ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

10 October, 2012

ಅಮ್ಮ, ಗಾಂಧಿ ಮತ್ತು ನಾನು!              ಹುಂ, ವಿಚಿತ್ರವಾದರೂ ಇದು ನಿಜ. ನನ್ನ ಬದುಕಿನಲ್ಲಿ ಗಾಂಧಿ ಮತ್ತು ಅಮ್ಮನ ಪ್ರಭಾವ ಹೆಚ್ಚು ಇದೆ. ಬದುಕಿನ ಮಹತ್ವದ ನಿರ್ಣಯಗಳಲ್ಲಿ ಗಣನೀಯ ಪಾತ್ರ ವಹಿಸಿದ್ದಾರೆ ಇಬ್ಬರೂ.

     ನನ್ನ ಅಮ್ಮ ತಮ್ಮಮ್ಮನ ಹೊಕ್ಕುಳ ಗಂಟನ್ನು ಬಿಡಿಸಿ ಮುಂಡ್ಕೂರಿನ ಮಣ್ಣಲ್ಲಿ ಬಿದ್ದು ಅಳುತ್ತಾ ತಮ್ಮ ಅಸ್ತಿತ್ವವನ್ನು ಪ್ರಕಟ ಪಡಿಸಿದ್ದು ಭಾರತೀಯರಿಗೆ ಕರಾಳ ದಿನವಾದ ಜನವರಿ ೩೦ರಂದೇ.. ಅತ್ತ ಗಾಂಧಿಯವರ ಹತ್ಯೆ, ಇತ್ತ ನಾಲ್ಕು ಅಣ್ಣಂದಿರ  ಹಿಂದೆ ಅವರೆಲ್ಲರ ಹಾಗೆ ಬಿಳಿ  ಬಣ್ಣ ಹೊತ್ತಿರದ ನಸುಕಪ್ಪು ಹೆಣ್ಣು ಮಗುವಿನ ಜನನ.  ಆ ಹೊತ್ತಿನಲ್ಲಿ ಗಾಂಧಿಯ ಪರಮ ಭಕ್ತ ನನ್ನ ಅಜ್ಜನ reaction ಹೇಗಿತ್ತು ಎಂಬ ನನ್ನ ಕುತೂಹಲಕ್ಕೆ ಉತ್ತರ ಇಂದೂ ಸಿಕ್ಕಿಲ್ಲ. ಆದರೆ ಈ ಹೆಣ್ಣು ಮಗು ಮಾತ್ರ ಸ್ವಭಾವದಲ್ಲಿ ಗಾಂಧೀಜಿಯವರನ್ನು ಹೋಲುತ್ತಿತ್ತು ಅಂದರೆ ಉತ್ಪ್ರೇಕ್ಷೆಯಲ್ಲ... ಪ್ರತ್ಯಕದರ್ಶಿಯಾದ ನಾನೇ ಅದಕ್ಕೆ ಸಾಕ್ಷಿ. ಅವರ ಸ್ವಭಾವದ ಅನುಭವಿಗಳು ನಾನು ಮತ್ತು ನನ್ನ ತಮ್ಮಂದಿರು.

