ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

30 August, 2012

ಜಹೀದ್ ಮತ್ತು ರಾಮ ನಾಮ!



   "ರಾಮ್ ರಾಮ್ ಟೀಚರ್", "ರಾಮ್ ರಾಮ್ ಮ್ಹಾಯೆ"
- ಮಕ್ಕಳು ಹೇಳುತ್ತಾ ಓಡುತ್ತಿದ್ದವು. ಅರ್ಶಿಯಾ ಮತ್ತು ಜಹೀದ್ ಆಶ್ಚರ್ಯದಿಂದ ನೋಡುತ್ತಿದ್ದಾರೆ. ಕಳೆದ ಎರಡು ದಿನಗಳಿಂದಲೂ ಅವರಿಗೆ ಮಕ್ಕಳು ಬಾಯ್ ಬಾಯ್...ಟಾಟಾ... ಜೊತೆ ಮತ್ತೇನೋ ಹೇಳುತ್ತಿದ್ದಾರಂತ ಗೊತ್ತಾಗಿತ್ತು...ಸಂಕೋಚಪಡುತ್ತಲೇ ಮತ್ತೊಂದು ಹುಡುಗಿಯ ಹತ್ತಿರ ಅರ್ಶಿಯಾ ರಾಮ್ ರಾಮ್ ಅಂದರೇನು ಅಂತ ಕೇಳಿದಳು. ಆ ಹುಡುಗಿ ಮಿಸ್, ಅರ್ಶಿಯಾ ಏನೋ ಕೇಳುತ್ತಿದ್ದಾಳೆ ಅಂತ ಜೋರಾಗಿ ಹೇಳಿದಳು. ಜಹೀದ್ , ಅರ್ಶಿಯಾ ಇಬ್ಬರ ಮುಖದಲ್ಲಿ ಕುತೂಹಲ,ಸಂಕೋಚ ಎದ್ದು ತೋರುತಿತ್ತು. 


ಹುಂ, ನನ್ನ ಮನೆ ಈಗ ಸಣ್ಣ ಭಾರತವೇ ಆಗಿಬಿಟ್ಟಿದೆ. ಕನ್ನಡ, ತುಳು, ಕೊಂಕಣಿ, ಗುಜರಾತಿ, ಮಾರ್ವಾಡಿ, ಕ್ರೈಸ್ತ, ಮುಸಲ್ಮಾನ್...ಹೀಗೆ ಎಲ್ಲಾ ಜಾತಿ, ಧರ್ಮದ...ಪಂಗಡ ನಮ್ಮ ಮನೆಯಲ್ಲಿ....ಮೊದ ಮೊದಲು ಬರೇ ತುಳು, ಕನ್ನಡ, ಕೊಂಕಣಿಯವರು ಬರುತ್ತಿದ್ದರು....ಆಗ ನನ್ನ ಟಾಟಾ ಬಾಯ್ ಬಾಯ್ ಬದಲಾಗಿ ರಾಮ್ ರಾಮ್ ಹೇಳುವ ಅಭ್ಯಾಸ ಒಂದಿಷ್ಟು ವಿಚಿತ್ರವೆನಿಸಿದರೂ ಹೆಚ್ಚಿನ ಮಕ್ಕಳು ತಾವೂ ರಾಮ್ ರಾಮ್ ಅನ್ನಲು ಪ್ರಾರಂಭಿಸಿದರು. 
ಆದರೆ ಇವತ್ತು ಈ ಮಕ್ಕಳು ಆ ಬಗ್ಗೆ ಕೇಳುವಾಗ ನನಗೆ ಏನು ಹೇಳುವುದು ಅಂತ ಗೊತ್ತಾಗಲಿಲ್ಲ. ಟಾಟಾ, ಬಾಯ್‍ಗಳ ಬದಲಾಗಿ ಉಪಯೋಗಿಸುವ ನಮ್ಮ ದೇವರ ಹೆಸರು ಅಂತ ಆ ಹುಡುಗನಿಗೆ ಸಂಕ್ಷಿಪ್ತವಾಗಿ ಅಂದೆ. ಹೋಗುವಾಗ ರಾಮ್ ರಾಮ್ ಅಂತ ಹೇಳಿ ನನಗೆ ಅಚ್ಚರಿಕೊಟ್ಟ. ಅದೂ ಅವನ ತಂದೆಯ ಎದುರು. ಅವರು ನನ್ನ ಕಾಲೇಜಿನ ಸರ್! ಅವರ ಮುಖ ನೋಡಿದೆ. ಮುಖದ ತುಂಬಾ ನಗೆ ಹರಡಿತ್ತು.....

