ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

29 October, 2013

ಕಾಕ್‍ಟೈಲ್ ಕತೆಯ ಮುಂದುವರಿದ ಮಾತುಕತೆ..
---------------------------------------

“ಓಯ್, ಬಾರಿ ಬಾರಿ ಡಿಬೇಟೆಲ್ಲಾ ನಡಿತಿದೆ.. “

ಮೆಸೇಜು ಬಂತು!

“ನಿಂದೇನು ಅಭಿಪ್ರಾಯ? ಅದನ್ನು ಹೇಳು! ಮೊನ್ನೆ ಮೊನ್ನೆ ಮದುವೆಯಾಗಿದ್ದಿ.. ನಮ್ಮ ಮಧ್ಯೆ ಒಂದು ಜನರೇಶನ್ ಗ್ಯಾಪೂ ಇದೆ! ನಿನ್ನ ಮಾತನ್ನೂ ಕೇಳೋಣ!”

“ಹೆ.. ಹೆ.. ನಂಗೆ ತಲೆಬುಡ ಗೊತ್ತಾಗ್ಲಿಲ್ಲ.. L

“ಒಕೆ, ನೋಡು, ಹೆಂಗಸರು ವಿವಿಧ ಹಣ್ಣುಗಳಂತೆ ಮತ್ತೆ ಗಂಡುಗಳಿಗೆ ಒಂದೇ ಹಣ್ಣಿಗಿಂತ fruit salad ಇಷ್ಟವಂತೆ! ನೀನೇನ್ತಿಯಾ?

ಹಾಗೆಯೇ ಅದೇ ತರಹ ಒಂದು ಹೆಣ್ಣು ಗಂಡಸರ ಬಗ್ಗೆ ಅನ್ಕೋಬಹುದ?”

ತಟಕ್ಕಂತ ಉತ್ತರ, “ಇಲ್ಲ!”

“ಯಾಕೆ ಗಂಡು ಮತ್ತು ಹೆಣ್ಣಿನ ಮಧ್ಯೆ ಭೇದ?”

ಒಂದು ಹತ್ತು ನಿಮಿಷದ ನಂತರ ಬಂತು ಉತ್ತರ,

“ಗಂಡಿನ ಮನಸು ಮರ್ಕಟದಂತೆ.. ಯಾವಾಗಲೂ ಹಾರುತ್ತಲೇ ಇರುತ್ತದೆ. ನೀವು ಹೆಂಗಸರು ಹಾಗಲ್ಲ.. women have more control over their minds!  ಮರ್ಕಟತನ ಗಂಡಿನ ಜೀನ್ಸ್ ನಲ್ಲಿದೆ! ಬಹಳ ಹಿಂದಿನಿಂದಲೂ ಹೀಗೆ ನಡೆದು ಬಂದಿದೆ. ನಮ್ಮನ್ನು ಬದಲಾಯಿಸಲಾಗುವುದಿಲ್ಲ. ಬದಲಾಯಿಸಲೂ ಯತ್ನಿಸಬೇಡಿ.

ದೇವರ ಸೃಷ್ಟಿಸುವಾಗ ಕಾರಣವಿದ್ದೇ ಹೆಣ್ಣನ್ನು ಸೃಷ್ಟಿಸಿದ್ದಾನೆ. ಗಂಡು ಬರೇ ಇಲ್ಲಿ ಆಹಾರ ಒದಗಿಸಲು.. ಮತ್ತೆ ಗೊತ್ತಲ್ಲ, ಮಕ್ಕಳು..ಇತ್ಯಾದಿ! So just leave us to enjoy! ನೀವು ಹೆಣ್ಣುಗಳು ಯಾವುದೋ ಮಹತ್ತರ ಕಾರ್ಯಕ್ಕಾಗಿ ಸೃಷ್ಟಿಯಾಗಿದ್ದಿರಿ.. ಮತ್ತದನ್ನು ಪೂರೈಸಲು ನಿಮ್ಮ ಏಕಾಗ್ರತೆಯನ್ನು ಉಪಯೋಗಿಸಿ.. !”

ನಾನು ಉತ್ತರಿಸಲಿಲ್ಲ..

“ಯಾಕೆ? ಕೋಪ ಬಂತಾ?”

“ನೋಡು ಆ ಭಗವಂತ ಇಬ್ಬರನ್ನೂ ಅದೇ ಗಂಡು-ಹೆಣ್ಣು ಒಂದೇ ಭಾವದಲ್ಲಿ ಸೃಷ್ಟಿ ಮಾಡಿದ್ದಾನೆ. ಮತ್ತು ಈ ನಿನ್ನ ಆಲೋಚನೆಗೆ ಕಾರಣಗಳುಇವೆ.. ಅದು ನೀನು, (ಇಲ್ಲಿ ನೀನು ಅಂದರೆ ಯಾರೆಲ್ಲ ಇದೇ ರೀತಿಯಲ್ಲಿ ಆಲೋಚಿಸುತ್ತಾರೆ ಅವರು) ಬೆಳೆದ ವಾತಾವರಣ! ಅಲ್ಲಿ ಯಾವಾಗಲೂ ಗಂಡು ಸರಿ... ಹೆಚ್ಚು ಕಡಿಮೆ ಏನಾದರೂ ಅಂದರೆ, ಅರೇ, ಅವನು ಗಂಡು ಹೇಗಿದ್ರೂ ನಡಿತದೆ..

ನೋಡು, ನಾನು ನನ್ನ ಮಗ ಮಗಳಲ್ಲಿ ಭೇದ ಭಾವ ಮಾಡದೇ ಬೆಳೆಸಿದ್ದೆ.. ಮಗನನ್ನು ಯಾವತ್ತೂ ಬೆತ್ತಲೆ ಬಿಟ್ಟಿರಲಿಲ್ಲ. ಹೇಗೆ ಒಂದು ಹುಡುಗಿಗೆ ನಾಚಿಕೆಯಾಗ್ತಿತ್ತೋ  ಅವನಿಗೂ ಹಾಗೇ ಆಗ್ತಿತ್ತು. ಅವನ ತಲೆಯಲ್ಲಿ ತಾನು ಗಂಡು ಮತ್ತು ಏನು ಮಾಡಿದ್ರೂ ಚಲ್ತಾ ಹೈ ಎಂಬ ಭಾವ ಹುಟ್ಟಲೂ ಬಿಟ್ಟಿರಲಿಲ್ಲ. ತನ್ನ ತಂಗಿಗೆ ಯಾವ ರೂಲ್ ಇತ್ತೋ ಅದು ಅವನಿಗೂ ತಾಗ್ತಿತ್ತು. ಅವನೆಂದಾದರೂ ತಂಗಿಗೆ ಅಂತಹ ಮಾತೂ ಹೇಳದಂತೆ ನೋಡಿಕೊಂಡಿದ್ದೆ. ರಾತ್ರಿ ಹೊತ್ತು ಲೇಟ್ ಬರ್ಲಿಕ್ಕೆ ಅವನಿಗೂ ಅನುಮತಿ ಇರಲಿಲ್ಲ.  ಇಂದಿನ ದಿನದಲ್ಲಿ ಗಂಡಿನಷ್ಟೇ ಎತ್ತರ ಬೆಳೆಯುತ್ತಿದ್ದಾಳೆ ಹೆಣ್ಣು.. ಆಲೋಚನೆ ಮಾಡು- ಪ್ರತೀಯೊಂದಕ್ಕೂ  ಪೈಪೋಟಿ ಒಡ್ಡಿ ನಡೆಯುತ್ತಿದ್ದಾಳೆ ಹೆಗಲಿಗೆ ಹೆಗಲು ಸೇರಿಸಿ..

 ಮಾತು ಮಾತಿಗೂ ಇಂತಹ ಭಾವಗಳಿಗೆ ನಮ್ಮಲ್ಲಿ ಹರಿಯುವ ಹಾರ್ಮೋನ್‍ಗಳು ಕಾರಣ ಅಂತ ಹೇಳುವುದು ಬಿಡು! ಹೆಣ್ಣಲ್ಲೂ ಅಂತಹುದೇ ಹಾರ್ಮೋನ್ ಉಕ್ಕುತ್ತೆ. ತನ್ನ ಸಂಸ್ಕೃತಿ ಮತ್ತು ಮರ್ಯಾದೆಯನ್ನು ಅವಳು ಹೇಗೆ ಪಾಲಿಸಬೇಕೋ ಗಂಡಿಗೂ ಅದೇ ನೀತಿ ಅನ್ವಯಿಸುತ್ತದೆ. ಮನಸ್ಸನ್ನು ನಿಗ್ರಹ ಹೆಣ್ಣು ಮಾಡಿಕೊಳ್ಳಲು ಬಲ್ಲವಳಾದರೆ ಗಂಡಿಗೂ ಸಾಧ್ಯ.. ಆದರೆ ಅವನಿಗದು ಬೇಡ, ತನ್ನ ಹಾರ್ಮೋನೋ, ತಾನಿರುವುದು ಹಾಗೆಯೇ.. ಎಂಬ ನೆವನಗಳನ್ನು ಆಶ್ರಯಿಸುತ್ತಾನೆ. ಮನಸ್ಸನ್ನು ಉತ್ತಮ ವಿಚಾರಗಳತ್ತ ಹರಿಸಿದರೆ ನಿಗ್ರಹವು ತನ್‍ತಾನೇ ಸಾಧ್ಯ! ಮುಖ್ಯವಾಗಿ ಒಂದು ಮಾತು, ನೀನು ಮತ್ತೊಂದು ಹೆಣ್ಣಿನತ್ತ ಕಣ್ಣು ಹಾಯಿಸುವ ಮೊದಲು ಒಮ್ಮೆ ನಿನ್ನವಳತ್ತ ಪರಪುರುಷನು ಕಣ್ಣು ಹಾಕುವುದನು ಕಲ್ಪಿಸಿಕೋ.. ಅಂತೆಯೇ ನೀನು ಒಮ್ಮೆಯಾದರೂ ಒಂದು ಸ್ತ್ರೀ ಸ್ಥಾನದಲ್ಲಿ ನಿಂತು ತನ್ನ ಪತಿ ಪರಸ್ತ್ರೀಯರೊಂದಿಗಿರುವ ದ್ರಶ್ಯವನ್ನು ಕಲ್ಪಿಸಿಕೊ!  ಸಾಕು, ನಿನ್ನ ಆಲೋಚನೆಗಳು ಬದಲಾಗಲು ಹೆಚ್ಚು ಸಮಯ ಬೇಕಿಲ್ಲ!”

ಗೊತ್ತಿಲ್ಲ ಮುಂದೆ ಅವನ ತಲೆಯಲ್ಲಿ ನಡೆಯಿತೇನೆಂದು.. ಯಾಕೆಂದರೆ ಮಾತುಕತೆ ಮುಂದುವರಿಯಲಿಲ್ಲ..

28 October, 2013

ಸ್ನೇಹ, ಚರ್ಚೆ, ಕತೆ.. ಒಂದು ರೀತಿ ಕಾಕ್ ‍ಟೈಲ್ ಈ ಕತೆ!-2

ಸ್ನೇಹ, ಚರ್ಚೆ, ಕತೆ.. ಒಂದು ರೀತಿ ಕಾಕ್ ‍ಟೈಲ್ ಈ ಕತೆ!-2
---------------------------------------------

ಅಂದ್ರೆ ಒಂದು ಗಂಡು ಹೆಣ್ಣಿನ ಮಧ್ಯೆ ಸಾಮಾನ್ಯ ಸ್ನೇಹ ಇರೊಲ್ವೆ?”

“ಯಾಕಿಲ್ಲ! ಖಂಡಿತ ಇರುತ್ತದೆ! ಮತ್ತದು ಪವಿತ್ರವಾಗಿ ಇರುತ್ತದೆ ಸಹ! ಗಂಡು-ಗಂಡು, ಹೆಣ್ಣು-ಹೆಣ್ಣು ಮಧ್ಯದಲ್ಲಿರುವಂತೆ ಗಂಡು-ಹೆಣ್ಣು  ಸಹಮನಸ್ಕರಾಗಿ, ಸಮಹವ್ಯಾಸಗಳಿದ್ದರೆ.. ಒಮ್ಮೆಮ್ಮೆ ಅಪವಾದವೆಂಬಂತೆ ವಿರುದ್ಧ ಸ್ವಭಾವದವರ ಮಧ್ಯೆಯೂ ಒಂದು ಸುಭದ್ರ ಸಂಬಂಧ ಏರ್ಪಡುತ್ತದೆ..  ಅಲ್ಲಿ ಯಾವುದೇ ಕಾಮನೆಗಳ ಲೇಪವಿರುವುದಿಲ್ಲ, ಅಂತಹ ಸ್ನೇಹ ಹಿಂದೆಯೂ ಇತ್ತು, ಈಗಲೂ ಇದೆ.. ಮುಂದೆಯೂ ಇರುತ್ತದೆ!

ಗಂಡು ಹೆಚ್ಚಾಗಿ ಹೊರಗೆ ಇರುವುದರಿಂದ ಹೆಚ್ಚು ಜನ ಸಂಪರ್ಕ ಬರುವುದರಿಂದಲೂ ಮತ್ತು ಅವನನ್ನು ಬಯಸುವಂತಹ ಹೆಣ್ಣು ಸಿಗುವ ಅವಕಾಶಗಳು ಹೆಚ್ಚು ಇರುವುದರಿಂದ ಇಂತಹ ಮಾತು ಚಾಲ್ತಿಯಲ್ಲಿದೆ. ಹೆಣ್ಣಿನಂತೆ ಗಂಡೂ ಒಂದು ಸಂಗಾತಿಗೆ ನಿಷ್ಠಾವಂತನಾಗಿರುತ್ತಾನೆ.  ಮಾನಸಿಕವಾಗಿ ತೃಪ್ತಿ ಸಿಗದ ಹೆಣ್ಣು ಮತ್ತೊಂದು ಗಂಡಿನತ್ತ ವಾಲುವುದು ಸಹಜ! ಆಗ ಸುಲಭವಾಗಿ ದೊರೆತ ಅವಕಾಶ ಅವನು ಉಪಯೋಗಿಸುತ್ತಾನೆ! ಇದು ಗಂಡು ಹೆಣ್ಣು ಇಬ್ಬರಲ್ಲೂ ಇದ್ದೇ ಇರುತ್ತದೆ.”

