ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

12 August, 2012

ಅಡುಗೆ-೧


   

        ನನ್ನ ಮಟ್ಟಿಗೆ ತಿನ್ನುವುದೆಂದರೆ ಬದುಕಲು ಮಾತ್ರ...ಹೇಗೆ ನಮಗೆ ಶುದ್ಧ ಆಮ್ಲಜನಕ ಬೇಕೋ ಹಾಗೆ ಆರೋಗ್ಯವಾಗಿ ಜೀವಿಸಲು ಬೇಕಾದ ಪೋಷಕವಸ್ತುಗಳು ನಮ್ಮ ಆಹಾರದಲ್ಲಿರಬೇಕು..ಹೊರತು ರುಚಿಯ ಬಗ್ಗೆ ನಾನು ಅಷ್ಟೊಂದು ತಲೆಕೆಡಿಸಿಕೊಂಡಿರಲಿಲ್ಲ. ನಮ್ಮ ಅಮ್ಮ ಇಂದಿಗೂ ಹೆಮ್ಮೆಯಿಂದ ಹೇಳುತಿರುತ್ತಾರೆ- ನನ್ನ ಮಕ್ಕಳು ಎಂದೂ ನಾಲಿಗೆಯ ದಾಸರಾಗಿರಲಿಲ್ಲ ಎಂದು. ನನ್ನ ಇಬ್ಬರು ತಮ್ಮಂದಿರೂ ತಮ್ಮ ರುಚಿಯನ್ನು ಬದಲಿಸಿದ್ದರೂ ನಾನು ಇಂದಿಗೂ ನನ್ನ ಹಳೆಯ ನಮೂನೆಯೊಂದಿಗೆ ಬದುಕಿದ್ದೇನೆ. ಕಾಫಿ, ಟೀ ಕೂಡ ಮಾಡ್ಲಿಕ್ಕೆ ಬರುತ್ತಿರಲಿಲ್ಲ ನನಗೆ..ಅಡುಗೆ ಮಾಡಬಾರದು ಅಂತಲ್ಲ..ಬೆಂಕಿಯ ಹೆದರಿಕೆ..ಕಾಲೇಜಿನಲ್ಲೂ ಲ್ಯಾಬನಲಿ ನನ್ನ ಮಿತ್ರರೇ ಬೆಂಕಿ ಹಚ್ಚಿಕೊಡುತ್ತಿದ್ದರು...ಎಲ್ಲರೂ ಹಾಸ್ಯಮಾಡುತ್ತಿದ್ದರೂ ನಾನು ಕೇರೇ ಮಾಡುತ್ತಿರಲಿಲ್ಲ..ಆದರೆ ಮದುವೆಯಾದದ್ದೇ ತಡ ಅತ್ತೆಯ ಎದುರು ಬೆಂಕಿ ತುಂಬಾ ಬೆಟರ್ ಅಂತ ಗೊತ್ತಾಯಿತು...ಈಗಂತೂ ಬೆಂಕಿಯೊಂದಿಗೆ ಸರಸವಾಡುತ್ತೇನೆ.