       ಆರ್ಶಿಯಾ..ಅಪ್ಪನನ್ನು ನೋಡಿದ ಕೂಡಲೇ ಸಲೈಮಲೈಕುಂ ಅಂದಳು.......ಕೇಳಿ ಖುಶಿಯಾಯ್ತು........ಸರ್ ಅಂದರು ಅವಳು ಹಾಗೆ..... ನೋಡಿದ ಕೂಡಲೇ ಸಲಾಂ ಅನ್ನುತ್ತಾಳೆ. ....ಮತ್ತೂ ಅಂದರು ಮಕ್ಕಳು ನಿಮ್ಮನ್ನು ತುಂಬಾ ಮೆಚ್ಚಿದ್ದಾರೆ....ನಿಮ್ಮದೇ ಮಾತು ಮನೆಯಲ್ಲಿ....ಹುಂ, ಈ ಮಾತನ್ನು ನನಗೆ ಹೆಚ್ಚಿನ ಮಕ್ಕಳ ಪೋಷಕರು ಹೇಳಿದ್ದರೂ......ಇವತ್ತು ನನ್ನ ಗುರುಗಳ ಬಾಯಿಯಿಂದ ಕೇಳಿ ಮನಸ್ಸು ಆದ್ರವಾಯಿತು.....ಮೊನ್ನೆ ನನ್ನ ಪುಟ್ಟ ತಮ್ಮ ಕಿರಣ್ ಹೀಗೆ ಮನಸ್ಸನ್ನು, ಕಣ್ಣನ್ನು ಒದ್ದೆ ಮಾಡಿಬಿಟ್ಟ....ಎಷ್ಟೋ ಸಲ ಅಂದ್ಕೊಳ್ತೇನೆ ತುಂಬಾ ಭಾವುಕಳಾಗಬಾರದು ಅಂತ..ಆದರೆ....
"ನನ್ನ ಅಪ್ಪ ನನಗೆ ನಾನು ನಿಮ್ಮ ಹಾಗೆ ಆಗಬೇಕಂತ ಹೇಳಿದ್ದಾರೆ"- ಅರ್ಶಿಯಾ ನನಗೆ ಹೇಳಿದಾಗ ಭಾವುಕಳಾಗದೇ ಇರಲು ಸಾಧ್ಯವೇ ಹೇಳಿ!!!

16 August, 2012

ನನ್ನ ಕನಸನ್ನು ನನಸಾಗಿಸುವೆನೆ???



ಇಂದಿಗೆ ಸರಿಯಾಗಿ ಐದು ವರುಷಗಳು ಸಂದವು ಬ್ಲಾಗ್ ಲೋಕದ ನೆಂಟಸ್ತನ ಹೊಂದಿ....
ಅಂದು ಬದುಕಿನ ಮತ್ತೊಂದು ತಿರುವಿಗೆ ಸಾಗಲು ತಯಾರಿ ನಡೆದಿತ್ತು....
ಇವತ್ತಿನಿಂದ ಇನ್ನೊಂದು  ತಿರುವಿಗೆ ಹೊರಳುತ್ತಿದೆ ನನ್ನ ಬಾಳು..
ಅನಿರೀಕ್ಷಿತವಾಗಿ ನನ್ನ ಕನಸಿನ ಕಲಾಲೋಕದ ಬಾಗಿಲು ನನಗಾಗಿ ತೆರೆದಿದೆ...
ಬಂದ ಅವಕಾಶ ಬಿಡಲು ಮನಸ್ಸಿಲ್ಲದೇ ಅದನ್ನು ಭದ್ರವಾಗಿ ಅಪ್ಪಿದ್ದೇನೆ...
ಇಂದಿನಿಂದ ನಾನು ದೃಶ್ಯಕಲೆಯ ಪದವಿ ವಿದ್ಯಾರ್ಥಿ....
ಎಲ್ಲವೂ ಸುಸೂತ್ರವಾಗಿ ನಡೆದರೆ ಮುಂದಿನ ನಾಲ್ಕು ವರ್ಷಗಳಲ್ಲಿ ನನ್ನ ಹೆಸರಿನ ಜೊತೆ ಬ್ಯಾಚುಲರ್ ಆಫ್ ವಿ ಎ ಡಿಗ್ರಿಯನ್ನು ಸೇರಿಸಿ ನನ್ನ ಕನಸನ್ನು ನನಸಾಗಿಸುವೆ!!!



12 August, 2012

ಅಡುಗೆ-೧


   

