬರೇ ನಲಿವಲ್ಲಿ..
ನಮಗಿಬ್ಬರಿಗಾಗಿಯೇ ಕಟ್ಟಿದ  ಶಾಶ್ವತ  ಸ್ವರ್ಗದಲ್ಲಿ..

ಕಳಚಿಬಿಡು ನಿನ್ನೀ ಹೊಸ ಹಳೆಯ ಮುಖವಾಡಗಳ
ನೀನು ನೀನಾಗಿ ಬಾ..

ನಾ ನಾನಾಗಿ ಕಾದು ನಿಂತಿರುವೆ
ನೀ ನೀನಾಗಿ ಬದಲಾಗಲೆಂದು..

19 November, 2013

ಅಗಲವಾಗಿ ತೆರೆದ ಮನದ ದ್ವಾರ ದಾಟಿ ಒಲವು ಅಡಿಯಿಟ್ಟಾಗ

ಸಾವಿರ ಚುಕ್ಕಿಗಳ ಬೆಳಕು ಚೆಲ್ಲುತಲಿಹುದು ಅಣು ಅಣುಗಳಿಂದೀಗ..

18 November, 2013

ನಾ ಬಂಧಿಯೀಗ ಒಲವಿನ ದಿಗ್ಬಂಧನದಲಿ!ಎಲ್ಲವನ್ನೂ ತಿಳಿದವನು ಮಾಯಾವಿ ನನ್ನೊಡೆಯ
ಜಾಲಬಂಧದಲಿ ಸಿಲುಕಿಸುವನು ಸತ್ ಆತ್ಮಗಳ
ಸ್ವಾರ್ಥ ಬಂಧವಿಲ್ಲವೀ ಒಲವಿನ ಜಾಲದಲಿ
ನೋಯಿಸುವ ಪಾತ್ರವಿಲ್ಲ ಒಲವಿನ ಲೋಕದಲಿ
ನಿಯಮ ವಿಮರ್ಶೆಗಳ ಗಡಿಯಿಲ್ಲವೀ ನಾಕದಲಿ!
ನಾ ಬಂಧಿಯೀಗ ಒಲವಿನ ದಿಗ್ಬಂಧನದಲಿ! 

ಕಪ್ಪುಕುಳಿ ವಾಸಿ ನಾನೀಗ

ಕಪ್ಪುಕುಳಿ ವಾಸಿ ನಾನೀಗ!
-----------------------

ಗಿರ ಗಿರ ಸುತ್ತುತ್ತ..
ಘಲ್ ಘಲ್ ಹೆಜ್ಜೆಹಾಕುತ್ತ..
ಹೊರೆಟೆ ನಾನೊಲವಿನ ಭರವಸೆಯಲಿ..

ತೇಲುವ ಮುಗಿಲ ಮಧ್ಯೆ ರೆಕ್ಕೆ ಹರಡಿ..
ಕಣ್ಣಗಲ ಮಾಡಿ ಇರುಳ ಬಾನಿನಲಿ
ಚುಕ್ಕಿ ಚಂದಿರನ ಸುತ್ತ ವ್ರತ್ತಾಕಾರದಲಿ

ಧೂಳ ಕಣಗಳ ಜತೆ ಚಕ್ರಾಕಾರದಲಿ..
ಅರಸಿದೆ.. ಒಲವಿನ ಅರಮನೆಯನ್ನರಸಿದೆ..
ಮೋಸ ಮಾಡಲಿಲ್ಲವನು..

ಅದೆಲ್ಲಿಂದಲೋ ಬಂದವನನು ಜತೆಯಾದ
ಹೆಜ್ಜೆಯಲಿ ಹೆಜ್ಜೆಹಾಕಿ ಕುಣಿತದಲೀಗ ಜೋಡಿ
ಎಲ್ಲೆಲ್ಲೂ ಗೆಜ್ಜೆಹೆಜ್ಜೆ ಮಾರ್ದನಿ..

ಅದ್ಯಾವ ಮಾಯದಲಿ ಒಯ್ದನಿವನು
ಕಾಲವಾದ ಚುಕ್ಕಿಯರಮನೆಗೆ
ಕಪ್ಪುಕುಳಿ ಲೋಕವಾಸಿ ನಾನೀಗ!

14 November, 2013

ಈ ಪಯಣ ನಿನ್ನತ್ತಲೇ ನನ್ನೊಲವೇ..

