ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

30 April, 2013

ಹೊ ಹೊ ಭಾವವಿದೆ, ಹೊ ಹೊ ಉತ್ಸಾಹವಿದೆ!!!ಮುನಿದ ಕನಸನು ಸಾಂತ್ವನಗೊಳಿಸುವೆವು
ತುಂಡರಿಸಿದ ಗಾಳಿಪಟವನು ಜೋಡಿಸುವೆವು
ಹೊ ಹೊ... ಭಾವವಿದೆ
ಹೊ ಹೊ... ಉತ್ಸಾಹವಿದೆ
ನಂಟು-ದಾರಗಳ ಗಂಟು ಬಿಡಿಸುವೆವು
ಹೊ ಹೊ ದಾರಗಳೇ.. 
ಹೊ ಹೊ ದಾರಗಳೇ...||

ನಿದ್ರಿಸುತಿರುವ ಅದೃಷ್ಟವನು ಎಬ್ಬಿಸುವೆವು
ನಾಳೆ ನಭವೂ ತಲೆಬಾಗುವಂತೆ ಮಾಡುವೆವು||
ಹೊ ಹೊ... ಭಾವವಿದೆ 
ಹೊ ಹೊ... ಉತ್ಸಾಹವಿದೆ
ನಂಟು-ದಾರಗಳ ಗಂಟು ಬಿಡಿಸುವೆವು
ಹ್ಮ್ ಹ್ಮ್.. ದಾರವೇ..

ಹೊ.. ಹೊ.. ಹೆಪ್ಪುಗಟ್ಟಿದ ಕಣ್ಣುಗಳಲ್ಲೂ ನೋಡುವೆವು
ಕರಗುತಿರುವ ನಾಳೆಯ ಮೊಗವನು
ಹೊ.. ಹೊ.. ಕಲ್ಲಿನಂತ ಹೃದಯದಲ್ಲೂ ನೋಡುವೆವು
ಕುದಿಯುತಿರುವ ಶಿಲಾರಸ ತಳದಲಿ
ಬೆಳಗುತಿಹ ದೀಪವಿದೆ  
ಒಲವಿನ ರಾಗವೂ ಇದೆ
ಆರದದು ಸಣ್ಣಗಾಗದು
ಈ ಭಾವವೆಂದಿಗೂ ಆಗದು ದೂರ
ಬೆಳಗುತಿಹ ದೀಪವಿದೆ  
ಒಲವಿನ ರಾಗವೂ ಇದೆ
ನಾಳೆ ನಡೆಯುವುದನಾರು ಬಲ್ಲರೋ
ಅದರತ್ತ ಲಕ್ಷ ಯಾರಿಗಿದೆ
ಗಮನ ಯಾರಿಗಿದೆ ಹೇಳು!
ಲಕ್ಷ ಯಾರಿಗಿದೆ..
ಗಮನ ಯಾರಿಗಿದೆ...||ಮುನಿದ ಕನಸನು ಸಾಂತ್ವನಗೊಳಿಸುವೆವು
ತುಂಡರಿಸಿದ ಗಾಳಿಪಟವನು ಜೋಡಿಸುವೆವು
ಹೊ ಹೊ...  ಭಾವವಿದೆ 
ಹೊ ಹೊ...  ಉತ್ಸಾಹವಿದೆ
ನಂಟು-ದಾರಗಳ ಗಂಟು ಬಿಡಿಸುವೆವು
ದಾರಗಳೇ.. 
ದಾರಗಳೇ...||


ನಿನಗಾಗಿಯೇ, ಕೇವಲ ನಿನಗಾಗಿಯೇ! (ಭಾವಾನುವಾದ)


ಬದುಕಿರುವೆನು ನಿನಗಾಗಿ ನಲ್ಲೆ, ಹೊಲೆದು ತುಟಿಗಳನು
ಬದುಕಿರುವೆನು ನಿನಗಾಗಿ ನಲ್ಲ, ನುಂಗಿ ಕಂಬನಿಗಳನು
ಆದರೂ ಅನುರಾಗದ  ಹಣತೆಯನು ಬೆಳಗಿ ಮನದೊಳಗೆ
ಬದುಕಿರುವೆನು ನಿನಗಾಗಿಯೇ ನಲ್ಲೆ
ನಿನಗಾಗಿಯೇ ನಿನಗಾಗಿಯೇ||

ಬದುಕಿರುವೆನು ನಿನಗಾಗಿ ನಲ್ಲ,  ನುಂಗಿ ಕಂಬನಿಗಳನು
ಬದುಕಿರುವೆನು ನಿನಗಾಗಿ ನಲ್ಲೆ,  ಹೊಲೆದು ತುಟಿಗಳನು
ಆದರೂ ಅನುರಾಗದ  ಹಣತೆಯನು ಬೆಳಗಿ ಮನದೊಳಗೆ
ಬದುಕಿರುವೆನು ನಿನಗಾಗಿಯೇ ನಲ್ಲ
ನಿನಗಾಗಿಯೇ, ನಿನಗಾಗಿಯೇ||


ಮತ್ತೆ ವಿಧಿ ನಿನ್ನೆಯ ದಿನಗಳ ಹೊತ್ತಗೆ ಮರಳಿಸಿವೆ
ಆಳವಾಗಿವೆ ನಮಗೀಗ ನೆನಪುಗಳ ಲೆಕ್ಕಗಳು
ಎಷ್ಟೊಂದು ಉತ್ತರಗಳು ಪ್ರಶ್ನೆಗಳ ಕೇಳದೆ
ಬಯಸಿದೇನು, ದೊರೆತದೇನು ನೋಡಿ ನಮಗೀಗ
ಆದರೂ ಅನುರಾಗದ  ಹಣತೆಯನು ಬೆಳಗಿ ಮನದೊಳಗೆ
ಬದುಕಿರುವೆನು ನಿನಗಾಗಿಯೇ ನಲ್ಲೆ||
ನಿನಗಾಗಿಯೇ, ನಿನಗಾಗಿಯೇ||

ಏನು ಹೇಳಲಿ ಈ ಲೋಕ ಹೇಗೆ ಮೋಸ ಮಾಡಿತು
ಪಾಲಿಸಿದೆನಾನಾ ಅಪ್ಪಣೆ  ಜೀವಿಸಿದೆ ನೀನಿಲ್ಲದೆ
ಮುಗ್ಧರವರು ಅನ್ನುವರಲ್ಲ ನೀ ನನಗೆ ಅಪರಿಚಿತೆ
ಪ್ರಿಯೆ, ಎಷ್ಟೊಂದು ನೋವುಗಳನಿತ್ತರು ಜನರು
ಆದರೂ ಅನುರಾಗದ  ಹಣತೆಯನು ಬೆಳಗಿ ಮನದೊಳಗೆ
ಬದುಕಿರುವೆನು ನಿನಗಾಗಿಯೇ ನಲ್ಲೆ
ನಿನಗಾಗಿಯೇ ನಿನಗಾಗಿಯೇ||

ಬದುಕಿರುವೆನು ನಿನಗಾಗಿ ನಲ್ಲೆ  ಹೊಲೆದು ತುಟಿಗಳನು
ಬದುಕಿರುವೆನು ನಿನಗಾಗಿ ನಲ್ಲ,  ಇಂಗಿಸಿ ಕಣ್ಣೀರನು
ಆದರೂ ಅನುರಾಗದ  ಹಣತೆಯನು ಬೆಳಗಿ ಮನದೊಳಗೆ
ಬದುಕಿರುವೆನು ಕೇವಲ
ನಿನಗಾಗಿಯೇ, ನಿನಗಾಗಿಯೇ,
ನಿನಗಾಗಿಯೇ, ನಿನಗಾಗಿಯೇ... ||


27 April, 2013

ಬಂದೇ ಬರುವನವನು, ಭಾಮೆಯ ತಣಿಸುವನವನು!


ವಸಂತ ಮಾಸ
ಮಾಮರದಲಿ ಕುಹೂ
ಕೆಂಪನೆಯ ಚಿಗುರು
ಸುಮವರಳಿ ದುಂಬಿಯ
ಝೇಂಕಾರ ನಾದ
ತಂಗಾಳಿಯ ಪಿಸುಮಾತು
ಮನ್ಮಥ-ರತಿಯ ಮಿಲನ
ಸಂಭ್ರಮ ಸಡಗರ
ಅವಳೂ ಹಂಬಲಿಸುವಳು
ಅವನೊಲವಿಗಾಗಿ ಕಾದು
ಬತ್ತಿ ಬೆಂಡಾಗುವಳವಳು
ಚಂಚಲಚಿತ್ತನಲ್ಲ ಅವನು
ಕಾಯುವನು ಸರಿ
ಸಮಯ ಬರಲೆಂದು
ಬಂದೇ ಬರುವನವನು
ಒಲವನ್ನೆಲ್ಲ ಹೊಸೆದು
ಕಡುನೀಲಿ ರಂಗಿನಿನಿಯ
ಭಾಮಿನಿಯ ಮುದ್ದಿಸಲು
ಬಂದನೇ  ನೋಡೇ ನೋಡಲ್ಲಿ
ಝಗಮಗ ಝಗಮಗ ಬೆಳಕು
ಕೇಳಿತೇ ತಾಳಮದ್ದಳೆ
ಸುರಿಸಿದನೋ ತನ್ನೊಲವ
ತಣಿಸಿದನೋ ತನ್ನರಸಿಯ
ತನ್ನಿನಿಯನ ಮೋಹ
ಅಡಗಿಸಲು ಶಕ್ಯಳಲ್ಲ
ಹಸಿರು ಹೆತ್ತು
ಹೆಮ್ಮೆ ತೋರಿ
ಮೆರೆಯುವಳಾ ಅರಸಿ!

