ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

30 July, 2013

ಮುಂಜಾವು ಸಂತೈಸುವ ಪರಿ ನೋಡಿದರೇನು!


ಕುಂಚಗಳು ತುಂಬಿದ ಬತ್ತಳಿಕೆ ಹೆಗಲಿನಿಂದ ಜಾರಿ ಚೆಲ್ಲಾಪಿಲ್ಲಿಯಾಗಿ ರಥದಲ್ಲೆಲ್ಲಾ ಹರಡಿವೆ

ಪೆನ್ಸಿಲ್ ಭಾರವೆನಿಸುತ್ತಿದೆ!

ಕೈಯಲ್ಲಿ ವಿವಿಧ ರೀತಿಯ ಪೆನ್, ಪೆನ್ಸಿಲ್, ಕುಂಚಗಳನ್ನೆಲ್ಲಾ ಹಿಡಿದು, ಈಗಷ್ಟೇ ಯೌವನಕ್ಕೆ ಕಾಲಿರಿಸಿರುವ ಸಹಪಾಠಿಗಳೆಲ್ಲ ಸುಂದರವಾಗಿ ಸಜ್ಜಾಗಿರುವ ರಥಗಳಲ್ಲಿ ವಿರಾಜಮಾನರಾಗಿ ಎದುರಿಗೆ ಕುಳಿತಿರುವ ರೂಪದರ್ಶಿಯ ಚಿತ್ರ ಬಿಡಿಸುವುದರಲ್ಲಿ ಮಗ್ನರಾಗಿದ್ದಾರೆ..

ನಡು ನಡುವೆ ನನ್ನತ್ತ ಕರುಣಾಪೂರಿತ ನೋಟ ಬೀರುತ್ತಿದ್ದಾರೆಯೆ!

’ನನ್ನಿಂದ ಇದೆಲ್ಲಾ ಸಾಧ್ಯವಿಲ್ಲ.. ಇವರೆಲ್ಲ ಜತೆ ನಾನು ಪೈಪೋಟಿಗೆ ಇಳಿದಿರುವೆನೆಯೇ! ಇಂತಹ ಪ್ರತಿಭಾಶಾಲಿಗಳ ಜತೆ ಹೋರಾಡಿ ಅಪಹಾಸ್ಯಕ್ಕೀಡಾಗುವೆನೆ! ಸಾರಥಿ, ರಥವನಿಲ್ಲಿಂದ ತಿರುಗಿಸು.. ’

’ಅರೇ, ಇದ್ಯಾರು? ಕೃಷ್ಣನೆಲ್ಲಿ? ’

ದೃಷ್ಟಿಸಿ ನೋಡಿದರೆ ಅಪರಿತಳಲ್ಲ, ಇವತ್ತಿನ ವೇಷಭೂಷಣಗಳು ನನಗೆ ಕೆಲ ಕ್ಷಣ ಗುರುತನ್ನು ಮರೆಸಿವೆ..

 ಒಂದೆಳೆಯ ಝರಿಯ ಅಂಚು ಇರುವ ಅಚ್ಚ ಬಿಳಿ ನೂಲಿನ ಸೀರೆ,  ಕೈಯಲ್ಲಿ ಚಾಟಿಯ ಬದಲು ಎಷ್ಟೊಂದು ವಿವಿಧ ಕುಂಚಗಳು.. 


ಕಪ್ಪು ಕೇಶರಾಶಿಗೆ ಘಮಘಮಿಸುತ್ತಿರುವ ಹೊನ್ನ ಸಂಪಿಗೆ ಅಲಂಕಾರ! ಕಾಡಿಗೆ ಹಚ್ಚಿ ಹೊಳೆಯುತ್ತಿರುವ ದೃಷ್ಟಿ.. ಕೆನ್ನೆಗೆ ಕೆಂಪು, ಅರೆಬಿರಿದ ತುಟಿಗಳು!


“ಹೇಡಿ! ಮೂರ್ಖಿ! ಇದೆಲ್ಲಾ ಹೇಳಲೇ ಇಲ್ಲಿಯ ತನಕ ಹೋರಾಡಿದೆಯೇನು? ಕುಂಚಗಳನ್ನೆಲ್ಲಾ ಮತ್ತೆ ಜೋಡಿಸು, ಬತ್ತಳಿಕೆಯನ್ನು ಹದೆಗೇರಿಸು.. ಮುನ್ನುಗ್ಗು.. ಜಯ ಅಪಜಯ ಹಾದಿಯಲ್ಲಿ ಇರುವುದೇ.. ಅದರ ಗೊಡವೆಗೆ ಹೋಗದೆ ನಿನ್ನ ಪಾಡಿಗೆ ನೀ ನಡಿ.. ಉಸಿರಿರುವ ತನಕ ಪ್ರಯತ್ನ ನಡೆಸು.. ಮುಂದಿದು ಅವನ ಇಚ್ಛೆ!”

ಮಸೀದಿಯೊಂದರಿಂದ “ಅಲ್ಲಾ ಹೋ ಅಕ್ಬರ್.. “

ಅರೇ, ಬಹಳ ದಿನದ ನಂತರ “ಕುಹೂ ಕುಹೂ..” 


“ತಟ ಪಟ” ಮರದಿಂದ ತೊಟ್ಟಿಕ್ಕುತ್ತಿರುವ ಹನಿಗಳು


ಕ್ಷೀಣವಾಗಿರುವ ಶರಧಿಯ ಶಂಖ ನಾದ... 


ಕಣ್ತೆರೆದು ನೋಡಿದರೆ ಇನ್ನೂ ಇರುಳಿನ ನೆರಳು ಗಾಢವಾಗಿ ಹರಡಿಕೊಂಡಿದೆ! 


ಮುಂಜಾವಿನ ಕನಸಿನ ಅಸ್ಪಷ್ಟ ನೆನಪು.. 


ಅರೇ, ನಾನು ಪಾರ್ಥ, ಮುಂಜಾವು ಕೃಷ್ಣ!


ಆಹಾ! ನನ್ನ ಮುಂಜಾವು, ಏನ್ ಏನ್ ಮಾಡಿ ಹುರುಪು ಕೊಡುತ್ತಿದೆ! ಒಂದೆರಡು ದಿನಗಳಿಂದ ಪೋರ್ಟೈಟ್  ಚಿತ್ರಗಳ ಬಿಡಿಸುವಿಕೆ ನನ್ನಿಂದ ಅಸಾಧ್ಯವೋ ಎಂಬ ಹೆದರಿಕೆಯಿಂದ ಕಾಲೇಜಿಗೆ ಹೋಗಿರಲಿಲ್ಲ..

ಮುಂಜಾವು ಕನಸಲ್ಲಿ ಬಂದು ಸಂತೈಸಿದ ಪರಿ ಇದು!

1 comment:

Chandrashekar Ishwar Naik said...

Sheila nayak aware nimma baravanige nanage hidisitu. Nimage biduvu sikkare nanna blog: www.sarovaradallisuryabimba.blogspot.in nodi

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...