ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

13 October, 2013

ಯಾರು ಹೊಣೆ???

ಯಾರು ಹೊಣೆ?
_______________

“ಮೇಡಂ, ಹೇಗೆ ಕಲಿಯುತ್ತಿದ್ದಾಳೆ ನನ್ಮಗಳು?”

ದೈನ್ಯಭಾವದಿಂದ ನನ್ನನ್ನು ಕೇಳಿದಾಗ ನನಗೆ ಏನು ಉತ್ತರ ಕೊಡುವುದೆಂದು ತೋಚಲಿಲ್ಲ.  ಅವರ ಮಗಳು ಏಳನೆಯ ತರಗತಿಯಾದರೂ ಭಾಗಾಕಾರ, ಗುಣಾಕಾರಗಳನ್ನು ಸರಿಯಾಗಿ ತಿಳಿದಿಲ್ಲ.. ನೋಟು ಪುಸ್ತಕದಲ್ಲಿ ಸ್ಪೆಲಿಂಗ್ ತಪ್ಪು ಎಲ್ಲೆಲ್ಲೂ..

ನಾನು ಮೌನವಾಗಿ ನಿಂತುದನ್ನು ನೋಡಿ,

“ನೆನಪುಂಟಾ ಈ ಹಿಂದೆ.. ಬಹುಶಃ ಮೂರು ವರ್ಷದ ಹಿಂದೆ ಬಂದಿದ್ದೆ, ನಿಮ್ಮಲ್ಲಿ ಮಗಳನ್ನು ಕಳುಹಿಸಲು.”

“ಹೌದು, ನಿಮ್ಮನ್ನು ಎಲ್ಲೋ ನೋಡಿದ ಹಾಗೆ ಆಗಿತ್ತು! ಅದೇ ಪ್ರಾಬ್ಲೆಮಾ?”

“ಹೌದು, ನೋಡಿ! ನನ್ನ ಮಗಳು ವಿದ್ಯೆಯ ಗತಿ ಏನಾಯ್ತೆಂದು!”

ಮೂರು ವರ್ಷದ ಹಿಂದೆ ಒಂದು ಸಂಜೆ ಆಕೆ ಮನೆಗೆ ಬಂದಿದ್ದರು. ನನ್ನಲ್ಲಿ ಮನೆಪಾಠಕ್ಕೆ ಬರುವವರಿಗೆ ಮೊದಲೇ ಒಂದು ಮಾತು ಹೇಳುತ್ತಿರುತ್ತೇನೆ, “ನೋಡಿ, ನಾನು ಜಾದುಗಾರಳಲ್ಲ. ನನ್ನಲ್ಲಿ ನಿಮ್ಮ ಮಕ್ಕಳನ್ನು ಕಳುಹಿಸಿದ ಕೂಡಲೇ ಅವರು ಎಲ್ಲದರಲ್ಲೂ ಪಾರಂಗತರಾಗಲು. ಅಲ್ಲದೇ ನಾನು ಎಲ್ಲಾ ತರಗತಿಯವರಿಗೂ ಜತೆಯಲ್ಲೇ ಕಲಿಸುವುದು.. ಹಾಗಾಗಿ ಗೊತ್ತಿಲ್ಲದನ್ನು ವಿವರಿಸಿ ಹೇಳುತ್ತೇನೆ.. ಮನನ ಮಾಡಿಕೊಳ್ಳಲು ಸುಲಭ ದಾರಿ ತೋರಿಸುತ್ತೇನೆ.. ಉಳಿದಂತೆ ಅವರೂ ಪ್ರಯತ್ನ ಮಾಡಬೇಕು.. ಮತ್ತು ನೀವು ಮನೆಯವರು ಆಗಾಗ ನಿಮ್ಮ ಮಕ್ಕಳ ಬೆಳವಣಿಗೆಯ ಬಗ್ಗೆ ಗಮನಕೊಡುತ್ತಿರಬೇಕು.”

