ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

28 February, 2013

ನಿಂತ ನೆಲವೇ ಅವಳನ್ನು ಭದ್ರವಾಗಿ ಹಿಡಿದುಕೊಂಡಿತ್ತು! (ಕಥೆ)

          "ಪಂಜು" ಜಾಲ ಪತ್ರಿಕೆಯಲ್ಲಿ ಪ್ರಕಟವಾದ ಕಥೆ.                                                                                                             ಶೀಲಾ ನಾಯಕ್
ನಿಂತ ನೆಲವೇ ಅವಳನ್ನು ಭದ್ರವಾಗಿ ಹಿಡಿದುಕೊಂಡಿತ್ತು!
‘ಕೊನೆಗೂ ತನ್ನ ಕನಸು ನನಸಾಗಲಿದೆಯೆ?’
ದೀಪಾಳಿಗೆ ನಂಬಲು ಸಾಧ್ಯವಾಗಲಿಲ್ಲ...
ತನ್ನ ಮೊಬೈಲಿಗೆ ಬಂದ ಸಂದೇಶವನ್ನು ಮತ್ತೊಮ್ಮೆ ಮಗದೊಮ್ಮೆ ನೋಡಿದಳು. “pack ur bag. chalo mumbai... aaaaa...
ಕೆಲಸ ಮುಂದುವರಿಸಲು ಸಾಧ್ಯವಾಗಲಿಲ್ಲ. ಬಾಸ್ ಹತ್ತಿರ ಒಪ್ಪಿಗೆ ಕೇಳಿ ಮನೆಗೆ ಹೊರಟಳು. ಮನಸ್ಸು ಕೆಲವು ದಿನಗಳ ಹಿಂದಿನ ಚಿತ್ರಣವನ್ನು ಬಿಚ್ಚಿತು.

ಇದ್ದಕ್ಕಿದ್ದಂತೆ ಸುಮಿ ಪ್ರತ್ಯಕ್ಷಳಾಗಿದ್ದಳು. ಸುಮ ದೀಪಳ ಬಾಲ್ಯ ಸ್ನೇಹಿತೆ. ಹೆಚ್ಚು ಕಡಿಮೆ ನಿತ್ಯವೂ ಅಂತರ್ಜಾಲ ಅಥವಾ ಮೊಬೈಲ್ ಮೂಲಕ ಸಂಪರ್ಕವಿರುವುದಾದರೂ ಊರ ಕಡೆ ಅವಳು ಬರದೇ ಸುಮಾರು 5-6 ವರ್ಷಗಳಾಗಿದ್ದವು. ದೀಪಾ ಮತ್ತು ಸುಮಳ ಮಧ್ಯದಲ್ಲಿ ಸರಿ ಸುಮಾರು 3-4 ವರ್ಷಗಳ ಅಂತರವಿದ್ದರೂ ಅವರ ನಿರ್ಮಲ ಸ್ನೇಹಕ್ಕೆ ವಯಸ್ಸಿನ ಅಂತರವಾಗಲಿ,  ಜಾತಿಯಾಗಲಿ ಅಡ್ಡ ಬಂದಿರಲಿಲ್ಲ.  ತಮ್ಮ ತಂದೆಯಂದಿರ ಸ್ನೇಹವನ್ನು ಈ ಹುಡುಗಿಯರೂ ಮುಂದುವರೆಸಿದ್ದರು. ತಂದೆಯಂದಿರು ತಮ್ಮ ತಮ್ಮ ಕೆಲಸಗಳ ದೆಸೆಯಿಂದಾಗಿ ಊರೂರು ಸುತ್ತಬೇಕಾಗಿದ್ದರೂ ತಮ್ಮ ಸಂಸಾರವನ್ನು ಇಲ್ಲೇ ಊರಲ್ಲಿ ಬಿಟ್ಟಿದ್ದರು.  ಹಾಗಾಗಿ ದೀಪಾ ಮತ್ತು ಸುಮ ನೆರೆಕೆರೆಯವರಾಗಿದ್ದರು. ಅವರ ಸ್ನೇಹವೂ ಹಾಗೆ ಉಳಿದು ಮದುವೆಯಾದ ನಂತರವೂ ಮುಂದುವರೆದಿತ್ತು.  ದೀಪಾ ಮಂಗಳೂರಿನಲ್ಲೇ ಉಳಿದಳು, ಸುಮ ಅವಳ ಪತಿ ಬ್ಯಾಂಕಿನ ಕೆಲಸದ ನೆವನದಿಂದ ಅನೇಕ ಊರುಗಳ ನೀರು ಕುಡಿದು, ಕೊನೆಗೆ ಮುಂಬೈಯಿಯಲ್ಲೇ ಸೆಟಲ್ ಆಗಿಬಿಟ್ಟರು. ಸುಮಳ ಮಗ ಅಲ್ಲೇ ದೊಡ್ಡ ಕಂಪನಿಯೊಂದರಲ್ಲಿ ದೊಡ್ಡ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾನೆ.
ಐದು ವರ್ಷದ ಹಿಂದೆ ಸುಮಿಗೆ ಬರೆಯುವ ಗೀಳು ಹಿಡಿಯಿತು. ಅವಳು ತಾನು ಬರೆದುದನ್ನು ದೀಪಾಳಿಗೆ ಇ ಮೈಲ್ ಮೂಲಕ ಕಳುಹಿಸುತ್ತಿದ್ದಳು..ಅದನ್ನು ತಿದ್ದಿ ತೀಡಿ ಅದಕ್ಕೆ ಹೊಸ ರೂಪ ಕೊಟ್ಟು ದೀಪಾ ಹಿಂದಕ್ಕೆ ಕಳುಹಿಸುತ್ತಿದ್ದಳು. ಹೀಗೆ ಹೊಸ ರೂಪ ಪಡೆದ ಕವಿತೆ, ಕಥೆ ಎಲ್ಲವೂ ಮುಂಬೈಯಿಯ ತುಳುಕೂಟ ಪ್ರಸಾರ ಮಾಡುತ್ತಿದ್ದ ಪತ್ರಿಕೆಗಳಲ್ಲಿ ಪ್ರಕಟವಾಗಿ ಸುಮಳ ಹೆಸರು ಅಲ್ಲಿನ ತುಳು ಜನರ ಬಾಯಿಯಲ್ಲಿ ತಿರುಗುತ್ತಿತ್ತು. ಕೆಲವೊಂದು ಮಹಿಳಾಮಣಿಯರ ಕಾರ್ಯಕ್ರಮದಲ್ಲಿ ಅತಿಥಿಯಾಗಿಯೋ, ಅಧ್ಯಕ್ಷೆಯಾಗಿಯೋ ಆಹ್ವಾನವೂ ಬರುತ್ತಿತ್ತು. 
ಸುಮಿ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಲು ಕಾರಣ ವಿಶ್ವ ತುಳು ಸಮ್ಮೇಳನ!

