ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

29 August, 2013

ಮತ್ತೂ ನಿನ್ನ ನಾ ಬಯಸದೆ ಇರಲಾರೆನಲ್ಲ!

ಮತ್ತೂ ನಿನ್ನ ನಾ ಬಯಸದೆ ಇರಲಾರೆನಲ್ಲ!
----------------------------------
ನಾ ಒಲವು ತುಂಬಿ ಕೊಟ್ಟ ಗಡಿಗೆಯೆಲ್ಲೋ ಕನಯ್ಯ...
ಅಂದರೆ, ಅದೇಕೋ ಪಿಳಿಪಿಳಿ ಕಣ್ಣ ಬಿಟ್ಟು
ಮುಗ್ಧ ನೋಟ ಬೀರುವೆ!
ಗಡಿಗೆಯಲ್ಲಿ ತೂತಿತ್ತು ಕಣೇ..

ನೀ ತುಂಬಿಸಿ ಕೊಟ್ಟ ಅನುರಾಗ
ನಾ ನಡೆದ ಹಾದಿಯ ತುಂಬಾ ಚೆಲ್ಲಿ
ಗಡಿಗೆ ಖಾಲಿಯಾಯಿತು ಕಣೇ..
ನೀನೆಂದರೆ ನಾ ನಂಬುವೆನೆ ನಿನ್ನ, ಕಳ್ಳ!

ಸಿಕ್ಕಿರಬೇಕು ಮತ್ತೊಬ್ಬಳು ಮೋಹಕ ಚೆಲುವೆ..
ಅವಳ ಕಣ್ಣ ನೋಟದ
ಬಲೆಗೆ ನೀ ಮೀನಾಗಿ ಬಿದ್ದಿರುವೆ..

ನಿನ್ನ ಉತ್ತರೀಯಕಂಟಿಕೊಂಡಿರುವ
ಮಲ್ಲಿಗೆಯ ಪಕಳೆ ಸುಳ್ಳು ಹೇಳೊಲ್ಲವಲ್ಲ..
ನಿನ್ನ ಮುರಳಿಗೆ ಮೆತ್ತಿರುವ ತುಟಿಯ ರಂಗು
ಕತೆಯೊಂದನು ಹೇಳುತ್ತಿದೆಯಲ್ಲಾ...

ನಿನ್ನ ರಂಗಿನಾಟವನೆಲ್ಲ ನಾ ಬಲ್ಲೆನಲ್ಲ, ಮೋಹನ!
ಮತ್ತೂ ನಿನ್ನ ನಾ ಬಯಸದೆ ಇರಲಾರೆನಲ್ಲ!ನಾನು ಮತ್ತು ಅವರು!ಅವರು ಮೌನವಾಗಿಯೇ ಸಂವಹನ ಮಾಡುವವರು.. ಮಿತಭಾಷಿ
ನಾನೋ ಬಡಬಡ ಮಾತನಾಡಿ ಖಾಲಿಯಾಗುವ ಧಾವಂತದವಳು... ವಾಚಾಳಿ
ಅವರು ತುಟಿ ಅರಳಿಸದೇ ಕಣ್ಣುಗಳಲ್ಲೇ ನಗು ತೋರುವವರು..
ನಾನೋ ಬಾಯಿ ಬಿಚ್ಚಿ ಮೂವತ್ತೊಂದು ಹಲ್ಲುಗಳನ್ನು ತೋರುತ್ತಾ ನಗುವವಳು..
ಅವರ ನಗುವಿಗೆ ಸದ್ದೇ ಇಲ್ಲ..
ನನ್ನದೋ ಗಹಗಹಿಸಿ ನಗುವ ಅಭ್ಯಾಸ..
ಅವರೋ ಮಾತನಾಡಿದರೇ ವೀಣೆಯ ಝೇಂಕಾರ..
ನನ್ನದೋ ಶೃತಿಯಿಲ್ಲದ ಗಿಟಾರ್ ನಂತಹ ಸ್ವರ..
ಅವರೋ ನಟನೆ, ಸಂಗೀತ, ಸ್ತೋತ್ರ, ಭಜನೆಗಳಲ್ಲಿ ಪರಾಂಗತರಾದರೂ ಕೊಚ್ಚಿಕೊಳ್ಳುವವರಲ್ಲ..
ನಾನೋ ಏನೋ ಅಲ್ಪ ಸ್ವಲ್ಪ ಅರಿತೇ ನನ್ನ ಬಗ್ಗೆ ದಂಡೋರ ಸಾರುವವಳು..
ಇಷ್ಟಿದ್ದೂ ಇಬ್ಬರೂ ಒಂದೇ ಒಂದು ವಿಷಯದಲ್ಲಿ ಸಮಾನರು..
ಭಾವುಕರು.. ಇದೇ ನನ್ನದೂ ಅವರದೂ ಅರ್ಹತೆ!
ಬರೇ ನಾಲ್ಕು ದಿನಗಳ ಜತೆ ಅತ್ಯಂತ ಸಮೀಪ ತಂದಿತು..
ಮತ್ತೆಂದಿಗೂ ದೂರವಾಗದಂತೆ ಭಾಂದವ್ಯ ಬೆಸೆಯಿತು!23 August, 2013