          ನಿಧಾನವಾಗಿ ಅಡುಗೆ ಮಾಡಲು ಕಲಿತೆ....ನನ್ನ ಮಕ್ಕಳಿಗೋಸ್ಕರ ಹೊಸ ರುಚಿ, ನಮ್ಮ ಸಂಪ್ರದಾಯದ ಅಡುಗೆ, ಹಬ್ಬದಡುಗೆ..ಉತ್ತರಭಾರತದಡುಗೆ...ಹೀಗೆ ನಮೂನೆ ನಮೂನೆ ಅಡುಗೆ ರುಚಿಪ್ರಿಯ ನನ್ನ ಮಕ್ಕಳಿಗಾಗಿ....ಅಲ್ಲದೆ ಅಡುಗೆ ಮಾಡುವುದು ಸಹ ಒಂದು ಕಲೆ ಅಂತ ನನ್ನ ಅಭಿಪ್ರಾಯ. ಆವಾಗ ನಾನು ಬ್ರಶ್‍ನ ನನ್ನಿಂದ ದೂರ ಇಟ್ಟಿದ್ದೆ. ಎಷ್ಟು ಎಕ್ಸ್ ಪರ್ಟ್ ಆಗಿಬಿಟ್ಟೆ ಅಂದ್ರೆ ಅಡುಗೆ ಕಲೆಯಲ್ಲಿ ವಿಶಾರದಳಾದ ನನ್ನ ಅಜ್ಜಿಯ ಕೈಯಲ್ಲಿ ಶಹಭಾಸ್ ಕೂಡ ಸಿಕ್ಕಿತು.  ನನ್ನ ಬ್ಲಾಗ್ನಲ್ಲಿ ನಮ್ಮ ಸಂಪ್ರದಾಯದ ತಿಂಡಿ ತಿನಿಸುಗಳ ತಯಾರಿಕೆ ಬಗ್ಗೆ ಹಾಕಬೇಕು ಅಂತ ಅನಿಸಿದ್ರೂ, ಹಾಕಲಿಕ್ಕೆ ಹೋಗಿರಲಿಲ್ಲ...ಸಮಯದ ಅಭಾವ ಒಂದು ಕಾರಣವಾದರೆ..ಈಗಾಗಲೇ ನಮ್ಮ ಕೊಂಕಣಿ ಅಡುಗೆಗಳ ಬಗ್ಗೆ ಇರುವ ಅನೇಕ ಜಾಲವು ಹುಟ್ಟಿಕೊಂಡಿದ್ದು ಇನ್ನೊಂದು ಕಾರಣ. ಆದರೆ ಈಗ ಕಿರಣ  ನನ್ನ ಬಳಿ ನಮ್ಮ ಸ್ಪೆಶಲ್ ಮತ್ತು ಸುಲಭ ಅಡುಗೆಗಳ ಬಗ್ಗೆ ಬರೀರಿ ಅಂತ ಬೇಡಿಕೆ ಇಟ್ಟ ಕಾರಣ  ಸರಿ..ಅದೂ ಇರಲಿ ತೆರೆದ ಮನಸಿನ ಪುಟದಲಿ ಅಂತ ಇದೀಗ ಮೊದಲ ಕಂತು ಪ್ರಾರಂಭ ಮಾಡ್ತಿದ್ದೇನೆ.
 ೧.  ಕಿಸ್ಮುರಿ:
________________
   ಹಾಗಲಕಾಯಿಯ ಕಿಸ್ಮುರಿ ಅಂತ ನಮ್ಮಲ್ಲಿ ಮಾಡ್ತೇವೆ. ಆದರೆ ಇದು ಜಟ್ ಪಟ್ ತಯಾರಾಗುವ ಕಿಸ್ಮುರಿ. ಹೆಸರು ಕೇಳಿದ್ರೆ ನಗು ಬರುತ್ತೆ ಅಲ್ವಾ...ಆದರೆ ನಮಗೆಂದೂ ಇದು ವಿಚಿತ್ರ ಅಂತ ಅನಿಸ್ತಿರಲಿಲ್ಲ..ಬಹುಶಃ ಸಣ್ಣವರಿದ್ದಾಗದಿಂದಲೂ  ಕೇಳುತ್ತಾ ಬಂದುದರಿಂದ ಕಾಣುತ್ತೆ!
 ಸಾಮಾಗ್ರಿಗಳು
೧.  ೪,೫ ಖಾರದ ಉದ್ದಿನ ಹಪ್ಪಳ
೨. ೨ ಸಾದಾ ಉದ್ದಿನ ಹಪ್ಪಳ
೩. ಒಂದೆರಡು ಹಸಿಮೆಣಸು ರುಚಿಗೆ ತಕ್ಕಂತೆ
೪. ೨ ಟಿ ಚಮಚ ತುರಿದ ತೆಂಗಿನ ಕಾಯಿ
೫. ಸಣ್ಣಗೆ ಕತ್ತರಿಸಿದ ಒಂದು ಸಣ್ಣ ನೀರುಳ್ಳಿ

    ಮೊದಲು ಹಪ್ಪಳವನ್ನು ಕರಿಯಿರಿ. ಕೈಯಿಂದ ಒತ್ತಿ ಸಣ್ಣ ಸಣ್ಣ ಚೂರುಗಳನ್ನಾಗಿ ಮಾಡಿ. ಕತ್ತರಿಸಿದ ಹಸಿಮೆಣಸನ್ನೂ, ತೆಂಗಿನ ಕಾಯಿಯನ್ನೂ, ಈರುಳ್ಳಿಯನ್ನು ಅದರಲ್ಲಿ ಬೆರೆಸಿ. ಕಿಸ್ಮುರಿ ತಯಾರು. ವಿ.ಸೂ- ಇದನ್ನು ಊಟದ ಹೊತ್ತಿಗೆ ತಯಾರಿಸಬೇಕು. ಹಾ, ಹಪ್ಪಳವನ್ನೂ ಮೊದಲೇ ಕರಿದಿಡಬಹುದು. ಗಾಳಿಯಾಡದ ಡಬ್ಬಿಯಲ್ಲಿ ಇಟ್ಟು ಬೇಕಾದಾಗ ಕಿಸ್ಮುರಿಯನ್ನು ತಯಾರಿಸಬಹುದು. ನನ್ನ ಮಗನಿಗೆ ಇದು ಬಹಳ ಇಷ್ಟ. ಎಲ್ಲಿಯಾದರೂ ಮಾಡಿದ ಪದಾರ್ಥ ಅವನಿಗೆ ಇಷ್ಟವಾಗಲಿಲ್ಲವಾದರೆ ಕಿಸ್ಮುರಿ ಮಾಡು ಅಂತ ಬೇಡಿಕೆ ಇಡುತ್ತಾನೆ.

   

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...