“ದೀಪ್ಸ್, ನಿನ್ನಿಂದ ನಾನು ಒಬ್ಬ ಸಾಹಿತಿ ಅಂತ ಗುರುತಿಸಲ್ಪಟ್ಟೆ ಕಣೇ! ಹುರ್ರೇ... ” ದೀಪಾಳ ಕೈ ಹಿಡಿದು ಒಂದು ಸುತ್ತು ಗರ್ ಅಂತ ತಿರುಗಿಸಿದಳು. ಗಟ್ಟಿಯಾಗಿ ಬಿಗಿದಪ್ಪಿದಳು!
“ಅದೇನು ಅಂತ ಸರಿಯಾಗಿ ಹೇಳೆ. ಸಾಹಿತಿ, ಗುರುತು… ಇದೆಲ್ಲಾ ಏನು?”
“ಅದೆಲ್ಲಾ ಮತ್ತೆ, ಮೊದಲು ನನಗೆ ಹೊಟ್ಟೆಗೆ ಹಾಕು. ಕುಡಿಯಲು ಅದೇನೋ ನೀನು ರಾಗಿಯ ಸಿಹಿ ಪಾಯಸನೋ, ಜ್ಯೂಸೋ ಮಾಡ್ತಿದ್ದಿಯಲ್ಲಾ .. ತೆಂಗಿನಕಾಯಿ ಹಾಕಿ, ಅದನ್ನು ಮಾಡಿಕೊಡು. ಮತ್ತೆ ಇವತ್ತು ಕೆಲಸಕ್ಕೆ ಹೋಗಲಿಕ್ಕಿಲ್ಲ. ಆಫೀಸಿಗೆ ಫೋನ್ ಮೊದಲು ಮಾಡು! ಹುಂ... ” ಮಹಾರಾಣಿ  ಬಡಬಡ ಮಾತಾಡ್ತಾ  ಅಪ್ಪಣೆ ಕೊಟ್ಟಳು.
ದೀಪಾಗೆ ಬೇರೆ ದಾರಿಯಿರಲಿಲ್ಲ. ಮೊದಲಿಂದಲೂ ಅವಳು ಹಾಗೆ! ದೀಪಾ ತಣ್ಣಗಿನ ಸ್ವಭಾವದವಳು. ಸುಮಿಗೆಂದೂ ಇಲ್ಲ ಹೇಳುತ್ತಿರಲಿಲ್ಲ.. ಸುಮಿಯೂ ಅಷ್ಟೇ.. ಮಾತಿನಲ್ಲೇಷ್ಟೇ ಜೋರು!
ಅಪರಾಹ್ನ ಸ್ನೇಹಿತೆಯರಿಬ್ಬರೂ ಹೊಟ್ಟೆ ತುಂಬಾ ಮಾತಾಡಿ, ಒಂದಿಷ್ಟು ಹೆಚ್ಚಿಗೆಯೇ ಊಟ ಮಾಡಿ ಪಲ್ಲಂಗದ ಮೇಲೆ ಬಿದ್ದುಕೊಂಡರು.
“ಹುಂ, ಈಗ ಹೇಳು ನಿನ್ನ ಸಾಹಿತ್ಯ ಪುರಾಣ!”
“ಅದೇ ಕಣೆ, ನಿಂಗೊತ್ತಲ್ವ. ನೀನು ಸರಿಪಡಿಸಿದ ನನ್ನ ಬರಹಗಳನೆಲ್ಲಾ ಆ ತುಳು ಸಂಘದವರಿಗೆ ಕಳುಹಿಸುತ್ತಿದ್ದೆನಲ್ಲ. ಅವರು ಅದನ್ನು ಬೇರೆ ಪತ್ರಿಕೆಗಳಿಗೂ ಕಳುಹಿಸುತ್ತಿದ್ದರು. ಹಾಗೆ ನನ್ನನ್ನು ಅಲ್ಲಿನ ಕನ್ನಡ, ತುಳು ಕೂಟದವರೆಲ್ಲ ಬರಹಗಾರ್ತಿ ಎಂದು ಆಗಾಗ್ಗೆ ಕರೆದು ಸನ್ಮಾನಿಸುತ್ತಿದ್ದರು... ಇದೆಲ್ಲಾ ಕತೆ ನಿನಗೆ ಗೊತ್ತೇ ಇದೆ ತಾನೆ. ಇದೀಗ ಮುಂಬೈಯಿಯಲ್ಲಿ ತುಳು ವಿಶ್ವ ಸಮ್ಮೇಳನ ಮುಂದಿನ ತಿಂಗಳಲ್ಲಿ ನಡೆಯಲಿದೆ. ಅದರಲ್ಲಿ ಭಾಗವಹಿಸಲು ನನಗೂ ಕರೆ ಬರಬಹುದಂತ ನಮ್ಮ ಅಧ್ಯಕ್ಷರು ಹೇಳಿದ್ದಾರೆ. ಒಂದು ವೇಳೆ ಹಾಗೇನಾದರೂ ನನ್ನನ್ನು ಆಫೀಶಿಯಲ್ ಆಗಿ ಆಹ್ವಾನಿಸಿದರೆ ನೀನೂ ಬರಲೇಬೇಕು. ನೀನಿಲ್ಲದಿದ್ದರೆ ನಂಗೆ ಕೈ ಕಾಲು ಅಲ್ಲಾಡಲಿಕ್ಕಿಲ್ಲ.”
“ಅಲ್ವೇ, ನಾನು ಅಲ್ಲಿಗೆ ನಿನ್ನ ಕೈ ಕಾಲು ಅಲ್ಲಾಡಿಸಲು ಬರ್ಬೇಕಾ! ಈಗಾಗಲೇ ನೀನು ಸ್ವತಂತ್ರವಾಗಿ ಅಲ್ಲಾಡಿಸುತ್ತಿದ್ದಿಯಲ್ಲಾ. ಬೆಳಿಗ್ಗೆ ತಾನೇ ನೀನೇ ನನ್ನನ್ನೂ ಗರ್ ಅಂತ ತಿರುಗಿಸಿ ಜೋರಾಗಿ ಅಲ್ಲಾಡಿಸಿಬಿಟ್ಟಿದೆಯಲ್ಲವೆ!”, ದೀಪಾ ಮುಸುಮುಸು ನಗುತ್ತಾ ಅಂದಳು.
“ಹೋಗೆ, ಈ ಸಲ ಈ ನೆಪದಿಂದಾದಲಾದರೂ ನಾಲ್ಕು ದಿನ ನನ್ನ ಮನೆಗೆ ಬಂದು ಆರಾಮವಾಗಿ ಇದ್ದು ಹೋಗಬೇಕು. ನನ್ಗಿಂತ ಚಿಕ್ಕವಳು ನೀನು ಹೇಗೆ ಆಗಿದ್ದಿ ನೋಡು! ಸಾಕು ಹೀಗೆ ಅಜ್ಜಮ್ಮನ ಹಾಗೆ ಮಾತಾಡಬೇಡ. ಎಲ್ಲಾ ಕನ್ಫರ್ಮ್ ಆದ ಕೂಡಲೇ ಮೆಸೇಜ್ ಮಾಡ್ತೇನೆ. ಜೊತೆಗೆ ಟಿಕೆಟ್ ಕೂಡ ಬುಕ್ ಮಾಡ್ತೇನೆ. ಸುಮ್ಮನೆ ಹೊರಡು.
ದೀಪಾ ಗಂಭೀರಳಾಗಿಬಿಟ್ಟಳು. ಜತೆಗೆ ಅವಿನಾಶನ ನೆನಪೂ ಒತ್ತರಿಸಿ ಬಂದಿತು. ತಡೆಯಲಾಗಲಿಲ್ಲ... ಕಣ್ಣಾಲಿಗಳು ತುಂಬಿಕೊಂಡವು. ಇದೊಂದು ಚಾನ್ಸ್... ಮುಂಬೈಗೆ ಹೋದರೆ ಅವಿಯನ್ನು ನೋಡಬಹುದು... ಛೇ, ಏನೆಲ್ಲಾ ಯೋಚನೆ. ಇಲ್ಲಿ ಹುಡುಗಿಯರಿಗೆ ಯಾರಿದ್ದಾರೆ!
ಸುಮೀ, ಪ್ಲೀಸ್ ಕಣೆ. ಒತ್ತಾಯ ಮಾಡ್ಬೇಡವೇ. ನಿಂಗೆ ಪರಿಸ್ಥಿತಿಯೆಲ್ಲಾ ಗೊತ್ತು ತಾನೆ. ನನ್ನ ಹುಡುಗಿಯರನ್ನು ನಾಲ್ಕು ದಿನ ಯಾರು ನೋಡಿಕೊಳ್ಳುತ್ತಾರೆ ಕಣೇ? ಅವರನ್ನು ಇಲ್ಲಿ ಹೇಗೋ ಬಿಟ್ಟು ನಾನಲ್ಲಿ ಹೇಗೆ ಆರಾಮವಾಗಿ ಇರಲಿ ಕಣೇ?
ನಾನೆಲ್ಲ ಯೋಚನೆ ಮಾಡಿದ್ದೇನೆ ದೀಪೂ... ನಿನ್ನ ಅಮ್ಮನ ಮನೆಯಲ್ಲಿ ಬಿಡು ಇಬ್ಬರನ್ನೂ. ನಾಲ್ಕು ದಿನ ತಾನೆ. ಇಬ್ಬರೂ ಬೇಡ ಅನ್ನಲಿಕ್ಕಿಲ್ಲ. ನಿನ್ನ ಅಮ್ಮನಿಗೆ ಅಂತಹ ತೊಂದರೆ ಸಹ ಆಗೊಲ್ಲ.
ಯೋಚನೆ ಮಾಡ್ತೇನೆ. ಆದರೆ ನನ್ನ ಮಕ್ಕಳು ಬೇಡ ಅಂದ್ರೆ ನಾನು ಬರುವುದಿಲ್ಲ. ಮತ್ತೆ ಸುಮ್ಮನೆ ನನ್ನ ಬೈಬೇಡ.
ಆಯ್ತು ಪುಣ್ಯಾತ್ಮಿ... ನೀನು ಬಂದ್ರೆ ನನ್ನಷ್ಟು ಖುಷಿ ಪಡುವವರು ಯಾರೂ ಇಲ್ಲ..ಬರದಿದ್ದರೆ ನನ್ನಷ್ಟು ದುಃಖಿನೂ ಯಾರೂ ಇಲ್ಲ.  ಸಣ್ಣ ಮುಖಮಾಡಿ ಸುಮ ಅಂದಾಗ ದೀಪಳಿಗೆ ತಡೆಯಲಾಗಲಿಲ್ಲ. ಅವಳನ್ನು ಗಟ್ಟಿಯಾಗಿ ಅಪ್ಪಿದಳು... ಕಣ್ಣಿನಿಂದ ಗಂಗಾ ಧಾರಾಕಾರವಾಗಿ ಹರಿದಳು. ಸುಮ ಅವಳನ್ನು ತಡೆಯಲಿಲ್ಲ.
ಅದಾಗಿ ತಿಂಗಳಾಗಿತ್ತು. ಇವತ್ತು ಆಫೀಸಿನಲ್ಲಿ ಕೆಲಸ ಮಾಡುತ್ತಿರುವಾಗ ಸುಮಳ ಮೆಸೇಜ್ ಬಂದು ದೀಪಾಳ ತಲೆಕೆಟ್ಟಿತ್ತು. ಮಕ್ಕಳ ಬಗ್ಗೆ ಯೋಚನೆ ಮಾಡದೇ ಅವಳು ಅವಿನಾಶನ ಬಗ್ಗೆ ಯೋಚಿಸುತ್ತಿದ್ದಳು. ಮನೆಗೆ ಬಂದು ಮಕ್ಕಳಿಗೋಸ್ಕರ ಪಾವ ಭಾಜಿ ಮಾಡಿಟ್ಟಳು. ಎಂದಿನಂತೆ ಬೀಗ ಹಾಕಿರದ ಬಾಗಿಲು ಕಂಡು ಮೃದುಲಳಿಗೆ ಅಮ್ಮ ಮನೆಯಲ್ಲೇ ಇದ್ದಾಳಂತ ಗೊತ್ತಾಗಿ, ಮೊದಲು ಅಮ್ಮ ಸೌಖ್ಯವಾಗಿದ್ದಾಳೆಯೇ ಎಂದು ವಿಚಾರಿಸಿದಳು. ತಲೆಯ ಮೇಲೆ ಕೈಯಿಟ್ಟು ಪರೀಕ್ಷಿಸಿದಳು.
ಮನ್ವಿತ, ಅಮ್ಮ! ತಾಯೆ! ನೀನು ಡಾಕ್ಟರ್ ಇನ್ನೂ ಆಗಿಲ್ಲ ಕಣೇ.. ಅಮ್ಮ ಆರಾಮವಾಗಿದ್ದಾರೆ. ಅವರ ಮುಖ ನೋಡು ಮೊದಲು. ಹೇಗೆ ಹೊಳಿತಿದೆ ಅಂತ.. ಇವಳಿಗೆ ಎಲ್ಲಾ ಪೇಷೆಂಟ್ ತರಾನೇ ಕಾಣ್ತಾರಪ್ಪಾ! ಪರಪರಗುಟ್ಟುತ್ತಾ ಅಮ್ಮನ ಹತ್ತಿರ ಬಂದು ಭುಜ ಹಿಡಿದು ಬಳಸಿ, ಏನು ವಿಶೇಷ ಅಮ್ಮ? ಕಣ್ಣು ಮಿಟುಕಿಸಿ ಕೇಳಿದಳು.
ಇವಳ ಕಣ್ಣಿನಿಂದ ಏನನ್ನೂ ಮುಚ್ಚಿಡಲಿಕ್ಕಾಗೊಲ್ಲ!”  ದೀಪ ನಿಟ್ಟುಸಿರು ಬಿಟ್ಟಳು.
ಅಮ್ಮ ಏನಾದರೂ ಪ್ರೊಬ್ಲೆಮ್? ಅಮೃತ ಕಣ್ಣು ಚೂಪು ಮಾಡಿ ಕೇಳಿದಳು.
ಮೊದಲು ಇಬ್ಬರೂ ತಿಂಡಿ ತಿನ್ನಿ. ಮತ್ತೆ ಹೇಳ್ತೆನೆ.
ಇಬ್ಬರು ಮಾತುಕತೆಯಿಲ್ಲದೆ ತಿಂದರು.
ಹೊರಗಿನ ಪಡಸಾಲೆಗೆ ಮೂವರೂ ಬಂದರು.  ಟಿವಿ ಹಚ್ಚಿದಳು ಮನ್ವಿತ.  ಅಮೃತಳಿಗೆ ಕೋಪ ಬಂತು.ಆಫ್ ಮಾಡೇ.. ಯಾವಾಗ ನೋಡಿದರು ಆ ಇಡಿಯೆಟ್ ಬಾಕ್ಸ್ ನೋಡ್ತಾನೆ ಇರ್ಬೇಕು.
ಹೋಗೆ ಅಮ್ಮಿ! ನಿಂಗೆ ಬೇಡ ಅಂತಾದ್ರೆ ನಾನೂ ನೋಡಲಿಕ್ಕಿಲ್ವಾ... ಹೋಗು ಮಣಿಸರ ಹಿಡಿದು ಜಪ ಮಾಡಿ ಕುತ್ಕೋ. ಅದ್ಯಾಕೆ ನಾನು ಹಾಕಿದಾಗ ನೀನೂ ಇಲ್ಲೇ ಕೂತ್ಕೊಂಡು ನೋಡ್ತಿಯಾ!
ಅಮ್ಮಿ, ಮನ್ವಿ... ಇಲ್ಲಿ ಕೇಳಿ ಇಬ್ಬರೂ...
ದೀಪಳ ಮೃದು ಸ್ವರ ಕೇಳಿ ಇಬ್ಬರೂ ಗಂಭೀರರಾದರು.
ಇವತ್ತು ಸುಮಿ ಪಚ್ಚಿಯ(ಚಿಕ್ಕಮ್ಮ) ಮೆಸೇಜ್ ಬಂದಿತ್ತು. ನಿಮಗೆ ಹೇಳಿದ್ದೆನಲ್ವಾ... ಆ ತುಳು ವಿಶ್ವ ಸಮ್ಮೇಳನ... ಆಹ್ವಾನ... ಅವರಿಬ್ಬರಿಗೂ ದೀಪ ವಿಶ್ವ ತುಳು ಸಮ್ಮೇಳನಕ್ಕೆ ಸುಮ ಆಹ್ವಾನಿತಳಾಗಬಹುದೆಂದು ತಿಳಿಸಿದ್ದಳೇ ಹೊರತು ಅವಳು ತನ್ನನ್ನೂ ಅದರಲ್ಲಿ ಭಾಗವಹಿಸಲು ಆಮಂತ್ರಿಸಿದ್ದಾಳೆಂದು ತಿಳಿಸಿರಲಿಲ್ಲ.
ಹೌದು, ಅದಕ್ಕೆ ನೀನ್ಯಾಕೆ ತಲೆಕೆಡಿಸಿ ಕೂತುಕೊಂಡಿದ್ದಿಯಾ?ಇಬ್ಬರಿಗೂ ಆಶ್ಚರ್ಯ!
ನನ್ನನ್ನು ಮುಂಬೈಯಿಗೆ ಕರೆದಿದ್ದಾಳೆ.  ಟಿಕೆಟ್ ಬುಕ್ ಮಾಡಿದ್ದಾಳೆ.
ಹುರ್ರೇ... ಅಮ್ಮ, ನಿನ್ನ ಚಾನ್ಸ್... ನನಗೆ ಈ ಇಂಟರ್ನಲ್ ಎಕ್ಸಾಮ್ ಇಲ್ಲದಿದ್ದರೆ ನಾನೂ ನಿನ್ನ ಜತೆ ಬರ್ತಿದ್ದೆ. ಮನ್ವಿತ ಎದ್ದು ಅಮ್ಮನನ್ನು ಗಟ್ಟಿಯಾಗಿ ಅಪ್ಪಿಕೊಂಡಳು.
ಅಷ್ಟೇ ತಾನೆ. ಅದಕ್ಕೆ ತಲೆ ಬಿಸಿ ಯಾಕೆ? ನೀನು ಪ್ಯಾಕಿಂಗ್ ಮಾಡು. ಮೃದುಲ ತಾಯಿಯ ಹತ್ತಿರ ಬಂದು ಭುಜ ತಡವಿದಳು.
ನಿಮ್ಮಿಬ್ಬರ ಊಟ, ತಿಂಡಿ... ಅಷ್ಟು ಸುಲಭವಲ್ಲ ಅದು. ಒಂದು ದಿನದ ಮಾತಲ್ಲ. ನಾಲ್ಕೈದು ದಿನ ನಿಮ್ಮಿಬ್ಬರಿಗೆ ತೊಂದರೆ... ಅಲ್ಲದೆ ನಿಮ್ಮ ಅಪ್ಪ... ಒಪ್ಪಿಗೆ ಕೊಡ್ತಾರ?
ನಾನು ಮಾತಾಡುತ್ತೇನೆ ಅಪ್ಪನ ಹತ್ತಿರ. ಅವರು ಹೊಟೇಲ್‍ನಲ್ಲಿ ಊಟ ತಿಂಡಿ ಮಾಡ್ಲಿ. ನಾವು ಅಮ್ಮಮ್ಮನ ಮನೆಗೆ ಹೋಗ್ತೇವೆ. ಎಲ್ಲಾ ಸರಿಯಾಗುತ್ತೆ. ನೀನು ಆರಾಮವಾಗಿ ಹೋಗಿ ಎಂಜಾಯ್ ಮಾಡು. ಮೃದುಲ ಕೋಣೆಗೆ ಹೊರಟಳು ಕಪಾಟಿನಿಂದ ಬ್ಯಾಗ್ ತೆಗೆಯಲು. ಇಬ್ಬರೂ ಅಮ್ಮನಿಗೆ ಸಹಾಯ ಮಾಡಿದರು.