        ನನ್ನ ಮಟ್ಟಿಗೆ ತಿನ್ನುವುದೆಂದರೆ ಬದುಕಲು ಮಾತ್ರ...ಹೇಗೆ ನಮಗೆ ಶುದ್ಧ ಆಮ್ಲಜನಕ ಬೇಕೋ ಹಾಗೆ ಆರೋಗ್ಯವಾಗಿ ಜೀವಿಸಲು ಬೇಕಾದ ಪೋಷಕವಸ್ತುಗಳು ನಮ್ಮ ಆಹಾರದಲ್ಲಿರಬೇಕು..ಹೊರತು ರುಚಿಯ ಬಗ್ಗೆ ನಾನು ಅಷ್ಟೊಂದು ತಲೆಕೆಡಿಸಿಕೊಂಡಿರಲಿಲ್ಲ. ನಮ್ಮ ಅಮ್ಮ ಇಂದಿಗೂ ಹೆಮ್ಮೆಯಿಂದ ಹೇಳುತಿರುತ್ತಾರೆ- ನನ್ನ ಮಕ್ಕಳು ಎಂದೂ ನಾಲಿಗೆಯ ದಾಸರಾಗಿರಲಿಲ್ಲ ಎಂದು. ನನ್ನ ಇಬ್ಬರು ತಮ್ಮಂದಿರೂ ತಮ್ಮ ರುಚಿಯನ್ನು ಬದಲಿಸಿದ್ದರೂ ನಾನು ಇಂದಿಗೂ ನನ್ನ ಹಳೆಯ ನಮೂನೆಯೊಂದಿಗೆ ಬದುಕಿದ್ದೇನೆ. ಕಾಫಿ, ಟೀ ಕೂಡ ಮಾಡ್ಲಿಕ್ಕೆ ಬರುತ್ತಿರಲಿಲ್ಲ ನನಗೆ..ಅಡುಗೆ ಮಾಡಬಾರದು ಅಂತಲ್ಲ..ಬೆಂಕಿಯ ಹೆದರಿಕೆ..ಕಾಲೇಜಿನಲ್ಲೂ ಲ್ಯಾಬನಲಿ ನನ್ನ ಮಿತ್ರರೇ ಬೆಂಕಿ ಹಚ್ಚಿಕೊಡುತ್ತಿದ್ದರು...ಎಲ್ಲರೂ ಹಾಸ್ಯಮಾಡುತ್ತಿದ್ದರೂ ನಾನು ಕೇರೇ ಮಾಡುತ್ತಿರಲಿಲ್ಲ..ಆದರೆ ಮದುವೆಯಾದದ್ದೇ ತಡ ಅತ್ತೆಯ ಎದುರು ಬೆಂಕಿ ತುಂಬಾ ಬೆಟರ್ ಅಂತ ಗೊತ್ತಾಯಿತು...ಈಗಂತೂ ಬೆಂಕಿಯೊಂದಿಗೆ ಸರಸವಾಡುತ್ತೇನೆ.

          ನಿಧಾನವಾಗಿ ಅಡುಗೆ ಮಾಡಲು ಕಲಿತೆ....ನನ್ನ ಮಕ್ಕಳಿಗೋಸ್ಕರ ಹೊಸ ರುಚಿ, ನಮ್ಮ ಸಂಪ್ರದಾಯದ ಅಡುಗೆ, ಹಬ್ಬದಡುಗೆ..ಉತ್ತರಭಾರತದಡುಗೆ...ಹೀಗೆ ನಮೂನೆ ನಮೂನೆ ಅಡುಗೆ ರುಚಿಪ್ರಿಯ ನನ್ನ ಮಕ್ಕಳಿಗಾಗಿ....ಅಲ್ಲದೆ ಅಡುಗೆ ಮಾಡುವುದು ಸಹ ಒಂದು ಕಲೆ ಅಂತ ನನ್ನ ಅಭಿಪ್ರಾಯ. ಆವಾಗ ನಾನು ಬ್ರಶ್‍ನ ನನ್ನಿಂದ ದೂರ ಇಟ್ಟಿದ್ದೆ. ಎಷ್ಟು ಎಕ್ಸ್ ಪರ್ಟ್ ಆಗಿಬಿಟ್ಟೆ ಅಂದ್ರೆ ಅಡುಗೆ ಕಲೆಯಲ್ಲಿ ವಿಶಾರದಳಾದ ನನ್ನ ಅಜ್ಜಿಯ ಕೈಯಲ್ಲಿ ಶಹಭಾಸ್ ಕೂಡ ಸಿಕ್ಕಿತು.  ನನ್ನ ಬ್ಲಾಗ್ನಲ್ಲಿ ನಮ್ಮ ಸಂಪ್ರದಾಯದ ತಿಂಡಿ ತಿನಿಸುಗಳ ತಯಾರಿಕೆ ಬಗ್ಗೆ ಹಾಕಬೇಕು ಅಂತ ಅನಿಸಿದ್ರೂ, ಹಾಕಲಿಕ್ಕೆ ಹೋಗಿರಲಿಲ್ಲ...ಸಮಯದ ಅಭಾವ ಒಂದು ಕಾರಣವಾದರೆ..ಈಗಾಗಲೇ ನಮ್ಮ ಕೊಂಕಣಿ ಅಡುಗೆಗಳ ಬಗ್ಗೆ ಇರುವ ಅನೇಕ ಜಾಲವು ಹುಟ್ಟಿಕೊಂಡಿದ್ದು ಇನ್ನೊಂದು ಕಾರಣ. ಆದರೆ ಈಗ ಕಿರಣ  ನನ್ನ ಬಳಿ ನಮ್ಮ ಸ್ಪೆಶಲ್ ಮತ್ತು ಸುಲಭ ಅಡುಗೆಗಳ ಬಗ್ಗೆ ಬರೀರಿ ಅಂತ ಬೇಡಿಕೆ ಇಟ್ಟ ಕಾರಣ  ಸರಿ..ಅದೂ ಇರಲಿ ತೆರೆದ ಮನಸಿನ ಪುಟದಲಿ ಅಂತ ಇದೀಗ ಮೊದಲ ಕಂತು ಪ್ರಾರಂಭ ಮಾಡ್ತಿದ್ದೇನೆ.
 ೧.  ಕಿಸ್ಮುರಿ:
________________
   ಹಾಗಲಕಾಯಿಯ ಕಿಸ್ಮುರಿ ಅಂತ ನಮ್ಮಲ್ಲಿ ಮಾಡ್ತೇವೆ. ಆದರೆ ಇದು ಜಟ್ ಪಟ್ ತಯಾರಾಗುವ ಕಿಸ್ಮುರಿ. ಹೆಸರು ಕೇಳಿದ್ರೆ ನಗು ಬರುತ್ತೆ ಅಲ್ವಾ...ಆದರೆ ನಮಗೆಂದೂ ಇದು ವಿಚಿತ್ರ ಅಂತ ಅನಿಸ್ತಿರಲಿಲ್ಲ..ಬಹುಶಃ ಸಣ್ಣವರಿದ್ದಾಗದಿಂದಲೂ  ಕೇಳುತ್ತಾ ಬಂದುದರಿಂದ ಕಾಣುತ್ತೆ!
 ಸಾಮಾಗ್ರಿಗಳು
೧.  ೪,೫ ಖಾರದ ಉದ್ದಿನ ಹಪ್ಪಳ
೨. ೨ ಸಾದಾ ಉದ್ದಿನ ಹಪ್ಪಳ
೩. ಒಂದೆರಡು ಹಸಿಮೆಣಸು ರುಚಿಗೆ ತಕ್ಕಂತೆ
೪. ೨ ಟಿ ಚಮಚ ತುರಿದ ತೆಂಗಿನ ಕಾಯಿ
೫. ಸಣ್ಣಗೆ ಕತ್ತರಿಸಿದ ಒಂದು ಸಣ್ಣ ನೀರುಳ್ಳಿ

