ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

03 January, 2013

ಕೊರೆತ!


ಹೀಗೆ ಒಂದು ಆಲೋಚನೆ..
______________________

ಸಂಸ್ಕೃತಿ ಎಂದರೇನು! ಮಾನವನು ಭೂಮಿಯಲ್ಲಿ ಕಾಣಿಸಿಕೊಂಡಾಗ ಅವನ್ಯಾವ ಸಂಸ್ಕೃತಿಯನ್ನು ಪಾಲಿಸುತ್ತಿದ್ದನಪ್ಪಾ! ಕ್ರಮೇಣ ಹಿಂದು, ಮುಸ್ಲಿಮಾನ್, ಕ್ರೈಸ್ತ, ಪಾಶ್ಚಿಮಾತ್ಯ, ಪೌರಾತ್ಯ... ಹೀಗೆ ಅನೇಕ ಸಂಸ್ಕೃತಿಗಳು ಹುಟ್ಟಿಕೊಂಡವು. ಎಲ್ಲವೂ ಇಂದಿಗೂ ತಮ್ಮದೇ ಶ್ರೇಷ್ಟ ಸಂಸ್ಕೃತಿ ಎಂದೇ ನಂಬಿಕೊಂಡಿವೆಯಷ್ಟೇ. ಆದರೆ ನಿಧಾನವಾಗಿ ಎಲ್ಲಾ ಸಂಸ್ಕೃತಿಗಳು ಬೆರಕೆಗೊಂಡವು... ಜನರು ತಮ್ಮ ಅನುಕೂಲಕ್ಕೆ ತಕ್ಕಂತೆ ತಮಗೆ ಬೇಕಾದುದನ್ನು ಅಳವಡಿಸಿಕೊಂಡರು... ಅಲ್ಲಲ್ಲಿ ಕ್ಷೀಣವಾಗಿ ಸಂಸ್ಕೃತಿ ಹಾಳಾಗುತ್ತಿದೆ ಗೊಣಗಾಟ ಕೇಳಿಬರುತ್ತಿದ್ದಂತೆಯೇ ಜಾಗತೀಕರಣದಿಂದಾಗಿ ಇಂದಿನ ಯುವಜನಾಂಗ ತಮ್ಮದೇ ಆದ ಹೊಸ ಸಂಸ್ಕೃತಿಯನ್ನು ಹುಟ್ಟು ಹಾಕಿತು.. ಮತ್ತು ಆಚೆಯೂ ಈಚೆಯೂ ಸಲ್ಲದ ನಮ್ಮಂಥವರು ಡೋಲಾಮಾನದ ಮನಸ್ಸಿನಿಂದ ನಮ್ಮ ಮಕ್ಕಳ ಜೊತೆಗೆ ನಿಲ್ಲಬೇಕಾದ ಪರಿಸ್ಥಿಯು ಕಾಣಿಸಿದೆ.

ನಮ್ಮ ಮಕ್ಕಳು ತಪ್ಪು ದಾರಿಯಲ್ಲಿ ನಡೆದರೆ ನಾವು ಖಂಡಿತ ಅವರನ್ನು ತಾಳ್ಮೆಯಿಂದ ತಿದ್ದಿತರಬೇಕು, ಇದು ಪ್ರತಿಯೊಂದು ಹೆತ್ತವರ ಕರ್ತವ್ಯವೂ ಹೌದು.. ಹಾಗಂತ ನಮ್ಮ ಸಂಸ್ಕೃತಿಯಲ್ಲಿ ಹೇಳಿದಂತೆ ನೀನು ಕಾಸಿನಗಲ ಕುಂಕುಮ, ಕೈತುಂಬ ಬಳೆ, ಸದಾ ಮೈಮುಚ್ಚುವಂತೆ ಸೀರೆಯುಡಬೇಕು ಎಂದು ಆಶಿಸುವುದು ಎಷ್ಟು ಸರಿ... ಕೇವಲ ಹೆಣ್ಣು ಮಕ್ಕಳಿಗೆ ಮಾತ್ರ ಅನ್ವಯಿಸುವುದೇ ಹಿಂದು ಸಂಸ್ಕೃತಿ... ಮತ್ತೆ ತಮಗೆ... ತಾವೆಲ್ಲ ಜುಬ್ಬ, ದೋತಿ ಹಾಕಿ ಆಫೀಸಿಗೆ ಹೋಗುವಿರಾ! ಪಾಶ್ಚಿಮಾತ್ಯರ ದೇಣಿಗೆ ಈ ಸೆಲ್ ಫೋನು, ವಾಶಿಂಗ್ ಮೆಶಿನ್, ಗಣಕ ಯಂತ್ರ.. ಅವನೆಲ್ಲಾ ತಾವು ಯಾಕೆ ಉಪಯೋಗಿಸುವಿರಾ ನಮ್ಮ ಸಂಸ್ಕೃತಿ ರಕ್ಷಕರೇ?