ಈ ಪಯಣ ನಿನ್ನತ್ತಲೇ ನನ್ನೊಲವೇ..
--------------------------

ಮುಳ್ಳುಗಳು ಇಣುಕಿ ಬೆದರಿಸಿ ಚುಚ್ಚುತ್ತಿದ್ದವು ಕಣ್ಗಳಿಗೆ
ಹಾದಿಯುದ್ದಕ್ಕೂ ಹರಡಿದ ಗುಲಾಬಿ ಪಕಳೆಗಳೆಡೆಯಿಂದ

ಪಯಣ ನಿಲ್ಲಿಸುವಂತೆ ಒತ್ತಡ, ಅಬ್ಬರ ಅಲ್ಲಿಲ್ಲಿ..
ಗಾಳಿ ತೇಲಿಸಿ ತಂದ ಒಲವಿನ ಪಿಸುಮಾತುಗಳಲಿ
ಖಳನಾಯಕರ ಅಟ್ಟಹಾಸದ ಮಾರುಲಿಯೂ..

ಅನುಮಾನ, ಹತಾಶೆ, ಹೆದರಿಕೆ..
ಬೇತಾಳದಂತೆ ಬೆನ್ನ ಏರಿ ಮನ ಭಾರ..
ಶಪಥ ತೊಟ್ಟು ಬಿಡದೆ ಚೆಂಡಾಡಿದವು..
ಕನಸುಗಳು ಚಿಂದಿಚೂರು, ರಸ್ತೆಪಾಲು..

ಹ್ಮುಂ! ಸಿಂಹಿಣಿ ನಾನು ಹಿಮ್ಮೆಟ್ಟುವೆನೆ..
ತೊಟ್ಟೆನೀಗ ರಕ್ಷಾಕವಚ
ಹೊರಟೆ ಮತ್ತೆ ಒಲವಿನತ್ತ..

ಒಲವಿನ ಜಪವ ಬಿಟ್ಟು ನಾನುಳಿಯಲಾರೆ
ಲೋಕ ಅಪವಾದಕೆ ನಾ ಬೆಲೆಕೊಡಲಾರೆ!

13 November, 2013

ಧರ್ಮ, ಕರ್ಮ.. ಬರೇ ಒಲವು!

ಧರ್ಮ ಕರ್ಮ ಸರ್ವವೂ
ಬರೇ ಒಲವು..
ಬರೇ ಒಲವು..
ವರುಷಗಳ ಕಾಲ ಬರೇ ಜಪ ತಪ..
ಹಂಬಲಿಸಿದು ವ್ಯರ್ಥವಾಗಲಿಲ್ಲ..

ಕೆಂಪಗಿನ ಮಾಂಸದ ಅಂಗಾಗ..
ಧಮನಿಗಳಲಿ ಹರಿಯುತಿಹ ನೆತ್ತರು..
ಉಚ್ಛ್ವಾಸ ನಿಶ್ವಾಸಗಳ ಹೊರಒಳ ನಡೆದಾಟ..
ತೃಷೆ, ಕ್ಷುಧೆಗಳ ಕಾಟ..
ಇದೆಲ್ಲಾ ಬರೇ ಲೋಕದ ನೋಟಕೆ..
ಭಾರಗಳ ಹೊರಲಿಕೆ..

ಮನದ ಕೊಳೆಯ ಗುಡಿಸಿ
ಸಿಂಪಡಿಸಿ ಒಲವೆಂಬ ಅಮೃತ
ಅಲ್ಲೀಗ  ಥಳ ಥಳ...
ಗಾಢನೀಲಿ ಅಂಬರದಲಿ
ಕಣ್ಮುಚ್ಚಾಲೆಯಾಡುತಿರುವ ಚುಕ್ಕಿಗಳ ನಡುವಿನ
ಚಂದ್ರಮನ ಚಂದ್ರಿಕೆಯಷ್ಟೇ ತಂಪು
ಮನದ ಕಂಪು..

ಸಾಕು ಸಾಕು..
ಒಲವು ತಮ್ಮಟೆ ಬಡಿದು ಎಚ್ಚರಿಸಿತು
ಒಳಕಿವಿಯ ತೆರೆದು..
ಒಳಗಣ್ಣಿಗೆ ಕಾಣಿಸಿ..
ಬದುಕು ಮುಗಿಸಿ ನನ್ನ ಸೇರಿದರೆ
ಆಗಲೇ ನೀ ಬಾಳುವೆ ಅಂದಿತು!