ನಾ ನಡೆದ ಹಾದಿಯ ಹೆಜ್ಜೆಯ ಗುರುತುಗಳನು ಅಳಿಸಿ, ಮತ್ತೆ ನಾನಳಿಯಬೇಕು!
ತುಂಬಿದ ಕೊಡ ತುಳುಕದು ಅಂತಾರೆ ಹಿರಿಯರು
ಅರ್ಧ ತುಂಬಿದ ಕೊಡವೂ ತುಳುಕಿದರೂ ಹೊರಬೀಳುವುದು ಕಮ್ಮಿನೇ
ಮುಕ್ಕಾಲು ಪಾಲು ಭಾವ ತುಂಬಿದ ಕೊಡ ನಾನು
ಹೆಜ್ಜೆ ಹೆಜ್ಜೆಗೂ ಅಕ್ಷರಗಳನು ತುಳುಕಿಸುತ್ತಲೇ ಸಾಗುತ್ತಿದ್ದೇನೆ..
ಪೂರ್ತಿ ತುಂಬುವುದನೇ ಕಾಯುತ್ತಿದ್ದೇನೆ
ಮತ್ತೆ ಭಾವ ಚೆಲ್ಲದೇ ನಡೆಯುವ ದಿನಗಳನ್ನು.

ಮತ್ತೆ ಮರುಭೂಮಿಯಾಗಲಿದೆಯೋ ಆ ಎದೆಯಿಂದು!


ಬರಡು ಎದೆಯದು
ಬಿತ್ತಿ ಉತ್ತಿದರೂ
ನೀರು ಹರಿಸಿದರೂ
ಬೆಳೆ ಬೆಳೆಯದೆಂದು
ನಿರ್ಲಕ್ಷ ತೋರುತ್ತಿದ್ದರಂದು..
ಮರುಳು ಹಾರಿಹೋಯಿತೋ..
ಸಣ್ಣಗೆ ಬೀಸಿದ ತಂಗಾಳಿಗೆ
ಧಮನಿಗಳಲಿ ಬಿಸಿರಕ್ತ ಚಿಮ್ಮಿತೋ..
ತಡವೇ ಇಲ್ಲ..
ಬೀಜ ನೆಟ್ಟರು..
ನೀರು ಹೊಯ್ದರು..
ಹಸಿರು ಎತ್ತಿತು ತಲೆ..
ಚಿಮ್ಮಿತು  ಜೀವಸೆಲೆ..
ಪೈರು  ಕೊಯ್ಯುವರಿಲ್ಲದೇ
ಮತ್ತೆ ಒಣಗಿ ಬಾಡಿತು
ಮತ್ತೆ ಮರುಭೂಮಿಯಾಗಲಿದೆಯೋ

ಆ ಎದೆಯಿಂದು!

22 August, 2013

ಅಭಿ ಮುಝ ಮೇ ಕಹೀ ಬಾಕಿ ಥೋಡಿ ಸಿ ಹೈ ಜ಼ಿಂದಗಿ!ಉಳಿದಿತ್ತೇನೋ ಇನ್ನೂ
ಎದೆಬಡಿತ ಒಂದಿಷ್ಟು ನನ್ನಲ್ಲಿ
ಹೊಸ ಬಡಿತ ಕೇಳುತ್ತಿದೆ
ಉಸಿರಾಡುತ್ತಿದ್ದೇನೆ ಇನ್ನೂ
ಅರಿತೆ ನಾನದರಿಂದ
ಏನೋ ಭರವಸೆ ಈ ಕ್ಷಣದಲ್ಲಿ
ಎಲ್ಲಿತ್ತು ನನ್ನೀ ಕ್ಷಣವು ಇಲ್ಲಿಯವರೆಗೆ||

ನನ್ನೆದುರಿಗಿದೆ
ಸ್ಪರ್ಶಿಸಲೇ ಒಂಚೂರು
ಉಸಿರಾಡಲೇ.. ಇಲ್ಲಾ ನಿಲ್ಲಿಸಲೇ..
ಮುಟ್ಟಲೇ ನನ್ನೀ ಖುಷಿಯನು
ಇಲ್ಲಾ ಅಳಲೇ...
ಉಸಿರಾಡಲೇ.. ಇಲ್ಲಾ ನಿಲ್ಲಿಸಲೇ..||

ಹಾ.. ಇನ್ನೂ ಎಲ್ಲೋ ಉಳಿದಿದೆ
ಒಂದಿಷ್ಟು ಬಡಿತ ನನ್ನಲ್ಲಿ||

ಹಾ.. ಬಿರುಬಿಸಿಲಲಿ ಒಣಗುತ್ತಿದ್ದ ಕಾಯ
ಒಂದಿಂಚು ಕದಲಿತು ಹಸಿರಿನ ಗಾಳಿಗೆ
ಪುಸಲಾಯಿಸಿ ಒಲಿಸಿದ
ಮುನಿದ ಮಗುವಿನ ನಗೆಯಂತಿತ್ತೇನೋ
ಅನಿಸುತಿದೆ ಮನಸಿಗೆ ಹೀಗೆ ಇನ್ನೇನೋ
ವರುಷಗಳ ಹಿಂದಿನ ಗಾಯಕೆ
ಮದ್ದು ಹಾಕಿದ ಹಾಗೆನೋ
ಏನೇನೋ ಅನುಭೂತಿ
ಈ ಕ್ಷಣದಲ್ಲಿ
ಎಲ್ಲಿತ್ತು ನನ್ನೀ ಕ್ಷಣ ಇಲ್ಲಿಯವರೆಗೆ!
ಉಸಿರಾಡಲೇ.. ಇಲ್ಲಾ ನಿಲ್ಲಿಸಲೇ..
ಮುಟ್ಟಲೇ ಖುಷಿಯನು
ಇಲ್ಲಾ ಅಳಲೇ..
ಉಸಿರಾಡಲೇ.. ಇಲ್ಲಾ ನಿಲ್ಲಿಸಲೇ.. ||