ಜೀನ್ಸ್ ಪ್ಯಾಂಟಿಗೆ ಕುಂಕುಮ ಹೂವು ಹೊಂದುವುದಿಲ್ಲ... ಇನ್ನು ಜೀನ್ಸ್ ಪ್ಯಾಂಟ್ ಹಾಕಬೇಡಿ ಅನ್ನಬೇಡಿ ಮಾರಾಯರೆ. ಕೈಗೆಟುಕುವ ದರದಲ್ಲಿ ಸಿಗುವಿಕೆ, ಆರಾಮದಾಯಕತನ ಎರಡೂ ಅದನ್ನು ಬರೇ ಯುವ ಜಾನಾಂಗದಲ್ಲಿ ಮಾತ್ರವಲ್ಲ ನನ್ನಂಥಹ ಮಧ್ಯ ವಯಸ್ಕರೂ ಇಷ್ಟಪಡುವಂತಾಗಿದೆ. ಅಸಭ್ಯವಲ್ಲದಾದುದರಿಂದ ಅದ್ಯಾಕಪ್ಪಾ ಅದನ್ನೂ ಹಾಕಲು ಅಡ್ಡಿಮಾಡುವಿರಿ ರಾಯರೆ?

ಕೊನೆಯದಾಗಿ ತಾವು ಬೇರೆಯವರಿಗಿಂತ ಭಿನ್ನರೆಂದು ತೋರುವ ಯತ್ನದಲ್ಲಿ ತಾವು ಪರರ ಖುಷಿಯನ್ನು ಕಿತ್ತುಕೊಳ್ಳಲು ಹೋಗುವಿರಲ್ಲಾ! ಇದಕ್ಕೆ ಹಿಂದು ಸಂಸ್ಕೃತಿಯಲ್ಲಿ ಮನ್ನಣೆ ಕೊಡಲಾಗಿದೆಯೇ? ಒಟ್ಟಾರೆ ಈ ಸಂಸ್ಕೃತಿ ಅನ್ನೋದು "ಮಂಗನ ಕೈಯಲ್ಲಿ ಮಾಣಿಕ್ಯ"ವೆಂಬ ಮಾತನ್ನು ನನಗೆ ನೆನಪಿಸಿದೆ!

               ********************************

ಹಿಂದು, ಮುಸ್ಲಿಮ್, ಕ್ರೈಸ್ತ- ಇವುಗಳನ್ನು ಧರ್ಮಗಳೆಂದು ಎಂದು ಗುರುತಿಸುತ್ತಾರೆ... ಮತ್ತು ಅವು ತಮ್ಮದೇ ಆದ ಸಂಸ್ಕೃತಿಯನ್ನು ಹೊಂದಿವೆ .( ಇಲ್ಲಿ ಸಂಸ್ಕೃತಿಯನ್ನು ಸಹ ತಿರುಚಲಾಗಿದೆ. ಅದನ್ನು ಆಚರಣೆ ಅಥವಾ ಸಂಪ್ರದಾಯ ಅಂತ ಗುರುತಿಸುವುದು ಒಳ್ಳೆಯದು ಅಂತ ನನ್ನ ಅಭಿಪ್ರಾಯ.) ಅಂದರೆ ನಮ್ಮಲ್ಲಿ ಸಾಮಾನ್ಯವಾಗಿ ಹೇಳುವ ಹಾಗೆ ಹಿಂದೂ ಸಂಸ್ಕೃತಿ... ಅದಕ್ಕಾಗಿ ನಾನು ಅಲ್ಲಿ ಧರ್ಮ ಶಬ್ದವನ್ನು ಉಪಯೋಗಿಸಿರಲಿಲ್ಲ. ಅಲ್ಲದೆ ನನ್ನ ಮಟ್ಟಿಗೆ ಧರ್ಮವೆಂದರೆ ಇರುವುದೊಂದೇ; ಅದುವೇ ಮಾನವ ಧರ್ಮ. ಜಾತಿ- ಮನುಷ್ಯ ಜಾತಿ.. ಅದರಲ್ಲೂ ಎರಡೆ- ಗಂಡು, ಹೆಣ್ಣು. ಮತ್ತು ಪ್ರಾಣಿ ಸಂಕುಲವೊಂದು ಜಾತಿ.  