“ಒಪ್ಪುತ್ತೇನೆ, ಪವಿತ್ರ ಸ್ನೇಹವಿರುತ್ತದೆ ಮತ್ತದು ವಿರುದ್ಧ ಲಿಂಗವಾದರೂ ಅಲ್ಲಿ ಭೌದ್ಧಿಕ ಮಟ್ಟದ ಸ್ನೇಹ ಮಾತ್ರ ಇರಲೂಬಹುದು. ಆದರೆ, ನನಗೊಂದು ಡೌಟು ಉಪೇಂದ್ರಣ್ಣ! 
ಹಿಂದಿನ ಕಾಲದಲ್ಲಿ ಬಹುಪತ್ನಿ ಪದ್ಧತಿ ಇತ್ತು. ಆಗ ಅವರು ತಮ್ಮ ಪತ್ನಿಯರಿಗೆ ಹೇಗೆ ನ್ಯಾಯ ಒದಗಿಸುತ್ತಿದ್ದಿರಬಹುದು? ರಾಜಕೀಯ ಕಾರಣಗಳಿಂದಾಗಿ ಅನೇಕ ರಾಜರು ಉಪಪತ್ನಿಯರನ್ನು ಹೊಂದಿದ್ದರು.. ಕೆಲವರದಂತೂ ನೂರು ಸಂಖ್ಯೆಯನ್ನೂ ದಾಟುತ್ತಿದ್ದವು.. ಹೀಗಿದ್ದೂ ನರ್ತಕಿಯರು ಮತ್ತು ದಾಸಿಯರ ಸಂಪರ್ಕವನ್ನೂ ಬಯಸುತ್ತಿದ್ದರು ಎಂಬುದನ್ನು ಓದಿದ್ದೇನೆ! “

“ಅರೇ, ದ್ರೌಪದಿಯೂ ಪಂಚಪತಿಯರನ್ನು ಹೊಂದಿದ್ದಳು.. ಹಿಮಾಲಯ ಯಾವುದೋ ಬುಡಕಟ್ಟು ಜನಾಂಗದಲ್ಲಿ ಈಗಲೂ ಒಂದೇ ಹೆಣ್ಣನ್ನು ಅಣ್ಣ ತಮ್ಮಂದಿರೆಲ್ಲ ಮದುವೆ ಮಾಡಿಕೊಳ್ಳುವ ಪದ್ಧತಿ ಇದೆ. ತರಂಗದಲ್ಲಿ ಓದಿಲ್ವಾ?”

ಮುಗುಳ್ನಗೆ ನಕ್ಕೆ..
“ಅಣ್ಣ, ನಿಮಗೆ ಗೊತ್ತಲ್ವಾ? ಪಾಂಡವರಿಗೆಲ್ಲ ದ್ರೌಪದಿ ಮಾತ್ರ ಪತ್ನಿಯಲ್ಲ. ಪದ್ಧತಿಯಂತೆ ಅವಳು ಎರಡು ವರ್ಷ ಒಬ್ಬೊಬ್ಬರ ಬಳಿ ಇರುವುದೆಂಬ ಒಪ್ಪಂದವಾಗಿತ್ತು. ಮತ್ತು ಎಲ್ಲರಿಗೂ ಉಪಪತ್ನಿಯರಿದ್ದರು! ಅಂತೆಯೇ ನೀವಂದ ಆ ಬುಡಕಟ್ಟು ಜನಾಂಗದಲ್ಲೂ ಅಣ್ಣ ತಮ್ಮಂದಿರು ಪ್ರತ್ಯೇಕ ಮದುವೆನೂ ಮಾಡಿಕೊಳ್ಳುತ್ತಿದ್ದರು.. ಯಾರೂ ಒಂಟಿಯಾಗಿರುತ್ತಿರಲಿಲ್ಲ. ಹ್ಮೂಂ, ಹೇಳಿ.. ತಮ್ಮ ಪತಿ ಅನೇಕ ಪತಿಯರನ್ನು ಹೊಂದಿದ್ದಾನೆಂದು ಅವನ ಪತ್ನಿಯರಲ್ಲಿ ಯಾರಾದರೂ ಮತ್ತೊಂದು ಮದುವೆ ಮಾಡಿಕೊಂಡಿದ್ದಾರಾ? ಅಥವಾ ಮಾಡುವಷ್ಟು ಹಕ್ಕು ಅವರಿಗಿತ್ತಾ? ಅವರು ಗುಟ್ಟಾಗಿ ಬೇರೆ ಸಂಬಂಧವನ್ನು ಇಟ್ಟುಕೊಳ್ಳುತ್ತಿದ್ದರು ಎಂಬುವುದು ಬೇರೆ ವಿಷಯ! ಆದರೆ ಎಲ್ಲರೆದು ತಮ್ಮ ಸಂಬಂಧವನ್ನು ಒಫ್ಫಿಕೊಳ್ಳುವ ದ್ರಾಷ್ಟ್ಯವಿತ್ತೇ ಆ ಸ್ತ್ರೀಯರಿಗೆ? ಹೇಳಿ ಉಪೇಂದ್ರಣ್ಣ? ಗಂಡು ತನ್ನ ಭುಜಬಲದಿಂದ ಎಷ್ಟು ಬೇಕಾದರೂ ಸಂಬಂಧವನ್ನು ಬೆಳೆಸಬಹುದು.. ಬೇಡವೆನಿಸಿದಾಗ ಬಟ್ಟೆ ಕಳಚಿದಂತೆ ಮತ್ತೊಂದು ಹೆಣ್ಣಿನತ್ತ ಆಕರ್ಷಿತನಾಗಬಹುದು! ಹೇಳಿ! ನ್ಯಾಯ ಎಲ್ಲಿದೆ? ನಾನೇನು ಗಂಡು ಹೆಣ್ಣು ಸಮಾನ ಎಂದು ಹೇಳುತ್ತಿಲ್ಲ. ಪ್ರಕೃತಿ ಗಂಡಿಗೆ ಸಹಜವಾಗಿ ಹೆಚ್ಚಿನ ಬಲ ಕೊಟ್ಟಿದೆ. ತನಗೆ ಸಿಕ್ಕಿದ ಸವಲತ್ತನ್ನು ಬಳಸಿ ಅವನು ಹೆಣ್ಣಿಗೆ ನೋವು ಕೊಡುವುದು ಸರಿಯೇ !”
ಮೌನ.. ಬರೇ ಮೌನವಿತ್ತು ನಮ್ಮಿಬ್ಬರ ಮಧ್ಯೆ!


ಸ್ನೇಹ, ಚರ್ಚೆ, ಕತೆ.. ಒಂದು ರೀತಿ ಕಾಕ್ ‍ಟೈಲ್ ಈ ಕತೆ!

ಸ್ನೇಹ, ಚರ್ಚೆ, ಕತೆ.. ಒಂದು ರೀತಿ ಕಾಕ್ ‍ಟೈಲ್ ಈ ಕತೆ!
---------------------------------------------

Women are like fruits. Every one has its unique colour, shape, aroma and taste. The problem is .. men like fruit salad!’

ಇದು ಬಹುಶಃ ನೀವು ಈಗಾಗಲೇ ಸುಮಾರು ಸಲ ಓದಿರಬಹುದು.. ಅನೇಕ ವರ್ಷಗಳಿಂದ ಸರ್ಕ್ಯುಲೇಟ್ ಆಗ್ತಿದೆಯಂತೆ. ನಾನು ಓದಿದ್ದು ಹಿಂದಿನ ವರ್ಷ! ಅದೂ ಒಬ್ಬ ಪುರುಷ ಮಿತ್ರರಿಂದಲೇ ಬಂದಿತ್ತು! ನಿಮ್ಮ ಅಭಿಪ್ರಾಯ ಏನೆಂದು ಹೇಳ್ತಿರಾ ಅಣ್ಣ!”

ಹೌದು, ಬಹುಶಃ ಅವರೊಬ್ಬರ ಬಳಿಯಲ್ಲಿ ಮಾತ್ರ ನಾನು ಯಾವುದೇ ಅಡೆತಡೆಗಳಿಲ್ಲದೆ ಮುಕ್ತವಾಗಿ ಆರೋಗ್ಯಕರ ಚರ್ಚೆ ನಡೆಸಬಲ್ಲೆ. ತಮ್ಮ ಬಗ್ಗೆ ಖುಲ್ಲಂ ಖುಲ್ಲಾ ಆಗಿ ಹೇಳ್ಕೊಳ್ಳುವ ಅವರು ಅಷ್ಟೇ ಮೃದುವಾಗಿ ನನ್ನಲ್ಲಿನ ತಪ್ಪನ್ನು ಎತ್ತಿ ತೋರಿಸಬಲ್ಲರು. ಬರೇ ಅಕ್ಷರ ತಪ್ಪುಗಳಿಗೆ ಅವರ ವಿರೋಧ ಹೊರತು ನನ್ನ ಭಾವಗಳ ಹೊಮ್ಮುವ ಶಬ್ದಗಳಿಗೆ ಅವರ ಯಾವ ಕಮೆಂಟೂ ಇರಲ್ಲ. ಚಿತ್ರ, ಕವನ, ಕತೆ, ಫೋಟೊಗ್ರಾಫಿ, ಸಾಮಾಜಿಕ ಕಳಕಳಿ, ಜತೆಗೆ ನಮ್ಮ ಸುತ್ತಮುತ್ತಲಿರುವ ಕಲಾಕಾರರಿಗೆ ಸಮಭಾವದ ಪ್ರೋತ್ಸಾಹ, ಸಮಾಜದ ಆಗುಹೋಗುಗಳ ಮೇಲೆ ನೋಟವಿದ್ದರೂ ರಾಜಕೀಯ ಕೆಸರಾಟದಿಂದ ದೂರ.. ಯಾವುದೇ ಪಕ್ಷ, ವ್ಯಕ್ತಿಗಳ ಬಗ್ಗೆ ಯಾವುದೇ ಕೆಟ್ಟ ಶಬ್ದಗಳ ಬಳಕೆಯಿಂದ ದೂರವಿದ್ದು ಹೆಚ್ಚಿನ ಗಮನ ಕಲಿಯುವುದು ಮತ್ತು ಹಂಚುವುದರಲ್ಲಿ ಆಸಕ್ತಿ..

ಹೀಗೆ ಸಮ ಚಟವನ್ನಿ, ಹವ್ಯಾಸವನ್ನಿ.. ಅದೊಂದು ನಿಧಾನವಾಗಿ ಬೆಸುಗೆ ಹಾಕಿ ಒಂದೇ ಕುಟುಂಬದ ಸದಸ್ಯರೆಂಬ ಭಾವ ತಂದದ್ದು ನಿಜ. ಇಬ್ಬರು ತಮ್ಮಂದಿರಿರ ಅಕ್ಕಳಾದ ನನಗೆ ಅಕ್ಕ, ಅಣ್ಣ ಇಲ್ಲದ ಕೊರತೆ ಕಾಡುತಿತ್ತು. ಮನಸ್ಸು ಅವರನ್ನು ಅಣ್ಣನೆಂದೇ ಸ್ವೀಕರಿಸಿತ್ತು.. ಅವರಲ್ಲಿ ಕೇಳಿದಕ್ಕೆ, ಕೊನೆಯ ಮಗನಾದ ಅವರಿಗೂ ಎಲ್ಲೋ ಅಣ್ಣ ಸ್ಥಾನ ದೊರೆತಾಗ ಬೇಡವೆನ್ನಲಿಕ್ಕಾಗಲಿಲ್ಲ.

ನಾಲ್ಕು ದಿನ ಹೀಗೇ ಏನೋ ಮನಸ್ಸಿನ ಕಿರಿ ಕಿರಿಯಿಂದಾಗಲಿ, ದೇಹಾಲಸ್ಯದಿಂದಾಗಲಿ ಮುಖ ಪುಸ್ತಕದಲ್ಲಿ ಕಾಣಿಸದಿದ್ದರೆ- “ಏನು ಆರಾಮಿದ್ದಿರಲ್ಲಾ? “ ಪಿಂಗ್ ಮಾಡುತ್ತಿದ್ದರು.

ಮಗನ ಮನೆಯ ವಿಲಾವರಿಗೆ ಬೆಂಗಳೂರಿಗೆ ಬಂದವಳಿಗೆ ಈ ಮಹಾನಗರದ ಧಾವಂತದ ಬದುಕನ್ನು ಕಂಡು ದಿಗಿಲಾಗಿತ್ತು.
“ಊಟಕ್ಕೇನು ಮಾಡ್ತಿದ್ದಿರಿ ಅಮ್ಮ ಮಗಳು?”

ಹೀಗೆ ಇದ್ದ ಪ್ರತೀದಿನವೂ ಫೋನು ಮಾಡಿ ಗಂಜಿ ಮತ್ತು ಸಲಾಡ್‍ನಲ್ಲಿ ನಮ್ಮ ಭೂರಿಭೋಜನವಾಗ್ತಿತ್ತು ಅಂತ ಬೇಜಾರು ಮಾಡ್ತಿದ್ರು..( ಅಟ್‍ಲೀಸ್ಟ್ ಹಾಗಂತ ನಾನು ಅನಿಸಿಕೊಂಡು ಖುಷಿ ಪಡ್ತಿದ್ದೆ.)