                                     ******************      

ಬಸ್ಸಿನಲ್ಲಿ ಕೂತುಕೊಂಡ ದೀಪಾ ದ್ವಂದ್ವದಲ್ಲಿದ್ದಳು... ಅವಿಗೆ ತಾನು ಮುಂಬೈಗೆ ಬರುವುದನ್ನು ಹೇಳಬೇಕೆ, ಬೇಡವೆ...
ಕೊನೆಗೂ ಈಗ ಹೇಳುವುದು ಬೇಡ. ಮುಂಬೈ ತಲುಪಿದ ಮೇಲೆ ಸುಮಿಯ ಜತೆ ಆ ಸಮ್ಮೇಳನ ನಡೆಯುವ ಸ್ಥಳ, ಸಮಯ ಎಲ್ಲಾ ತಿಳಿದ ಮೇಲೆ ಅವಿಗೆ ತಿಳಿಸಿದರಾಯಿತು. ಬಹುಶಃ ಅವನೂ ಇದರಲ್ಲಿ ಭಾಗವಹಿಸಬಹುದು. ತಟ್ಟನೆ ಅವಳಿಗೆ ನೆನಪಾಯಿತು. ಮೊನ್ನೆ ಚಾಟ್ ಮಾಡುವಾಗ ಅವಿ... ಯಾವುದೋ ಸಮ್ಮೇಳನ ನಡೆಯಲಿದೆ. ಅದರಲ್ಲಿ ಕವಿಗೋಷ್ಠಿ ಮತ್ತು ಚಿತ್ರ ಬಿಡಿಸುವಿಕೆ ಏಕಕಾಲದಲ್ಲಿ ನಡೆಯಲಿದೆ. ತನ್ನನ್ನೂ ಅದರಲ್ಲಿ ಆಹ್ವಾನಿಸಿದ್ದಾರೆ ಎಂದು ಹೇಳಿದ್ದನು.  ಆಗ ಅದು ಇದೇ ಸಮ್ಮೇಳನವೆಂದು ತನಗೆ ಹೊಳೆಯಲೇ ಇಲ್ಲ. ಅವಿಯ ಜೊತೆಗೆ ಮಾತಾಡುವಾಗಲೆಲ್ಲ ತನ್ನ ತಲೆ ನಿಧಾನವಾಗಿ ಓಡುತ್ತದೆ!
ಬಹುಶಃ ಇದೇ ಸಮ್ಮೇಳನವಿರಬಹುದು. ದೈವೇಚ್ಛೆಯಿದ್ದರೆ ತಮ್ಮಿಬ್ಬರ ಮೊದಲ ಭೇಟಿ ಆ ಸಮ್ಮೇಳನದಲ್ಲೇ ನಡೆಯಬಹುದು. ಹೀಗೆ ಚಿಂತಿಸುತ್ತಾ ದೀಪ ನಿದ್ದೆಗೆ ಜಾರಿದಳು. ರವಿಯ ಹೊಂಗಿರಣ ಅವಳ ಮುಖದ ಮೇಲೆ ಬಿದ್ದಾಗಲೇ ಅವಳಿಗೆ ಎಚ್ಚರವಾಯಿತು. ಅವಿನಾಶನ ಚಿತ್ರಣ ಮನದ ಪಟದಲ್ಲಿ ಮೊದಲು ಮೂಡಿ ಬಂತು... ಇನ್ನು ಸ್ವಲ್ಪ ಹೊತ್ತಲ್ಲೇ ತನ್ನ ಮನದನ್ನನ ಊರು ತಲುಪಲಿದ್ದೇನೆ. ವಿದ್ಯುತ್ ಸಂಚಾರವಾದಂತಾಯಿತು ಮೈಯಲೆಲ್ಲ... ಹೃದಯವೀಣೆ ಮೀಟಲಾರಂಭಿಸಿತು ಮೋಹನ ರಾಗ!
ಹೌದು, ಹದಿಹರಯದ ಮಕ್ಕಳ ಅಮ್ಮ ದೀಪ ಪ್ರೀತಿಯ ಸುಳಿಯಲ್ಲಿ ಸಿಲುಕಿಕೊಂಡಿದ್ದಾಳೆ. ತಾವಿಬ್ಬರು ಒಂದಾಗುವ ಕನಸು ನನಸಾಗುವ ಸಂದೇಹ ಇಬ್ಬರಿಗೂ ಇದ್ದರೂ ಪ್ರೀತಿಯ ಪರದೆಯಿಂದ ಇಬ್ಬರಿಗೂ ಕಳಚಿಕೊಳ್ಳಲು ಆಗಿರಲಿಲ್ಲ. ಎಂದಾರೂ ತಮ್ಮ ಬಾಳಪಥ ಒಂದಾಗುವುದೆಂಬ ಭ್ರಮೆಯ ಕನಸು ದೀಪಾ ಅವಿನಾಶ್  ಇಬ್ಬರಿಗೂ.. ಯಾರಿಗೆ ಗೊತ್ತು ದೈವೇಚ್ಛೆಯೇನೆಂದು. ಪವಾಡಗಳು ಎಲ್ಲಿ, ಹೇಗೆ, ಯಾಕೆ ಜರುಗುವುವೋ ಬಲ್ಲವರಾರು?
ಬರಹಗಾರ್ತಿ ದೀಪಾ, ಕಲಾಕಾರ ಅವಿನಾಶ್ ಇಬ್ಬರ ಬಾಳು ಯಾವ ದಿಕ್ಕಿನಲ್ಲಿ ಸಾಗುವುದೊ ಏನೋ!
*****
ನಿಲ್ದಾಣದಲ್ಲಿ ಅರಳಿದ ಮುಖದಿಂದ ಸುಮ ದೀಪಾಳನ್ನು ಬರಮಾಡಿಕೊಂಡಳು. ಕೆಲಘಳಿಗೆ ಅವಳ ಸನ್ನಿಧಿಯಲ್ಲಿ ದೀಪಾ ತನ್ನ ಮಕ್ಕಳು, ಅವಿನಾಶ್ ಎಲ್ಲವನ್ನೂ ಮರೆತಳು.
ಇನ್ನು ನಾಲ್ಕು ದಿನ ಮನೆಯಲ್ಲಿ ಕೋಳಿ, ಮೊಟ್ಟೆ ಇಲ್ಲ... ನಿಮ್ಮ ಗೆಳತಿ ನಮಗೆಲ್ಲ ವಾರ್ನಿಂಗ್ ಕೊಟ್ಟಿದ್ದಾಳೆ. ಸುಮಿಯ ಪತಿ ನಗುತ್ತಾ ಬಾಗಿಲಲ್ಲೇ ಬರಮಾಡಿಕೊಂಡರು.
ನಿಮ್ಮಿಂದ ನಾನು ಬಚಾವ್ ಆದೆ... ಸಮಯಕ್ಕೆ ಸರಿಯಾಗಿ ಊಟ ತಿಂಡಿ ಬೇಕಾದರೆ ಅವಳು ಬರೆದದನ್ನೆಲ್ಲಾ ಕಡ್ಡಾಯವಾಗಿ ಓದಲೇಬೇಕೆಂದು ನನಗೆ ಶಿಕ್ಷೆ ಕೊಡುತ್ತಿದ್ದಳು.. ಆ ಕಾಗೆ ಗುಬ್ಬಚ್ಚಿಯ ಕತೆ, ಕವನ ಕೇಳಿ ಕೇಳಿ ತಲೆ ಚಿಟ್ಟು ಹಿಡಿದು ಹೋಗುತ್ತಿತ್ತು... ಅದೆಲ್ಲಾ ಈಗ ನಿಮ್ಮ ತಲೆಗೆ ಕಟ್ಟಿದ್ದಾಳೆ.. ನಿಮ್ಮ ತಲೆ ಎಲ್ಲಾ ಆರಾಮವಾಗಿದೆ ತಾನೆ...
ಭಾವ, ನಿಮ್ಮದು ಯಾವಾಗಲೂ ತಮಾಷೆ... ನೀವು ಕೇಳಿಲ್ವಾ, ಹಾಡಿ ಹಾಡಿ ರಾಗ, ಉಗುಳಿ ಉಗುಳಿ  ರೋಗ! ಹಾಗೆ ಬರೆದು ಬರೆದು ನಮ್ಮ  ಸುಮ್ಮಿ ಇದೀಗ ಮೇಲಿನ ಲೆವೆಲ್‍ಗೆ ತಲುಪಿದ್ದಾಳೆ... ನೀವು ಅವಳ ಇತ್ತೀಚಿನ ಬರಹಗಳನ್ನು ಓದಿದ್ದಿರಾ?
ಅಯ್ಯೋ, ಸುಮ್ಮನೆ ಅಟ್ಟಕ್ಕೆ ಹತ್ತಿಸಬೇಡಿ ಅವಳನ್ನ. ಈಗಾಗಲೇ ಮನೆಯಲ್ಲೇ ಇರುವ ನಾನು ಸಸಾರವಾಗಿದ್ದೇನೆ... ನಂಗೆ ಬರಿಯಲ್ಲಿಕ್ಕೆ ಉಂಟು ಅಂತ ಈರುಳ್ಳಿ, ತರಕಾರಿ ಕತ್ತರಿಸುವ ಕೆಲಸ ಎಲ್ಲಾ  ನನ್ನ ತಲೆಗೆ ಕಟ್ಟಿದ್ದಾಳೆ. ನಾಳೆಯಿಂದ ಅಡುಗೆನೂ ನಾನೇ ಮಾಡ್ಬೇಕಾದಿತು.
ಅದೇನೇ ಶುಮ್ಮಿ, ನಾನಿಷ್ಟೆಲ್ಲಾ ಹೇಳಿದರೂ ಸುಮ್ಮನಿರುವೆ... !
ಹುಂ, ಈಗೆಲ್ಲ ನಿಮ್ಮದೇ ಆಟ.. ನಡೆಯಲಿ... ನಡೆಯಲಿ... ನಾನೀಗ ಸಮ್ಮೇಳನದ ಗಡಿಬಿಡಿಯಲ್ಲಿರುವೆ.. ಮತ್ತೆ ತೋರಿಸ್ತೇನೆ. ’ನಾರಿ ಮುನಿದರೆ ಮಾರಿ’ ಈ ಮಾತು ನಿಜ ಹೇಗೆ ಅಂತ.  
ಪತಿ ಪತ್ನಿಯರ ಪ್ರೀತಿ ಕಂಡು ದೀಪಳಿಗೆ ಮನತುಂಬಿ ಬಂದಿತ್ತು.
ನಾಳೆ 8ಗಂಟೆಗೆ ಉದ್ಘಾಟನೆ. ಮತ್ತು ಕವಿಗೋಷ್ಠಿ.. ಜತೆಗೆ ಸ್ಥಳದಲ್ಲೇ ಚಿತ್ರಕಲಾಕಾರ ಅವಿನಾಶ್  ಅವರಿಂದ ಪ್ರಾತ್ಯಕ್ಷಿಕೆ!
ಕೇಳಿ ದೀಪಾ ಮತ್ತೊಂದು ಲೋಕಕ್ಕೆ ಹೋದಳು.
ದೀಪ್ಸ್, ನಾಳೆ ಈ ಸೀರೆ ನೀನು ಉಡಬೇಕು. ನಿನಗೋಸ್ಕರ ತುಂಬಾ ಹುಡುಕಿ ಆರಿಸಿದ್ದೇನೆ. ಬ್ಲೌಸನ್ನೂ ಹೊಲಿಸಿ ಇಟ್ಟಿದ್ದೇನೆ. ಹೇಗುಂಟು? ನಿನಗೆ ಹೆಚ್ಚು ಝಗ ಝಗ ಇದ್ದರೆ ಆಗುವುದಿಲ್ಲವಲ್ಲಾ ಅಂತ ಈ ಲೈಟ್ ಬಣ್ಣ ಆರಿಸಿದ್ದೆ... ನನ್ನ ಜತೆ ನೀನು ಸ್ಟೇಜನಲ್ಲಿ ಕುಳಿತುಕೊಳ್ಳಬೇಕು. ನಾನು ನಿರ್ವಾಹಕರಲ್ಲಿ ಈಗಾಗಲೇ ನಿನ್ನ ಬಗ್ಗೆ ಮಾತನಾಡಿದ್ದೇನೆ....
