ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

26 May, 2013

ಬಣ್ಣವಿಲ್ಲದ ಹನಿಗಳುನೆರೆಮನೆ ಅಂಗಳದಲ್ಲಿ ಕೇಳಿಬಂದ ಕಿಲಿಕಿಲಿ ನಗುವಿನ ಸೆಳೆತಕೆ
ಮನೆಯ (ಮನದ) ಕಿಟಿಕಿ ಅಗಲವಾಗಿ ತೆರೆಯಿತು..
ಆ ಪುಟ್ಟ ಪುಟ್ಟ ಬೆರಳುಗಳು ಕರೆದವು..
ತೊದಲು ನುಡಿ... ಏನೋ ಹೇಳುತಿದೆ...
ಒಲವ ಸೂಸುವ ಕಡುಕಪ್ಪು ಬಟ್ಟಲು ಕಣ್ಗಳು..
ನವಿಲುಗರಿಯ ತಲೆಯ ಮೇಲೆ ಪೊತ್ತರಂತೂ
ತೇಟ ಬಾಲ ಗೋಪಾಲನೇ..
ಮುರಳಿಯನಿತ್ತು ನಾದ ಕೇಳಿ
ಗೆಜ್ಜೆ ಕಟ್ಟಿ ಮುಕ್ತವಾಗಿ ಕುಣಿಯಬೇಕೆಂಬಾಸೆ... ಮೂಡಿತೇಕೆ?
ಯಾವ ಮೋಹಕೂ ಬಗ್ಗದ ಮನದಲ್ಲೂ ಅದೇಕೀ ನವಿರು ಕಂಪನ..
ಮತ್ತೆ ಮತ್ತೆ ಅಲ್ಲೇ ನೆಡುವ ಮನ..
ಕಿಟಿಕಿ ಮುಚ್ಚಲೇ ಮನಸಿಲ್ಲ..
ಮರಳಿ ಮರಳಿ ಅಲ್ಲೇ ನೋಟವಲ್ಲೇ..
ಕಿವಿಯಲಿ ಅದೇ ನಗುವಿನ ಗುಂಗು..
ಒಲವಿಗೆ ಶರಣು ಶರಣು...
ನಿತ್ಯ ಉತ್ಸವ.. ಕಿಲಿ ಕಿಲಿ ನಗೆಗೆ
ಘಲ್ ಘಲ್ ಗೆಜ್ಜೆಯ ನಾದ ಎದೆಯೊಳಗೆ..
ಈ ಮನ ಕಿಟಿಕಿಯ ಒಳಗೆ... 
ನಾದ ಆ ಮನೆಯಂಗಳದಲ್ಲಿ..
ಅದರ ಪ್ರತಿದ್ವನಿ ಮಾತ್ರ ಈ ಮನದಲಿ..
ಬತ್ತಿದ ಎದೆಯಲ್ಲಿ ಮತ್ತೆ ಚಿಮ್ಮಿದ ನೊರೆ ನೊರೆ ಹಾಲು..
ಅಮೃತವನಿತ್ತು ಪುಟ್ಟ ಬಾಯಿಗೆ ಧನ್ಯಳಾಗಬೇಕೆಂಬ ತವಕ..
ಎದೆಗವುಚಿ,  ಮೈಕಂಪ ಆಘ್ರಾಣಿಸಿ ಕರಡಿಗೆಯಲಿ ತುಂಬಿಡಲೇ..
ಇಲ್ಲ ಇಲ್ಲ... ದೂರದಲೇ ನೋಡಿ ನಲಿವೆ..
ಲಕ್ಷಣ ರೇಖೆಯ ದಾಟಲಾರದೆ ಸೋಲು..
ದಿನಗಳುರಿದವು.. ಹಕ್ಕಿಯಂತೆ ಹಗುರ ಮನ..
ಚುಚ್ಚುವ ಬಾಣಗಳು ಗುರಿ ತಲುಪಲೇ ಇಲ್ಲ..
ಮತ್ತೆ ಹೊಸ ಋತು.. ಅದೇನಾಯಿತು?
ಹೊಸ ದಿನಗಳು ಹಳೆಯ ಭಾವದ ಕುರುಹು ತರಲೊಪ್ಪಲಿಲ್ಲವೇ?
ಎಲ್ಲಿ ಏನು ಬದಲಾಯಿತು?
ಅರೇ ಆ ನಗುವೇಕೆ ಕೃತಕ?
ತೊದಲು ಮಾತೇ ಇಲ್ಲ... ಬೇಡವಾದೆನೆ..
ಅಲ್ಲಿ ಗಂಭೀರ ಮೌನ!
ಈ  ಮನದ ಕನ್ನಡಿಯಲ್ಲಿ ಗೀರುಗಳು..
ಒಸರಿದವು ಹನಿಗಳು..
ಅಮೂರ್ತ ಭಾವದ ಮೂರ್ತ ರೂಪವೇ ಆ ಹನಿಗಳು..
ಕೆಂಪಲ್ಲ.. ಬಿಳಿಯೂ ಅಲ್ಲ..
ತೊದಲು ನುಡಿಗಳು ಮೂಡಿಸಿದ ಮಳೆಬಿಲ್ಲು ಮುರಿದು
ಬಣ್ಣಗಳು ದಿಕ್ಕು ದಿಕ್ಕಿಗೂ ಚದುರಿ..
ಈ ಹನಿಗಳಿಗೆ ಮತ್ತಾವ ಬಣ್ಣವಿರಬಹುದು?

2 comments:

Anushanth said...

ಆ ಜೀವ ನಿದ್ದೆಹೋಗಿರಬಹುದು ಶೀಲಾ, ಅಲ್ಲಿಯ ಮೌನವನ್ನ ನಿಮ್ಮ ಕಡೆಗೆಸೆದ ಬಾಣವನ್ನಾಗಿ ಕಂಡುಕೊಂಡು ಗಾಯ ಮಾಡಿಕೊಳ್ಳಬೇಡಿ, ನಿದ್ದೆ ಮತ್ತೆಚ್ಚರಗೊಳ್ಳುವ ಪ್ರಕ್ರಿಯೆ ಜೇವಂತಿಕೆಯ ಕುರುಹು.. ನಿಮ್ಮ ಆಕರ್ಷಣೆ ಜೇವಂತಿಕೆಯೆಡೆಗಿದೆ ಅನ್ನುವುದನ್ನ ಖಾತ್ರಿ ಮಾಡಿಕೊಳ್ಳುವ ಸಾಧನವನಾಗಿಸಿಕೊಌ ಈ ಸಂದರ್ಭವನ್ನು.. ಆದೀತಾ? ಚಂದ ಮೂಡಿ ಬಂದಿದೆ ಬರಹ

Shiela Nayak said...

ಅನೂ,
ನೀನು ಹೇಳಿದಂತೆ ಮತ್ತೆ ಆ ಜೀವ ಎಚ್ಚರಗೊಳ್ಳುವುದನ್ನೇ ಕಾಯುತ್ತಿದ್ದೇನೆ.

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...