24 April, 2013

ತು ಇಸ್ ತರಹ್ ಸೆ ಮೆರಿ ಜಿಂದಗಿ ಮೇ- ಭಾವಾನುವಾದ!ತು ಇಸ್ ತರಹ್ ಸೆ ಮೆರಿ ಜಿಂದಗಿ ಮೇ - ಭಾವಾನುವಾದದ ಯತ್ನ!
ಚಿತ್ರ-ಆಪ್ ತೋ ಐಸೇನ ಥೆ
ಗಾಯಕಿ- ಹೇಮಲತಾ
ನಿರ್ದೇಶಕ- ಉಷಾ ಖನ್ನ
ಸಾಹಿತ್ಯ- ಇಂದೀವರ್

ನನ್ನೀ ಬದುಕಲ್ಲಿ ನೀನೀ ರೀತಿ ಸೇರಿಹೋಗಿರುವೆಯಲ್ಲ
ನಾ ಕಾಣುವೆ ಎಲ್ಲೆಡೆಯೂ ನಿನ್ನದೇ ಛಾಯೆ ನಲ್ಲ||

ಈ ಬಾನು, ಈ ಮುಗಿಲು, ಈ ಹಾದಿ, ಈ ಗಾಳಿ
ಎಲ್ಲವೂ ಸ್ತಬ್ಧವಾಗಿವೆ ತಮ್ಮ ತಮ್ಮ ಸ್ಥಾನದಲಿ
ಹಲವು ಕಾಲದಿ ಯಾವುದೂ ಕೋರಿಕೆಯಿಲ್ಲವೀ ಲೋಕದಿ
ನನಗೋ ಬದುಕೊಂದು ಪಯಣ ಮತ್ತಾಪಯಣದ ಗುರಿಯೂ ನೀನೇ||

ನಾ ಕಾಣುವೆ ಎಲ್ಲೆಡೆಯೂ ನಿನ್ನದೇ ಛಾಯೆ ನಲ್ಲ
ನನ್ನೀ ಬದುಕಲ್ಲಿ ನೀನೀ ರೀತಿ ಸೇರಿಹೋಗಿರುವೆಯಲ್ಲ||

ಪ್ರತಿಯೊಂದು ಹೂ ಯಾವುದೋ ನೆನಪಿನ ಪರಿಮಳ ಬೀರುವುದಲ್ಲ
ನಿನ್ನದೇ ನೆನಪಿನಲಿ ಜಗವೂ ಎಚ್ಚರವಾಗಿಯೇ ಇರುವುದಲ್ಲ
ಇದೆಲ್ಲ ಹಾಗೆ ಇತ್ತೇ  ಇಲ್ಲಾ ಒಲವಿನ ಹಾರೈಕೆಯೇ
ನೀ ಬಳಿ ಇರುವೆಯೋ ಇಲ್ಲವೋ ನನ್ನೆದುರಿಗಂತೂ ಸದಾ ನೀನಿರುವಿ||

ನಾ ಕಾಣುವೆ ಎಲ್ಲೆಡೆಯೂ ನಿನ್ನದೇ ಛಾಯೆ ನಲ್ಲ
ನನ್ನೀ ಬದುಕಲ್ಲಿ ನೀನೀ ರೀತಿ ಸೇರಿಹೋಗಿರುವೆಯಲ್ಲ||

ಪ್ರತಿಯೊಂದು ಪಯಣವೂ ಒಲವಿನಿಂದಲೇ ಹೊಳೆಯುವುದಲ್ಲ
ಆ ಹೊಳಪಿಲ್ಲದೆ ಬದುಕು ಶೂನ್ಯವಾಗುವುದು ನಲ್ಲ
ಸುಗಮವಾಗುವವು ಹಾದಿಗಳು  ಜತೆಯಿರಲು ಸಹಮನಸ್ಕನು
ಮುಳ್ಳಾಗುವವು ಹಾದಿಗಳು ಒಂಟಿಯಾಗಿ ನಡೆಯಲು||

ನಾ ಕಾಣುವೆ ಎಲ್ಲೆಡೆಯೂ ನಿನ್ನದೇ ಛಾಯೆ ನಲ್ಲ
ನನ್ನೀ ಬದುಕಲ್ಲಿ ನೀನೀ ರೀತಿ ಸೇರಿಹೋಗಿರುವೆಯಲ್ಲ||23 April, 2013

ಬರೇ ಉಸಿರಾಡುವ ಶವ ನಾನೀಗ!


ಒಲವೇ,
ನಿನ್ನ ಗಾನ ಮಾಧುರ್ಯದ
ಆಲಿಕೆಯೇ ಸ್ವರ್ಗ ಸುಖವೆನಗೆ
ಅಂದೊಮ್ಮೆ ಸ್ವರದಲ್ಲಿ ಕಂಪನ
ತಂದಿತು ನನ್ನೆದೆಯಲ್ಲೂ ಕೋಲಾಹಲ
ಏಕೀ ನಿರ್ಲಿಪ್ತ ಭಾವ
ಭ್ರಮೆಯೇಕೆ ಗದರಿಕೆ ಮನಕೆ
ಆಗಾಗ ಮೇಘ ಮಲ್ಹಾರದ
ಸಾಂತ್ವನವೂ ದೊರಕಿ ತೃಪ್ತಿ
ಆದರೂ ಒತ್ತಾಯದ ಹಾಡೋ
ಕಾಡಿತು ಅನುಮಾನ  
ತಪ್ಪೋ ಒಪ್ಪೋ ನನಗರಿವಿಲ್ಲ
ಒಪ್ಪಿಸಿದೆ ಮನದ ಮಾತ
ಪರಿಣಾಮವದರ ಕಳಕೊಂಡೆ 
ಮನಶ್ಶಾಂತಿ
ನಡೆದೆ ನೀ ಬಲುದೂರ
ಮತ್ತೇನು ಉಳಿದಿದೆ ಬರೇ
ಉಸಿರಾಡುವ ಶವ ನಾನೀಗ!


21 April, 2013

ಇಂತಹ ಮಗ ಎಲ್ಲ ಅಮ್ಮಂದಿರಿಗೂ ದೊರಕಲಿ!


“ಅಮ್ಮಾ, ಹೇಳು ನಾನೀಗ ಏನ್ ಮಾಡ್ಬೇಕು? ಸೈಂಟ್ ಜೋಸೆಫ್ ನಲ್ಲಿ ಇ ಎಂಡ್ ಸಿ ಸೀಟ್ ಇದೆ. ನಿಟ್ಟೆಯಲ್ಲಿ ಐ ಎಸ್ ಮಾತ್ರ ಉಳಿದಿದೆ! “
“ನಿಟ್ಟೆ ಮತ್ತು ಐ ಎಸ್”
4 ವರ್ಷದ ಹಿಂದೆ ಬೆಂಗಳೂರಿನ ಸಿ ಇ ಟಿ ಸೆಂಟರ್ ನಿಂದ ಮಗನ ಫೋನು ಮಂಗಳೂರಿನಲ್ಲಿರುವ ನನಗೆ. ನನಗೆ ತರಗತಿಗಳಿರುವ ಕಾರಣ ನಾನು ಅವನ ಜತೆ ಬೆಂಗಳೂರಿಗೆ ಅವನ ಅಪ್ಪನವರನ್ನೇ ಕಳುಹಿಸಿದ್ದೆ. ಆದರೆ ಕಾಲೇಜಿನ ಬಗ್ಗೆ ನನ್ನದೇ ನಿರ್ಧಾರ ಕೊನೆಯದಾಗಿರುವುದರಿಂದ ಅವನು ನನಗಲ್ಲಿಂದ ಫೋನು ಮಾಡಿ ಸೀಟು, ಕಾಲೇಜಿನ ಬಗ್ಗೆ ಮಾಹಿತಿ ಕೊಡುತ್ತಿದ್ದ. ನನ್ನದು ಒಂದೇ ಮಾತು- autonomous college ಆಗಿದ್ದ ನಿಟ್ಟೆ ಮಾತ್ರ ನನ್ನ ಆಯ್ಕೆ. 3ನೇತರಗತಿಯಲ್ಲೇ ಅವನ ನಡವಳಿಕೆಯಿಂದ ನಾನು ಅವನ ಆಸಕ್ತಿಯನ್ನು ಕಂಡುಕೊಂಡಿದ್ದೆ. ಅಲ್ಲದೆ ಅವನ ಆಸಕ್ತಿಗೆ ಪ್ರೋತ್ಸಾಹವನ್ನೂ ಆದಷ್ಟು ಕೊಡುತ್ತಿದ್ದೆ. ಇಲೆಕ್ಟ್ರಿಕಲ್ ಅವನ ಆಸಕ್ತಿಯ ವಿಷಯವಾಗಿತ್ತು. ಕೊನೆಗೂ ನಿಟ್ಟೆಯಲ್ಲಿ ಅವನ ಇಷ್ಟದ ವಿಷಯದಲ್ಲೇ ಸೀಟು ಸಿಕ್ಕಿತು. ಹೊರಗೆ ಧೈರ್ಯ ತೋರುತ್ತಿದ್ದೆನಾದರೂ ನನಗೆ ಒಳಗೊಳಗೆ ಸ್ವಲ್ಪ ಹೆದರಿಕೆ ಇದ್ದಿತ್ತು. ಭಂಡ ಧೈರ್ಯ ತೋರಿ ಅವನನ್ನೂ ಮಗಳನ್ನೂ ಯಾವುದೇ ಕೋಚಿಂಗ್ ತರಗತಿಗೆ ಕಳುಹಿಸಲಿರಲಿಲ್ಲ.  ಕಾಲೇಜಿನಲ್ಲೂ ಒಳ್ಳೆಯ ಪಾಠ ಪ್ರವಚನಗಳಿರಲಿಲ್ಲ, ಕೊನೆಗೂ ಜನವರಿಯಲ್ಲಿ ಪುಸ್ತಕ ಕೈಗೆತ್ತಿಕೊಂಡದನ್ನು ಕಂಡು ನೆಮ್ಮದಿಯ ಉಸಿರು ಬಿಟ್ಟಿದ್ದೆ. 93% ತೆಗೆದುಕೊಂಡು ನನ್ನ ಮಾನ ಉಳಿಸಿದ! ಸಿ ಇಟಿಯಲ್ಲೂ 3,000 ಚಿಲ್ಲರೆಯ ರ್ಯಾಂಕು ತೆಗೆದುಕೊಂಡಿದ್ದ.  ಇಲ್ಲಿಯ ತನಕ ಪ್ರತೀ ವರ್ಷ 9ಕ್ಕಿಂತ ಹೆಚ್ಚಿನ ಗ್ರೇಡ್ ತೆಗೆದುಕೊಂಡಿದ್ದಾನೆ. ಅನೇಕ ಪ್ರಾಜೆಕ್ಟ್ ಕೆಲಸದಲ್ಲಿ ಭಾಗಿಯಾಗಿದ್ದಾನೆ. ಕೆಲವು ಕಂಪೆನಿಗಳ ಕೆಲಸವನ್ನೂ ಮಾಡಿದ್ದಾನೆ. ಲೋಗೋ ಡಿಸೈನ್, ಟಿ ಶರ್ಟ್ ಡಿಸೈನ್... ಹೀಗೆ ಅಮ್ಮ ಅಪ್ಪನಿಗೆ ಹೆಮ್ಮೆ ತರುವಂತಹ ಕೆಲಸಗಳನ್ನು ಮಾಡಿದ್ದಾನೆ. ನಾಲ್ಕು ವರ್ಷಕ್ಕೆ ಇನ್ನೂ ನಾಲ್ಕು ತಿಂಗಳು ಬಾಕಿ ಉಳಿದಿದ್ದಂತೆಯೇ ತನ್ನ ಇಂಜಿನಿಯರಿಂಗ್ ಕೋರ್ಸನ್ನು ಮುಗಿಸಿ ಮನೆಗೆ ಮರಳಿದ್ದಾನೆ. ನಿನ್ನೆ ಎರಡು ವಾರಗಳ ನಂತರ ಬಂದ ಅವನನ್ನು ನೋಡಿ ಆದ ಖುಷಿ ಅಷ್ಟಿಷ್ಟಲ್ಲ, ಜತೆಗೆ ನೆಮ್ಮದಿಯೂ!