ಸುಮ ವಾಗ್ಝರಿ ಹರಿಯುತ್ತಲೇ ಇತ್ತು... ದೀಪಾಳಿಗೆ ಏನೂ ಕೇಳುತ್ತಿರಲಿಲ್ಲ... ಅಲ್ಲಿಂದ ಎದ್ದು ಬಾಲ್ಕನಿಯ ಹತ್ತಿರ ಸಮುದ್ರದಿಂದ ಬರುವ ಗಾಳಿಗೆ ಮುಖಕೊಟ್ಟು ನಿಂತಳು. ದೀಪಾಳ ಪುಣ್ಯ... ಬಾಗಿಲಲ್ಲಿ ಯಾರೋ ಕರೆದರು ಅಂತ ಸುಮ ಅಲ್ಲಿಂದ ಎದ್ದು ಹೋದಳು... ಸಧ್ಯ ಅವಳ ಮುಖದ ರಂಗು ನೋಡಿ ಸುಮನಿಗೆ ಖಂಡಿತ ಶಂಕೆ ಬರುತಿತ್ತು. ದೀಪ ಕೈಯಲ್ಲಿ ಹಿಡಿದ ಮೊಬೈಲ್ ನೋಡಿದಳು.. ಎರಡು ದಿನದಿಂದ ಅವಿಯ ಜತೆ ಸಂಪರ್ಕವಿಲ್ಲ.
ಕಳುಹಿಸಲೇ?.. ತಿಳಿಸಲೇ ಮುಂಬೈಯಿಗೆ ಬಂದಿರುವ ವಿಷಯ?...
ಮೊಬೈಲ್ ನಡುಗಿತು... ಬೆಳಗಿತು... ಮೆಸೇಜ್! ಅವಿಯದು!
ಹಾಯ್, ಹೇಗಿದ್ದಿಯಾ?
ಮುಂಬೈಯಲ್ಲಿದ್ದೇನೆ. ನಾಳೆ ಕವಿಗೋಷ್ಠಿಗೆ ಬರಲಿದ್ದೇನೆ.
:-)
ಸಿಗೋಣ ನಾಳೆ ನನ್ನ ರಾಣಿ.
ದೀಪ ಕಳುಹಿಸಿದಳು,ಸರಿ, ಗೆಳತಿಯ ಜತೆ ಅಲ್ಲಿ ಬರುತ್ತೇನೆ.
ರಾತ್ರಿಯೆಲ್ಲ ಜಾಗರಣೆ... ಎದೆಯ ಬಡಿತ  ಪಕ್ಕದಲ್ಲೇ ಮಲಗಿದ ಸುಮಿಗೆ ಕೇಳುತ್ತದೆಯೋ ಎಂಬ ಹೆದರಿಕೆ ದೀಪಳಿಗೆ. ಮರುದಿನ ಎಚ್ಚರಿಕೆಯಿಂದ ಸಿಂಗರಿಸಿಕೊಂಡಳು... ಅವಳು ಕೋಣೆಯ ಹೊರಗೆ ಬಂದಾಗ ಸುಮ ಸಿಳ್ಳು ಹಾಕಿದಳು!
ಯಾರನ್ನು ಕೊಲ್ಲಲೇ ಈ ಸಿಂಗಾರ!
ಸುಮ್ಮ್ ಸುಮ್ಮನೆ ಬುರುಡೆ ಬಿಡಬೇಡವೇ...
ನಿಜವಾಗಿ ಕಣೇ.. ನಿನ್ನನ್ನು ಮೊದಲೇ ನೋಡಿರುತ್ತಿದ್ದರೆ ಯಶ್ ಚೋಪ್ರಾ ಜಬ್ ತಕ್ ಹೈ ಜಾನ್ ಸಿನೇಮಾದಲ್ಲಿ ಅನುಷ್ಕಾ ಶರ್ಮಳಿಗೆ ಕೊಕ್ಕೆ ಕೊಟ್ಟು ನಿನ್ನನ್ನೇ ತಮ್ಮ ಹಿರೋಯಿನ್ ಆಗಿ ತಕೊಳ್ತಿದ್ದರು.
ಕೆಂಪೇರಿದಳು ದೀಪಾ. ಹೌದು, ಸೀರೆಯ ತಿಳಿನೀಲಿ ಬಣ್ಣ ಅವಳಿಗೆ ಚೆನ್ನಾಗಿ ಹೊಂದುತ್ತಿತ್ತು.. ಅಂತೆಯೇ ಅವಳು ಅಚ್ಚುಕಟ್ಟಾಗಿ ನೆರಿಗೆ ತೆಗೆದು ಪಿನ್ ಮಾಡಿ ಉಟ್ಟಿದ್ದರೂ ಮೈಮಾಟವನ್ನು ನೋಡುಗರ ಕಣ್ಣಿಂದ ಮುಚ್ಚಿಡಲಾಗುತ್ತಿರಲಿಲ್ಲ. ನೋಡಿದರೆ ಯಾರಿಗೂ ನಲ್ವತ್ತರ ಮಹಿಳೆಯೆಂದು ಭಾಸವಾಗುತ್ತಿರಲಿಲ್ಲ. ಜತೆಗೆ ಅವಳ ಮನದ ಭಾವವೂ ಅವಳ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ಕೊಡುತ್ತಿತ್ತು.
ಸ್ಥಳ ಹತ್ತಿರವಾಗುತ್ತಿದ್ದಂತೆಯೇ ಹೃದಯದ ಕೋಗಿಲೆಯ ಹಾಡು ಹೊರಲೋಕಕ್ಕೂ ಕೇಳಿಸುವಷ್ಟು ತೀವ್ರವಾಯಿತು. ಇವಳ ಕೈ ನವಿರಾಗಿ ನಡುಗುವುದನ್ನು ಗಮನಿಸಿದ ಸುಮ, ನೀನ್ಯಾಕೆ ನರ್ವಸ್ ಆಗಬೇಕು? ಇಂತಹ ಗೋಷ್ಠಿಯಲ್ಲಿ ಈಗಾಗಲೇ ಭಾಗವಹಿಸಿದ ನೀನು ಈಗೇಕೆ ಹೀಗಾಡ್ತಿಯಾ?
“ಅವಳಿಗೆ ಏನಂತ ಹೇಳ್ಲಿ! ನನ್ನವನು ಇಲ್ಲಿದ್ದಾನೆ, ನಾನವನನ್ನು ಮೊದಲ ಬಾರಿಗೆ ನೋಡ್ತಿದ್ದೀನಿ, ಅದಕ್ಕೆ ಹೀಗೆ ನರ್ವಸ್ ಆಗಿದ್ದೇನೆ ಅಂತ ಹೇಳ್ಲಾ!
ದೀಪಾಳಿಗೆ ತನ್ನ ಮನಸ್ಥಿತಿಯನ್ನು ಹಂಚಲು ಆಪ್ತರು ಬೇಕಿತ್ತು. ಆದರೆ... ಆದರೆ ಅವಳನ್ನು ಯಾರಾದರೂ ಅರ್ಥ ಮಾಡಿಕೊಳ್ತಾರ!
ಸುತ್ತಲೂ ಕಣ್ಣು ಹಾಯಿಸಿದಳು ದೀಪಾ. ಕಣ್ಣು ಕಣ್ಣು ಮೇಳೈಸಿತು! ಕಣ್ಣು ಕೋರೈಸುವ ಬೆಳಕು... ಕೇವಲ ಅವಿ ಮಾತ್ರ ಕಾಣಿಸುತ್ತಿದ್ದಾನೆ...ಮತ್ತೆಲ್ಲಾ ಮಸುಕಾಗಿದೆ..  ಮುಖದಲ್ಲಿ ಮಂದಹಾಸ ತೋರುತ್ತಿದ್ದಾನೆ ನನ್ನ ಕನಯ್ಯ... ನನ್ನ ಮೋಹನ..ನನ್ನ ರಾಜ... ತಡೆಯಲಾಗಲಿಲ್ಲ. ದೀಪಾಳಿಗೆ.  ಅವನ ಬಾಹುವಿನಲ್ಲಿ ಒಮ್ಮೆ ಅಡಗಿ ಬಿಡೋಣವೇ.. ಅಂತ ಅನಿಸಿತು. ಕಷ್ಟಪಟ್ಟು ತನ್ನೆಲ್ಲಾ ಆವೇಗವನ್ನು ತಡಕೊಂಡಳು. ಯಾರೋ ಕರೆದರು.. ನಡೆದಳತ್ತ... ಯಾರ್ಯಾರೋ ಯಾರ್ಯಾರನ್ನೋ ಪರಿಚಯಿಸಿದರು.. ಯಾವುದೂ ಅರ್ಥವಾಗುತ್ತಿರಲಿಲ್ಲ.. ಸುಮ್ಮನೆ ಮುಗುಳ್ನಗೆ ಬೀರುತ್ತ ನಡೆದಳು. ಈಗ ಅವಿನಾಶನೇ ಎದುರು ಬಂದನು. ಸುಮಿಯೇ ಪರಿಚಯಿಸಿದಳು. ತಲೆ ತಗ್ಗಿಸಿದಳು ದೀಪಾ! ನೋಟಕ್ಕೆ ನೋಟ ಸೇರಿಸಲು ಸಾಧ್ಯವಾಗಲಿಲ್ಲ ಅವಳಿಗೆ...
ಮುಂದೆ ಕಾರ್ಯಕ್ರಮವೆಲ್ಲ ಸಾಂಗವಾಗಿ ನೆರವೇರಿತು. ಅವಳಿಗೆ ಒಂದೇ ಖುಷಿ! ಅವಿಯ ಜತೆ ವೇದಿಕೆ ಹಂಚಿಕೊಳ್ಳಲು ಸಿಕ್ಕಿತಲ್ಲ. ಅಷ್ಟಾದರೂ ದೊರೆತದ್ದು ನನ್ನ ಪುಣ್ಯವೆಂದು ದೀಪ ಅಂದುಕೊಂಡಳು! ಅವಿಯ ಕುಂಚ ಕೌಶಲ್ಯವನ್ನು ನೋಡಿ ಬೆರಗಾದಳು... ಅವನ ಬಿಂಬವನ್ನು ಹೃದಯದಲ್ಲಿ ಭದ್ರವಾಗಿ ಬಂಧಿಸಿಟ್ಟಳು.
ಕೊನೆಗೂ ಅಗಲುವ ಸಮಯ ಬಂದಿತು.. ಕಾರು ಏರುತ್ತಿರುವ ಅವಿಯ ಹಿಂದೆಯೇ ಹೋಗಲೇ.. ಮನಸ್ಸು ಪ್ರೇರೇಪಿಸಿತು.. ಹ್ಞೂಂ, ಕಾಲುಗಳು ಮನದ ಮಾತು ಕೇಳಲೇ ಇಲ್ಲ.. ನಿಂತ ನೆಲವೇ ಅವಳನ್ನು ಭದ್ರವಾಗಿ ಹಿಡಿದುಕೊಂಡಿತ್ತು.
ಊರಿಗೆ ಅವಿಯ ಸವಿ ನೆನಪಿನೊಂದಿಗೆ ಹೊರಟಳು ದೀಪಾ!
*****