    ಮೊದಲು ಹಪ್ಪಳವನ್ನು ಕರಿಯಿರಿ. ಕೈಯಿಂದ ಒತ್ತಿ ಸಣ್ಣ ಸಣ್ಣ ಚೂರುಗಳನ್ನಾಗಿ ಮಾಡಿ. ಕತ್ತರಿಸಿದ ಹಸಿಮೆಣಸನ್ನೂ, ತೆಂಗಿನ ಕಾಯಿಯನ್ನೂ, ಈರುಳ್ಳಿಯನ್ನು ಅದರಲ್ಲಿ ಬೆರೆಸಿ. ಕಿಸ್ಮುರಿ ತಯಾರು. ವಿ.ಸೂ- ಇದನ್ನು ಊಟದ ಹೊತ್ತಿಗೆ ತಯಾರಿಸಬೇಕು. ಹಾ, ಹಪ್ಪಳವನ್ನೂ ಮೊದಲೇ ಕರಿದಿಡಬಹುದು. ಗಾಳಿಯಾಡದ ಡಬ್ಬಿಯಲ್ಲಿ ಇಟ್ಟು ಬೇಕಾದಾಗ ಕಿಸ್ಮುರಿಯನ್ನು ತಯಾರಿಸಬಹುದು. ನನ್ನ ಮಗನಿಗೆ ಇದು ಬಹಳ ಇಷ್ಟ. ಎಲ್ಲಿಯಾದರೂ ಮಾಡಿದ ಪದಾರ್ಥ ಅವನಿಗೆ ಇಷ್ಟವಾಗಲಿಲ್ಲವಾದರೆ ಕಿಸ್ಮುರಿ ಮಾಡು ಅಂತ ಬೇಡಿಕೆ ಇಡುತ್ತಾನೆ.

   

11 August, 2012

ಸದಾ ಇರುವೆನಲ್ಲವೆ ನಿನ್ನ ಜೊತೆಯಾಗಿ! -ಇದೇ ನನ್ನ ಉತ್ತರ....





ಯಾಕೆ ನಲ್ಲ, ಯಾಕೆಂದು ಉತ್ತರಿಸು!

__________________________

ಯಾಕೆ ನಲ್ಲ
ಯಾಕೆಂದು ಉತ್ತರಿಸು!
ಅದ್ಯಾಕೆ ಈ ಪರಿಯ ಪರೀಕ್ಷೆ
ಮುಗಿಯುವುದೇ ಇಲ್ಲವೆ
ಪ್ರೀತಿಗೆ ಅದೆಷ್ಟು
ಅಡ್ಡಿ ಆತಂಕಗಳು!