ಹೊಸ ಮಂಚ, ಬೆಡ್ ತೆಗೆದುಕೊಳ್ಳುವುದು ಬೇಡ, ನಮ್ಮಲ್ಲೊಂದು ಇದೆ ಅಂದದು ಮಾತ್ರವಲ್ಲದೆ ಮಗನ ಮನೆಗದನ್ನು ತಲುಪಿಸಿ ನನ್ನ ಪರ್ಸ್ ಭಾರ ಕಮ್ಮಿಯಾಗದಂತೆ ನೋಡಿಕೊಂಡ್ರು.  ಮನೆಗೆ ಊಟಕ್ಕೆ ಕರೆದಾಗ ಬೇಡ ಸುಮ್ನೆ, ನಿಮ್ಮನ್ನು ಕಾಮತ್ ನಿವಾಸಿಗೆ ಮಕ್ಕಳು ಸಮೇತ ಬಂದು ಭೇಟಿಯಾಗ್ತೇನೆ ಅಂದರೂ ಕೇಳಲಿಲ್ಲ!  

ಸೊಪ್ಪುತಿನ್ನುವವಳ ಮಕ್ಕಳು ಹಾಗಿಲ್ಲ ಅಂತ ಗೊತ್ತಾಗಿ ಸುಗ್ರಾಸ ಭೋಜನ.. ನನ್ನ ಮಗಳು ಚಿಕನ್ ಪ್ರಿಯೆ, ಮೂರು ದಿನದಿಂದ ಅಮ್ಮನಿಂದ ಚಪ್ಪೆ ಊಟವಿತ್ತು.. ಆ ದಿನ  ಅನ್ನಪೂರ್ಣೇ ಲಲಿತ ವೈನಿಯವರ ಉಪಚಾರ, ಸ್ನೇಹ ಸ್ವಾತಿಯರ ಸ್ನೇಹಭರಿತ ನೋಟ, ಅಣ್ಣನವರ ತಿಳಿ ಹಾಸ್ಯ.. ಮನತುಂಬಿ ಬಂತು. ನನ್ನ ಪರಿಚಯ ಎಷ್ಟೋ ಕಾಲದಿಂದದ್ದ ಹಾಗೆ ವೈನಿಯವರ ಮಾತುಕತೆ! ಪೂರ್ವಜನ್ಮದ ಫಲವಲ್ಲವೆ ಇದು! ಇಂದು ಅವರ ಮನೆಯ ಮೀಯಾ, ಬರ್ನೀ ನನ್ನ extended family! ಮನಕ್ಕೆ ಸಿಕ್ಕಿದ ಸಂತಸವನ್ನು ಇಲ್ಲಿ ಕೆಲವೇ ಪದಗಳಲ್ಲಿ ಹೇಳುವಷ್ಟು ತಾಕತ್ತೂ ಇಲ್ಲ ನನಗೆ!

ನಮ್ಮ ಮಧ್ಯದಲ್ಲಿ ಥಾಂಕ್ಸ್, ಸಾರಿ ಮೊದಲಾದ ಶಬ್ದಗಳು ಬರುತ್ತಿರಲಿಲ್ಲ. ನಾನು ನಾನಾಗಿ ನನ್ನ ಮನಸ್ಸಿನಲ್ಲಿದ್ದುದನ್ನು ನೇರವಾಗಿ ಹೇಳಿಬಿಡುತ್ತಿದ್ದೆ. ಇತ್ತೀಚಿನ ಅವರ ಕತೆ ಅಷ್ಟು ಮೆಚ್ಚದವಳು ಬಹುಶಃ ನಾನು ಮಾತ್ರವೆಂದು ತೋರುತ್ತದೆ.

 ಅವರ ಕತೆಗಳನ್ನು ನನ್ನದೇ ದೃಷ್ಟಿಯಲ್ಲಿ ನೇರ ವಿಮರ್ಶೆ ಮಾಡ್ತಿದ್ದೆ, ನಂಗ್ಯಾವ ಸಂಕೋಚ ಇರ್ತಿರಲಿಲ್ಲ. ಅವರೂ ಅಷ್ಟೇ..

ಸ್ವಲ್ಪ ಸಿರಿಯೆಸ್ ಸ್ವಭಾವದಳಾದ ನಾನು ಈಗ ಪ್ರತಿಯೊಂದರಲ್ಲೂ ಹಾಸ್ಯ ನೋಡುವಷ್ಟು ಬದಲಾಗಿದ್ದೇನೆ. ಈಗ ಯಾರೂ ನನ್ನ ಯಾವ ಸ್ಟೇಟಸ್‍ಗೂ ತಮಾಷೆಯ ಕಮೆಂಟು ಒಗೆದರೆ ಅದನ್ನು ಖುಷಿಯಿಂದ ಸ್ವೀಕರಿಸುವಂತಹ ಬದಲಾವಣೆ ಬಂದುದು ಅವರ ಸಂಗದಿಂದ ಎಂದು ನಂಗೀಗ ಗ್ಯಾರಂಟಿ ಆಗಿದೆ!

ಹೆಚ್ಚು ಕಡಿಮೆ ಒಂದ್ಹದಿನೈದು ದಿನಕೊಮ್ಮೆ ಚರ್ಚೆ ನಡೆಸ್ತೇವೆ. ಮೊನ್ನೆ ಈ ಮೇಲಿನ ಮೆಸೇಜು ಪುನಃ ನಂಗೆ ಕಾಣಸಿಕ್ಕಿ ಮತ್ತೆ ದೆವ್ವ ಬಡಿದ ಹಾಗೆ ಅಯಿತು. ಈ ಸಲ ಚರ್ಚೆಗೆ ಹೊಸ ವಿಷಯ ಸಿಕ್ಕಿತು.. ಪುರುಷರ ದೌರ್ಬಲ್ಯ ತೋರಿಸಿದಂತಾಯಿತು ಅಂತ ಅವರಿಗೆ ಕಳುಹಿಸಿ ಒಂದಿಷ್ಟು ಸಮರ್ಥನೆ, ನಿರಾಕರಣೆಯ ಉತ್ತರ ನಿರೀಕ್ಷಿಸುತ್ತಿದ್ದವಳಿಗೆ ಬಂದ ಉತ್ತರ,

“ಅದು ಹೌದು!”

-      ಇಲ್ಲಿಗೆ ನಮ್ಮ ಚರ್ಚೆ ಸಮಾಪ್ತಿಯಾತೆಂದು ತಿಳಿದರೆ ಅದು ತಪ್ಪು.. ಮುಂದಿನ ಭಾಗದಲ್ಲಿ ಮುಂದುವರಿಯುತ್ತದೆ! J
ಕಪ್ಪು-ಬಿಳಿ ಪಾಠ..

"ಬಾರೆ, ಬಿಂಕದ ಸಿಂಗಾರಿ.. ಮರಗಿಡ ಸುತ್ತಿ ಡ್ಯುಯೆಟ್ ಹಾಡೋಣ್ವೆ!"

"ಲೇ, ಹೋಗೆಲೆ, ಮೂತಿ ನೋಡ್ಲೆ ಕನ್ನಡಿಯಲೊಮ್ಮೆ!"27 October, 2013

ಹೀಗೊಂದು ಭಜನಾ ಸಂಡೆ!

ಹೀಗೊಂದು ಭಜನಾ ಸಂಡೆ!
----------------------

“ನಂಗೆ ಒಂಬತ್ತು ಮಕ್ಕಳು ತಾಯಿ!”

“ರಾಮ ರಾಮ!” ಅಂತ ಅಲ್ಲಿ ಅವರ ಹಾಡು ಕೇಳಲು ಕುಳಿತಿದ್ದ ನಾನು, ನನ್ನಮ್ಮ, ಮಗಳು ಒಟ್ಟಿಗೆ ಹೆಚ್ಚು ಕಮ್ಮಿ ಕಿರಿಚಿದ್ವಿ!

“ಶೀಲಾ, ಇವತ್ತು ಭಾನುವಾರ ಅಂತ ನಿಧಾನ ಕೆಲಸ ಮಾಡ್ಬೇಡ. ಕಿರಣನ ಮನೆ ವಕ್ಕಲಿಗೆ ಹೋಗ್ಲಿಕುಂಟು. ಮರಿಬೇಡ!”

ಅಮ್ಮ ನಿನ್ನೆ, ಇವತ್ತು ಪದೇ ಪದೇ ನೆನಪು ಮಾಡ್ತಿದ್ದರಿಂದ ರಾಬೊಟ್  ತರ ಒಂದೇ ಸಮನೆ ಕೆಲಸ ಮಾಡ್ತಿದ್ದೆ.. ಫೇಸ್ ಬುಕ್, ವಾಟ್ಸ್ ಆಪ್ ಮುಟ್ಲಿಕ್ಕೆ ಹೋಗಿರ‍್ಲಿಲ್ಲ! (ಝುಕರ್‌ಬರ್ಗ್ ಆಣೆ!)

ಇಡ್ಲಿ ದೊಣ್ಣೆಗಳು, ಹಾಲಿನ ಪಾತ್ರೆ, ಪ್ಲೇಟು, ಗ್ಲಾಸು.. ಸಿಂಕಿನಲ್ಲಿ ಪಾತ್ರೆಗಳು ಅಣಕಿಸ್ತಿದ್ದವು! ಹುಸ್ಸಪ್ಪಾ! ಯಾಕೀ ಸಂಡೆ ಬರ್ತದೋ.. ಸುಮ್ನೆ ಅಲಸಿನ ಎಲೆಯ ಕೊಟ್ಟೆ ಮಾಡ್ಬೇಕಿತ್ತು.. ಆಲಸ್ಯದಿಂದಲೋ, ಮನ್ನಾ ಡೇ ಹಾಡಿನಲ್ಲಿ ಮುಳುಗಿದರಿಂದಲೋ ಎಲೆಗಳನ್ನು ತರ‍್ಲಿಕ್ಕೆ ಹೋಗದೆ ತಪ್ಪು ಮಾಡ್ಬಿಟ್ಟೆ!

ಕರ್ಮ! ಹಣೆಚಚ್ಚಿಕೊಳ್ತಾ ತಿಕ್ತಿದ್ದವಳ ಕಿವಿ ನಿಮಿರಿತು! ಹಾರ್ಮೋನಿಯಮ್...  ಓಹೋ ಆ ಭಜನೆ ಹಾಡುವವರು ನಮ್ಮ ಓಣಿಯಲ್ಲಿದ್ದಾರೆ! ಮುಸುರೆ ಕೈತೊಳೆದು ರಾಕೆಟ್ ತರ ಓಡಿ ಅಮ್ಮನಂಗಳದಲ್ಲಿ ನಿಂತು,

“ ಅಮ್ಮಾ! ಅಮ್ಮಾ!”

ನನ್ನ ಬೊಬ್ಬೆ ಕೇಳಿ ಏನಾಯ್ತೋ ಎಂದು ಗಾಬರಿಯಾಗಿ ಬಂದ ಅಮ್ಮನಿಗೆ, "ಎಲ್ಲಾ ಬಿಡು.. ಬಾ ಆ ಭಜನೆ ಹಾಡುವವನು ಬಂದಿದ್ದಾನೆ ಅಂದ್ರೆ!"

 “ಹೋಗ್ಲಿಕುಂಟಲ್ವೇ.. ಒಂದೇ ಹಾಡು ಸಾಕು ಅಂತ ಹೇಳು ಅವನಿಗೆ!”

ಆಗಲೇ ಅವರು ನಮ್ಮ ನೆರೆಮನೆಯಲ್ಲಿ ಹಾಡುತ್ತಿದ್ದರು.

ಗೋಡೆ ಬದಿಯಲ್ಲೇ ನಿಂತು ,

“ಪ್ಲೀಸ್, ಒಂದು ಕೃಷ್ಣನ ಪದ ಹಾಡಿ!” ಅಮ್ಮ ಅಲ್ಲೆ ಅವರಂಗಳದಲ್ಲಿ ಕೇಳಿತಿದ್ರೆ ನಾನು ಕೆಮರಾ ಸಮೇತ ನೆರೆಮನೆಯಂಗಳದಲ್ಲಿ.

ಇಬ್ಬರಿಗೂ ತೃಪ್ತಿಯಾಗಲಿಲ್ಲ.. ಕೊನೆಗೂ ಅಮ್ಮನ ಮನೆಯಂಗಳದಲ್ಲಿ ಕುಳಿತು ಬಸವಣ್ಣನವರ ವಚನ ಸಮೇತ ನಾಲ್ಕು ಹಾಡು ಕೇಳಿಸಿಯೇ ಅವರನ್ನು ಬೀಳ್ಕೊಟ್ಟೆವು.

ಆಶ್ಚರ್ಯ ಅಂದ್ರೆ ನನ್ನ ಮಗಳು ಮನೆಗೆ ಬೀಗ ಹಾಕಿ ನನ್ಹಿಂದೇ ಬಂದಿದ್ದಾಳೆ.. ಮತ್ತು ಎಲ್ಲ ಹಾಡುಗಳನ್ನು ಶೃದ್ಧೆಯಿಂದ ಕೇಳಿದ್ಲು! ಅಹ್! ನನ್ನ ಮಗಳಂತ ಪ್ರೂವ್ ಮಾಡಿಬಿಟ್ಟಲ್ಯೆ!!!

ಅಮ್ಮ ಸಣ್ಣದಾಗಿ ಅವರ ಸಂದರ್ಶನ ಮಾಡಿದ್ರು!