-ಪ್ರೇರಣೆ ರೂಮಿ

12 November, 2013

ಒಲವೇ.. ಏನಿದೆಲ್ಲ!

ಒಲವೇ,
ನೀ ನನ್ನೊಳಗೆ
ಬಚ್ಚಿಟ್ಟ ಭಾವಶರಧಿಯಲ್ಲೀಗ
ಬೃಹದಲೆಗಳೆದ್ದು ಮುನ್ನುಗ್ಗುತ್ತಿವೆ
ಮನದಂಗಳಕ್ಕೆ ಅಪ್ಪಳಿಸುತ
ನನ್ನಳಿಸುವ ಪಣಕ್ಕಿಳಿದಿವೆಯೇನೋ..
ಅವಕ್ಕೆ ತಿಳಿಹೇಳಂತೆ
ನಶ್ವರ ಕಾಯವನ್ನಳಿಸಿ

ಸಾಧಿಸಲೇನಿಲ್ಲವೆನ್ನು!

"ನಾ" ಅಳಿಯಲು..


ಒಲವೇ,

ಸಿಕ್ಕುಗಳಿಲ್ಲ..
ಗೊಂದಲಗಳಿಲ್ಲ
ಮುಂಜಾವಿನ
ಇಬ್ಬನಿಯಲ್ಲಿ ಮಿಂದು
ಸ್ಫಟಿಕದಂತೆ ಹಾದಿ
ಹೊಳೆಯುತಿದೆ
ಕರೆಯುತಿದೆ..
ನೋಡು ನಾ
ಹೊರಟೆ..
ನಿನ ಸೇರಲು
’ನಾ’ ಅಳಿದು
ಒಂದಾಗಲು..
ಬರಿದಾಗಲು!

ಮೋಡಿಗಾರನ ಮಾಯೆ.. ಒಲವು!

ಒಲವೇ,

ಅದ್ಯಾವ ಮೋಡಿಗಾರನು ಹೆಣೆದನಲ್ಲ
ನನ್ನ ನಿನ್ನ ಮನವ
ಸೂಜಿ ದಾರಗಳಿಲ್ಲದೆ..

ಅತ್ತಿತ್ತ ಸರಿಯದಂತೆ ಬಂಧಿಸಿದನಲ್ಲ
ನನ್ನ ನಿನ್ನ ಆತ್ಮವ
ನಮಗೇ ತಿಳಿಯದಂತೆ..

ನೀನಿರು ಕೇಳದಂತೆ.. ಒಲವೇ!

ಒಲವೇ,

ನಾ ಮತ್ತೆ ಮಗುವಾಗಬೇಕು..
ಅತ್ತದು ನಕ್ಕದು ಕಾಣಿಸದಂತೆ

ನಾ ಕುಣಿಯಬೇಕು..
ಗೆಜ್ಜೆ ಸದ್ದು ಕೇಳಿಸದಂತೆ

ನಾ ಸ್ವರವೆತ್ತಿ ಹಾಡಬೇಕು..
ಪ್ರತಿಧ್ವನಿಗೊಳ್ಳದಂತೆ

ನಾ ಮುಗಿಲೆತ್ತರವೇರಬೇಕು..
ನೆಳಲು ಕಾಣಿಸದಷ್ಟಂತೆ

ನಾ ಪ್ರೀತಿಸಬೇಕು..
ಯಾರಿಗೂ ತಿಳಿಯದಂತೆ

ನಾ ನಿನ್ನ ಬೇಡಿಕಾಡಬೇಕು..
ನೀನಿರಬೇಕು ಕೇಳದಂತೆ

ಅವನೊಳು ಐಕ್ಯವಾಗಬೇಕು..
ಯಾರಿಗೂ ಅರಿವಾಗದಂತೆ

ನಾನಳಿಯಬೇಕು..
ಯಾರಿಗೂ ನೆನಪಾಗದಂತೆ!

09 November, 2013

ಶಿವ-ಶಿವೆ!ವಾಗರ್ಥಾವಿವ ಸಂಪ್ರಕ್ತೌ ವಾಗರ್ಥ ಪ್ರತಿಪತ್ತಯೇ|
ಜಗತಃ ಪಿತರೌ ವಂದೇ ಪಾರ್ವತೀ ಪರಮೇಶ್ವರೌ||
-ಕಾಳಿದಾಸ ವಿರಚಿತ ’ರಘುವಂಶ’ದ ಮೊದಲ ಶ್ಲೋಕ..