      ಗಾಂಧಿಯವರ ಕತೆಗಳನ್ನು ( ಅವರು ಸ್ವಾತಂತ್ರ್ಯಕ್ಕಾಗಿ ದುಡಿದ ಕತೆಗಳನ್ನು) ರೋಚಕವಾಗಿ ನಮಗೆ ಹೇಳುತ್ತಿದ್ದರು... ಹೇಳುತ್ತಿರುವಾಗ ತುಂಬಾ ಭಾವುಕರಾಗುತ್ತಿದ್ದರು... ನಮ್ಮನ್ನೂ ಭಾವುಕರನ್ನಾಗಿ ಮಾಡುತ್ತಿದ್ದರು..
 ಬಹುಶಃ ನಾನು ಆವಾಗ ಎರಡನೆಯ ಅಥವಾ ಮೂರನೆಯ ತರಗತಿ ಇರಬೇಕು... ನನ್ನ ಟೀಚರ್ ಒಪ್ಪಿಗೆ ತೆಗೆದುಕೊಂಡು ನಾನು ಸ್ವಾತಂತ್ರೋತ್ಸವದ ಸಮಯದಲ್ಲಿ ಅಮ್ಮ ಬರೆದುಕೊಟ್ಟ ಭಾಷಣವನ್ನು ಭಾವಾವೇಷ  ವೀರಾವೇಷದಿಂದ ಮಾತನಾಡಿದೆ. ಅದರ ನಂತರ ಪ್ರತಿ ವರ್ಷ ಇಂತಹ ಕಾರ್ಯಕ್ರಮದಲ್ಲಿ ನನ್ನ ಭಾಷಣ ಖಾಯಂ ಆಯಿತು. ಅಲ್ಲದೆ ನನ್ನ ಭಾಷಣ ನಾನೇ ಬರೆಯಲೂ ಪ್ರಾರಂಭಿಸಿದೆ. ಗುರುಗಳ ಪ್ರೋತ್ಸಾಹ ಧಾರಾಳವಾಗಿ ದೊರಕ್ಕಿತ್ತು. ಅಮ್ಮನ ಹಾಗೆ ಗಾಂಧಿಜಿಯ ಪರಮ ಭಕ್ತಳೂ ಆಗಿಬಿಟ್ಟೆ. ನನ್ನ ಓದಿನ ಪರಧಿ ಬೆಳೆದ ಹಾಗೆ ಗಾಂಧಿ, ನೆಹರು ಅಂತೆಯೇ ಉಳಿದ ಮಹನೀಯರ ಬಗ್ಗೆ ನಿಧಾನವಾಗಿ ನನ್ನದೇ ಅಭಿಪ್ರಾಯವೂ ಮೂಡಲು ಪ್ರಾರಂಭವಾಯಿತು.

 ನಮ್ಮ ಮನೆಯಲ್ಲಿ ಸಂಜೆ ಭಜನೆ ನಿತ್ಯವೂ ನಡೆಯುತ್ತಿತ್ತು.. (ಈಗಲೂ)  ಟಿ. ವಿಯ ಕಾಟವಿರದಿದ್ದ ಕಾರಣವೇನೋ ಎಲ್ಲಾ  ಮಕ್ಕಳ ಹಾಜರಿ ಇರುತ್ತಿತ್ತು. ಮಂಗಳಾರತಿ ಆದಮೇಲೂ ಗಾಳಿಂಗ ಲೋಟಾಂಗಣ...ಹೀಗೆ ಸುಮಾರು ಪದ್ಯ ಶ್ಲೋಕಗಳಾದ ಮೇಲೆ ಕೊನೆಯ ಹಂತಕ್ಕೆ ಬರುವಾಗ ಜೈಕಾರಗಳು..ನಮ್ಮೂರಿನ ದೇವರು, ಕುಲದೇವತೆ, ಸ್ವಾಮಿಗಳು, ಭಕ್ತರು.. ( ಈಗಲೂ ನನ್ನ ನಾಲಿಗೆ ತುದಿಯಲ್ಲೇ ಇದೆ... ಎಲ್ಲಾ ಹೆಸರುಗಳು) ಭಾರತ ಮಾತಾ ಕಿ ಜೈ, ಮಹಾತ್ಮಾ ಗಾಂಧಿಕಿ ಜೈ, ಪಂಡಿತ್ ನೆಹರೂ ಕಿ ಜೈ... ಕೊನೆಯ ಜೈಕಾರ...ಮೊದಲೆಲ್ಲಾ ವಿನಯದಿಂದ ಜೈಕಾರ ಹಾಕುತ್ತಿದ್ದ ನಾವುಗಳು ನಮ್ಮ ಓದು ಕೊಟ್ಟ ವಿಚಾರದಿಂದ ನೆಹರೂಗೆ ಜೈಕಾರ  ಹಾಕುವುದಕ್ಕೆ ಪ್ರತಿಭಟಿಸಿದೆವು... ಅಮ್ಮನಿಗೆ ನಮ್ಮ ಕಾರಣಗಳನ್ನೂ ಕೊಟ್ಟೆವು. ಹುಂ, ಅಮ್ಮ ತನ್ನ ನಿಲುವನ್ನು ಈ ವಿಷಯದಲ್ಲಿ ಬದಲಿಸಿಲ್ಲ...( ಇತ್ತೀಚೆಗೆ ಒಂಚೂರು ಬದಲಾವಣೆಯ ಗಾಳಿ ಬೀಸಿದೆ ಅಂತ ನನ್ನ ಅನುಮಾನ).
   