ಮೂಲತಃ ಸೊರಬದವರಾದ ಅವರು ಇಲ್ಲಿ ಮಂಗಳೂರಿನಲ್ಲಿ ನೆಲೆನಿಂತು ಒಂದಿಪ್ಪತ್ತು ವರ್ಷವಾಯ್ತು ಅಂತ ಹೇಳಿದ್ರು.

ತಮ್ಮ ತಂಡದವರೆಲ್ಲಾ ಒಟ್ಟಿಗೆ ಒಂದೇ ಕಡೆ ಇದ್ದು ಮುಖ್ಯವಾಗಿ ನಾಟಕಗಳಲ್ಲಿ  ತಬಲಾ ಹಾರ್ಮೋನಿಯಮ್ ನುಡಿಸುವುದು, ರಿಪೇರಿ ಮಾಡುವುದು, ಅಮೆಚ್ಯೂರ್ ತಂಡಗಳಿಗೆ ನಾಟಕ ತರಬೇತಿ ನೀಡುವುದು... ಒಟ್ಟಾರೆ ಹಾಡುವಿಕೆ, ವಾದ್ಯ ನುಡಿಸುವಿಕೆಯೇ ಜೀವನಕ್ಕೆ ಆಧಾರ!

ಹೀಗೆ ಮಾತಾಡ್ತಾ ಎಷ್ಟು ಮಕ್ಕಳು ಅಂತ ಕೇಳಿದಾಗ ಅವರು ಒಂಬತ್ತು ಅಂತ ಹೇಳಿದ ಕೂಡಲೇ ಮೂರ್ಛೆ ಹೋಗಿಲ್ಲ ನಾವು!

ಆದರೆ ಅವರು ಅದಕ್ಕೆ ಉತ್ತರ ಕೊಟ್ಟದನ್ನು ಕೇಳಿ ಅದಕ್ಕಿಂತ ಹೆಚ್ಚು ದಂಗಾದೆವು!

“ಹೆಣ್ಣು ಮಗುವಿನ ಆಸೆಗೆ ಬಿದ್ದು ಒಂಬತ್ತು ಮಕ್ಕಳಾದವು ತಾಯೀ! ಎಷ್ಟು ಗಂಡು ಮಕ್ಕಳಿದ್ರೂ ಕರುಳು ಚುರ್ರ್ ಅಂತ ಮಾಡೋದು ಹೆಣ್ಣು ಜೀವ ಮಾತ್ರ ತಾಯೀ! ಹಾಗೇಯೇ ಹೆಣ್ಣು ಮಕ್ಕಳು ಎಷ್ಟೇ ಇರ್ಲಿ, ಮನೆಗೆ ದೀಪ ಹಚ್ಚಲಿಕ್ಕಂತ ಒಂದು ಗಂಡು ಬೇಕಲ್ವಾ! “

ಅನಕ್ಷರಸ್ತರು ಅವರು. ಶಾಲೆಯ ಮುಖವನ್ನೂ ನೋಡದಿದ್ದರೂ ತಮ್ಮ ಮಕ್ಕಳಿಗೆಲ್ಲ  ಶಾರದೆಯ ಅನುಗ್ರಹ ಇರಲಿ ಅಂತ ಸ್ಕೂಲಿಗೆ ಸೇರಿಸಿದ್ದಾರೆ. ಇಬ್ಬರು ಮಕ್ಕಳು ಈಗಾಗಲೇ ಕಲ್ತು ಮೈಸೂರಿನಲ್ಲಿ ನೌಕರಿ ಹಿಡಿದು ಪಾರ್ಟ್ ಟೈಮ್ ನಾಟಕನೂ ಮಾಡ್ತಿದ್ದಾರೆ ಅಂತ ಹೆಮ್ಮೆಯಿಂದ ಹೇಳಿದ್ರು. ಮೊಮ್ಮಕ್ಕಳಿವೆ.. ಪುಣ್ಯಕ್ಕೆ ಗಂಡು ಹೆಣ್ಣು ಇಬ್ಬರೂ ಇವೆ.. ಹಾಗಾಗಿ ಮಗನಿಗೆ ಆಪರೇಷನ್ ಮಾಡ್ಕೋ ಅಂದೆ ಅಂದಾಗ ಬದುಕಿದ ಬಡ ಜೀವ ಅಂದ್ಕೊಂಡೆ! ಇವರ ಕೊನೆಯ ಮಗಳು ಎರಡನೆಯ ತರಗತಿ!

ಭಜನೆ ಹಾಡು ಹೇಳುವವರು ಬಂದಾಗಲೆಲ್ಲ ಅವರ ಬಳಿ ನಮಗೆ ಬೇಕಾದುದನ್ನೆಲ್ಲಾ ಹೇಳಿಸಿಕೊಳ್ತಿದ್ದೆವು. ರೆಕಾರ್ಡ್ ಮಾಡಿರಲಿಲ್ಲ. ಆದರೆ ಈ ಸಲ ಮರೆಯದೆ ರೆಕಾರ್ಡ್ ಮಾಡಿ ಯು ಟ್ಯೂಬ್‍ಗೆ ಎತ್ಹಾಕ್ತಿದ್ದೇನೆ! ನೋಡಿ ಖುಷಿ ಪಟ್ರೆ ನಂಗೂ ಖುಷಿಯಾಗುತ್ತೆ.. ಇಲ್ಲಾಂದ್ರೆ ನಿಮ್ಮಿಷ್ಟ ಮಾರಾಯ್ರೆ!

ಓಡಿ ಬಾರಯ್ಯ ಕೃಷ್ಣಯ್ಯ..ಹರಿ ಕುಣಿದಾ ನಮ್ಮ..


ಮನೆಯೊಳಗಾಡೋ ಗೋವಿಂದ..


ಉಳ್ಳವರು ಶಿವಾಲಯವ ಮಾಡುವರು..


ವಿಠ್ಠಲ ಪ್ರಣಾಮಿ..

26 October, 2013

ಬರೀ ಗೂಢ.. ನಿಗೂಢ..
ಎಂಥದೀ ಬದುಕು ಅಯ್ಯೋ..
ನಗಿಸಿದರೆ ಕೆಲವೊಮ್ಮೆ
ಅಳಿಸುವುದು ಮಗದೊಮ್ಮೆ||

ಎಚ್ಚರವಿಲ್ಲವೀ ಮನಕೆ ಕೆಲವೊಮ್ಮೆ
ಕಂಡ ಕನಸುಗಳ ಹಿಂದೆ ಓಡೋಡಿ
ಕನಸುಗಳ ಹಾದಿಯೇ ಮುಂದೋಡಿತು
ಕನಸುಗಳ ಹಿಂದಿಕ್ಕಿತು ಒಂದು ದಿನ||


ಸಿಂಗರಿಸಿದರವರು ಮನದಲ್ಲೊಂದು ಉತ್ಸವ
ನೋವು-ನಲಿವನೂ ಹಂಚಿಕೊಂಡರು
ಆರಿಸಿದರು ಅವರೇ ಮೌನ ಮತ್ತೆ
ನಡೆದರು ಎತ್ತಲೋ ಒಂಟಿಯಾಗಿ|| 

Friend in need is friend indeed ಅಂದ್ರೆ ಏನೇ!

Friend in need is friend indeed  ಅಂದ್ರೆ ಏನೇ!
-----------------------------------------------

“Friend in need is friend indeed, ಈ ಬಗ್ಗೆ ನೀನು ಏನು ಹೇಳ್ತಿಯಾ?”

ಅವಳು ಕೇಳಿದಾಗ ನಾನು ಕಕ್ಕಾಬಿಕ್ಕಿಯಾದೆ. ಅಲ್ಲ, ದೂರದ ಮುಂಬೈಯಿಂದ ಈ idiom ಬಗ್ಗೆ ನನ್ನ ಅಭಿಪ್ರಾಯ ಕೇಳಲು STD ಕಾಲ್ ಮಾಡ್ತಾರಾ ಯಾರೂ!

“ಎಂತದೇ ಇದು ನಿನ್‍ದು! ನೀನು ಅಲ್ಲಿ ನಿನ್ನ ಕಾಲೇಜಿನ ಲೈಬ್ರೇರಿಯನ್ ಹತ್ತರ ಕೇಳಿದ್ರೂ ಉತ್ತರ ಕೊಡ್ತಿದ್ರು.. ಎಲ್ಲಾ ಬಿಟ್ಟು ನನ್ನ ಬಕ್ರಮಾಡ್ಬೇಕಂತ ಕೇಳ್ತಿದ್ದಿಯಾ?”

“ನನ್ನ ಎಕ್ಸಾಮ್ ಟೈಮ್‍ಗೆ ವಿಶ್ ಮಾಡಿಲ್ಲ.. ಹೇಗಿತ್ತು ಅಂತ ಕೇಳ್ಲಿಲ್ಲ, ಫ್ರೆಂಡ್ ಅಂತೆ ಫ್ರೆಂಡು.. ಹೋಗ್ಲಿ ಅಂದ್ರೆ ಬರ್ತಡೆ ಆದ ಎರಡು ದಿನದ ನಂತರ ಮೆಸೇಜ್- belated birthday wishes ಅಂತ!”

ಓಹೋ ಇದು ನನ್ನ ಬುಡಕ್ಕೇ ಬರ್ತಿದೆ. ಏನು ಹೇಳ್ಲಿ ತಪ್ಪಿಸ್ಕೊಳ್ಲಿ ಅಂತ ಆಲೋಚನೆ ಮಾಡೋದಕ್ಕೂ ಟೈಮಿಲ್ವೇ!

“ಅಲ್ವೇ, ಅದು.. ಅದು.. “

ಸಡನ್ನಾಗಿ ನೆನಪಿಗೆ ಬಂತು!

“ಅಲ್ವೇ ನಂಗೂ ಎಕ್ಸಾಮ್ ಇತ್ತಲ್ವಾ ಆವಾಗ!”

“ಇನ್ನೇನಾದರೂ ಪಿಳ್ಳೆ ನೆವನ ಹುಡ್ಕೊಳ್ಳೆ.. ಅಲ್ಲ, ನಿನ್ನ ಎಕ್ಸಾಮ್ ಆದ ನಂತರ ನನ್ನದಿತ್ತು.. ಮತ್ತು ನಿನ್ನ ಎಕ್ಸಾಮ್ ಆಗುವಾಗಲೆಲ್ಲ ಡೈಲೀ ವಾಟ್ಸ್ ಆಪ್‍ನಲ್ಲಿ ವಿಚಾರಿಸಿಕೊಳ್ತಿದ್ದೆ! ನನಗಿಂತಲೂ ಮೂರು ವರ್ಷ ಸಣ್ಣವಳೇ ನೀನು!”

ತಲೆಕೆರಕೊಂಡೆ.. ಏನು ಹೇಳ್ಲಿಯಪ್ಪಾ! ಕ್ಯಾಂಪು ಗೀಂಪು ಅಂತ ಹೇಳುವಾ ಅಂದ್ರೆ ಅದೂ ಇಲ್ವೇ! ಈ ವರ್ಷ ನಾನು ಯಾವ ಕ್ಯಾಂಪೂ ಮಾಡಿಲ್ಲ! ಅದೇನೋ ಈ ಮೇ ತಿಂಗಳಲ್ಲಿ ನಾನೂ ತುಂಬಾ ಮೌನವಾಗಿಬಿಟ್ಟಿದ್ದೆ! ಬಾಲ್ಯದ ಗೆಳತಿಯ ಹುಟ್ಟಿದ ದಿನವನ್ನೂ ಮರೆತಿದ್ದೆ! ಛೇ.. !

“ಅಗತ್ಯ ಬಿದ್ದಾಗ ಬರದಿದ್ದರೆ ಸ್ನೇಹ ಇದ್ದೂ ಏನು ಪ್ರಯೋಜನ!”

ಹೌದು, ಅವಳಿಗೆ ನನ್ನ ಅಗತ್ಯ ತುಂಬಾ ಇತ್ತು.. ನಾನು ನನ್ನದೇ ಲೋಕದಲ್ಲಿ ಮುಳುಗಿ ಅವಳನ್ನು, ಅವಳ ನೋವನ್ನು ಕಡೆಗಾಣಿಸಿದ್ದೆ! ಆರು ವರ್ಷದ ಹಿಂದೆ ಅವಳ ಪತಿಯ ದೇಹಾಂತ್ಯವಾದಾಗಿನಿಂದ ಎರಡು ಮಕ್ಕಳನ್ನು, ಮನೆವಾರ್ತೆ ಜತೆ ಸಂಪಾದನೆಯನ್ನು ಏಕಾಂಗಿಯಾಗಿ ಮಾಡುತ್ತಿದ್ದಾಳೆ. ಈಗ ಮಕ್ಕಳು ನೌಕರಿ ಹಿಡಿದ ಕಾರಣ ಒಂದಿಷ್ಟು ಸರಾಗವಾಗಿ ಉಸಿರು ಬಿಡುತ್ತಿದ್ದಾಳೆ. ಹಿಂದಿನಿಂದಲೂ caricature style ಚಿತ್ರ ಬಿಡಿಸುವುದರಲ್ಲಿ ಆಸಕ್ತಿ ಇದ್ದ ಅವಳು ಒಂಟಿತನ ನೀಗಲು ಅದ್ಯಾವುದೋ animation ಕ್ಲಾಸಿಗೆ ಸೇರಿದ್ದಳು!

“ಅರೇ, ನಿಂಗೆ ನಾನೂ ಬೆಸ್ಟ್ ವಿಶಸ್ ಅಂತ ಕಳಿಸಿದೆನಲ್ವೇ! ನೀ ಬರೇ ಆ ವಿಷಯಕ್ಕೆ ನನ್ಮೇಲೆ ಹೀಗೆ ಕೋಪಮಾಡೊಲ್ಲ.. ಈಗ ಏನಾಯ್ತು ಹೇಳು?”