ಅಲೆಅಲೆಯಾಗಿ ಎದ್ದು
ಮತ್ತೆ ಸುನಾಮಿಯ ರೂಪ ತಾಳುವ
ನನ್ನ ಭಾವಗಳ
ನಿಯಂತ್ರಿಸಲಿ ಹೇಗೆ!
ಹೇಗೆ ನಲ್ಲ,
ಹೇಗೆಂದು ಉತ್ತರಿಸು!

ಪ್ರತಿಯೊಂದು ಬಡಿತ
ಮಿಡಿತವೂ ಒಯ್ಯುತಿದೆ
ನನ್ನ ಎದೆಯ ಸಂದೇಶವ
ಕೇಳಿಸದು ಸುತ್ತ ಮುತ್ತ
ಇರುವವರಿಗೆ
ಕೇಳು ನಲ್ಲ
ಕೇಳಿತೆಂದು ಉತ್ತರಿಸು!



ಸದಾ ಇರುವೆನಲ್ಲವೆ ನಿನ್ನ ಜೊತೆಯಾಗಿ! -ಇದೇ ನನ್ನ ಉತ್ತರ....
____________________________________________

ಪ್ರಿಯ ನಲ್ಲೆ,  
ಬಲ್ಲೆನೆ
ನಿನ್ನಂತರಂಗವ ಅರಿಯದಿರುವೆನೆ!
ಕೇಳದಿರುವೆನೆ ನನ್ನೊಳಗೆ
ಮಥಿಸುತಿರುವ ಆ ಭಾವವನು!
ಇರಲಿ ತಾಳ್ಮೆ, ಸಮಾಧಾನ!
ಹಿಡಿತವಿರಲಿ ರಾಗಗಳ 
ಮೇಲೆ  ಮಾಡದಿರಲಿ ಅವು
ಸವಾರಿ ನಿನ್ನ ಮೇಲೆ!
ಅಡ್ಡಿಆತಂಕಗಳ ಗೆಲ್ಲಬಲ್ಲೆನೆಂಬ 
ನಿನ್ನ ಹುಮ್ಮಸು  
ಎಂದೂ ಆರದಿರಲಿ!
ಆತ್ಮವಿಶ್ವಾಸವೆಂದೂ 
ಸೊರಗದಿರಲಿ!
ಇರುವೆನಲ್ಲವೆ  ನಾ ನಿನ್ನ 
ಜೊತೆಯಾಗಿ ಸದಾ!
ಕಠೋರ ಹೃದಯಿಯಲ್ಲ 
ದೇವನು ನಿನ್ನ ಮೊರೆಯ 
ಖಂಡಿತ ಆಲಿಸುವನು!






10 August, 2012

ಏನನ್ನುವೆ....ಶೈಲೇಶ?