     

ಸವಿ ಸವಿ ಮುಸ್ಸಂಜೆ!ಕತ್ತಲೆಯ ಗರ್ಭವನು ಸೀಳಿ ಕುಲು ಕುಲು ನಗುವ ಚುಕ್ಕಿಗಳು
ಮೋಡದ ಮರೆಯಲಿ ಅಡಗಿ ನಲ್ಲೆಯ ಓಲೆಯನೋದುವ ಚಂದಿರ
ಗೂಡಿಗೆ ಮರಳಿದ ಹಕ್ಕಿಗಳ ಮೌನ ಜೋಗುಳ
ಮುಂಗುರುಳ ಜತೆ ಆಟವಾಡುತ್ತ ನಲ್ಲನ ಸಂದೇಶ ಪಿಸುಗುಟ್ಟುವ ತಂಗಾಳಿ
ಅಪ್ಪಿ ಹಿಡಿದ ಮುದ್ದು ಸೊಸೆಯ ಎಂಜಲಿನ ಅಭಿಷೇಕ ಗಲ್ಲಕ್ಕೆ
ಆಹಾ! ಸವಿ ಸವಿ ಮುಸ್ಸಂಜೆ!

27 February, 2013

ಒಪ್ಪಿಸಿಕೊಳ್ಳು ನನ್ನನ್ನು ನನಗಾಗಿ!
ಮುತ್ತುಗಳ ತೇರುಗಳ ಪೊತ್ತು 
ಅಂಗಳದಿ ತುಂಬ
ಮೆರೆಯುತಿವೆ ಮಾಮರಗಳು
ಸುತ್ತಲೂ ಮುತ್ತಲೂ ಪಸರಿಹನು 
ಮರುತನು ಗಂಧವನು 
ಮುತ್ತಿಹ ಕೋಗಿಲೆಗಳ
ಗಾನ ಮೇಳ! 
ಕುಹೂ ಕುಹೂ... ಕುಕ್ ಕುಕ್... ಕಿಕ್ ಕಿಕ್...
ನನ್ನಂತರಂಗವ ಮೀಟಿದವು
ಹೊಮ್ಮಿದವು ಸಪ್ತಸ್ವರಗಳು!
ಒಲವೇ, ಹಾಡುವೆ ನಾನೀ
ಭಾವ ಗಾನ 
ಕೇವಲ ನಿನಗಾಗಿ
ಒಪ್ಪಿಸಿಕೊಳ್ಳು ನನ್ನನ್ನು ನನಗಾಗಿ!
ಈ ಮುಸ್ಸಂಜೆಯಲೊಂದು...


|| ಮಾಮರದ ಮೇಲೊಂದು ಕೋಗಿಲೆ ||

|| ನದಿತೀರದ ಕಲ್ಲ ಮೇಲೊಂದು ಕೊಳಲು ||

|| ಮಳೆಬಿಲ್ಲ ಮೇಲೊಂದು ನಲ್ಲನ ಬಿಂಬ ||

|| ನಲ್ಲೆಯ ನಾಸಿಕದ  ಮೇಲೊಂದು ನಕ್ಷತ್ರ ||

|| ಕಡುನೀಲಿ ನಭದ ಮೇಲೊಂದು ಬೆಳ್ಳಿ ಬಟ್ಟಲು ||

|| ಮನದಂಗಳಲೊಂದು ರಾಧಾ ಕೃಷ್ಣರ ರಾಸಕ್ರೀಡೆ ||

|| ನಲ್ಲಿರುಳಿನಂದು ಮಧುರ ರಸ ಕಾವ್ಯ ||

25 February, 2013

ಚೈತ್ರ ಮಾಸದ ಮುಸ್ಸಂಜೆ!


...
ವಸಂತನ ಆಗಮನದ ಸಂಭ್ರಮವೆಲ್ಲೆಡೆ
ಹೊಸ ಚಿಗುರು ಸುತ್ತಮುತ್ತ
ಹಕ್ಕಿಗಳ ಚಿಲಿಪಿಲಿ ಗಾನ
ಹೊಸ ಲಹರಿ ಎದೆಯೊಳಗೆ
ಪೂರ್ಣ ಚಂದಮನ ನೋಟ
ಕಡು ನೀಲಿ ಆಗಸದಲಿ 
ತಂಪೆರೆಯಿತು ಆರ್ದ್ರಮನಕೆ
ಹೊಸ ಪಲ್ಲವಿ ಹಾಡಿತು
ನಲ್ಲೆಯ ಮನ ಈ 
ಮುಸ್ಸಂಜೆಯಲಿ!

23 February, 2013

22 February, 2013

ಮುಸ್ಸಂಜೆಯ ಅನುಭೂತಿ!
ಸ್ಫೂರ್ತಿ ಪಡೆಯಲೆಂದು ನೆಟ್ಟೆ ದೃಷ್ಟಿ ಬಾನಿನತ್ತ...

ಮಿಣುಕು ತಾರೆಯರ ನಡುವೆ ಕಾಣಿಸಿತು ಅವನ ಬಿಂಬ...

ನವಿರಾದ ಕಂಪನ ನನ್ನೊಳಗೆ... 

ಮನ ಬಿಚ್ಚಿ ನಾ ಹಾಡಿದೆ...

ಮಾಮರದಿ ಕುಹೂ ಕುಹೂ ಗಾನವೂ ಮಾರ್ದನಿಸಿತು...

ಅಪೂರ್ವ ಅನುಭೂತಿಯನಿತ್ತು ಮುದವಿತ್ತ  ಮುಸ್ಸಂಜೆ!

21 February, 2013

Yellow Hue! ಹಳದಿ ರಂಗು!


ಛಾಯಾ ಚಿತ್ರಗಳಲ್ಲಿ ಪ್ರಯೋಗಗಳು! Experiments in photography!

ಪ್ರಯೋಗ- ಬೇರೆ ಬೇರೆ ಬೆಳಕಿಗೆ ಒಡ್ಡಿ ತೆಗೆದ ಛಾಯಾ ಚಿತ್ರಗಳು!
exposure experiments!

18 February, 2013

ಕೊಡಿಯಾಲ್ ತೇರು!    

            "ಕೊಡಿಯಾಲ್ ತೇರು"- ಬಹುಶಃ ಎಲ್ಲಾ ಕೊಂಕಣಿಗರು ಒಕ್ಕೊರಳಿನಲ್ಲಿ... ವಯೋಬೇಧವಿಲ್ಲದೆ ಒಪ್ಪುವ ಮೆಚ್ಚುವ ಉತ್ಸವ! ಪ್ರತೀವರ್ಷವೂ ಮತ್ತೆ ಹೊಸ ರೂಪದಲ್ಲಿ ಬಂದು ೬ ದಿನ ಎಲ್ಲಾ ಕೊಂಕಣಿಗರನ್ನು ಒಂದೇ ಛತ್ರದಡಿಯಲ್ಲಿ ತಂದು ನಿಲ್ಲಿಸುವ ಅಭೂತಪೂರ್ವ ಅತ್ಯಂತ ಸಂಭ್ರಮದ ಹಬ್ಬ! 
     ಬಂದರು ಪ್ರದೇಶವಾದ ಮಂಗಳೂರಿನ ಹಿಂದೆ ಅನೇಕ ಐತಿಹಾಸಿಕ ಕತೆಗಳಿವೆ. ಮೂಲತಃ ತುಳುನಾಡಾದ ಇದು ಕಾಶ್ಮೀರಿ ಮೂಲವಾದ ಸಾರಸ್ವತ ಬ್ರಾಹ್ಮಣರಿಗೆ ಆಶ್ರಯನಿತ್ತು ಸಲಹಿದೆ. ಬಂಗಾಲದ ಗೌಡದಿಂದ ಗೋವಕ್ಕೆ ಬಂದಿಳಿದ ಈ ಬ್ರಾಹ್ಮಣರನ್ನು ಗೌಡ ಸಾರಸ್ವತರೆಂದು ಕರೆಯುತ್ತಾರೆ. ಕರಾವಳಿಯ ರಾಜರುಗಳಲ್ಲಿ ಅಶ್ರಯ ಪಡೆದು ಅವರ ಪ್ರೀತಿ ವಿಶ್ವಾಸ ಗೆದ್ದು ಇಲ್ಲೇ ತಮ್ಮ ನೆಲೆಯನ್ನು ಕಂಡು ಕೊಂಡರು ಈ  ಸರಸ್ವತಿಯ ಮೂಲ ನಿವಾಸಿಗಳು. ಮಾತಿನಲ್ಲಿ, ವ್ಯಾಪಾರದಲ್ಲಿ ಚಾಣಕ್ಯನನ್ನೇ ಮೀರಿಸುವ ನಿಪುಣರು ಈ ಕೊಂಕಣಿಗರು. ಹೋದ ಕಡೆಯಲ್ಲೆಲ್ಲಾ ಬೆರೆತು ಹೋಗುವ ಗುಣವುಳ್ಳವರು. ಇವರು ತುಳುವರ ಜತೆ ತುಳು, ಬ್ಯಾರಿಗಳ ಜತೆ ಬ್ಯಾರಿ, ಮಲೆಯಾಳಿಗಳ ಜತೆ ಮಲೆಯಾಳಿ, ಕ್ರಿಶ್ಚಿಯನರ ಜತೆ ಕ್ರಿಶ್ಚಿಯನ್ ಕೊಂಕಣಿ..ಹೀಗೆ ಎಲ್ಲಾ ಭಾಷೆ ಬಲ್ಲ ಜಾಣರು. ಜನರ ನಾಡಿ ಮಿಡಿತವನ್ನು ಬಲು ಬೇಗ ಕಂಡು ಹಿಡಿಯಬಲ್ಲರು. ಮಂಜುರಾನ್ ಎಂಬುದು ಬಹುಶಃ ಮಂಗಳೂರಿನ ಮೂಲ ಹೆಸರು. ತುಳುವರಿಂದ ಕುಡ್ಲ ಎಂದು ಇಂದಿಗೂ ಕರೆಯಲ್ಪಡುವ ಮಂಗಳೂರು ಕೊಂಕಣಿಗರಿಂದ ಕೊಡಿಯಾಲ್ ಎಂದು ಗುರುತಿಸಲ್ಪಟ್ಟಿದೆ. 
       