“ ಅಲ್ಲೇ ಅವರ ಪರಿಚಯವಾಯ್ತು.. ಅದೇ ನಮ್ಮ ಇನ್ಸ್ಟಿಟ್ಯೂಷನ್ ನಲ್ಲೇ..”

ಸುಮ್ಮನೆ ಕೇಳಿದೆ.. ಹ್ಮೂ, ಲವ್ ಸ್ಟೋರಿ ಕೇಳಿಸ್ತಾಳೆ ಇವಳು ಈಗ ನಂಗೆ!

“ಸರಿ ಸುಮಾರು ನನ್ನದೇ ಪ್ರಾಯದವರು.. ಒಳ್ಳೇ ವಾಗ್ಮಿಗಳು. ಮಾತಾಡ್ತಿದ್ರೆ ಸುಮ್ನೆ ಕೇಳುವ ಅನಿಸ್ತಿತ್ತು. ನಮ್ಮ ಸ್ನೇಹದಲ್ಲೇನೋ ಕೆಟ್ಟದಿರಲಿಲ್ಲ. ಪ್ರತೀದಿನ ಫೋನಲ್ಲೋ, ಆಫೀನಲ್ಲೋ ಮಾತಾಡ್ತಿದ್ವಿ. ಅವರು ನಾನು ನಮ್ಮ ಕಷ್ಟ ಸುಖ ಹಂಚಿಕೊಂಡು ಖಾಲಿಯಾಗ್ತಿದ್ವಿ.

ಮತ್ತೆ ಫೋನು, ಭೇಟಿ ಕಮ್ಮಿಯಾಗ್ತ ಬಂತು.. ಕೇಳಿದ್ರೆ ಏನೇನೋ ಸಬೂಬು! ಪುರುಸೊತ್ತು ಇಲ್ಲ.. ನೆಂಟ್ರು ಬಂದಿದ್ದಾರೆ.. ಮನೆಯವಳಿಗೆ ಸೌಖ್ಯವಿಲ್ಲ.. ಮಗನಿಗೆ ಎಕ್ಸಾಮು.. ನಂಗೆ ಗೊತ್ತಿಲ್ಲದೆ ನಾನು ಆ ಸ್ನೇಹಕ್ಕೆ ನನ್ನನ್ನೇ ಅರ್ಪಿಸಿಕೊಂಡಿದ್ದೆ! ನನ್ನ ಮನಸ್ಸು ಇಂತಹ ಸಂದರ್ಭ ಬರಬಹುದೆಂದು ಒಪ್ಪಲೂ ತಯಾರಿರಲಿಲ್ಲ. ಈ ಪ್ರಾಯದಲ್ಲಿ ಇದೇನು ಹುಚ್ಚಾಟ ನಂಗೆ ಅಂತ ಒಂದು ಘಳಿಗೆಯಲ್ಲಿ ಅನಿಸಿದ್ರೂ ಮತ್ತೊಂದು ಘಳಿಗೆಯಲ್ಲಿ ಆ ಸಮಯದಲ್ಲಿ ಅವರೂ ಹಾಗೇ ಇದ್ರಲ್ವ ಅಂತಾನಿಸ್ತಿತ್ತು! ನಾನು ಹೇಳುವ ಮೊದಲೇ ನನ್ನ ಮನಸ್ಸು ಅವರು ಓದುತಿದ್ರು ಮತ್ತು ಅವರದನ್ನು ನಾನು.. ”

“ಒಳ್ಳೇ ದುಷ್ಯಂತನನ್ನೇ ಹಿಡಿದು ಶಕುಂತಲೆ ಆದೆಯಲ್ವಾ ನೀನು..”

ನಾನಂದ್ರೆ ಕೋಪಿಸಿಕೊಳ್ಳಲಿಲ್ಲ ಅವಳು!

“ಹೌದೇ, ಅವರು ನಂಗೆ ಉಂಗುರನೂ ಕೊಟ್ಟಿದ್ದಾರೆ.. ಮತ್ತದು ಕಳೆದುಹೋಗಿಲ್ಲ. ಎಲ್ಲೋ ಕಾಲವಾದ ನನ್ನ ಪತಿಯೇ ದುರ್ವಾಸರಾಗಿ ನನ್ನ ಶಪಿಸಿದ್ರು ಅಂತ ಕಾಣುತ್ತೆ! ಉಂಗುರ ತೋರಿಸಿದ್ರೂ ನೆನಪಾಗ್ತಿಲ್ಲ! ನಂಗೆ ಭಗವದ್ಗೀತೆಯ ಕರ್ಮಣ್ಯೇ.. ಉಪದೇಶಕೊಟ್ರು.

ಇಲ್ಲಿ ನಾವ್ಯಾರೂ ಯಾರಿಗೂ ಏನೂ ಅಲ್ಲ.. ಮಾಯೆಯಾಟ ಈ ಪ್ರಪಂಚ! ಋತುಗಳು ಬದಲಾದ ಹಾಗೆ ಭಾವಗಳೂ ಬದಲಾಗ್ತವೆ. ಒಂದು ದಿನದಲ್ಲೇ ನೋಡು.. ಪೂರ್ವಾಹ್ನ, ಅಪರಾಹ್ನ, ಸಾಯಂಕಾಲ, ರಾತ್ರಿ.. ಎಷ್ಟೆಲ್ಲ ಬದಲಾವಣೆಯಾಗುತ್ತೆ. ನೀನು ನನ್ನನ್ನು ನೆಚ್ಚಿ ಇರಬೇಡ. ನನಗೆ ಜವಾಬ್ದಾರಿಗಳು ಬಹಳ ಇವೆ. ಪ್ರತೀದಿನ ಮಾತು ಆಡಲಾಗುವುದಿಲ್ಲ. ನನ್ನ ಸಂದರ್ಭಗಳು, ಆಯ್ಕೆಗಳು ಬದಲಾಗುತ್ತಲೇ ಇರುತ್ತವೆ! ಮೇಲಾಗಿ ಒಬ್ಬ ಕಲಾಕಾರ ನಾನು. ನಾವೆಲ್ಲ ಇರುವುದೇ ಹೀಗೆ..  ಹೇಳು, ಹೀಗೆಲ್ಲ ಹೇಳಿದರೆ ನಾನು ಯಾರ ಬಳಿ ಹೇಳಿಕೊಳ್ಳಲಿ ಈಗ.. ಏನು ಮಾಡಲಿ! ನನಗೆ ದೈಹಿಕ ಹಸಿವಿಲ್ಲ ಕಣೇ! ಭೌದ್ಧಿಕವಾಗಿ ನಾನು ಸಂಗಾತಿಯನ್ನು ಬಯಸಿದ್ದೆ.. ತಪ್ಪಾಯಿತು. ಅದ್ಯಾಕೆ ನಮಗೆ ವಿರುದ್ಧ ಲಿಂಗದ ಆಕರ್ಷಣೆ.. ಯಾವಾಗ ಬೇಕೆಂದರು ಆವಾಗ ಕಿವಿ ನೀಡುವ ನಿನ್ನಂತಹ ಬಾಲ್ಯ ಸ್ನೇಹಿತೆ ಇದ್ದೂ ಮತ್ತೊಂದು ಸ್ನೇಹಕ್ಕಾಗಿ ಪರಿತಪಿಸಿದ್ದು ನನ್ನ ದೊಡ್ಡ ತಪ್ಪು!”

“ಇಲ್ವೇ, ನಿನ್ನದಿದರಲ್ಲಿ ಯಾವ ತಪ್ಪಿಲ್ಲ. ನಾವೆಲ್ಲ ಮಾನವರು.. ಸಹಜವಾಗಿ ಬಳಿ ಬಂದ ಸ್ನೇಹವನ್ನು ಸ್ವೀಕರಿಸ್ತೀವಿ. ನಾನೂ ಸ್ವೀಕರಿಸಿದ್ದೇನೆ ಮತ್ತು ಗಂಡು ಹೆಣ್ಣಿನ ಮಧ್ಯೆ ಆಕರ್ಷಣೆ ಪ್ರಕೃತಿಯ ನಿಯಮ! ಅದರಲ್ಲೂ ನಾವು ನಾಗರಿಕರೆಂದು ಕರೆದುಕೊಳ್ಳುವವರು ಒಬ್ಬರಿಗೆ ಒಂದು ಸಂಗಾತಿ ಎಂದು ನಿಷ್ಠೆಯೆಂಬ ನಿಯಮ ಪಾಲಿಸುವೆವು.. ಮತ್ತದನ್ನು ಗಂಡೂ ಹೆಣ್ಣೂ ಇಬ್ಬರೂ ಮುರಿಯುತ್ತಾರೆ. ಅಂಕೆ ಸಂಖ್ಯೆಯಲಿ ವ್ಯತ್ಯಾಸವಿದ್ದೇ ಇರುತ್ತದೆ, ಹೆಣ್ಣು ಹೆಚ್ಚು ನಿಷ್ಠಾವಂತಳೆಂಬುರಲ್ಲಿ ಸಂಶಯವಿಲ್ಲವಾದರೂ ಇಂದಿನ ಯುವಪೀಳಿಗೆ ಅದನ್ನು ಬದಲಾಯಿಸಲು ನೋಡುತ್ತಿದೆ!”

“ನೋಡು, ಎಲ್ಲಾ ಮರೆತುಬಿಡು, ಆಧ್ಯಾತ್ಮಿಕ ಪ್ರವಚನ ಕೇಳು, ಓದು.. ಇದೆಲ್ಲಾ ಉಪದೇಶ ಮಾಡುವುದಿಲ್ಲ.. ನಿನ್ನ ಸ್ಥಾನದಲ್ಲಿ ನಿಂತು ಹೇಳುವುದು ಇಷ್ಟೇ. ಮರೆಯಲಾಗುವುದಿಲ್ಲ ಹಳೇಯದಿನಗಳನ್ನು ಎಂಬುದನ್ನು ಒಪ್ಪುತ್ತೇನೆ.. ಆದರೆ ಅದನ್ನೇ ಮತ್ತೆ ಮತ್ತೆ ನೆನೆದು ಆರೋಗ್ಯವನ್ನು ಹಾಳುಮಾಡಿಕೊಳ್ಳುವುದೂ ಸರಿಯಲ್ಲ. ಏಕಾಗ್ರತೆಯಿಂದ ನಿನ್ನ ಕೋರ್ಸು ಮುಗಿಸು ಅಂತಲೂ ಹೇಳೊಲ್ಲ ನಾನು.. ಒಮ್ಮೆಗೆ ಎದ್ದ ಬಿರುಗಾಳಿಗೆ ಸಿಲುಕಿ ಹಾಯಿದೋಣಿ ಓಲಾಡ್ತಿದೆ.. ನೀರಿನಲ್ಲಿ ಬಿದ್ರೆ ಈಜಲೂ ಗೊತ್ತಿಲ್ಲ ನಿನಗೆ.. ಹುಟ್ಟುಹಾಕಲೂ ಆಗುವುದಿಲ್ಲ... ಸುಮ್ಮನೆ ಗಟ್ಟಿಯಾಗಿ ಹಿಡಿದು ಕೂತ್ಕೋ.. ಹುಟ್ಟು ಹಾಕಲು ಬಂದೇ ಬರ್ತಾನೆ  ಮೇಲಿನ ಅಂಬಿಗ. ನನಗಿದೆ ಅವನಲ್ಲಿ ವಿಶ್ವಾಸ, ನಂಬಿಕೆ! ನಂಬಿದವರ ಎಂದೂ ಬಿಡೊಲ್ಲ ಅವನು.. ಒಂದಿಷ್ಟು ತಾರತಮ್ಯ, ಲೇಟು ಮಾಡ್ತಾನೆ ಹೊರತು.. ಕೊನೆ ಕ್ಷಣದಲ್ಲಾದರೂ ಬಂದು ಕೈಹಿಡಿದು ನಡೆಸ್ತಾನೆ ಮತ್ತು ದಡ ಸೇರಿಸ್ತಾನೆ! “

ನಿಂಗೆ ಯಾವಾಗ ಬೇಕೆನಿಸಿದಾಗ ಆವಾಗ ಫೋನು ಮಾಡು.. ಏನ್ ಬೇಕಾದರೂ ಹೇಳ್ಕೊ.. ಕಿವಿ ಕೊಡ್ತೇನೆ, ಅಷ್ಟೇ! You have to take care of yourself. I am always with you! 

25 October, 2013

ಅನುಭವದ ಮೂಸೆಯಿಂದ ಮತ್ತಿಷ್ಟು ಪುಟವಿಟ್ಟಂತಾಗುವಿ ಕೂಸೆ!


ಅನುಭವದ ಮೂಸೆಯಿಂದ ಮತ್ತಿಷ್ಟು ಪುಟವಿಟ್ಟಂತಾಗುವಿ ಕೂಸೆ!
---------------------------------------------------

“ಅಮ್ಮಾ, ಹಳದಿ ಹುಡಿ, ಕಾಫಿ ಪೌಡರ್, ಪೆನ್ ಟಾರ್ಚ್, ನಿಂಬೆ ಹಣ್ಣು, ಹಿಂಗು.. ಎಲ್ಲಾ ರೆಡಿ ಮಾಡಿ ಇಡ್ತಿಯಾ ಪ್ಲೀಸ್? “

ಮಗಳು ಕೇಳಿದಾಗ,

“ಏನೇ, ಪ್ರಾಕ್ಟಿಕಲ್ ಎಕ್ಸಾಮ್ ಅಂದ್ರೆ ಪೇಶೆಂಟಿಗೆ ಕಾಫಿ, ನಿಂಬೆ ಜ್ಯೂಸು, ತಿಂಡಿ ತೀರ್ಥ.. ಎಲ್ಲಾ ಮಾಡಿಕೊಡ್ಲಿಕ್ಕೆ ಉಂಟಾ! ಅಲ್ಲ, ಮನೇಲಿ ಒಂದು ಕೆಲಸ ಮಾಡು ಅಂದ್ರೆ ಮುಖ ಊದಿಸ್ತಿಯಾ! ಈಗ ಅಡುಗೆ ಸಾಮಾನೆಲ್ಲ ಕಾಲೇಜಿಗೆ ತೆಗೆದುಕೊಂಡು ಹೋಗಿ ಏನ್ ಮಾಡ್ತಿಯಾ! “

ಅಂದ್ರೆ ಮತ್ತೆ ಮುಖ ಊದಿಸಿದ್ಲು!