20 April, 2013

ನೀಲವ್ವ ಮತ್ತು ಫ್ಯಾನಿನ ಅಂಗಡಿಯವ!


“ನೀಲವ್ವ, ಸಿಕ್ಕಿತಾ?”
“ಹೌದಮ್ಮಾ!” ಅಂದವಳು, “ಅರೇ, ನಿಮಗೆ ಹೇಗೆ ಗೊತ್ತಾಯ್ತು ನಾನು ಹಣ ಕಳಕೊಂಡಿದ್ದೆನೆಂದು!”
ದೂರದ ಬಳ್ಳಾರಿಯಿಂದ ವಲಸೆ ಬಂದ ನೀಲವ್ವ ನಮ್ಮ ಮನೆಯ ಬಳಿಯಲ್ಲಿರುವ ಒಂದು ಕೋಣೆಯೆಂಬ ಮನೆಯಲ್ಲಿ ಮಗ ಗಂಡನೊಂದಿಗೆ ಮನೆಕೆಲಸ ಮಾಡಿ ಬರುವ ಪುಡಿಕಾಸಿನಿಂದ ಬದುಕನ್ನು ನಡೆಸುತ್ತಿದ್ದಾಳೆ.  ತನ್ನ ಧಡೂತಿ ದೇಹದ ಕಾರಣ ಕೆಲವೇ ಮನೆಗಳ ಕೆಲಸ ಒಪ್ಪಿಕೊಂಡಿದ್ದಾಳೆ. ಒಂದು ಕಡೆಯಿಂದ ಇನ್ನೊಂದೆಡೆ ಹೋಗುವಾಗ ಏದುಸಿರು ಬಿಡುತ್ತಾ ದೇಹವನ್ನು ಎಳೆದುಕೊಂಡು ಹೋಗುವುದು ನೋಡುವಾಗ ಕರುಳು ಹಿಂಡಿದಂತೆ ಆಗುತ್ತದೆ.  ಹಸಿವು ತಡೆದುಕೊಳ್ಳಲಾಗದೆ ಮೂರು ಹೊತ್ತು ಸರಿಯಾಗಿ ತಿನ್ನುತ್ತಾಳೆ. ಹಾಗೇ ಮೈಬೆಳೆಯುತ್ತಾ ಹೋಗುತ್ತಿದೆ.
ಆ ದಿನ ನಾನು ಕಾಲೇಜಿನಿಂದ ಊಟಕ್ಕೆ ಮನೆಗೆ ಬರುತ್ತಿರುವಾಗ ತಲೆ ತಗ್ಗಿಸಿ ಏನೋ ಕಳಕೊಂಡದನ್ನು ಹುಡುಕುವವರ ಹಾಗೆ ಬರುವ ನೀಲವ್ವನನ್ನು ನೋಡಿದೆ. ಅವಳನ್ನು ಮಾತನಾಡಿಸಲು ಹೋಗದೇ  ಬಹುಶಃ ಹಣ ಕಳಕೊಂಡಿದ್ದಾಳೇನೋ ಎಂದು ನಾನೂ ನೆಲವನ್ನು ಪರಿಶೀಲಿಸುತ್ತಾ ಮನೆಯತ್ತ ನಡೆದೆ. ಬಾಯಿ ಒಣಗಿತ್ತು, ಬೆಳಿಗ್ಗೆ ಅವಸರದಲ್ಲಿ ತಿಂದದ್ದು 10 ಗಂಟೆಗೇ ಕರಗಿಹೋಗಿತ್ತು. ಆ ದಿನ ರೇಖಾಚಿತ್ರದ ಪರೀಕ್ಷೆ, ಬರೇ ಚಿತ್ರ ಬಿಡಿಸಿ ಸ್ವಲ್ಪ ಬಣ್ಣ ಮಾತ್ರ ಹಾಕಿಯಾಗಿತ್ತು. ಮತ್ತೆ ಮಧ್ಯಾಹ್ನ ಅರ್ಧ ಗಂಟೆಯೊಳಗೆ ಮರಳಿ ಕಾಲೇಜಿಗೆ ಹೋಗಬೇಕಿತ್ತು. ಹಾಗಾಗಿ ಏನಿದ್ದರೂ ಮತ್ತೆ ಮರಳಿ ಬಂದ ಮೇಲೆ ವಿಚಾರಿಸುವ ಎಂದುಕೊಂಡು ನೆಲ ಪರಿಶೀಲಿಸುತ್ತ ನಮ್ಮ ಓಣಿಯ ತಿರುವಿನತ್ತ ಬರುವುದೂ ಫ್ಯಾನಿನ ಅಂಗಡಿಯವ ನೆಲದಿಂದ ಏನೋ ಎತ್ತುವುದು ಒಟ್ಟಿಗೆ ನಡೆಯಿತು. ಮನಸ್ಸು ಇದು ನೀಲವ್ವನ ಹಣವಿರಬಹುದಾ ಅಂತ ಸಂಶಯಗೊಂಡಿತು. ಕೇಳಲು ಸಂಕೋಚವಾಗಿ, ಮೊದಲು ನೀಲವ್ವನನ್ನು ವಿಚಾರಿಸಿ ಮತ್ತೆ ಏನಂತ ನೋಡಿದರಾಯಿತು ಅಂದುಕೊಂಡೆ. ಹಾಗೆ ಊಟ ಮಾಡಿ ಕಾಲೇಜಿನ ಕಡೆ ಹೊರಟವಳು ನೀಲವ್ವನ ಕೋಣೆಯ ಬೀಗ ನೋಡಿ ಇನ್ನೇನಿದ್ದರೂ ಸಂಜೆ ವಿಚಾರಿಸಿದರಾಯಿತು ಎಂದು ಸೀದ ಕಾಲೇಜಿನ ಕಡೆ ಧಾವಿಸಿದೆ. ಸಂಜೆ ಬಂದವಳೇ ಅವಳ ಕೋಣೆಯತ್ತ ನಡೆದು ವಿಷಯವನ್ನೆಲ್ಲಾ ತಿಳಿದೆ.