ಹಾಗೆ ಅವರಿಗೂ ಹೇಳಿದ್ದೆ.. ಕೆಲಸಕ್ಕೆ ಹೋಗುವ, ಅಷ್ಟೋಂದು ಅಕ್ಷರ ಜ್ಞಾನವಿರದ ತಾಯಂದಿರಿಗೆ ಕಷ್ಟ, ಆದರೆ ಇವರು ನೋಡಿದರೆ ಓದಿದವರ ಹಾಗೆ ಕಾಣುತಿತ್ತು, ಕೆಲಸಕ್ಕೂ ಹೋಗುವುದಿಲ್ಲವಂತೆ! ನನಗೆ ಆಶ್ಚರ್ಯವಾಗಿ ಕಾರಣ ಕೇಳಿದರೆ ತುಂಬಾ ಸಂಕೋಚಪಟ್ಟರು.

ತಲೆತಗ್ಗಿಸಿ, ನಮ್ಮ ಅತ್ತೆಯವರಿಂದ ಮಕ್ಕಳ ಓದು ಹಾಳಾಗುತ್ತಿದೆ ಅಂದಾಗ ನನಗೆ ಆಶ್ಚರ್ಯವಾಗಲಿಲ್ಲ. ನೋಡಿದ್ದೆ ಇಂತವರನ್ನೂ!

ಬೆಳಿಗ್ಗೆಯಿಂದ ರಾತ್ರಿ ಮಲಗುವ ವರೆಗೂ ಟಿ ವಿ ಕಿರುಚುತ್ತಲೇ ಇರುತ್ತದೆ,, ಆ ಹಾಳು ಮೂಳು ಧಾರವಾಹಿಗಳನ್ನು ಮಕ್ಕಳು ನೋಡುತ್ತಿದ್ದಾರೆ.. ಕೋಣೆಯಲ್ಲಿ ಹೋಗಿ ಇಟ್ಟು ನೋಡಿಯೆಂದರೆ ಕೆಂಡದಂತಹ ಕೋಪ.. ನನಗೇನು ಇದೆ ಬೇರೆ ಮನೋರಂಜನೆ ಅಂತ ಕೂಗಾಟ! ನನ್ನ ಮನೆಯಲ್ಲಿ ನನ್ನನ್ನು ಮೂಲೆಗುಂಪು ಮಾಡ್ತಿಯಾ!
ಒಂದೇ ಟಿ ವಿಗಾಗಿ ಮಕ್ಕಳು ಮತ್ತೆ ಅವರ ಮಧ್ಯೆ ಜಗಳ ನೋಡಿ ಇನ್ನೊಂದು ತಂದ್ವಿ. ಕೂತಲ್ಲೇ ಕೂತು ಡಯಾಬಿಟಿಸ್, ಬ್ಲಡ್ ಪ್ರೆಝರ್.. ಸಿಕ್ಕಿದೆಲ್ಲಾ ರೋಗ ತಂದುಕೊಂಡಿದ್ದಾರೆ. ಒಂಚೂರು ವಾಕ್ ಮಾಡಿ ಅಂದ್ರೆ ಸುಸ್ತು ಅಂತಾರೆ. ಮೊದಮೊದಲು ಸುಮ್ಮನಿದ್ದ ಮಕ್ಕಳು ಅಜ್ಜಿಗೆ ಎದುರು ಜವಾಬು ಕೊಡುತ್ತಿದ್ದಾರೆ, ಇದೆಲ್ಲಾ ನೀನೇ ಕಲಿಸಿದ್ದು ಅಂತ ನನ್ನ ಮೇಲೆ ರೇಗಿ ಕೂಗಿ.. ಸುಸ್ತಾಗಿ ಮನೆಗೆ ಬಂದ ಮಗನ ಕಿವಿ ಊದ್ತಾರೆ. ಇವರಿಗೆ ಎಲ್ಲ ಗೊತ್ತಿದ್ದರೂ ಅಮ್ಮನೆದುರಿಗೆ ನನ್ನ ಮೇಲೆ ರೇಗ್ತಾರೆ.
ಟ್ಯೂಷನಿಗೆ ಕಳುಹಿಸುವ ಅಂದದಕ್ಕೂ ಬೇಡ.. ಆಡಿಕೊಂಡಿರುವ ಮಕ್ಕಳಿಗೆ ಹೆಚ್ಚು ಓದು ಓದು ಅಂತ ಹೇಳಬೇಡ.. ನನ್ನ ಮಗ ಎಲ್ಲಾ ಕಲಿತಿಲ್ವಾ ಹಾಗೆ ಕಲಿತಾರೆ. ಹೀಗೆ ಹಾಗೆ ಪಿರಿಪಿರಿ ಮಾಡ್ತಿತಾರೆ”