“ಮೊನ್ನೆನೇ ಅಂದಿದ್ದೆ ನಿಂಗೆ! ನಂಗೆ ಪೇಶೆಂಟ್ ಸೆನ್ಸ್ ಟೆಸ್ಟ್ ಮಾಡ್ಲಿಕ್ಕೆ ಅವೆಲ್ಲಾ ಬೇಕಾಗುತ್ತೆ ಅಂತ.. ನೀನೋ ನಿನ್ನ ಸ್ಟೇಟಸ್ ಅಪ್‍ಡೇಟ್ ಮಾಡ್ತಿದ್ದಿ! ತಲೆ ಅಲ್ಲಾಡಿಸಿದ್ದಿ ಮತ್ತೆ.. ನಂಗೆ ಡೌಟಿತ್ತು, ನೀನು ನಾನು ಹೇಳಿದ್ದು ಕೇಳಿದ್ದಿಯಾ ಇಲ್ವಾ ಅಂತ!”

“ಒಹ್!”

ನನ್ನ ತಲೆ ನಾನೇ ಕುಟ್ಕೊಂಡೆ! ಹೌದು ಅವಳು ಹೇಳಿದ್ಲು, ನಾನೇ ಮರೆತಿದ್ದೆ!

ಎಲ್ಲಾ ತಯಾರು ಮಾಡಿಕೊಟ್ಟೆ..

“ಅಮ್ಮಾ! “

ಸಂಜೆ ಮನೆಗೆ ಬಂದವಳೇ.. ಬ್ಯಾಗ್‍ನ್ನು ದೊಪ್ ಅಂತ ಮಂಚದ ಮೇಲೆ ಒಗ್ದು,

“ಇದು ನಮಗೆ ಮೊದಲನೆ ಬಾರಿ ಅಂತ ಗೊತ್ತಿದ್ದರೂ ಹುರಿದು ಮುಕ್ಕುತ್ತಾರೆ..!”

ನಿರಾಸೆ, ಕೋಪ, ದುಃಖ ಎಲ್ಲಾ ಕಣ್ಣಲ್ಲಿ ಮಡುಗಟ್ಟಿತ್ತು.. ಪೇಲವವಾಗಿತ್ತು ಮುಖ!

ಮೌನವಾಗಿ ಅವಳತ್ತ ಮುಂದುವರಿಸು ಎಂಬಂತೆ ನೋಡಿದೆ!

“ನಂಗೆ ಒಬ್ಬ ಸ್ಟ್ರೋಕ್ ಅಟಾಕ್ ಆದ ಅಜ್ಜ ಪೇಶೆಂಟ್! ಅವನಿನ್ನೂ ಔಷಧಿಗಳ ಅಮಲಿನಲ್ಲಿದ್ದ.. ಮೊದಲೇ ನರ್ವಸ್ ಆಗಿದ್ದೆನ್ನಲ್ಲ,
ಅವನ ಮಗನನ್ನು ಯಾವಾಗಿನಿಂದ physio treatment ಶುರು ಆಗಿದೆ ಅಂದ್ರೆ ಸರಿ ಉತ್ರ ಇಲ್ಲ.. ಏನು ಕೇಳಿದ್ರು ಸರಿ ಗೊತ್ತಿಲ್ಲ. ಕೊನೆಗೆ Patient history ನೋಡಿದ್ರೆ ಅದು ಇನ್ನೂ confusion..!”

“ಕೈಯ ಮೇಲಿನ ಭಾಗ ಮುಟ್ಟಿ ಕೇಳಿದೆ, ನೋವುಂಟ.. ತಲೆ ಅಲ್ಲಾಡಿಸಿದ್ರು.. ಕೆಳಭಾಗ ಮುಟ್ಟಿದ್ರೆ- ಮತ್ತೆ ನನ್ನ ಮುಖ ಸುಮ್ನೆ  ನೋಡಿದ್ರು.. ಮತ್ತೆ ಬೆರಳು ಮುಟ್ಟಿದ್ರೆ, ಏನೋ .. ಅಂದ್ರು!


ಕಾಫಿ ಪೌಡರ್, ಹಳದಿ ಹುಡಿ, ನಿಂಬೆ ಎಲ್ಲಾ ಮೂಸ್ಲಿಕ್ಕೆ ಕೊಟ್ಟೆ.. ಪಾಪ ಮೂಸಿದ್ರು. ಏನೋ ಪರಿಮಳ ಬರುತ್ತೆ, ಏನಂತ ಗೊತ್ತಿಲ್ಲ ಅಂದ್ರು. ಅದನ್ನು ಸರ್‌ಗೆ ತೋರಿಸಿದ್ರೆ, ಏನಿದು-patient smelled and sensed but couldn’t recognize the given item! ಹೀಗೆ ಏನೇನೋ ಪ್ರಾಬ್ಲೆಮ್!!!

“ಏನೋ ಗೊತ್ತಿದ್ದಷ್ಟು ಬರ್ಕೊಂಡು ಸರ್ ಮೇಮ್‍ಗೆ ತೋರಿಸಿದರೆ, ಅವರು ಹೀಗೆನಾ ಹಾಗೆನಾ ಅಂತ ಗೇಲಿ ಮಾಡಿದ್ರು.. ಗೊತ್ತಿದ್ದನ್ನೂ ತಪ್ಪು ಬರೆದುಬಿಟ್ಟೆಂತ ಗೊತ್ತಾಗಿ ನಂಗೆ ತಡೆಯೊಕ್ಕಾಗಲಿಲ್ಲ.. ಅಲ್ಲೇ ಕುಸಿದು ಕುಳಿತು ಮುಖ ಮುಚ್ಚಿ ಶುರುಮಾಡ್ಬಿಟ್ಟೆ! ಅವರು ಸಮಾಧಾನ ಮಾಡಿದಷ್ಟು ಗಂಗೆ ಇಳಿತಿದ್ಲು.. ಕೊನೆಗೆ vivaಗೂ ಬಿಕ್ಕುತ್ತಾ ಉತ್ರ ಕೊಟ್ಟೆ. Today was my worst day Amma! How could I've done this! ಇಡೀ ರಾತ್ರಿ ಓದಿದ್ದು ವೇಸ್ಟ್! “


“ಇದೆಲ್ಲಾ ಇದ್ದಿದ್ದೇ, ಈಗ ಕಾಫಿ ಮಾಡ್ತೇನೆ. ಕುಡ್ದು ಮಲಗು. ಮತ್ತೆ ಏಳು ಗಂಟೆಗೆ ಎದ್ದು ನಾಳಿನ ಪರೀಕ್ಷೆಗೆ ಓದು. ಅನುಭವ ಕಲಿಸುತ್ತದೆ. ಇವತ್ತಿಗಿಂತ ನಾಳೆ ಬೆಟರ್ ಮಾಡಬಹುದು. ಇವತ್ತಿನ neurologyಗಿಂತ ನಾಳಿನ orthopedics   ಚೆನ್ನಾಗಿ ಮಾಡು!”

ಅಲ್ವಾ ನೀವೇ ಹೇಳಿ, ಅಷ್ಟೇ ತಾನೇ ನಾ ಹೇಳ್ಬಹುದು!

24 October, 2013

ವೇದ ಪುರುಷನ ಸುತನ ಸುತನ ಸಹೋದರನ ಹೆಮ್ಮಗನ ಮಗನ ತಳೋದರಿಯ ಮಾತುಳನ ಮಾವನ ಅತುಳ ಭುಜಬಲದಿ, ಕಾದಿಗೆಲಿದನಣ್ಣನವ್ವೆಯ ನಾದಿನಿಯ ಜಠರದಲಿ ಜನಿಸಿದ ಅನಾದಿ ಮೂರುತಿ ಸಲಹೋ ಕೃಷ್ಣ ಗದುಗಿನ ವೀರ ನಾರಾಯಣ||


ಇದು ಸುಮಾರು ೩೦ ವರ್ಷದ ಹಿಂದೆ ಕೇಳುತ್ತಿದ್ದ ಹಾಡು.  ಈ ಹಾಡನ್ನು ಶ್ರೀ ವಾಸುದೇವಾಚಾರ್ಯರು ಪ್ರವಚನ ಪ್ರಾರಂಭಿಸುವ ಮೊದಲು ಶ್ರೀ ನಾರಾಯಣಾಚಾರ್ಯರು ಸುಶ್ರಾವ್ಯವಾಗಿ ಹಾಡುತ್ತಿದ್ದರು. ಅದರ ಅರ್ಥ ತಿಳಿದ ನಂತರ ಮತ್ತೂ ಹತ್ತಿರವಾಗಿತ್ತು ಹೃದಯಕ್ಕೆ ಈ ಹಾಡು.!  ಈ ಹಾಡು ನಮ್ಮೆಲ್ಲರಿಗೂ ಬಹಳ ಪ್ರಿಯವಾಗಿತ್ತು. ಇವತ್ತು ಪೂರ್ವಾಹ್ನ ಅಮ್ಮ ಹಾಡುವುದನ್ನು ಕೇಳಿ ಮನಸ್ಸು ಮತ್ತೆ ೩೦ ವರ್ಷ ಹಿಂದೆ ಹೋಯಿತು. ಪ್ರಫುಲ್ಲವಾಯಿತು. ಫೇಸ್ ಬುಕ್ ಮಿತ್ರರೊಂದಿಗೆ ಹಂಚಿಕೊಳ್ಳುವ ಅನಿಸಿತು. ಮಿತ್ರರೇ, ಈ ಹಾಡಿನಲ್ಲಿ ಬರುವ ಒಗಟಿನಂತಿರುವ ಸಂಬಂಧಗಳನ್ನು ಬಿಡಿಸಲು ಯತ್ನಿಸುವಿರಾ? ಸರಿಯಾದ ಉತ್ತರ ನಾಳೆ ಹಾಕುವೆ!
ಸಂಸ್ಕೃತಿಯೆಂದರೆ ಮನುಷ್ಯರ ಅನ್ಯೋನ್ಯ ಸಂಬಂಧಗಳಲ್ಲಿ ನಯವಿನಯಗಳ ಸೊಬಗು. ಸ್ವಗುಣ, ಪರಗುಣಗಳ ಸಮ್ಮಿಶ್ರಿತ ಕಾಂತಿ!
-ಡಿ.ವಿ.ಗುಂಡಪ್ಪ

ಸಾಹಿತ್ಯದ ಪರಮೋದ್ದೇಶ ರಸಾನುಭವ ಎಂದು ನಾನು ನಂಬಿದವನಲ್ಲ; ಜ್ಞಾನಾರ್ಜನೆ ಎಂದೂ ನಂಬಿದವನಲ್ಲ. ಅವೂ ಇವೆ, ನಿಜ. ಆದರೆ ಅದೇ ಮುಖ್ಯವಲ್ಲ. ನನ್ನ ದೃಷ್ಟಿಯಲ್ಲಿ ಸಾಹಿತ್ಯವೂ ನಮ್ಮ ಭಾವ ಭಾವನೆಗಳನ್ನು ಮಾನವೀಯ ಅಂತಃಕರಣ, ಅನುಕಂಪ, ಸಹಾನುಭೂತಿಗಳಿಗೆ ಶೃತಿ ಹಿಡಿಯುವ, ತಿದ್ದಿ ತೀಡಿ ಸಂಸ್ಕಾರಗೊಳಿಸುವ ಮಾಧ್ಯಮ. ಮನುಷ್ಯ ಪ್ರೀತಿಯನ್ನು ಉಳಿಸದ, ಬೆಳೆಸದ, ಸಾಹಿತಿ ಹಾಗೂ ಸಾಹಿತ್ಯ ಇದ್ದರೇನು? ಇಲ್ಲದಿದ್ದರೇನು?

-ಚದುರಂಗ

23 October, 2013

ಲೈಕುಗಳೂ, ಕಮೆಂಟುಗಳೂ.. ಫೇಸ್ ಬುಕ್ ಪ್ರತಾಪ!

ಒಂದು ಇನ್ ಬಾಕ್ಸ್ ಸಂಭಾಷಣೆ..
----------------------------

ಅವಳು: ವ್ಹಾ! ಶೀಲಾ!!! ಏನು ಮೆಚ್ಚುಗೆಗಳು ಬರ್ತವೆ ಈಗೀಗ ನಿಂಗೆ!

ನಾನು: ಏನು, ನೀನು ನನ್ನ ಪೋಸ್ಟ್‌ಗಳನ್ನೆಲ್ಲ ನೋಡ್ತಿಯಾ?

ಅವಳು: ಅದೇ ನ್ಯೂಸ್ ಫೀಡ್‍ನಲ್ಲಿ ಬರ್ತವೆಯಲ್ಲ.. ಆಗ ಮಾತ್ರ!

ನಾನು: (ಅಳಕುತ್ತ) ನಿಜ ಹೇಳು ನಿನಗೆ ನನ್ನ ಬರಹಗಳು ಇಷ್ಟವಾಗ್ತದಾ? ನೀನು ಲೈಕ್ ಹಾಕೋದೇ ಇಲ್ಲ!