    “ನಾನು ಕಾಲೇಜಿನಿಂದ ಬರುತ್ತಿರುವಾಗ ನೀನು ಕೃಷ್ಣ ಮಠದೆದುರು ಏನೋ ಕಳಕೊಂಡವಳ ಹಾಗೆ  ನೆಲ ನೋಡುತ್ತಾ ಹೋಗುತ್ತಿದ್ದಿಯಲ್ಲ, ಬಹುಶಃ ಹಣ ಕಳಕೊಂಡಿರಬಹುದೆಂದು ಯೋಚಿಸಿ ನಾನು ಮನೆಗೆ ಬರುತ್ತಾ ನೆಲವನ್ನೇ ನೋಡುತ್ತಾ ಬಂದಿದ್ದೆ. ಎಲ್ಲಿ ಸಿಕ್ಕಿತು ಹಣ?”
“ಓಣಿಯ ತಿರುವಿನಲ್ಲಿದ್ದ ಫ್ಯಾನಿನ ಅಂಗಡಿಯ ಯಜಮಾನರು ಕೊಟ್ಟರು.”
“ಹಾಗಾದರೆ ನನ್ನ ಊಹೆ ಸರಿ. ಅ ಫ್ಯಾನಿನ ಅಂಗಡಿಯವರು ನಾನು ಓಣಿಯ ಬಳಿ ಬರುವಾಗ ನೆಲದಿಂದ ಏನೋ ಎತ್ತಿದನ್ನು ನೋಡಿದ್ದೆ. ನಿನ್ನ ಹಣವಿರಬಹುದೇನೋ ಅಂದುಕೊಂಡು ಅವರನ್ನು ಕೇಳುವ ಅಂದುಕೊಂಡೆ. ಆದರೆ ನಿನ್ನ ಬಳಿ ಏನು ಕಳಕೊಂಡೆ ಅಂತ ಕೇಳದೆ ಅವರ ಬಳಿ ನೇರವಾಗಿ ಏನೂ ಕೇಳುವುದು ಸರಿಯಲ್ಲ ಅಂತ ಸುಮ್ಮನಾದೆ. ಅದಕ್ಕೆ ಈಗ ನಿನ್ನ ಬಳಿ ಕೇಳಿ ಅವರನ್ನು ವಿಚಾರಿಸುವ ಅಂತ ಯೋಚಿಸಿದ್ದೆ. ಬಚಾವ್, ನಿನ್ನ ಹಣ ಸಿಕ್ಕಿತಲ್ಲ. ಎಷ್ಟಿತ್ತು?”
“ಹೌದಮ್ಮಾ! ನಾನು ಹಾಗೆ ಹುಡುಕುತ್ತಾ ಹಿಂದೆ ಬರುವಾಗ ಅವರು ನನ್ನನ್ನು ವಿಚಾರಿಸಿ ಹಣ ಕೊಟ್ಟರು. 600ರೂಪಾಯಿ! ಇವತ್ತು ಮನೆಕೆಲಸದ ಯಜಮಾನಿ ಕೊಟ್ಟಿದ್ದಳಮ್ಮ!”
ಅಲ್ಲಿಗೆ ಮುಗಿಯಲಿಲ್ಲ ನೀಲವ್ವನ ಕತೆ, ನಮ್ಮ ಮಾತು ಕೇಳಿ ಹೊರಬಂದ ಅಮ್ಮನಿಗೆ ಎಲ್ಲಾ ರಾಮಾಯಣವನ್ನು ಮತ್ತೆ ವಿವರಿಸಿದೆ. ನನ್ನ ಮನೆಯ ಕೆಲಸ ಕರಿಯುತ್ತಿತ್ತು, ಹಾಗಾಗಿ ನಾನು ಅಲ್ಲಿಂದ ಹೊರಟಾಗ ಅಮ್ಮ ನೀಲವ್ವನಿಗೆ, “ ಎಷ್ಟನೆಯ ಸಲ ಹೀಗೆ ಹಣ ಕಳಕೊಳ್ತಿದ್ದಿಯಾ ನೀಲವ್ವ! ಜಾಗ್ರತೆ ಮಾಡು ಅಂದರೂ ಅದನ್ನು ಸೀರೆಗೆ ಸಿಕ್ಕಿಸಿ ಬರ್ತಿಯಲ್ಲ! ನಿನ್ನ ಬುದ್ಧಿಗೆ ಏನು ಹೇಳಬೇಕು!” ಜೋರು ಮಾಡುವುದು ಕೇಳುತಿತ್ತು. ಮನಕ್ಕೆ ಸಮಾಧಾನ, ನೀಲವ್ವನ ಪುಣ್ಯ! ಆ ಅಂಗಡಿಯವ ಧರ್ಮಕ್ಕೆ ಸಿಕ್ಕಿದೆ ಎಂದು ಒಳ ಹಾಕದೆ ಇವಳಿಗೆ ಕೊಟ್ಟನಲ್ಲ. ಇನ್ನೂ ಸ್ವಲ್ಪವಾದರೂ ಮಾನವೀಯತೆಯೆಂಬುದು ಉಳಿದಿದೆ! ಭಗವಂತನಿಗೆ ಕೃತಜ್ಞತೆ ಹೇಳಿ ಹೂವಿನಂತೆ ಹಗುರವಾದ ಮನಸ್ಸನ್ನು ಹೊತ್ತು ಮನಗೆ ಮರಳಿದೆ.

17 April, 2013

ಹೀಗೊಂದು ಪಯಣದ ಅನುಭವ!    ಇದ್ದಕ್ಕಿದ್ದಂತೆಯೇ ಹೀಗೊಂದು ಬೆಂಗಳೂರಿಗೊಂದು ಭೇಟಿ ನೀಡುವ ಯೋಗವು ಕೂಡಿ ಬರುವುದೆಂದು ನಾನು ಅಂದುಕೊಂಡಿರಲಿಲ್ಲ. ತಿಂಗಳ ಹಿಂದೆಯೇ ಮಗಳು ತನ್ನ ವರಾತವನ್ನು ಶುರು ಮಾಡಿದ್ದಳು. ತನ್ನ ಕನಸಿನ ನಗರಿಯಾದ ಮುಂಬೈ ಭೇಟಿಯನ್ನು ಕಳೆದ ಜೂನ್ ತಿಂಗಳಲ್ಲಿ ಮುಗಿಸಿದ್ದ ಅವಳಿಗೆ ಅದು ಒಂದು ರೀತಿಯ ಆತ್ಮ ವಿಶ್ವಾಸವನ್ನು ಕೊಟ್ಟಿತ್ತು. ಹಾಗೆಯೇ ತನ್ನ ಗೆಳೆಯರಿಂದ, ಛಾಯಾಚಿತ್ರಗಳ ಮೂಲಕ ಬೆಂಗಳೂರಿನ ಬಣ್ಣನೆ ಕೇಳಿದ್ದ ಅವಳಿಗೆ ಅಲ್ಲಿ ಹೋಗದೇ ತನ್ನ ಜೀವನ ನಿರರ್ಥಕವೆಂದನಿಸಿದ್ದು ನನಗೆ ವಿಚಿತ್ರವಾಗಿ ಕಂಡಿರಲಿಲ್ಲ. ಅವಳು ಅಷ್ಟು ಪರಿ ಪರಿಯಾಗಿ ಬೇಡಿಕೊಂಡಿದ್ದರೂ ನಾನದಕ್ಕೆ ಹೆಚ್ಚಿನ ಆದ್ಯತೆ ನೀಡಿರಲಿಲ್ಲ. ನನಗೆ ನನ್ನದೇ ಆದ ಜವಾಬ್ದಾರಿಗಳಿದ್ದವು. ಅಲ್ಲದೇ ಆ ಸಮಯದಲ್ಲಿ ನನ್ನ ಪರೀಕ್ಷೆ, ಮಕ್ಕಳ ಪರೀಕ್ಷೆ, ಅದಾಗಲೇ ಮಾತು ಕೊಟ್ಟ ಶಿಬಿರದ ಕೆಲಸ... ಹೀಗೆ ಅನೇಕ ಮುಖ್ಯ ಕೆಲಸಗಳು ನನ್ನ ಮುಂದಿದ್ದವು. ಆದರೆ ಎಪ್ರಿಲ್ ೬,೭ ತಾರೀಕು ಕಳೆದ ಹಾಗೆ ಅವಳ ಗೋಗರಿಕೆ ಹೆಚ್ಚಾಯಿತು. ಈ ಪ್ರಾಯವೇ ಹಾಗಲ್ಲವೆ! ಅಲ್ಲದೆ. ನಾವೆಲ್ಲ ಸಣ್ಣವರಿರುವಾಗ ರಜೆ ಕಳೆಯಲು ಹಳ್ಳಿಯಲ್ಲಿರುವ ಅಜ್ಜಿ ಮನೆಗೆ ಹೋಗುತ್ತಿದ್ದೆವು. ಮನ್ನುವಿನ ಅಜ್ಜಿ ಮನೆ ನಮ್ಮ ಮನೆಯ ಹತ್ತಿರದಲ್ಲೇ ಇರುವ ಕಾರಣ ಅವಳಿಗೆ ಎಲ್ಲೂ ಹೋಗುವ ಹಾಗೆ ಇರಲಿಲ್ಲ. ವ್ಯಾಪಾರಿಗಳಾದ ನಮ್ಮ ಮನೆಯವರಿಗೆ ವರ್ಷ ಪೂರ್ತಿ ಕೆಲಸ. ಹಾಗಾಗಿ ನಾವು ಎಲ್ಲೂ ಹೋಗಿರಲಿಲ್ಲ. ಸುಮಾರು 15 ವರ್ಷಗಳ ಹಿಂದೆ ಬೆಂಗಳೂರಿಗೆ ಎರಡು ದಿನಗಳ ಭೇಟಿಯೇ ನಮ್ಮ ಕೊನೆಯ ದೂರದ ಪಯಣವಾಗಿತ್ತು. ಹೀಗಾಗಿ ಕೊನೆಗೂ ಮನಸ್ಸು ಬದಲಾಯಿಸಿದ ನಾನು ಅವಳೊಟ್ಟಿಗೆ ಬೆಂಗಳೂರಿಗೆ ಹೋಗಲು ಒಪ್ಪಿದೆ. ಇಲ್ಲಿಂದ ಉಡುಪಿಗೆ ಪಯಾಣಿಸಿದಾಗಲೆಲ್ಲ ವಾಂತಿ ಮಾಡುವ ಅವಳು ಮತ್ತೆ ಇಷ್ಟು ದೂರದ ಪಯಣದಲ್ಲಿ ಹಾಗೆ ಮಾಡದಿರುತ್ತಾಳೆಯೆ! ಹಾಗಾಗಿ  ರೈಲಿನಲ್ಲಿ ತತ್ಕಾಲ್ ಟಿಕೇಟಿನ ಮೂಲಕ ಹೋಗುವುದೆಂದು ನಾವು ನಿರ್ಧರಿಸಿದರೇನು ಪ್ರಯೋಜನ! ಆನ್ ಲೈನ್ ಮೂಲಕ ಮಾಡಿದ ಪ್ರಯತ್ನವೆಲ್ಲ ಗಾಳಿಯಲ್ಲಿ ಹೋಮದಂತಾಯಿತು. ಕೊನೆಗೂ ಶನಿವಾರ ರಾತ್ರಿ 9.30ರ ರಾಜಹಂಸದಲ್ಲಿ ಅವಳ ನನ್ನ ಮೊದಲ ದೂರದ ಬಸ್ಸು ಪಯಣ ಆರಂಭವಾಯಿತು.