ತುಂಡಾಗಿ ಹಾರಾಡುತ್ತಿದ್ದ ಗಾಳಿಪತಂಗದಂತಿತ್ತಲ್ಲ
ನನ್ನೀ ಜೀವನವು
ನನ್ನದಾಗಿದ್ದದಿಂದು ನಾಳೆ ಇಲ್ಲವಾಗಬಹುದು
ಕತೆಯಾಗಿತ್ತು ಪ್ರತಿದಿನವೂ ನನ್ನದು
ಕರೆಯುತಿದೆ ಹೊಸ ಭಾಂದವ್ಯ ಮತ್ತೆ ಹಿಂದಿನಿಂದ
ಕಾಡುತಿದೆ ಆದರೂ ಮತ್ಯಾಕೆ
ಬರುವ ನಾಳೆಗಳ ಚಿಂತೆ||

ಏನೋ ಸೆಳೆತ ಈ ಘಳಿಗೆಯಲಿ
ಎಲ್ಲಿತ್ತು ನನ್ನೀ ಕ್ಷಣವು ಇಲ್ಲಿಯತನಕ
ಮುಂದಿದೆ.. ಮುಟ್ಟಲೇ ಒಂದಿಷ್ಟು
ಉಸಿರಾಡಲೇ.. ಇಲ್ಲಾ ನಿಲ್ಲಿಸಲೇ..
ಮುಟ್ಟಲೇ ಖುಷಿಯನ್ನು
ಇಲ್ಲಾ ಅಳಲೇ..
ಉಸಿರಾಡಲೇ.. ಇಲ್ಲಾ ನಿಲ್ಲಿಸಲೇ||

21 August, 2013

ಪ್ರೀತಿ ಅಂದರೆ ಇದೆಯೇನು!

ಪ್ರೀತಿ ಅಂದರೆ ಇದೆಯೇನು!
--------------------

“ಶೀಲಾ... ಬೇಗ ಬರ್ತಿಯಾ...!”
ಕಾಲೇಜಿಗೆ ಹೋಗಲು ಸಿದ್ಧಳಾಗುತ್ತಿದ್ದ ನಾನು ಅಮ್ಮನ ಗಾಬರಿಯ ಸ್ವರ ಕೇಳಿ ಹೊರ ಓಡಿ ಬಂದೆ!
“ಸಂಜನಾ ಏನು ಮಾಡಿದರೂ ಅಳು ನಿಲ್ಲಿಸ್ತಿಲ್ಲ! ಬೇಗ ಬಾ.. “
ಮೂರು ಮಕ್ಕಳನ್ನು ಹೆತ್ತು, ಅವರ ಅಳು, ಲೂಟಿ, ಹಠವೆಲ್ಲವನ್ನೂ ಅಷ್ಟು ಚೆನ್ನಾಗಿ ನಿಭಾಯಿಸಿದ ಅಮ್ಮನೇ ಹೀಗೆ ಕೈ ಕಾಲು ಬಿದ್ದು ಹೋದ ಹಾಗೆ ಆಡುವುದನ್ನು ಕಂಡು ನನಗೆ ಅಚ್ಚರಿ!
ಕಣ್ಣುಮೂಗಿನಿಂದ ಇಳಿಸುತ್ತಾ... ಸ್ವರವೆತ್ತಿ ಅಳುತ್ತಿದ್ದ ನನ್ನ ಮುದ್ದುವನ್ನು ಕಂಡು ನನಗೂ ಗಾಬರಿಯಾಯಿತು!
“ಗೊಂಡಿ.. ಯಾಕಮ್ಮಾ.. !”
ಎರಡೂ ಕೈ ಮುಂದೆ ಮಾಡಿ ನನ್ನ ತೆಕ್ಕೆಗೆ ಬಂದಳು! ಅಪ್ಪಿ ಹಿಡಿದವಳಿಗೆ ಹಿತ್ತಲಲ್ಲಿ ಹಾರಾಡುತ್ತಿದ್ದ ಚೆಟ್ಟೆಗಳನ್ನು ತೋರಿಸಿದಾಗ ಶಾಂತವಾದಳಾದರೂ ಎಂಜಲು ನುಂಗದೇ ಬಾಯಿಯಲ್ಲಿಟ್ಟುಕೊಂಡಿದ್ದಳು!
ಮನೆಯೊಳಗೆ ಹೋಗಲು ಒಪ್ಪದವಳನ್ನು ನನ್ನ ಮನೆಗೆ ಕರೆದುತಂದರೆ ಏನೂ ಪ್ರತಿಭಟನೆಯೇ ಇಲ್ಲ!
ಮತ್ತೆ ಅವಳ ತಾಯಿಯ ಕೈಗೆ ಒಪ್ಪಿಸಲು ಹೋದರೆ ಮತ್ತೆ ತಾರಕಕ್ಕೆ ಸ್ವರ!
ಮತ್ತೆ ಹಿತ್ತಲು ಸುತ್ತಾಟ!
ಕೊನೆಗೂ ನನ್ನ ಮಡಿಲಲ್ಲೇ ಮಲಗಿ ನಿದ್ದೆ ಹೋದಳು! ( ನನ್ನ ದಪ್ಪ ಸ್ವರದ ಜೋ ಜೋ ಕೃಷ್ಣ ಹಾಡು ಕೇಳುತ್ತಾ.. )
ಅಮ್ಮನ ಕಣ್ಣಿನಿಂದ ಜಲಪಾತ!
“ಏನು ಮೋಡಿ ಮಾಡಿದೆಯೇ ನೀನು ಇವಳಿಗೆ! ಅಲ್ಲ, ಸಂದೀಪನ ಮಗನೂ ಆ ದಿನ ಬಚ್ಚಲು ಕೋಣೆಯ ಹೊರಗೆ ನಿಂತು.. I want sheelakka.. ಅಂತ ಅಳುತ್ತಿದ್ದ ದೃಶ್ಯ ಮತ್ತೆ ನೆನಪಾಯಿತು ಕಣೇ!”
“ಅಮ್ಮ ಅವು ಇನ್ನೂ ಚಿಕ್ಕವು.. ನನ್ನ ಹೃದಯದೊಳಗಿನ ಪ್ರೀತಿಯ ಅನುಭೂತಿ ಅವಕ್ಕೆ ನೇರವಾಗಿ ತಟ್ಟಿದೆ.. ಅಷ್ಟೇ! Simple!”