ಅವಳು: ಹ್ಹ ಹ್ಹ.. ನಿಜ ಹೇಳ್ಲಾ! ನಿಂಗೆ ನಾನು ಯಾರಂತ ಗೊತ್ತಲ್ವಾ! ಅವು ಬಾಲಿಷ ಅಂತ ಕಾಣ್ತವೆ! ಅದಕ್ಕೆ ನಂಗೆ ಆಶ್ಚರ್ಯ ವಾಯಿತು!  ‍ಅಲ್ಲ, ಫೋಟೊ ಏನು ಒಂಚೂರು ಆಗ್ಬಹುದು.. ಆದರೆ, ಆ ಕತೆಗಳು.. ನಗೆ ಬರ್ತದೆ!

ನಾನು: ಏ, ನಾನು ಕತೆ ಕಟ್ಟಿಲ್ಲ! ಅದೆಲ್ಲ ನಿಜವಾಗಿ ನಡೆದದ್ದು ಕಣೇ!


ಅವಳು: ಸರಿ, ಅದೆಲ್ಲ ಬರೆದು ನೀನು ಬರಹಗಾರ್ತಿ ಅಂತ ತಿಳ್ಕೊಳ್ತಿದ್ದಿಯಾ! First of all, ನಿನ್ನ ಮನೆಯಲ್ಲಿ ನಿತ್ಯ ನಡೆಯುವುದನ್ನೆಲ್ಲ ಏಕೆ ಬರೆಯಬೇಕು? ಅದನ್ನೇಕೆ ಹಂಚಿಕೊಳ್ಳಬೇಕು.. ಅರ್ಥವಾಗ್ತಿಲ್ಲ!

ನಾನು: ನೋಡು, ಓದಲಿ ಎಂದು ನಾನು ಹಾಕುವುದಿಲ್ಲ.. ಓದಿದರೆ ಖುಷಿ ಖಂಡಿತ ಇದೆ. ಓದದೇ ಇರುವ ನನ್ನ ಮಿತ್ರರೂ ಇದ್ದಾರೆ

ನೆನಪುಂಟಾ ಆ ಹಾಡು, ನೀನೂ ನಾನೂ ನನ್ನ ಮಗನಿಗೆ ಹೇಳ್ಕೊಟ್ಟಿದ್ವಿ,

ಎದೆ ತುಂಬಿ ಹಾಡಿದೆನು ಅಂದು ನಾನು
ಮನವಿಟ್ಟು ಕೇಳಿದಿರಿ ಅಲ್ಲಿ ನೀವು..
ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ..
ಹಾಡುವುದು ಅನಿವಾರ್ಯ ಕರ್ಮ ನನಗೆ
ಕೇಳುವವರಿಹರೆಂದು ಬಲ್ಲೆ ನಾ ಅದರಿಂದ
ಹಾಡುವೆನೆ ಮೈದುಂಬಿ ಎಂದಿನಂತೆ
ಯಾರು ಕಿವಿ ಮುಚ್ಚಿದರೂ ನನಗಿಲ್ಲ ಚಿಂತೆ..

ಇನ್ನು ಒಂದು ಹೇಳ್ತೇನೆ ಕೇಳು, ನಿಂಗೆ ಕಿರಿ ಕಿರಿ ಅನಿಸಿದರೂ ಪರವಾಗಿಲ್ಲ. ನೀನು ಇಷ್ಟೆಲ್ಲ ಆಕ್ಷೇಪ ಎತ್ತಿದ ಮೇಲೆ ಅದನ್ನೂ ಕೇಳ್ಕೊಂಡು ಹೋಗು.

ಹೌದು, ಈ ಲೈಕ್‍ಗಳೆಲ್ಲ ನನಗೇನು ಎಲ್ಲರಿಗೂ ಪ್ರಿಯವೇ.. ಮತ್ತೆ ಅದು commentಗೂ ಅಪ್ಲೈ ಆಗುತ್ತೆ. ನಿನಗೇನು ಆಫೀಸಿ ಹೋಗ್ತಿ.. ಅಲ್ಲಿ ಏನೇನೋ ಗೀಚ್ತಿ, ನಿನ್ನ ಬಾಸು ಶಹಭಾಸ್ ಕೊಡ್ತಾರೆ.. ಮತ್ತೆ ನಿನ್ನ ಚೇಲಗಳು ಹ್ಮೂಗುಟ್ತವೆ!

ಆದರೆ, ನಮ್ಮಂತವರಿಗೆ, ಅದೇ ನಾಲ್ಕು ಗೋಡೆಗಳ  ಮಧ್ಯೆ ಇರುವವರಿಗೆ, ಅತ್ತ ಒಳ್ಳೆ ಬರಹಗಾರರೂ ಅಲ್ಲ, ಇತ್ತ ಅಷ್ಟೇನು ಕೆಟ್ಟದೂ ಅಲ್ಲವೆನ್ನುವವರ ಮಾತುಗಳಿಗೆ ಬೆಲೆ ಎಲ್ಲಿ! ಬರುವ ಲೈಕ್‍ಗಳನ್ನೆಲ್ಲ ನೋಡ್ತೇನೆ..

 ನನ್ನವರು, ನನ್ನ ಅತೀ ಪ್ರಿಯ ಸ್ನೇಹಿತರು ಇರುವರೇ ಎಂದು ನೋಡುತ್ತೇನೆ.. ಅಂತಹ ಲೈಕುಗಳೇ ನಿಜ ಬೋನಸ್ ಅಂಕಗಳು... ಇನ್ನು ಉಳಿದವರ ಬಗ್ಗೆ ಗೊತ್ತಿಲ್ಲದೆ ನಾನು ಅದಕ್ಕೆ ಬೆಲೆ ಕೊಡುವಂತಿಲ್ಲ! ಸರಿ, ಇನ್ನೇನೂ ಉಳಿದಿಲ್ಲ.. ಬಾಯೈ


ಮೂಡಣ ದಿಕ್ಕಿನಲ್ಲಿ ಬೆಳಕು ಮೂಡಿ ಕತ್ತಲೆ ಕರಗುತ್ತಿದ್ದಂತೆ
ಬೆಚ್ಚನೆ ಹೊದ್ದು ಮಲಗಿದ ಮೊಬೈಲೂ ಬೆಳಗುತ್ತದೆ..
ಕಿಣಿ ಕಿಣಿ ನಾದ..
ಹೊತ್ತು ತರುತ್ತದೆ ಕಳಿಸಿದವರ ಭಾವವನೂ ಸಂದೇಶದ ಜತೆ..
ಅರಳಿಸಿದರೆ ಕೆಲವು, ಅಳಿಸುವುದು ಹಲವು..

ಮನವನು!

22 October, 2013

ಅಮ್ಮಾ.. ಪ್ಲೀಸ್, ಇನ್ನು ಸಾಕು. ಹೊತ್ತಾಗ್ತದೆ!”

ಮಸಾಲೆದೋಸೆಯ ಒಂದು ಕಾಲು ತುಂಡು ಇನ್ನೂ ಪ್ಲೇಟ್‍ನಲ್ಲಿ ಹಾಗೆ ಇತ್ತು!

’ಮತ್ತೆ ಮುಂದಿನ ಜನ್ಮ.. “

ಅಲ್ಲಿಂದೆದ್ದು ಕೈತೊಳಿಲಿಕ್ಕೆ ಓಡಿದ್ಲು.

ಮುಖ ಒರ್ಸಿಕೊಳ್ಳುತ್ತಾ,

“ಎಷ್ಟು ಸಲ ಈ ಡೈಲಾಗ್ ಕೇಳಿ ಆಯ್ತು.. ಹೇಳಿದ್ನಲ್ಲಾ ಗೊತ್ತಿದೆ ಮುಂದಿನ ಜನ್ಮ ಆಫ್ರಿಕಾದಲ್ಲೇ.. ನೀನು ಹೇಳಿ ಹೇಳಿ ಬ್ರಹ್ಮ ತಥಾಸ್ತು ಅಂದ ಕಾಣ್ತದೆ!”

“ಆದ್ರೂ, ಇದನೆಲ್ಲ ನೀನು ಮಾಮನ ಹಿತ್ತಲಲ್ಲಿರುವ ಕಾಗೆ, ರಾಬಿನ್, ಅಳಿಲು, ಕೋಗಿಲೆಗಳಿಗೆ ಹಾಕ್ತಿಯಲ್ಲ.. ಆ ಪುಣ್ಯದಲ್ಲಿ ನನಗೂ ಪಾಲಿದೆ. ಹಾಗಾಗಿ ಬ್ರಹ್ಮ ಕನ್ಸೆಷನ್ ತೋರಿಸ್ತಾನೆ! ಕೆನ್ಯಾದಲ್ಲಿ ಹುಟ್ಟೋಲ್ಲ.. ಸೌತ್ ಆಫ್ರಿಕಾದಲ್ಲೇ ಹುಟ್ತೀನಿ! “
ನಾಲಿಗೆ ಮುಂದೆ ಮಾಡಿ ಓಡಿದ್ಲು!

ಮಣಿಬೇಕಲ್ವಾ ಮಗಳ ಮುದ್ದು ಮಾತಿಗೆ.. ಹಸಿಮುನಿಸು ತೋರುತ್ತಾ ನಾನು ಆ ಸಣ್ಣ ದೋಸೆಯ ತುಂಡು ಹಿಡ್ಕೊಂಡು ಅಮ್ಮನ ಹಿತ್ತಲಿಗೆ ನಡೆದೆ. ಕಂಪೌಂಡ್ ಗೋಡೆಯ ಮೇಲೆ ದೋಸೆಯಿರಿಸಿ, ಹೊರ ಬಂದ ಅಮ್ಮನ ಬಳಿ ಮಾತನಾಡುತ್ತಿದವಳ ಕಣ್ಣಿನ ತುದಿಗೆ ದೋಸೆ ತಿನ್ನಲು ಬಂದ ಚಿಟ್ಟೆ ಹಕ್ಕಿ ಕಾಣಿಸಿತು!

“ಅರೇ, ನನ್ನ ಸವತಿ! ಎಲ್ಲಿದ್ದಿಯಾ ಇಷ್ಟು ದಿನಗಳ ತನಕ?”

ಗಾಳಿಗಿಂತ ವೇಗವಾಗಿ ಕೆಮರಾ ತೆಗೆದುಕೊಂಡು ಹಿಂದಿರುಗಿದೆ.. ಇನ್ನೂ ಅಲ್ಲೇ ದೋಸೆ ತಿನ್ನುತಿತ್ತು! ನಾ ಹತ್ತಿರ ಹೋಗಲಿಲ್ಲ.. ಝೂಮ್ ಮಾಡಿಕೊಂಡು ತೆಗೆದೆ! ಒಮ್ಮೆ ದುರುಗುಟ್ಟಿ ನೋಡಿದಳು ನನ್ನ ಸವತಿ!

“ಹೆದರಬೇಡವೇ, ನಿನ್ನವನು ನನ್ನನೀಗ ಮುಂಜಾನೆ ರಾಗ ಹಾಡಿ ಎಬ್ಬಿಸ್ತಿಲ್ಲ.. ನೀನು ಅವನ ಕಿವಿಹಿಂಡಿದಿಯಾ? ಇರ್ಲಿ ಬಿಡು! ಈಗ ನಿನ್ನ ಕಾಲ! ಬರ್ಲಿ, ವಸಂತ ಕಾಲ! ಹೇಳ್ತೇನೆ ಅವನು ಯಾರವನು ಅಂತ!”


ನಾ ತಿರುಗಿ ಅವಳನ್ನು ಗುರ್ ಗುರ್ ಎಂದೆ! ಕೋಪ ಬಂತೆನೋ, ಸೀದ ಬೆನ್ನು ತಿರುಗಿಸಿದಳು.. ಇನ್ನೂ ದೋಸೆಯ ತುಂಡು ತಿಂದಾಗಿರಲಿಲ್ಲ..

 ಆದ್ರೂ ಸೀದ ಪುರ್‌ನೇ ಹಾರಿಹೋದಳು ನನ್ನ ಸವತಿ, ಹೆಣ್ಣು ಕೋಗಿಲೆ!


21 October, 2013

ಫೇಸ್ ಬುಕ್ ಮಹಿಮೆ..

ಫೇಸ್ ಬುಕ್ ಒಡನಾಟ ಚಟವೆನ್ನುವರು ಕೆಲವರು..


ನನ್ನ ಸಹಮತಿಯಿಲ್ಲವಿದಕೆ..


ನನಗದೊಂದು ಸಹಮನಸ್ಕರ ಗೋಡೆಗಳ ರಂಗುರಂಗಿನ ನೋಟದ ರಸಪಾನ!


ಹೀಗೇ ನಾನೊಂದು ಒಂದು ವಾಕ್ ಹೊರಟರೆ,


ಆ ವಾಲುಗಳಲಿ ಕಣ್ತಣಿಸುವ ಛಾಯಾಚಿತ್ರಗಳ, ಪೈಂಟಿಂಗ್ ಗಳ ಸಂತೆಯಾದರೆ,


ಈ ವಾಲುಗಳಲಿ ಕಾವ್ಯ, ಕತೆ, ಬದುಕಿನ ಅನುಭೂತಿಗಳ ಚಿತ್ರಣ!


ಕಲಿಯಲು ಮನಸ್ಸಿದ್ದರೆ ಎಲ್ಲವನ್ನೂ ಅಪ್ಪಿ ಕರತಂದು ಮನದ ಗೋಡೆಗಳಲಿ ಅಂಟಿಸುವೆವು..