     ನಿಲ್ದಾಣದಲ್ಲಿ ಇರುವ ಎಲ್ಲಾ ಬಸ್ಸುಗಳನ್ನು ತಡಕಾಡಿ, ಯಾರ್ಯಾನ್ನೋ ಬೇಡಿ ಕೊನೆಗೂ ನಮ್ಮ ಬಸ್ಸನ್ನು ಹತ್ತಿ ಕುಳಿತಾದ ಇದೆಲ್ಲಾ ಯಾಕೆ ಬೇಕಿತ್ತು ನನಗೆ ಅಂತ ಅನಿಸಿದ್ದು ಸುಳ್ಳಲ್ಲ. ಬಸ್ಸು ಹತ್ತಿ ಬಂದ ಎಲ್ಲರನ್ನೂ ಸೂಕ್ಷ್ಮವಾಗಿ ಗಮನಿಸುತ್ತಲೇ ಇದ್ದ ನನಗೆ ನಮ್ಮ ಸೀಟಿನ ಆಚೆ ಬದಿ ಕುಳಿತ್ತಿದ್ದ ಆ ಅಸಾಮಿ ಸರಿಯಿಲ್ಲ ಅಂತ ಅನಿಸಿತ್ತು. ನಮ್ಮದು ಕಂಡ್ಕಟರ್ ಹಿಂದಿನ ಸೀಟು 3,4. 1,2 ರಲ್ಲಿ ಎರಡು ಪುಟ್ಟ ಮಕ್ಕಳು ಮತ್ತವರ ತಾಯಿ ಕುಳಿತಿದ್ದರು. ಅವರ ಹಿಂದಿನ ಸೀಟು 5ರಲ್ಲಿ ಈ ವಿಚಿತ್ರ ಆಸಾಮಿ ಕುಳಿತಿದ್ದ. ಹತ್ತಿದವನೇ ಸೀಟನ್ನು ಅಡ್ಡ ಹಾಕಿ ಮಲಗೇಬಿಟ್ಟ. ಅವನನ್ನು ಬಿಟ್ಟು ಉಳಿದವರೆಲ್ಲ ಸ್ನೇಹಮಯಿಯಾಗಿದ್ದರು. ಕೆಲವರೊಂದಿಗೆ ಮುಗುಳ್ನಗೆ ವಿನಿಮಯವೂ ಆಯಿತು. ಸಮಯಕ್ಕೆ ಸರಿಯಾಗಿ ಬಸ್ಸು ಮಂಗಳೂರನ್ನು ಬಿಟ್ಟು ಬೆಂಗಳೂರಿನ ಕಡೆ ತನ್ನ ಪಯಣವನ್ನು ಆರಂಭಿಸಿತು. ಅಲ್ಲಲ್ಲಿ ಜನರು ಹತ್ತುತಲೇ ಇದ್ದರು, ಅವರೆಲ್ಲ ಬಿಸಿರೋಡ್ ನಲ್ಲಿ ಇಳಿಯುವರೆಂದು ಅವರ ಮಾತುಕತೆಯಲ್ಲಿ ತಿಳಿಯಿತು. ಲೈಟೆಲ್ಲ ಆಫ್ ಆಯಿತು. ನಿಶ್ಚಿಂತಳಾಗಿ ನಾನೂ ಕಣ್ಣು ಮುಚ್ಚಿ ನಿದ್ರಿಸಲು ಯತ್ನಿಸಿದೆ. ಎಲ್ಲೋ ಸ್ವಲ್ಪ ಜೊಂಪು ಹತ್ತಿದ್ದಂತಾಗಿತ್ತಷ್ಟೇ, ಏನೋ ತಣ್ಣಗೆ ಕೈಗೆ ತಾಗಿತು. ಹೆದರಿ ಕಣ್ಣನ್ನು ದೊಡ್ಡದಾಗಿ ಬಿಟ್ಟು ಆ ಕತ್ತಲಲ್ಲೇ ನೋಡಲು ಯತ್ನಿಸಿದೆ. ಹೊರಗಿನ ದಾರಿದೀಪದಲ್ಲಿ ಏನೋ ಬಿಳಿ ವಸ್ತು ಕಾಣಿಸಿತು, ಅದು ಪಾದಗಳೆಂದು ತಿಳಿಯಲು ಕೆಲವು ಕ್ಷಣಗಳು ಬೇಕಾಯಿತು. ಎದುರಿನ ಸೀಟಿನಲ್ಲಿದ್ದ ಕಂಡ್ಕಟರ್ ಅವರನ್ನು ಕರೆದೆ. ಅವರೂ ನಿದ್ದೆಯಲ್ಲಿದ್ದರೆಂದು ತೋರುತ್ತದೆ. ನನ್ನ ಮಾತು ಅವರಿಗೆ ಅರ್ಥವಾಗಲೇ ಇಲ್ಲ. ಹೀಗೆ ಹಾಗೆ ಮಿಸುಕಾಡಿ ಪುನಃ ನಿದ್ರೆಗೆ ಜಾರಲು ಹೋಗುವವರನ್ನು ಬಡಿದೇ ಎಬ್ಬಿಸಬೇಕಾಯಿತು. ಆ ಮನುಷ್ಯ ಲೈಟ್ ಹಾಕಲು ಹೋಗದೇ, ನನ್ನ ಸೀಟಿನ ಹ್ಯಾಂಡಲ್ ಮೇಲೆ ಕಾಲು ಇಟ್ಟು ಮಲಗಿದ 5ನೇ ಸೀಟಿನಲ್ಲಿದ್ದ ಪ್ರಯಾಣಿಕನನ್ನು ಮೇಲ್ದನಿಯಿಂದ ಎಬ್ಬಿಸಿ, ಸರಿಯಾಗಿ ಮಲಗಲು ಹೇಳಿದ. ಆಗಲೇ ಮೊದಲಯ ಸೀಟಿನಲ್ಲಿದ ಹೆಂಗಸೂ ಆ ಆಸಾಮಿ ಅವಳ 10 ವರ್ಷದ ಮಗಳಿಗೂ ಸವರಿ ತೊಂದರೆ ಕೊಡುತ್ತಿತ್ತು ಅಂತ ಹೇಳಿದರೂ ಕಂಡ್ಕಟರ್ ಅತ್ತ ತನ್ನ ಗಮನ ಕೊಡದೇ ಮಲಗಿದ.  ನಾನು ಸೀಟಿನ ಇನ್ನೊಂದು ಬದಿಯತ್ತಲೇ ಸರಿದೆ. ಕಣ್ಮುಚ್ಚಲೇ ಹೆದರಿಕೆ! ಒಂದಹತ್ತು ನಿಮಿಷ ಕಳೇಯಿತೋ ಇಲ್ಲವೋ ಇದ್ದಕ್ಕಿದ್ದಂತೆಯೇ ಆ ಹೆಂಗಸು, “ ರೀ, ಕಂಡ್ಕಟರ್, ನಿಮಗೆ ಭಾಷೆ ಇದೆಯಾ ಇಲ್ಲವಾ! ಆಗಿನಿಂದ ಒಂದು ಲೈಟ್ ಹಾಕಿ ಅಂತ ಹೇಳ್ತಾ ಇದ್ದೇನೆ, ಈ ಪ್ರಾಣಿ ನನ್ನ ಮಗಳ ಮೈ ಸವರಿ ತನ್ನ ತೀಟೆ ತೀರಿಸಲು ಯತ್ನಿಸುತ್ತಿದೆ. ದೇವಾ, ಒಂಟಿ ಹೆಂಗಸರು ಪ್ರಯಾಣ ಮಾಡಲಿಕ್ಕೇ ಇಲ್ಲವಾ!”  ಎಲ್ಲರೂ ಬೆಚ್ಚಿ ಬಿದ್ದರು. ಇಷ್ಟೆಲ್ಲ ಆದರೂ, ನಿದ್ರೆಯ ಅಮಲಿನ ಲ್ಲಿದ್ದ ಯಾವ ಪಯಣಿಗನೂ ಎದ್ದು ಬರಲಿಲ್ಲ. ವಿಚಿತ್ರವೆನಿಸಿತು. ಹೆಣ್ಣು ಮಕ್ಕಳು ಒಂಟಿಯಾಗಿ ಪ್ರಯಾಣಿಸುವುದು ಎಷ್ಟು ಕಷ್ಟ, ಕಣ್ಣಾರೆ ಕಂಡೆ!
  ಲೈಟ್ ಹಾಕಿದ ಕಂಡ್ಕಟರ್, ಆ ಲೋಫರನಿಗೆ, “ ಅಪ್ಪಾ, ಏಳಿ ಸರಿಯಾಗಿ ಮಲಗಿ. ಇನ್ನೊಬ್ಬರಿಗೆ ತೊಂದರೆ ಕೊಡಬೇಡಿ.” ಅಂತ ಸಮಾಧಾನದಿಂದ ಹೇಳುವುದು ನೋಡಿ ನನ್ನ ರಕ್ತ ಕುದಿದರೂ ಏನೂ ಪ್ರಯೋಜನವಿಲ್ಲವಾಗಿತ್ತು. “ ನಿಮಗೆ ಅಷ್ಟು ಕಾಲು ಬಿಡಿಸಿ ಆರಾಮವಾಗಿ ಮಲಗಬೇಕಾದರೆ ಹಿಂದಿನ ಸೀಟಿಗೆ ಹೋಗಿಯಪ್ಪಾ.” ಹೀಗೆ ಬಹುವಚನ ಕೊಟ್ಟು ಮಾತನಾಡುವುದನ್ನು ನೋಡಿ ನನಗೂ ಆ ಹೆಂಗಸಿಗೂ ಕೋಪ ಬರದಿರುತ್ತಾ! ಅವಳೂ ನಾನೂ ನಮ್ಮ ಕೊಂಕಣಿ ಭಾಷೆಯಲ್ಲಿ ಆದಷ್ಟು ಬೈದು ಸಮಾಧಾನ ಮಾಡಿಕೊಳ್ಳಲು ಯತ್ನಿಸಿದೆವು. ಅಲ್ಲಾ, ಆ ಮಗು ಬರೇ 10 ವರ್ಷದು. ಬಹಳ ಹೊತ್ತಿನ ತನಕ ಸಹಿಸಿಕೊಂಡಿತ್ತು. ಇತ್ತ ವಾಂತಿ ಅತ್ತ ಆ ಪ್ರಾಣಿ!
 ಆಕೆಯ ಕೋಪ ಇತರ ಪಯಣಿಗರ ಮೇಲೂ ತಿರುಗಿತು. ಯಾರೊಬ್ಬರೂ ತುಟಿ ಪಿಟಿಕ್ಕೆನ್ನಲಿಲ್ಲ. ಆಕೆ ಅಂದಳು, ನಮ್ಮ ಬೆಂಗಳೂರಿನಲ್ಲಾದರೆ ಹತ್ತಾರು ಜನ ಸೇರಿ ಅವನಿಗೆ ಪೂಜೆ ಮಾಡುತ್ತಿದ್ದರು. ಈ ಮಂಗಳೂರಿನ ಜನ ಏನೂ ಪ್ರಯೋಜನವಿಲ್ಲದ್ದು! ಹೌದು, ಇದು ನನ್ನ ಅಭಿಪ್ರಾಯವೂ ಆಗಿತ್ತು.

