ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

20 August, 2013

ನಲ್ವತ್ತೈದು ಕಳೆದು ನಲ್ವತ್ತಾರಕ್ಕೇರುವಾಗ!

ನಲ್ವತ್ತೈದು ಕಳೆದು ನಲ್ವತ್ತಾರಕ್ಕೇರುವಾಗ! (ಭಾಗ-1)
-------------------------------------------

ನಾವೆಲ್ಲ ನಿನ್ನನ್ನು ನೋಡ್ಲಿಕ್ಕೆ ಬರುವಾಗ ನಿನ್ನಮ್ಮ ಆಚೆ ಕಡೆ ಮುಖ ತಿರುಗಿಸಿ ಕಣ್ಣೀರು ಸುರಿಸ್ತಿದ್ದಳು!”

ಬಹುಶಃ ಎಷ್ಟು ಬಾರಿ ಅವಳು ಅತ್ತೆಯಂದಿರ ಬಾಯಿಯಿಂದ ಈ ಮಾತನ್ನು ಕೇಳಿದ್ದಾಳೋ, ಲೆಕ್ಕ ತಪ್ಪಿ ಹೋಗಿದೆ! ಪ್ರತೀ ಬಾರಿ ಕೇಳಿದಾಗಲೆಲ್ಲ ಪ್ರಶ್ನೆಗಳು ತುಂಬಿದ ಮುಗ್ಧ ಕಂಗಳು ಅಮ್ಮನತ್ತ ದೃಷ್ಟಿ ಬೀರುತ್ತಿದ್ದವು...  ಅಮ್ಮ ಮೌನಿ! ಬಹುಶಃ ಉತ್ತರ ಕೊಟ್ಟರೂ ಆ ಸಣ್ಣ ವಯಸ್ಸಿನಲ್ಲಿ ಅರ್ಥಮಾಡಿಕೊಳ್ಳುವ ಸಾಮರ್ಥ್ಯವೂ ಇರಲಿಲ್ಲ.

ಕಾಲಚಕ್ರ ತಿರುಗುತ್ತಿದ್ದ ಹಾಗೆ, ವಯಸ್ಸೂ ಏರುತ್ತಿದ್ದ ಹಾಗೆ, ಬುದ್ಧಿ ಬಲಿತ ಹಾಗೆ.. ಅಮ್ಮ ಉತ್ತರಿಸದೇ ಉಳಿದ ಪ್ರಶ್ನೆಗಳಿಗೆ ಬದುಕೇ ಉತ್ತರ ನೀಡಿತು! ಹೆಣ್ಣು ಜೀವದ ಬದುಕೇ ಇಷ್ಟೇ! ಆ ಮನೆಯಿಂದ ಈ ಮನೆಗೆ... ಬದುಕಿಡೀ ಪರರ ಹಂಗಿನಲ್ಲಿ! ಒಟ್ಟು ಕುಟುಂಬದ ಆಕೆಯ ಬದುಕು ಅತ್ತೆ, ಮಾವ, ಮೈದುನ, ನಾದಿನಿ... ಇವರ ಮಧ್ಯೆ ಹಂಚಿಹೋಗಿರುತ್ತದೆ!

ಅಮ್ಮ ಮತ್ತೆ ಮತ್ತೆ ಹೇಳುತ್ತಿದ್ದ ಮಾತು ನೆನಪಾಗ್ತಿದೆ ಅವಳಿಗೆ.. ಒಮ್ಮೆ ಅಮ್ಮ ಅವಳನ್ನು ಅಪ್ಪಿ ಮುದ್ದಾಡಿದಳಂತೆ!
ಕೂಡಲೇ, “ಏನೇ ಇವತ್ತು ಮಗುವಿನ ಮೇಲೆ ಪ್ರೀತಿ ಉಕ್ಕಿ ಬರುತ್ತಿದೆ!” ಕೇಳಿಸಿತಂತೆ!
ಅಮ್ಮ ಬಾಗಿಲ ಮರೆಯಲ್ಲಿ ನಿಂತು ಕಣ್ಣೀರು ಸುರಿಸಿ ಸಮಾಧಾನ ಮಾಡಿಕೊಳ್ಳಬೇಕಾಯಿತು!  