        ಸರಿ, ಈಗ ಪೀಠಿಕೆ ಮುಗಿಯಿತು... ಮೊದಲಾಗಿ ಗಾಂಧಿಯವರ ಪ್ರತಿಬಿಂಬ ನನ್ನ ಅಮ್ಮನಲ್ಲಿ ನಾನು ಕಂಡದ್ದು ಅಮ್ಮ ತನ್ನ ಅಣ್ಣ, ಮತ್ತು ತನ್ನ ನಾದಿನಿಯರ ಮಕ್ಕಳು, ಅತ್ತೆ, ಮಾವ, ಮತ್ತು ಕುಟುಂಬಕ್ಕೆ ತನ್ನ ಸಮಯವನೆಲ್ಲಾ ಮೀಸಲಿಟ್ಟಾಗ. ಬಿಲ್‍ಕುಲ್ ಅಂದುಕೊಳ್ಳಬೇಡಿ.. ನನಗೆ ಹೊಟ್ಟೆಕಿಚ್ಚು ಇತ್ತು ಅಂತ.. ಖಂಡಿತ ಅಮ್ಮನ ಎಲ್ಲಾ ಕೆಲಸಗಳಿಗೆ ನಮ್ಮ ಸಹಕಾರ ಯಾವಾಗಲೂ ಇರುತಿತ್ತು.  ಆದರೆ ಖಂಡಿತ ಹಲವು ಸಾರಿ ಅಮ್ಮನ ಜೊತೆ ಬೇಕೆಂದಾಗ ಅವರಿಗೆ ನಮಗೆ ಸಮಯ ಕೊಡಲಾಗುತ್ತಿರಲಿಲ್ಲ... ಬಹಳ ಬೇಸರವಾಗುತ್ತಿತ್ತು. ಗಾಂಧಿಯವರೂ  ತಮ್ಮ ಮಕ್ಕಳಿಗೆ ಸಮಯ ನೀಡಿರಲಿಲ್ಲ... ಹರಿಲಾಲರ ಬಗ್ಗೆ ಓದಿದಾಗ  ಜೀವ ತುಂಬಾ ಚುರುಗುಟ್ಟಿತ್ತು... ಇದು ನನ್ನ ಜೀವನದ ಮಹತ್ವ ನಿರ್ಧಾರಕ್ಕೆ ಕಾರಣವಾಯಿತು...೧೨ನೇ ವಯಸ್ಸಿಗೆ ನನ್ನ ಭವಿಷ್ಯದ ಪತಿ ಅಥವಾ ಜೀವನದ ಬಗ್ಗೆ ಕನಸಿರಲಿಲ್ಲ.. ಆದರೆ ಮಕ್ಕಳ ಬಗ್ಗೆ ಕನಸು ಕಾಣಲಾರಂಭಿಸಿದೆ.. ನನ್ನ ಮಕ್ಕಳು ತಮ್ಮ ಕಾಲಿನಲ್ಲಿ ನಿಲ್ಲುವ ತನಕ ನನ್ನ ಸಮಯ ಅವರಿಗೇ ಮೀಸಲು ಎಂಬ ನಿರ್ಧಾರವನ್ನು ಆಗಲೇ ತೆಗೆದುಕೊಂಡೆ. ಅಲ್ಲದೆ ಹಾಗೆ ನಡೆದುಕೊಂಡೆ.  ಇಲ್ಲಿ ಒಂದು ಮಾತು - ನನ್ನ ಮಕ್ಕಳು ಅಂದರೆ ಇಲ್ಲಿ ಬರೇ ಸ್ವಾರ್ಥ ಅಥವಾ ಮೋಹದ ನಿರ್ಧಾರವಲ್ಲ.. ಮಕ್ಕಳಲ್ಲಿ ನಮ್ಮ ಮುಂದಿನ ಭವಿಷ್ಯ ಅಡಗಿದೆ.. ಮಕ್ಕಳಿಗೆ ಸರಿಯಾದ ದಾರಿ ತೋರಿದರೆ ಅವರ ಬಾಳು ಉಜ್ವಲವಾಗುವುದು.. ಜೊತೆಗೆ ದೇಶವೂ ಪ್ರಗತಿಯನ್ನು ಹೊಂದುವುದು. ಪ್ರಗತಿಯ ಅರ್ಥ ಶೀಮಂತವಾಗುವುದಲ್ಲ... ಸನ್ನಡತೆ, ಮಾನವೀಯತೆಯ  ತೋರುವುದು.  