ಮಾತು ಮತ್ತು ಅರ್ಥದಂತೆ ಬೆರೆತಿರುವ
ಜಗತ್ತಿನ ತಂದೆತಾಯಿಯಂದಿರಾದ ಪಾರ್ವತಿ ಮತ್ತು ಪರಮೇಶ್ವರರಿಗೆ ನಮಸ್ಕಾರ||

ನನ್ನನ್ನು ಬಲು ಕಾಡಿದ, ಎಲ್ಲಾ ಪತಿ-ಪತ್ನಿಯರಿಗೆ ಮಾದರಿಯಾಗಿರುವ ಈ ಶ್ಲೋಕ ಮೊತ್ತ ಮೊದಲು ಎಂಟನೆಯ ತರಗತಿಯ ಮೊದಲ ಪಾಠದಲ್ಲಿ ಬಂದ ದಿನದಿಂದಾಗಿನಿಂದ ಇವತ್ತಿನವರೆಗೂ ನನ್ನೊಳಗೇ ಉಳಿದಿದೆ!

ಬಹಳ ದಿನದ ಕನಸು ಈ ಶಿವ-ಶಕ್ತಿ.. ಕೊನೆಗೂ ನನಸಾಗಿದೆ! (ಕೇರಳ ಶೈಲಿಯ ಮ್ಯೂರಲ್  ಕಲೆ)

07 November, 2013

ಸುಭಾಷಿತ-4


ಅಶ್ವಂ ನೈವ ಗಜಂ ನೈವ ವ್ಯಾಘ್ರಂ ನೈವ ಚ ನೈವ ಚ|
ಅಜಾಪುತ್ರಂ ಬಲಿಂ ದದ್ಯಾದ್ದೇವೋ ದುರ್ಬಲಘಾತಕಃ||

ಅಶ್ವವಲ್ಲ, ಆನೆಯಲ್ಲ, ಹುಲಿಯಂತೂ ಖಂಡಿತ ಅಲ್ಲವೇ ಅಲ್ಲ||
ಕುರಿಮರಿಯೇ ಬಲಿಗೆ ಯೋಗ್ಯ, ಅಂತೆಯೇ ದುರ್ಬಲನಾದವನಿಗೆ ದೇವನೂ ಕಷ್ಟಗಳನ್ನು ನೀಡುತ್ತಾನೆ||

06 November, 2013

ಅವಳು ಅಮರಳು..

ಅವಳು ಅಮರಳು..
----------------
ಅವಳ ದೃಷ್ಟಿ  ಹೊಸ್ತಿಲ ಬಳಿ ಎಳೆದ ರೇಖೆಗಳ ಮೇಲೆ..
ಹ್ಮ್.. ರಾಮ ( ಹೌದೇ?) ಒಳಗೆ..
ಅವಳಿವಳು ಅವನಿವನು ಅಡ್ಡಾದಿಡ್ಡಿ ರೇಖೆಗಳನ್ನೆಳೆದು ಬಿಟ್ಟಿದ್ದಾರೆ..
ಇವು ಲಕ್ಷಣ ರೇಖೆಗಳೆ!

ಅಂಗಣದಾಚೆ ಇರುವವರೆಲ್ಲಾ ರಾವಣರೇ, ಶೂರ್ಪನಖಿಯರೇ?
ಅವಳ ಮನವಂದಿತು..
ರಾಮನೂ ಕೃಷ್ಣನೂ ಇರುವರಲ್ಲಿ 
ರಾವಣ ದುಶ್ಯಾಸನರ ನಡುವಿನಲ್ಲಿ..
ಮತ್ತೆ ಸೀತೆಯೂ.. ರಾಧೆಯೂ..
ಶೂರ್ಪನಖಿ ರುಕ್ಮಿಣಿ ಸತ್ಯಭಾಮೆಯರೆಡೆಯಲ್ಲಿ!

ತಂಗಾಳಿ ಮುಂಗುರಳ ಸರಿಸಿತು..
ಹೊತ್ತು ತಂದ ವಸಂತ ಸುಗಂಧವನು..
ರತಿ ಮದನರ ಸಲ್ಲಾಪ ಹೂಗಿಡಗಳೆಡೆಯಲ್ಲಿ..
ಅವಳಿಗೇಕೆ ಉರಿ..
ದೂರದಲ್ಲಿ ಕೋಗಿಲೆಯ ಪಂಚಮ ಗಾನ..
ಎದೆಯೊಳಗೇಕೆ ಮಿಂಚು!