 ಅಂತೂ ಒಂದಿಷ್ಟು ಬೆಳಕು ಕಾಣುತ್ತಿದ್ದಂತೆ ಆರಾಮವಾಯಿತು. ಇಡೀ ರಾತ್ರಿ ಕಣ್ಮುಚ್ಚದೇ ಕಣ್ಣು ಉರಿಯುತ್ತಿತ್ತು. ಆಕೆಯ ಸಹಾಯದಿಂದಲೇ ಮೆಜೆಸ್ಟಿಕ್ ಬಳಿ ಇಳಿದು ನಮ್ಮ ಅತಿಥೇಯರು ಬರುವ ತನಕ ಮಾರ್ಗದ ಬದಿಯಲ್ಲಿ ನಮ್ಮ ಸಾಮಾನುಗಳೊಂದಿಗೆ ಕುಳಿತೆವು. ತಣ್ಣನೆಯ ಗಾಳಿ ಹಿತವಾಗಿತ್ತು. ಮಗಳು ವಾಂತಿ ಆದ ಪ್ರಭಾವದಿಂದಲೋ ಏನೋ ಸಣ್ಣನೆ ನಡುಗುತ್ತಿದ್ದಳು. ಅಷ್ಟರಲ್ಲಿ ನಮ್ಮೆದುರಿಗೆ ಕಾರೊಂದು ಬಂದು ನಿಂತಿತು, ಎದುರಿನಿಂದ ಸ್ಕೂಟರ್ ನಿಂದ ಇಳಿದ ಹೆಂಗಸೊಂದು ಆ ಕಾರಿನಲ್ಲಿದ್ದ ಹೆಂಗಸನ್ನು ಅಪ್ಪಿ ಹಿಡಿಯಿತು. ಇಬ್ಬರೂ ಗೋಳೋ ಎಂದು ಅಳುತ್ತಿದ್ದರು, ಮಧ್ಯೆ ಮಧ್ಯೆದಲ್ಲಿ ಜೋರಾಗಿ ತಮಿಳಿನಲ್ಲಿ ಏನೋ ಹೇಳ್ಕೊಳ್ಳುತ್ತಿದ್ದರು. ಅಷ್ಟರಲ್ಲೇ ಇನ್ನೊಂದು ಹೆಂಗಸು ಅವರನ್ನು ಸೇರಿಕೊಂಡಿತು. ಇನ್ನೂ ಜೋರಾಗಿ ಅಳು. ಕಾರಿನಲ್ಲಿದ ಯುವಕನೂ ಆ ಅಳುವಿಗೆ ಜತೆಯಾದ. ಬೆಂಗಳೂರಿಗೆ ಇಳಿದ ಕೂಡಲೇ ಈ ಅಳುವಿನ ದೃಶ್ಯ ನನ್ನ ಕಣ್ಣನ್ನೂ ಹನಿಗೂಡಿಸಿತು. ಮಗಳು, ನೀನೊಬ್ಬಳು ಅಂತ ಗುರ್ ಗುಟ್ಟಿದಳು. ಆ ಅಳುವ ಗುಂಪಿಗೆ ಇನ್ನಷ್ಟು ಜನ ಸೇರುವ ಲಕ್ಷಣ ಕಾಣಿಸುತ್ತಿತ್ತು, ಪುಣ್ಯಕ್ಕೆ ಅಷ್ಟರಲ್ಲಿ ನಮ್ಮ ಅತಿಥೇಯರ ವಾಹನ ಬಂದಿತು.
  ನಮಗಾಗಿ ಕಾದಿರಿಸಿದೆಯೆಂದುಕೊಂಡ ರೂಮು ಬೇರೆಯರ ಪಾಲಾಗಿತ್ತು. ಬೇರೆ ದಾರಿಯಿಲ್ಲದೆ ಹತ್ತಿರದಲ್ಲಿದ್ದ ಮತ್ತೊಂದು ಹೊಟೇಲಿನಲ್ಲಿ ರೂಮು ಹಿಡಿದೆವು. ಚಿಕ್ಕದಾಗಿದ್ದರೂ ಚೊಕ್ಕದಾಗಿತ್ತು. 10.30 ಹೊತ್ತಿಗೆ ತಾವು ಮತ್ತೆ ಬರುವೆವು, ಬೆಂಗಳೂರಿನ ದರ್ಶನ ಮಾಡಿಸಲು ಎಂದು ನಮ್ಮ ಅತಿಥೇಯರು ತಿಳಿಸಿದಾಗ ನನ್ನ ಮಗಳ ಮುಖ ಊರಗಲವಾಗಿತ್ತು. ಅವಳ ಸಂತಸದ ಮುಖ ನೋಡಿ ನನಗೂ ಖುಷಿಯಾಯಿತು. ಸ್ವಲ್ಪ ಹೊತ್ತು ಅಡ್ಡ ಬಿದ್ದು, ಇಡ್ಲಿ ಚಟ್ನಿ ತಿಂದು ಚಾ ಕುಡಿದು ರಾಜಧಾನಿಯ ದರ್ಶನಕ್ಕೆ ಸಿದ್ಧವಾದೆವು. ನನಗೋ ನನ್ನ ಸ್ನೇಹಿತರನ್ನು ಭೇಟಿಯಾಗುವ ಮನಸಿತ್ತು. ಮಗಳಿಗೆ ನೀನು ಹೋಗು ನಾನು ಸಾಧ್ಯವಾದರೆ ನನ್ನ ಸ್ನೇಹಿತರನ್ನು ಭೇಟಿಯಾಗುವೆ ಎಂದಾಗ ಮಗಳು ಒಪ್ಪಲೇ ಇಲ್ಲ. ನೀನು ನನ್ನ ಜತೆಯೇ ಬರುವಿ, ಇನ್ನೇನು ಹೇಳಬೇಡವೆಂದಾಗ ಅವಳೆದುರು ನಾನು ಸೋಲೊಪ್ಪಿಕೊಂಡೆ.  
   ಈ ಬಿಸಿಲಿನಲ್ಲಿ ಏನು ನೋಡಲಿದೆ, ಅಂತಹುದೇನು ಇದೆ ಈ ಊರಿನಲ್ಲಿ... ಹೀಗೆ ಪಿರಿ ಪಿರಿ ಮಾಡುತ್ತಾ ನಾನು ಸಿದ್ಧವಾದೆ. ಬೆಂಗಳೂರು ಅರಮನೆಯಲ್ಲಿ ವೈಭವದ ಮದುವೆಯೊಂದು ನಡೆಯುತ್ತಿತ್ತು, ಅಲ್ಲಿಂದ ನೆಹರು ಪ್ಲನಟೋರಿಯಂ- ಇದಾದರೆ ನನಗೆ ಖುಷಿ ಕೊಟ್ಟಿತು, ಅಲ್ಲಿಂದ ವಿಧಾನ ಸೌಧ, ವಿಕಾಸ ಸೌಧ- ಎರಡೂ ಅಂಬೆಡ್ಕರ್ ಜಯಂತಿಯಾದ ಕಾರಣ ವೀಕ್ಷಣೆ ನಿರಾಕರಿಸಲ್ಪಟ್ಟಿತು, ಸುಮ್ಮನೆ ಹೊರಗಡೆಯಿಂದ ಫೋಟೊ, ಮತ್ತೆ ಹೊರೆಟೆವು ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ಕಡೆಗೆ. ಅಲ್ಲೊಂದಿಷ್ಟು ಫೊಟೊ... ಬರುವಾಗ ಮೆಟ್ರೊ ರೈಲಿನಲ್ಲಿ ಪಯಣ. ಹೀಗೆ ರೂಮಿಗೆ ಮರಳಿದಾಗ ಏಳು ಗಂಟೆ. ನಮ್ಮ ಪಯಣದ ಮುಖ್ಯ ಕಾರಣ ಮಗಳ ಸ್ನೇಹಿತೆಯ ಮದುವೆ, ಆರಕ್ಷತೆ ಸಂಜೆ. ಹೀಗಾಗಿ ಅಲ್ಲಿ ಹೋಗಲೇಬೇಕು. ಮತ್ತೆ ಮರಳಿ ಸುಖ ನಿದ್ದೆ!
     ಬೆಳಿಗ್ಗೆ ತಿರುಗುವಾಗ ಗಾಂಧಿ ನಗರ, ಮೆಜೆಸ್ಟಿಕ್, ಓಲ್ಡ್ ಕೆಂಟ್ ರೋಡ್, ವಿಶ್ವೇಶ್ವರಯ್ಯ ಮ್ಯೂಸಿಯಂ, ಮುಖ್ಯ ಮಂತ್ರಿ ಸಮೇತ ಉಳಿದ ರಾಜಕಾರಣಿಗಳ ನಿವಾಸದ ರಸ್ತೆ,  ಜಯನಗರ ಮೊದಲಾದ ಸ್ಥಳಗಳ ಮಹಾತ್ಮೆಯನ್ನೂ ಹೊರದರುಶನವನ್ನೂ ಮಾಡಿ ನನ್ನ ಮಗಳು ಆನಂದಿಸಿದಳು.  ಮರುದಿನ ಮದುವೆಯ ಸಂಭ್ರಮ, ಹಾಗಾಗಿ ಎಲ್ಲೂ ಹೋಗದೇ ಮದುವೆಯ ಊಟ ಮುಗಿಸಿ ಮತ್ತೆ ನಮ್ಮೂರಿಗೆ ಹೊರಡುವ ಪ್ಯಾಕಿಂಗ್ ತಯಾರಿ. ಸಂಜೆ ಒಂದಿಷ್ಟು ಬಸ್ಸು ಪಯಣದಲ್ಲಿ ಬೆಂಗಳೂರಿನ ಮತ್ತೊಂದು ಮುಖದ ದರ್ಶನವೂ ಆಯಿತು. ಎಲ್ಲಿ ನೋಡಿದರೂ ಜನ ಸಂದಣಿ, ಎಲ್ಲರೂ ಮೊಬೈಲಿನಲ್ಲೇ ಮಗ್ನರು, ಇಲ್ಲಾ ಮೆಸೇಜು ಓದುವುದರಲ್ಲೋ, ಬರೆಯುವುದರಲ್ಲೋ... ಇಲ್ಲಾ ಕಿವಿಗೆ ಇಯರ್ ಫೋನ್ ಹಾಕಿ ಹಾಡುಗಳನ್ನು ಕೇಳುವುದರಲ್ಲೇ ತನ್ಮಯರು. ಬೆಳಿಗ್ಗೆ 6.30 ಗೆ ಶುರುವಾದ ಬಿರುಸಿನ ಚಟುವಟಿಕೆಗಳು ರಾತ್ರಿ 11ದಾದರೂ ಕಮ್ಮಿಯಾಗುವುದಿಲ್ಲ. ಮಂಗಳೂರಿನಲ್ಲಿ ರಾತ್ರಿ 8ಕ್ಕೇ  ರಸ್ತೆಗಳು ನಿರ್ಜನವಾಗಿರುವುದನ್ನು ನೋಡಿ ಅಭ್ಯಾಸವಾದ ನನಗೆ ಇಲ್ಲಿನ ಈ ವಿಪರೀತ ಚಟುವಟಿಕೆಗಳನ್ನು ನೋಡಿ ಆಶ್ಚರ್ಯವಾಯಿತು.  ಬೆಂಗಳೂರಿನಲ್ಲಿ ನನಗೆ ಯಾವ ಆಕರ್ಷಣೆಯೂ ಇರಲಿಲ್ಲ ನನ್ನ ಸ್ನೇಹಿತರನ್ನು ಭೇಟಿ ಮಾಡುವ ಮನಸ್ಸಿತ್ತು. ಆದರೆ ನಾನಿರುವ ಸ್ಥಳ ಮತ್ತು ನನ್ನ ಸ್ನೇಹಿತರಿರುವ ಸ್ಥಳದ ದೂರ ಮನಗಂಡು ನಾನು ಯಾರಿಗೂ ನಾನು ಬಂದಿರುವ ವಿಷಯವನ್ನೇ ತಿಳಿಸಲಿಲ್ಲ. ಯಾರಿಗೂ ನಮ್ಮಿಂದ ತೊಂದರೆಯಾಗುವುದು ನನಗಿಷ್ಟವಿಲ್ಲ. ಸೋಮವಾರ ಎಲ್ಲರಿಗೂ ತಮ್ಮ ತಮ್ಮ ಕೆಲಸಕ್ಕೆ ಹಗುವ ಧಾವಂತ, ಅಂತಹುದರಲ್ಲಿ ನನ್ನಿಂದ ಕರೆ ಬಂದು ನಿರಾಕರಿಸಲೂ ಕಷ್ಟವಾಗುವ ಸಂದರ್ಭ ಸೃಷ್ಟಿ ಮಾಡುವುದಕ್ಕಿಂತ ಸುಮ್ಮನಿರುವುದೇ ಲೇಸು! 
ಆದರೂ ಬೆಂಗಳೂರು ಬಿಡುವಾಗ ಕಣ್ಣಿನಿಂದ ಜಾರಿದ ಹನಿ ಬಾಯಿಯನ್ನು ಉಪ್ಪಾಗಿಸಿದು ಸುಳ್ಳಲ್ಲ. ನಮ್ಮ ಅತಿಥೇಯರ ಆದರಣಿಯ ಆತಿಥ್ಯವನ್ನು ನಾನು ಈ ಜನ್ಮದಲ್ಲಿ ಮರೆಯುವ ಹಾಗಿಲ್ಲ.