ಅಂತವರಿಗೆ ಸಹಜವಾಗಿ ಮೊದಲ ಮಗು ಹೆಣ್ಣಾದಾಗ ಮನಸ್ಸು ಪಿಚ್ಚಾಗಿತ್ತು.. ’ನನ್ನ ಬದುಕು ನನ್ನ ಮಗಳಿಗೂ ಬಂದರೆ.. ’

ಮಗಳ ಕನಸೋ ಓದು.. ಜ್ಞಾನ ಸಂಪಾದನೆ.. ಕಲಾರಾಧನೆ.. ವಿಪರೀತ ಸ್ವಾಭಿಮಾನಿ! ಬಾಯಿ ಬಿಟ್ಟು ತನಗೆ ಹೀಗೆ ಬೇಕೆಂದು ಹೇಳದೇ ತನ್ನದೇ ಲೋಕದಲ್ಲಿ ಕಳೆದುಹೋಗುತ್ತಾ ತನ್ನವರಿಗಾಗಿ ತನ್ನ ಅಸ್ತಿತ್ವವನ್ನೇ ಮರೆತಳು!

ಎಲ್ಲರಂತೆ ಗೃಹಸ್ಥ  ಧರ್ಮವನ್ನು ಪಾಲಿಸುತ್ತಾ ತನ್ನ ಮಕ್ಕಳ ಕನಸು ನನಸು ಮಾಡುವುದಕ್ಕೆಂದು ತನ್ನೆಲ್ಲಾ ಬಲವನ್ನು ಒತ್ತೆಯಿಟ್ಟಳು!


ನಲ್ವತ್ತೈದು ಕಳೆದು ನಲ್ವತ್ತಾರಕ್ಕೇರುವಾಗ! (ಭಾಗ-2)
----------------------------------------------


ಅಂತಹವಳನ್ನೂ ಕಮಲಾ ದಾಸ್ ಅವರದೊಂದು ಕವಿತೆಯ ಓದು ಬದಲಾಯಿಸಿತು.. ಬದುಕಿನ ಚಿಂತನೆಯನ್ನು ಹೊಸ ತಿರುವಿಗೆ  ಬದಲಿಸಿತು!

ಹೆಚ್ಚು ಕಡಿಮೆ ಮರೆತೇ ಬಿಟ್ಟಿದ್ದ ಕುಂಚ ಮತ್ತೆ ಕೈಗಿತ್ತಳು ಅನಿತಾ ಹೆಗ್ಡೆ ಮೇಲಿನಿಂದ ಪ್ರೇರಣೆಯ ಮೇರೆಗೆ!

ಒಳಗೊಳಗೆ ಬುಸುಗುಟ್ಟುತ್ತಿದ್ದ ಭಾವಗಳು ಮತ್ತೆ ತೇಲಿ ಮೇಲೇರಿ ಬರಲು ಕಾರಣನಾದ ಮಿತ್ರ ಮೊದಲ ಬರಹಕ್ಕೆ ಮುನ್ನುಡಿಯಿತ್ತ!

ಬಾಲ ಭಾಷೆಯಲಿ ಬರೆದ ಬರಹಕ್ಕೆ ಹೊಸ ತಿರುವು ಕೊಟ್ಟು ಮತ್ತಿಷ್ಟು ಗಂಭೀರ ಬರಹಗಳ ಉತ್ಪತ್ತಿಗೆ ಕಾರಣರಾದರು ಆತ್ರಾಡಿ ಸುರೇಶ್ ಹೆಗ್ಡೆಯವರು!