ಅಷ್ಟೇ ಹೇಳಲು ಸಾಧ್ಯವಾಯಿತು ನನಗೆ!

20 August, 2013

ನಲ್ವತ್ತೈದು ಕಳೆದು ನಲ್ವತ್ತಾರಕ್ಕೇರುವಾಗ!

ನಲ್ವತ್ತೈದು ಕಳೆದು ನಲ್ವತ್ತಾರಕ್ಕೇರುವಾಗ! (ಭಾಗ-1)
-------------------------------------------

ನಾವೆಲ್ಲ ನಿನ್ನನ್ನು ನೋಡ್ಲಿಕ್ಕೆ ಬರುವಾಗ ನಿನ್ನಮ್ಮ ಆಚೆ ಕಡೆ ಮುಖ ತಿರುಗಿಸಿ ಕಣ್ಣೀರು ಸುರಿಸ್ತಿದ್ದಳು!”

ಬಹುಶಃ ಎಷ್ಟು ಬಾರಿ ಅವಳು ಅತ್ತೆಯಂದಿರ ಬಾಯಿಯಿಂದ ಈ ಮಾತನ್ನು ಕೇಳಿದ್ದಾಳೋ, ಲೆಕ್ಕ ತಪ್ಪಿ ಹೋಗಿದೆ! ಪ್ರತೀ ಬಾರಿ ಕೇಳಿದಾಗಲೆಲ್ಲ ಪ್ರಶ್ನೆಗಳು ತುಂಬಿದ ಮುಗ್ಧ ಕಂಗಳು ಅಮ್ಮನತ್ತ ದೃಷ್ಟಿ ಬೀರುತ್ತಿದ್ದವು...  ಅಮ್ಮ ಮೌನಿ! ಬಹುಶಃ ಉತ್ತರ ಕೊಟ್ಟರೂ ಆ ಸಣ್ಣ ವಯಸ್ಸಿನಲ್ಲಿ ಅರ್ಥಮಾಡಿಕೊಳ್ಳುವ ಸಾಮರ್ಥ್ಯವೂ ಇರಲಿಲ್ಲ.

ಕಾಲಚಕ್ರ ತಿರುಗುತ್ತಿದ್ದ ಹಾಗೆ, ವಯಸ್ಸೂ ಏರುತ್ತಿದ್ದ ಹಾಗೆ, ಬುದ್ಧಿ ಬಲಿತ ಹಾಗೆ.. ಅಮ್ಮ ಉತ್ತರಿಸದೇ ಉಳಿದ ಪ್ರಶ್ನೆಗಳಿಗೆ ಬದುಕೇ ಉತ್ತರ ನೀಡಿತು! ಹೆಣ್ಣು ಜೀವದ ಬದುಕೇ ಇಷ್ಟೇ! ಆ ಮನೆಯಿಂದ ಈ ಮನೆಗೆ... ಬದುಕಿಡೀ ಪರರ ಹಂಗಿನಲ್ಲಿ! ಒಟ್ಟು ಕುಟುಂಬದ ಆಕೆಯ ಬದುಕು ಅತ್ತೆ, ಮಾವ, ಮೈದುನ, ನಾದಿನಿ... ಇವರ ಮಧ್ಯೆ ಹಂಚಿಹೋಗಿರುತ್ತದೆ!

ಅಮ್ಮ ಮತ್ತೆ ಮತ್ತೆ ಹೇಳುತ್ತಿದ್ದ ಮಾತು ನೆನಪಾಗ್ತಿದೆ ಅವಳಿಗೆ.. ಒಮ್ಮೆ ಅಮ್ಮ ಅವಳನ್ನು ಅಪ್ಪಿ ಮುದ್ದಾಡಿದಳಂತೆ!
ಕೂಡಲೇ, “ಏನೇ ಇವತ್ತು ಮಗುವಿನ ಮೇಲೆ ಪ್ರೀತಿ ಉಕ್ಕಿ ಬರುತ್ತಿದೆ!” ಕೇಳಿಸಿತಂತೆ!
ಅಮ್ಮ ಬಾಗಿಲ ಮರೆಯಲ್ಲಿ ನಿಂತು ಕಣ್ಣೀರು ಸುರಿಸಿ ಸಮಾಧಾನ ಮಾಡಿಕೊಳ್ಳಬೇಕಾಯಿತು!  