      ಎಷ್ಟೊ ಸಲ ಅನಿಸುತ್ತಿತ್ತು.. ಗಾಂಧಿಯವರು ತಮ್ಮ ಮಕ್ಕಳ ಅಭಿವೃದ್ಧಿಗೂ ಗಮನವಿತ್ತಿದ್ದರೆ, ನೆಹರೂರವರ ಎಲ್ಲಾ ಮಾತಿಗೆ ಹೂಂಕಾರ ಹಾಕಿರದಿದ್ದರೆ, ಹಿತ್ತಾಳೆ ಕಿವಿಯವರಾಗಿರುತ್ತಿದ್ದರೆ.. ಒಂದು ಕಾಲದಲ್ಲಿ ಉನ್ನತ ಸಾಂಸ್ಕೃತಿಕ ನೆಲೆಯಾಗಿದ್ದ ಭಾರತ ಮತ್ತೊಮ್ಮೆ ಗತಕಾಲದ ವೈಭವದಲ್ಲಿ ಮೆರೆಯುತ್ತಿತ್ತೇನೋ ಅಂತ... ಹುಂ, ಲೂಟಿಯಾದ ಮೇಲೆ ದ್ವಾರ ಮುಚ್ಚಿ ಏನು ಪ್ರಯೋಜನ!

       ಇಂದು ನನ್ನ ಮಕ್ಕಳು ಬೆಳೆದಿದ್ದಾರೆ... ವಯಸ್ಸಿನಲ್ಲೂ. ಗುಣದಲ್ಲೂ... ನನ್ನ ಕಲೆ, ಓದು, ಹತ್ತು ಹಲವು ಆಸಕ್ತಿ ಎಲ್ಲವನ್ನೂ ಮರೆತು ಮಕ್ಕಳಿಗಾಗಿ ಸಮಯವನ್ನೆಲ್ಲಾ ಮೀಸಲಿಟ್ಟೆ. ಅವರ ಬೌಧಿಕ  ಬೆಳವಣಿಗೆ ನನ್ನ ಮುಖ್ಯ ಗುರಿಯಾಗಿತ್ತು.  ಜೀವನದ ಎಲ್ಲಾ ಮಗ್ಗುಲನ್ನು ನಿಧಾನವಾಗಿ ಅವರ ಎದುರಿಗೆ ಬಿಡಿಸುತ್ತಾ ಬಂದೆ.  ಬದುಕಿನಲ್ಲಿ ಸಮುದ್ರದ ಅಲೆಗಳ ಹಾಗೆ ಚಿಕ್ಕ, ದೊಡ್ಡ ಸಮಸ್ಯೆಗಳು ಬಂದೇ ಬರುತ್ತವೆ.. ನಾವು ಅವುಗಳನ್ನು ಹೇಗೆ ಎದುರಿಸುತ್ತೆವೋ ಅದು ಮುಖ್ಯ....ಮುಖ್ಯವಾಗಿ ನಮ್ಮ ಮನೆತನದ ಕೊಡುಗೆಯಾದ ಕೋಪ, ಅಹಂ...ಇವೆರಡೂ ನಮ್ಮನ್ನು ಕುರುಡ ಹಾಗೂ ಕಿವುಡರನ್ನಾಗಿ ಮಾಡುತ್ತವೆ...ಅಲ್ಲದೆ ನಮ್ಮನ್ನೆಲ್ಲಾ ಸೃಷ್ಟಿಸಿದ ಆ ಪರಮಾತ್ಮನ ಸೂತ್ರದ ಬೊಂಬೆಗಳು ನಾವು..ಅವನ ಇಚ್ಛೆಯಿಲ್ಲದೆ ಏನನ್ನೂ ಮಾಡಲು ಶಕ್ತರಾಗುವುದಿಲ್ಲ..ಅದೇ ಅವನ ಕೃಪೆಯೊಂದಿದ್ದರೆ ಮೂಕನೂ ವಾಚಾಳಿಯಾಗಬಲ್ಲ..ಹೆವಳನೂ ಬೆಟ್ಟವನ್ನೇರಬಲ್ಲ..ನನ್ನ ನಂಬಿಕೆಯನ್ನು ಅವರಲ್ಲಿ ಬಿತ್ತಿದೆನು...ಕ್ಷಣ ಕ್ಶಣದಲ್ಲೂ ರಾಮನನ್ನು ನೆನೆಯಿರಿ..ರಾಮನಾಮವಿರುವ ಕಡೆ ಹನುಮನು ಇರುವನು...ಅವನಿದ್ದ ಮೇಲೆ ಮತ್ತಾವುದರ ಭಯವಿಲ್ಲ....