ನಸುಗೆಂಪು ಉಗುರುಗಳ ಹಸ್ತ ಕಾಣಿಸಿತು..
ಹಸ್ತದ ಒಡೆಯ ಸೆಳೆದನು.. 
ಹೊರ ಕರೆದನು..
ಕ್ಷಣಮಾತ್ರಕೂ ಚಿಂತಿಸದೇ ದಾಟಿ ನಡೆದವಳು ರೇಖೆಗಳನು..
ಕೊನೆಗೂ ಆತ್ಮಕರೆಗೆ ಮಣಿದಳು!

ಒಲಿದಳು ಒಲವಿನ ಒಲುಮೆಗೆ..
ಗೋಪಿಯಾದಳು  ಗೋಪಾಲನ ಮುರಳಿಯ ನಾದಕೆ..
ಶಿವೆಯಾದಳು ಸದಾಶಿವನ ಡಮರಿನ ನಾದಕೆ..
ನದಿಯಾದಳು ಸಾಗರನ ಶಂಖ ನಾದಕೆ..
ಪ್ರಾಣವನೇ ಅರ್ಪಿಸಿ ಅಮರಳಾದಳು ಒಲವಿನ ಅಮೃತಕೆ!

05 November, 2013

ಬದುಕು ಸಾರ್ಥಕವಾಯಿತೆಂಬ ಭಾವ.. ತಂದ ಸಂದೇಶ!


shiela...and photography!
shiela ..and painting!!
shiela ...and drawing!!!
shiela ... and kannada!!!!
and now...... shiela .... and sanskrit!!!!!!!!!!!
 loving it!!!

ಇಂದು ಅಪರಾಹ್ನ ಪಟಕ್ಕಂತ ನನ್ನ ಇನ್‍ಬಾಕ್ಸ್ ಗೆ ಬಂದು ಬಿದ್ದಾಗ.. ನಾನು ಅಯೋಮಯಳಾದೆ!!!

ಅಪ್ಪ, ಗುರು.. ಹೀಗೆ ಅತ್ಯಂತ ಹೆಚ್ಚಿನ ಸ್ಥಾನ ಪಡೆದ ಈ ಮಹನೀಯರು ಎಂದೂ ನನಗೆ ಯಾವ ಸಂದೇಶವನ್ನೂ ಕಳುಹಿಸಿರಲಿಲ್ಲ. ಮತ್ತವರಿಗೆ ನನ್ನ ಮನದಲ್ಲಿನ ಅವರ ಸ್ಥಾನದ ಅರಿವೂ ಇರಲಿಲ್ಲ!

ನನಗಿದೆಯೇ ಈ ಗೌರವಕ್ಕೆ ಅರ್ಹತೆ???”

’ಹ್ಮುಂ, ಇದೆ ಶೀಲಾ.. ನಿನಗಿದೆ. ಒಂಚೂರು ಹಿಂದಿರುಗಿ ನೀ ನಡೆದು ಬಂದ ಹೆಜ್ಜೆ ಗುರುತುಗಳನ್ನು ನೋಡಂತೆ ಒಮ್ಮೆ!’
ಮನ ಪಿಸುನುಡಿಯಿತು!

1994ರ ಹೆಜ್ಜೆ ಗುರುತು ಕಾಣಿಸಿತು..


“ಮೇಡಂ, ಪ್ಲೀಸ್ ನಂಗೆ ಸ್ಪೆಲ್ಲಿಂಗ್ ಎಲ್ಲಾ ಬರೊಲ್ಲ.. ಹೆಲ್ಪ್ ಮಾಡ್ತಿರಾ?”

ಮೂರುವರೆ ವರ್ಷದ ಮಗನ ಜತೆ ಅವನ ಸ್ಕೂಲಿಗೆ ಹೋಗಿದ್ದಾಗ ಆಕೆ ಬಂದು ನನ್ನನ್ನು ಕೇಳಿದಳು!

ಇದ್ದಕ್ಕಿದ್ದಂತೆ ಅಳುಕು ನನ್ನಲ್ಲಿ ಕಾಣಿಸಿತು! ಮೊನ್ನೆ ಮಗನ ಅಪ್ಲಿಕೇಷನ್ ಫಾರ್ಮ್ ತುಂಬಿದ್ದು ಅವನ ತಂದೆ! ನಾನು ಪೆನ್ನು ಹಿಡ್ಕೊಂಡು ನಾಲ್ಕು ವರ್ಷವಾಯಿತಲ್ಲ!