   ಸಂಸ್ಕೃತಿಯೆಂದರೆ ನಮ್ಮ ನಡತೆ- ನಾವು ಹೇಗೆ ಸಮಾಜದಲ್ಲಿ ಬೆರೆತು, ಎಲ್ಲರನ್ನೂ ಸಮಾನ ಮನಸ್ಸಿನಿಂದ ಗೌರವಿಸಬೇಕಾಗಿರುವುದು. ಹಿರಿಯರ ಮೇಲೆ ಭಕ್ತಿ, ಮಕ್ಕಳ ಮೇಲೆ, ಸಮವಯಸ್ಕರ ಮೇಲೆ ಪ್ರೀತಿ, ಗಂಡು ಹೆಣ್ಣು ಬೇಧ ಭಾವ ತೋರದೆ ಸಮಗೌರವ ಕೊಡುವುದು, ಜಾತಿ, ಅಂತಸ್ತುಗಳನ್ನು ಎಣಿಸದೆ ಬಂದ ಅತಿಥಿಗಳನ್ನು ಒಂದೇ ರೀತಿಯಲ್ಲಿ ಸತ್ಕರಿಸುವುದು, ಅಸಹಾಯಕರಿಗೆ ಸಹಾಯ ಹಸ್ತ ನೀಡುವುದು ಮೊದಲಾವುಗಳು- ಇವುಗಳನ್ನೇ ಉತ್ತಮ ಸಂಸ್ಕೃತಿಯೆಂದು ಗುರುತಿಸಬಹುದೆಂದು ನನ್ನ ಅಭಿಪ್ರಾಯ. 

     ಕೆಲವು ವರ್ಷಗಳ ಹಿಂದೆ ನನಗೂ ನನ್ನ ಮಗಳಿಗೂ ಈ ಹಣೆಗೆ ಬಿಂದಿ ಇಡುವ ವಿಷಯದಲ್ಲಿ ಚರ್ಚೆ ನಡೆದಿತ್ತು. ಆಗ ನಾನು ಸಹ ಇದನ್ನು ನಮ್ಮ ಸಂಸ್ಕೃತಿ ಪಾಲಿಸಬೇಕಾದದ್ದು ನಮ್ಮ ಧರ್ಮವೆಂದು ಅವಳ ಬಳಿ ವಾದ ಮಾಡಿದ್ದೆ. ಆದರೆ... ನಿಧಾನವಾಗಿ ನನಗೆ ಹೊಳೆದಿತ್ತು... ಅವೇ ನಾನು ಈ ಮೇಲೆ ಬರೆದ ಮಾತುಗಳು. ಹಣೆಯಲ್ಲಿರುವ ಚಕ್ರವನ್ನು ಉತ್ತೇಜಿಸಲು ಕುಂಕುಮವಿಡುವ ಅಭ್ಯಾಸವನ್ನು ನಮ್ಮ ಪೂರ್ವಜರು ಮಾಡಿರಬಹುದು. ಬಹುಶಃ ಸ್ತ್ರೀಯರು ಪುರುಷರೂ ನಿಯಮ ಬದ್ಧವಾಗಿ ಮಾಡಲ್ಪಟ್ಟ ಕುಂಕುಮವನ್ನು ಇಡುತ್ತಿದ್ದರು ಎಂದು ಕಾಣುತ್ತದೆ. ಕಾಲ ಕ್ರಮೇಣ ಸ್ತ್ರೀಯರು ಇದನ್ನು ಸೌಂದರ್ಯ ವರ್ಧಕವಾಗಿ ಇಡುತ್ತಿರಬಹುದು.. ಹೀಗೆ ಅದೊಂದು ನಿಯಮವೇ ಆಗಿಬಿಟ್ಟಿದೆ. ಆದರೆ ಇಂದಿನ ಹುಡುಗಿಯರಿಗೆ ಇದರ ಅಗತ್ಯ ಕಾಣುವುದಿಲ್ಲ...

           ****************************************



ಇದರ ಜತೆ ಈ ಹೊಸ ವರ್ಷಾಚರಣೆ ಬಗ್ಗೆಯೂ ಅಲ್ಲಲ್ಲಿ ಅಪಸ್ವರದ ಹೇಳಿಕೆ ಓದಿ ಬೇಸರವಾಯಿತು.. ತಮಗೆ ಬೇಡವಾದರೆ ಆಚರಿಸಬೇಡಿ.. ಪರರ  ಸಂತೋಷಕ್ಕೆ ಅಡ್ಡಗಾಲು ಹಾಕಬೇಡಿಯಪ್ಪಾ. ನಾನೆಂದೂ ಹೊಸವರ್ಷ ಅಂತ ಯಾವಾಗಲೂ ಸಂಭ್ರಮದಿಂದ ಆಚರಿಸಿದಿಲ್ಲ.. ನನ್ನ ಮಟ್ಟಿಗೆ ಯುಗಾದಿಯೇ ಹೊಸ ವರ್ಷ.. ಆದರೆ ಈ ವರ್ಷ ನನ್ನ ಎಫ್ ಬಿ ಮಿತ್ರರ ಸಂಭ್ರಮದಲ್ಲಿ ನಾನೂ ಸಂತೋಷದಿಂದ ಭಾಗಿಯಾದೆ... ಇಲ್ಲಿ ನನ್ನ ವಿದ್ಯಾರ್ಥಿಗಳ ಜತೆಯಲ್ಲೂ ಸಂಭ್ರಮದಿಂದ ೨೦೧೩ನ್ನು ಬರಮಾಡಿಕೊಂಡೆ!