ಅಂತವರಿಗೆ ಸಹಜವಾಗಿ ಮೊದಲ ಮಗು ಹೆಣ್ಣಾದಾಗ ಮನಸ್ಸು ಪಿಚ್ಚಾಗಿತ್ತು.. ’ನನ್ನ ಬದುಕು ನನ್ನ ಮಗಳಿಗೂ ಬಂದರೆ.. ’

ಮಗಳ ಕನಸೋ ಓದು.. ಜ್ಞಾನ ಸಂಪಾದನೆ.. ಕಲಾರಾಧನೆ.. ವಿಪರೀತ ಸ್ವಾಭಿಮಾನಿ! ಬಾಯಿ ಬಿಟ್ಟು ತನಗೆ ಹೀಗೆ ಬೇಕೆಂದು ಹೇಳದೇ ತನ್ನದೇ ಲೋಕದಲ್ಲಿ ಕಳೆದುಹೋಗುತ್ತಾ ತನ್ನವರಿಗಾಗಿ ತನ್ನ ಅಸ್ತಿತ್ವವನ್ನೇ ಮರೆತಳು!

ಎಲ್ಲರಂತೆ ಗೃಹಸ್ಥ  ಧರ್ಮವನ್ನು ಪಾಲಿಸುತ್ತಾ ತನ್ನ ಮಕ್ಕಳ ಕನಸು ನನಸು ಮಾಡುವುದಕ್ಕೆಂದು ತನ್ನೆಲ್ಲಾ ಬಲವನ್ನು ಒತ್ತೆಯಿಟ್ಟಳು!


ನಲ್ವತ್ತೈದು ಕಳೆದು ನಲ್ವತ್ತಾರಕ್ಕೇರುವಾಗ! (ಭಾಗ-2)
----------------------------------------------


ಅಂತಹವಳನ್ನೂ ಕಮಲಾ ದಾಸ್ ಅವರದೊಂದು ಕವಿತೆಯ ಓದು ಬದಲಾಯಿಸಿತು.. ಬದುಕಿನ ಚಿಂತನೆಯನ್ನು ಹೊಸ ತಿರುವಿಗೆ  ಬದಲಿಸಿತು!

ಹೆಚ್ಚು ಕಡಿಮೆ ಮರೆತೇ ಬಿಟ್ಟಿದ್ದ ಕುಂಚ ಮತ್ತೆ ಕೈಗಿತ್ತಳು ಅನಿತಾ ಹೆಗ್ಡೆ ಮೇಲಿನಿಂದ ಪ್ರೇರಣೆಯ ಮೇರೆಗೆ!

ಒಳಗೊಳಗೆ ಬುಸುಗುಟ್ಟುತ್ತಿದ್ದ ಭಾವಗಳು ಮತ್ತೆ ತೇಲಿ ಮೇಲೇರಿ ಬರಲು ಕಾರಣನಾದ ಮಿತ್ರ ಮೊದಲ ಬರಹಕ್ಕೆ ಮುನ್ನುಡಿಯಿತ್ತ!

ಬಾಲ ಭಾಷೆಯಲಿ ಬರೆದ ಬರಹಕ್ಕೆ ಹೊಸ ತಿರುವು ಕೊಟ್ಟು ಮತ್ತಿಷ್ಟು ಗಂಭೀರ ಬರಹಗಳ ಉತ್ಪತ್ತಿಗೆ ಕಾರಣರಾದರು ಆತ್ರಾಡಿ ಸುರೇಶ್ ಹೆಗ್ಡೆಯವರು!

 ಹೇಗ್ ಹೇಗೋ ಸಾಗುತ್ತಿದ್ದ ಅಕ್ಷರಗಳ ಗತಿಯನ್ನು ಕ್ರಮಗತಿಗೆ ತಂದು ತಾಳ್ಮೆಯಿಂದ ಬರೆದುದನ್ನೆಲ್ಲಾ ತಿದ್ದಿ, ನನ್ನಂತ ಅಲ್ಪ ಕಲಾವಿದೆಯ ಕೃತಿಯಲ್ಲೂ ಹೊಸತನ ಕಂಡು ಮತ್ತಷ್ಟು ಹುರಿದುಂಬಿಸಿ,  ಛಾಯಾ ಚಿತ್ರಗಳಲ್ಲೂ ಮತ್ತಷ್ಟು ಸಾಧನೆ ಮಾಡುವಂತೆ ಬೆನ್ನ ಹಿಂದೆ ನಿಂತರು ಉಪೇಂದ್ರಣ್ಣನವರು!


ಅಕ್ಕ ಅಕ್ಕ.. ನೀನು ಮಾಡುವುದೆಲ್ಲವೂ ಚಂದ.. ಅಂತ ಅಕ್ಕನ ಹಿಂದೆ ಮುಂದೆ ತಿರುಗುತ್ತಿದವನಿಗೆ ನೀನೂ ಏನಾದರೂ ಮಾಡು.. ಅಂದಾಗ ಕನ್ನಡ ಭಾವಗೀತೆಗಳ ಹೊಸ ಲೋಕದ ಬ್ಲಾಗ್ ತೆರೆದು ಇಂದು ಪ್ರಸಿದ್ಧಿ ಪಡೆದ ಕಿರಣ!


ಅಮ್ಮನ ಚಿತ್ರಗಳ ಮೊದಲ ವಿಮರ್ಶಕರಾಗಿ, ಅಮ್ಮನ ಪ್ರತಿಯೊಂದು ಕಾರ್ಯದಲ್ಲೂ ಬೆಂಬಲಿಸುವ ಹರೆಯದ ಮಗ ಮಗಳು!


ಮೌನವಾಗಿಯೇ ಅವಳ ಕೆಲಸಗಳಿಗೆ ಬೆಂಬಲ ಕೊಡುವ  ಪತಿ!