10 April, 2013

ಪ್ರೀತಿ ತೋರಿಸಿ ಪ್ರೀತಿ ಕೊಳ್ಳಲಾಗುವುದೇ?ಪ್ರೀತಿ ತೋರಿಸಿ ಪ್ರೀತಿ ಕೊಳ್ಳಲಾಗುವುದೇ
"ನಾ ನಿನ್ನ ಪ್ರೀತಿಸುವೆ, ನೀ ನನ್ನ ಪ್ರೀತಿಸು"
ಎಂದು ಬಲವಂತ ಮಾಡಲಾಗುವುದೇ
ಒಲವೇ,
ನಿನ್ನೊಲವು ಅತ್ತಿತ್ತ ಹರಿದರೆ
ನಾ ನಿನ್ನ ತಡೆಯಲಾರೆ
ನೀ ದೂರ ಹೋದರೂ
ನಾ ಜೀವಿಸುವೆ ಬದುಕಲಾರೆ!

ಹಾಡುವೆ, ಕೇಳೊಮ್ಮೆ ಒಲವೆ!


ಒಲವೇ,
ಅಂದು ನೀ ಕಾಡುತ್ತಿದ್ದೆ
ನನ್ನ  ಹಾಡಿಗಾಗಿ
ಇದೀಗ ನಾ ಕಾಡುತಿರುವೆ
ಹಾಡು ಕೇಳೆಂದು
ಅಂದೂ ಅದೇ ರಾಗ
ಇಂದೂ ಅದೇ ಭಾವ
ಅಂದದು ಮಧುರವೇ!
ಇಂದಿದು ಚಪ್ಪೆಯೇ!

ನೀ ಪರಮೇಶ, ನಾ ಪರಾಶಕ್ತಿ!


ಒಲವು,
“ನಾ ನಿನ್ನ ಕನಯ್ಯ. ನೀ ಎನ್ನ ರಾಧೆ”


ನಾನು,
“ಬೇಡವೋ ನಾ ಆಗಲಾರೆ ರಾಧೆ,
ಕನಯ್ಯ ನೀ ಆಗಲೇ ಬೇಡ
ಅವನೋ ಬಲು ಮೋಸಗಾರ 
ಬೆಣ್ಣೆ ಕೊಟ್ಟರೆ ಸಾಕವಗೆ
ಆಗುವನು ಅವರಿವರ ದಾಸ
ನೀನಾಗು ಎನ್ನ ಪರಮೇಶ
ನಾನಾಗುವೆ ನಿನ್ನ ಪರಾಶಕ್ತಿ
ಮಾತು ಮತ್ತು ಅರ್ಥಗಳಂತೆ
ಸದಾ ಜತೆಯಲಿ ಬಾಳೋಣ!"