          ನಿಧಾನವಾಗಿ ನನ್ನ ಭಾರವನ್ನು ಕಳಚುತ್ತಾ ಬರುತ್ತಿದ್ದೇನೆ...ಮತ್ತು ನನ್ನ ಹವ್ಯಾಸಗಳನ್ನು  ಮತ್ತೆ ಕೈಗೆತ್ತಿಕೊಂಡಿದ್ದೇನೆ..ಮಕ್ಕಳ ವಿದ್ಯಾಭ್ಯಾಸ ಮುಗಿಯುವ ತನಕ ನಾನು ದುಡಿಯಬೇಕಾಗುತ್ತದೆ...ಅದರ ಜೊತೆ ಹವ್ಯಾಸಗಳನ್ನು ಮುಂದುವರಿಸುವುದು ಕಷ್ಟ ಸಾಧ್ಯವೇ ಸರಿ..ಆದರೂ ಛಲವಾದಿ ನಾನು..ಜೊತೆಗೆ ಅವನ ಬೆಂಬಲವೂ ಇದೆ..ಮತ್ತೇಕೆ ಭಯ!


    ಮುಗಿಸುವ ಮೊದಲು ಅಮ್ಮನ ಬಗ್ಗೆ ಒಂದಿಷ್ಟು ಮಾತು-  ನನ್ನ ಅಮ್ಮ ನನ್ನ ಮೊದಲ ಆಧ್ಯಾತ್ಮಿಕ ಗುರು.  ಗಾಂಧಿಯವರಷ್ಟು  ಮಕ್ಕಳನ್ನು ಕಡೆಗಣಿಸಿರಲಿಲ್ಲ್ಲ..ತಮ್ಮ ಸುತ್ತಲು ಹಬ್ಬುತ್ತಿದ್ದ ಅನ್ಯಾಯವನ್ನು ಪ್ರತಿಭಟಿಸುವಷ್ಟು ತಾಕತ್ತೂ ಇರಲಿಲ್ಲ.. ಗಾಂಧಿಯವರ ಹಾಗೆ ಸರಳ ಜೀವನ ನಡೆಸಿದರು...ಅಂದೂ ಇಂದೂ ತಾವು ನಂಬಿದ ತತ್ವವನ್ನು ಬಿಡಲಿಲ್ಲ...ಮಾನಸಿಕ ಕ್ಷೋಭೆಗೂ ಒಳಗಾದರು..ಅವರನ್ನು ಮತ್ತೆ ಮುಂಚಿನಂತೆ ಮಾಡಲು ನನ್ನದೇ ಆದ ತಂತ್ರಗಳನ್ನು ಪ್ರಯೋಗಿಸಿದ್ದೇನೆ... ಸಫಲಳೂ ಆಗಿದ್ದೇನೆ.
         

1 comment:

abhijnaa said...

ಸುಸಂಸ್ಕೃತ ಫ್ಯಾಮಿಲಿಯ, ಸುಸಂಸ್ಕೃತ ಮಗಳಿಂದ, ಚಂದದಂತಹ ಬರಹ

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...