             ಸುಮಾರು ನಾಲ್ಕು ಶತಮಾನಗಳ ಇತಿಹಾಸವಿರುವ ಈ ವೀರವೆಂಕಟರಮಣನ ದೇವಳವು ಕಾಶೀ ಮಠಾಧೀಶರಿಂದ  ನಗರ ಮಧ್ಯ ಭಾಗದ ರಥ ಬೀದಿಯಲ್ಲಿ ಸ್ಥಾಪಿಸಲ್ಪಟ್ಟಿತು. ಕಳೆದ ವರುಷ ಜೀರ್ಣೋದ್ಧಾರಗೊಂಡು ನವೀಕೃತಗೊಂಡ ದೇವಳವು  ಕಲಾವೈಭದಿಂದ ನಮ್ಮ ಇತಿಹಾಸದ ರಾಜರುಗಳ ಶಿಲ್ಪ ಕಲೆಯ ವೈಭವವನ್ನು ಮರುಕಳಿಸುವಂತೆ ಮಾಡಿದೆ.  ಇಲ್ಲೊಂದು ಮಾತನ್ನು ನಾನು ಹೇಳಲೇ ಬೇಕು... ಹಾಗೆ ನೋಡಿದರೆ ಈ ಜೀರ್ಣೋದ್ಧಾರ, ಬ್ರಹ್ಮಕಲಶ ಮೊದಲಾದವುಗಳ ಕಟ್ಟ ವಿರೋಧಿ ನಾನು. ಬಂಗಾರದ, ವಜ್ರದ ಕೀರೀಟ, ಪಲ್ಲಕ್ಕಿ ಇದೆಲ್ಲಾ ಜಗತ್ತಿನ ಒಡೆಯನಿಗೆ ಅಗತ್ಯವಿದೆಯೇ? ಆ ಹಣವನ್ನು ಅಗತ್ಯವುಳ್ಳವರ ಮೇಲೆ ವಿನಿಯೋಗಿಸಬಹುದಲ್ಲವೇ!  ಹೌದು, ಆದರೆ ಈ ದೇವಳಗಳು ಜನರಿಗೆ ಒಂದು ಪವಿತ್ರ ಸ್ಥಾನ! ಜತೆಗೆ ಅವರ ಕಷ್ಟ ಸುಖವನ್ನು ವಿನಿಮಯಮಾಡಿಕೊಳ್ಳುವ ಜಗವೂ ಹೌದು. ಹಲವು ಜನರು ತಮ್ಮ ಹೃದಯ ಮಂದಿರದಲ್ಲಿ ನೆಲೆಸಿರುವ ಅವನನ್ನು ಕಂಡುಕೊಂಡಿಲ್ಲ. ಅಂತವರಿಗೆ ಇವು ಶಾಂತಿ ಪಡೆಯುವ ಸ್ಥಾನವು. ಜನರ ಈ ಭಾವನೆಗಳನ್ನು ಕಾಯ್ದುಕೊಂಡು ಬರುವಂತಹ ಮಹತ್ತರ ಜವಾಬ್ದಾರಿ ದೇವಳದ ಪೂಜಾರಿಯವರದು. ಎಲ್ಲಿ ಜಾತಿ ಬೇಧವಿಲ್ಲದೆ, ಸಮ ಭಾವದಿಂದ ಪೂಜೆಗೊಳ್ಳುವನೋ ಅದನ್ನು ಖಂಡಿತ ಆ ಜಗದೋದ್ಧಾರನು ತನ್ನ ವೈಕುಂಠವನ್ನಾಗಿ ಪರಿವರ್ತಿಸುತ್ತಾನೆ. ಅಂತೆಯೇ ಈ ವೆಂಕರಮಣ ದೇವಳದ ಕಾರ್ಯಗಳನ್ನೆಲ್ಲಾ ನಾನು ಗಮನಿಸುತ್ತಲೇ ಬಂದಿದ್ದೇನೆ. ಟ್ರಸ್ಟ್ ಮೂಲಕ ಬಡ ವಿದ್ಯಾರ್ಥಿಗಳಿಗೆ ಪುಸ್ತಕ, ಸ್ಕಾಲರ್ ಶಿಪ್, ವೈದ್ಯಕೀಯ ಸೌಲಭ್ಯ ಮೊದಲಾದವುಗಳನ್ನು ನೀಡುತ್ತಲೇ ಬಂದಿದೆ. ಅಲ್ಲದೆ ದೇವಾಲಯದ ಜೀರ್ಣೋದ್ಧಾರ ಮಾಡುವ ಸಮಯವೂ ಬಂದಿತ್ತು. ಭಕ್ತಗಣವೂ ತಮ್ಮ ತನುಮನಧನಗಳನ್ನು ಯಾವುದೇ ಒತ್ತಾಯವಿಲ್ಲದೆ ಅರ್ಪಿಸಲು ಮುಂದೆ ಬಂದಿತ್ತು. ದೇಶ ವಿದೇಶದಲ್ಲಿ ನೆಲೆಸಿದ್ದ ಕೊಂಕಣಿಗರು ಮುಂದೆ ಬಂದು ಒಂದೇ ವರುಷದಲ್ಲಿ ಈ ಕೈಂಕರ್ಯವನ್ನು ಪೂರ್ತಿಗೊಳಿಸಿದರು. ಕರ ಸೇವೆಯ ಮೂಲಕ ಹೆಂಗಸರು, ಗಂಡರು, ಅಬಾಲವೃದ್ಧಾರಾಗಿ ಎಲ್ಲರೂ ಗೋವಿಂದನ ನಿಲಯವನ್ನು ಸಿದ್ಧಗೊಳಿಸುವ ನಿಟ್ಟಿನಲ್ಲಿ ತಮ್ಮ ತಮ್ಮ ಸಮಯ ಅನುಕೂಲಕ್ಕನುಸಾರವಾಗಿ ದುಡಿದರು.. ಸಂಜೆ ಆಫೀಸಿನಿಂದ ಬಂದವರು ನಡೆಯುವುದು ಕಾರ್ ಸ್ಟ್ರೀಟ್ ನತ್ತ.. ಮಣ್ಣು, ಕಲ್ಲು ಹೊರುವುದು, ಮರದ ಹಲಗೆಯನ್ನು ಕೆಳಗಿಳಿಸುವುದು, ಹೀಗೆ ಕಾರ್ಮಿಕರ ಜತೆ ಕೈಗೂಡಿಸಿದರು. ಅಂತೂ ಹೋದ ವರುಷ ತೇರಿನ ಮೊದಲೇ ದೇವಳವು ಭೂವೈಕುಂಠವಾಗಿ ಪರಿವರ್ತಿತಗೊಂಡಿತು.
        
             ಈ ನಲ್ವತ್ತನಾಲ್ಕು ವರುಷವೂ ನಾನು ತಪ್ಪದೆ ಪಾಲ್ಗೊಂಡ ಉತ್ಸವವೆಂದರೆ ಅದು ಕೇವಲ ಬ್ರಹ್ಮರಥೋತ್ಸವ! ವೆಂಕರಮಣನ ಐದು ದಿನದ ವಿವಾಹ ಮಹೋತ್ಸಕ್ಕೆ ಪಾಲ್ಗೊಳ್ಳಲು ದೇವತೆಗಳಿಗೆ ನಿಮಂತ್ರಣ ಕಳುಹಿಸಲು ಧ್ವಜವೇರಿಸುವುದು ಏರಿಸುವುದು.. ಅಂದರೆ ಕೋಡಿ ಏರಿಸುವುದರ ಮೂಲಕ ಮೊದಲನೆಯ ದಿನದ ಉತ್ಸವ ಪ್ರಾರಂಭಗೊಳ್ಳುವುದು. ನಿತ್ಯವೂ ಯಜ್ಞ, ಹೋಮ ಹವನ, ಹಗಲೋತ್ಸವ, ಗೋಪುರೋತ್ಸವ, ಪಲ್ಲಕ್ಕಿ ಉತ್ಸವ..ಹೀಗೆ ಅನೇಕ ಉತ್ಸವಗಳು ಒಂದರ ಹಿಂದೆ ಜರಗುತ್ತಲೇ ಇರುವುವು. ಬೆಳಿಗ್ಗೆ ೯ಗಂಟೆಗೆ ಪೆಜ್ಜೆ ಜವಣ ಅಂದರೆ ಗಂಜಿಯೂಟ ಇರುವುದು. ಬಗೆ ಬಗೆಯ ಪಕ್ವಾನಗಳನ್ನುಂಡ ಜನರು ತೃಪ್ತರಾಗಿ ಆಫೀಸುಗಳಿಗೆ ನಡೆಯುವರು. ಮತ್ತೆ ಸಂಜೆ ೫ಗಂಟೆಯಿಂದ ೯ ಗಂಟೆಯವಗೆ ಭೂರಿ ಭೋಜನ..ಹೆಚ್ಚು ಕಡಿಮೆ ೨೫,೦೦೦ದಷ್ಟು ಜನರು ಉಣ್ಣುವರು. ಕೇಸರಿ ಬಣ್ಣದ ಧೋತಿಯನ್ನುಟ್ಟ ಸ್ವಯಂಸೇವಕರು ಶಿಸ್ತಿನಿಂದ ಬಡಿಸುವುದರಿಂದ ಹಿಡಿದು ಉಂಡ ಎಲೆಗಳನ್ನು ತೆಗೆದು ಮತ್ತೊಂದು ಪಂಕ್ತಿಗಾಗಿ ಶುದ್ಧ ಪಡಿಸುವ ಕೆಲಸವನ್ನು ನೋಡುವುದೇ ಚಂದ! ಮನೆಯಲ್ಲಿ ಉಂಡ ತಟ್ಟೆಯನ್ನು ಮೋರಿಗೆ ಹಾಕಲೂ ಹಿಂಜರಿಯುವ ಕೊಂಕ್ಣಿ ಗಂಡಸರು ಇಲ್ಲಿ ಮೈಬಗ್ಗಿಸಿ ಕೆಲಸ ಮಾಡುವುದನ್ನು ನೋಡಿ ನಾವೆಲ್ಲಾ ಮೂಗಿನ ಮೇಲೆ ಬೆರಳಿಡುತ್ತೇವೆಯಂದರೆ ಇದು ಉತ್ಪ್ರೇಕ್ಷೆಯಲ್ಲ.
   