09 April, 2013

ನಲ್ಲನ ಬಾಹುಬಂಧನದಲ್ಲಿ ಕಳೆದ ಮುಸ್ಸಂಜೆ!ಗೆಜ್ಜೆಯ ಸದ್ದು ಮಾಡುತ್ತಾ
ಬಂದ ಸಂಧ್ಯೆ ಕಣ್ಮುಚ್ಚಿ
ಒಯ್ದಳು ನಲ್ಲನಿರುವ ಚಂದ್ರಲೋಕಕೆ
ತೂಗುಯ್ಯಾಲೆಯಲಿ ಪವಡಿಸಿದ ಅವನ
ಬಾಹುಬಂಧನದಲಿ ಅಡಗಿದೆ ನಾ
ಪಾವನವಾಯಿತು ನನ್ನೀ ಮುಸ್ಸಂಜೆ!

ಒಲವಂದಿತು!


ಒಲವಂದಿತು,
ನಿನ್ನೀ ಕರೆಯೇ ನನ್ನಿರುವಿಕೆಯ ಗುರುತು ಕಣೇ!
ನಿನ್ನೀ ಹಂಬಲವೇ ನನ್ನ ಸಂದೇಶಗಳ ರವಾನೆ ಕಣೆ!

ಒಲವಿನ ನೋಟ!

ಒಲವೇ,

ಕಂಡೆ ನಾ ನನ್ನೀ ಛಾಯೆಯ ನಿನ್ನೀ ನೋಟದಲೇ
ಕಂಡೆಯಾ ನೀ ನಿನ್ನೀ ಮನವ ನನ್ನೀ ನೋಟದಲೇ!

07 April, 2013

ಅವಳು ಮತ್ತವಳ ಕೋಗಿಲೆ- ಒಂದು ಸ್ನೇಹ, ಅನುರಾಗದ ಬಂಧನ!


ಅವಳು ಮತ್ತವಳ ಕೋಗಿಲೆ- ಒಂದು ಸ್ನೇಹ, ಅನುರಾಗದ ಬಂಧನ!
__________________________________________

ಆ ದಿನವಿನ್ನವಳು ಜೀವಮಾನದಲ್ಲಿ ಮರೆಯಲಾರಳು!
ಅಲ್ಲಿಯ ತನಕ  ಬರೇ ಗುಣು ಗುಣಿಸುತ್ತಿದ್ದವಳು ಆ ದಿನ ಸ್ವರವೆತ್ತಿ ಹಾಡಿ ತನ್ನ ಅಸ್ತಿತ್ವವನ್ನು ಲೋಕಕ್ಕೆ ಸಾರಿದಳೊ ಹೇಗೆ!
ಮಾವಿನ ಮರದಲ್ಲಿದ್ದ ಹಕ್ಕಿಗಳೆಲ್ಲ ನೆರೆದವು ಸುತ್ತಲೂ!
ಮೂತಿ ಚೂಪು ಮಾಡಿದವವು...
ಬೇಸರವಾಯಿತೇ ಅವಳಿಗೆ.. ಇಲ್ಲವಲ್ಲ!
ಚೊಚ್ಚಲ ಹಾಡವಳದು, ತಪ್ಪು ತೋರಲೇ ಇಲ್ಲವಲ್ಲ;
ಮರುಪ್ರಶ್ನಿಸಿದಳಾಕೆ ಆ  ಪಕ್ಕಿಗಳನ್ನೇ...
ಹೊಳೆಯುವ ಕೆಂಡದ ಕಣ್ಣಿನ ಪಕ್ಕಿಯು ರಾಗವ ತಿದ್ದಿತು... 
ಅವಳಿಗೋ ಭ್ರಮೆ ಅದು ತನ್ನ ಮೆಚ್ಚಿದೆಯೆಂದು!
ಅದೇ ಕಾರಣವೇ... ಆಕೆ ಈ ಪರಿಯಲ್ಲಿ ಆ ಕೋಗಿಲೆಯತ್ತ ಆಕರ್ಷಿತಳಾದದ್ದು... 
ಇರಲಿಕ್ಕಿಲ್ಲ!!!
ಎಷ್ಟೊಂದು ಹಕ್ಕಿಗಳ  ಮಾಧುರ್ಯ ಭರಿತ ಹಾಡು ಕೇಳಿಲ್ಲ... ಆದರೂ ಈ ನಮೂನೆಯ ಸೆಳೆತ! ಏನಿದು?
ಮೌನಿಯಾದಳಾಕೆ! 
ಅರಿವೇ ಇಲ್ಲದೆ ಆ ಚುರುಕು ಕಂಗಳ ಹಕ್ಕಿಯನ್ನು ಹಿಂಬಾಲಿಸುತಲಿದ್ದಳು!
ಅದು ಹೊರಹೋದಾಗಲ್ಲೆಲ್ಲ ಅದರ ಪುಟ್ಟ ಗೂಡೊಳು ಇಣುಕುತ್ತಾ ಗೆಜ್ಜೆ ಕಟ್ಟಿ ಕುಣಿದಾಡುತ್ತಿದ್ದಳು...
ಸುಂದರವಾಗಿ ಪೇರಿಸಿಟ್ಟ ರಾಗಗಳನ್ನು ಕೇಳಿ ಮುದಗೊಳ್ಳುತ್ತಲಿದ್ದಳು, ರೋಮಾಂಚನಗೊಳ್ಳುತ್ತಿದ್ದಳು!
ಹಲವನ್ನು ಕದ್ದು ತಂದು ತನ್ನ ಮನೆಯೊಳಗೆ ಅಡಗಿಸಿಟ್ಟಳು!
ತನಗರಿವೇ ಇಲ್ಲದೆ  ಮನವ ಕೆಂಗಣ್ಣಿನ ಪಕ್ಕಿಗೆ ಅರ್ಪಿಸಿದಳು!
ಇಷ್ಟಾದರೂ ಯಾವ ಭಾವವದೆಂದವಳಿಗೆ ಅರಿವಾಗಲೇ ಇಲ್ಲ...
ಆದರೆ ಹೇಗೋ ಏನೋ ಆ ಕೋಗಿಲೆಗೆ ಅದರರಿವಾಗಿತ್ತೆಂದು ತೋರುತ್ತದೆ!
ಕಂಡರಿಯದ ಅನುರಾಗವು ಅವಳ ಬದುಕಿಗೆ ಹೊಸ ರಂಗು, ಹೊಸ ಬಲ ತಂದಿತು...
ತನ್ನಿರುವಿಕೆಯನ್ನೇ ಮರೆತಳು.. ಅವಳು ಅವಳಾಗಿ ಉಳಿಯಲಿಲ್ಲ..
ಮೊದಲೇ ಪ್ರಕೃತಿ ಪ್ರಿಯಳವಳು... ಇದೀಗ ಸೃಷ್ಟಿಯ ಮತ್ತಷ್ಟು ಆರಾಧನೆ!
ನಿಧಾನವಾಗಿ ಕೋಗಿಲೆ ಅವಳನ್ನು ಪೂರ್ಣವಾಗಿ ಆವರಿಸಿತು.
ಸ್ವತಂತ್ರ ಮನೋಭಾವದವಳವಳು... ಹೇಗೆ ಆ ಹಕ್ಕಿಯನ್ನು ಹೀಗೆ ಆವರಿಸಲು ಬಿಟ್ಟೆಳೋ!
ಯಂತ್ರದಂತೆ ಕಾರ್ಯ ನಿರ್ವಹಿಸುತ್ತಿದ್ದವಳ... ಕಾಲನ ಕರೆಗಾಗಿ ಕಾಯುತ್ತಿದ್ದವಳ ಬಾಳ ಗುರಿ ಬದಲಾಯಿತು.
ಅವಳನ್ನೇ ಅವಳು ಪ್ರೀತಿಸಲಾರಂಭಿಸಿದಳು...
ತನ್ನಾತ್ಮದ ಕರೆಗೆ ಕಿವಿಗೊಟ್ಟಳು!
ನಿತ್ಯವೂ ಮುಂಜಾನೆ ಕೇಳುವ ಕೋಗಿಲೆಯ ಹಾಡು ತನಗಾಗಿಯೇ ಎಂದು ಭ್ರಮಿಸಿದಳು.. 
ತನ್ನ ಎದೆಯ ಸಂದೇಶಗಳನ್ನು ಕೋಗಿಲೆಗೆ ರವಾನಿಸತೊಡಗಿದಳು...
ಕೋಗಿಲೆಯೂ ಸ್ಪಂದಿಸತೊಡಗಿತೋ...
ಅಥವಾ ಅವಳೇ ಹಾಗೆ ಕಲ್ಪಿಸಿಕೊಳ್ಳುತ್ತಿದ್ದೆನೋ... ಏನೋ ಗೊತ್ತಿಲ್ಲ!
ಅವಳಿಗೋ ಆ ಕೋಗಿಲೆ ಜೀವದ ಸಂಗಾತಿ.. ಅವಳಾ ಕೋಗಿಲೆಗೆ?
ಕಾಲ ಚಕ್ರ ಉರುಳುತ್ತಲೇ ಇತ್ತು... ಬಂಧನ ಮತ್ತಷ್ಟು ಬಿಗಿಯಾಯಿತು!
ಮನದೊಳಗೀಗ ಬರೇ ಆ ಹಕ್ಕಿಯದೇ ಚಿಂತನೆ...
ಆ ಕೋಗಿಲೆಗೆಗಾದರೂ ಅಸಂಖ್ಯಾತ ವಿವಿಧ ಜಾತಿಯ ಗೆಳೆಯ ಗೆಳತಿಯರು...
ಅವೆಲ್ಲವೂ ಇವಳಿಗೂ ಮಿತ್ರರು!
ಅವಳ  ಸ್ಥಾನವೇನು!!!
ಹೀಗೊಂದು ಪರಪುಟ್ಟ ಹಕ್ಕಿ ಮತ್ತವಳ ಮಧ್ಯೆ ಕಂಡರಿಯದ ಅನುರಾಗದ ಬಂಧ, ಸಂಬಂಧ!!! 

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...