“ನಮ್ಮ ಮಿಸ್ಸು ಎಸ್ಸೆಸ್ಸು.. ಬಹಳ ಚಂದ,  ಬಹಳ ಒಳ್ಳೆಯವರು.. “
ತಮ್ಮ ಮಿಸ್ಸು,  ಮೇಡಂ.. ಮಾಡುವ ಚಿತ್ರಗಳ ಮೊದಲ ಪ್ರೇಕ್ಷಕರು  ಮನೆಪಾಠದ ಮಕ್ಕಳು.. ಅವಳ ಅಭಿಮಾನಿಗಳು!

ಕೊನೆಯದಾಗಿ ಹಿಂದೆ ತಮ್ಮ ಮಗಳ ಜ್ಞಾನ ದಾಹವನ್ನು ನಿರ್ಲಕ್ಷಿಸಿದ್ದರೂ ಇಂದು ಮಗಳ ಪ್ರತಿಯೊಂದು ಕೆಲಸಕ್ಕೂ ತನು ಮನ ಧನ ಎಲ್ಲಾ ರೀತಿಯಲ್ಲೂ ಸದಾ ಸಹಾಯ ಹಸ್ತ ಚಾಚಿರುವ ಅಮ್ಮ ಅಪ್ಪ... ಬಲಭುಜದಂತಿರುವ ತಮ್ಮಂದಿರು..

 ಅತ್ತೆಯ ಮೇಲೆ ಪ್ರೀತಿಯ ಮಹಾಪೂರವನ್ನೇ ಹರಿಸುತ್ತಿರುವ ನಯೋಮಿ, ಸಮರ್ಥ ಮತ್ತು ಸಂಜನಾ!

ಅವಳ  45 ವರ್ಷದ ಬದುಕನ್ನು ಹಸನ್ನಾಗಿ ಮಾಡಿದವರೆಲ್ಲರಿಗೂ ಸಲಾಂ!
ನನ್ನವರ ಪ್ರೀತಿಯ ಕರೆ- ನನ್ನ ಸಗ್ಗ!

GM J
ಮಗನಿಂದ ವಾಟ್ಸ್ ಆಪ್ ನಲ್ಲಿ ಮೆಸೇಜು!
“ನಾನು ಯಾರಪ್ಪಾ ನಿನಗೆ?”
ನನ್ನ ಪ್ರತ್ಯುತ್ತರ!
Gud mrng Amma J
ತಪ್ಪರಿವಾಗಿತ್ತವನಿಗೆ!
ಜನವರಿ ತಿಂಗಳಲ್ಲಿ ಅಫಘಾತವಾದ ನಂತರ ಅವನು ನನಗೆ ಪೂರ್ವಾಹ್ನ ಮತ್ತು ರಾತ್ರಿ ಸಂದೇಶ ಕಳುಹಿಸುವಂತೆ ಹೇಳಿದ್ದೆ! ಅದರಂತೆ ಅವನು ಕಳುಹಿಸಿದ ಮೊದಲ ಸಂದೇಶದಲ್ಲಿ ’ಅಮ್ಮ’ ಇರಲಿಲ್ಲ!
ಅಮ್ಮ ಇರದ ಸಂದೇಶವೆಂದೂ ನನಗಲ್ಲ.. ಎಂಬ ಸ್ಪಷ್ಟ ಸಂದೇಶ ಕೊಟ್ಟಿದ್ದೇನೆ.  ಅದನ್ನು ಇಂದಿಗೂ ಮರೆತಿಲ್ಲ ಅವನು! ಪ್ರತೀ ಮೆಸೇಜು ’ಅಮ್ಮ’ದಲ್ಲಿ ಪ್ರಾರಂಭ ಅಥವಾ ಮುಗಿಯುತ್ತದೆ! ನನ್ನೆದುರೇ ನಿಂತು ಕರೆಯುತ್ತಿದ್ದಾನೆಂಬ ಭಾವ ನನಗೆ!
ಮಗಳಿಗೂ ಕಾಲೇಜಿನಲ್ಲಿರುವಾಗ ಇದ್ದಕ್ಕಿದ್ದಂತೇ ಅಮ್ಮನ ನೆನಪಾಗುತ್ತದೆ..
mom Jಅಲ್ಲಿಂದ ಹೊರಟು ನನ್ನ ಮೊಬೈಲನ್ನು ಮನವನ್ನೂ ಬೆಳಗಿಸುತ್ತದೆ!
ಅಪರೂಪಕ್ಕೆ ಬರುವ ಗೆಳತಿಯ ಸಂದೇಶಗಳೂ... sheeelaaa.. ಎಂದು ಉದ್ದಕ್ಕೂ ಎಳೆದು ಮುಗಿಯುವಾಗ ಮತ್ತೆ ಹಳೆಯ ಕಾಲೇಜಿನ ದಿನಗಳು ಹಸಿಯಾಗುತ್ತವೆ.. ಮೈಮನಸ್ಸು ಅರಳುತ್ತದೆ!

ನನ್ನವರ ಪ್ರೀತಿಯ ಕರೆಯಲ್ಲೇ ನನಗೆ ಸಗ್ಗ ತೋರುತ್ತದೆ!

20-08-2013

19 August, 2013

ಅನುಭವದ ಮಾತು -೨

ಅಂದು ಬುದ್ಧಿ ಹೇಳಿದ ಹಾಗೇ ಕೇಳುತ್ತಿದ್ದೆ;

ಇಂದು ಹೃದಯ ಹೇಳಿದ ಹಾಗೆ ನಡೆಯುತ್ತಿದ್ದೇನೆ;

ಇನ್ಯಾವಾಗ ಬುದ್ಧಿ ಹೃದಯವೆರಡು ಕೂಡಿ ಮುನ್ನಡೆಸುವವವೋ ನನ್ನನ್ನು?