            ಸಪ್ತಮಿಯಂದು ಮುಸ್ಸಂಜೆ ಸೂರ್ಯನೂ ಚಂದ್ರನೂ ಬಾನಿನಲ್ಲಿ ನಮ್ಮ ವೀರವೆಂಕಟೇಶನು ತನ್ನ ಸತಿಯರ ಜತೆಗೂಡಿ ತೇರನೇರುವ ದೃಶ್ಯವನ್ನು ನೋಡಿ ಧನ್ಯನಾಗುತ್ತಾರೆ. ಇಡೀ ರಥ ಬೀದಿಯು ಜನರಿಂದ ಆವೃತವಾಗುತ್ತದೆ. ಅಲ್ಲಿ ಕೇವಲ ಗೋವಿಂದ ನಾಮ ಸ್ಮರಣೆ ಮಾತ್ರ ಗಾಳಿಯಲ್ಲಿ ಮಾರ್ದನಿಗೊಳ್ಳುತ್ತದೆ. ಸಾಲಂಕೃತವಾದ ಪಲ್ಲಕ್ಕಿಯಲ್ಲಿ ವೈಕುಂಠದೊಡೆಯನು ತನ್ನ ಪತ್ನಿಯರ ಸಮೇತವಾಗಿ ಭಕ್ತಗಣಗಳಿಂದ ತೂಗಿಸಿಕೊಳ್ಳುತ್ತಾ ರಥಕ್ಕೆ ಐದು ಸುತ್ತನ್ನು ತೆಗೆದು ರಥವನ್ನೇರುತ್ತಾನೆ. ಇಲ್ಲಿ ಮತ್ತೊಂದು ವಿಶೇಷವೇನೆಂದರೆ ಎರಡು ಮೂರ್ತಿಗಳು ಕೇವಲ ಈ ಸಮಯದಲ್ಲಿ ದೇವಳದಿಂದ ಹೊರಬರುತ್ತವೆ. ಮತ್ತೆ ಹಿಂದಿರುಗುವುದು ಮರುದಿನ ಓಕುಳಿಯಾಟದ ನಂತರವೇ! ಹೀಗೆ ಈ ೬ ದಿನಗಳು ಅವರವರ ಮನೋಗುಣಕ್ಕನುಸಾರವಾಗಿ ಆನಂದ ಕೊಡುತ್ತದೆ.

16 February, 2013

ಸಂಧ್ಯೆಯ ಸ್ವಾಗತ ನಿಶೆಗೆ!


ದಿನದ ಪಾಳಿ ಮುಗಿಸಿ
ರಂಗಮಂಟಪದ ಪರದೆಯ ಜಾರಿಸಿ
ಅತ್ತ ರವಿ ಸರಿದನು!
ಇತ್ತ ಝಗಮಗಿಸುವ ಬೆಳಕಿನಲ್ಲಿ
ಹೊಸ ಆಟ ತೋರಲು
ತೆರೆ ಮೇಲೇರಿಸಲು ಕಾದಿರುವ
ನಿಶೆಗೆ ಸ್ವಾಗತ ಕೋರುತಿಹಳು
ಸಂಧ್ಯೆ!

14 February, 2013

ಪುಟ್ಟ ಆದಿತ್ಯನ ಸಣ್ಣಪುಟ್ಟ ಪ್ರಸಂಗಗಳು!"ಶೀಲಕ್ಕ... "
ನಾನು ತಲೆ ಬಗ್ಗಿಸಿ ಆದಿತ್ಯನ ಚಿತ್ರ ತಿದ್ದುತ್ತಿದ್ದೆ. ಇತ್ತೀಚಿಗಷ್ಟೇ ಐದು ವರ್ಷ ತುಂಬಿದ ಆದಿತ್ಯ ಪಾಣೆಮಂಗಳೂರಿನಿಂದ ನನ್ನ ಹತ್ತಿರ ಡ್ರಾಯಿಂಗ್ ಕಲಿಯಲು ಬರುತ್ತಿದ್ದಾನೆ.
"ಮತ್ತೆ ನಿನ್ನ ಕೈ ಬೆರಳು ಯಾಕೆ ನಡುಗುತಿದೆ?"
"ಅದು ನಾನು ಮುದುಕಿ ಆಗಿದೆನಲ್ಲವ ಅದಕ್ಕೆ... " ನಾನು ತಲೆಯೆತ್ತದೆ ಅವನಿಗೆ ಉತ್ತರಿಸಿದೆ.
ಸ್ವಲ್ಪ ಹೊತ್ತು ಮೌನವಾಗಿ ಕುಳಿತ್ತಿದ್ದ.
"ಅಲ್ಲ, ನಿನ್ನ ತಲೆ ಕೂದಲು ಕಪ್ಪು... ಸ್ವಲ್ಪ ಸ್ವಲ್ಪ ಬ್ರೌನ್ ಸಹ ಇದೆ! "
ನನಗೆ ನಗೆ ತಡೆಯಲಾಗಲಿಲ್ಲ!

                                                *************
 ಆ ದಿನ ಶನಿವಾರ ನಾನು ಎಲ್ಲೋ ಹೊರಗೆ ಹೋಗಿದ್ದೆ. ಬಟ್ಟೆ ಬದಲಾಯಿಸದೇ ನನ್ನ ಚಿತ್ರ ತರಗತಿಗೆ ಬಂದೆ. ಆದಿತ್ಯ ಒಂದೇ ಸಮನೆ ನನ್ನನ್ನೇ ನೋಡುತ್ತಿದ್ದ...
"ಏಕೋ ನನ್ನನ್ನು ಹಾಗೆ ನೋಡುತ್ತಿದ್ದಿಯಾ?"
"ಶೀಲಕ್ಕ, ನೀನು ಇವತ್ತು ತುಂಬಾ ಚಂದ ಕಾಣ್ತಿದ್ದಿಯಾ!"
"ಯಾಕೋ ಇವತ್ತು ಅದೇನು ನಾನು ನಿನಗೆ ಅಂತಹ ಚಂದ ಕಾಣುವುದು?"
"ನೀನು ಇವತ್ತು ಚಂದ ಡ್ರೆಸ್ ಹಾಕಿದ್ದಿ..ಅದಕ್ಕೆ!"

                                               *************

ಆ ದಿನ ಸಂಪೂರ್ಣ ಎಂದಿನಂತೆ ಡಬ ಡಬ ಶಬ್ದ ಮಾಡದೇ, ನಿಧಾನವಾಗಿ ಬಾಗಿಲು ತೆಗೆದು ಒಳಬಂದಳು. ಮುಖ ನೋಡಿದರೆ ಸಪ್ಪೆ ಇತ್ತು. ಆದರೆ ಅವಳ ಸ್ನೇಹಿತರ್ಯಾರೂ ಅವಳನ್ನು ಏನೂ ಕೇಳಲಿಲ್ಲ. ಎಲ್ಲರೂ ಎಂದಿನಂತೆ ತಮಾಷೆಯಾಗಿ ಅವಳ ಬಳಿ ಮಾತಾಡತೊಡಗಿದರು. ಆದರೆ ಆದಿತ್ಯ,
"ಅಕ್ಕಾ, ಸಂಪೂರ್ಣಕ್ಕಾ... "
ಎಲ್ಲರೂ ಅದೇನು ಇವನು ಅವಳನ್ನು ಈ ರೀತಿ ಕರೆಯುವುದು ಎಂದು ಅವನತ್ತ ನೋಡಿದರು.
"ಅದೇನು ನಿನ್ನ ಮುಖ ಬೇರೆ ರೀತಿಯಿದೆ?"
ಅವನ ಪ್ರಶ್ನೆ ಕೇಳಿ ನಾನು ದಂಗಾದೆ. ಅಲ್ಲ, ಬೇರೆ ಯಾರೂ ಗಮನಿಸದನ್ನು ಈ ಪುಟ್ಟನು ನೋಡಿದ್ದಾನೆ.
"ಏನು ಸಂಪೂರ್ಣ, ಏನಾಯ್ತು?" ನಾನೂ ಕೇಳಿದೆ.
"ಮಾಯೆ, ನಿನ್ನೆ ನನ್ನ ಅಜ್ಜ ದೇವರ ಹತ್ತಿರ ಹೋದ್ರು."
ಕಳೆದ ವರ್ಷ ಅವಳ ಮನೆಯಲ್ಲಿ ನಡೆದ ಸಮಾರಂಭದಲ್ಲಿ ನಾನು ಅವರನ್ನು ಭೇಟಿಯಾಗಿದ್ದೆ.. ಡಯಬಿಟಿಸ್ ನಿಂದಾಗಿ ಅವರ ಕಾಲನ್ನು ಕತ್ತರಿಸಲಾಗಿತ್ತು. 
       
ಕೆಲ ಮಕ್ಕಳು ಎಷ್ಟು ಚುರುಕು ಅಲ್ವಾ!

ಈ ಮುಸ್ಸಂಜೆಯಲಿ ಮೂಡಿದ ವ್ಯಾಲಂಟೈನ್ ಗೀತೆ!

ನಕ್ಷತ್ರಗಳ ಪಡೆಯ ನಡುವೆ ಹೊಳೆಯುವ ಅರ್ಧಚಂದಮನೇ,
ಒಯ್ಯೋ ನನ್ನೀ ಕಾವ್ಯವ ಅತ್ತ ಅವಳೆಡೆ..
ಕಾದಿರುವಳು ಆಕೆ ದಿನವಿಡೀ...
ಅದೇಕೋ ಇಂದೇ ಮಲಗಿದೆ ಅಡ್ಡ ಜಂಗಮವಾಣಿ...
ಒಂದಿಷ್ಟು ಪುಣ್ಯ ಕಟ್ಟಿಕೋ...
ನನ್ನೆದೆಯ ಭಾವವೇ ಹರಿದಿದೆ... 
ಒಲುಮೆಯ ಕಾವ್ಯದ ಓಲೆಯಾಗಿ...
ಕಣ್ಣಾಡಿಸಬೇಡ... ನಗಬೇಡ...
ನಾ ಕಾಳಿದಾಸನೂ ಅಲ್ಲ,
ನಾ ಕೆ.ಎಸ್ ನರಸಿಂಹ ಸ್ವಾಮಿಯೂ ಅಲ್ಲ...
ನಾ ಕೇವಲ ಹುಚ್ಚ...
ನನ್ನೊಲುಮೆಯ ದಾಸ...
ಅದರರಿವಿದೆ ಅವಳಿಗೆ..
ನನಗಷ್ಟು ಸಾಕು...
ಇನ್ನೇನು ಬೇಕು 
ವಿರಹಿ ಪ್ರೇಮಿಗೆ!
ಈ ಮುಸ್ಸಂಜೆಯಲಿ ಮೂಡಿದ ವ್ಯಾಲಂಟೈನ್ ಗೀತೆ!

12 February, 2013

ಕೃತಜ್ಞತೆ ಅರ್ಪಣೆ ನನ್ನೊಲವಿಗೆ!ಕೃತಜ್ಞತೆ!
________

ಒಲವೇ,
ನನ್ನೊಳು ನೀ ಹಚ್ಚಿದೆ  
ನಿತ್ಯವೂ ಉಜ್ವಲವಾಗಿ ಬೆಳಗುವ ಹಣತೆ
ವ್ಯಾಪಿಸಿತಾ ಬೆಳಕು ನನ್ನ ಹೊರಒಳಗನು
ಸುಟ್ಟು ಕರಗಿಸಿತು ಹಳೆಯ ಆಸೆ ಆಕಾಂಕ್ಷೆಗಳನು
ಹೊಸ ಬದುಕಿಗೆ ನಾಂದಿ ಹಾಡಿತು
ಹೊಸ ಹಾದಿಯ ತೋರಿಸಿತು
ನಾನತ್ತಲೇ ನಡೆಯುವೆ
ಧನ್ಯತೆಯಿಂದಲೆ!