ಇಲ್ಲ ಅನ್ನಲು ಅಹಂ ಬಿಡಲಿಲ್ಲ!

“ಸರಿ, ಹೇಳಿಯಮ್ಮಾ!”

“ನನ್ನ ಮಗನಿಗೆ ಗಾಂಧಿ ಬಗ್ಗೆ ಬರೆಯಲು ಹೇಳಿದ್ದಾರೆ. ನನಗೆ ಕನ್ನಡದಲ್ಲಿ ಗೊತ್ತಾಗುತ್ತೆ, ಇಂಗ್ಲೀಷಿನಲ್ಲಿ ಗೊತ್ತಾಗೊಲ್ಲ. ಪ್ಲೀಸ್ ಹೆಲ್ಪ್ ಮಾಡಿ!”

ಪೆನ್ನು ತೆಗೆದು ಮೋಹನದಾಸ ಕರಮಚಂದಯೇನೋ ಬರೆದೆ.. ಗಾಂಧಿ ಬರೆಯುವಾಗ.. ಅರೇ Gha.. ಮತ್ತೆ dhi.. ನಾ ಅಥವಾ di ನಾ..ಅಲ್ಲಲ್ಲ.. Ga ಅಲ್ವಾ? ಓಹ್! ನಂಗೆ ಏನೂ ನೆನಪಿಲ್ಲ.. ಕುಸಿದುಹೋದೆ! ಮುಗಿತು ನನ್ನ ಕತೆ.. ಮೊದಲೇ ನೆಂಟರ ಸ್ನೇಹಿತರೆಲ್ಲ ಹೆಸರು.. ಘಟನೆಗಳು ಮಸುಕಾಗ್ತಿತ್ತು.. ಈಗ ಕಲಿತ ವಿದ್ಯೆಯೂ ತೀರ್ಥವಾಗಿಬಿಟ್ಟಿತೆ???

ಮನೆಗೆ ಮರಳಿದವಳು ಕೆಲವೊಂದು ನಿರ್ಧಾರ ತೆಗೆದುಕೊಂಡೆ! ಮಗನಿಗೆ ಕಲಿಸುತ್ತ ಮತ್ತೆ ಮರೆತ ವಿದ್ಯೆಯನ್ನು ನೆನಪಿಗೆ ತಂದೆ!

ಹುಟ್ಟಿದ 11ನೇ ದಿನ ಆಆಆ.. ಅಂತ ಶುರು ಮಾಡಿದ ಬಾಯಿ ಮಗ ಮುಚ್ಚಿದಾಗ ಅವನಿಗೆ ಎರಡುವರೆ! ಆಗಲೇ ಮಗಳು ಆಆಆ.. ಅಂದಳು. ಅವಳು ಮುಚ್ಚಿದಾಗ ಭರ್ತಿ 12ವರ್ಷ! ಮತ್ತೆ ಎಲ್ ಕೆಜಿಯಿಂದ ಕಲಿಯಲು ಆರಂಭಿಸುತ್ತಾ ಆತ್ಮವಿಶ್ವಾಸ ವೃದ್ಧಿಯಾಯಿತು. ಮಕ್ಕಳು ತರುವ ಶೀಳ್ಡ್ ಗಳಲ್ಲಿ ನನ್ನ ಕನಸು ನನಸಾಗುತ್ತಿತ್ತು.. ಪ್ರಶಸ್ತಿ ಪತ್ರಗಳ ಪಟ್ಟಿ ಬೆಳೆಯುತ್ತಲೇ ಹೋಯಿತು. ಕೊನೆಗೂ ಹುಸ್ ಅಂತ ಆರಾಮದ ದಿನಗಳೂ ಬಂದವು.. ಸಮಯನೂ ಕೂಡಿ ಬಂತು!