ಅನುಭವದ ಮಾತು!

ನಿಷ್ಕಳಂಕ, ನಿಷ್ಕಲ್ಮಶ ಹೃದಯದಿಂದ ಏನನ್ನೂ ಮುಚ್ಚಿಡಲಾಗದು!

ಪುರಸ್ಕಾರದ ಖುಷಿ, ತಿರಸ್ಕಾರದ ನೋವು ಎರಡೂ ತಟ್ಟುತ್ತದೆ ನೇರವಾಗಿ!

 Acceptance and denial both cannot be hidden from a genuine heart!


18 August, 2013

ವ್ಯಾಘ್ರನಿಗೊಂದು ಸಂದೇಶ!


ಖಂಡವಿದೆಕೋ, ಮಾಂಸವಿದೆಕೋ, ಗುಂಡಿಗೆಯ ಬಿಸಿ ರಕ್ತವಿದೆಕೋ

ಚಂಡ ವ್ಯಾಘ್ರನೇ, ನೀನಿದೆಲ್ಲವ ಉಂಡು ಸಂತಸದಿಂದಿರು


ನನ್ನ ಮುದ್ದು, ಮುಗ್ಧ ಕರುಗಳ ಸುದ್ದಿಗೆ ಮಾತ್ರ ಹೋಗದಿರು!

ನುಡಿ!

ಮನಸಾರೆ ನುಡಿದ ನುಡಿ ಹಾದಿ ತಪ್ಪದೇ ಸೇರಬೇಕಾದ ಮನವನ್ನೇ ಸೇರುತ್ತದೆ!

-ರೂಮಿ

ಮಾತು-ಮೌನ


ಮಾತು ಆಡಿ ಆಡಿ ಕೊಚ್ಚಿಕೊಳ್ಳುವುದನ್ಯಾವಾಗ ಬಿಡಬಲ್ಲೆನೋ?

ಮೌನವೆಂಬ ಅಪೂರ್ವ ಸುಂದರ ಕಲೆಯನು ಇನ್ಯಾವಾಗ ಕಲಿತುಕೊಳ್ಳುವೆನೋ?


-ಪ್ರೇರಣೆ ರೂಮಿ

ಸೋತೆ ಎಂದರೆ ಸಾಕು ತಾನೆ!


ತಗೋ, ನೋಡು ಬಿಳಿ ಬಾವುಟ ಹಾರಿಸಿದ್ದೇನೆ..
ಇನ್ನಿಲ್ಲ ಯುದ್ಧ ಮಾಡುವ ಶಕ್ತಿ ನನ್ನಲ್ಲಿ..
ನೀನೇ ಗೆದ್ದೆ!

ಇದನ್ನೇ ಕೇಳಬೇಕಾಗಿತ್ತಲ್ಲವೆ ನಿನಗೆ, ವಿಧಿಯೇ!

17 August, 2013

ಹಗುರವಾಗಬೇಕಾಗಿದೆಯೇ ಕೋಗಿಲೆ!

ಎಂದಿಲ್ಲದ ನೆನಪು ಕಾಡಿದೆಯೇ ನಿನ್ನ

ನನ್ನ ವಸಂತ ಮಾಸದ ಕೋಗಿಲೆಯೇ

ನಿನ್ನಲ್ಲಿ ಹೇಳಿ ಹಗುರವಾಗಬೇಕಾದ

ಮಾತುಗಳು ನೂರಾರಿವೆ ಹಾಗೆಯೇ

ನೀ ಬಂದು ಜಡ ಮುಂಜಾವುಗಳಲಿ


ಮತ್ತೆ ಜೀವ ತುಂಬಿಸುವೆಯಾ?

ಹೀಗೊಂದು ಮಹಾಕಾವ್ಯ!

ಯಾರದೋ ಭಾವ
ಮತ್ಯಾರದೋ ಶಬ್ದ
ಎರವಲು ಪಡೆದು
ಪೋಣಿಸಿದರೆ ಸಾಕು
ಮಹಾಕಾವ್ಯ ಸಿದ್ಧ
ಮತ್ತೆ ತಡೆಯುಂಟೇ

ವಾಹ್ ವಾಹ್ ಗಳ ವರ್ಷ!

ಕಾಣೆಯಾಗಿಹನು ನನ್ನ ಶಿಲ್ಪಿ... ಹುಡುಕಿಕೊಡುವಿರಾ ಪ್ಲೀಸ್!