11 February, 2013

ಮುಸ್ಸಂಜೆಯಲಿ ಮೂಡಿದ ನಲ್ಲೆಯ ಕಾವ್ಯ!ಹಗಲೆಲ್ಲಾ ಅವನ ಸಂದೇಶಗಳ ನಿರೀಕ್ಷೆಯಲ್ಲೇಕಳೆಯಿತು...
ಹ್ಞೂಂ, ಸುಳಿವೇ ಇಲ್ಲ...
ಜತೆ ಕೊಟ್ಟ ಭಾನು ಬೆನ್ನು ಹಾಕಿ ನಡೆದೇ ಬಿಟ್ಟ...
ಸುಕುಮಾರಿ, ನಾನಿರುವಿನೇ ನಿನ್ನ ಜತೆ...
ಅನ್ನುತಲೇ ತೇರನೇರಿ ಕುಳಿತು ನಲ್ಲೆಯ
ಮಾತುಗಳಿಗೆ ಕಿವಿಯಾದ ಶಶಿ...
ಮುಸ್ಸಂಜೆಯಲಿ ಹೊಮ್ಮಿತು ವಿರಹ ಮನದ ಕಾವ್ಯ!

09 February, 2013

Where the mind is without fear...- where the mind is without fear and the head is held high
where knowledge is free
where the world has not been broken up into
fragments by narrow domestic walls
where words come out from the depth of truth
where tireless striving stretches its arm towards perfection
where the clear stream of the reason has not lost its
way into the dreary desert sand of the dead habit
where the mind is led forward by thee into ever 
widening thought and action
into that heaven of freedom, my father, let my Country awake!
                                                    -Rabindranath Tagoreಎಲ್ಲಿ ಮನಕಳುಕಿರದೋ ಎಲ್ಲಿ ತಲೆ ಬಾಗಿರದೋ
ಎಲ್ಲಿ ತಿಳಿವಿಗೆ ತೊಡಕು ತೋರದಿಹುದಲ್ಲಿ
ಎಲ್ಲಿ ಮನೆಯೊಕ್ಕಟ್ಟು ಸಂಸಾರ ನೆಲೆಗಟ್ಟು
ಧೂಳೊಡೆಯದಿಹುದೊ ತಾನಾನಾಡಿನಲ್ಲಿ 
ಎಲ್ಲಿ ಸತ್ಯದಗಾಧ ನೆಲೆಯಿಂದ ಸವಿಮಾತು
ಸಲ್ಲಲಿತ ನಡೆಯಿಂದ ಮುಂಬರಿವುದಲ್ಲಿ
ಎಲ್ಲಿ ದಣಿವಿರದ ಸಾಧನೆಯು ಸಫಲತೆಯ ಕಡೆಗೆ
ತೋಳ ನೀಡಿಹುದೊ ತಾನಾನಾಡಿನಲ್ಲಿ
ಎಲ್ಲಿ ಸುವಿಚಾರ ನಿರ್ಮಲ ಜಲದೊಸರು ಹರಿದು
ಕಾಳು ರೂಢಿಯ ಮರಳೊಳಿಂಗಿ ಕೆಡದಲ್ಲಿ
ಎಲ್ಲಿ ನೀನೆಮ್ಮ ಚಿಂತನವನನುದ್ಯಮವ ಸುವಿ
ಶಾಲತೆಯ ಪೂರ್ಣತೆಗೆ ಮುನ್ನಡೆಸುವಲ್ಲಿ
ಅಲ್ಲಿಯಾ ಬಂಧನರಹಿತ ಸುಖದ ಸ್ವರ್ಗದಲ್ಲಿ
ಪಾಲಿಸೈ ಪಿತ ನಮ್ಮ ನಾಡೆಚ್ಚರಿರಲಿ.
                        -ಎಮ್. ಎನ್. ಕಾಮತ್

   ಕೆನರಾ ಶಾಲೆಯ ವಿದ್ಯಾರ್ಥಿನಿಯಾಗಿದ್ದಾಗ ೧೦ ವರ್ಷವೂ ನಿತ್ಯವೂ ಹಾಡಿದ ಗೀತೆಯಿದು. ಇಂದಿಗೂ ಆಗಾಗ ಹಾಡುತ್ತಲೇ ಇರುವ ಅತ್ಯಂತ ಪ್ರಿಯ ಹಾಡು. 

ಸುಂದರ ಮುಸ್ಸಂಜೆ!


-
ತವರು ಮನೆಯಿಂದ ಕೇಳಿ ಬಂದ ತಾಳದ ನಾದ
ನೆರೆಮನೆಯಿಂದ ತೇಲಿ ಬಂದ ಅಗರುಬತ್ತಿಯ ಗಂಧ
ಮೇಲಿನರಮನೆಯಿಂದ ಚೆಲ್ಲುವ ತಿಂಗಳ ಬೆಳಕು
ಅನುರಾಗ ಹೊಮ್ಮಿಸುತ್ತಿರುವ ಬಾನ ತಾರೆಯರು
ಆಹಾ! ಎಂತಹ ಸೊಬಗಿನ ಮುಸ್ಸಂಜೆಯಿದು!

06 February, 2013

ಕೇಳಿಸಲಾರೆಯಾ ಸವಿನುಡಿಯ!
ಒಂಟಿಯಾಗಿಸಿ ನನ್ನ
ನೀ ನಡೆದೆ 
ಎತ್ತಲೋ ಏನೋ
ಕಾದು ಕಾದು 
ನೋವು
ಹೆಪ್ಪುಗಟ್ಟಿದೆ ಕಣ್ಣಂಚಿನಲಿ
ಈಗಲೋ ಆಗಲೋ
ಧುಮುಕಲು ಕಾಯುತಿದೆ
ಒಲವೇ,
ಇನ್ನೂ ತಡವೇಕೆ
ಒಮ್ಮೆ ಕೇಳಿಸಲಾರೆಯ
ನಿನ್ನ ಸವಿನುಡಿಯನು!

ತಾರೆಯರ ಜೋಗುಳ ಹಾಡು!


ಕಣ್ಣಂಚಿನಲ್ಲಿ ಮೂಡಿರುವ ಹನಿಯ ಒರೆಸಿ
ಮಡಿಲಲಿ ಮಲಗಿಸಿ ಮುದ್ದಿಸಿ ಜೋಗುಳ
ಹಾಡುವ ತಾರೆಯರ ದಂಡು ಸುತ್ತ 
ಮುತ್ತಲು ಮನ ನಿಶೆಯ ವಶವಾಯ್ತು!

ಪ್ರಿಯ ಪ್ರಾರ್ಥನೆ!


ಎಲ್ಲಿ ಮನಕಳುಕಿರದೋ ಎಲ್ಲಿ ತಲೆ ಬಾಗಿರದೋ
ಎಲ್ಲಿ ತಿಳಿವಿಗೆ ತೊಡಕು ತೋರದಿಹುದಲ್ಲಿ
ಎಲ್ಲಿ ಮನೆಯೊಕ್ಕಟ್ಟು ಸಂಸಾರ ನೆಲೆಗಟ್ಟು
ಧೂಳೊಡೆಯದಿಹುದೊ ತಾನಾನಾಡಿನಲ್ಲಿ 
ಎಲ್ಲಿ ಸತ್ಯದಗಾಧ ನೆಲೆಯಿಂದ ಸವಿಮಾತು
ಸಲ್ಲಲಿತ ನಡೆಯಿಂದ ಮುಂಬರಿವುದಲ್ಲಿ
ಎಲ್ಲಿ ದಣಿವಿರದ ಸಾಧನೆಯು ಸಫಲತೆಯ ಕಡೆಗೆ
ತೋಳ ನೀಡಿಹುದೊ ತಾನಾನಾಡಿನಲ್ಲಿ
ಎಲ್ಲಿ ಸುವಿಚಾರ ನಿರ್ಮಲ ಜಲದೊಸರು ಹರಿದು
ಕಾಳು ರೂಢಿಯ ಮರಳೊಳಿಂಗಿ ಕೆಡದಲ್ಲಿ
ಎಲ್ಲಿ ನೀನೆಮ್ಮ ಚಿಂತನವನನುದ್ಯಮವ ಸುವಿ
ಶಾಲತೆಯ ಪೂರ್ಣತೆಗೆ ಮುನ್ನಡೆಸುವಲ್ಲಿ
ಅಲ್ಲಿಯಾ ಬಂಧನರಹಿತ ಸುಖದ ಸ್ವರ್ಗದಲ್ಲಿ
ಪಾಲಿಸೈ ಪಿತ ನಮ್ಮ ನಾಡೆಚ್ಚರಿರಲಿ.
-  ರಬೀಂದ್ರನಾಥ ಠಾಗೋರರ "Where the mind is without fear..." ಅನುವಾದ ಎಮ್. ಎನ್. ಕಾಮತ್ ಅವರಿಂದ. ಕೆನರಾ ಶಾಲೆಯ ವಿದ್ಯಾರ್ಥಿನಿಯಾಗಿದ್ದಾಗ ೧೦ ವರ್ಷವೂ ನಿತ್ಯವೂ ಹಾಡಿದ ಗೀತೆಯಿದು. ಇಂದಿಗೂ ಆಗಾಗ ಹಾಡುತ್ತಲೇ ಇರುವ ಅತ್ಯಂತ ಪ್ರಿಯ ಹಾಡು. 

ಕನಿಕರ ತೋರುವ ಮುಸ್ಸಂಜೆ!


ಮನದ ಕೊಳದೊಳು ಇಣುಕಿ 
ತನ್ನ ಬಿಂಬವನಲ್ಲಿ ಚೆಲ್ಲಿ 
ಹೆಪ್ಪುಗಟ್ಟಿದ ಭಾವವ ಕರಗಿಸಿ 
ಖುಷಿ ತರುವ ಶಶಿ!
ಮುಸ್ಸಂಜೆ ಮೂಡಿತೀ ಪರಿಯಲಿ!

ಮುಸ್ಸಂಜೆಯ ಕಾಣಿಕೆ!


...
ಅಲ್ಲೂ ಕತ್ತಲು
ಇಲ್ಲೂ ಕತ್ತಲು
ಅಲ್ಲಿ ಶಶಿಯ ಉದಯ
ಇಲ್ಲಿ ಒಲವಿನ ಉದಯ
ನಮ್ಮ ಬದುಕಿಗೆ 
ಮುಸ್ಸಂಜೆಯ ಕಾಣಿಕೆ!

05 February, 2013

ಸಂಜೆ!


---
ದಿನದ ಧಾವಂತದ ಓಟಕೊಂದು ಅಲ್ಪ ವಿರಾಮವಿತ್ತು
ಈ ಹೊಂಬೆಳಕಿನ ಮುಸ್ಸಂಜೆಯಲ್ಲಿ
ಬಾಲ್ಯದ ಸವಿನೆನಪಿನ ಸಿಹಿ ಮೆಲ್ಲುತ್ತಾ
ಚಾ ಕುಡಿಯುವ ಸಂಜೆ!

04 February, 2013

ಭಾವ ನಾದ..ಕೇಳಿಸುವ ಮುಸ್ಸಂಜೆ!ಬೆಳ್ ಬೆಳದಿಂಗಳು
ಮಿನುಗುವ ಚುಕ್ಕಿ 
ಮಲ್ಲಿಗೆಯ ಕಂಪು
ಸಾಕಲ್ಲವೆ; ಅದೋ
ಕೇಳುತ್ತಿದೆಯೇ ಮುಸ್ಸಂಜೆ,
ನನ್ನೆದೆಯೊಳಗಿನ ಭಾವ
ಗೆಜ್ಜೆಯ ನಾದ!

01 February, 2013

ಸ್ಪರ್ಶ!


ಸ್ಪರ್ಶ!
______

ಅವನ ಬೆಚ್ಚನೆಯ ಸ್ಪರ್ಶ
ಹಸಿರಿಗೆ ಅನುಕರ್ಷ!

ಇವನ ತಣ್ಣಗಿನ ಸ್ಪರ್ಶ
ಭಾವಕೆ ಆಕರ್ಷಕ!

ಅವನಿವನ ಮೀರಿಸುವ  ಕರ್ಷಣ
ನನ ಒಲವಿನ  ದರ್ಶನ!

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...