ಕುಂಚ ಮರಳಿತು ಬೆರಳಿಗೆ! ಅಂತರ್ಜಾಲ ಬೆಳೆಸಿತು.. ಕನಸನ್ನು ಬಿತ್ತಿತು! ನನ್ನದೇ ಚಿತ್ರ ಪ್ರದರ್ಶನದ ಕನಸು ಕಾಣುವ ಮನಸೀಗ!  ಮಧ್ಯದಲ್ಲೇ ಬರೆಯುವ ಸೆಳೆತ.. ಕೆಮರಾ ಹಿಡಕೊಂಡು ಸಿಕ್ಕಿದೆಲ್ಲ ಕ್ಲಿಕ್ಕಿಸುವ ಆಸೆ! ನಿಧಾನವಾಗಿ ಕೆಮರಾದಲ್ಲಿನ ಎಲ್ಲಾ ಸೌಲಭ್ಯ ಬಳಸುವ ಉಮೇದು.. ಫೇಸ್ ಬುಕ್ ಅಣ್ಣಂದಿರ ಭೇಷ್! ಮತ್ತೆ ಹಿಂದಿರುಗಿ ನೋಡಲಿಕ್ಕುಂಟೇ! ಮುಂಜಾವು ಸ್ನೇಹಿತರ ಹಿತಮಿತ ಚಪ್ಪಾಳೆ.. ಮತ್ತಷ್ಟು ಬರಹಗಳ ಸಾಲು.. ಭಾವಗಳು ನಡೆದವು ತೆರೆದ ಮನದಿಂದ ಅಕ್ಷರ ರೂಪಗಳಾಗಿ.. ತೇರನೇರಿ ಕುಳಿತವು! ಆತ್ಮತೃಪ್ತಿ.. ಇನ್ನು ಸಾವು ಬಂದರೂ ಅಪ್ಪಿಕೊಳ್ಳುವ ತವಕ! ಸ್ನೇಹಹಸ್ತಗಳ ಸಿಹಿ ಮಾತು, ಕಣ್ಣೊರಸುವಿಕೆ.. ಆ ಅಪ್ಪುಗೆ.. ಇದುವೇ ನನ್ನ ಬದುಕು.. ಈಗ ನಾ ಬಾಳುತಿರುವೆ ನಿಜದಿ!


ಹ್ಮೂಂ.. ಇದೆಲ್ಲ ಅಲ್ಪ ತೃಪ್ತಿ! ಇಂದಿದ್ದದು ನಾಳೆ ಇರೊಲ್ಲ..ಸೆಳೆಯುವುದು ವಿಧಿ.. ಬಂದು ಹುಳಿ ಹಿಂಡುತ್ತದೆ. ಇರಲಿ, ಇವತ್ತಿನ ಖುಷಿ ಇವತ್ತಿಗೆ! ನಾಳೆ ಬರುವ ನೋವು ನಾಳೆಗೆ.. ಎದುರಿಸಲು ಕೊಡು ಎನಗೆ ಆತ್ಮಸ್ಥೈರ್ಯವನು ನನ್ನೊಡೆಯ!!!

04 November, 2013

ನಾ ಪಾಮರ.. ಆದರೂ ನನ್ನ ಕಿಂಚಿತ್ ಬುದ್ಧಿಗೆ ನಿಲುಕಿದೀ ಮಾತನು ಹೇಳದಿರಲಾರೆ!


“ಬುದ್ಧಿಯ ಪಕ್ವತೆಗೆ, ಉದ್ಧೀಪನಕ್ಕೆ ಬೇಕಾದ  ಸರಕುಗಳು ಬದುಕಿನ ಪಥದಲಿಲ್ಲ”
ಅನ್ನುವರು ಶ್ರೀಮಾನ್ಯ ಮಿತ್ರರು!

ನಾ ಪಾಮರ.. ಆದರೂ ನನ್ನ ಕಿಂಚಿತ್ ಬುದ್ಧಿಗೆ ನಿಲುಕಿದೀ ಮಾತನ್ನು ಹೇಳದಿರಲಾರೆ,

ಮುಂದಡಿಯಿಡಲು ಎತ್ತಿದ ಹೆಜ್ಜೆಯನು ಅಲ್ಲೇ ಇಟ್ಟು ಒಮ್ಮೆ ಹಿಂದಿರುಗಿ ನೋಡಿದರೆ ಬಂದ ಹಾದಿಯಲಿ ಮೂಡಿದ ಹೆಜ್ಜೆ ಗುರುತು ನಮ್ಮ ವ್ಯಕ್ತಿತ್ವಕ್ಕೆ ಕನ್ನಡಿಯಾಗುತ್ತದೆ..
“ತಪ್ಪುಗಳನ್ನು ಪುನರಾವರ್ತಿಸಬೇಡ ಅನ್ನುತ್ತದೆ!”
ಸಾಕಲ್ಲವೆ, ಅರಿಯಲು ಯತ್ನಿಸಿದರೆ ಪಕ್ವತೆಗೆ ದಾರಿ ಹುಟ್ಟುತ್ತದೆ!