                               *****************************

ದೆಹಲಿಯಲ್ಲಿ ನಡೆದ ಪೈಶಾಚಿಕ ಕೃತ್ಯವನ್ನು ಪ್ರತಿಭಟಿಸಿ ಎಫ್ ಬಿಯಲ್ಲಿ ಮಾನವೀಯತೆಯ ನೆಲೆಯಲ್ಲಿ ಅನೇಕ ಮಿತ್ರರು ಕಪ್ಪು ಬಿಂದುವನ್ನು ತಮ್ಮ ಚಿತ್ರವನ್ನಾಗಿ ಮಾಡಿಕೊಂಡಿದ್ದರು... ಕ್ರಮೇಣ ಅದನ್ನು ಬದಲಾಯಿಸಿದರು.. ಯಾವುದೇ ವಿಷಯವನ್ನು ನಾವು ವಿಪರೀತವಾಗಿ ಮನಸ್ಸಿಗೆ ಹಚ್ಚಿಕೊಂಡರೆ ಅದು ನಮ್ಮ ಮನಸ್ಸಿಗೆ ವಿಷವಾಗುವುದು ಎಂದೇ ನನ್ನ ನಂಬಿಕೆ. ಹೌದು ಪ್ರತಿಭಟಿಸುತ್ತಲೇ ಇರಬೇಕು. ಹಾಗಂತ ನಮ್ಮ ದೈನಂದಿನ ಜೀವನವನ್ನೂ ನಡೆಸಬೇಕು ತಾನೆ. ಇವತ್ತು ನನ್ನ ಮಿತ್ರರೊಬ್ಬರ ಸ್ಟೇಟಸ್ಸಿಗೆ ಅವರ ಮಿತ್ರರೊಬ್ಬರು ಈ ಬಗ್ಗೆ ವ್ಯಂಗವಾಗಿ ಬರೆದಿದ್ದರು. ಖಂಡಿತವಾಗಿ ಆ ದುರ್ಘಟನೆ ಅಷ್ಟು ಬೇಗ ನಮ್ಮ ಮನಸ್ಸಿನಿಂದ ಅಳಸಿ ಹೋಗುವುದಿಲ್ಲ.. ಹೋಗಲೂಬಾರದು; ಹಾಗಂತ ನಾವು ನಿತ್ಯವೂ ಅಳುತ್ತಲೇ, ಬೊಬ್ಬೆಹಾಕುತ್ತಲೇ ಇರಲಾಗದಷ್ಟೇ.. ನಮ್ಮದೇ ರೀತಿಯಲ್ಲಿ ನಮ್ಮಿಂದಾದಷ್ಟು ಸಹಾಯ ಹಸ್ತವನ್ನು ನೀಡುವೆವು. ಏನನ್ನುವಿರಾ ಸಹಮನಸ್ಕರೆ?

2 comments:

ವಿ.ರಾ.ಹೆ. said...

ಸೆಲ್ ಫೋನು, ವಾಶಿಂಗ್ ಮೆಶಿನ್, ಗಣಕ ಯಂತ್ರ ಪಾಶ್ಚಿಮಾತ್ಯರ 'ದೇಣಿಗೆ' alla .

Sheela Nayak said...

ಇರಬಹುದು ವಿಕಾಸ, ಭಾರತೀಯರು ಅನೇಕ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿದ್ದರೂ ಅದರ ಕ್ರೆಡಿಟ್ ಸಿಕ್ಕಿದು ಪಾಶ್ಚಾತ್ಯರಿಗೇ ತಾನೆ. ಅಂದ ಹಾಗೆ ಈ ಲೇಖನದಲ್ಲಿ ಮುಖ್ಯವಾದ ವಿಷಯ ನಮ್ಮ ಭಾರತೀಯ ಸಂಪ್ರದಾಯಗಳನ್ನು ಇಂದಿನ ಯುಅವಜನಾಂಗ ಅದರಲ್ಲೂ ಯುವತಿಯರು ಪಾಲಿಸುವುದಿಲ್ಲವೆಂಬ ಅಪವಾದದ ಬಗ್ಗೆ. ಆ ವಿಷಯದ ಬಗ್ಗೆಯೂ ನಿನ್ನ ಅಭಿಪ್ರಾಯ ಕೊಡಬಹುದಿತ್ತು!

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...