ಕಣ್ಣಲ್ಲಿ ಹನಿಗಳು ಮಡುಗಟ್ಟಿದ್ದವು.. ಸುಮ್ಮನೆ ಅವರ ಬೆನ್ನು ತಟ್ಟಿದ್ದೆ. ನಂತರ ಅವರು ಮತ್ತೆ ಬರಲೇ ಇಲ್ಲ. ನನ್ನ ಮನದ ಮೂಲೆಯಲ್ಲಿ ಈ ನೆನಪುಗಳು ಹಾಗೆ ಇದ್ದವು.

ಈಗ ಮೂರು ವರ್ಷದ ನಂತರ ನನ್ನೆದುರು ಮಗಳು ಹೇಗೆ ಕಲಿಯುತ್ತಿದ್ದಾಳೆ ಅಂದರೆ ನಾನೇನು ಹೇಳಲಿ!  ಅಡಿಪಾಯ ಸರಿಯಾಗಿಲ್ಲದಿದ್ದರೆ ಹೀಗೆ ಆಗುತ್ತದೆ..

ಮೊದಮೊದಲು ಕಡಿಮೆ ಅಂಕ ತೆಗೆದುಕೊಂಡಾಗ ನಾಚಿಕೆ ಇರುತಿತ್ತು.. ಈಗ ಅಂತಹುದೇನು ಇಲ್ಲ ಅಂದಾಗ ನಾನು ಅದನ್ನು ಗಮನಿಸಿದ್ದೇನೆ ಅಂದೆ.

“ಬುದ್ಧಿಹೇಳಿದರೆ ಮೌನವಾಗಿ ಎಲ್ಲವನ್ನೂ ಕೇಳಿ ಕೊನೆಗೆ ಅಲ್ಲಿಂದ ಸುಮ್ಮನೆ ದಪ್ಪ ಮುಖಮಾಡಿ ಎದ್ದುಹೋಗುತ್ತಾಳೆ. ಈಗೀಗ ಸಿನೆಮಾದ ಹಾಡುಗಳಿಗೆ ಕುಣಿಯುವುದು ಜಾಸ್ತಿಯಾಗಿದೆ.”

ಮಾನಸಿಕ ತಜ್ಞರ ಹತ್ತಿರ ಕರಕೊಂಡು ಹೋಗಿ ಅಂದರೆ ಬರುವುದಿಲ್ಲವೆಂದು ಹಠಮಾಡುತ್ತಾಳೆ ಅಂದರು.


ಹೂಂ, ಮನೆಯಲ್ಲಿರುವ ಹಿರಿಯರು ಹಠ ಹಿಡಿದರೆ ಮತ್ತೆ ಏನು ಮಾಡಲು ಸಾಧ್ಯ! ಅತ್ತ ಅವರಿಗೂ ಬುದ್ಧಿ ಹೇಳುವ ಹಾಗಿಲ್ಲ.. ಮಕ್ಕಳು ಕೇಳಲು ತಯಾರಿಲ್ಲ.. 

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...