ಅಂಗಣದ ಮೂಲೆಯಲ್ಲಿ ಕರಿಶಿಲೆ
ಆಕರ್ಷಕವಿತ್ತೇನೋ..
ಮತ್ತೆ ಮತ್ತೆ ಕೆತ್ತಲೆತ್ನಿಸಿದರೂ ಇವನು..
ಎಲ್ಲಿ ಏನೂ ಬದಲಾವಣೆಯಿಲ್ಲ..
ಹ್ಮ್! ಇವನು ಶಿಲ್ಪಿಯೇ ಅಲ್ಲ.. ಉಳಿಗೆಯೇ ಇಲ್ಲ ಇವನಲ್ಲಿ!
ನಸುನಕ್ಕಿತು ಶಿಲೆ!
ಹೊತ್ತೊಯ್ದರು ಅವರು..
ಇದೀಗ ಉಳಿಗೆ ಪೆಟ್ಟು.. ಅಷ್ಟಿಷ್ಟಲ್ಲ.. ಲೆಕ್ಕವಿಟ್ಟವರ್ಯಾರು!
ಛೀ.. ಛೀ.. ಬಡವಾಯಿತು.. ಅನಾಕರ್ಷವಾಯಿತಲ್ಲ!
ಮತ್ತೆ ಬಿಸುಟರು ಅದೇ ಅಂಗಣಕ್ಕೆ..
ಕೆಲಕಾಲ ಶಿಲೆ ಮೌನ ತಪಸ್ಸಿನಲ್ಲೇ..
ಮತ್ತೆ ಬೆಳೆಯಿತೇ..
ಅರೇ! ಇವನ್ಯಾರು.. ಏನೆಲ್ಲಾ ಸಲಕರಣೆ..
ನೋವೇ ಇಲ್ಲವಲ್ಲ..
ಅತ್ತಿತ್ತ, ಹೊರಗೊಳಗೆ ನಡೆಯುತ್ತ ಉಳಿಗೆ ಪೆಟ್ಟು ಕೊಡುತ್ತಾ... ಶಿಲ್ಪಿ ಮೆಚ್ಚಿದನೇ..
ಓಹೋ! ಸುಂದರ.. ಅತೀ ಸುಂದರ ಶಿಲ್ಪ!
ಆಚೀಚೆ ಹೋಗುವವರು ತಲೆದೂಗುವರು..
ಮುಟ್ಟಲೆತ್ನಿಸುವರು..
ಶಿಲೆಗೋ ಹೆಮ್ಮೆ.. ತಾನೂ ಶಿಲ್ಪವಾದೆ!
ಕತ್ತೆತ್ತಿ ಕೆತ್ತಿದವನಿಗೊಂದು ಸಲಾಂ ಕೊಡಬೇಕೆಂದರೆ.. ಎಲ್ಲಿ ಅವನು?
ಮತ್ತಿಷ್ಟು ಕೆತ್ತಲವನು.. ಇನ್ನೂ ಚಂದವಾಗುವಾಸೆ..
“ಕಾಣೆಯಾಗಿಹನು ನನ್ನ ಶಿಲ್ಪಿ.. ಹುಡುಕಿಕೊಡುವಿರಾ .. “

ಇದೀಗ ನೋಡಲು ಬಂದವರೆಲ್ಲರಲ್ಲಿ ಶಿಲೆಯ ಗೋಳು!

ಹೀಗೇ.. ಸುಮ್ಮನೆ!


ನಾ ಬರೆದುದನು ಪದ್ಯವೆನ್ನೋ ಹಾಗಿಲ್ಲ.. ಅಂತಾರಲ್ಲಪ್ಪ
ಹಾಗಾದರೆ ಅದು ಗದ್ಯವೇನು.. ತಲೆ ತಿರುಗಿಸ್ತಾರಪ್ಪ

ನಾ ಅವನ್ನು ಹೃದ್ಯವೆನ್ನಲೇನು? ಮೌನಿಯಾಗ್ತಾರಪ್ಪ!

16 August, 2013

ತುಝ್ಸೆ ನಾರಾಜ಼್ ನಹೀ ಜ಼ಿಂದಗಿ!

-
ತುಝ್ಸೆ ನಾರಾಜ಼್ ನಹೀ ಜ಼ಿಂದಗಿ!
--------------------------

ತಿಳಿದಿರಲಿಲ್ಲ ಬದುಕಲು ನೋವು ಹೊರಬೇಕೆಂದು
ನಕ್ಕರೂ, ನಗುವಿನ ಋಣ ತೀರಿಸಬೇಕಾಗುವುದೆಂದೂ
ಭಯ ಈಗೀಗ ನನಗೆ ನಕ್ಕರೊಮ್ಮೆ ಎಲ್ಲಾದರು
ತುಟಿಯ ಮೇಲೆ ಋಣ ಭಾರವಿರಿಸುವೆನೆಂದು ||

ಇಲ್ಲ ಬದುಕೆ, ನಿನ್ನ ಮೇಲೇನೂ ಕೋಪವಿಲ್ಲ
ಚಕಿತಳಾಗಿರುವೆ ನಾ ಚಕಿತಳಾಗಿರುವೆ
ನಿನ್ನೆಲ್ಲಾ ಮುಗ್ಧ ಪ್ರಶ್ನೆಗಳಿಗೆ||

ತುಂಬಿ ಬಂದಿದ್ದರೊಮ್ಮೆ ಇಂದು
ದಪ್ಪ ಹನಿಗಳಾಗಿ ಉದುರಿ ಹೋಗುವುದು
ನಾಳೆ ಏನಾಗುವುದೆಂದು ತಿಳಿದಿಲ್ಲವಿನ್ನು
ಕಣ್ಣುಗಳು ಹಂಬಲಿಸುವವು
ಎಲ್ಲಿ ಯಾವಾಗ ಹೋಗುವುದೇನೋ ಕಳೆದು
ಬಚ್ಚಿಡುವೆ ಕಂಬನಿಯೊಂದನ್ನು||

ಇಲ್ಲ ಬದುಕೆ, ನಿನ್ನ ಮೇಲೇನೂ ಕೋಪವಿಲ್ಲ
ಚಕಿತಳಾಗಿರುವೆ ನಾ ಚಕಿತಳಾಗಿರುವೆ
ನಿನ್ನೆಲ್ಲಾ ಮುಗ್ಧ ಪ್ರಶ್ನೆಗಳಿಗೆ||


ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...