ಮುನ್ನಡಿ ಇಡುವ ಮೊದಲು ಈ ಮೊದಲು ಸಾಗಿದ ಹೆಜ್ಜೆಗಳ ಗುರುತುಗಳು.. ಸಾರಿ ಸಾರಿ ಹೇಳುತ್ತದೆ, ಇತಿಹಾಸದ ಪುಟಗಳು ತೆರೆದುಕೊಳ್ಳುತ್ತದೆ.. ಅರಿಯಲೆತ್ನಿಸಿದರೆ ಉದ್ಧೀಪನಕ್ಕೆ ಬೇಕಾದ ಸರಕುಗಳು ಬಿದ್ದಿವೆ..
ಎತ್ತಿಕೊಳ್ಳುವವರು ಎತ್ತಿಕೊಂಡು ಬೆಳಕಿನತ್ತ ಹೆಜ್ಜೆ ಹಾಕುತ್ತಾರೆ!!!

03 November, 2013

ಸುಭಾಷಿತ-3

ಏಕ ಏವ ಖಗೋಮಣಿ ಚಿರಂಜೀವತು ಯಾಚಕಮ್|
ಮೃಯತೆ ವಾ ಪಿಪಾಸಾರ್ತೋ ಯಾಚತೆ ವಾ ಪುರಂದರಮ್||

ಯಾಚಕರಲ್ಲಿ  ಒಂದೇ ಒಂದು ಪಕ್ಷಿರಾಜ  ಚಿರಂಜೀವಿಯಾಗಲಿ|
ಬಾಯಾರಿಕೆಯಿಂದ ಮರಣವನೊಪ್ಪುವುದಾದರೂ, ಪುರಂದರನ ಹೊರತು ಮತ್ಯಾರಲ್ಲೂ ಯಾಚನೆಮಾಡಲಾರದು||

(ಪುರಂದರ=ಇಂದ್ರ, ಜಾತಕ ಪಕ್ಷಿ ಮಳೆನೀರಿನಿಂದ ಬಾಯಾರಿಕೆ ಇಂಗಿಸಿಕೊಳ್ಳುದೆಂಬ ನಂಬಿಕೆ, ಖಗೋಮಣಿ=ಜಾತಕ ಪಕ್ಷಿ)

ಸುಭಾಷಿತ-2

ನ ವಾ ಅರೆ ಮೈತ್ರೆಯೀ ಪತ್ಯುಃ ಕಾಮಾಯ ಪತಿಃ ಪ್ರಿಯೋ ಭವತಿ|
ಆತ್ಮಾನಸ್ತು ಕಾಮಾಯ ಪತಿಃ ಪ್ರಿಯೋ ಭವತಿ||

ಮೈತ್ರೆಯೀ, ಸ್ತ್ರೀಗೆ ಪತಿಯು ಕಾಮನೆಗಳಿಂದ ಪ್ರಿಯನಾಗುವುದಿಲ್ಲ|

ಬದಲಿಗೆ ಅವನ ಆತ್ಮದ ಮೂಲಕ ಪ್ರಿಯನಾಗುತ್ತಾನೆ||

ಸುಭಾಷಿತ-1


ಅತಿಪರಿಚಯಾದವಜ್ಞಾ ಸಂತತಗಮನಾತ್ ಅನಾದರೋ ಭವತಿ|
ಮಲಯೆ ಭಿಲ್ಲಾ ಪುರಂಧ್ರೀ ಚಂದನತರುಕಾಷ್ಟಮಂ ಇಂದನಂ ಕುರುತೆ||

ಅತಿಯಾದ ಪರಿಚಯ, ಅಳತೆ ಮೀರಿ ಸಮೀಪಿಸಲೆತ್ನಿಸುವುದು ಅನಾದರಕ್ಕೆ ಕಾರಣವಾಗುತ್ತದೆ|

ಮಲಯಪರ್ವತ ವಾಸಿ ಸ್ತ್ರೀ ಚಂದನದ ಕಟ್ಟಿಗೆಗಳನ್ನೇ ಉರುವಲುಗಳನ್ನಾಗಿ ಉಪಯೋಗಿಸುತ್ತಾಳೆ||

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...