 ಡಬ್, ಡಬ್....ಮೆಲ್ಲನೆ  ಸಣ್ಣದಾಗಿ ಒದೆಯುತ್ತಿದ್ದಾನೆ....
 ಆಹ್.....ಮಧುರವಾದ ನೋವು...
 ಹೊಸ ಅನುಭವ...ಮನದಲ್ಲಿ ಹರುಷ ಉಕ್ಕಿ ಹರಿಯುತಿದೆ...
 ಎದೆಯೊಳಗೆ ನವಿರಾದ ಪುಳಕ....
 ಎದುರಿನಲ್ಲಿರುವ ನಿಲುವುಗನ್ನಡಿಯೊಳಗೆ ಇಣುಕಿದೆ...
 ಅರೆ, ಇದೇನಿದು....ನಾನೇ...ಹೌದು...ಇದು ನಾನೇ...
 ಮೃದುವಾಗಿ  ಹೊಟ್ಟೆಯನ್ನೊಮ್ಮೆ ಸವರಿದೆ...
 ವಸುದೇವ.....ವಸುದೇವ...ನನ್ನ ತುಟಿಯು....ಅಲ್ಲಾಡುತಿದೆ....
 ನೋವು...ಹಾ....ಅಲ್ಲೇ ಕುಸಿದು ಕುಳಿತೆ.
 ಬಂದವನು ಆಧರಿಸಿ....ಕಣ್ಣಲ್ಲೇ ಸಮಾಧಾನ, ಧೈರ್ಯ ಹೇಳಿದ.
 ಬೆಳಕಿನ ಪುಂಜವೊಂದು ಕಾಣಿಸಿದಷ್ಟೇ ಗೊತ್ತು.....
..............................................
ನೋಡೆ, ನೋಡೆ...ನಮ್ಮ ನಂದನ ಹಾಗೆ ಆ ತುಂಟಕಣ್ಗಳು....
ಹುಂ,  ಕಪ್ಪು ಕೂದಲ ರಾಶಿ  ನೋಡು...ನಮ್ಮ ಯಶೋಧೆಗೂ ಹೀಗೆ ಗೊಂಚಲು ಕೂದಲಿತ್ತು....
ಗೋಪಿಯರು...ತಮ್ಮ ತಮ್ಮಲ್ಲೇ ಮಾತುಕತೆ ನಡೆಸಿದ್ದಾರೆ...
ನಾ ಹೆಮ್ಮೆಯಿಂದ ನನ್ನ ಕೃಷ್ಣನ ಮುಖಾರವಿಂದ ಸವರಿದೆ....
ನನ್ನ ಕಣ್ಣು ನಂದನನ್ನು ಹುಡುಕುತಿತ್ತು.....ನಮ್ಮ ಪ್ರೀತಿಯ ಕುರುಹನ್ನು ನೋಡಿದ್ದಾನೆಯೇ?
ಅವನನ್ನೇ ಹೋಲುತ್ತಾನಲ್ಲ...ಈ ನಂದಕಂದ....
ಅಮ್ಮ,  ನಾ ಹಿಡಿಲಾ...ತಮ್ಮನಾ...ಪ್ಲೀಸ್...ನನ್ನ ಮಗಳು ಕೇಳುತ್ತಿದ್ದಾಳೆ....
ನಂದನ ಮುಖ ಹೆಮ್ಮೆಯಿಂದ ಅರಳಿತ್ತು..ಧನ್ಯತಾಭಾವವಿತ್ತು...
ಅದ ಓದಿದ ನನ್ನಲ್ಲಿ ಸಾರ್ಥಕ ಭಾವ ಅರಳಿತು....
ತಬ್ಬಿ ಹಿಡಿದೆ ನನ್ನ ಅರವಿಂದನಯನನ...
ನಿಜ, ಆ ಕಣ್ಗಳು ನನ್ನವನ ದೇಣಿಗೆ....
ನನ್ನ ಮನ ಓದಿದವನಂತೆ ಮನಮೋಹಕ ನಗೆ ಸೂಸಿದ ನನ್ನ ಮಗರಾಯ...
ನೋಡು ನೋಡುತ್ತಿದ್ದಂತೆಯೇ....ಎಲ್ಲರ ಮೋಡಿಮಾಡುತ್ತ ಬೆಳೆದ....
ಗೋಡೆಯಲೆಲ್ಲಾ ಚಿತ್ತಾರ......ಎಲ್ಲೆಲ್ಲೂ ಬಣ್ಣ....
ಹಾಳೆಗಳ ತುಂಬಾ ಬರಹಗಳು....
ಏನೇನೋ ಬರೆದು...ಮನಸೆಳೆಯುವ ಚಿತ್ತಾರಗಳ ಬಿಡಿಸಿ... ಬಣ್ಣಗಳ ಚೆಲ್ಲಿ...
ಎಲ್ಲರ ಶಹಭಾಸ್ ಗಿಟ್ಟಿಸುತ್ತಿದ್ದಾನೆ...
ಅಪ್ಪನ ಮುಖ ನೋಡಬೇಕು....ಏನೋ ಸಾಧಿಸಿದ ಹೆಮ್ಮೆ...
ಹುಂ, ನಾನೇನು ಕಡಿಮೆಯಿಲ್ಲ....ಹಿಮಗಿರಿಯನ್ನೇ ಏರಿದ ಭಾವನೆ.....
....................................................
ಸುಂದರ ಜಗತ್ತು ನನ್ನದಾಗಿತ್ತು....ನಾನು ನನ್ನ ಪುಟ್ಟ ಸಂಸಾರ....
....................................................................
ಕಣ್ಣು ಬಿಡಲೇ ಮನಸಿಲ್ಲ...ಈ ಸುಂದರ ಜಗತ್ತನ್ನು ಬಿಟ್ಟು...ಹೋಗಲಾಗುವುದಿಲ್ಲವಲ್ಲ....
ನಾ ಒಲ್ಲೆ...ಮತ್ತೆ ಈ ಕ್ರೂರ ಜಗದಲ್ಲಿ ಕಾಲಿಡಲಾರೆ ಅಂದೆನಲ್ಲ....
ತಟ್ಟಿ ಎಬ್ಬಿಸಿದ ಮಗ..ಅಮ್ಮ ಕಾಲೇಜಿಗೆ ಹೊತ್ತಾಗುತ್ತೆ...ಬೇಗಬೇಗ ...ತಿಂಡಿ ಮಾಡಿ ಕೊಡು....
...............................................................:-(((((((((
ವಾಹ್, ಎಂಥ ಸುಂದರ ಕನಸು!

ಕೃಷ್ಣನ ಹುಟ್ಟಿದ ಹಬ್ಬ ಮಾಡಿ ಮಲಗಿದವಳಿಗೆ ದೇವಕಿ, ಯಶೋಧೆಯಾದ ಕನಸು....
ಮತ್ತೆ ಅಮ್ಮನಾಗುವ ಹಂಬಲ....