 ಹೇಗ್ ಹೇಗೋ ಸಾಗುತ್ತಿದ್ದ ಅಕ್ಷರಗಳ ಗತಿಯನ್ನು ಕ್ರಮಗತಿಗೆ ತಂದು ತಾಳ್ಮೆಯಿಂದ ಬರೆದುದನ್ನೆಲ್ಲಾ ತಿದ್ದಿ, ನನ್ನಂತ ಅಲ್ಪ ಕಲಾವಿದೆಯ ಕೃತಿಯಲ್ಲೂ ಹೊಸತನ ಕಂಡು ಮತ್ತಷ್ಟು ಹುರಿದುಂಬಿಸಿ,  ಛಾಯಾ ಚಿತ್ರಗಳಲ್ಲೂ ಮತ್ತಷ್ಟು ಸಾಧನೆ ಮಾಡುವಂತೆ ಬೆನ್ನ ಹಿಂದೆ ನಿಂತರು ಉಪೇಂದ್ರಣ್ಣನವರು!


ಅಕ್ಕ ಅಕ್ಕ.. ನೀನು ಮಾಡುವುದೆಲ್ಲವೂ ಚಂದ.. ಅಂತ ಅಕ್ಕನ ಹಿಂದೆ ಮುಂದೆ ತಿರುಗುತ್ತಿದವನಿಗೆ ನೀನೂ ಏನಾದರೂ ಮಾಡು.. ಅಂದಾಗ ಕನ್ನಡ ಭಾವಗೀತೆಗಳ ಹೊಸ ಲೋಕದ ಬ್ಲಾಗ್ ತೆರೆದು ಇಂದು ಪ್ರಸಿದ್ಧಿ ಪಡೆದ ಕಿರಣ!


ಅಮ್ಮನ ಚಿತ್ರಗಳ ಮೊದಲ ವಿಮರ್ಶಕರಾಗಿ, ಅಮ್ಮನ ಪ್ರತಿಯೊಂದು ಕಾರ್ಯದಲ್ಲೂ ಬೆಂಬಲಿಸುವ ಹರೆಯದ ಮಗ ಮಗಳು!


ಮೌನವಾಗಿಯೇ ಅವಳ ಕೆಲಸಗಳಿಗೆ ಬೆಂಬಲ ಕೊಡುವ  ಪತಿ!

“ನಮ್ಮ ಮಿಸ್ಸು ಎಸ್ಸೆಸ್ಸು.. ಬಹಳ ಚಂದ,  ಬಹಳ ಒಳ್ಳೆಯವರು.. “
ತಮ್ಮ ಮಿಸ್ಸು,  ಮೇಡಂ.. ಮಾಡುವ ಚಿತ್ರಗಳ ಮೊದಲ ಪ್ರೇಕ್ಷಕರು  ಮನೆಪಾಠದ ಮಕ್ಕಳು.. ಅವಳ ಅಭಿಮಾನಿಗಳು!

ಕೊನೆಯದಾಗಿ ಹಿಂದೆ ತಮ್ಮ ಮಗಳ ಜ್ಞಾನ ದಾಹವನ್ನು ನಿರ್ಲಕ್ಷಿಸಿದ್ದರೂ ಇಂದು ಮಗಳ ಪ್ರತಿಯೊಂದು ಕೆಲಸಕ್ಕೂ ತನು ಮನ ಧನ ಎಲ್ಲಾ ರೀತಿಯಲ್ಲೂ ಸದಾ ಸಹಾಯ ಹಸ್ತ ಚಾಚಿರುವ ಅಮ್ಮ ಅಪ್ಪ... ಬಲಭುಜದಂತಿರುವ ತಮ್ಮಂದಿರು..

 ಅತ್ತೆಯ ಮೇಲೆ ಪ್ರೀತಿಯ ಮಹಾಪೂರವನ್ನೇ ಹರಿಸುತ್ತಿರುವ ನಯೋಮಿ, ಸಮರ್ಥ ಮತ್ತು ಸಂಜನಾ!

ಅವಳ  45 ವರ್ಷದ ಬದುಕನ್ನು ಹಸನ್ನಾಗಿ ಮಾಡಿದವರೆಲ್ಲರಿಗೂ ಸಲಾಂ!
No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...