ಸಹಮನಸ್ಕರ ಜತೆ ಕಷ್ಟ ಸುಖ ಹಂಚಿ ಖಾಲಿಯಾಗುವೆವು..


ತಮ್ಮಂದಿರ ಜತೆ ಮಾತಿಗೆ ಮಾತು ಬೆರಸಿ ಕುಲುಕುಲು ನಗುವೆವು..


ಅಣ್ಣ, ಅಕ್ಕಂದಿರ ಸಲಹೆ ಬೆಳಸುವವು ಎಮ್ಮನು..


ಏನಿದೆ, ಏನಿಲ್ಲ..


ಎಷ್ಟೊಂದು ತಮ್ಮಂದಿರು, ಅಣ್ಣಂದಿರು, ಮನದ ಮಾತಿಗೆ ಕಿವಿಯಾಗುವ ಗೆಳೆಯ, ಗೆಳತಿಯರು..


ನಾ ನಿನಗೆ ಕೃತಜ್ಞೆ ಫೇಸ್ ಬುಕ್ ನಿರ್ಮಿತನೇ, ಮಾರ್ಕ್ ಝುಕರ್ ಬರ್ಗ್ ನೇ!

ಮುಗಿಲ ಮ್ಯಾಲಿನ ಆ ಲೋಕ..

ಮುಗಿಲ ಮ್ಯಾಲಿನ ನನ್ನಾ ಲೋಕ..
-----------------------------

ಎಂದಿನಂತೆ ಅದೇ ನೀರಸ good morning ಅದಲು ಬದಲಾದ ನಂತರ ನನ್ನ ಫೋನ್ ಸ್ಕ್ರೀನ್ ನಲ್ಲಿ ಬಂತು..

“watsup?”

ನನಗೆ ಇಂತಹ ಮೆಸೇಜು ಕಂಡರೆ ಪಿತ್ತ ನೆತ್ತಿಗೇರುತ್ತೆ..

“The sky is still up, it didn’t fall yet..”

ಪ್ರತ್ಯುತ್ತರ ಕಳುಹಿಸಿದೆ.

“ಅರೇ, ಆಕಾಶವೆಂಬುದು ಇಲ್ಲ ಕಣೇ.. ಅದು ಖಾಲಿ ಜಾಗ ಅಷ್ಟೇ.. Its virtual!”

“ಓ ಹೌದೇನೋ, ನಂಗೆ ಗೊತ್ತೇ ಇರಲಿಲ್ಲವಲ್ಲ. ಈ infoಗಾಗಿ ಥಾಂಕ್ಸ್!

ಆದರೆ ನಾನು ಒಂದು ಹೇಳ್ಲಾ.. ನನಗೆ ನಿನ್ನ ಈ ಕೆಟ್ಟ, ತೋರಿಕೆಯ ಜಗತ್ತಿಗಿಂತ ನನಗೆ ನನ್ನಾ ಮಿಥ್ಯಾ ಲೋಕವೇ ಇಷ್ಟ. ನಾನಿರಿವುದು ಅದೇ ಜಗತ್ತಿನಲ್ಲಿ..

ಅಲ್ಲಿರುವುದು ಬರೇ ಪ್ರೀತಿ.. ಯಾವ ನೋವೂ ಇಲ್ಲ. ನಿನ್ನೀ ಜಗತ್ತಿನಲ್ಲಿರುವ ಭೇದಭಾವ ಅಲ್ಲಿಲ್ಲ.  ಜಾತಿ, ಮತ, ಧರ್ಮ, ಪ್ರತಿಭೆ, ಅಂತಸ್ತು, ಲಿಂಗ, ಬಣ್ಣ ಯಾವುದರ ತಾರತಮ್ಯವಿಲ್ಲ. ತಿರಸ್ಕಾರದ ನೋವಿಲ್ಲ..  ಶಬ್ದಗಳ ನೆರವಿಲ್ಲದೇ ಸಂವಹನ.. ಮೌನದ ಕಲರವ..

ನಾನು ಕರೆದ ಕ್ಷಣ ಬಂದು ಕಿವಿಯಾಗುತ್ತದೆ ಈ ಮುಗಿಲು.. ತನ್ನ ಮೋಡಗಳಲ್ಲಿ ತೇಲಿಸಿ ಜೋಕಾಲಿಯಾಡಿಸುತ್ತದೆ. ಗಾಳಿ ಒಂದು ಕ್ಷಣವೂ ಬಿಡದೇ ಕಚಕುಳಿಯಿಡುತ್ತಾ ಒಂಟಿತನವನ್ನು ದೂರಮಾಡುತ್ತದೆ.. ತನ್ನ ಅಂಗೈಯಲ್ಲಿ ನನ್ನ ಅಂಗೈಯನ್ನು ಬೆಸೆದು  ಎತ್ತೊಯ್ಯುತ್ತದೆ ಅನಿಮಿಷರ ಲೋಕಕ್ಕೆ.. ಬಣ್ಣದ ಓಕುಳಿಯ ಮಧ್ಯೆ ಭಾನು ತನ್ನ ಸ್ವಚ್ಛ ನಿರ್ಮಲ ನಗೆ ಚೆಲ್ಲಿ ತನ್ನ ರಥದಲ್ಲಿ ನನ್ನನ್ನೂ ಕುಳ್ಳಿರಿಸುತ್ತಾನೆ..

ನೋಡು, ನನ್ನ ಎರಡು ಪಕ್ಕಗಳಲ್ಲಿ ಹಕ್ಕಿಗಳೆಲ್ಲ  ಜೋಡಿಸಿವೆ ತಮ್ಮೆಲ್ಲರ ಗರಿಗಳನು.. ನಾನೀಗ ಹಾರಬಲ್ಲೆ.. ತೇಲಬಲ್ಲೆ.. ಈ ಸುಖ ನಿನ್ನೀ ಲೋಕದಲ್ಲಿದೆಯೇನು?”

ಮತ್ತೆ ಮಾತಿಲ್ಲ.. ಈ ಹುಚ್ಚಿಯ ಜತೆ ಎಂಥ ಮಾತನಾಡುವುದು ಅಲ್ವಾ!

20 October, 2013

ನೋವು ಒಳಗುಳಿದರೆ ಅಪಾಯ..

ಬಯಸಿದವರಿಗೆ ಬಯಸಿ ನೋವುಣಿಸುವುದಿಲ್ಲ ಯಾರೂ..
ಮನದಲೇ ಉಳಿದರೆ ನೋವುಣ್ಣುವುದು ಎಮ್ಮಾತ್ಮವೂ..
ಹೊರಹರಿದು ನೋವು ಹಗುರವಾಗುವುದು ಮನವೂ..
ಒಳಗುಳಿದರೆ ಜ್ವಾಲಾಮುಖಿ ಆಗ ಅಪಾಯವೆಲ್ಲರಿಗೂ..

-ಪ್ರೇರಣೆ ದಿವ್ಯಾ

ಮಾತನಾಡುವ ಕಲೆ ನಂಗೆ ತಿಳಿದಿಲ್ಲ.. :-(

ಒಂದು ಸಂಭಾಷಣೆ..
----------------

ಅಮ್ಮಾ, ಅದ್ಯಾಕೆ ನಂಗೆ ಅಳೆದು ಸುರಿದು ಮಾತನಾಡಲು ಬರೊಲ್ಲ? ನೇರವಾಗಿ ಮನದಲ್ಲಿದ್ದುದನ್ನು ಮಾತನಾಡಿ ಕೆಟ್ಟವಳೆನಿಸಿಕೊಳ್ಳುತ್ತೇನೆ! Feeling very bad!”

ಮಗಳು ಹೇಳಿದಳು.

“ಅರೇ, ನೂಲಿನಂತೆ ಸೀರೆ ಅನ್ನೊಲ್ವಾ, ನೀನೇನು ಮಾಡಲು ಸಾಧ್ಯ! ನಿನ್ನ ಅಮ್ಮನ ಬುದ್ಧಿ ನಿಂಗೆ ಬಂದ್ರೆ! ಏನಿದ್ರೂ ನೇರವಾಗಿ ಮನದಲ್ಲಿದ್ದುದನ್ನು ತಿಳಿಸದೇ ಇದ್ರೆ ಅದು ಹೊಟ್ಟೆಯೊಳಗೇ ಉಳಿದುಕೊಂಡ್ರೆ ಅದೂ ಕಷ್ಟ! ಸ್ನೇಹ ಉಳಿಸಿಕೊಳ್ಳಲು ಮನದಲ್ಲಿದುದನ್ನು ಮಾಚಿದ್ರೆ ಅದು ಸ್ನೇಹಕ್ಕೆ ದ್ರೋಹ! ಅವರದನ್ನು ಅರ್ಥಮಾಡಿಕೊಳ್ಳದಿದ್ದರೆ ಅದು ನಿನ್ನ ದುರದೃಷ್ಟ!

ಇಲ್ಲ ಅಂದ್ರೆ, ಈಗ ನಾನೀಗ ಕಲ್ತ ಹಾಗೆ ಅಳೆದು ಸುರಿದು ಮಾತನಾಡು... ಹೇಳ್ತಾರಲ್ಲ ಮಾತು  ಮುತ್ತು, ಮೌನ ಬಂಗಾರ.. ಮಾತನಾಡುವ ಕಲೆ ಗೊತ್ತಿಲ್ವಾ, ಮೌನವಾಗಿ ಇದ್ದುಬಿಡು. ಅದಕ್ಕಿಂತ ಹೆಚ್ಚು ನಂಗೆ ಗೊತ್ತಿಲ್ಲ. ಈ ಎರಡು ವರ್ಷದಲ್ಲಿ ನಿನಗೆ ಎಷ್ಟೊಂದು ವಿಭಿನ್ನ ಮನಗಳ ಪರಿಚಯವಾಗಿದೆಯಲ್ವಾ! ಕಲಿಯುತ್ತ ಹೋಗು.. ಬದುಕಿನಲ್ಲಿ ಬಂದು ಹೋಗುವ ಪಾತ್ರಗಳೇ ಪಾಠ ಕಲಿಸುತ್ತವೆ!”


18 October, 2013

ಶಾಯರಿ ಭಾವಾನುವಾದ-5


ಸದ್ದಿಲ್ಲದೇ ಬಂದು ಸೇರಿದರೆನ್ನ ಬಾಳಿನಲಿ
ಹೊಸ ಪ್ರಶ್ನೆಗಳನೂ ತಂದರವರು ಮನದಲಿ
ಇದವರ ಶೈಲಿಯೋಮುನಿಸೋ ತಿಳಿಯೆ
ನಿಯತಿಯಲೀಗ ದೂರು ಹೇಗೆ ಹೇಳಲೆ!

 Khamosh Guzar Jate Hain Wo Kareeb Se,
Sawal Uth Te Hain Dil Mein Ajeeb Se,
Wo Khafa Hai Ya Ye Unki Ada Hai,
Shikayat Bhi Kya Kare Apne Naseeb Se…

17 October, 2013

ಒಲವಿಗೊಂದು ಓಲೆ!
--------------
ಅಂದು ಕುರುಡಿ, ಕಿವುಡಿಯಾಗಿರಲಿಲ್ಲವಲ್ಲ ನಾನು
ಆದರೂ ನನ್ನೊಳಗಿನ ನಿನ್ನರಿವನ್ನು ಅರಿತಿರಲಿಲ್ಲ
ಅದೇನೇನೋ ಗುರಿಗಳಿದ್ದವು..
ಸಾಧಿಸುವ ಕನಸುಗಳಿದ್ದವು..
ಭುಜದ ಭಾರ ಲೆಕ್ಕಕಿರಲಿಲ್ಲ..
ಅಲೆದಾಟ ಹುಡುಕಾಟದ ದಿನಗಳವು..
ಒಳಗಿದ್ದ ನಿನ್ನರಿವನ್ನು ತೋರಿಸಿಬಿಟ್ಟೆ..
ಹೊರಬಂದು ಕಾಣಿಸಿಯೇ ಬಿಟ್ಟೆ..
ಎಲ್ಲವೂ ಸ್ಥಬ್ಧವಾಯಿತು..
ಯಾವುದೇ ಸದ್ದು ಕೇಳಿಸುತಿಲ್ಲ
ಕುರುಡಿಯೂ ಕಿವುಡಿಯೂ ನಾನೀಗ

ಅದಕ್ಕೇ ಹೆಮ್ಮೆ ನನಗೀಗ!

16 October, 2013

ನಾ ನಂಗೇನೇ ಹೇಳ್ಕೊಳ್ಳೊದು..

ನಾನಾಗಾಗ ಓದುವ ನುಡಿಗಳು
------------------------

ನಾವಾಡುವ ಮಾತುಗಳ ಮೇಲೆ ಗಮನವಿರಲಿ- ಅವು ಕಾರ್ಯಗಳಾಗುತ್ತವೆ.

ನಾವು ಮಾಡುವ ಕಾರ್ಯಗಳ ಮೇಲೆ ಗಮನವಿರಲಿ- ಅವು ಹವ್ಯಾಸಗಳಾಗುತ್ತವೆ.

ನಮ್ಮ ಹವ್ಯಾಸಗಳ ಮೇಲೆ ಗಮನವಿರಲಿ- ಅವು ಚಾರಿತ್ರ್ಯವಾಗುತ್ತವೆ.

ನಮ್ಮ ಚಾರಿತ್ರ್ಯದ ಮೇಲೆ ಗಮನವಿರಲಿ- ಅದು ನಮ್ಮ ಪರ್ಯವಸಾನವನ್ನು ನಿರ್ಧರಿಸುತ್ತದೆ.

Watch your words - they become actions.

Watch your action - they become habits.

Watch your habits - they become character.

Watch your character - it becomes your destiny.
-anonymous


ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...