ಅದನ್ನೇ ಅಪ್ಪನಲ್ಲಿ ಹೇಳಿದರೆ....ಮೌನವಾಗಿದ್ದಾನೆ.....
ನಾನಾಗುವೆ ಯಶೋಧೆ, ನೀನಾಗು ನಂದ....ಪ್ಲೀಸ್....ಪ್ಲೀಸ್....
ನಮ್ಮ ಕಂದನೂ ಕೃಷ್ಣನಂತೆ ಸಕಲಕಲಾ ಪರಿಣಿತನಾಗಲಿ....ಏನನ್ನುವೆ....ಶೈಲೇಶ?

08 August, 2012

ಹನಿ ಹನಿ ಚಿತ್ತಾರ!


   ಹನಿ ಹನಿ ಮುತ್ತುಗಳು  ಚೆಲ್ಲಾಡಿವೆ ತೋಟದ ತುಂಬಾ...
  ಆರಿಸಿ, ಮಾಲೆಯ ಕಟ್ಟಲು ಅನುವಾದರೆ.....
  ಇಗೋ, ಕುಸುಮಗಳ ಅಪ್ಪಣೆ....
  ತಡೆ, ಅಗೋ ನಮ್ಮೊಡೆಯನು ಹೊನ್ನ ತೇರನೇರಿ ಬರುತಿಹನು..
  ಈ ಮುತ್ತು, ರತ್ನಗಳು ಅವಗೇ ಅರ್ಪಣೆ..
  ತಡಮಾಡಬೇಡ..
  ನಿನ್ನ ಮನೆಯಂಗಳದಲಿ ಹರಡಿಹ ಮುತ್ತುರತ್ನಗಳ..
  ನಿನ್ನ ಮನದಂಗಳದಲಿ  ಶಾಶ್ವತವಾಗಿ ಸೆರೆಯಾಗಿಸು.....
  ಅಷ್ಟೇ ಪ್ರಾಪ್ತಿ ನಿನಗೆ!!! 













05 August, 2012

ಅಪರೂಪದ ಚಿತ್ರ!!!



              ನನ್ನ ಮಟ್ಟಿಗೆ ಇದು ಬಹಳ ಅಪರೂಪದ ಚಿತ್ರ. ಬಹುಶಃ ಛಾಯಾಚಿತ್ರಗ್ರಹಣಕಾರರು ಇಂತಹ ಚಿತ್ರ ಪಡೆಯಲು ಕಾಡು-ಮೇಡು ಸುತ್ತುತ್ತಾರೆ.  ಪ್ರತೀದಿನ ಬಣ್ಣ ಬಣ್ಣದ ಚಿಟ್ಟೆಗಳು ನಮ್ಮ ತೋಟದ ವಿಹಾರಕ್ಕಾಗಿ ಬರುವುದಾದರೂ ಒಮ್ಮೆಯಾದರೂ ಅವುಗಳನ್ನು ಕ್ಲಿಕ್ಕಿಸಲಾಗಲಿಲ್ಲ. ಮೊನ್ನೆ ಶುಕ್ರವಾರ‍  ಸುಮಾರು ಏಳು ಗಂಟೆಗೆ ಅಮ್ಮನಿಗೆ ಹಾಲು ಕೊಡಲು ಹೊರಟವಳಿಗೆ ಧ್ಯಾನ ಮಾಡುತ್ತಿರುವ ಚಿಟ್ಟೆಯ ದರ್ಶನವಾಯಿತು. ಅರೇ ಇದೇನಿದು, ಸುಮ್ಮನೆ ರೆಕ್ಕೆ ಮಡಚಿ ಕುಳಿತಿದೆ ಅಂತ ಆಶ್ಚರ್ಯವಾಯಿತು...ಕೂಡಲೇ ಕ್ಯಾಮರ ತಂದು ಫೋಟೊ ತೆಗೆದೆ. ಮನೆಪಾಠಕ್ಕೆ ಮಕ್ಕಳು ಬಂದಿದ್ದಾರೆ...ಮತ್ತೆ ಗಣಕಯಂತ್ರದಲ್ಲಿ ಹಾಕಿದರಾಯಿತು  ಅಂತ ಅಂದುಕೊಂಡು ನನ್ನ ಡ್ಯೂಟಿಯಲ್ಲಿ ಮುಳುಗಿದೆ.... ಆ ವಿಷಯ ಮರೆತೇ ಹೋಗಿತ್ತು. ನನ್ನ ಕೆಲಸವೆಲ್ಲ ಮುಗಿದಾಗ ಅಪರಾಹ್ನ ೧.೪೫..ನೆನಪಾಯಿತು..ನೋಡಿದರೆ ಆಶ್ಚರ್ಯ..ಆ ಚಿಟ್ಟೆಯ ಜೊತೆ ಅದರ ಕೋಶವೂ ಚಿತ್ರದಲ್ಲಿ ಕಾಣುತ್ತಿದೆ...ಅರೇ ಅದು ಅದೇ ತಾನೆ ಕೋಶದಿಂದ ಹೊರಬಂದ ಚಿಟ್ಟೆ..ಹಾಗಾಗಿ ಹಾರದೆ ಅಲ್ಲಿ ಒಂದಿಷ್ಟು ಧ್ಯಾನ ಮಾಡುವವರಂತೆ ಕುಳಿತಿತ್ತು. ನನ್ನ ಅದೃಷ್ಟವನ್ನು ನೋಡಿ ನನ್ನ ಖುಷಿಗೆ ಪಾರೇ ಇಲ್ಲ. ಅಷ್ಟೆಲ್ಲ ಆದ ಮೇಲೆ ಅದನ್ನು ಬ್ಲಾಗನಲ್ಲಿ ಬರೆಯಲಾಗದೇ ಇದ್ದರೆ ಆದಿತೇ!!!













ನನ್ನ ತೋಟದ ಹೂಗಳು!

ಮೆಣಸಿನ ಹೂವು ಅಂತ ಸಾಮಾನ್ಯವಾಗಿ ಕರೆಸಿಕೊಳ್ಳುವ ಈ ಹೂವು ಇದಕ್ಕಿಂತ ಹೆಚ್ಚು ಅರಳುವುದಿಲ್ಲ..ನನಗೆ ಇಂತಹ ಸಾಮಾನ್ಯ ಹೂ ಗಿಡದಲ್ಲಿಯೇ ಹೆಚ್ಚು ಆಸಕ್ತಿ. ಹೆಚ್ಚಿನ ಉಪಚಾರ, ನೀರು ಇದ್ಯಾವುದರ ಅಗತ್ಯವಿಲ್ಲದೆ ವರ್ಷವಿಡೀ ಹೂ ಕೊಟ್ಟು ಮುದವೀಯುತ್ತವೆ.



ಮುತ್ತಿನ ಮಲ್ಲಿಗೆ- ಗೊಂಚಲುಗಳಲ್ಲಿ ಅರಳುವ ಅಚ್ಚ ಬಿಳಿಯ ಈ ಹೂವಿನ  ಪರಿಮಳ ಬಹಳ ಸುಗಂಧಮಯ!  ನಮ್ಮ ಚೂಡಿ ಸಮಯಕ್ಕೆ ಸರಿಯಾಗಿ ಅಂದರೆ ಜುಲೈ ತಿಂಗಳಲ್ಲಿ ಹೆಚ್ಚು ಅರಳುವುದು..ಮಳೆ ಕಮ್ಮಿಯಾದ ಹಾಗೆ ಗಿಡದಲ್ಲಿ ಕಾಣುವುದು ಕಡಿಮೆಯಾಗುವುದು.





ಬಂಗಾರದ ಬಣ್ಣದ ಹೂವು!


ಮಿಠಾಯಿ ಹೂ ಅಂತ ಸಾಮಾನ್ಯವಾಗಿ ಕರೆಯುವ ಈ ಹೂವಿನ ಇಂಗ್ಲಿಷ್ ಹೆಸರು ಗೋಲ್ಡನ್ ಟ್ರಂಪೆಟ್ ಅಂತ. ಅಲ್ಲಮಂಡ ಕತಾರ್ಟಿಕ ಅಂತ ವೈಜ್ಞಾನಿಕ ಹೆಸರು. ಸಾಮಾನ್ಯವಾಗಿ ವರ್ಷವೆಲ್ಲ ಹೂ ಕೊಡುವ ಈ ಹೂವು ನನಗೆ ಬಹಳ ಇಷ್ಟ.  ಸಾಮಾನ್ಯವಾಗಿ ಹಳದಿ ಬಣ್ಣದ ಹೂವಿನ ಗಿಡ ಎಲ್ಲೆಡೆ ಕಾಣಬರುವುದಾದರೂ ಇತ್ತೀಚೆಗೆ ಇನ್ನೆರಡು ಬಣ್ಣಗಳು ಸೇರ್ಪಡೆಯಾಗಿವೆ.  ಇವತ್ತು ಪೂರ್ವಾಹ್ನ ಅಮ್ಮನ ಮನೆಯತ್ತ ಹೆಜ್ಜೆ ಹಾಕುತ್ತಿದ್ದಾಗ ಹೂವಿನ ಮೇಲೆ ಚೆಲ್ಲಿಕೊಂಡಿದ್ದ ಹನಿಗಳು ಸ್ವಾಗತ ಕೋರಿದವು. ಮನ ಪ್ರಫುಲ್ಲಿತವಾಯಿತು. ಎಂದಿನಂತೆ ಆ ನೆನಪನ್ನು ಶಾಶ್ವತವಾಗಿರಿಸಲು ಸೆರೆಹಿಡಿದೆ.














ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...